ಯಾವುದು ಸುಂದರ-ಹೊರಜಗತ್ತೋ, ನಮ್ಮೊಳಗಿನ ಜಗತ್ತೋ?
Team Udayavani, Mar 16, 2018, 7:30 AM IST
ನಮ್ಮ ಕಣ್ಣಿಗೆ ಕಾಣುತ್ತಿರುವ ಮತ್ತು ನಮ್ಮೊಳಗೇ ಇರುವ ಪ್ರಪಂಚಗಳನ್ನು ನಾವು ಪ್ರೀತಿಸಬೇಕು. ಅದು ಹೇಗೇ ಇರಲಿ, ಎಷ್ಟೇ ಕಷ್ಟ, ಏನೇ ನೋವು, ಏನೇ ಅಂಗವಿಕಲತೆಯಿದ್ದರೂ ನಮ್ಮ ಕಣ್ಮುಂದೆ ಕಾಣುವುದನ್ನು ಸುಂದರವಾಗಿ ಕಾಣಬೇಕು. ನಾವು ಸತ್ಯವನ್ನು ಇಷ್ಟಪಡುತ್ತೇವಲ್ಲವೇ? ಹಾಗಾದರೆ ಪ್ರಪಂಚದಲ್ಲಿ ಏನೇನಿದೆಯೋ ಅವೆಲ್ಲವೂ ಸತ್ಯವಾಗಿರುವುದರಿಂದ ಅವುಗಳನ್ನೂ ಇಷ್ಟಪಡಬೇಕು.
ಮನುಷ್ಯ ಕಣ್ಣಿಟ್ಟು ಹೊರಗಿನ ಪ್ರಪಂಚವನ್ನು ನೋಡಿದಾಗ ಕಾಣುವ ಸ್ಥಿತಿಗತಿಗಳೇ ಬೇರೆ, ಕಣ್ಮುಚ್ಚಿ ತನ್ನೊಳಗಿನ ಪ್ರಪಂಚದಲ್ಲಿ ವಿಹರಿಸಿದಾಗ ಅದರ ಸತ್ಯವೇ ಬೇರೆ. ಆದರೆ ಯಾವ ಪ್ರಪಂಚ ಚೆನ್ನಾಗಿದೆ ಅಂತ ನಮ್ಮನ್ನು ನಾವೇ ಕೇಳಿಕೊಂಡರೆ ನಮಗೆ ಆಯ್ಕೆಗಳೇ ಇಲ್ಲ. ಬಾಹ್ಯ-ಆಂತರಿಕ ಇವೆರಡೂ ಜಗತ್ತಿನಲ್ಲಿ ಏಕಕಾಲಕ್ಕೆ ನಾವು ಬದುಕಬೇಕು. ನಮಗೆ ಬೇಕಾಗಿದ್ದೆಲ್ಲ ಹೊರಗೆ ಕಾಣಿಸುತ್ತದೆಯೋ ಇಲ್ಲವೋ, ಆದರೆ ನಮ್ಮೊಳಗಿನ ಪ್ರಪಂಚದಲ್ಲಿ ಎಲ್ಲದಕ್ಕೂ ಜಾಗ ಇರುತ್ತದೆ.
ನಮ್ಮ ದೇಹವೇ ಚಿಕ್ಕದು. ಅದರೊಳಗಿರುವ ಮನಸ್ಸು ಇನ್ನೂ ಚಿಕ್ಕದು. ಆದರೆ ಅದರೊಳಗೆ ಸಾವಿರಾರು ಜನರು, ಕೋಟ್ಯಂತರ ಸಂಗತಿಗಳು, ಅಸಂಖ್ಯ ನೆನಪುಗಳು, ಇನ್ನೆಷ್ಟೋ ಭಾವನೆಗಳು… ಹೀಗೆ ಎಲ್ಲದಕ್ಕೂ ಜಾಗವಿದೆ. ಎಲ್ಲಾ ಸಂಬಂಧಗಳಿಗೂ ಒಂದೊಂದು ಸುಂದರವಾದ ಸೇತುವೆಗಳನ್ನು ಕಟ್ಟಿ ಜೀವನಪೂರ್ತಿ ಕಾಪಾಡಿ ಕೊಳ್ಳಲು ಮನಸ್ಸು ಹೋರಾಡುತ್ತದೆ. ಆದರೆ ಹೊರಗಿನ ಪ್ರಪಂಚ ನಮ್ಮ ಜೀವನವನ್ನೇ ಅಲ್ಲೋಲಕಲ್ಲೋಲ ಮಾಡುತ್ತದೆ. ಅದರ ಸುಳಿಗೆ ಸಿಲುಕಿ ಮನಸ್ಸೂ ಕಲ್ಲೋಲವಾಗುತ್ತದೆ. ನಮಗೇನು ಬೇಕೋ ಅದು ಸಿಗದಿರುವ ಹಾಗೆ ಮಾಡಿ ಬಾಹ್ಯ ಜಗತ್ತು ನಮ್ಮನ್ನು ಒದ್ದಾಡಿಸುತ್ತದೆ. ನಮ್ಮ ಪವಿತ್ರ ಸಂಬಂಧಗಳೇ ಸುಳ್ಳಾಗಿ ಕಣ್ಣಿಗೆ ಗೋಚರವಾಗುತ್ತವೆ. ಅದೂ ಬೇಕು, ಇದೂ ಬೇಕು ಅಂತ ಎಲ್ಲದರ ಮೇಲೂ ಆಸೆ ಹುಟ್ಟಿಸುತ್ತದೆ. ನಮ್ಮ ಹೊರಗೆ ನಡೆಯುವ ಆಗು ಹೋಗುಗಳು ನಮ್ಮೊಳಗೆ ಉದ್ವೇಗ-ಆತಂಕ ಉಂಟುಮಾಡುತ್ತವೆ. ಹಾಗಂತ ನಾವು ಇವನ್ನೆಲ್ಲ ಬಿಟ್ಟು ಎಲ್ಲಿಗೂ ಓಡಿಹೋಗಲು ಸಾಧ್ಯವಿಲ್ಲ. ಒಳಗಿನ ಮಾತನ್ನೂ ಕೇಳಬೇಕು, ಹೊರಗಿನ ಪರಿಸ್ಥಿತಿ ಯನ್ನೂ ಗಮನಿಸಿ ನಮ್ಮನ್ನು ನಾವೇ ಸಮತೋಲನದಲ್ಲಿ ಇರಿಸಿಕೊಳ್ಳಬೇಕು. ಅದು ಹೇಗೆ?
ಜಗತ್ತು ನಮಗೇನು ಕೊಡುತ್ತದೋ ಬಿಡುತ್ತದೋ ಅದು ಜಗತ್ತಿಗೆ ಬಿಟ್ಟಿದ್ದು. ಆದರೆ ಅದನ್ನು ನಾವು ಯಾವುದೇ ಕಾರಣಕ್ಕೂ ದ್ವೇಷಿಸಲು ಹೋಗಬಾರದು. ಸಮಾಜವನ್ನೂ ದೂಷಿಸಬಾರದು. ಎಲ್ಲವನ್ನೂ ಸುಂದರವಾಗಿ ಕಾಣಬೇಕು. ಏಕೆಂದರೆ ಆ ಜಗತ್ತೇ ನಾವು. ಅದನ್ನು ದ್ವೇಷಿಸಿದರೆ ನಮ್ಮನ್ನೇ ದ್ವೇಷಿಸಿಕೊಂಡಂತೆ. ನಮ್ಮೊಳಗಿರುವ ಆಂತರಿಕ ಪ್ರಪಂಚವನ್ನು ಹೊತ್ತುಕೊಂಡು ನಮ್ಮ ದೇಹ ಈ ಹೊರಗಿನ ಪ್ರಪಂಚದಲ್ಲಿ ಓಡಾಡುತ್ತಿರುತ್ತದೆ. ಜಗತ್ತನ್ನು ನೆಗೆಟಿವ್ ಆಗಿ ನೋಡಿದರೆ ತಲೆ ಕೆಡುವುದು ನಮ್ಮದೇ?
ಸತ್ತ ನಂತರ ಇನ್ನೊಂದು ಪ್ರಪಂಚ
ನಿರಂತರವಾಗಿ ನಮ್ಮ ಸಂಪರ್ಕದಲ್ಲಿರುವ ಈ ಎರಡು ಪ್ರಪಂಚಗಳನ್ನು ಬಿಟ್ಟು ಇನ್ನೂ ಒಂದು ಪ್ರಪಂಚ ನಮ್ಮನ್ನು ಕಾಡುತ್ತದೆ. ಅದು, ನಾವು ಸತ್ತಮೇಲೆ ಎಲ್ಲಿಗೆ ಹೋಗುತ್ತೇವೆ? ನಿಜವಾಗಲೂ ಸ್ವರ್ಗ-ನರಕ ಅಂತ ಬೇರೆ ಪ್ರಪಂಚಗಳಿವೆಯಾ? ಅದು ಹೇಗಿರುತ್ತದೆ? ಅದನ್ನು ಕಂಡವರ್ಯಾರು? ಹೋದ ಜನ್ಮದಲ್ಲಿ ನಾನು ಸತ್ತ ನಂತರ ಅಲ್ಲಿಗೆ ಹೋಗಿ ಆನಂತರ ಇಲ್ಲಿಗೆ ಬಂದಿದ್ದೇನಾ? ಆದರೂ ಸ್ವರ್ಗ-ನರಕದ ನೆನಪು ನಮಗಿಲ್ಲವಲ್ಲಾ?
ಗರುಡ ಪುರಾಣದಲ್ಲಿ ಮನುಷ್ಯ ಸತ್ತ ನಂತರ ಯಮಪುರಿ, ಧರ್ಮಪುರ ಹೀಗೆ ಬೇರೆ ಬೇರೆ ದಾರಿಯಲ್ಲಿ ಪ್ರಯಾಣ ಬೆಳೆಸುತ್ತಾನೆಂದು ಹೇಳಲಾಗಿದೆ. ಗರುಡ-ವಿಷ್ಣುವಿನ ಸಂವಾದದ ರೀತಿಯಲ್ಲಿ ಈ ಪುರಾಣ ರೂಪುಗೊಂಡಿದೆ. ಅದರ ಪ್ರಕಾರ ಯಮಪುರಿ ಮಾರ್ಗದಲ್ಲಿ 16 ಪುರಗಳಿವೆ. ಜ್ಞಾನಶೂನ್ಯ ಪಾಪಿಗಳನ್ನು ಶಿಕ್ಷಿಸಲೆಂದೇ ಸೃಷ್ಟಿಸಿರುವ ನರಕ ಲೋಕ, ಘೋರವಾದ ವೈತರಣೀ ನದಿ ಹೀಗೆ ನಾವು ಪ್ರೇತ ಜೀವಿಯಾದಾಗ ಸೌಮ್ಯಪುರ, ಸೌರಿಪುರ, ಗಂಧರ್ವ ನಗರ, ಶೈಲಾಗಮಪುರ, ಕ್ರೌಂಚಪುರ, ಚಿತ್ರ ಭಾವನಪುರ, ಬಾಹ್ವಾಪದಪುರ, ದುಃಖಪುರ ಹೀಗೆ ಒಂದಾದ ಮೇಲೊಂದನ್ನು ದಾಟಿ ಹೋಗಬೇಕು. ಹೀಗೆ ಪ್ರೇತ ಪ್ರತಿಮಾಸವೂ ಪಿಂಡವನ್ನು ಸೇವಿಸುತ್ತಾ ಮುನ್ನಡೆಯುತ್ತದೆ. ಒಂಬತ್ತನೇ ಮಾಸ ಮುಗಿದ ನಂತರ ನಾನಾಕ್ರಂದಪುರಕ್ಕೆ ಸಾಗುತ್ತದೆ. ನಂತರ ಸುತಪ್ತಭವನ ನಗರ, ರೌದ್ರಪುರ, ಪಯೋವರ್ಷಣ, ಶೀತಾಡ್ಯನಗರ ಹೀಗೆ ಹನ್ನೊಂದು ತಿಂಗಳು ಕಳೆದು, ಹನ್ನೆರಡನೇ ತಿಂಗಳ ಅಂತ್ಯದಲ್ಲಿ ಪ್ರೇತಜೀವ ವಾರ್ಷಿಕ ಪಿಂಡವನ್ನು ಸೇವಿಸಿ ಧೈರ್ಯಧಾರಣ ಮಾಡುತ್ತದೆ. ಆನಂತರ ಬಹುಭೀತಿಪುರಕ್ಕೆ ಹೋಗಿ, ಮೊಳಕೈಯಷ್ಟು ಉದ್ದವಿರುವ ತನ್ನ ಶರೀರವನ್ನು ತ್ಯಜಿಸುತ್ತ ಅಂಗುಷ್ಟ ಪ್ರಮಾಣದ ವಾಯುಸ್ವರೂಪ ಯಾತನಾ ದೇಹವನ್ನು ಪ್ರಾಪ್ತಿಹೊಂದುತ್ತದೆ.
ಹಾಂ…ಹೀಗೆಲ್ಲಾ ಭಯಾನಕ ಪ್ರಪಂಚವೊಂದಿದೆಯಂತೆ, ಆದರೆ, ನಾವು ಕನಸು ಕಾಣುವ ಪ್ರಪಂಚ ಮಾತ್ರ ಸದಾ ಸುಂದರ ವಾಗಿಯೇ ಇರುತ್ತದೆ. ಅದು ರಮ್ಯ ಮನೋಹರ. ಆದರೆ ನಾವು ಮಾಡುವ ಕರ್ಮಗಳ ಫಲವಾಗಿ ಪ್ರಪಂಚ ಮುಂದೊಂದು ದಿನ ನಮ್ಮನ್ನು ಹೇಗೆ ಸ್ವಾಗತ ಮಾಡುತ್ತದೆ ಎಂಬುದರ ಅರಿವು ನಮಗಿರುವುದಿಲ್ಲ.
ನಿಜ-ಸುಳ್ಳುಗಳ ನಡುವೆ ಲೈಫ್ ಈಸ್ ಬ್ಯೂಟಿಫುಲ್
ಈ ಪ್ರಪಂಚಗಳಲ್ಲಿ ಸತ್-ಅಸತ್ ಯಾವುದು? ಯಾವುದು ನಿಜ, ಯಾವುದು ಭ್ರಮೆ? ಅಥವಾ ಎಲ್ಲವೂ ನಮ್ಮ ಊಹೆಯೇ ಎಂಬ ಪ್ರಶ್ನೆಗಳು ನಮ್ಮನ್ನು ಕಾಡುತ್ತಲೇ ಇರುತ್ತವೆ. ನಮ್ಮ ಕಣ್ಣಿಗೆ ಕಾಣುವುದು ಮಾತ್ರ ಸತ್ಯ ಅಂದುಕೊಂಡರೆ ನಮ್ಮ ಮನಸ್ಸು ಕಾಣುವ ಕನಸು ಸುಳ್ಳಾ? ಸುಳ್ಳಾಗಿದ್ದರೆ ಕನಸುಗಳನ್ನು ನನಸು ಮಾಡಿಕೊಳ್ಳಲು ನಾವೆಲ್ಲ ಏಕೆ ಅಷ್ಟೊಂದು ಕಷ್ಟಪಡುತ್ತೇವೆ? ಇಲ್ಲ. ಅದು ಭ್ರಮೆಯೇನೂ ಅಲ್ಲ. ಎಲ್ಲವೂ ನಿಜ, ಎಲ್ಲವೂ ಸತ್ಯ. ಕೆಲವಷ್ಟು ವಿಚಾರಗಳನ್ನು ನಮ್ಮ ಬುದ್ಧಿ ನೇರವಾಗಿ ಒಪ್ಪಿಕೊಳ್ಳುತ್ತದೆ. ಕೆಲವಷ್ಟನ್ನು ವಾದ ಮಾಡಿ ಕೊನೆಗೆ ಅರ್ಥಮಾಡಿಕೊಳ್ಳುತ್ತದೆ. ಇನ್ನು ಕೆಲವು ವಿಷಯಗಳ ಕಡೆ ಸಾಯುವ ತನಕ ತಲೆ ಹಾಕುವುದೇ ಇಲ್ಲ. ಸತ್ಯವೋ ಸುಳ್ಳೋ ನಮಗ್ಯಾಕೆ ಅಂತ ಸುಮ್ಮನಿದ್ದು ಬಿಡುತ್ತೇವೆ.
ಜಗತ್ತಿನಲ್ಲಿ ಏನೇನಿದೆಯೋ ಅದೆಲ್ಲ ಸತ್ಯವೇ. ನಮ್ಮ ಕಣ್ಣಿಗೆ ಎಲ್ಲವೂ ಕಾಣಿಸದೇ ಇರಬಹುದು, ಹಾಗಂತ ಅದು ಇಲ್ಲ ಎಂದರ್ಥವಲ್ಲ. ಗಾಳಿಯ ಆಕಾರ ಹೇಗಿರುತ್ತದೆ ಅಂತ ನಾವು ಕಂಡಿಲ್ಲ. ರೇಡಿಯೋ ತರಂಗಗಳು ಹೇಗಿರುತ್ತವೆ ಎಂಬುದು ನಮ್ಮ ಕಣ್ಣಿಗೆ ಕಾಣಿಸುವುದಿಲ್ಲ. ಆಕಾಶದ ತುತ್ತತುದಿಗೆ ಹೋಗಿ ಅದರಾಚೆಗೆ ಏನಿದೆ ಎಂಬುದನ್ನು ನಾವು ನೋಡಿಲ್ಲ. ಆದರೆ ಅವೆಲ್ಲವೂ ಇವೆ. ನಮಗೆ ಕಾಣಿಸದಿರುವುದು, ನಮಗೆ ಕೇಳಿಸದಿರುವುದು, ನಮ್ಮ ಅನುಭವಕ್ಕೆ ಬಾರದೆ ಇರುವುದು ಈ ವಿಶ್ವದಲ್ಲಿ ಸಾಕಷ್ಟಿವೆ. ಅವೆಲ್ಲವೂ ಪ್ರಕೃತಿಯ ಸತ್ಯ. ಹಾಗೆ ನಮ್ಮ ಕಣ್ಣಿಗೆ ಕಾಣದಿರುವ ಅನೇಕ ಪ್ರಪಂಚಗಳಿವೆ. ಅವುಗಳ ಗೊಡವೆ ವಿಜ್ಞಾನಿಗಳಿಗಿರಲಿ. ಜನಸಾಮಾನ್ಯರಾದ ನಮಗೆ ಈ ಒಂದು ಪ್ರಪಂಚವೇ ಸಾಕಷ್ಟಾಯಿತು. ಇದನ್ನೇ ಪೂರ್ತಿ ನೋಡಿ ಅರ್ಥ ಮಾಡಿಕೊಳ್ಳಲು ನಮ್ಮ ಜೀವಮಾನ ಸಾಲದು. ಹಾಗಾಗಿ ನಮ್ಮ ಕಣ್ಣಿಗೆ ಕಾಣುತ್ತಿರುವ ಮತ್ತು ನಮ್ಮೊಳಗೇ ಇರುವ ಪ್ರಪಂಚಗಳನ್ನು ನಾವು ಪ್ರೀತಿಸಬೇಕು. ಅದು ಹೇಗೇ ಇರಲಿ, ಎಷ್ಟೇ ಕಷ್ಟ, ಏನೇ ನೋವು, ಏನೇ ಅಂಗವಿಕಲತೆಯಿದ್ದರೂ ನಮ್ಮ ಕಣ್ಮುಂದೆ ಕಾಣುವುದನ್ನು ಸುಂದರವಾಗಿ ಕಾಣಬೇಕು. ನಾವು ಸತ್ಯವನ್ನು ಇಷ್ಟಪಡುತ್ತೇ ವಲ್ಲವೇ? ಹಾಗಾದರೆ ಪ್ರಪಂಚದಲ್ಲಿ ಏನೇನಿದೆಯೋ ಅವೆಲ್ಲವೂ ಸತ್ಯವಾಗಿರುವುದರಿಂದ ಅವುಗಳನ್ನೂ ಇಷ್ಟಪಡಬೇಕು. ಹಾಗೆ ಪ್ರತಿಯೊಂದನ್ನೂ ಪ್ರೀತಿಸುತ್ತ ಹೋದರೆ ಲೈಫ್ ಈಸ್ ಸೋ ಬ್ಯೂಟಿಪುಲ್ ಅನ್ನಿಸತೊಡಗುತ್ತದೆ. ಅಂತಹ ದ್ದೊಂದು ಖುಷಿ, ಅಂತಹದ್ದೊಂದು ಜೀವನೋತ್ಸಾಹ ನಮಗೆ ಬಹಳ ಮುಖ್ಯ. ಇಲ್ಲವಾದರೆ ಬದುಕಿನ ನೋವುಗಳು ನಮ್ಮನ್ನು ನುಂಗಿಹಾಕುತ್ತವೆ. ನಮಗಿಷ್ಟವಾದ ಸಂಗತಿಗಳನ್ನಷ್ಟೇ ಅಲ್ಲ, ಕಷ್ಟಗಳನ್ನೂ ಸ್ಪರ್ಧಾತ್ಮ ಕವಾಗಿ ಕಾಣಬೇಕು. ಆಗ ಅವೂ ಸುಂದರವಾಗುತ್ತವೆ. ಹಾಗೆ ನೋಡಿದರೆ ಮಾತ್ರ ಅವುಗಳನ್ನು ಎದುರಿಸಲು ನಮಗೆ ಶಕ್ತಿ ಬರುತ್ತದೆ. ಅವುಗಳನ್ನು ಎದುರಿಸುವ ಕೆಪಾಸಿಟಿ ನಮಗಿದೆ ಅಂತಲೇ ದೇವರು ನಮಗೆ ಕಷ್ಟ ಕೊಡುತ್ತಾನೆ. ಪ್ರತಿ ಕಷ್ಟವೂ ನಮ್ಮ ಬದುಕಿನ ಲಿಟಸ್ ಟೆಸ್ಟ್. ಪ್ರತಿ ಸವಾಲು ಹಾಗೂ ಕಷ್ಟಗಳನ್ನು ಎದುರಿಸಿ ಮುಂದೆ ಬಂದಾಗಲೂ ನಾವು ಒಂದು ಹೆಜ್ಜೆ ಬೆಳೆದಿರುತ್ತೇವೆ.
ರೂಪಾ ಅಯ್ಯರ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.