ಈಗಿನ ಬಿಜೆಪಿಯಲ್ಲಿ ಚಮಚಾಗಿರಿಗೆ ಟಿಕೆಟ್‌!: ಟಿಕೆಟ್‌ ವಂಚಿತ ರಘುಪತಿ ಭಟ್‌ ಬಿರುನುಡಿ


Team Udayavani, May 15, 2024, 7:30 AM IST

ರಘುಪತಿ ಭಟ್‌

ಬಿಜೆಪಿಯಲ್ಲಿ  ಸ್ಥಳೀಯ ನಾಯಕರನ್ನು, ಕಾರ್ಯಕರ್ತರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಟಿಕೆಟ್‌ ನೀಡುವ ಪದ್ಧತಿ ಮುಂಚೆ ಬಿಜೆಪಿಯಲ್ಲಿತ್ತು. ಈಗ ಎಲ್ಲವೂ ಬದಲಾಗಿದೆ. ಹೈಕಮಾಂಡ್‌ ಮಾದರಿಯ ವ್ಯವಸ್ಥೆ  ಜಾರಿಗೆ ಬಂದಿದೆ.  ಗಾಡ್‌ಫಾದರ್‌ ಇರುವವರಿಗೆ, ಚಮಚಾಗಿರಿ ಮಾಡುವವರಿಗೆ ಟಿಕೆಟ್‌ ನೀಡುವಂಥ ವ್ಯವಸ್ಥೆ ಬಂದಿದೆ. ಕಾರ್ಯಕರ್ತ ಟೇಕನ್‌ ಫಾರ್‌ ಗ್ರ್ಯಾಂಟೆಡ್‌ ಆಗಿದ್ದಾನೆ.

ಇದು ಉಡುಪಿಯ ಮಾಜಿ ಶಾಸಕ ಕೆ.ರಘುಪತಿ ಭಟ್‌ ನೋವಿನ ಮಾತು.  ವಿಧಾನಪರಿಷತ್‌ನ ನೈಋತ್ಯ ಪದವೀಧರ ಕ್ಷೇತ್ರಕ್ಕೆ ಬಿಜೆಪಿ ಟಿಕೆಟ್‌ ವಂಚಿತರಾಗಿರುವ ಭಟ್‌, ಪಕ್ಷದ ವಿರುದ್ಧವೇ ಬಂಡೆದ್ದು ಸ್ವತಂತ್ರ ಅಭ್ಯರ್ಥಿಯಾಗಿ ಕಣಕ್ಕಿಳಿಯುತ್ತಿದ್ದಾರೆ. ಉದಯವಾಣಿಯ ನೇರಾ ನೇರ ಅಂಕಣಕ್ಕೆ ಮಾತನಾಡಿದ್ದು, ಪೂರ್ಣಪಾಠ ಇಲ್ಲಿದೆ.

ವಿಧಾನಪರಿಷತ್‌ ಚುನಾವಣೆ ಇತರ ಚುನಾವಣೆಗಿಂತ ಭಿನ್ನ. ಹೇಗೆ ನಿಭಾಯಿಸುವಿರಿ?

ಶಾಸಕನಾಗಿದ್ದಾಗಲೂ ಶಿಕ್ಷಣ ಕ್ಷೇತ್ರದಲ್ಲಿ ಕೆಲಸ ಮಾಡಿರುವೆ. ನನ್ನ ಆಸಕ್ತಿಯ ವಿಷಯವೂ ಶಿಕ್ಷಣವೇ. ಮೊದಲ ಬಾರಿಗೆ ಶಾಸಕನಾದಾಗ 2004ರಲ್ಲಿ ಡಾ| ವಿ.ಎಸ್‌. ಆಚಾರ್ಯ ಅವರು ಶಿಕ್ಷಣ ಮತ್ತು ಆರೋಗ್ಯದ ಜತೆಗೆ ಮೂಲ ಸೌಕರ್ಯ, ಸಾಮಾಜಿಕ ನ್ಯಾಯ ಇತ್ಯಾದಿ ಆದ್ಯತೆಯ ವಿಷಯವಾಗಿರಬೇಕು ಎಂದಿದ್ದರು. ವಿಧಾನ ಪರಿಷತ್‌ ಚುನಾವಣೆಗೆ ಸ್ಪರ್ಧಿಸುವುದಷ್ಟೇ ಹೊಸತು. ಬಾಲಕೃಷ್ಣ ಭಟ್‌, ಡಾ| ಡಿ.ಎಚ್‌. ಶಂಕರ್‌ ಮೂರ್ತಿ, ಗಣೇಶ್‌ ಕಾರ್ಣಿಕ್‌ ಅವರ ಚುನಾ ವಣೆಯಲ್ಲಿ ಜಿಲ್ಲೆಯಲ್ಲಿ ಕೆಲಸ ಮಾಡಿರುವೆ. ಇದು ವಿದ್ಯಾವಂತರ ಚುನಾವಣೆ. ಪ್ರಬುದ್ಧ ಮತದಾರರು ಯೋಚನೆ ಮಾಡಿ ಮತ ಚಲಾಯಿಸುತ್ತಾರೆ. ಹೀಗಾಗಿ ನಾನು ಗೆಲ್ಲುತ್ತೇನೆ.

ವಿಧಾನಸಭೆ, ಲೋಕಸಭೆ ಚುನಾವಣೆಯಲ್ಲಿ ಹುದ್ದೆಯ ನಿರೀಕ್ಷೆಯಿಂದಲೇ ಕೆಲಸ ಮಾಡಿದಿರಾ?

ಕೆಲಸ ಮಾಡುವಾಗ ನಿರೀಕ್ಷೆ ಇರಲಿಲ್ಲ. ವಿಧಾನಸಭೆ ಚುನಾವಣೆಯಲ್ಲಿ ಟಿಕೆಟ್‌ ತಪ್ಪಿದಾಗ ಬೇಸರವಾಗಿತ್ತು. ಕಾರಣ ಪಕ್ಷದ ನಾಯಕರ ವರ್ತನೆ ಸರಿ ಇರಲಿಲ್ಲ. ವಿಧಾನಸಭೆ ಚುನಾವಣೆಯಲ್ಲಿ  ಸಾಮಾಜಿಕ ನ್ಯಾಯದ ಕಾರಣದಿಂದ ನನಗೆ ನನಗೂ ಅನ್ಯಾಯವಾಗಿತ್ತು ಎಂದುಕೊಂಡೆ. ಆಗ ಪಕ್ಷದ ಕಾರ್ಯಕರ್ತರೊಬ್ಬರಿಗೆ ಟಿಕೆಟ್‌ ಕೊಟ್ಟಿದ್ದರಿಂದ ಕೆಲಸ ಮಾಡಿದೆ. ಆದರೆ  ಈಗ ಹಾಗಲ್ಲ. ಕಾರ್ಯಕರ್ತರನ್ನು ಪರಿಗಣಿಸಿಲ್ಲ. ಹಿರಿತನವನ್ನು ಗೌರವಿಸಿಲ್ಲ. ಇತ್ತೀಚೆಗೆ ಪಕ್ಷ ಸೇರಿದವರಿಗೆ ಜಾತಿ ಆಧಾರದಲ್ಲಿ ಟಿಕೆಟ್‌ ನೀಡಿದ್ದು ಮನಸ್ಸಿಗೆ ನೋವಾಗಿದೆ. ಆದ್ದರಿಂದಲೇ ಬಂಡಾಯ ಸಾರಿದ್ದೇನೆ.

ಬಿಜೆಪಿ ವಿರುದ್ಧ ಬಂಡಾಯವೋ, ಸಂಘರ್ಷವೋ?

ಪಕ್ಷದ ವಿರುದ್ಧವಲ್ಲ.. ಪಕ್ಷದ ತಪ್ಪು ನಿರ್ಧಾರದಿಂದ ಕರಾವಳಿ, ಶಿವಮೊಗ್ಗ, ಚಿಕ್ಕಮಗಳೂರು ಸಹಿತ ಎಲ್ಲ ಭಾಗದಲ್ಲೂ ಕಾರ್ಯಕರ್ತರು ಆಕ್ರೋಶಿತರಾಗಿದ್ದಾರೆ. ಇದನ್ನು ಸಂಘರ್ಷದ ಚುನಾವಣೆಯಾಗಿ ಮಾಡಲಾರೆ. ಮತದಾರರಿಗೆ ಒಂದು ಪತ್ರ ಬರೆದು, ಕಾರ್ಯಕರ್ತರು, ಮತದಾರರನ್ನು ಕೇಂದ್ರವಾಗಿಸಿ ಬೂತ್‌ವಾರು ಸಂಪರ್ಕಿಸುವೆ.

ಹಾಗಾದರೆ ಯಾವ ಸಂದೇಶ ನೀಡುವ ಪ್ರಯತ್ನ?

ಪಕ್ಷದ ನಿರಂತರ ತಪ್ಪುಗಳನ್ನು ಎಚ್ಚರಿಸಬೇಕು. ಯಾರೋ ಒಂದು ಪಟ್ಟಿ ಕೊಟ್ಟ ತತ್‌ಕ್ಷಣ ಗೆಲ್ಲಿಸುತ್ತಾರೆ ಎಂಬುದು ಸರಿಯಲ್ಲ. ಮೂರು ಬಾರಿ ಶಾಸಕನಾಗಿ ಕೆಲಸ ಮಾಡಿದ ನನಗೆ ಇಂದು ರಾಷ್ಟ್ರೀಯ ಅಧ್ಯಕ್ಷರನ್ನು ಹೇಗೆ ಭೇಟಿಯಾಗಬೇಕು ಎಂಬುದೇ ತಿಳಿಯುತ್ತಿಲ್ಲ. ಪುತ್ತೂರಿನಲ್ಲಿ ಅರುಣ್‌ಕುಮಾರ್‌ ಪುತ್ತಿಲರಿಂದ ಸ್ಪಲ್ಪ ಮಟ್ಟಿನ ಅರಿವಾಗಿದೆ. ಗೆದ್ದ ಮೇಲೆ ಪಕ್ಷವು ನನ್ನನ್ನೂ ಗೌರವದಿಂದಲೇ ಸ್ವೀಕರಿಸಲಿದೆ. ಪಕ್ಷದ ವಿರುದ್ಧವೂ ಹೋಗುವುದಿಲ್ಲ. ಪಕ್ಷದೊಳಗಿನ ಆಂತರಿಕ ಲೋಪ ಸರಿಯಾಗಬೇಕಷ್ಟೇ.

ಈ ಮೂಲಕ ಕರಾವಳಿ ಪ್ರದೇಶದ ರಾಜಕೀಯಕ್ಕೆ ಸಂದೇಶ ನೀಡುವ ಉದ್ದೇಶವೇ?

ವಿಧಾನಸಭಾ ಚುನಾವಣೆಯಲ್ಲಿ ಜಿಲ್ಲೆಯಲ್ಲಿ 4 ಸ್ಥಾನ ಬದಲಾಯಿಸಿ ದ್ದಾಗಲೂ ಎಲ್ಲರೂ ಸೇರಿ ಐವರನ್ನೂ ಗೆಲ್ಲಿಸಿದೆವು. ಪುತ್ತೂರಿನಲ್ಲಿ ಬಂಡಾಯದಿಂದ ಬಿಜೆಪಿ ಸೋತಿತ್ತು. ಕಾರ್ಯಕರ್ತರನ್ನು “ಟೇಕ್‌ ಇಟ್‌ ಫಾರ್‌ ಗ್ರ್ಯಾಂಟೆಡ್‌’ ಎಂದು ಪರಿಗಣಿಸುವುದು ಒಳ್ಳೆಯದಲ್ಲ. ಸಂಘಟನಾತ್ಮಕವಾಗಿ ಬೆಳೆದು ಬಂದ ಜಿಲ್ಲೆಯಲ್ಲಿ ಮೇಲಿಂದ ಏನೇ ಹೇರಿದರೂ ನಡೆಯುತ್ತದೆ ಎಂಬ ಭಾವನೆ ಸಲ್ಲದು. ಇದು ಸರಿಯಾದ ಸಮಯ. ಬಿಜೆಪಿ ಕಾರ್ಯಕರ್ತರು ಸೇರಿಕೊಂಡು ಬಿಜೆಪಿ ವ್ಯಕ್ತಿಯನ್ನು ಗೆಲ್ಲಿಸುವ ಮೂಲಕ ಮೇಲಿನವರಿಗೆ ಸ್ಪಷ್ಟ ಸಂದೇಶ ನೀಡಲಿದ್ದೇವೆ.

ಆಗ ಈಶ್ವರಪ್ಪ, ಈಗ ನೀವು. ಇಬ್ಬರದ್ದೂ ಒಂದೇ ಸ್ಥಿತಿ, ಯಾಕೆ ಹೀಗೆ?

ಟಿಕೆಟ್‌ ಹಂಚಿಕೆ ಸಂದರ್ಭದಲ್ಲಿ ಪಕ್ಷದಲ್ಲಿ ಆಂತರಿಕವಾದ ಚರ್ಚೆ, ಜಿಲ್ಲಾಮಟ್ಟದಲ್ಲಿ ಪರಿವಾರದವರು ಕುಳಿತು ಮಾತನಾಡುವ ಪದ್ಧತಿ ಇತ್ತು. ಈಗ ಆ ಚರ್ಚೆಯೇ ಇಲ್ಲ. ಕಾರ್ಯಕರ್ತರನ್ನು, ಸ್ಥಳೀಯ ನಾಯಕರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವ ಪ್ರಕ್ರಿಯೆ ಬಿಜೆಪಿಯಲ್ಲಿ ನಿಂತಿದೆ. ಇದು ಸರಿಯಲ್ಲ ಎಂಬುದನ್ನು ಕೇಂದ್ರದವರಿಗೆ ತಿಳಿಸಲು ಸ್ಪರ್ಧಿಸುತ್ತಿರುವೆ.

ಬಿಜೆಪಿಯಲ್ಲಿ ನಿಷ್ಠಾವಂತರಿಗೆ ಬೆಲೆ ಇಲ್ಲ ಎಂದೆನಿಸುತ್ತಿದೆಯೇ?

ನನ್ನ ಸ್ಪರ್ಧೆಯ ಉದ್ದೇಶವೇ ಇದು. ಪಕ್ಷ, ಹಿಂದುತ್ವದ ಪರವಾಗಿ ಇರುವವರಿಗೆ ಮನ್ನಣೆ ಇಲ್ಲ ಎನ್ನುವ ಪರಿಸ್ಥಿತಿ ಆಭ್ಯರ್ಥಿ ಆಯ್ಕೆಯಲ್ಲಿ ಕಂಡು ಬರುತ್ತಿದೆ. ಇತ್ತೀಚಿನ ಚುನಾವಣೆಗಳಲ್ಲಿ ಇದು ಸ್ಪಷ್ಟ. ಶಿವಮೊಗ್ಗದಲ್ಲಿ ನಮ್ಮ ಕಾರ್ಯಕರ್ತ ಹರ್ಷನ  ಕೊಲೆಯಾದಾಗ ಕಮ್ಯೂನಿಸ್ಟರ ಜತೆ ಸೇರಿ ಶಾಂತಿಗಾಗಿ ಯಾತ್ರೆ ಮಾಡಿದವರು ಬಿಜೆಪಿಗೆ ಬಂದು ಅಭ್ಯರ್ಥಿಯಾಗಿದ್ದಾರೆ. ಇದು ಹಿರಿಯ ಕಾರ್ಯಕರ್ತರ ಅವಗಣನೆ ಅಲ್ಲವೇ?

ಬಿಜೆಪಿ ನಾಯಕತ್ವ ಬದಲಾಗಬೇಕೇ?

ಈಗ ಇರುವ ನಾಯಕರಿಗಿಂತ ಕಾರ್ಯಪದ್ಧತಿ ಬದಲಾಗಬೇಕು. ಹಿಂದೆ ಅಭ್ಯರ್ಥಿ ಆಯ್ಕೆಗೆ ಬೂತ್‌ಗಳಿಂದ ಹಿಡಿದು ತಳಮಟ್ಟದಿಂದ ಅಭಿಪ್ರಾಯ ಸಂಗ್ರಹಿಸಿ ರಾಜ್ಯಕ್ಕೆ ಕಳುಹಿಸುತ್ತಿದ್ದೆವು. ಈಗ ಅದಾವ ಪದ್ಧತಿಯೂ ಇಲ್ಲ. ಎಲ್ಲವೂ ಮೇಲಿಂದ ಬರುತ್ತದೆ ಎನ್ನುವ ಹೈಕಮಾಂಡ್‌ ಸಂಸ್ಕೃತಿ ಒಳ್ಳೆಯದಲ್ಲ. ಹಿಂದಿನ ಪದ್ಧತಿಯೇ ಬರಬೇಕು.

ರಾಜಕೀಯ ಅಧಿಕಾರಕ್ಕಾಗಿ ವರ್ಷದಿಂದಲೇ ವೇದಿಕೆ ಸಿದ್ಧಪಡಿಸಿಕೊಂಡಿದ್ದೀರಾ? ಈ ಬಂಡಾಯ ಪಕ್ಷ ಅಥವಾ ವ್ಯಕ್ತಿ ವಿರುದ್ಧ? ಪಕ್ಷದ ನಾಯಕರ ಮನವೊಲಿಕೆ ಫ‌ಲಿಸದೇ?

ರಾಜಕೀಯವಾಗಿ ಸಕ್ರಿಯವಾಗಿದ್ದ ನನಗೆ ಖಾಲಿಯಾಗಿ ಕುಳಿತುಕೊಳ್ಳ ಲಾಗದು. ಕೆಲಸ ಮಾಡುವ ಹುಮ್ಮಸ್ಸಿತ್ತು. ರಾಜ್ಯ ನಾಯಕರ ಭರವಸೆ ಆಧರಿಸಿ ಕಾರ್ಯಾರಂಭ ಮಾಡಿದೆ. ನೋಡಿ, ನಾಯಕರ, ಹೈಕಮಾಂಡ್‌ ಆಧಾರಿತ ರಾಜಕಾರಣ ಒಳ್ಳೆಯದಲ್ಲ. ಗಾಡ್‌ಫಾದರ್‌ ಇರುವ ವರಿಗೆ, ಚಮಚಾಗಿರಿ ಮಾಡುವವರಿಗೆ ಟಿಕೆಟ್‌ ಸಿಗುವಂತಾಗಿದೆ. ಇದರ ಬದಲು ಕಾರ್ಯಕರ್ತರಿಗೆ ಅವಕಾಶ ಸಿಗಬೇಕು, ಅವರ ಆಧಾರಿತ ರಾಜಕಾರಣ ಬರಲೆಂದೇ ಈ ಬಂಡಾಯ. ಇನ್ನು ಸುನಿಲ್‌ ಕುಮಾರ್‌ ಮತ್ತಿತರರು ಮನವೊಲಿಸಲು ಬಂದಿದ್ದರು. ಶಕ್ತಿ ಬಳಸಿ ಟಿಕೆಟ್‌ ಕೊಡುವಂತೆ ಕೇಳಿರುವೆ. ಪಕ್ಷದ ಕೆಲವು ಆಂತರಿಕ ವಿಷಯದ ಬಗ್ಗೆಯೂ ತಿಳಿಸಿರುವೆ.

ಅಧಿಕಾರ ಅನುಭವಿಸಿದ ನೀವು ಹೊಸಬರಿಗೆ ಅವಕಾಶ ನೀಡಬೇಕಲ್ಲವೇ?

ಹೊಸಬರಿಗೆ ಅವ‌ಕಾಶ ನೀಡಲಿ. ಹಾಗೆಂದು ನಿನ್ನೆ ಮೊನ್ನೆ ಪಕ್ಷಕ್ಕೆ ಬಂದವರಿಗಲ್ಲ. ಕನಿಷ್ಠ 10 ವರ್ಷಗಳಿಂದ ಕೆಲಸ ಮಾಡುತ್ತಿರುವವರಿಗೆ ಅವಕಾಶ ನೀಡಿದರೆ ಈಗಲೂ ಸ್ಪರ್ಧೆಯಿಂದ ಹಿಂದೆ ಸರಿಯುವೆ.

ಆರೆಸ್ಸೆಸ್‌ ನಾಯಕರು, ಪರಿವಾರದ ಮುಖಂಡರು ನಿಮ್ಮ ನಿರ್ಧಾರ ಒಪ್ಪುವರೆ?

ನನ್ನ ನುಡಿ, ನಡೆ ಸ್ಪಯಂ ಸೇವಕನಿಗೆ ತಕ್ಕನಾಗಿದೆ. ಮುಂದೆಯೂ ಹಿಂದುತ್ವಕ್ಕಾಗಿ ಕೆಲಸ ಮುಂದುವರಿಸುವೆ. ಅವರು ಹೇಗೆ ಅದನ್ನು ಸ್ವೀಕರಿಸುತ್ತಾರೋ ಗೊತ್ತಿಲ್ಲ.

ಅವಕಾಶ ಸಿಕ್ಕಾಗ ಎಲ್ಲವೂ ಚೆನ್ನಾಗಿದೆ, ಅವಕಾಶ ಸಿಗದಾಗ ಬಂಡಾಯವಲ್ಲವೇ?

ರಾಜಕೀಯವೇ ಹಾಗೆ.  ಟಿಕೆಟ್‌ ಸಿಗದೇ ಇದ್ದಾಗ ನೋವು ಸಹಜ. ಪಕ್ಷದ ಹಿರಿಯರಿಗೆ ಅವಕಾಶ ಸಿಕ್ಕಾಗ ಬೇಸರ ಇರದು. ಈಗಿನ ಸಂದರ್ಭ ಹಾಗಲ್ಲ. ಹಾಗಾಗಿ ನನ್ನ ನಿರ್ಧಾರವೂ ಗಡಿಬಿಡಿಯದ್ದಲ್ಲ.

ಹಾಗಾದರೆ ರಾಜಕೀಯ ಅಧಿಕಾರ ಶಾಶ್ವತವೇ?

ಖಂಡಿತಾ ಇಲ್ಲ. ಜನ ತಿರಸ್ಕರಿಸುವವರೆಗೂ ಖಂಡಿತಾ ಸ್ಪರ್ಧಿಸಬಹುದು. 2013 ಹಾಗೂ 2023ರಲ್ಲಿ ನನಗೆ ಟಿಕೆಟ್‌ ತಪ್ಪಿದಾಗಲೂ ಪಕ್ಷದ ಅಭ್ಯರ್ಥಿ ಪರ ಕೆಲಸ ಮಾಡಿರುವೆ. ಈಗ ಮತದಾರರೇ ನಿರ್ಧರಿಸಲಿದ್ದಾರೆ.

ನಿಮಗೆ ಟಿಕೆಟ್‌ ಭರವಸೆ ನೀಡಿದವರು ಯಾರು? ತಪ್ಪಿಸಿದ್ದು ಯಾರು?

ನೈಋತ್ಯ ಪದವೀಧರ ಕ್ಷೇತ್ರದ ಹಿಂದಿನ ಶಾಸಕರಾಗಿದ್ದ  ಆಯನೂರು ಮಂಜುನಾಥ್‌ ಅವರು ಪಕ್ಷ ಬಿಟ್ಟಾಗ ಆ ಸ್ಥಾನದ ಅಪೇಕ್ಷೆ ವ್ಯಕ್ತಪಡಿಸಿದ್ದೆ. ರಾಜ್ಯ ನಾಯಕರು ಒಪ್ಪಿದ್ದರು. ಟಿಕೆಟ್‌ ಹಂಚಿಕೆಯ ದಿನ ಕೊನೆಯ ಕ್ಷಣದಲ್ಲಿ ಹೆಸರು ಕೈಬಿಡಲಾಯಿತು. ಅಂದಿನ ರಾಜ್ಯಾಧ್ಯಕ್ಷರು, ಮಾಜಿ ಮುಖ್ಯಮಂತ್ರಿ, ಮಾಜಿ ಸಚಿವರು ಒಪ್ಪಿದ್ದರೂ ಟಿಕೆಟ್‌ ಸಿಗಲಿಲ್ಲ. ಜತೆಗೆ ನನ್ನ ಹಣೆಬರಹದಲ್ಲಿ ಈ ಬಾರಿ ಪಕ್ಷೇತರನಾಗಿ ವಿಧಾನಪರಿಷತ್‌ ಸದಸ್ಯನಾಗುವ ಯೋಗ ಇರಲೂಬಹುದು. ನನ್ನ ಪರ ಇರುವ ಕಾರ್ಯಕರ್ತರೇ ನನ್ನ ಕಾರ್ಯಪಡೆ. ಕರಾವಳಿಯ ಎರಡು ಜಿಲ್ಲೆಯಲ್ಲೂ 38 ಸಾವಿರ ನೋಂದಣಿಯಾಗಿದೆ. ಶಿವಮೊಗ್ಗ ನಗರದ ಲಿಂಗಾಯತ ಸಮುದಾಯದ ಮೂವರ ಸ್ಪರ್ಧೆಯಿಂದ ನನ್ನ ಗೆಲುವು ಸುಲಭ.

 ರಾಜು ಖಾರ್ವಿ ಕೊಡೇರಿ

ಟಾಪ್ ನ್ಯೂಸ್

1-hhh-shi

Havyaka Sammelana; ಅಡಿಕೆ ಬೆಳೆಗಾರರ ಹಿತ ಕಾಯಲು ಕೇಂದ್ರ ಬದ್ಧ: ಶೋಭಾ ಕರಂದ್ಲಾಜೆ

1gavli

Yakshagana;ಅಧ್ಯಯನ, ಪಾತ್ರ ಜ್ಞಾನದಿಂದಷ್ಟೇ ಕಲಾವಿದ ರಂಗಸ್ಥಳದಲ್ಲಿ ಮೆರೆಯಲು ಸಾಧ್ಯ

police crime

Drugs; ಮಾರಾಟ, ಸೇವನೆ : ಮಂಗಳೂರು 1,090, ಉಡುಪಿ 116 ಪ್ರಕರಣ ದಾಖಲು

PM Modi

PM Care Fund:ಈ ವರ್ಷ ದೇಣಿಗೆ ಕುಸಿತ

Memorial Space: ಡಾ.ಸಿಂಗ್‌ರ ಸ್ಮಾರಕ ನಿರ್ಮಾಣ ಮಾಡಲು ಕೇಂದ್ರ ಸರ್ಕಾರ ಸಮ್ಮತಿ

Memorial Space: ಡಾ.ಸಿಂಗ್‌ರ ಸ್ಮಾರಕ ನಿರ್ಮಾಣ ಮಾಡಲು ಕೇಂದ್ರ ಸರ್ಕಾರ ಸಮ್ಮತಿ

ದಿಲ್ಲೀಲಿ ಚಳಿಗಾಲದಲ್ಲೇ ದಾಖಲೆ 4 ಸೆ.ಮೀ. ಮಳೆ: 101 ವರ್ಷದಲ್ಲೇ ಮೊದಲು

ದಿಲ್ಲೀಲಿ ಚಳಿಗಾಲದಲ್ಲೇ ದಾಖಲೆ 4 ಸೆ.ಮೀ. ಮಳೆ: 101 ವರ್ಷದಲ್ಲೇ ಮೊದಲು

Putin Apologizes: ಅಜರ್‌ಬೈಜಾನ್‌ ವಿಮಾನ ದುರಂತ… ಕ್ಷಮೆಯಾಚಿಸಿದ ರಷ್ಯಾ ಅಧ್ಯಕ್ಷ !

Putin Apologizes: ಅಜರ್‌ಬೈಜಾನ್‌ ವಿಮಾನ ದುರಂತ… ಕ್ಷಮೆಯಾಚಿಸಿದ ರಷ್ಯಾ ಅಧ್ಯಕ್ಷ !


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

police crime

Drugs; ಮಾರಾಟ, ಸೇವನೆ : ಮಂಗಳೂರು 1,090, ಉಡುಪಿ 116 ಪ್ರಕರಣ ದಾಖಲು

1-can

Udupi; ಕ್ಯಾನ್ಸರ್‌ನಿಂದ ಬಳಲುತ್ತಿದ್ದ ರೋಗಿಯ ರಕ್ಷಣೆ

5

Udupi: ತಂಡಗಳ ನಡುವೆ ಹಲ್ಲೆ; ಪ್ರಕರಣ ದಾಖಲು

4

Malpe: ನಾಪತ್ತೆಯಾಗಿದ್ದ ಮೀನುಗಾರನ ಮೃತದೇಹ ಪತ್ತೆ

14

Padubidri: ವೃದ್ಧ ದಂಪತಿಗೆ ಸುರಕ್ಷಿತ ಕಾಲು ಸಂಕದ ಭರವಸೆ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

1-hhh-shi

Havyaka Sammelana; ಅಡಿಕೆ ಬೆಳೆಗಾರರ ಹಿತ ಕಾಯಲು ಕೇಂದ್ರ ಬದ್ಧ: ಶೋಭಾ ಕರಂದ್ಲಾಜೆ

1-ravi

Havyaka ಭಾಷೆಗೆ ಅಕಾಡೆಮಿ ಅಥವಾ ಅಧ್ಯಯನ ಪೀಠ ಅಗತ್ಯ: ರವಿಶಂಕರ್‌ ಭಟ್‌

aane

Ramnagar; 30ಕ್ಕೂ ಅಧಿಕ ಊರುಗಳಲ್ಲಿ ಆತಂಕ ಹುಟ್ಟಿಸಿದ್ದ ಕಾಡಾನೆ ಸೆರೆ

1gavli

Yakshagana;ಅಧ್ಯಯನ, ಪಾತ್ರ ಜ್ಞಾನದಿಂದಷ್ಟೇ ಕಲಾವಿದ ರಂಗಸ್ಥಳದಲ್ಲಿ ಮೆರೆಯಲು ಸಾಧ್ಯ

police crime

Drugs; ಮಾರಾಟ, ಸೇವನೆ : ಮಂಗಳೂರು 1,090, ಉಡುಪಿ 116 ಪ್ರಕರಣ ದಾಖಲು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.