ಸರಕಾರ ಗೋವಾ ಮನವೊಲಿಸಲು ಪ್ರಯತ್ನಿಸಿದೆಯೇ?


Team Udayavani, Dec 28, 2017, 11:19 AM IST

28-20.jpg

ಕುಡಿಯುವ ನೀರಿನ ಉದ್ದೇಶಕ್ಕಾಗಿ ರಾಜ್ಯಕ್ಕೆ ಮಹದಾಯಿ ನದಿಯಿಂದ 7.56 ಟಿಎಂಸಿ ನೀರು ಬಿಡುವ ಕುರಿತು ಮಾತುಕತೆಗೆ ಸಿದ್ಧ ಎಂದು ಗೋವಾ ಮುಖ್ಯಮಂತ್ರಿ ಮನೋಹರ್‌ ಪರಿಕ್ಕರ್‌ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಅವರಿಗೆ ಪತ್ರ ಬರೆದ ಬೆನ್ನಲ್ಲೇ ಮಹದಾಯಿ ನೀರು ಹಂಚಿಕೆ ವಿವಾದದಲ್ಲಿ ರೈತರ ಹೋರಾಟ ಮತ್ತೆ ತಾರಕಕ್ಕೇರಿದೆ. ಪರಸ್ಪರ ರಾಜಕೀಯ ಕೆಸರೆರಚಾಟ ತೀವ್ರಗೊಳ್ಳುತ್ತಿರುವುದರ ಜತೆಗೆ ಇದರಿಂದ ವಿವಾದ ಬಗೆಹರಿಯಬಹುದು ಎಂಬ ನಿರೀಕ್ಷೆ ಮತ್ತೆ ಹುಸಿಯಾಗುವ ಆತಂಕ ಕಾಣಿಸಿಕೊಂಡಿದೆ. ಈ ವಿವಾದ, ಅದರ ಹಿಂದಿರುವ ಉದ್ದೇಶ ಮತ್ತಿತರ ವಿಚಾರಗಳ ಬಗ್ಗೆ ಮಹದಾಯಿ ಕೊಳ್ಳದ ವ್ಯಾಪ್ತಿಗೆ ಬರುವ ಶಾಸಕ, ವಿಧಾನಸಭೆ ಪ್ರತಿಪಕ್ಷ ನಾಯಕ ಜಗದೀಶ್‌ ಶೆಟ್ಟರ್‌ ಜತೆ “ಉದಯವಾಣಿ’ ನೇರಾ ನೇರ ಮಾತಿಗಿಳಿದಾಗ…

ವಿಧಾನಸಭೆ ಚುನಾವಣೆ ಹೊಸ್ತಿಲಲ್ಲಿ ಮತ್ತೆ ಮಹದಾಯಿ ವಿವಾದ ತೀವ್ರವಾಗಿದೆ. ಏಕೆ ಹೀಗೆ?
ಇದಕ್ಕೆ ಕಾಂಗ್ರೆಸ್‌ ಮನಸ್ಥಿತಿ ಕಾರಣ. ಏಕೆಂದರೆ ಅವರಿಗೆ ಈ ಸಮಸ್ಯೆ ಬಗೆಹರಿಯಲೇಬಾರದು. ಯಾವಾಗಲೂ ಇದರ ರಾಜ ಕೀಯ ಲಾಭ ಪಡೆದು ಬೇಳೆ ಬೇಯಿಸಿಕೊಳ್ಳಬೇಕು  ಎಂಬ ಕಾರಣಕ್ಕೆ ಬಿಜೆಪಿ ವಿರುದ್ಧ “ಬ್ಲೇಮ್‌ ಗೇಮ್‌’ ಆಡುತ್ತಿದೆ. ವಿವಾದ ತೀವ್ರಗೊಳ್ಳುವಂತೆ ಷಡ್ಯಂತ್ರಗಳನ್ನು ಹೂಡುತ್ತಿದೆ.

ಚುನಾವಣೆ ಸಮೀಪಿಸುತ್ತಿರುವಾಗ ಮಹದಾಯಿ ವಿವಾದವನ್ನು ಬಿಜೆಪಿಯವರು ಮೈಮೇಲೆ ಎಳೆದುಕೊಂಡರಾ?
ಇಲ್ಲ, ಹಿಂದೆ ಸರ್ವಪಕ್ಷಗಳ ಸಭೆಯಲ್ಲಿ ನಾವು ನೀಡಿದ ಭರವಸೆಯಂತೆ ಮಹದಾಯಿ ವಿಚಾರದಲ್ಲಿ ಗೋವಾ ಸಿಎಂ ಮನವೊಲಿಸಿದ್ದೇವೆ. ಏಕೆಂದರೆ ಕರ್ನಾಟಕಕ್ಕೆ ನೀರು ಒದಗಿಸುವುದು ನಮ್ಮ ಬದ್ಧತೆಯಾಗಿತ್ತು. ಕೆಲವು ಹೋರಾಟ ಗಾರರನ್ನು ಹೊರತುಪಡಿಸಿ ಆ ಭಾಗದ ಜನ ಸಾಮಾನ್ಯರು ಬಿಜೆಪಿಯವರು ಪ್ರಾಮಾಣಿಕ ಪ್ರಯತ್ನ ಮಾಡಿ ದ್ದಾರೆ ಎಂಬುದನ್ನು ಮನಃಪೂರ್ವಕವಾಗಿ ಒಪ್ಪಿಕೊಂಡಿದ್ದಾರೆ. 

ಕಾಂಗ್ರೆಸ್‌ ಮತ್ತು ಬಿಜೆಪಿ ಪರಸ್ಪರ ಆರೋಪ ಮಾಡುವುದೇ ಆಯಿತು. ಸಮಸ್ಯೆ ಬಗೆಹರಿಯುವ ಪ್ರಾಮಾಣಿಕ ಪ್ರಯತ್ನ ಯಾವಾಗ?
ನಾವು ಆರೋಪ ಮಾಡುತ್ತಿಲ್ಲ, ವಾಸ್ತವ ಹೇಳುತ್ತಿದ್ದೇವೆ. ಕಾಂಗ್ರೆಸ್‌ ಕೇಂದ್ರ ಮತ್ತು ರಾಜ್ಯದಲ್ಲಿ ಅಧಿಕಾರದಲ್ಲಿದ್ದಾಗ ಏನು ಮಾಡಿದೆ? ರಾಜ್ಯಕ್ಕೆ ನ್ಯಾಯ ಒದಗಿಸಲು ಪ್ರಯತ್ನ ನಡೆದಿದೆ ಎಂದರೆ ಅದು ಬಿಜೆಪಿ ಅಧಿಕಾರದಲ್ಲಿದ್ದಾಗ. ವಾಜಪೇಯಿ ಪ್ರಧಾನಿಯಾಗಿದ್ದಾಗ ಕುಡಿಯುವ ಉದ್ದೇ ಶ ಕ್ಕಾಗಿ 7.56 ಟಿಎಂಸಿ ನೀರು ಬಳಸಿಕೊಳ್ಳುವ ಯೋಜ ನೆಗೆ ತಾತ್ವಿಕ ಒಪ್ಪಿಗೆ ನೀಡಿದ್ದರು. ಆದರೆ, ಗೋವಾದವರು ಆಕ್ಷೇಪಣೆ ವ್ಯಕ್ತ ಪಡಿಸಿದ್ದರಿಂದ 6 ತಿಂಗಳ ಬಳಿಕ ಯಥಾಸ್ಥಿತಿ ಕಾಪಾಡಿ ಕೊಳ್ಳುವಂತಾಯಿತು. 2006ರಲ್ಲಿ ಜೆಡಿಎಸ್‌-ಬಿಜೆಪಿ ಸಮ್ಮಿಶ್ರ ಸರಕಾರ ಬಂದ ಮೇಲೆ ಉಪಮುಖ್ಯಮಂತ್ರಿಯಾಗಿದ್ದ ಯಡಿಯೂರಪ್ಪ ಅವರು ಕಳಸಾ-ಬಂಡೂರಿ ಯೋಜನೆಗೆ 100 ಕೋಟಿ ರೂ. ಬಿಡುಗಡೆ ಮಾಡಿ ಕಾಮಗಾರಿ ಆರಂಭ ವಾಗುವಂತೆ ನೋಡಿಕೊಂಡರು. 

ಸಮ್ಮಿಶ್ರ ಸರಕಾರದಲ್ಲಿ ಮುಖ್ಯಮಂತ್ರಿಯಾಗಿದ್ದವರು ಕುಮಾರಸ್ವಾಮಿ. ಕಳಸಾ-ಬಂಡೂರಿ ಯೋಜನೆಗೆ ಒಪ್ಪಿಗೆ ನೀಡಿದ್ದೇ ನಾನು. ಬಿಜೆಪಿಯವರು ನನ್ನ ಮೇಲೆ ಸುಳ್ಳು ಆರೋಪ ಮಾಡುತ್ತಿದ್ದಾರೆ ಎನ್ನುತ್ತಿದ್ದಾರಲ್ಲಾ?
ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದರು. ಯಡಿಯೂರಪ್ಪ ಉಪಮುಖ್ಯಮಂತ್ರಿಯಾಗಿ ಹಣಕಾಸು ಜವಾಬ್ದಾರಿ ವಹಿಸಿ ಕೊಂಡಿದ್ದರು. ಕಳಸಾ-ಬಂಡೂರಿ ಯೋಜನೆ ಕುರಿತು ಸಚಿವ ಸಂಪುಟ ಸಭೆಗೆ ವಿಷಯ ತರಬೇಕು ಎಂದು ನಾನು ಮತ್ತು ಆಗ ನೀರಾವರಿ ಸಚಿವರಾಗಿದ್ದ ಕೆ.ಎಸ್‌.ಈಶ್ವರಪ್ಪ ಸಾಕಷ್ಟು ಪ್ರಯತ್ನ ಮಾಡಿದರೂ ಪ್ರತಿಕ್ರಿಯಿಸಿರಲಿಲ್ಲ. ಒತ್ತಡ ಹೆಚ್ಚಾದ ಮೇಲೆ ಸಂಪುಟ ಸಭೆಯಲ್ಲಿ ವಿಷಯ ಮಂಡಿಸಿದರು. ತಕ್ಷಣ ಯಡಿಯೂರಪ್ಪ ಅವರು 100 ಕೋಟಿ ರೂ. ನೀಡಿದರು. ಅದರಂತೆ ನಾಲೆ ಕಾಮಗಾರಿ ಆರಂಭಿಸಲು ಗುದ್ದಲಿ ಪೂಜೆಗೆ ದಿನಾಂಕ ನಿಗದಿಪಡಿಸಿ ಕುಮಾರಸ್ವಾಮಿ ಅವರನ್ನು ಆಹ್ವಾನಿಸಿದರೂ ಬರಲಿಲ್ಲ. ಯಡಿಯೂರಪ್ಪ, ನಾನು, ಈಶ್ವರಪ್ಪ, ಬಸವರಾಜ ಬೊಮ್ಮಾಯಿ ಮತ್ತಿತರರು ಹೋಗಿ ಭೂಮಿ ಪೂಜೆ ಮಾಡಿ ಬಂದೆವು. ಕೆಲಸ ಮುಂದುವರಿಯಿತು. 2013ರಲ್ಲಿ ಕಾಂಗ್ರೆಸ್‌ ಸರಕಾರ ಬಂದ ಮೇಲೆ ಆ ಕೆಲಸವೂ ನಿಂತಿತು.

ಈ ವಿಚಾರದಲ್ಲಿ ಕಾಂಗ್ರೆಸ್‌ ಏನೂ ಮಾಡಿಲ್ಲಅಂತೀರಾ?
ರಾಜ್ಯಕ್ಕೆ ಅನ್ಯಾಯ ಮಾಡಿದ್ದು ಬಿಟ್ಟರೆ ಬೇರೇನೂ ಮಾಡಿಲ್ಲ. ವಾಜಪೇಯಿ ಸರಕಾರ ಕುಡಿಯುವ ನೀರಿನ ಯೋಜನೆಗೆ ತಾತ್ವಿಕ ಅನುಮೋದನೆ ನೀಡಿದ ಬಳಿಕ ಕಾಂಗ್ರೆಸ್‌ನ ಮನ ಮೋಹನ್‌ ಸಿಂಗ್‌ ಅವರು 10 ವರ್ಷ ಪ್ರಧಾನಿಯಾಗಿದ್ದರು. ಗೋವಾದಲ್ಲಿ ಪ್ರತಾಪ್‌ ಸಿಂಗ್‌ ರಾಣೆ ನೇತೃತ್ವದ ಕಾಂಗ್ರೆಸ್‌ ಸರಕಾರವಿತ್ತು. ಮಾತುಕತೆ ಮೂಲಕ ಬಗೆಹರಿಸಿಕೊಳ್ಳಲು ಸಾಕಷ್ಟು ಪ್ರಯತ್ನ ಮಾಡಿದರೂ ಗೋವಾ ಮುಖ್ಯಮಂತ್ರಿಗಳು ಸಭೆಗೆ ಬರಲೇ ಇಲ್ಲ. ಕೊನೆಗೆ ಮನಮೋಹನ್‌ ಸಿಂಗ್‌ ಅವರು ಸುಪ್ರೀಂ ಕೋರ್ಟ್‌ನಲ್ಲಿ ಪ್ರಮಾಣಪತ್ರ ಸಲ್ಲಿಸಿ, ಈ ವಿವಾದ ಬಗೆಹರಿಸಲು ನ್ಯಾಯಾಧಿಕರಣ ರಚಿಸಬೇಕು ಎಂದು ಹೇಳಿ ನ್ಯಾಯಾಧಿಕರಣ ರಚನೆಯಾಗುವಂತೆ ಮಾಡಿದರು. ಆ ಸಂದರ್ಭದಲ್ಲಿ ಕುಡಿಯುವ ನೀರು 7.56 ಟಿಎಂಸಿ ವಿಚಾರ ವನ್ನು ನ್ಯಾಯಾಧಿಕರಣದ ಹೊರಗಿಡಿ ಎಂದು ಬಿಜೆಪಿ ಮನವಿ ಮಾಡಿಕೊಂಡರೂ ಕೇಳದೆ ಎಲ್ಲವನ್ನೂ ನ್ಯಾಯಾಧಿಕರಣಕ್ಕೆ ವಹಿಸಿದ್ದರು. ಅಷ್ಟೇ ಅಲ್ಲ, 2013ರಲ್ಲಿ ರಾಜ್ಯದಲ್ಲಿ ಕಾಂಗ್ರೆಸ್‌ ಸರಕಾರ ಅಧಿಕಾರಕ್ಕೆ ಬಂದ ಮೇಲೆ ಕಳಸಾ-ಬಂಡೂರಿ ನಾಲೆ ಕೆಲಸ ಮಾಡುವುದಿಲ್ಲ, ನೀರು ಹರಿಯದಂತೆ ಗೋಡೆ ಕಟ್ಟುವುದಾಗಿ ನ್ಯಾಯಾಧಿಕರಣಕ್ಕೆ ಪ್ರಮಾಣಪತ್ರ ಸಲ್ಲಿಸಿದ್ದಲ್ಲದೆ ಕೆಲಸ ನಿಲ್ಲಿಸಿ ಗೋಡೆ ನಿರ್ಮಿಸಿದರು. ಇದು ಕಾಂಗ್ರೆಸ್‌ ಮಾಡಿದ ಅನ್ಯಾಯವಲ್ಲವೇ?

ಅಂತೂ ಬಿಜೆಪಿ-ಕಾಂಗ್ರೆಸ್‌ ರಾಜಕೀಯ ಜಗಳದಿಂದಾಗಿ ವಿವಾದ ಬಗೆಹರಿಯುವುದಿಲ್ಲ ಎಂದಾಯಿತು?
ಬಿಜೆಪಿಯಿಂದ ಏನು ತಪ್ಪಾಗಿದೆ ಎಂದು ನೀವೇ ಹೇಳಿ. ಕುಡಿಯುವ ನೀರಿನ ಉದ್ದೇಶಕ್ಕಾಗಿ ಮಹದಾಯಿ ನದಿಯಿಂದ ರಾಜ್ಯಕ್ಕೆ 7.56 ಟಿಎಂಸಿ ನೀರು ಬಿಡುಗಡೆ ಮಾಡುವಂತೆ ರಾಜ್ಯ ಸರಕಾರದ ಕೋರಿಕೆಯನ್ನು ನ್ಯಾಯಾಧಿಕರಣ ತಿರಸ್ಕರಿಸಿದ ಬಳಿಕ ಬಿಜೆಪಿ ನೀಡಿದ್ದ ಭರವಸೆಯಂತೆ ಅಮಿತ್‌ ಶಾ ಅವರ ಸಮ್ಮುಖದಲ್ಲಿ ರಾಜ್ಯಕ್ಕೆ ಕುಡಿಯುವ ನೀರಿನ ಉದ್ದೇಶಕ್ಕೆ ನೀರು ಬಿಡುಗಡೆ ಮಾಡುವ ಕುರಿತಂತೆ ಗೋವಾ ಮುಖ್ಯಮಂತ್ರಿಗಳ ಮನವೊಲಿಸಿದ್ದೇವೆ. ಅದರಂತೆ ಅವರು ಬಿಜೆಪಿ ರಾಜ್ಯಾಧ್ಯಕ್ಷರಿಗೆ ಮಾತುಕತೆ ಮೂಲಕ ಈ ವಿಚಾರ ಬಗೆಹರಿಸಿಕೊಳ್ಳಲು ಸಿದ್ಧ ಎಂದು ಯಡಿಯೂರಪ್ಪ ಅವರಿಗೆ ಪತ್ರ ಬರೆದಿದ್ದಾರೆ. 

ಕಾಂಗ್ರೆಸ್‌ ಅಧಿಕಾರಕ್ಕೆ ಬಂದ ಮೇಲೆ ಮುಖ್ಯಮಂತ್ರಿ ಸಿದ್ದರಾಮಯ್ಯ ಈ ವಿಚಾರದಲ್ಲಿ ಸಾಕಷ್ಟು ಪತ್ರ ವ್ಯವಹಾರ ನಡೆಸಿದರೂ ಸ್ಪಂದಿಸದ ಗೋವಾ ಈಗ ಯಡಿಯೂರಪ್ಪ ಅವರಿಗೆ ಪತ್ರ ಬರೆದರೆ ಅದು ಒಪ್ಪಿತವೇ? ಸರಕಾರಕ್ಕೆ ಪತ್ರ ಬರೆಯಬಹುದಿತ್ತಲ್ಲ?
ಪತ್ರ ವ್ಯವಹಾರ ನಡೆಸಿದ್ದಾರೆ ಎಂದ ಮಾತ್ರಕ್ಕೆ ಸಮಸ್ಯೆ ಬಗೆಹರಿ ಯುವುದಿಲ್ಲ. ಮೊದಲು ಮನವೊಲಿಸುವ ಕೆಲಸ ಮಾಡಬೇಕು. ಆ ಕೆಲಸವನ್ನು ಯಡಿಯೂರಪ್ಪ ನೇತೃತ್ವದಲ್ಲಿ ಬಿಜೆಪಿ ಮಾಡಿದೆ. ಅದರಂತೆ ಗೋವಾ ಮುಖ್ಯಮಂತ್ರಿಗಳು ಯಡಿಯೂರಪ್ಪ ಅವರಿಗೆ ಪತ್ರ ಬರೆದಿದ್ದಾರೆ. ಸರಕಾರ ಯಾವತ್ತಾದರೂ ಪತ್ರ ಬರೆದಿರುವುದು ಬಿಟ್ಟು ಗೋವಾ ಸರಕಾರವನ್ನು ಮನವೊಲಿ ಸುವ ಕೆಲಸ ಮಾಡಿದೆಯೇ? ಮಾಡಿದ್ದರೆ ಪರಿಕ್ಕರ್‌ ಸರಕಾರಕ್ಕೇ ಪತ್ರ ಬರೆಯುತ್ತಿದ್ದರು. ಇಲ್ಲಿ ಬಿಜೆಪಿ ಮೇಲೆ ಗೂಬೆ ಕೂರಿಸ ಬೇಕು ಎಂದು ಸಿಎಂ ಸಿದ್ದರಾಮಯ್ಯ ಮತ್ತು ಕಾಂಗ್ರೆಸ್‌ನವರು ಇಂತಹ ಕ್ಷುಲ್ಲಕ ವಿವಾದಗಳನ್ನು ಸೃಷ್ಟಿಸುತ್ತಿದ್ದಾರೆ.

ಸಿದ್ದರಾಮಯ್ಯ ಮಾತುಕತೆಗೆ ದಿನಾಂಕ ನಿಗದಿಪಡಿಸಿ ಎಂದು ಗೋವಾ ಮುಖ್ಯಮಂತ್ರಿಗಳಿಗೆ ಪತ್ರ ಬರೆದಿದ್ದಾರೆ.  ಈ ವಿಷಯದಲ್ಲಿ ನೀವು ಗೋವಾ ಸಿಎಂ ಮನವೊಲಿಸುತ್ತೀರಾ?
ಆ ಕೆಲಸಕ್ಕೆ ನಾವು ಸಿದ್ಧ. ಆದರೆ, ಅದಕ್ಕೆ ಸೂಕ್ತ ವಾತಾವರಣ ಗೋವಾದಲ್ಲಿದೆಯೇ? ಗೋವಾದಲ್ಲಿ ಬಿಜೆಪಿ ಅಲ್ಪಮತದ ಸರಕಾರ ಹೊಂದಿದ್ದರೂ ಅಪಾಯ ಮೈಮೇಲೆ ಎಳೆದುಕೊಂಡು ಮಾತುಕತೆಗೆ ಒಪ್ಪಿದ್ದಾರೆ. ಯಾವ ರಾಜ್ಯದ ಮುಖ್ಯಮಂತ್ರಿ ಆದರೂ ಈ ರೀತಿ ಒಪ್ಪಿಗೆ ಸೂಚಿಸಿದ ಉದಾಹರಣೆ ಇದೆಯೇ? ಆದರೆ, ಗೋವಾದಲ್ಲಿ ಪ್ರತಿಪಕ್ಷವಾಗಿರುವ ಕಾಂಗ್ರೆಸ್‌ ಅಲ್ಲಿನ ಸಿಎಂ ನಿರ್ಧಾರದ ವಿರುದ್ಧ ಆಂದೋಲನ ನಡೆಸಲು ಮುಂದಾಗಿದೆ. ಆದ್ದರಿಂದ ಮೊದಲು ರಾಜ್ಯದ ಕಾಂಗ್ರೆಸ್‌ ನಾಯಕರು ತಮ್ಮ ವರಿಷ್ಠರ ಸಹಕಾರದೊಂದಿಗೆ ಗೋವಾ ಕಾಂಗ್ರೆಸ್‌ ನಾಯಕರ ಮನವೊಲಿಸಿ ಯಾವುದೇ ಪ್ರತಿಭಟನೆ ನಡೆಸದಂತೆ ಪೂರಕ ವಾತಾವರಣ ಸೃಷ್ಟಿ ಮಾಡಬೇಕು.

ನೀರು ಬಿಡಲು ಸಾಧ್ಯವೇ ಇಲ್ಲ ಎಂದು ಗೋವಾ ನೀರಾವರಿ ಸಚಿವರು ಹೇಳುತ್ತಾರೆ. ಇನ್ನೊಂದೆಡೆ ಪರಿಕ್ಕರ್‌ ಕೂಡ ಈ ಸರಕಾರದ ಜತೆ ಮಾತುಕತೆ ಸಾಧ್ಯವಿಲ್ಲ ಎನ್ನುತ್ತಿದ್ದಾರಲ್ಲಾ?
ಮಹದಾಯಿ ವಿಚಾರದಲ್ಲಿ ಗೋವಾ ಕಾಂಗ್ರೆಸ್‌ನವರು ಮೃದು ಧೋರಣೆ ಹೊಂದಿ ಪರಿಕ್ಕರ್‌ಗೆ ಬೆಂಬಲ ಕೊಟ್ಟಿದ್ದರೆ ಅಲ್ಲಿನ ನೀರಾವರಿ ಸಚಿವರು ಈ ಹೇಳಿಕೆ ಕೊಡುವ ಅಗತ್ಯ ಬರುತ್ತಿ ರಲಿಲ್ಲ. ರಾಜಕೀಯ ಅಸ್ತಿತ್ವಕ್ಕಾಗಿ ಎಲ್ಲರೂ ಮಾತನಾಡುವುದು ಸಹಜ. ಕಾಂಗ್ರೆಸ್‌ನವರು ವಿರೋಧ ಮಾಡಿದ ಮೇಲೆ ಆಡಳಿತ ಪಕ್ಷದವರು ಅಸ್ತಿತ್ವ ಉಳಿಸಿಕೊಳ್ಳಲು ಈ ರೀತಿ ಮಾತನಾಡ ಬೇಕಾಗುತ್ತದೆ. ಇನ್ನು ಅಲ್ಪಮತದ ಸರಕಾರ ನೇತೃತ್ವ ವಹಿಸಿರುವ ಮನೋಹರ್‌ ಪರಿಕ್ಕರ್‌ ಅವರು ಮಾತುಕತೆಗೆ ಮುಂದಾಗ ಬೇಕಾದರೆ ಅಲ್ಲಿ ರಾಜಕೀಯ ಪರಿಸ್ಥಿತಿ ಸರಿ ಇರಬೇಕಾಗುತ್ತದೆ. ಪ್ರಮುಖ ಪ್ರತಿಪಕ್ಷ ಕಾಂಗ್ರೆಸ್‌ಗೆ ಹೆದರಿ ಮಾತುಕತೆಯಿಂದ ಹಿಂದೆ ಸರಿಯಬೇಕಾಗುತ್ತದೆ. ಆದ್ದರಿಂದ ಗೋವಾ ಕಾಂಗ್ರೆಸ್‌ ಮನವೊಲಿಸಿ ಅವರನ್ನು ಒಪ್ಪಿಸುವುದು ಬಿಟ್ಟು ಇಂತಹ ಕುಂಟು ನೆಪಗಳನ್ನು ಹೇಳಿಕೊಂಡು, ನೀರಾವರಿ ಸಚಿವರ ಹೇಳಿಕೆಯನ್ನು ತನಗೆ ಬೇಕಾದಂತೆ ವ್ಯಾಖ್ಯಾನಿಸಿ ಬಿಜೆಪಿ ಮೇಲೆ ಆರೋಪ ಮಾಡುವ ಕಾಂಗ್ರೆಸ್‌ ಧೋರಣೆ ಸರಿಯಲ್ಲ.

ಆದರೂ ಗೋವಾ ಸಿಎಂ ರಾಜ್ಯ ಸರಕಾರಕ್ಕೆ ಪತ್ರ ಬರೆದಿದ್ದರೆ ಹೆಚ್ಚು ಅನುಕೂಲವಾಗುತ್ತಿತ್ತು. ನ್ಯಾಯಾಧಿಕರಣದಲ್ಲಿ ಲಾಭ ಪಡೆದುಕೊಳ್ಳಬಹುದಿತ್ತು?
ಯಾರಿಗೆ ಪತ್ರ ಬರೆದಿದ್ದಾರೆ ಎಂಬುದಕ್ಕಿಂತ ಗೋವಾ ಮುಖ್ಯಮಂತ್ರಿ ಗಳ ಲಿಖೀತ ಹೇಳಿಕೆ ಮುಖ್ಯ. ಅದನ್ನೇ ನ್ಯಾಯಾಧಿಕರಣದ ಮುಂದೆ ಇಟ್ಟು, ನೀರು ಹಂಚಿಕೆ ವಿಚಾರದಲ್ಲಿ ಮಾತುಕತೆ ಮೂಲಕ ವಿವಾದ ಬಗೆಹರಿಸಿಕೊಳ್ಳುತ್ತೇವೆ. ಆದ್ದರಿಂದ ಈ ಹಿಂದೆ 7.56 ಟಿಎಂಸಿ ಕುಡಿಯುವ ನೀರು ಕೇಳಿ ಸಲ್ಲಿಸಿದ್ದ ಮಧ್ಯಂತರ ಅರ್ಜಿ ತಿರಸ್ಕರಿಸಿದ ಆದೇಶ ಹಿಂಪಡೆಯಿರಿ ಎಂದು ಕೋರಿ ವಿವಾದ ಬಗೆಹರಿಸಿಕೊಳ್ಳಲು ದಾರಿ ರೂಪಿಸಲು ಅವಕಾಶವಿದೆ.

ಒಂದು ಪಕ್ಷದ ರಾಜ್ಯಾಧ್ಯಕ್ಷರಿಗೆ ಬರೆದ ಪತ್ರ ನ್ಯಾಯಾ ಧಿಕರಣ ದಲ್ಲಿ ಕೆಲಸಕ್ಕೆ ಬರುವುದಿಲ್ಲ ಎನ್ನುತ್ತಾರಲ್ಲಾ?
ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಕಾಂಗ್ರೆಸ್‌ನವರನ್ನು ಹೊರತುಪಡಿಸಿ ಬೇರೆ ಯಾರು ಆ ಮಾತು ಹೇಳಿದ್ದಾರೆ? ಹಿಂದೆ ಆಲಮಟ್ಟಿ ಅಣೆಕಟ್ಟೆ ಎತ್ತರವನ್ನು 519 ಮೀಟರ್‌ನಿಂದ 524 ಮೀಟರ್‌ಗೆ ಹೆಚ್ಚಿಸುವ ಕುರಿತು ಆಗಿನ ನೀರಾವರಿ ಸಚಿವರು ನೀಡಿದ ಹೇಳಿಕೆಯ ಮಾಧ್ಯಮ ವರದಿಗಳನ್ನು ಆಧರಿಸಿ ಅಣೆಕಟ್ಟೆ ಎತ್ತರಿಸದಂತೆ ಸುಪ್ರೀಂ ಕೋರ್ಟ್‌ ಆದೇಶಿಸಿರಲಿಲ್ಲವೇ? ಜವಾಬ್ದಾರಿಯುತ ಮುಖ್ಯಮಂತ್ರಿಯಾಗಿ ಪರಿಕ್ಕರ್‌ ಅವರು ನೀಡಿದ ಲಿಖೀತ ಹೇಳಿಕೆ ಕೈಯ್ಯಲ್ಲಿರುವಾಗ ಅದು ಪ್ರಯೋಜನಕ್ಕೆ ಬರುವುದಿಲ್ಲ ಎಂದು ಹೇಳಲು ಸಿದ್ದರಾಮಯ್ಯ ಅವರೇನೂ ಕಾನೂನು ಪಂಡಿತರೇ? ರಾಜಕೀಯಕ್ಕಾಗಿ ಇಂತಹ ಹೇಳಿಕೆ ನೀಡುವ ಬದಲು ಪತ್ರದೊಂದಿಗೆ ನ್ಯಾಯಾಧಿಕರಣಕ್ಕೆ ಮನವಿ ಸಲ್ಲಿಸಲಿ. ಆಗ ಇಡೀ ವಾತಾವರಣವೇ ಬದಲಾಗುತ್ತದೆ.

ರಾಜ್ಯ ಸರಕಾರಕ್ಕೆ ನೀಡುವ ಸಲಹೆ ಏನು?
ಬಿಜೆಪಿಯವರು ಈಗಾಗಲೇ ಗೋವಾ ಮುಖ್ಯಮಂತ್ರಿಗಳ ಮನವೊಲಿಸಿ ಮಾತುಕತೆಗೆ ಸಿದ್ಧ ಎಂದು ಪತ್ರ ಬರೆಯುವಂತೆ ನಾವು ಮಾಡಿದ್ದೇವೆ. ಇದೀಗ ಕಾಂಗ್ರೆಸ್‌ ಸರಕಾರ ಗೋವಾ ಕಾಂಗ್ರೆಸ್ಸನ್ನು ಮನವೊಲಿಸಿ ವಿರೋಧ ವ್ಯಕ್ತಪಡಿಸದಂತೆ ನೋಡಿಕೊಂಡು ನ್ಯಾಯಾಧಿಕರಣದ ಮುಂದೆ ಗೋವಾ ಮುಖ್ಯಮಂತ್ರಿಗಳ ಪತ್ರ ಇಟ್ಟು ಕುಡಿಯುವ ನೀರು ಕೇಳಲಿ. ಸಮಸ್ಯೆ ಬಗೆಹರಿಯುವಂತೆ ನಾವು ನೋಡಿಕೊಳ್ಳುತ್ತೇವೆ. ಅದನ್ನು ಬಿಟ್ಟು ಒಳರಾಜಕಾರಣ ಮಾಡುವುದು ಬೇಡ.

ಕಾಂಗ್ರೆಸ್‌ನವರು ವಿವಾದ ಶುರುಮಾಡಿದ್ದಾರೆ
ಚುನಾವಣೆ ವಿಚಾರ ಬದಿಗಿಟ್ಟು ಸಿದ್ದರಾಮಯ್ಯ ಅವರು ಮಹದಾಯಿ ಕುರಿತಂತೆ ಆಗಿರುವ ಬೆಳವಣಿಗೆಗಳನ್ನು ಗಮನಿಸಲಿ. ಆಗ ಸರಿಯಾದ ದಾರಿ ಸಿಗುತ್ತದೆ. ಅದನ್ನು ಬಿಟ್ಟು ಚುನಾವಣೆ ಬರುತ್ತಿದೆ ಎಂದು ಹೇಳುವುದು ಸರಿಯಲ್ಲ. ಬಿಜೆಪಿಗೆ ಲಾಭವಾಗುತ್ತದೆ ಎಂಬ ಕಾರಣಕ್ಕೆ ಸಹಿಸಿಕೊಳ್ಳಲು ಕಾಂಗ್ರೆಸ್‌ಗೆ ಸಾಧ್ಯವಾಗುತ್ತಿಲ್ಲ. ಹೀಗಾಗಿ ಬಿಜೆಪಿಗೆ ಹಾನಿಯಾಗಬೇಕು ಎಂದು ಕಾಂಗ್ರೆಸ್‌ನವರು ವಿವಾದ ಶುರು ಮಾಡಿದ್ದಾರೆ.

ಸಂದರ್ಶನ: ಪ್ರದೀಪ್‌ ಕುಮಾರ್‌ ಎಂ.

ಟಾಪ್ ನ್ಯೂಸ್

tractor

Farmers; ಶೂನ್ಯ ಬಡ್ಡಿಯ ಕೃಷಿ ಸಾಲಕ್ಕೆ ಬಡ್ಡಿ ಕಟ್ಟಲು ಸೂಚನೆ

UV-Navaroopa

Manipal: ಗ್ರಾಮೀಣ ಓದುಗರ ಸ್ಪಂದನೆಯೇ ಯಶಸ್ಸು: ಎಂಡಿ, ಸಿಇಒ ವಿನೋದ್‌ ಕುಮಾರ್‌

uppunda1

Uppunda: ಶ್ರೀದುರ್ಗಾಪರಮೇಶ್ವರಿ ಅಮ್ಮನವರ ಸಂಭ್ರಮದ ಮನ್ಮಹಾರಥೋತ್ಸವ

Govinda-pai-Book

Udupi: ಗೋವಿಂದ ಪೈಗಳ ಸಂಶೋಧನ ಬರಹಗಳು ಸಮಗ್ರತೆಯ ಹೂರಣ: ಡಾ.ವಿವೇಕ್‌ ರೈ

DK SHI NEW

MLAs 50 ಕೋಟಿ ರೂ.; ಸಾಕ್ಷಿ ಕೊಡುವ ಹೊಣೆ ಯತ್ನಾಳ್‌ದು: ಡಿಕೆಶಿ

Patla-yakshadruva

Mangaluru: ಎಲ್ಲ ವರ್ಗದ ಜನರ ಸಹಕಾರದಿಂದ ಸಾಮಾಜಿಕ ಸಾಧನೆ: ಕನ್ಯಾನ ಸದಾಶಿವ ಶೆಟ್ಟಿ

Vijayendra (2)

Congress 40 ಪರ್ಸೆಂಟ್‌ ಕಮಿಷನ್‌ ಆರೋಪ ಸುಳ್ಳೆಂದು ಸಾಬೀತು: ಬಿಜೆಪಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Belagavi: ಅಧಿವೇಶನ ವೇಳೆ 10 ಲಕ್ಷ ಜನರ ಜತೆ ಸುವರ್ಣ ವಿಧಾನಸೌಧಕ್ಕೆ ಮುತ್ತಿಗೆ ಹಾಕುತ್ತೇವೆ…

Belagavi:ಅಧಿವೇಶನ ವೇಳೆ 10 ಲಕ್ಷ ಜನರ ಜತೆ ಸುವರ್ಣವಿಧಾನಸೌಧಕ್ಕೆ ಮುತ್ತಿಗೆ ಹಾಕುತ್ತೇವೆ…

ನಾನೂ ಸೀನಿಯರ್‌ ಲೀಡರ್‌, ರಾಜ್ಯಕ್ಕೆ ದಲಿತ ಸಿಎಂ ಪ್ರಸ್ತಾವ ಬಂದರೆ ಮುಂಚೂಣಿಯಲ್ಲಿರುವೆ

ನಾನೂ ಸೀನಿಯರ್‌ ಲೀಡರ್‌, ರಾಜ್ಯಕ್ಕೆ ದಲಿತ ಸಿಎಂ ಪ್ರಸ್ತಾವ ಬಂದರೆ ಮುಂಚೂಣಿಯಲ್ಲಿರುವೆ

BR-patil

Congress ಸರಕಾರದಲ್ಲಿ ಹಣಕಾಸು ಸಮಸ್ಯೆಯಿಂದ ಶಾಸಕರ ಬೇಡಿಕೆ ಈಡೇರಿಲ್ಲ ಎನ್ನುವುದು ವಾಸ್ತವ

ಬಿಜೆಪಿಗೆ ಇಡೀ ರಾಜ್ಯವೇ ಒಪ್ಪಿಕೊಳ್ಳುವಂಥ ಸರ್ವಸ್ಪರ್ಶಿ ನಾಯಕತ್ವ ಇನ್ನಷ್ಟೇ ಸಿಗಬೇಕಿದೆ

ಬಿಜೆಪಿಗೆ ಇಡೀ ರಾಜ್ಯವೇ ಒಪ್ಪಿಕೊಳ್ಳುವಂಥ ಸರ್ವಸ್ಪರ್ಶಿ ನಾಯಕತ್ವ ಇನ್ನಷ್ಟೇ ಸಿಗಬೇಕಿದೆ

Congress ಪಕ್ಷದ‌ಲ್ಲಿ ನಾಯಕತ್ವಕ್ಕಾಗಿ ಗಲಾಟೆ ಇಲ್ಲ

Congress ಪಕ್ಷದ‌ಲ್ಲಿ ನಾಯಕತ್ವಕ್ಕಾಗಿ ಗಲಾಟೆ ಇಲ್ಲ

MUST WATCH

udayavani youtube

ಇಂಗ್ಲೀಷ್ ಒಂದು ಭಾಷೆ ಅನ್ನೋದೇ ತಪ್ಪು -ಪ್ರಕಾಶ್ ಬೆಳವಾಡಿ

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

udayavani youtube

ಪುಂಗನೂರು ತಳಿಯ ಹಾಲು ಯಾವೆಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ?

ಹೊಸ ಸೇರ್ಪಡೆ

tractor

Farmers; ಶೂನ್ಯ ಬಡ್ಡಿಯ ಕೃಷಿ ಸಾಲಕ್ಕೆ ಬಡ್ಡಿ ಕಟ್ಟಲು ಸೂಚನೆ

UV-Navaroopa

Manipal: ಗ್ರಾಮೀಣ ಓದುಗರ ಸ್ಪಂದನೆಯೇ ಯಶಸ್ಸು: ಎಂಡಿ, ಸಿಇಒ ವಿನೋದ್‌ ಕುಮಾರ್‌

puttige-4

Udupi; ಗೀತಾರ್ಥ ಚಿಂತನೆ 96 : ವ್ಯಾಮೋಹ ಜಾಲ vs ಜಾಗೃತಾತ್ಮ

uppunda1

Uppunda: ಶ್ರೀದುರ್ಗಾಪರಮೇಶ್ವರಿ ಅಮ್ಮನವರ ಸಂಭ್ರಮದ ಮನ್ಮಹಾರಥೋತ್ಸವ

Govinda-pai-Book

Udupi: ಗೋವಿಂದ ಪೈಗಳ ಸಂಶೋಧನ ಬರಹಗಳು ಸಮಗ್ರತೆಯ ಹೂರಣ: ಡಾ.ವಿವೇಕ್‌ ರೈ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.