ಸಂತ್ರಸ್ತರಿಗೆ ಪೌರತ್ವ ಕೊಡುವುದು ಒಳ್ಳೆಯ ವಿಚಾರ
Team Udayavani, Dec 17, 2019, 6:15 AM IST
ಯಾರು ದಶಕಗಳಿಂದ ಇಲ್ಲಿಯೇ ಇದ್ದಾರೋ ಅವರನ್ನು ಮಾನವೀಯತೆಯ ಆಧಾರದ ಮೇಲೆ ಸ್ವೀಕರಿಸಬೇಕಿದೆ. ಆದರೆ ಸರ್ಕಾರ ಈ ವಿಚಾರದಲ್ಲಿ ಎಚ್ಚರಿಕೆಯನ್ನೂ ವಹಿಸಬೇಕಾಗುತ್ತದೆ. ಹೊಸ ವಲಸಿಗರನ್ನು ಬಿಟ್ಟುಕೊಳ್ಳಬಾರದು. ಮುಂದೆ ಮತ್ತಷ್ಟು ಬಾಂಗ್ಲಾದೇಶಿಯರು ಭಾರತಕ್ಕೆ ಬರದಂತೆ ಬಿಎಸ್‌ಎಫ್(ಗಡಿ ಭದ್ರತಾ ಪಡೆ) ಎಚ್ಚರಿಕೆ ವಹಿಸಬೇಕು.
ಭಾರತದಲ್ಲಿ ಜಾರಿಯಾಗಿರುವ ಪೌರತ್ವ ತಿದ್ದುಪಡಿ ಕಾನೂನಿನ ಬಗ್ಗೆ ನಿಮ್ಮ ಅಭಿಪ್ರಾಯವೇನು?
ನನ್ನ ಪ್ರಕಾರ ಅತ್ಯಾಚಾರ, ಹಿಂಸೆಗೆ ತುತ್ತಾಗಿರುವ ಜನರಿಗೆ ಭಾರತವು ಪೌರತ್ವ ಕೊಡುವುದು ಒಳ್ಳೆಯ ವಿಚಾರ. ಹಿಂದೂಗಳು, ಬೌದ್ಧರು, ಕ್ರಿಶ್ಚಿಯನ್ನರು ಮತ್ತು ಪಾರ್ಸಿ ಸಮುದಾಯದ ಸಂತ್ರಸ್ತರಿಗೆ ಇದರಿಂದ ನೆಮ್ಮದಿ ಸಿಗುತ್ತದೆ. ಆದರೆ ಪಾಕ್, ಬಾಂಗ್ಲಾದೇಶ ಮತ್ತು ಆಫ್ಘಾನಿಸ್ಥಾನಗಳಲ್ಲಿನ ನಾಸ್ತಿಕರು, ಸ್ವತಂತ್ರ ಚಿಂತಕರು, ಧರ್ಮ ನಿರಪೇಕ್ಷ ಜನರು, ಮಾನವತಾವಾದಿಗಳು ಮತ್ತು ಸುಧಾರಣಾವಾದಿಗಳೂ ಅಪಾಯದಲ್ಲಿದ್ದಾರೆ. ಇವರೆಲ್ಲ ಕಟ್ಟರ್‌ಪಂಥಿಗಳು ಮತ್ತು ಉಗ್ರವಾದಿಗಳಿಗೆ ಬಲಿಯಾಗುತ್ತಿದ್ದಾರೆ. ಬಾಂಗ್ಲಾದೇಶದಲ್ಲಿ ಅದೆಷ್ಟೋ ನಾಸ್ತಿಕ ಬರಹಗಾರರನ್ನು (ಮುಸ್ಲಿಂ ಕುಟುಂಬಗಳಿಗೆ ಸೇರಿದ ) ಹತ್ಯೆ ಮಾಡಲಾಗಿದೆ. ಅನೇಕರಂತೂ ಇದಕ್ಕೆಲ್ಲ ಹೆದರಿ ಐರೋಪ್ಯ ರಾಷ್ಟ್ರಗಳು ಮತ್ತು ಅಮೆರಿಕದತ್ತ ಮುಖ ಮಾಡಿದ್ದಾರೆ. ಭಾರತವು ಜಾತ್ಯತೀತ ರಾಷ್ಟ್ರವಾಗಿರುವ ಕಾರಣ, ಹಿಂಸಾಚಾರಕ್ಕೆ ತುತ್ತಾಗಿರುವ ಈ ಮುಸಲ್ಮಾನರಿಗೂ ತನ್ನ ನೆಲದಲ್ಲಿ ಜಾಗ ಒದಗಿಸಬಹುದು. ಏಕೆಂದರೆ ಅವರೆಲ್ಲ ತಮ್ಮ ದೇಶಗಳಲ್ಲಿ ಧರ್ಮ ನಿರಪೇಕ್ಷತೆಯನ್ನು ತರಲು ಪ್ರಯತ್ನಿಸಿದವರು.
ಆದರೆ ಈ ಕಾನೂನು ವಿಭಜನಕಾರಿ ಮತ್ತು ಅಸಾಂವಿಧಾನಿಕವಾಗಿದೆ, ಏಕೆಂದರೆ, ಇದು ಧರ್ಮದ ಆಧಾರದಲ್ಲಿ ಭೇದಭಾವ ಮಾಡುತ್ತದೆ ಎನ್ನುತ್ತವಲ್ಲ ವಿಪಕ್ಷಗಳು?
ಭಾರತೀಯ ಮುಸಲ್ಮಾನರು ಭಾರತದಲ್ಲಿಯೇ ಇರುತ್ತಾರೆ. ಈ ಕಾನೂನು ಕೇವಲ ಅಕ್ರಮ ವಲಸಿಗರಿಗೆ ಸಂಬಂಧಿಸಿದ ವಿಷಯ. ಇಂಥ ವಲಸಿಗರಿಗೂ ಒಂದು ಮಿತಿ ಇರಬೇಕು, ಆ ಮಿತಿಯನ್ನು ಸರಕಾರ ನಿರ್ಧರಿಸಬೇಕಾಗುತ್ತದೆ. ಸತ್ಯವೇನೆಂದರೆ, ಭಾರತದ ನೆರೆಯ ರಾಷ್ಟ್ರಗಳು ಬಡತನದಿಂದ ಕೂಡಿವೆ. ಉದಾಹರಣೆಗೆ, ಬಾಂಗ್ಲಾದೇಶ. ಅನೇಕ ಮುಸಲ್ಮಾನರು ಬಡತನದ ಕಾರಣದಿಂದಾಗಿ ಬಾಂಗ್ಲಾದೇಶ ತೊರೆದು, ಉತ್ತಮ ಬದುಕನ್ನು ಅರಸಿ ಈ ರೀತಿ ಅಕ್ರಮವಾಗಿ ಭಾರತದೊಳಗೆ ನುಸುಳುತ್ತಾರೆ. ಇದು ಮಾನವ ಸಹಜ ಗುಣ. ನಮ್ಮ ಪೂರ್ವಜರೂ ಈ ಕಾರಣಕ್ಕಾಗಿಯೇ ಒಂದು ಪ್ರದೇಶದಿಂದ ಇನ್ನೊಂದುಪ್ರದೇಶಕ್ಕೆ ವಲಸೆ ಹೋಗುತ್ತಿದ್ದರು. ಉತ್ತಮ ಜೀವನವನ್ನು ಅರಸಿ ಭಾರತೀಯರು ಯೂರೋಪ್, ಅಮೆರಿಕ, ಮಧ್ಯಪ್ರಾಚ್ಯದ ಇಸ್ಲಾಮಿಕ್ ದೇಶಗಳಿಗೆ ಹೋಗುತ್ತಾರೆ. ಭಾರತದಲ್ಲಷ್ಟೇ ಅಲ್ಲದೆ, ಆಫ್ರಿಕಾದ ಬಡ ರಾಷ್ಟ್ರಗಳ ಜನರೂ ಈ ರೀತಿ ಉತ್ತಮ ಜೀವನವನ್ನು ಅರಸಿ ವಲಸೆ ಹೋಗುತ್ತಾರೆ. ಇನ್ನು ಸುರಕ್ಷತೆಯ ದೃಷ್ಟಿಯಿಂದಲೂ ಜನರು ವಲಸೆ ಹೋಗುವುದುಂಟು. ಅನೇಕ ಬಾರಿ ಭಾರತೀಯರೂ ಯೂರೋಪ್ ಮತ್ತು ಅಮೆರಿಕದಲ್ಲಿ ಅಕ್ರಮ ವಲಸಿಗರಾಗಿರುತ್ತಾರೆ. ಆದರೆ ಆ ದೇಶಗಳು ಈ ರೀತಿಯ ವಲಸಿಗರನ್ನು ಯಾವಾಗಲೂ ಗಡಿಪಾರು ಮಾಡುವುದಿಲ್ಲ. ಕೆಲ ವರ್ಷ ಇರಲು ಬಿಟ್ಟ ನಂತರ, ಅವರಿಗೆ ನಾಗರಿಕತೆ ಸಿಗುವಂತೆ ಮಾಡುತ್ತವೆ.ನಾನು ಓದಿದ ಕೆಲವು ವರದಿಗಳ ಪ್ರಕಾರ, ಬಾಂಗ್ಲಾದೇಶದಿಂದ ಭಾರತಕ್ಕೆ ಬಂದಿದ್ದ ಅನೇಕರು ಈಗ ಹಿಂದಿರುಗಲಾರಂಭಿಸಿದ್ದಾರಂತೆ. ಎನ್‌ಆರ್‌ಸಿ ಮತ್ತು ಸಿಎಬಿ(ಪೌರತ್ವ ತಿದ್ದುಪಡಿ)ಗೆ ಹೆದರಿ ಸಾವಿರಾರು ಬಾಂಗ್ಲಾದೇಶಿಮುಸಲ್ಮಾನರು ವಾಪಸ್ ಹೊರಟಿದ್ದಾರೆ. ಬಾಂಗ್ಲಾದೇಶ ಸರಕಾರವು ವಾಪಸ್ ಬಂದ ಇವರಿಗೆಲ್ಲ ಉತ್ತಮ ಅವಕಾಶಗಳನ್ನು ನೀಡಬೇಕು. ಈ ರೀತಿಯ ಜನರು ನಿರುದ್ಯೋಗಿಗಳಾಗಿರುತ್ತಾರೆ. ಅವರಿಗೆಲ್ಲ ಉದ್ಯೋಗ ಒದಗಿಸಬೇಕು. ಇನ್ನೊಂದೆಡೆ ಬಹಳ ವರ್ಷಗಳ ಹಿಂದೆಯೇ ಬಾಂಗ್ಲಾದೇಶವನ್ನು ತೊರೆದು ಭಾರತದಲ್ಲಿ ನೆಲೆಸಿರುವ ಬಂಗ್ಲಾ ಹಿಂದೂಗಳು ಮತ್ತು ಮುಸಲ್ಮಾನರು ಇದ್ದಾರೆ. ಅವರಿಗೆ ಭಾರತದಲ್ಲೇ ಇರಲು ಬಿಡಬೇಕು. ಏಕೆಂದರೆ, ಅವರಿಗೆ ತಮ್ಮ ದೇಶದಲ್ಲಿ ಏನೂ ಉಳಿದಿಲ್ಲ. ಯಾರು ದಶಕಗಳಿಂದ ಇಲ್ಲಿಯೇ ಇದ್ದಾರೋ ಅವರನ್ನು ಮಾನವೀಯತೆಯ ಆಧಾರದ ಮೇಲೆ ಸ್ವೀಕರಿಸಬೇಕಿದೆ. ಆದರೆ ಸರಕಾರ ಈ ವಿಚಾರದಲ್ಲಿ ಎಚ್ಚರಿಕೆಯನ್ನೂ ವಹಿಸಬೇಕಾಗುತ್ತದೆ. ಹೊಸ ವಲಸಿಗರನ್ನು ಬಿಟ್ಟುಕೊಳ್ಳಬಾರದು. ಮುಂದೆ ಮತ್ತಷ್ಟು ಬಾಂಗ್ಲಾದೇಶಿಯರು ಭಾರತಕ್ಕೆ ಬರದಂತೆ ಬಿಎಸ್‌ಎಫ್(ಗಡಿ ಭದ್ರತಾ ಪಡೆ) ಎಚ್ಚರಿಕೆವಹಿಸಬೇಕು.
ಅಫ್ಘಾನಿಸ್ಥಾನ, ಪಾಕಿಸ್ಥಾನ ಮತ್ತು ಬಾಂಗ್ಲಾದೇಶಗಳಲ್ಲಿನ ಅಲ್ಪಸಂಖ್ಯಾತರು (ಮುಸ್ಲಿಮೇತರರು) ಹಿಂಸಾಚಾರವನ್ನು ಎದುರಿಸುತ್ತಿದ್ದಾರೆ ಎಂದು ಭಾರತ ಸರಕಾರ ಕಾನೂನು ತರುವಾಗ ಹೇಳಿತು. ಆದರೆ ಬಾಂಗ್ಲಾದೇಶದ ವಿದೇಶಾಂಗ ಸಚಿವ ಅಬ್ದುಲ್ ಮೊಮೀನ್, ಬಾಂಗ್ಲಾದೇಶದಲ್ಲಿ ಕೋಮು ಸೌಹಾರ್ದ ಚೆನ್ನಾಗಿದೆ ಎಂದು ಹೇಳುತ್ತಿದ್ದಾರೆ. ನಿಜಕ್ಕೂ ಬಾಂಗ್ಲಾದೇಶದಲ್ಲಿ ಅಲ್ಪಸಂಖ್ಯಾತರಿಗೆ ಅಪಾಯವಿಲ್ಲ ಎಂದು ನಿಮಗೆ ಅನ್ನಿಸುತ್ತದಾ?ಬಾಂಗ್ಲಾದೇಶದಲ್ಲಿ ಹಿಂದೂಗಳ ವಿರುದ್ಧ ಯಾವುದೇ ದೌರ್ಜನ್ಯ ನಡೆಯುತ್ತಿಲ್ಲ ಎಂದು ಬಾಂಗ್ಲಾ ಸರಕಾರ ಹೇಳುತ್ತದೆ ಎಂದಾದರೆ, ಅದು ಖಂಡಿತ ತಪ್ಪು. ಹಾಗೆಂದು, ಬಾಂಗ್ಲಾದೇಶದ ಸರಕಾರವೇ ಅಲ್ಪಸಂಖ್ಯಾತರಿಗೆ ಅಥವಾ ಹಿಂದೂಗಳಿಗೆ ಕಿರುಕುಳ ನೀಡುತ್ತಿದೆ ಎಂದಲ್ಲ. ಇದೆಲ್ಲ ಅಲ್ಲಿನ ಮುಸ್ಲಿಂ ಮೂಲಭೂತವಾದಿಗಳ ಕೆಲಸ. ಬಾಂಗ್ಲಾದೇಶದಲ್ಲಿ ದುರ್ಗಾ ಪೂಜೆ ಅಥವಾ ಸಾರ್ವತ್ರಿಕ ಚುನಾವಣೆಯ ಸಮಯದಲ್ಲಿ ಅಲ್ಲಿನ ಮುಸ್ಲಿಮರು ಹಿಂದೂಗಳ ಮೇಲೆ ದಾಳಿ ಮಾಡುತ್ತಾರೆ. ಹಿಂದೂಗಳು ಭಯದಿಂದ ಓಡಿಹೋದರೆ, ಅವರ ಆಸ್ತಿಯನ್ನು ವಶಪಡಿಸಿಕೊಳ್ಳಬಹುದು ಎಂಬ ಉದ್ದೇಶದಿಂದ ಹೀಗೆ ಮಾಡುತ್ತಿದ್ದಾರೆ. ನಾನು ಲಜ್ಜಾ ಕಾದಂಬರಿಯಲ್ಲಿ ಈ ಬಗ್ಗೆ ಬರೆದಿದ್ದೇನೆ. ಇಂಥ ಕಾರಣಗಳಿಂದಾಗಿ ಅನೇಕ ಹಿಂದೂಗಳು ಬಾಂಗ್ಲಾದೇಶವನ್ನು ತೊರೆಯಬೇಕಾಯಿತು. ಆದಾಗ್ಯೂ ಎಲ್ಲಾ ಹಿಂದೂಗಳ ಮೇಲೆ ಹಲ್ಲೆಯೇನೂ ಆಗಿರಲಿಲ್ಲವಾದರೂ ಅವರು ಭಯಭೀತರಾದರು. ಶ್ರೀಮಂತ ಹಿಂದೂಗಳು ಯುರೋಪ್ ಮತ್ತು ಅಮೆರಿಕಕ್ಕೆ ತೆರಳಿದರು. ಬಡ ಹಿಂದೂಗಳು ಭಾರತಕ್ಕೆ ವಲಸೆ ಬಂದರು.ಗಮನಿಸಬೇಕಾದ ಮತ್ತೂಂದು ಸಂಗತಿಯೆಂದರೆ, ಬಾಂಗ್ಲಾದೇಶದಲ್ಲಿ ಉತ್ತಮ ಸ್ಥಿತಿಯಲ್ಲಿರುವ ಹಿಂದೂಗಳೂ ತುಂಬಾ ಇದ್ದಾರೆ.
ಅಲ್ಲಿನ ಮುಖ್ಯ ನ್ಯಾಯಮೂರ್ತಿಗಳು ಹಿಂದೂ ಆಗಿದ್ದರು, ಅಲ್ಲಿ ಅನೇಕ ಹಿಂದೂ ರಾಜಕಾರಣಿಗಳಿದ್ದಾರೆ, ವಿಜ್ಞಾನಿಗಳಿದ್ದಾರೆ, ಅಲ್ಲದೇ ವಿಭಿನ್ನ ಕ್ಷೇತ್ರಗಳಲ್ಲೂ ಹಿಂದೂಗಳು ಉತ್ತಮ ಸ್ಥಾನದಲ್ಲಿದ್ದಾರೆ. ನನಗನ್ನಿಸುವ ಪ್ರಕಾರ, ಇಂಥ ಹಿಂದೂಗಳು ಬಾಂಗ್ಲಾದೇಶವನ್ನು ತೊರೆಯಲು ಬಯಸುವುದಿಲ್ಲ. ಏಕೆಂದರೆ, ಅವರೆಲ್ಲ ಉನ್ನತ ಸ್ಥಾನಗಳಲ್ಲಿ ಇರುವವರು, ಸಿರಿವಂತರು.
ಇನ್ನೊಂದೆಡೆ, ಬಡ ಹಿಂದೂಗಳಿದ್ದಾರಲ್ಲ, ಅವರೇ ಈ ರೀತಿಯ ಹಿಂಸೆಗೆ ಹೆಚ್ಚಾಗಿ ಗುರಿಯಾಗುವವರು.
ಪೌರತ್ವ ತಿದ್ದುಪಡಿ ಕಾನೂನಿನಿಂದಾಗಿ ನೆರೆ ರಾಷ್ಟ್ರಗಳಲ್ಲಿನ ಅಲ್ಪಸಂಖ್ಯಾತರ ಮೇಲೆ, ಅದರಲ್ಲೂ ಹಿಂದೂಗಳ ಮೇಲೆ ದೌರ್ಜನ್ಯ ಮತ್ತಷ್ಟು ಹೆಚ್ಚಾಗಬಹುದು ಎನ್ನಲಾಗುತ್ತಿದೆ. “ನಿಮಗಾಗಿಯೇ ಭಾರತದಲ್ಲಿ ಕಾನೂನು ಬಂದಿದೆ, ನೀವು ಅಲ್ಲಿಗೇ ಹೋಗಿ’ ಎಂದು ಅವರ ಮೇಲೆ ದೌರ್ಜನ್ಯ ಹೆಚ್ಚಾಗಬಹುದಲ್ಲವೇ?
ಸಂತ್ರಸ್ತ ಹಿಂದೂಗಳಿಗೆ ಈ ಕಾನೂನು ನೆಮ್ಮದಿ ತರಲಿದೆ ಎಂದು ನಾನುಭಾವಿಸುತ್ತೇನೆ. ಮೊದಲೆಲ್ಲ ಈ ಜನರಿಗೆಲ್ಲ ಹೋಗಲು ಯಾವ ಜಾಗವೂಇರಲಿಲ್ಲ. ಈಗವರು ಭಾರತಕ್ಕೆ ಬರಲು ಬಯಸಿದರೆ, ಬರಬಹುದು. ಇನ್ನು ಬಾಂಗ್ಲಾದೇಶದ ವಿಚಾರದಲ್ಲಿ ಮಾತನಾಡಬೇಕೆಂದರೆ, ದುರದೃಷ್ಟವಶಾತ್ ಅದು ಮೂಲಭೂತವಾದಿ ದೇಶವಾಗುತ್ತಿದೆ. ಆಗಲೇ ಹೇಳಿದಂತೆ, ಮಧ್ಯಮ ವರ್ಗ ಮತ್ತು ಶ್ರೀಮಂತ ವರ್ಗದ ಹಿಂದೂಗಳಿಗೆ ಪಶ್ಚಿಮ ದೇಶಗಳಲ್ಲಿ ರಾಜಕೀಯ ಆಶ್ರಯ ದೊರಕಿಬಿಡುತ್ತದೆ. ಏಕೆಂದರೆ, ಬಾಂಗ್ಲಾದೇಶದಲ್ಲಿ ಹಿಂಸಾಚಾರ ನಡೆಯುತ್ತಿದೆ ಎಂದು ಎಲ್ಲರಿಗೂ ತಿಳಿದಿದೆ. ಯಾರ ಬಳಿ ಹಣವಿದೆಯೋ ಅವರು ವೀಸಾ ತೆಗೆದುಕೊಂಡು ವಿದೇಶಗಳಿಗೆ ಹೋಗಿ ಆಶ್ರಯ ಪಡೆದುಬಿಡುತ್ತಾರೆ. ಆದರೆ ಯಾರಿಗೆ ಅನ್ಯ ದಾರಿಯೇ ಇಲ್ಲವೋ, ಬಡತನದಲ್ಲಿದ್ದಾರೋ,ಅಂಥ ಹಿಂದೂಗಳು ಭಾರತಕ್ಕೆ ಬರಬಹುದು.ಈ ಕಾನೂನಿನಿಂದ ಆಗುವ ಒಳ್ಳೆಯ ಬದಲಾವಣೆಯೆಂದರೆ, ಇನ್ಮುಂದೆ ಬಾಂಗ್ಲಾದೇಶ ಸರಕಾರ ತನ್ನ ನೆಲದಲ್ಲಿನ ಹಿಂದೂಗಳನ್ನು ರಕ್ಷಿಸಲು ಯೋಚಿಸುತ್ತದೆ ಹಾಗೂ ಅವರಿಗೆ ಭದ್ರತೆ ಒದಗಿಸಿ, ದೇಶ ಬಿಡದಂತೆ ತಡೆಯಲುಪ್ರಯತ್ನಿಸುತ್ತದೆ ಎನ್ನುವುದು.
ಪೌರತ್ವ ತಿದ್ದುಪಡಿಯಿಂದಾಗಿ ಭಾರತದ ಮುಸಲ್ಮಾನರಲ್ಲಿ ಭಯದ ವಾತಾವರಣ ನಿರ್ಮಾಣವಾಗಿದೆ ಎಂದು ವಿರೋಧ ಪಕ್ಷಗಳು ಹೇಳುತ್ತಿವೆ. ನೀವೇನಂತೀರಿ?
ಏಕೆ ಭಯ? ಭಾರತೀಯ ಮುಸ್ಲಿಂ ಸಮುದಾಯವನ್ನು ಭಾರತದಿಂದ ಹೊರಹಾಕಲಾಗುತ್ತದೆ ಎಂದೇನೂ ಈ ಮಸೂದೆ ಹೇಳುತ್ತಿಲ್ಲ.
ಭಾರತದಲ್ಲಿ ಹೆಚ್ಚುತ್ತಿರುವ ಮಾಬ್ ಲಿಂಚಿಂಗ್(ಥಳಿಸಿ ಹತ್ಯೆ) ಘಟನೆಗಳ ವಿಚಾರದಲ್ಲಿ ಕೇಂದ್ರ ಸರಕಾರ ಕಠಿನ ಕ್ರಮ ಕೈಗೊಳ್ಳುತ್ತಿಲ್ಲ ಎನ್ನುವ ಆರೋಪಗಳಿವೆ. ಕೇಂದ್ರ ಸರಕಾರವು ಭಾರತವನ್ನು ಮೂಲಭೂತವಾದದತ್ತ ಕೊಂಡೊಯ್ಯುತ್ತಿದೆ ಮತ್ತು ಅದರ ಕಾರ್ಯಶೈಲಿಯು ಧರ್ಮದ ಆಧಾರದಲ್ಲಿ ಸಮುದಾಯಗಳನ್ನು ವಿ ಭಜಿಸುತ್ತಿದೆ ಎಂದು ವಿಪಕ್ಷಗಳು ಆರೋಪಿಸುತ್ತವೆ. ಇನ್ನು, ಹಿಂದೂ ಸಮುದಾಯವನ್ನು ಸಮಾಧಾನ ಪಡಿಸುವುದಕ್ಕಾಗಿಯೇ (ತುಷ್ಟೀಕರಣಕ್ಕಾಗಿ) ಪೌರತ್ವ ತಿದ್ದುಪಡಿ ಮಸೂದೆಯನ್ನು ರೂಪಿಸಲಾಯಿತು ಎಂದೂ ಹೇಳಲಾಗುತ್ತದೆ. ಇದೆಲ್ಲವನ್ನೂ ನೀವು ಹೇಗೆ ನೋಡುತ್ತೀರಿ?
ನೋಡಿ, ಈ ರೀತಿಯ ರಾಜಕೀಯ ಮೊದಲಿನಿಂದ ನಡೆಯುತ್ತಾ ಬಂದಿದೆ. ಕೆಲವು ರಾಜಕೀಯ ಪಕ್ಷಗಳು ಹಿಂದೂಗಳ ಓಲೈಕೆ ಮಾಡಿದರೆ, ಕೆಲವು ಮುಸಲ್ಮಾನರ ಓಲೈಕೆ ಮಾಡುತ್ತವೆ. ಈ ತುಷ್ಟೀಕರಣ ನಿಲ್ಲಬೇಕಿದೆ. ಎಲ್ಲರಿಗೂ ಉದ್ಯೋಗ ಸಿಗುವಂತಾಗಬೇಕು, ಎಲ್ಲರಿಗೂ ಸ್ವತ್ಛಕುಡಿಯುವ ನೀರು, ಸ್ವತ್ಛ ಹವೆ ಸಿಗುವಂತೆ ಮಾಡಬೇಕು ಎನ್ನುವ ಬಗ್ಗೆರಾಜಕಾರಣಿಗಳು ಯೋಚಿಸಬೇಕಿದೆ. ನಮ್ಮ ಸುತ್ತಮುತ್ತಲೂ ಎಷ್ಟೊಂದುಸಮಸ್ಯೆಗಳು ಇವೆ ಗೊತ್ತೇ? ಮಹಿಳೆಯರ ವಿಷಯಕ್ಕೇ ಬರುವುದಾದರೆ, ಮಹಿಳೆ ಸಮಾನಳು ಎನ್ನುತ್ತದೆ ಕಾನೂನು. ಆದರೆ ಮಹಿಳೆಗೆ ಸಮಾನತೆಸಿಗುತ್ತಿಲ್ಲ. ಪ್ರತಿ ದಿನ ಆಕೆ ಲೈಂಗಿಕ ದೌರ್ಜನ್ಯಕ್ಕೆ ತುತ್ತಾಗುತ್ತಿದ್ದಾಳೆ. ಅತ್ಯಾಚಾರಕ್ಕೆ ಒಳಗಾಗುತ್ತಿದ್ದಾಳೆ. ಏಕೆಂದರೆ ಆಕೆಯನ್ನು ಸೆಕ್ಷುವಲ್ ಆಬೆjಕ್ಟ್‌ನ(ಭೋಗದ ವಸ್ತು) ಥರ ನೋಡಲಾಗುತ್ತದೆ. ಈ ವಿಚಾರದಲ್ಲಿ ಸಮಾಜಗಳ ವಿಚಾರಧಾರೆ ಬದಲಾಗುವ ಅಗತ್ಯವಿದೆ. ಈ ರೀತಿಯ ಘಟನೆಗಳಲ್ಲಿ ಧರ್ಮಕ್ಕಿಂತ, ಮನುಷ್ಯನ ಅಹಂಕಾರವೇ ಅಧಿಕ ಕೆಲಸ ಮಾಡುತ್ತದೆ. ಹೀಗಾಗಿ ಹಿಂದೂ, ಮುಸಲ್ಮಾನ, ಬೌದ್ಧ ಮತ್ತು ಎಲ್ಲಾ ಧರ್ಮಗಳಲ್ಲೂ ವೈಜ್ಞಾನಿಕ ಯೋಚನೆಯು ವಿಕಾಸಗೊಳ್ಳುವ ಅಗತ್ಯವಿದೆ. ಒಂದು ಸಮಾಜವು ಸ್ವಸ್ಥವಾದರೆ ಅಲ್ಲಿ ಧರ್ಮಕ್ಕೆ ಮಹತ್ವವೇ ಇರುವುದಿಲ್ಲ. ನಾವು ಯಾವುದೇ ಸಭ್ಯ ರಾಷ್ಟ್ರಗಳನ್ನು ನೋಡಿದರೂ, ಅಲ್ಲಿ ಧರ್ಮ ಮತ್ತು ರಾಜಕೀಯ ಪ್ರತ್ಯೇಕವಾಗಿಯೇಇರುತ್ತವೆ. ಆದರೆ ನಮ್ಮ ಉಪಖಂಡಗಳಲ್ಲಿ ಎಲ್ಲವೂ ಧರ್ಮಾಧಾರಿತವಾಗಿದೆ. ನನಗನ್ನಿಸುತ್ತದೆ, ನಾವೆಲ್ಲರೂ ಧರ್ಮವನ್ನೂ ಮೀರಿ ಬೆಳೆಯಬೇಕು ಹಾಗೂ ಸಮಾಜವು ಸಮಾನವಾಗಬೇಕಿದೆ. ಎಲ್ಲರಿಗೂ ಆಹಾರ, ವಸತಿ, ಒಳ್ಳೆಯ ಶಿಕ್ಷಣ, ಸ್ವಾಸ್ಥ್ಯ ಸೇವೆಗಳು ದೊರೆಕುವಂತೆ ಮಾಡುವತ್ತ ಚಿಂತಿಸಬೇಕಿದೆ. ಈ ರೀತಿ ಆದರೆ ಭಾರತ ಮತ್ತು ಉಪಖಂಡದ ರಾಷ್ಟ್ರಗಳಷ್ಟೇ ಅಲ್ಲದೇ, ಇಡೀ ಜಗತ್ತೇ ಉತ್ತಮವಾಗುತ್ತದೆ.
(ಸಂದರ್ಶನ ಕೃಪೆ: ಬಿಬಿಸಿ ಹಿಂದಿ)
– ತಸ್ಲೀಮಾ ನಸ್ರೀನ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Belagavi:ಅಧಿವೇಶನ ವೇಳೆ 10 ಲಕ್ಷ ಜನರ ಜತೆ ಸುವರ್ಣವಿಧಾನಸೌಧಕ್ಕೆ ಮುತ್ತಿಗೆ ಹಾಕುತ್ತೇವೆ…
ನಾನೂ ಸೀನಿಯರ್ ಲೀಡರ್, ರಾಜ್ಯಕ್ಕೆ ದಲಿತ ಸಿಎಂ ಪ್ರಸ್ತಾವ ಬಂದರೆ ಮುಂಚೂಣಿಯಲ್ಲಿರುವೆ
Congress ಸರಕಾರದಲ್ಲಿ ಹಣಕಾಸು ಸಮಸ್ಯೆಯಿಂದ ಶಾಸಕರ ಬೇಡಿಕೆ ಈಡೇರಿಲ್ಲ ಎನ್ನುವುದು ವಾಸ್ತವ
ಬಿಜೆಪಿಗೆ ಇಡೀ ರಾಜ್ಯವೇ ಒಪ್ಪಿಕೊಳ್ಳುವಂಥ ಸರ್ವಸ್ಪರ್ಶಿ ನಾಯಕತ್ವ ಇನ್ನಷ್ಟೇ ಸಿಗಬೇಕಿದೆ
Congress ಪಕ್ಷದಲ್ಲಿ ನಾಯಕತ್ವಕ್ಕಾಗಿ ಗಲಾಟೆ ಇಲ್ಲ
MUST WATCH
ಹೊಸ ಸೇರ್ಪಡೆ
Madarsa Act: ಯುಪಿ ಮದರಸಾ ಕಾಯ್ದೆ ಸಿಂಧುತ್ವ ಎತ್ತಿಹಿಡಿದ ಸುಪ್ರೀಂ
Kharge: ಬೆಂಗಳೂರಿಗೆ ಬಂದು ನನ್ನ ಜತೆ ಚರ್ಚೆಗೆ ನಿಲ್ಲಿ: ಪ್ರಧಾನಿ ಮೋದಿಗೆ ಖರ್ಗೆ ಸವಾಲು
IPL Mega Auction: ನ.24 ಮತ್ತು 25 ಜೆಡ್ಡಾದಲ್ಲಿ ಐಪಿಎಲ್ ಹರಾಜು
Gautam Adani: ಯುಪಿಎ ಅವಧಿಯಲ್ಲಿ ರಾಹುಲ್ ಭೇಟಿಗೆ ಯತ್ನಿಸಿದ್ದರೇ ಅದಾನಿ?
Sharad Pawar: ಚುನಾವಣಾ ರಾಜಕೀಯ ನಿವೃತ್ತಿ ಸುಳಿವು ನೀಡಿದ ಎನ್‌ಸಿಪಿ ವರಿಷ್ಠ ಶರದ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.