ಸಾಧಕರಿಗೆ ಬರುವ ಅದ್ಭುತ ಐಡಿಯಾಗಳು ನಮಗೇಕೆ ಬರೋದಿಲ್ಲ?
Team Udayavani, Jan 2, 2018, 7:58 AM IST
ನಮ್ಮ ತಲೆಗೂ ಎಷ್ಟೋ ಹೊಸ ಹೊಸ ಐಡಿಯಾಗಳು ಬರುತ್ತಿರುತ್ತವೆ. ನಾವು ಅದನ್ನು ಗಮನಿಸಿದರೂ ಗಮನಿಸದಂತೆ ಅಯ್ಯೋ ನಮಗೆಲ್ಲ ಆ ಕೆಲಸ ಮಾಡೋಕಾಗಲ್ಲ ಬಿಡು, ಅದು ತುಂಬಾ ಕಷ್ಟ, ನಮಗೆ ಈಗ ಇರೋ ಲೈಫೇ ಚೆನ್ನಾಗಿದೆ ಅಂತ ಕಡೆಗಣಿಸಿರುತ್ತೇವೆ. ಅದೇ ಐಡಿಯಾವನ್ನು ಮತ್ತೂಬ್ಬರು ಕಾರ್ಯ ಗತಗೊಳಿಸಿ ಯಶಸ್ವಿಯಾದಾಗ ಅಯ್ಯೋ ಅದು ನನ್ನ ತಲೆಗೆ ಬಂದಿತ್ತು ಎನ್ನುತ್ತೇವೆ.
ಎಲ್ಲರಿಗೂ ಮೆದುಳಿದೆ. ಅದನ್ನು ದೇವರೇ ಕೊಟ್ಟಿದ್ದಾನೆ ಎಂದಿಟ್ಟುಕ್ಕೊಳ್ಳೋಣ. ಆ ಮೆದುಳು ಸಮಾನವಾದುದು. ಆದರೂ ಕೆಲವರು ದೊಡ್ಡ ವ್ಯಕ್ತಿಗಳಾಗುತ್ತಾರೆ, ಮತ್ತೆ ಕೆಲವರು ಸಾಮಾನ್ಯರಾಗಿ ಬದುಕುತ್ತಾರೆ. ಇನ್ನು ಕೆಲವರು ದಡ್ಡರಾಗುತ್ತಾರೆ. ಏಕೆ ಹೀಗೆ?
ಸಂಶೋಧನೆ ನಡೆಸಿದ ವಿಜ್ಞಾನಿಗಳು ಸಹ ಹೇಳುತ್ತಾರೆ…ಒಂದೇ ಐಡಿಯಾ ಲಕ್ಷಾಂತರ ಜನರ ತಲೆಗೆ ಬೇರೆ ಬೇರೆ ರೀತಿಯಲ್ಲಿ ಹೊಳೆದಿರುತ್ತದೆ. ಆದರೆ ಸಹಜವಾಗಿಯೇ ಅದನ್ನು ಪ್ರತಿಯೊಬ್ಬರೂ ಬೇರೆ ಬೇರೆ ರೀತಿಯಲ್ಲಿ ಗ್ರಹಿಸಿರುತ್ತಾರೆ. ಹಾಗಾಗಿ ಯಾರು ಅದನ್ನು ತಲೆಯಿಂದ ವಾಸ್ತವಕ್ಕೆ ತಂದು ಕಾರ್ಯಗತಗೊಳಿಸುತ್ತಾರೋ ಅವರೇ ಅದರ ಮೂಲಕರ್ತರಾಗುತ್ತಾರೆ.
ನಾವು ಕೆಲವಷ್ಟು ವಿಚಾರಗಳನ್ನು ಕೇಳಿ ತಿಳಿದುಕೊಳ್ಳುತ್ತೇವೆ. ಇನ್ನಷ್ಟು ವಿಚಾರಗಳನ್ನು ನೋಡಿ ತಿಳಿದುಕೊಳ್ಳುತ್ತೇವೆ. ಮತ್ತಷ್ಟನ್ನು ಮಾಡಿ ತಿಳಿದುಕೊಳ್ಳುತ್ತೇವೆ. ಈ ಎಲ್ಲ ಸಂದರ್ಭಗಳಲ್ಲೂ ನಮ್ಮದೇ ಆದ ಸ್ವಂತ ಬುದ್ಧಿಯನ್ನು ಉಪಯೋಗಿಸಿ, ಯೋಚಿಸಿ ಅನೇಕ ವಸ್ತು ವಿಚಾರಗಳನ್ನು ಮನದಟ್ಟು ಮಾಡಿಕೊಂಡಿರುತ್ತೇವೆ. ಬುದ್ಧಿ-ಜ್ಞಾನ-ಮನಸ್ಸು-ಚಿತ್ತ ಇವೆಲ್ಲ ನಮಗೆ ತಿಳಿದಿರುವುದೇ. ಆದರೆ ಐಡಿಯಾಗಳು ಪ್ರತಿದಿನ ನಮ್ಮ ಮೆದುಳಿಗೆ ಬರುವುದಿಲ್ಲ. ಯಾವತ್ತೋ ಒಂದು ದಿನ ಒಂದೊಳ್ಳೆ ಐಡಿಯಾ ನಮಗೆ ಹೊಳೆಯಬಹುದು. ಹಾಗಂತ ನಮ್ಮ ಮೆದುಳು ಅದನ್ನು ಹಾಗೇ ಸ್ವೀಕರಿಸುವುದಿಲ್ಲ. ಅದರಲ್ಲಿರುವ ಬುದ್ಧಿಯು ಆ ಐಡಿಯಾದ ಸರಿ ತಪ್ಪುಗಳನ್ನು ವಿಚಾರಿಸಿಕೊಂಡು ದೃಢ ನಿರ್ಧಾರಕ್ಕೆ ಬರುತ್ತದೆ.
ಹಾಗಾದರೆ ನಮಗೆ ಐಡಿಯಾ ಕೊಡುವವರು ಯಾರು?
ಕೆಲವು ಸಲ ನಮ್ಮ ಮನೆಯವರು, ಸ್ನೇಹಿತರೂ ಸಹ ಒಳ್ಳೊಳ್ಳೆ ಐಡಿಯಾ ಕೊಡುತ್ತಾರೆ. ಆದರೆ ಅವರ ಮೆದುಳಿಗೆ ಈ ಐಡಿಯಾ ಕೊಟ್ಟವರ್ಯಾರು? ಬೇರೆಯವರಿಗೆ ಹೊಳೆಯುವ ಒಳ್ಳೊಳ್ಳೆ ಐಡಿಯಾಗಳು ನಮಗೇಕೆ ಹೊಳೆಯುವುದಿಲ್ಲ? ನಮಗೂ ದೊಡ್ಡ ದೊಡ್ಡ ಐಡಿಯಾಗಳು ಬಂದರೆ ನಾವೂ ದೊಡ್ಡ ವ್ಯಕ್ತಿಯಾಗಬಹುದಲ್ಲವೇ? ಈಗಂತೂ ಐಡಿಯಾಗಳೇ ಜಗತ್ತನ್ನು ಆಳುತ್ತಿವೆ. ಕಾರ್ಪೊರೇಟ್ ಜಗತ್ತಿನಲ್ಲಿ ಹೊಸ ಹೊಸ ಐಡಿಯಾಗಳು ಕೋಟ್ಯಂತರ ರೂ. ಹಣ ಸಂಪಾದಿಸುವ ಹೊಸ ಕಂಪನಿಗಳನ್ನೇ ಸೃಷ್ಟಿಸುತ್ತಿವೆ. ಇಂದು ಬೆಂಗಳೂರು ಸ್ಟಾರ್ಟಪ್‌ಗ್ಳ ರಾಜಧಾನಿ ಎಂಬ ಹೆಗ್ಗಳಿಕೆ ಪಡೆದಿದೆ. ಈ ಸ್ಟಾರ್ಟಪ್ ಕಂಪನಿಗಳು ಹುಟ್ಟಿದ್ದು ಹೇಗೆ? ಹೊಸ ಐಡಿಯಾದಿಂದ. ಇಂತಹ ಐಡಿಯಾಗಳು ನಮಗೇಕೆ ಬರುವುದಿಲ್ಲ?
ನಾವು ನಾವೇ ಆಗುಳಿಯಬೇಕು-
ದೇವರು ನಮ್ಮೆಲ್ಲರಿಗೂ ಒಂದೇ ರೀತಿಯ ನಿಯಮಗಳನ್ನು ಹಾಕಿದ್ದಾನೆ. ಎಲ್ಲರೂ ಉಪಯೋಗಿಸುತ್ತಿರುವುದು ಅದೇ ಪಂಚಭೂತಗಳನ್ನೇ. ಅವುಗಳನ್ನು ಅನುಭವಿಸಲು ಬಳಸುತ್ತಿರುವುದು ಅವೇ ಪಂಚೇಂದ್ರಿಯಗಳನ್ನೇ. ಎಲ್ಲರಿಗೂ ದಿನಕ್ಕೆ ಇಪತ್ನಾಲ್ಕು ಗಂಟೆಗಳೇ ಇರುವುದು. ಎಲ್ಲರ ದೇಹದ ಕ್ರಿಯೆಗಳೂ ಒಂದೇ ರೀತಿ ನಡೆಯುತ್ತವೆ. ಆದರೂ ನಾವೆಲ್ಲ ಸಮಾನಾಂತರ ಜೀವನ ನಡೆಸುತ್ತಿಲ್ಲ. ಎಲ್ಲರೂ ಬೇರೆ ಬೇರೆ ಪರಿಸ್ಥಿತಿಯಲ್ಲಿದ್ದೇವೆ. ನಮ್ಮೆಲ್ಲರ ಬದುಕಿನ ಶೈಲಿ, ಸ್ಟಾಡರ್ಡ್ ಆಫ್ ಲಿವಿಂಗ್, ನಮಗಿರುವ ಹೆಸರು, ಪ್ರಸಿದ್ಧಿ, ಗೌರವಗಳೆಲ್ಲ ಬೇರೆ ಬೇರೆ. ಅವು ಆಗಾಗ ಬದಲಾಗುತ್ತಲೂ ಇರುತ್ತವೆ.
ಕೆಲವರನ್ನು ನೋಡಿ ನಾವು ಅವರಂತಾಗಬೇಕು ಎಂದು ಆಸೆ ಪಟ್ಟಿರುತ್ತೇವೆ. ಆದರೆ ನಾವು ಅವರಾಗಲು ಸಾಧ್ಯವಿಲ್ಲ. ನಮ್ಮ ಕರ್ಮಾನುಸಾರ ನಾವು ನಾವೇ ಆಗಿರಬೇಕು. ಏಕೆಂದರೆ ನಮಗೆ ಬರುವ ಯೋಚನೆಗಳು, ಐಡಿಯಾಗಳು ಕೂಡ ನಮ್ಮ ಕರ್ಮಾನುಸಾರವೇ ಬಂದಿರುತ್ತವೆ. ಬೇರೆಯವರಿಗೆ ಅವರ ಕರ್ಮಾನುಸಾರ ಹೊಸ ಯೋಚನೆಗಳು ಹೊಳೆದಿರುತ್ತವೆ. ನಮ್ಮ ದೇಹ, ನಮ್ಮ ಬುದ್ಧಿ, ನಮ್ಮ ಮೆದುಳು, ಮನಸ್ಸು, ನಮ್ಮ ಸುತ್ತಲಿರುವ ಜಗತ್ತು, ಕಣ್ಣಿಗೆ ಕಾಣುವ ಪ್ರಕೃತಿ, ಕಾಣದ ಪ್ರಕೃತಿ ಇವೆಲ್ಲವನ್ನೂ ಮೀರಿ ಒಂದು ದೈವಿಕ ಶಕ್ತಿ ಇದೆ. ಅದು ನಮ್ಮ ಮೆದುಳಿಗೆ ವಿಶೇಷ ಚಿಂತನೆಗಳನ್ನು ತುಂಬುತ್ತದೆ. ಆ ಸೂಚನೆ ಸಿಕ್ಕ ನಂತರವೇ ನಮ್ಮ ಮೆದುಳಿಗೆ ಒಂದು ಒಳ್ಳೆಯ ಐಡಿಯಾ ಬಂದಿದೆ ಎಂಬುದರ ಅರಿವಾಗುವುದು.
ದೇವರು ಅಥವಾ ನಮ್ಮ ನಿಲುಕಿಗೆ ಸಿಗದ ವಿಶೇಷ ಶಕ್ತಿಯು ಎಲ್ಲಾ ಯೋಚನೆಗಳನ್ನೂ ಎಲ್ಲರಿಗೂ ಕೊಡುವುದಿಲ್ಲ. ಒಂದೇ ಸಲ ಲಕ್ಷಾಂತರ ಜನರಿಗೆ ಒಂದೇ ಯೋಚನೆ ಬಂದರೂ ಅಷ್ಟೂ ಜನ ಅದನ್ನು ಕಾರ್ಯಗತಗೊಳಿಸಲು ಮುಂದಾಗುವುದಿಲ್ಲ. ಯಾರು ಆ ಕೆಲಸ ಮಾಡಬೇಕು ಎಂಬುದನ್ನು ಆ ಶಕ್ತಿಯೇ ನಿರ್ಧರಿಸುತ್ತದೆ.
ಭಗವದ್ಗೀತೆಯಲ್ಲಿ ಶ್ರೀಕೃಷ್ಣ ಹೇಳಿರುವಂತೆ
ಕಾರ್ಯಕಾರಣಕತೃìತೆÌ
ಹೇತುಃ ಪ್ರಕೃತಿರುಚ್ಯತೇ|
ಪುರುಷಃ ಸುಖದುಃಖಾನಾಂ
ಭೋಕ್ತತೆÌà ಹೇತುರುಚ್ಯತೇ||
ಕಾರ್ಯವೆಂದರೆ ಶರೀರ, ಕಾರಣವೆಂದರೆ ಇಂದ್ರಿಯಗಳು. ಇವುಗಳು ಕತೃìತ್ವಕ್ಕೆ ಕಾರಣ ಪರಮೇಶ್ವರ, ಸುಖ-ದುಃಖ-ಭೋಗಗಳನ್ನು ಅನುಭವಿಸುವವನು ಜೀವಿ. ಎಲ್ಲವೂ ಒಂದಕ್ಕೊಂದು ಕೊಂಡಿಗಳಂತೆ ಬೆಸೆದುಕೊಂಡಿವೆ.
ಪ್ರಕೃತ್ಯೇವ ಚ ಕರ್ಮಾಣಿ
ಕ್ರಿಯಯಮಾಣಾನಿ ಸರ್ವಶಃ|
ಯಃ ಪಶ್ಯತಿ ತಥಾತ್ಮಾನಂ
ಅಕರ್ತಾರಂ ಸ ಪಶ್ಯತಿ||
ಸರ್ವ ಪ್ರಕಾರದಲ್ಲಿಯೂ ಕರ್ಮಗಳನ್ನು ಪ್ರಕೃತಿಯೇ ನಡೆಸುತ್ತದೆ. ಪ್ರಕೃತಿ ಪರಮಾತ್ಮನ ಸೂಚನೆಗಳನ್ನು ಪರಿಪಾಲಿಸುತ್ತದೆ. ಯಾವ ಕರ್ಮಗಳನ್ನೂ ಕ್ಷೇತ್ರಜ್ಞನಾದ ಜೀವಾತ್ಮ ಮಾಡುವುದಿಲ್ಲ. ಎಲ್ಲಾ ಕರ್ಮಗಳ ಕ್ರಿಯೆಗಳು ಕತೃìವಾದ ಪರಮಾತ್ಮನಿಂದಲೇ ನಡೆಯುವುದು. ಆ ರೀತಿ ನಡೆಯುವುದಕ್ಕೆ ಐಡಿಯಾಗಳ ಮೂಲಕ ಸಿಗ್ನಲ್ ಕೊಡುವುದೂ ಅವನೇ.
ಐಡಿಯಾ ಬಂದಾಗ ತೂರಿಕೋ!-
ನಮ್ಮ ತಲೆಗೂ ಎಷ್ಟೋ ಹೊಸ ಹೊಸ ಐಡಿಯಾಗಳು ಬರುತ್ತಿರುತ್ತವೆ. ನಾವು ಅದನ್ನು ಗಮನಿಸಿದರೂ ಗಮನಿಸದಂತೆ ಅಯ್ಯೋ ನಮಗೆಲ್ಲ ಆ ಕೆಲಸ ಮಾಡೋಕಾಗಲ್ಲ ಬಿಡು, ಅದು ತುಂಬಾ ಕಷ್ಟ, ನಮಗೆ ಈಗ ಇರೋ ಲೈಫೇ ಚೆನ್ನಾಗಿದೆ ಅಂತ ಕಡೆಗಣಿಸಿರುತ್ತೇವೆ. ಅದೇ ಐಡಿಯಾವನ್ನು ಮತ್ತೂಬ್ಬರು ಕಾರ್ಯಗತಗೊಳಿಸಿ ಯಶಸ್ವಿಯಾದಾಗ ಅಯ್ಯೋ ಅದು ನನ್ನ ತಲೆಗೆ ಬಂದಿತ್ತು, ನಾನು ಆಗಲೇ ಎಚ್ಚೆತ್ತುಕೊಂಡು ಕೆಲಸ ಮಾಡಬೇಕಿತ್ತು ಎಂದು ಕೈಕೈ ಹಿಸುಕಿಕೊಳ್ಳುತ್ತೇವೆ.
ಅವರವರ ಕ್ಷೇತ್ರಕ್ಕೆ ತಕ್ಕಂತೆ ಹೊಸ ಹೊಸ ವಿಚಾರಗಳು ಎಲ್ಲರ ತಲೆಯಲ್ಲೂ ಓಡಾಡುತ್ತಿರುತ್ತವೆ. ಕೆಲವರಿಗೆ ಅವರ ಕ್ಷೇತ್ರವನ್ನು ಹೊರತುಪಡಿಸಿಯೂ ಸಾಕಷ್ಟು ಐಡಿಯಾಗಳು ಬರುತ್ತವೆ. ಆದರೆ ಅದು ನಮ್ಮ ಫೀಲ್ಡ್ ಅಲ್ಲಾ ಬಿಡು ಅಂದುಕೊಂಡು ತಾವಿರುವ ಕ್ಷೇತ್ರದಲ್ಲೇ ಕಷ್ಟಪಡುತ್ತಿರುತ್ತಾರೆ. ಹೊಸ ಪ್ರಯೋಗಗಳನ್ನು ಮಾಡುತ್ತಿದ್ದರೆ ಮಾತ್ರ ಮನುಷ್ಯನಿಗೆ ತನ್ನ ಶಕ್ತಿ ಏನು ಎಂಬುದು ಅರ್ಥವಾಗುವುದು. ಎಲ್ಲಿ ಸೋತು ಹೋಗುತ್ತೇನೋ ಎಂಬ ಭಯದಿಂದ ಒಳ್ಳೆಯ ಚಿಂತನೆಗಳನ್ನೆಲ್ಲ ಕಡೆಗಣಿಸುವವರು ಇದ್ದಲ್ಲೇ ಇರುತ್ತಾರೆ, ಯಾವುತ್ತೂ ಬೆಳೆಯುವುದಿಲ್ಲ. ಹೊಸ ಕೆಲಸಕ್ಕೆ ಕೈ ಹಾಕಿ ಸೋತರೆ ಜನ ಏನು ಹೇಳುತ್ತಾರೋ ಎಂದು ಕೆಲವರು ಅಂಜುತ್ತಾರೆ. ಅದು ಅರ್ಥಹೀನ. ಹೊಸತನ್ನು ಮಾಡಿ ಯಶಸ್ವಿಯಾದರೆ ಅವರೇ ಹೊಗಳುತ್ತಾರೆ ಎಂಬುದೂ ನೆನಪಿರಲಿ. ನಮ್ಮೊಳಗಿನ ಕೀಳರಿಮೆಯನ್ನು ಕಿತ್ತುಹಾಕಿದರೆ ಹೊಸ ಯೋಚನೆಗಳನ್ನು ಕಾರ್ಯಗತಗೊಳಿಸುವ ಶಕ್ತಿ ಬರುತ್ತದೆ. ನಮಗೆ ಆಗಾಗ ಬರುವ ಕನಿಷ್ಠ ಒಂದೆರಡು ಯೋಚನೆಗಳನ್ನಾದರೂ ಕಾರ್ಯರೂಪಕ್ಕೆ ತರಲು ಯತ್ನಿಸಬೇಕು. ಅವುಗಳಲ್ಲಿ ಯಾವುದಾದರೂ ಒಂದು ನಮಗೆ ಯಶಸ್ಸು ಕೊಟ್ಟೇ ಕೊಡುತ್ತದೆ. ಒಂದೇ ಕೆಲಸದಲ್ಲಿ ಸಿಕ್ಕಿಹಾಕಿಕೊಂಡಿದ್ದರೆ ಅದೇ ನಮಗೆ ಯಶಸ್ಸು ಕೊಡುತ್ತದೆ ಎಂಬುದಕ್ಕೆ ಯಾವ ಗ್ಯಾರಂಟಿಯೂ ಇರುವುದಿಲ್ಲ. ಜೀವನ ಪೂರ್ತಿ ನಾವು ಗೆಲ್ಲದೆ ಹೋದರೆ ಇಷ್ಟೊಳ್ಳೆ ಜೀವನ ಇದ್ದೂ ಏನು ಪ್ರಯೋಜನ?
ರೂಪಾ ಅಯ್ಯರ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Canada: ಅಮಿತ್ ಶಾ ವಿರುದ್ಧ ಆರೋಪ: ಕೆನಡಾದ ರಾಜತಾಂತ್ರಿಕರಿಗೆ ಸಮನ್ಸ್
INDvsNZ; ಬಿಗಿ ದಾಳಿ ನಡೆಸಿ ಪಂದ್ಯ ಹಿಡಿತಕ್ಕೆ ಪಡೆದುಕೊಂಡ ಟೀಮ್ ಇಂಡಿಯಾ
Parkala; ಅಂಗಡಿಯಲ್ಲಿ ಅಕ್ರಮವಾಗಿ ಪಟಾಕಿ ಮಾರುತ್ತಿದ್ದ ಮಾಲಕ ಅರೆಸ್ಟ್
Shiv Sena ; ಭಾರೀ ವಿವಾದದ ಬಳಿಕ ಶೈನಾ ಕ್ಷಮೆ ಯಾಚಿಸಿದ ಅರವಿಂದ್ ಸಾವಂತ್
Digil Movie: ದೈವ ಮತ್ತು ಮಂಗಳಮುಖಿಯ ಕಥೆ ಹೇಳಲು ಹೊರಟ ಚೇತನ್ ಮುಂಡಾಡಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.