“ಚೇಳು ಕಚ್ಚಿದರೂ ಅದನ್ನು ರಕ್ಷಿಸಿದ!’
Team Udayavani, Oct 6, 2019, 5:46 AM IST
ಖ್ಯಾತ ನೀತಿ ಕಥೆಯೊಂದನ್ನು ನೀವೂ ಕೇಳಿರುತ್ತೀರಿ. ಈ ಕಥೆ ಹಲವು ದೇಶಗಳಲ್ಲಿ ಜನಪ್ರಿಯವಾಗಿದೆ. ಬೌದ್ಧ ಭಿಕ್ಕುಗಳಿಬ್ಬರು ನದಿಯೊಂದರಲ್ಲಿ ತಮ್ಮ ಪಾತ್ರೆಗಳನ್ನು ತೊಳೆಯುತ್ತಿರುತ್ತಾರೆ. ಅದೇ ಸಮಯದಲ್ಲಿ ಮೊದಲನೇ ಭಿಕ್ಕುವಿಗೆ ನದಿಯಲ್ಲಿ ಒಂದು ಚೇಳು ಮುಳುಗುತ್ತಿರುವುದು ಕಾಣಿಸಿತು. ಅವನು ಕೂಡಲೇ ಚೇಳನ್ನು ಕೈಯಲ್ಲಿ ಎತ್ತಿಕೊಂಡು ದಂಡೆಗೆ ಬಿಟ್ಟ. ಈ ಪ್ರಕ್ರಿಯೆಯಲ್ಲಿ ಚೇಳು ಅವನ ಕೈಗೆ ಕಚ್ಚಿಬಿಟ್ಟಿತು. ಭಿಕ್ಕು ನೋವಿನಿಂದ ಚೀರಿದ. ನೋವಿನಲ್ಲೇ ಮತ್ತೆ ತನ್ನ ಪಾತ್ರೆಗಳನ್ನು ತೊಳೆಯಲಾರಂಭಿಸಿದ.
ಕೆಲವೇ ಕ್ಷಣಗಳಲ್ಲಿ ಆ ಚೇಳು ಮತ್ತೆ ನೀರಿಗೆ ಬಿದ್ದಿತು. ಭಿಕ್ಕು ಮತ್ತೆ ಅದನ್ನು ಎತ್ತಿಕೊಂಡು ನದಿ ದಂಡೆಗೆ ಬಿಟ್ಟ. ಕೆಳಕ್ಕೆ ಇಳಿಯುವ ಮುನ್ನ ಚೇಳು, ಮತ್ತೆ ಆತನನ್ನು ಕಚ್ಚಿತು. ಇದನ್ನು ನೋಡಿದ ಇನ್ನೊಬ್ಬ ಭಿಕ್ಕು ಕೇಳಿದ-“ಗೆಳೆಯ, ಕುಟುಕುವು ಆ ಚೇಳಿನ ಗುಣ ಎಂದು ಗೊತ್ತಿದ್ದರೂ ಅದನ್ನು ಯಾಕೆ
ರಕ್ಷಿಸುತ್ತಿದ್ದೀ ?’
ಮೊದಲನೇ ಭಿಕ್ಕು ಹೇಳಿದ- “ಏಕೆಂದರೆ,
ರಕ್ಷಿಸುವುದು ನನ್ನ ಗುಣ!’
***
ಕಥೆಯೇನೋ “ವಾಹ್’ ಎನ್ನುವಂತಿದೆ. ಆದರೆ ಈ ಕಥೆಯ ನೀತಿ ಪಾಠದ ಬಗ್ಗೆ ನನಗೆ ತಗಾದೆಯಿದೆ. ಮೊದಲನೆಯದಾಗಿ, ಆ ಭಿಕ್ಕುವಿನ ಉದ್ದೇಶ
ಶ್ಲಾಘನೀಯವೇ ಆದರೂ, ಚೇಳನ್ನು ರಕ್ಷಿಸುವ ಪ್ರಕ್ರಿಯೆಯಲ್ಲಿ ಆತ ಅದರಿಂದ ಕುಟುಕಿಸಿಕೊಳ್ಳುವ ಅಗತ್ಯವಿತ್ತೇ? ಆ ಚೇಳನ್ನು ಒಂದು ಕಡ್ಡಿಯಿಂದ ಎತ್ತಿ ದಂಡೆಗೆ ಬಿಡಬಹುದಿತ್ತು, ಇಲ್ಲವೇ ತಾನು ತೊಳೆಯುತ್ತಿದ್ದ ಪಾತ್ರೆಯಲ್ಲೇ ಅದನ್ನು ಎತ್ತಿ ರಕ್ಷಿಸಬಹುದಿತ್ತಲ್ಲವೇ?
ಈ ರೀತಿ ಯೋಚನೆ ಮಾಡಿದಾಗ, ಈ ಕಥೆಯಿಂದ ತೀರಾ ಭಿನ್ನವಾದ “ನೀತಿ ಪಾಠ’ವನ್ನು ನಾವು ಕಲಿಯಬಹುದು.
ನಮ್ಮ ಜೀವನದಲ್ಲಿ ಅನೇಕರು ಈ ಚೇಳಿನ ತರಹ ಎದುರಾಗಬಹುದು. ಅವರು ಹಲವು ಕಾರಣಗಳಿಂದಾಗಿ ಕಷ್ಟಕ್ಕೆ ಸಿಲುಕಿರಬಹುದು, ಮುಳುಗಿ ಹೋಗುತ್ತಿರುವ ಅವರನ್ನು ರಕ್ಷಿಸುವುದು ಮಾನವೀಯತೆಯೇ. ಈ ಪ್ರಕ್ರಿಯೆಯಲ್ಲಿ ನಮಗೆ ಹಾನಿಯಾಗದಂತೆ ನೋಡಿಕೊಳ್ಳಬೇಕಾದ ಅಗತ್ಯವೂ ಇರುತ್ತದೆ. ಕಷ್ಟದಲ್ಲಿ ಇರುವವರಿಗೆ ಸಹಾಯ ಮಾಡಿ. ಆದರೆ ಮೊದಲು ಅವರನ್ನು ರಕ್ಷಿಸಲು ಅನ್ಯ ಮಾರ್ಗಗಳಿವೆಯೇ ಎನ್ನುವುದನ್ನು ನೋಡಿ. ಕೈಯಲ್ಲಿ ಪಾತ್ರೆಯಿದ್ದರೂ, ಬರಿಗೈಯಿಂದ ಚೇಳನ್ನು ಎತ್ತಿ ಕಡಿಸಿಕೊಂಡ ಭಿಕ್ಕುವಿನಂತೆ ಆಗದಿರಿ.
ಮನವೆಂಬ ಕಸದ ವಾಹನ
ಒಮ್ಮೆ ನಾನು ವಿಮಾನ ನಿಲ್ದಾಣ ತಲುಪಲು ಟ್ಯಾಕ್ಸಿ ಏರಿ ಕುಳಿತೆ. ಇನ್ನೇನು ವಿಮಾನ ನಿಲ್ದಾಣ ಹತ್ತಿರವಾಯಿತು ಎನ್ನುವಷ್ಟರಲ್ಲೇ, ನಿಲ್ದಾಣದ ಪಾರ್ಕಿಂಗ್ ಜಾಗದಿಂದ ರಿವರ್ಸ್ ಗೇರ್‌ನಲ್ಲಿ ಬಂದ ಕಾರೊಂದು ನಮ್ಮ ಕಾರಿಗೆ ಅಡ್ಡ ಬಂದು ಬಿಟ್ಟಿತು. ಡ್ರೈವರ್ ಗಾಬರಿಯಿಂದ ಬ್ರೇಕ್ ತುಳಿದ. ಕೆಲವೇ ಇಂಚುಗಳ ಅಂತರದಲ್ಲಿ ಅಪಘಾತದಿಂದ ತಪ್ಪಿಸಿಕೊಂಡಿತು ನಮ್ಮ ಕಾರು. ಆ ಇನ್ನೊಂದು ಕಾರಿನ ಡ್ರೈವರ್, ಕಿಟಕಿಯಿಂದ ತಲೆ ಹೊರಗೆ ತೂರಿಸಿ ನಮ್ಮತ್ತ ಬೈಗುಳಗಳ ಸುರಿಮಳೆ ಹರಿಸಲಾರಂಭಿಸಿದ ಆದರೆ ನನ್ನ ಟ್ಯಾಕ್ಸಿಯ ಡ್ರೈವರ್ ಮಾತ್ರ
ಸಿಟ್ಟಾಗಲಿಲ್ಲ. ಬದಲಾಗಿ, ನಸುನಗೆ ಬೀರಿ ಆ ವ್ಯಕ್ತಿಯತ್ತ ಕೈ ಬೀಸಿದ!
ಆ ವ್ಯಕ್ತಿ ಹೇಗೆ ಪ್ರತಿಕ್ರಿಯೆ ನೀಡಬೇಕೆಂದು ತಿಳಿಯದೇ ಕಕ್ಕಾಬಿಕ್ಕಿಯಾಗಿ, ಕೊನೆಗೆ ಗೊಣಗುತ್ತಾ ಮುಂದೆ ಹೋದ.
ನಾನು ನನ್ನ ಡ್ರೈವರ್‌ಗೆ ಕೇಳಿದೆ- “ಹಾಗೇಕೆ ಮಾಡಿದೆ? ಆ ವ್ಯಕ್ತಿ ಆಲ್ಮೋಸ್ಟ್ ಆ್ಯಕ್ಸಿಡೆಂಟ್ ಮಾಡುವವನಿದ್ದ.
ನಮ್ಮಿಬ್ಬರನ್ನೂ ಆಸ್ಪತ್ರೆಗೆ ಕಳುಹಿಸುತ್ತಿದ್ದ! ‘
ಡ್ರೈವರ್ ಅಂದ -“ಸಾರ್, ಆ ವ್ಯಕ್ತಿಯ ಕಸವನ್ನು ನಾನೇಕೆ ಹೊತ್ತು ತಿರುಗಲಿ!’
ಅಂದು ಆ ಡ್ರೈವರ್ ಹೇಳಿದ ಮಾತು ಈಗಲೂ ನನ್ನ ಮನದಲ್ಲಿ ಅಚ್ಚೊತ್ತಿದೆ. ನಾನು ಇದನ್ನು “ಕಸದ ವಾಹನದ ಸಿದ್ಧಾಂತ’ ಎನ್ನುತ್ತೇನೆ. ಅನೇಕರು ಕಸದ ವಾಹನಗಳ ರೀತಿಯಲ್ಲಿ ದಿನನಿತ್ಯ ತಮ್ಮ ತಲೆಯಲ್ಲಿ ನಾನಾ ರೀತಿಯ ಕಸವನ್ನು ಹೊತ್ತು ತಿರುಗುತ್ತಿರುತ್ತಾರೆ (ಅಸಹನೆ, ನೋವು, ಸಿಟ್ಟು, ಇತ್ಯಾದಿ). ಕಸ ತುಂಬಿ ತುಳುಕುತ್ತಿದ್ದಂತೆಯೇ, ಅದನ್ನು ಎಲ್ಲಾದರೂ ಎಸೆಯಲೇ ಬೇಕಲ್ಲ? ಹೀಗಾಗಿ ಕೆಲವೊಮ್ಮೆ ತಮಗೆ ಎದುರಾಗುವವರ ಮೇಲೆ ಕಸ ಎಸೆದುಬಿಡುತ್ತಾರೆ.
ಹೀಗಾಗಿ, ಯಾವುದನ್ನೂ ವೈಯಕ್ತಿಕವಾಗಿ ತೆಗೆದುಕೊಳ್ಳಬಾರದು. ಅವರು ಎಸೆಯುವ ಕಸವನ್ನೆಲ್ಲ ಹೊತ್ತುಕೊಳ್ಳಲು ನಿರಾಕರಿಸಿ. ನಿರಾಕರಿಸದೇ ಇದ್ದರೆ ಕೊನೆಗೆ ಅದನ್ನೆಲ್ಲ ನೀವು ನಿಮ್ಮ ಮನೆಯವರ ಮೇಲೋ ಅಥವಾ ಇನ್ಯಾರ ಮೇಲೋ ಎಸೆದುಬಿಡುತ್ತೀರಿ. ಅವರು ಆ ಕಸವನ್ನು ಮತ್ತೂಬ್ಬರ ಮೇಲೆ ಸಾಗಹಾಕುತ್ತಾರೆ! ನೀವೊಂದು ಸಂಗತಿಯನ್ನು ಗಮನಿಸಿರಬಹುದು. ಜಗತ್ತಿನ ಅತಿ ಯಶಸ್ವಿ ಜನರಿದ್ದಾರಲ್ಲ, ಅವರಲ್ಲಿ ಬಹುತೇಕ 99 ಪ್ರತಿಶತ ಜನರು ಅತ್ಯಂತ ಸಂಯಮಿಗಳು.
ಯಾರೇ ಎಸೆಯುವ ಕಸವೂ ಅವರ ದಿನವನ್ನು ಹಾಳು ಮಾಡಲಾರದು, ಏಕೆಂದರೆ ಅವರು ಕಸದ ವಾಹನಗಳಲ್ಲ!
ಧ್ಯಾನದ ದಾರಿಗೆ ಇರುವ ಅಡ್ಡಿಗಳು!
ನಿಧಾನಕ್ಕೆ ಕತ್ತಲು ಆವರಿಸಲಾರಂಭಿಸಿತ್ತು. ವೇಗವಾಗಿ ತಮ್ಮ ಆಶ್ರಮದೆಡೆಗೆ ನಡೆದು ಹೊರಟಿದ್ದ ನಾಲ್ವರು ವಿದ್ಯಾರ್ಥಿಗಳಿಗೆ ಇದು ಅರಿವಾಯಿತು. ಮುಂದಿನ ರಸ್ತೆ ದುರ್ಗಮವಾಗಿದೆ.
ಹೀಗಾಗಿ, ಇವತ್ತು ಇಲ್ಲೇ ಎಲ್ಲಾದರೂ ಜಾಗ ಹುಡುಕಿಕೊಂಡು ಉಳಿದುಬಿಡೋಣ, ಬೆಳಗ್ಗೆ ಪ್ರಯಾಣ ಮುಂದುವರಿಸಿದರಾಯಿತು ಎಂದು ನಿರ್ಧರಿಸಿದರು. ಚಳಿಗಾಲವಾದ್ದರಿಂದ ಶೀತ ಗಾಳಿ ಅವರ ಮೈ ಚುಚ್ಚಲಾರಂಭಿಸಿತ್ತು. ಅನುಕೂಲಕರ ಜಾಗವೊಂದನ್ನು ಹುಡುಕಿಕೊಂಡು, ಚಳಿಯಿಂದ ತಪ್ಪಿಸಿಕೊಳ್ಳಲು ಸೌದೆ ಆರಿಸಿ ತಂದು ಅದಕ್ಕೆ ಕಡ್ಡಿ ಗೀರಿದರು.
ಪ್ರತಿದಿನದಂತೆಯೇ ಈ ದಿನವೂ ಮಲಗುವ ಮುನ್ನ ಧ್ಯಾನ(ಮೆಡಿಟೇಷನ್) ಮಾಡಬೇಕೆಂದು ನಿರ್ಧರಿಸಿ, ಅಗ್ನಿಯ ಸುತ್ತ ಚಕ್ಕಳಮಕ್ಕಳ ಹಾಕಿ ಪದ್ಮಾಸನದಲ್ಲಿ ಕುಳಿತು ಕಣ್ಣು ಮುಚ್ಚಿದರು. ಎರಡು ನಿಮಿಷವಾಗಿತ್ತೋ ಇಲ್ಲವೋ ಚಳಿಗಾಳಿಯ ವೇಗ ಹೆಚ್ಚಾಗಿ ಬಿಟ್ಟಿತು.
ಕೂಡಲೇ ಕಣ್ಣು ತೆರೆದ ಮೊದಲ ವಿದ್ಯಾರ್ಥಿ, “”ಓಹ್…ನೋ! ಬೆಂಕಿ ಇನ್ನೇನು ಆರಿ ಬಿಡುತ್ತೆ!’ ಎಂದು ಉದ್ಗರಿಸಿದ. ಎರಡನೇ ವಿದ್ಯಾರ್ಥಿ ಕಣ್ಣು ತೆರೆದು, “ನಾವು ಮೌನವಾಗಿ ಧ್ಯಾನ ಮಾಡಬೇಕು ಅಂತ ಗೊತ್ತಿಲ್ವಾ?’ ಎಂದು ಒಂದು ಕಣ್ಣು ತೆರೆದು ಕೇಳಿದ. “ನೀವೆಲ್ಲ ಸ್ವಲ್ಪ ಸುಮ್ಮನೇ ಇರ್ತೀರಾ? ಎಂದು ರೇಗಿದ ಮೂರನೇ ವಿದ್ಯಾರ್ಥಿ. “ಹಾ… ನಾನೊಬ್ಬನೇ ಮಾತಾಡಲಿಲ್ಲ! ಎಂದು ಎದೆಯುಬ್ಬಿಸಿ ಹೇಳಿದ ನಾಲ್ಕನೇ ವಿದ್ಯಾರ್ಥಿ!
ಈ ಕಥೆಯಲ್ಲಿ ಹಲವು ಸೂಕ್ಷ್ಮಗಳು ಅಡಗಿವೆ. ಅವುಗಳನ್ನು ನಾವು ಗಮನಿಸಬೇಕು. ಬೆಂಕಿ ಆರಲಾರಂಭಿಸಿದ ತಕ್ಷಣ ನಾಲ್ಕೂ ವಿದ್ಯಾರ್ಥಿಗಳೂ ಮಾತನಾಡಿದರಾದರೂ, ಎಲ್ಲರೂ ಒಂದೊಂದು ಕಾರಣಕ್ಕಾಗಿ ಮಾತನಾಡಿದರು.
ಮೊದಲನೇ ವಿದ್ಯಾರ್ಥಿಯು ಭೌತಿಕ ಜಗತ್ತಿನ ಮೇಲೆ ಎಷ್ಟು ಗಮನ ಕೇಂದ್ರೀಕರಿಸಿದ್ದನೆಂದರೆ, ಬೆಂಕಿ ಆರಿಹೋಗುತ್ತದೇನೋ ಎನ್ನುವುದೇ ಅವನಿಗೆ ಚಿಂತೆಯಾಗಿತ್ತು, ಹೀಗಾಗಿ ಮೆಡಿಟೇಷನ್ ಮಾಡಲು ಅವನಿಗೆ ಸಾಧ್ಯವಾಗಲಿಲ್ಲ. ಎರಡನೇ ವಿದ್ಯಾರ್ಥಿಗೆ “ಮೌನವೇ ಧ್ಯಾನಕ್ಕೆ ದಾರಿ’ ಎನ್ನುವ ನಿಯಮ ತಿಳಿದಿತ್ತಾದರೂ, ಆ ನಿಯಮದ ಮೌಲ್ಯವನ್ನು ಅವನು ಕಡೆಗಣಿಸಿಬಿಟ್ಟ. ಮೂರನೆಯ ವಿದ್ಯಾರ್ಥಿಯು ಭಾವನೆಗಳಿಗೆ ಶರಣಾಗಿಬಿಟ್ಟ. ಗದ್ದಲ ಮಾಡಿದ್ದಕ್ಕಾಗಿ ಇವರಿಬ್ಬರ ಮೇಲೆ ಅವನು ರೇಗಿದೆ. ನಾಲ್ಕನೇ ವಿದ್ಯಾರ್ಥಿ ತನ್ನಲ್ಲೇ ತಾನು ಮುಳುಗಿ ಹೋಗಿದ್ದ, ತಾನೇ ಶ್ರೇಷ್ಠ,ಈ ಮೂವರನ್ನೂ ಸೋಲಿಸಿ ತಾನೇ ಗೆಲ್ಲಬೇಕು ಎಂಬ ಇಚ್ಛೆ ಅವನಿಗಿತ್ತು.
ಈ ಕಥೆಯ ನೀತಿ ಪಾಠವೇನು ಎನ್ನುವುದು ನಿಮಗೆ ಅರ್ಥವಾಯಿತೇ? ಮತ್ತಷ್ಟು ಯೋಚಿಸಿ ನೋಡಿ. ಅರ್ಥವಾಗದೇ ಇದ್ದರೆ ಈ ಕಥೆಯ ಶೀರ್ಷಿಕೆಯನ್ನು ಮತ್ತೂಮ್ಮೆ ಓದಿ.
ಲೇಖಕರ ಕುರಿತು
ಜ್ಞಾನವತ್ಸಲ ಸ್ವಾಮೀಜಿ “ಬಿಎಪಿಎಸ್ ಸ್ವಾಮಿ ನಾರಾಯಣ ಸಂಸ್ಥೆಯ’ನ್ನು ಮುನ್ನಡೆಸುತ್ತಿದ್ದಾರೆ. ಮೆಕ್ಯಾನಿಕಲ್ ಇಂಜಿನಿಯರಿಂಗ್ ಪದವೀಧರರಾಗಿರುವ ಜ್ಞಾನ ವತ್ಸಲ ಸ್ವಾಮೀಜಿ ಯುರೋಪ್, ಇಂಗ್ಲೆಂಡ್, ಅಮೆರಿಕ, ಕೆನಡಾ, ನ್ಯೂಜಿಲೆಂಡ್ ಸೇರಿದಂತೆ ಅನೇಕ ರಾಷ್ಟ್ರಗಳಲ್ಲಿ ಪ್ರೇರಣಾದಾಯಕ ಉಪನ್ಯಾಸ ನೀಡಿದ್ದಾರೆ.
– ಜ್ಞಾನ ವತ್ಸಲ ಸ್ವಾಮೀಜಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Belagavi: ತಹಶೀಲ್ದಾರ್ ಮನೆ ಮೇಲೆ ಲೋಕಾಯುಕ್ತ ದಾಳಿ
ISRO: ಇಸ್ರೋ ನೂತನ ಅಧ್ಯಕ್ಷರಾಗಿ ವಿ.ನಾರಾಯಣನ್ ನೇಮಕ: ಚಿನ್ನದ ಪದಕ ವಿಜೇತ VN ಪರಿಚಯ…
Sandalwood: ಸ್ಪಾನ್ಸರ್ಸ್ ಇದಿದ್ರೆ ನಾನ್ಯಾಕೆ 12 ವರ್ಷ ಕಷ್ಟಪಡಬೇಕಿತ್ತು: ರಚಿತಾ ರಾಮ್
Bengaluru: ಪಾಲುದಾರನ ಕಿರುಕುಳ: ಉದ್ಯಮಿ ಆತ್ಮಹತ್ಯೆ
Atul Subhash Case: ಮೊಮ್ಮಗನನ್ನು ಟೆಕಿ ಅತುಲ್ ತಾಯಿಯ ಸುಪರ್ದಿಗೆ ವಹಿಸಲು ಸುಪ್ರೀಂ ನಕಾರ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.