ದ್ವೇಷಿಸುವುದಕ್ಕೂ ಒಂದು ಒಳ್ಳೆಯ ದಾರಿಯಿದೆ; ಏನದು?
Team Udayavani, Jan 9, 2018, 7:48 AM IST
ನಮ್ಮ ಮನಸ್ಸು-ಬುದ್ಧಿಯೇ ಕೆಲವು ಸಲ ನಮಗೆ ಶತ್ರುವಾದಾಗ ಅದನ್ನು ನಾವು ಕ್ಷಮಿಸುತ್ತೇವಲ್ಲವೇ? ಇತ್ತೀಚೆಗಂತೂ ಯುವಕರು ದಿನಕ್ಕೆ ಹತ್ತು ಸಲವಾದರೂ ಐ ಹೇಟ್ ಹಿಮ್… ಐ ಹೇಟ್ ಹರ್ ಎನ್ನುತ್ತಾರೆ.
ಮನುಷ್ಯನಿಗೆ ಶತ್ರು ಮನುಷ್ಯನೇ. ಸಾಮಾನ್ಯವಾಗಿ ಯಾರು ನಮ್ಮ ಶತ್ರುಗಳಾಗುತ್ತಾರೆ? ನಮಗೆ ಒಳ್ಳೆಯದನ್ನು ಬಯಸದೇ ಇರುವವರು, ನಮ್ಮ ಏಳಿಗೆಯನ್ನು ಸಹಿಸದವರು, ನಮ್ಮ ನೆಮ್ಮದಿ ಯನ್ನು ಬೇಕಂತಲೇ ಹಾಳು ಮಾಡುವವರು…ಹೀಗೆ ಒಂದು ದೊಡ್ಡ ಪಟ್ಟಿಯನ್ನೇ ಹೇಳುತ್ತಾ ಹೋಗಬಹುದು. ಕೆಲವು ಸಲ ಅತಿ ಪ್ರೀತಿಯಿಂದಿರುವ ಸ್ನೇಹಿತರೇ ಶತ್ರುಗಳಾಗುತ್ತಾರೆ. ಅದು ಹೇಗೆ ಸಾಧ್ಯ ಅಂತ ಆಶ್ಚರ್ಯವಾಗುತ್ತದೆ.
ನಮ್ಮೆಲ್ಲರ ಜೀವನದಲ್ಲೂ ಒಂದಲ್ಲಾ ಒಂದು ಘಟನೆಗಳು ನಮಗೆ ಪಾಠ ಕಲಿಸಿರುತ್ತವೆ. ನಮ್ಮ ಪ್ರಾಣ ಸ್ನೇಹಿತರು ಅಂತ ನಮ್ಮ ಸೀಕ್ರೇಟ್ ವಿಚಾರಗಳನ್ನು ಕೆಲವರ ಜೊತೆ ಹಂಚಿಕೊಂಡಿರುತ್ತೇವೆ. ಅವರು ಅತಿ ಬುದ್ಧಿವಂತಿಕೆಯಿಂದ ಎಲ್ಲಾ ವಿಚಾರಗಳನ್ನೂ ತಿಳಿದುಕೊಂಡು ನಮ್ಮ ಹಿಂದೆ ನಮಗೆ ಕೇಡು ಬಯಸುತ್ತಾರೆಂಬುದು ತಿಳಿದುಬಂದಾಗ ಅವರನ್ನು ನಮ್ಮ ಶತ್ರುವೆಂದು ದ್ವೇಷಿಸಲಾರಂಭಿ ಸುತ್ತೇವೆ. ಪ್ರತಿದಿನ ಅವರ ಬಗ್ಗೆಯೇ ಯೊಚಿಸಿ ಯೋಚಿಸಿ ತಲೆ ಕೆಡಿಸಿಕೊಳ್ಳುತ್ತೇವೆ. ಕೆಲವರು ನಮ್ಮನ್ನು ದ್ವೇಷಿಸುತ್ತಾರೆ, ನಾವು ಕೆಲವರನ್ನು ದ್ವೇಷಿಸುತ್ತೇವೆ.
ದ್ವೇಷಿಸಬೇಡಿ, ದೂರವಿಡಿ
ಕೆಲವರಿಗೆ ಎಷ್ಟೇ ಒಳ್ಳೆಯದನ್ನು ಹೇಳಿಕೊಟ್ಟರೂ ಅವರು ಅದನ್ನು ತಿಳಿದುಕೊಂಡು ಜೀವನದಲ್ಲಿ ಒಳ್ಳೆಯವರಾಗಿರಲು ಪ್ರಯತ್ನ ಪಡುವುದಿಲ್ಲ. ಅವರವರ ಕರ್ಮಾನುಸಾರವಾಗಿ ಕೆಟ್ಟತನ ವನ್ನು ಮೈಗೂಡಿಸಿಕೊಂಡಿರುತ್ತಾರೆ. ಆದರೆ ಅವರೂ ಮನುಷ್ಯರೇ ಅಲ್ಲವೇ? ನಾವು ಅವರನ್ನು ದ್ವೇಷಿಸುವುದಕ್ಕಿಂತ, ಅವರ ಬಗ್ಗೆ ಚಿಂತಿಸಿ ನಮ್ಮ ಮನಸ್ಸು ಕೆಡಿಸಿಕೊಳ್ಳುವುದಕ್ಕಿಂತ ಅವರನ್ನು ದೂರವಿಡುವುದು ಉತ್ತಮ.
ಕೆಲವು ಸಲ ನಾವು ನಮ್ಮ ಶತ್ರುಗಳ ಋಣ ತೀರಿಸಬೇಕಾಗಿರು ತ್ತದೆ. ಎಷ್ಟೋ ಜನ್ಮಗಳ ಶತ್ರು ಋಣ ಬಾಧೆಯಿಂದ ನಮ್ಮ ನಮ್ಮ ಮನೆಯಲ್ಲೇ ಜನ್ಮ ಪಡೆದಿರುತ್ತಾರೆ. ಅನೇಕ ಮನೆಗಳಲ್ಲಿ ಸ್ವಂತ ಅಣ್ಣ ತಮ್ಮಂದಿರು ಹೊಡೆದಾಡಿ, ಒಬ್ಬರನ್ನೊಬ್ಬರು ಸಾಯಿಸಲು ಮುಂದಾ ಗುತ್ತಾರೆ. ತಂದೆ ತಾಯಿಯನ್ನೇ ಕತ್ತು ಹಿಸುಕಿ ಸಾಯಿಸಿ ಬಿಡುತ್ತೇನೆಂದು ಹೆತ್ತ ಮಕ್ಕಳೇ ಹೆದರಿಸುತ್ತಾರೆ. ಇಷ್ಟೊಂದು ದ್ವೇಷ ಮನೆಯವರ ಮೇಲೆ ಹೇಗೆ ಬರಲು ಸಾಧ್ಯ? ಹಿಂದಿನ ಜನ್ಮದಲ್ಲಿ ನಮ್ಮ ಶತ್ರುವಿಗೂ ನಮಗೂ ಇದ್ದ ಋಣ ತೀರಲೇಬೇಕಾದ್ದರಿಂದ ಈ ಜನ್ಮದಲ್ಲೂ ಹೇಗಾದರೂ ಬಂದು ಕಾಡುತ್ತಾರೆ.
ಶತ್ರುಗಳು ದೇವರಿಗೂ ಇದ್ದಾರೆ
ಶತ್ರುಗಳು ಕಲಿಯುಗದಲ್ಲಿ ನಮ್ಮ ಜೀವನದಲ್ಲಿ ಮಾತ್ರ ಬಂದಿ ದ್ದಾರೆಂದೇನಲ್ಲ. ಪುರಾಣಗಳನ್ನು ಗಮನಿಸಿದರೆ, ಶತ್ರುಸಂಹಾರ ಮಾಡಲೆಂದೇ ದೇವರು ಅನೇಕ ಅವತಾರಗಳನ್ನೆತ್ತಿದ್ದಾರೆ. ತಾನೇ ಸೃಷ್ಟಿಸಿರುವ ಜಗತ್ತಿನಲ್ಲಿ ತನ್ನ ಭಕ್ತರು ನೆಮ್ಮದಿಯಿಂದ ಬದುಕಲಿ ಅಂತ ದೇವರೇ ಬಂದು ಶತ್ರುಗಳನ್ನು ವಧಿಸುತ್ತಿದ್ದರು.
ಕೆಲವು ಸಲ ನಮ್ಮ ವಿರುದ್ಧವಾಗಿರುವ ವ್ಯಕ್ತಿಗಳನ್ನು ನಾವೇ ಶತ್ರುಗಳೆಂದು ಭಾವಿಸಿಕೊಳ್ಳುತ್ತೇವೆ. ನಾವೇ ಬೇಡದಿರುವ ನೆಗೆಟಿವ್ ವಿಚಾರಗಳನ್ನು ತಲೆಗೆ ತುಂಬಿಕೊಂಡು ಅವರನ್ನು ಹೇಟ್ ಮಾಡುತ್ತೇವೆ. ಯಾರಾದರೂ ನಮ್ಮ ನಿಜವಾದ ಶತ್ರುವಾಗಿದ್ದರೂ ಅವರನ್ನು ನಾವು ಹೇಟ್ ಮಾಡಬಾರದು, ಅವರೂ ನಮ್ಮಂತೆ ಮನಷ್ಯರೆಂದು ಗೌರವಿಸಬೇಕು. ಅವರು ನಮಗೆ ಏನೇ ಕೇಡು ಬಯಸಿದರೂ ಅವರಿಗೆ ಒಳ್ಳೆಯದನ್ನು ಹಾರೈಸಬೇಕು. ಏಕೆಂದರೆ, ಕೇಡು ಬಯಸುವವನಿಗೆ ಕೇಡಾಗುತ್ತದೆ, ಒಳ್ಳೆಯದನ್ನು ಬಯಸು ವವನಿಗೆ ಒಳ್ಳೆಯದೇ ಆಗುತ್ತದೆ. ಅವರಿಗೆ ಬುದ್ಧಿ ಕಲಿಸಲು ದೇವರಿದ್ದಾನೆ. ನಮ್ಮ ಶತ್ರುಗಳನ್ನೂ ನಾವು ಕ್ಷಮಿಸಿ, ಪಾಪ ಎಲ್ಲೋ ಚೆನ್ನಾಗಿ ಬದುಕಲಿ ಬಿಡು ಎಂದು ಹಾರೈಸಿ, ಅವರ ಬಗ್ಗೆ ಚಿಂತಿಸುವುದನ್ನು ಬಿಡಬೇಕು.
ಐ ಹೇಟ್ ಹಿಮ್ ಕಣೋ!
ನಮ್ಮ ಮನಸ್ಸು-ಬುದ್ಧಿಯೇ ಕೆಲವು ಸಲ ನಮಗೆ ಶತ್ರುವಾದಾಗ ಅದನ್ನು ನಾವು ಕ್ಷಮಿಸುತ್ತೇವಲ್ಲವೇ? ಇತ್ತೀಚೆಗಂತೂ ಯುವಕರು ದಿನಕ್ಕೆ ಹತ್ತು ಸಲವಾದರೂ ಐ ಹೇಟ್ ಹಿಮ್… ಐ ಹೇಟ್ ಹರ್ ಎನ್ನುತ್ತಾರೆ. ಯಾಕೆ ಒಬ್ಬರನ್ನು ಹೇಟ್ ಮಾಡಬೇಕು, ಯಾಕೆ ಜನರು ಪರಸ್ಪರರನ್ನು ಈ ಪರಿ ದ್ವೇಷಿಸುತ್ತಾರೆ ಎಂಬುದು ಅವರಿಗೆ ಗೊತ್ತೇ ಇರುವುದಿಲ್ಲ. ನಾನು ನನ್ನ ಜೀವನದಲ್ಲಿ ಯಾರನ್ನೂ ದ್ವೇಷಿಸುವುದಿಲ್ಲ. ಎಷ್ಟೊಂದು ಜನ ನನಗೆ ಬೇಕಂತಲೇ ತೊಂದರೆ ಕೊಟ್ಟಿರಬಹುದು, ನಾನು ಕೆಳಗೆ ಬೀಳಬೇಕು,ಯಾವತ್ತೂ ಮೇಲೇಳ ಬಾರದು ಅಂತ ಒಳಗೊಳಗೇ ಲೆಕ್ಕಾಚಾರ ಹಾಕಿಕೊಂಡವರಿರ ಬಹುದು. ನನಗೆ ಕೆಟ್ಟದ್ದಾಗಲೆಂದೇ ಅನೇಕ ಪ್ರಯತ್ನ ಪಟ್ಟಿರು ವವರೂ ಇರಬಹುದು. ಆದರೆ ಅವರನ್ನು ನಾನು ಹೇಟ್ ಮಾಡು ವುದಿಲ್ಲ. ಹಾಗಂತ ಅವರನ್ನು ಪ್ರೀತಿಸುವುದೂ ಇಲ್ಲ. ಏಕೆಂದರೆ ಅವರಿಗೆ ನನ್ನ ಹೃದಯದಲ್ಲಿ ಜಾಗವಿಲ್ಲ. ಯಾರನ್ನಾದರೂ ನಾವು ದ್ವೇಷ ಮಾಡಬೇಕೆಂದರೂ ಅವರಿಗೆ ನಮ್ಮ ಮನಸ್ಸಿನಲ್ಲಿ ಜಾಗ ಕೊಡಬೇಕಾಗುತ್ತದೆ. ಅವರ ಬಗ್ಗೆ ಆಲೋಚಿಸುವುದಕ್ಕೆ ನಮ್ಮ ಬುದ್ಧಿಗೆ ನಾವೇ ಕಷ್ಟ ಕೊಡ ಬೇಕಾಗುತ್ತದೆ. ನಮ್ಮ ಜೀವನವನ್ನು ಅಥವಾ ಮನಸ್ಸನ್ನು ಅಲ್ಲಾಡಿಸಲು ಯಾರೇ ಸತತ ಪ್ರಯತ್ನಪಟ್ಟರೂ ಅವರನ್ನು ನಮಗೆ ನಾವೇ ಹಾಕಿಕೊಂಡಿರುವಂತಹ ಒಂದು ಸೀಮಾರೇಖೆಯಿಂದ ಹೊರಗಿಡಬೇಕೇ ಹೊರತು ಒಳಗೆ ಕಾಲಿಡು ವುದಕ್ಕೂ ಬಿಡಬಾರದು. ನಮ್ಮ ಶತ್ರು ನಮ್ಮ ವೀಕ್‌ನೆಸ್ ಹಿಡಿದುಕೊಂಡು ಆಟ ಆಡಿಸುತ್ತಾನೆಂದರೆ ಅದು ನಮ್ಮ ತಪ್ಪು. ನಮ್ಮಲ್ಲಿರುವ ವೀಕ್‌ನೆಸ್‌ಗಳನ್ನು ಮೊದಲು ಸರಿಪಡಿಸಿಕೊಳ್ಳಲು ಪ್ರಯತ್ನಿಸಬೇಕೇ ಹೊರತು ಅವರನ್ನು ದ್ವೇಷಿಸುವ ಕೆಲಸಕ್ಕೆ ಕೈಹಾಕಬಾರದು. ಅವನು ಹೂಡುವ ತಂತ್ರಕ್ಕೆ ನಾವು ತಲೆ ಕೆಡಿಸಿ ಕೊಂಡು ಒದ್ದಾಡುತ್ತೇವೆ ಅಂತ ಅವರಿಗೆ ಗೊತ್ತಾದರೆ ಅದೇ ಅವರಿಗೆ ನಮ್ಮನ್ನು ಮತ್ತಷ್ಟು ಕಾಡಲು ಉತ್ತೇಜನ ನೀಡುತ್ತದೆ. ಅದನ್ನು ನಾವು ಸುಳ್ಳು ಮಾಡಬೇಕು. ಹಾಗೇ ಅವನನ್ನು ದ್ವೇಷಿಸ ಲೂಬಾರದು. ದ್ವೇಷ ನಮ್ಮನ್ನು ಒಳಗೊಳಗೇ ಸಾಯಿಸು ತ್ತದೆ. ನಾವು ಹೊರಗೆ ಎಷ್ಟೇ ನಗುಮುಖ ಹೊತ್ತುಕೊಂಡು ಸುಂದರವಾಗಿದ್ದರು ನಮ್ಮೊಳಗೆ ದ್ವೇಷವಿದ್ದರೆ ಅದು ನಮ್ಮನ್ನು ಬೆಳೆಯಲು ಬಿಡುವುದಿಲ್ಲ.
ವ್ಯಕ್ತಿ ದ್ವೇಷಿಸಬೇಡಿ, ಗುಣ ದ್ವೇಷಿಸಿ
ಧರ್ಮ ಯುದ್ಧ ಮಾಡುವಾಗಲೂ ದ್ವೇಷದಿಂದ ಮಾಡಬಾ ರದು. ಕೌರವರ ವಿರುದ್ಧ ಧರ್ಮ ಯುದ್ಧ ಮಾಡುವಾಗ ಶ್ರೀ ಕೃಷ್ಣನಿಗಾಗಲೀ, ಪಾಂಡವರಿಗಾಗಲೀ ಅವರ ಮೇಲೆ ದ್ವೇಷವಿರಲಿಲ್ಲ, ಬದಲಿಗೆ, ಕೌರವರಲ್ಲಿರುವ ಕೆಟ್ಟ ಗುಣದ ಬಗ್ಗೆ ದ್ವೇಷವಿತ್ತು. ನಮಗೆ ಒಳ್ಳೆಯದಾಗಲಿ ಅಂತ ನಾವು ಬಯಸುವುದು ತಪ್ಪಲ್ಲ. ಆದರೆ ಬೇರೆಯವರನ್ನು ಹಾಳು ಮಾಡಿ, ಬೇರೆಯವರ ಸಂತೋಷ ವನ್ನು ಕಿತ್ತುಕೊಂಡರೆ ಮಾತ್ರ ನನಗೆ ಒಳ್ಳೆಯದಾಗುತ್ತದೆ ಎಂದು ನಂಬುವುದು ತಪ್ಪು. ಹೋರಾಟಕ್ಕೆ ನಿಂತಾಗಲೂ ಎದುರಿಗಿರುವವನು ಶತ್ರುವೆಂದು ಪರಿಗಣಿಸಬಾರದು, ನನ್ನಲ್ಲಿ ಎಷ್ಟು ಶಕ್ತಿಯಿದೆ ಎನ್ನುವುದೊಂದೇ ನಮ್ಮ ಟಾರ್ಗೆಟ್ ಆಗಿರಬೇಕು.
ಶತ್ರುಗಳನ್ನು ಹಾಗೂ ಕೆಟ್ಟದ್ದನ್ನು ಸಂಹಾರ ಮಾಡುವುದಕ್ಕೆ ನಾವೇನೂ ದೇವರಲ್ಲ, ನಾವು ಯಾವುದೇ ಸಮಯದಲ್ಲಿ ನಮ್ಮ ಕರ್ಮ ಕ್ರಿಯೆಯಲ್ಲಿ ಮಾತ್ರ ಭಾಗವಹಿಸಿರುತ್ತೇವೆ. ಮಿಕ್ಕಿದ್ದನ್ನು ದೇವರು ನೋಡಿಕೊಳ್ಳುತ್ತಾನೆ. ಬೇರೆಯವರು ನಮ್ಮನ್ನು ದ್ವೇಷಿಸುವ ರೀತಿಯಲ್ಲೇ ನಮಗೆ ಗೊತ್ತಿಲ್ಲದೆ ನಾವೂ ಕೆಲ ಸಂದರ್ಭಗಳಲ್ಲಿ ಇನ್ನಾರನ್ನೋ ದ್ವೇಷಿಸಿರುತ್ತೇವೆ ಅಥವಾ ಬೇರೆಯವರು ನಮ್ಮನ್ನು ದ್ವೇಷಿಸುವಂತೆ ನಾವೇ ನಡೆದುಕೊಂಡಿರುತ್ತೇವೆ. ಬೇರೆಯವರೂ ಕೂಡ ಬೇಕಂತಲೇ ನಮಗೆ ಅವರ ಮೇಲೆ ದ್ವೇಷ ಹುಟ್ಟುವಂತೆ ಇರಿಟೇಟ್ ಮಾಡುತ್ತಲೇ ಇರುತ್ತಾರೆ. ಆದರೆ ನಾವು ತಾಳ್ಮೆಯಿಂದ ನಮ್ಮ ಶತ್ರುವಿಗೂ ಒಳ್ಳೆಯದನ್ನೇ ಬಯಸಿದರೆ, ಅವರ ಮನಸ್ಸಿನಲ್ಲಿ, ನಾನು ತಪ್ಪು ಮಾಡಿದೆ ಎಂಬ ಪಾಪಪ್ರಜ್ಞೆ ಕಾಡಿ ಒಳ್ಳೆಯವರಾಗಲು ಪ್ರಯತ್ನಿಸಬಹುದೇನೋ. ನಮ್ಮ ಜನ್ಮ ಜನ್ಮಾಂತರದ ಶತ್ರು ಕಾಟ ಮತ್ತು ದುಷ್ಟರ ಕಾಟವನ್ನು ಸಕಾರಾತ್ಮಕವಾಗಿ ತಪ್ಪಿಸಿಕೊಳ್ಳಲು ಈ ಮಂತ್ರವನ್ನು ಎಲ್ಲಿ, ಯಾವಾಗ ಬೇಕಾದರೂ ಜಪಿಸಬಹುದು.
ದುರ್ಗಾ ದೇವೆಚ ವಿದ್ಮಹೇ|
ದುಷ್ಟಾರಿಷ್ಟಾಯ ಧೀಮಹೀ|
ತನ್ನೊ ದುರ್ಗಿಃ ಪ್ರಚೋದಯಾತ್ ||
ರೂಪಾ ಅಯ್ಯರ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Wrong Spelling: ಅಪಹರಣದ ಪತ್ರದಲ್ಲಿ ಅಕ್ಷರ ತಪ್ಪು ಬರೆದು ಸಿಕ್ಕಿಬಿದ್ದ ಭೂಪ!
Hubballi: ಸಂಪೂರ್ಣ ಬಂದ್… ರಸ್ತೆಗಿಳಿದ ವಾಹನಗಳ ಚಕ್ರದ ಗಾಳಿ ತೆಗೆದು ಪ್ರತಿಭಟನೆ
ಚಂದ್ರಯಾನ, ಗಗನಯಾನ: ಇಸ್ರೋದ ಮಹತ್ವದ ಪ್ಲಾನ್: ವಿ.ನಾರಾಯಣನ್
Los Angeles wildfires: ಕ್ಯಾಲಿಫೋರ್ನಿಯಾದಲ್ಲಿ ಕಾಳ್ಗಿಚ್ಚು… ಐವರು ಸಾವು
Naxal Activity Calm: ಪಶ್ಚಿಮ ಘಟ್ಟದ ಕಾನನದಲ್ಲಿ ನಕ್ಸಲ್ ನಿಶ್ಶಬ್ದ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.