ನಮಗೇಕೆ ಹಿಂದಿನ ಜನ್ಮದ ಬಗ್ಗೆ ಇಷ್ಟು ಕುತೂಹಲ?
Team Udayavani, Oct 10, 2017, 1:25 PM IST
ಗರ್ಭಧರಿಸುವ ವೇದನೆಯನ್ನು ತಾಯಿ ಮಾತ್ರ ಅನುಭವಿಸುತ್ತಾಳೆಂದು ನಾವು ಅಂದುಕೊಳ್ಳುತ್ತೇವೆ. ಆದರೆ ಗರ್ಭದಲ್ಲಿರುವ ಮಗುವೂ ವೇದನೆಯನ್ನು ಅನುಭವಿಸುತ್ತದೆ. ಹೊರ ಬರುವಾಗಲೂ ಸಹ ಅತಿಯಾದ ವೇದನೆಗೊಳಗಾಗುತ್ತದೆ.
ಪ್ರತಿಯೊಬ್ಬ ಮನುಷ್ಯನೂ ಬೆಳೆದು, ಜ್ಞಾನ ಸಂಪಾದಿಸುವ ಹಾದಿಯಲ್ಲಿದ್ದಾಗ ಅವನಲ್ಲಿ ತನ್ನ ಜೀವನದ ಬಗ್ಗೆ ಹಲವು ಪ್ರಶ್ನೆಗಳು ಮೂಡಿಬರುತ್ತವೆ. ಎಲ್ಲಕ್ಕಿಂತ ಹೆಚ್ಚಾಗಿ ಆತ ತನ್ನ ಹಿಂದಿನ ಜನ್ಮದ ಬಗ್ಗೆ ಹೆಚ್ಚು ಕುತೂಹಲಿಯಾಗಿರುತ್ತಾನೆ. ನಾನೂ ಕೂಡ ನನ್ನ ಹಿಂದಿನ ಜನ್ಮದ ಪರಿಚಯಕ್ಕಾಗಿ ತಾಳೆಗರಿ ಶಾಸ್ತ್ರ ಕೇಳಲು ಎಷ್ಟೋ ಊರುಗಳಲ್ಲಿ ಸುತ್ತಾಡಿದ್ದೇನೆ. ಪ್ರತಿಯೊಬ್ಬರಿಗೂ ಒಂದಲ್ಲ ಒಂದು ದಿನ ಹಿಂದಿನ ಜನ್ಮದಲ್ಲಿ ನಾನೇನಾಗಿದ್ದೆ ಎಂಬ ಪ್ರಶ್ನೆ ಕಾಡಿರುತ್ತದೆ.
ನಮಗೇಕೆ ಹಿಂದಿನ ಜನ್ಮದ ಬಗ್ಗೆ ಇಷ್ಟು ಕುತೂಹಲ? ಹಿಂದಿನ ಜನ್ಮವೆಂಬುದು ಇತ್ತು ಎಂಬುದೇ ಯಾರಿಗೂ ಖಾತ್ರಿಯಿಲ್ಲ. ಮುಂದೆ ಮತ್ತೂಂದು ಜನ್ಮವಿರುತ್ತದೆ ಎಂಬ ಖಾತ್ರಿಯೂ ಇಲ್ಲ. ಆದರೂ ನಮಗೆ ಪೂರ್ವ ಹಾಗೂ ಪುನರ್ಜನ್ಮದ ಬಗ್ಗೆ ಸದಾ ಕುತೂಹಲ. ಏಕೆಂದರೆ ಆ ನಂಬಿಕೆ ಅಷ್ಟು ಬಲವಾದುದು.
ಈ ಎಲ್ಲ ಹುಡುಕಾಟ ಕುತೂಹಲಕ್ಕಾಗಿ ಮಾತ್ರವಲ್ಲ, ನಮ್ಮ ಈ ಜನ್ಮದ ಕರ್ಮ-ಅಕರ್ಮಗಳಿಗೆ ಮಾರ್ಗದರ್ಶನ ನೀಡಿ ಮುಂದಿನ ಜನ್ಮಕ್ಕೆ ನಾಂದಿಯಾಗಬೇಕು. ಪ್ರತಿಯೊಂದು ಜೀವಿಗೂ ಗರ್ಭಾವಸ್ಥೆಯಲ್ಲಿದ್ದಾಗ ತನ್ನ ಹಿಂದಿನ ಜನ್ಮದ ನೆನಪು ಇರುತ್ತದೆ. ಪರಮಾತ್ಮನ ಪ್ರೇರಣೆ ಯಿಂದ ಕರ್ಮಾನುರೋಧಿ ಶರೀರವನ್ನು ಪಡೆಯಲು ಮೊದಲ ತಿಂಗಳಲ್ಲಿ ಶಿರ, ಎರಡನೇ ತಿಂಗಳಲ್ಲಿ ಹೃದಯ, ತೋಳು- ಶರೀರದ ಅಂಗಗಳು, ಮೂರನೇ ತಿಂಗಳಲ್ಲಿ ಉಗುರು, ರೋಮ, ಅಸ್ಥಿ, ಚರ್ಮ ಹಾಗೂ ಲಿಂಗಬೋಧಕ, ನಾಲ್ಕನೆಯ ತಿಂಗಳಲ್ಲಿ ಶುಕ್ರ ರಕ್ತ, ರಸ, ಮೇಧಸ್ಸು, ಮಾಂಸ, ಮಜ್ಜೆ, ಐದನೇ ತಿಂಗಳಲ್ಲಿ ದಾಹ-ಹಸಿವು ಪ್ರಾರಂಭವಾಗುತ್ತವೆ. 6ನೇ ತಿಂಗಳಲ್ಲಿ ಜರಾಯು ವಿನಲ್ಲಿ ಸುತ್ತಿಕೊಂಡಿರುವ ಜೀವ ತಾಯಿಯ ಎಡಗರ್ಭದಲ್ಲಿ ತಿರುಗುತ್ತದೆ. ಏಳು-ಎಂಟನೇ ತಿಂಗಳುಗಳಲ್ಲಿ ದೇಹ ಬೆಳೆಯಲು ಪ್ರಾರಂಭಿಸಿ ಜೀರ್ಣ ಶಕ್ತಿಯನ್ನು ಪಡೆದುಕೊಳ್ಳುತ್ತದೆ.
ಮನೆಯಲ್ಲಿ ಒಂದು ಮಗು ಹುಟ್ಟಿತು ಅಂದರೆ ಎಲ್ಲರೂ ಎಷ್ಟು ಸಂತೋಷ ಪಡುತ್ತೇವೆ! ಮಗುವಿನಿಂದಾಗಿ ಹೆಣ್ಣು ತಾಯಿಯಾಗಿ ಪರಿಪೂರ್ಣಳಾದಳು ಎಂದುಕೊಳ್ಳುತ್ತೇವೆ. ಆದರೆ, ಗರ್ಭದಲ್ಲಿರುವ ಯಾವ ಮಗುವೂ ಸಂತೋಷವಾಗಿ ಮತ್ತೆ ಸಂಸಾರಕ್ಕೆ ಬರಲು ಬಯಸುವುದಿಲ್ಲ. ಏಕೆಂದರೆ, ಆ ಮಗುವಿಗೆ ಗರ್ಭದಲ್ಲಿ ತನ್ನ ಪೂರ್ವ ಜನ್ಮದ ನೆನಪು ಕಾಡುತ್ತಿರುತ್ತದೆ. ಈ ರಹಸ್ಯ ವಿಚಾರವನ್ನು ವಿಷ್ಣುಪುರಾಣ ಮತ್ತು ಗರುಡ ಪುರಾಣದಲ್ಲೂ ವಿವರಿಸಿದ್ದಾರೆ. ಗರ್ಭದಲ್ಲಿದ್ದಾಗ ಮಗು ದೇವರ ಬಳಿ ನೇರ ಸಂಪರ್ಕದಲ್ಲಿದ್ದು, ಪರಮಾತ್ಮನ ದಯೆಯಿಂದ ತನ್ನ ನೂರಾರು ಜನ್ಮಗಳ ಕರ್ಮಗಳನ್ನು ನೆನೆಯುತ್ತಾ, ಗರ್ಭದಲ್ಲೇ ನಿಟ್ಟುಸಿರು ಬಿಡುತ್ತಾ, ಏಳು ಧಾತುಗಳ ಆವರಣದಲ್ಲಿ ಜೀವ ಭಯದಿಂದ ಕೈಜೋಡಿಸಿ ತನ್ನನ್ನು ತಾಯಿಯ ಗರ್ಭದಲ್ಲಿ ಹಾಕಿದ ಭಗವಂತನ ಧ್ಯಾನ ಮಾಡಿ, “ಹೇ ಭಗವಂತ, ನನ್ನ ಹಿಂದಿನ ಜನ್ಮದ ಮೋಹಗಳಿಂದ ಸಂಬಂಧಗಳಿಗಾಗಿ ಮಾಡಿದ ಕೆಟ್ಟ-ಒಳ್ಳೆಯ ಕರ್ಮಗಳಿಂದ, ನನ್ನವರೆಂದು ಯಾರನ್ನು ಗುರುತಿಸುತ್ತಿದ್ದೇನೋ ಅವರಿಂದ ದೂರವಾಗಿ ಇಲ್ಲಿ ಮಾಂಸ ಮುದ್ದೆಗಳ ನಡುವೆ ದುಃಖ ಪಡುತ್ತಿದ್ದೇನೆ. ನನ್ನನ್ನು ಮತ್ತೆ ಪಾಪ ಕರ್ಮಗಳನ್ನು ಮಾಡುವ ಸಂಸಾರಕ್ಕೆ ನೂಕಬೇಡ, ಈಗಾಗಲೇ ನನ್ನ ತಾಯಿ ಸೇವಿಸಿರುವ ಆಹಾರ- ಉಪ್ಪು- ಹುಳಿ- ಖಾರದ ಪದಾರ್ಥಗಳಿಂದ ನನ್ನ ಅಂಗಗಳಿಗೆ ವೇದನೆಯುಂಟಾಗುತ್ತಿದೆ. ನನ್ನ ಈ ಅವಸ್ಥೆಯಿಂದ ಪಾರುಮಾಡು’ ಎಂದು ನಮ್ರತೆಯಿಂದ ಕೇಳಿಕೊಳ್ಳುತ್ತದೆ!
ಗರ್ಭಧರಿಸುವ ವೇದನೆಯನ್ನು ತಾಯಿ ಮಾತ್ರ ಅನುಭವಿಸುತ್ತಾಳೆಂದು ನಾವು ಅಂದುಕೊಳ್ಳುತ್ತೇವೆ. ಆದರೆ ಗರ್ಭದಲ್ಲಿರುವ ಮಗುವೂ ವೇದನೆಯನ್ನು ಅನುಭವಿಸುತ್ತದೆ. ಒಂಬತ್ತು ತಿಂಗಳುಗಳ ಕಾಲ ಅಲ್ಲಿದ್ದು, ನೋವು ಅನುಭವಿಸಿ, ಹೊರ ಬರುವಾಗಲೂ ಸಹ ಅತಿಯಾದ ವೇದನೆಗೊಳಗಾಗುತ್ತದೆ. ಆ ಸಮಯ ಉಸಿರಾಡಲೂ ಮಗುವಿಗೆ ಕಷ್ಟವಾಗುತ್ತದೆ. ಆಗ ಅದು ಹಿಂದಿನ ನೆನಪುಗಳನ್ನು ಕಳೆದುಕೊಳ್ಳುತ್ತದೆ. ಭೂಮಿಯ ಮೇಲೆ ಬಂದ ತತ್‌ಕ್ಷಣ ಜ್ಞಾನ ನಷ್ಟವಾಗಿ ರೋದನ ಮಾಡಲು ಪ್ರಾರಂಭಿಸುತ್ತದೆ. ಮತ್ತೆ ಆ ಜೀವ ಪ್ರಾಪಂಚಿಕ ಬಂಧನದಿಂದ ಮುಕ್ತವಾಗಲು ಸಾಧ್ಯವಿಲ್ಲ.
ಆ ಮಗುವನ್ನು ಆಡಿಸಿ ಮುದ್ದಾಡುವ ಜನರಿಗೂ ಅದರ ಇಚ್ಛೆಗಳ ಅರಿವು ಇರುವುದಿಲ್ಲ. ಮಗುವಿನ ಸ್ಥಿತಿಯಲ್ಲಿ ಆ ಜೀವ ಎದ್ದು ನಿಲ್ಲುವ, ತಾನೇ ತನ್ನ ಕರ್ತವ್ಯಗಳನ್ನು ನಿರ್ವಹಿಸುವ ಸಾಮರ್ಥ್ಯವನ್ನು ಕಳೆದುಕೊಂಡಿರುತ್ತದೆ. ಕ್ರಿಮಿ ಕೀಟಗಳು ಕಚ್ಚಿದರೂ ಅವುಗಳೊಂದಿಗೆ ಹೋರಾಡುವ ಶಕ್ತಿಯನ್ನು ಈ ಅವಸ್ಥೆಯಲ್ಲಿ ಅದು ಹೊಂದಿರುವುದಿಲ್ಲ.
ಜ್ಞಾನ ಶೂನ್ಯವಾದ ಸ್ಥಿತಿಯಲ್ಲಿ ತನಗೆ ಏನು ಬೇಕು, ಏನು ಬೇಡ ಎಂಬುದನ್ನು ವ್ಯಕ್ತಪಡಿಸಲೂ ಅದಕ್ಕೆ ಸಾಧ್ಯವಾಗುವುದಿಲ್ಲ.
ಈ ರೀತಿ ಮನುಷ್ಯ ಶೈಶವಾವಸ್ಥೆ, ಬಾಲ್ಯಾವಸ್ಥೆ, ಯೌವನಾವಸ್ಥೆ, ವೃದ್ಧಾವಸ್ಥೆ ಈ ಎಲ್ಲ ಅವಸ್ಥೆಗಳನ್ನು ಮುಗಿಸಿ ಮತ್ತೆ ಮರಣ, ಮತ್ತೆ ಜನನ, ಮುಕ್ತಿ ಸಿಗುವವರೆಗೂ ಜನನ-ಮರಣಗಳ ಚಕ್ರದಲ್ಲೇ ಸಿಲುಕಿರುತ್ತಾನೆ. ಇದನ್ನೆಲ್ಲ ಸರಳವಾಗಿ ಆದಿಶಂಕರಾಚಾರ್ಯರು ನಾಲ್ಕೇ ಸಾಲುಗಳಲ್ಲಿ ತಿಳಿಸಿಕೊಟ್ಟಿದ್ದಾರೆ.
ಪುನರಪಿ ಜನನಂ ಪುನರಪಿ ಮರಣಂ
ಪುನರಪಿ ಜನನೀ ಜಠರೇ ಶಯನಂ
ಇಹ ಸಂಸಾರೇ ಬಹು ದುಸ್ತಾರೇ
ಕೃಪಯಾ ಪಾರೇ ಪಾಹಿ ಮುರಾರೇ
ಮನುಷ್ಯನ ದೇಹ ಪಂಚಭೂತಗಳಿಂದ ನಿರ್ಮಾಣವಾಗಿ ಪಂಚಭೌತಿಕವೆನಿಸಿಕೊಳ್ಳುತ್ತದೆ.
ಚರ್ಮ, ಮೂಳೆಗಳು, ನಾಡಿಗಳು, ಮಾಂಸ ಮತ್ತು ರೋಮ ಇವುಗಳು ಭೂಮಿಯ ಗುಣಗಳು.
ಹಸಿವೆ, ಆಲಸ್ಯ, ನಿದ್ರೆ, ದಾಹ ಮತ್ತು ಕಾಂತಿ ಈ ಐದು ತೇಜದ ಗುಣಗಳು.
ಓಡುವುದು, ದಾಟುವುದು, ಸಂಕೋಚಗೊಳ್ಳುವುದು ಚಟುವಟಿಕೆ ಮತ್ತು ವಿಕಾಸಗೊಳ್ಳುವುದು ಈ ಐದು ವಾಯುವಿನ ಗುಣಗಳು.
ರಕ್ತ, ಮೂತ್ರ, ವೀರ್ಯ, ಲಾಲಾಜಲ, ಮಜ್ಜೆ ಇವುಗಳು ಜಲಗುಣಗಳು.
ಶ್ರವಣ, ಗಾಂಭೀರ್ಯ, ಶಬ್ದಘೋಷ, ಸಂಶಯ ಇವುಗಳು ಅಕಾಶ ಗುಣಗಳು.
ಜಗತ್ತಿನಲ್ಲಿ ಎಂಬತ್ನಾಲ್ಕು ಲಕ್ಷ ಬೇರೆ ಬೇರೆ ರೀತಿಯ ಜೀವ ಜಂತುಗಳಿದ್ದರೂ, ಮನುಷ್ಯ ಜೀವಿಗೆ ಹೊರತಾಗಿ ಬೇರೆ ಯಾವ ಜೀವಗಳಿಗೂ ತತ್ವಜ್ಞಾನ ಪ್ರಾಪ್ತಿಯಾಗುವುದಿಲ್ಲ. ಆದ್ದರಿಂದಲೇ ಯಾವ ಜೀವಿಗೂ ಇಲ್ಲದ ಪೂರ್ವ ಹಾಗೂ ಪುನರ್ಜನ್ಮದ ಕುತೂಹಲ ನಮಗೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.