ಮುಖ್ಯಮಂತ್ರಿ ಬದಲಾವಣೆ ಮಾಡುವುದಾದರೆ ಒಕ್ಕಲಿಗ ಸಮುದಾಯದ ಡಿಕೆಶಿಯನ್ನೇ ನೇಮಿಸಲಿ
ಶೀಘ್ರ ಒಕ್ಕಲಿಗ ಸಂಘದ ಸಭೆ ಕರೆದು ಡಿಕೆಶಿ ಪರ ಒತ್ತಡ ಹೇರುತ್ತೇವೆ, ಜಾತಿಗಣತಿ ವರದಿ ಬಗ್ಗೆ ನಮ್ಮ ವಿರೋಧ ಇದೆ, ಆಧಾರ್‌ಗೆ ಲಿಂಕ್ ಮಾಡಿ ಜಾತಿಗಣತಿ ಮಾಡಲಿ
Team Udayavani, Jan 15, 2025, 8:00 AM IST
ಮಕರ ಸಂಕ್ರಾಂತಿ ಈಗಷ್ಟೇ ಮುಗಿದಿದೆ ಶೀಘ್ರದಲ್ಲೇ ನಡೆಯಲಿರುವ ಒಕ್ಕಲಿಗರ ಸಂಘದ ಸಭೆಯು ಕೇವಲ ಜಾತಿ ಗಣತಿ (ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ) ವರದಿ ಕುರಿತ ಚರ್ಚೆಗೆ ಸೀಮಿತವಾಗಿರುವುದಿಲ್ಲ. ಪ್ರಸ್ತುತ ಕಾಂಗ್ರೆಸ್‌ನಲ್ಲಿ ಶುರುವಾಗಿರುವ “ಅಧಿಕಾರ ಹಂಚಿಕೆ’ ಕುರಿತ ಶೀತಲಸಮರ ಬಗೆಗಿನ ಚರ್ಚೆಗೂ ಸಾಕ್ಷಿಯಾಗಲಿದೆ. ಒಂದು ವೇಳೆ ಮುಖ್ಯಮಂತ್ರಿ ಬದಲಾವಣೆ ಆಗುವುದಾದರೆ, ತೆರವಾದ ಸ್ಥಾನಕ್ಕೆ ಒಕ್ಕಲಿಗ ಸಮುದಾಯದ ಮುಖಂಡ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರನ್ನೇ ನೇಮಿಸಬೇಕು ಎಂಬ ನಿರ್ಣಯ ಕೈಗೊಳ್ಳಲು ಸಂಘ ಉದ್ದೇಶಿಸಿದೆ.
– ಇದನ್ನು ಸ್ವತಃ ರಾಜ್ಯ ಒಕ್ಕಲಿಗರ ಸಂಘದ ಅಧ್ಯಕ್ಷ ಕೆಂಚಪ್ಪಗೌಡ ತಿಳಿಸಿದ್ದಾರೆ. ಆಡಳಿತಾರೂಢ ಕಾಂಗ್ರೆಸ್‌ನಲ್ಲಿ ದಲಿತ ಮುಖಂಡರ ಡಿನ್ನರ್ ಸಭೆ ನಡೆಸಲು ಕಸರತ್ತುಗಳು ನಡೆಯುತ್ತಿರುವಾಗಲೇ ಒಕ್ಕಲಿಗರ ಸಂಘದ ಪದಾಧಿಕಾರಿಗಳ ಸಭೆ ಮತ್ತು ಅದರಲ್ಲಿ ಡಿ.ಕೆ. ಶಿವಕುಮಾರ್ ಅವರಿಗೇ ಸಿಎಂ ಪಟ್ಟ ಕಟ್ಟಬೇಕು ಅಂತ ನಿರ್ಣಯ ಕೈಗೊಳ್ಳುವ ಉದ್ದೇಶದೊಂದಿಗೆ ನಡೆಯಲಿರುವ ಈ ಸಭೆಯು ಹಬ್ಬದ ಅನಂತರ ರಾಜ್ಯ ರಾಜಕಾರಣದಲ್ಲಿ ಸಂ-ಕ್ರಾಂತಿ ಉಂಟುಮಾಡುವ ಸಾಧ್ಯತೆ ಇದೆ.
2 ದಿನಗಳ ಹಿಂದಷ್ಟೇ ಖುದ್ದು ಡಿ.ಕೆ.ಶಿವಕುಮಾರ್ ಅವರ ನಿವಾಸದಲ್ಲಿ ಸಭೆ ನಡೆಸಲು ಹೋಗಿದ್ದ ಒಕ್ಕಲಿಗರ ಸಂಘದ ಪದಾಧಿಕಾರಿಗಳು, ಡಿಸಿಎಂ ಸೂಚನೆ ಮೇರೆಗೆ ಮುಂದೂಡಿದ್ದರು. ಅನಗತ್ಯ ಗೊಂದಲ ಸೃಷ್ಟಿಸುವುದು ಬೇಡ ಎಂಬ ಕಾರಣಕ್ಕೇ ಮುಂದೂಡಲ್ಪಟ್ಟಿತ್ತು. ಈಗ ಬಹಿರಂಗವಾಗಿಯೇ ಸಂಘವು ಒಕ್ಕಲಿಗರೇ ಸಿಎಂ ಆಗಬೇಕು ಎಂಬ ನಿರ್ಣಯ ಕೈಗೊಳ್ಳಲು ಸಭೆ ನಡೆಸುವುದಾಗಿ ಸಂಘದ ಅಧ್ಯಕ್ಷ ಕೆಂಚಪ್ಪ ಗೌಡ ಸ್ಪಷ್ಟಪಡಿಸಿದ್ದಾರೆ. ಆ ಮಹತ್ವದ ಸಭೆಗೆ ಸಿದ್ಧತೆ ನಡೆಸಿರುವ ಅವರು, ಈ ಮಧ್ಯೆ “ಉದಯವಾಣಿ’ಯೊಂದಿಗೆ ನೇರಾ-ನೇರ ಮಾತನಾಡಿದ್ದಾರೆ.
– ಸಂಪುಟ ಸಭೆಯಲ್ಲಿ ಜಾತಿಗಣತಿ ಕೈಗೆತ್ತಿಕೊಳ್ಳಲು ಸರಕಾರ ಮುಂದಾಗಿರುವ ಬೆನ್ನಲ್ಲೇ “ಅಧಿಕಾರ ಹಂಚಿಕೆ’ ಚರ್ಚೆಯೂ ಶುರುವಾಗಿದೆ. ಈ ವೇಳೆ ನಡೆಯಲಿರುವ ಒಕ್ಕಲಿಗರ ಸಂಘ ಸಭೆಯ ಅಜೆಂಡಾ ಏನು?
ಡಿ.ಕೆ.ಶಿವಕುಮಾರ್ ಕಾಂಗ್ರೆಸ್ ಅಧ್ಯಕ್ಷರಾಗಿ ಕರ್ತವ್ಯ ನಿರ್ವಹಿಸಿ ಅಧಿಕಾರಕ್ಕೆ ತರುವಲ್ಲಿ ಯಶಸ್ವಿಯಾಗಿದ್ದಾರೆ. ಪಕ್ಷದ ಒಳಗೆ ಒಂದು ವ್ಯವಸ್ಥೆ ಮಾಡಿಕೊಂಡು, ಅಧಿಕಾರ ಹಂಚಿಕೆಗೆ ಒಪ್ಪಂದ ಆಗಿದೆ. ಒಂದು ವೇಳೆ ಬದಲಾವಣೆ ಮಾಡಲೇಬೇಕು ಎಂದಾದರೆ, ನಮ್ಮ ಡಿ.ಕೆ. ಶಿವಕುಮಾರ್ ಅವರಿಗೇ ನೀಡಬೇಕು ಎಂಬುದು ನಮ್ಮ ಒತ್ತಾಯ. ಇನ್ನು ಜಾತಿ ಗಣತಿಯಲ್ಲಿ ಸಾಕಷ್ಟು ತೊಡಕುಗಳು, ಅವೈಜ್ಞಾನಿಕವಾಗಿ ಆಗಿದ್ದನ್ನು ಸರಿಪಡಿಸಬೇಕು. “ಆಧಾರ್ ಲಿಂಕ್’ನೊಂದಿಗೆ ಈ ಜಾತಿ ಗಣತಿ ನಡೆಯಲಿ ಎಂಬುದು ನಮ್ಮ ಮತ್ತೊಂದು ಒತ್ತಾಯ ಆಗಿರಲಿದೆ. ಇವೆರಡರ ಬಗ್ಗೆಯೂ ಶೀಘ್ರ ಸಭೆ ನಡೆಸಿ ತೀರ್ಮಾನ ಕೈಗೊಳ್ಳಲಾಗುವುದು.
-ವೀರಶೈವ ಲಿಂಗಾಯತ ಮತ್ತು ಒಕ್ಕಲಿಗರು ಹೊರತುಪಡಿಸಿದರೆ, ಜಾತಿ ಗಣತಿ ವರದಿಗೆ ಯಾರೂ ವಿರೋಧಿಸುತ್ತಿಲ್ಲ. ನೀವು ಮಾತ್ರ ಅನ್ಯಾಯವಾಗಿದೆ ಅನ್ನುತ್ತಿದ್ದೀರಲ್ಲಾ ಯಾಕೆ?
ಗಣತಿ ಮಾಡಲು ಅವಕಾಶ ಇರುವುದು ಕೇಂದ್ರ ಸರಕಾರಕ್ಕೆ ಮಾತ್ರ. ಅಲ್ಲದೆ ಇಲ್ಲಿ ಗಣತಿ ಮಾಡಿಯೇ 10 ವರ್ಷ ಕಳೆದಿದ್ದು, ಈ ಅವಧಿಯಲ್ಲಿ ಜನಸಂಖ್ಯೆಯಲ್ಲಿ ಸಾಕಷ್ಟು ವ್ಯತ್ಯಾಸ ಆಗಿವೆ. ಅದಕ್ಕಿಂತ ಮುಖ್ಯವಾಗಿ ಗಣತಿಯು ಎಲ್ಲರನ್ನೂ ಮತ್ತು ಎಲ್ಲ ಅಂಶಗಳನ್ನೂ ಒಳಗೊಂಡಿಲ್ಲ. ಒಕ್ಕಲಿಗರಲ್ಲಿಯೇ 114 ಉಪಪಂಗಡಗಳಿದ್ದು, ಅದನ್ನು ಮಾತ್ರ ಉಲ್ಲೇಖೀಸಿದ್ದಾರೆ. ಅವರೆಲ್ಲರೂ ಮೂಲತಃ ಒಕ್ಕಲಿಗರೇ ಆಗಿದ್ದಾರೆ. ವೀರಶೈವ ಲಿಂಗಾಯತದಲ್ಲೂ ಈ ಸಮಸ್ಯೆ ಆಗಿದೆ. ವರದಿಯಲ್ಲಿನ ಅಂಶ ಗೊತ್ತಾದರೆ, ಉಳಿದ ಸಮುದಾಯಗಳೂ ನಮ್ಮ ಹೋರಾಟಕ್ಕೆ ಕೈಜೋಡಿಸುವುದು ಗ್ಯಾರಂಟಿ.
– ನಿಮ್ಮ ಸಮುದಾಯದ ನಾಯಕರೇ ಸರಕಾರದ ಭಾಗವಾಗಿದ್ದಾರೆ. ಅವರು ನಿಮ್ಮ ಹೋರಾಟಕ್ಕೆ ಹೇಗೆ ಕೈಜೋಡಿಸುತ್ತಾರೆ?
ಶಾಸಕರಿರಬಹುದು ಅಥವಾ ಸಚಿವರಿರಬಹುದು ಜನಾಂಗದ ಜತೆಗೆ ನಿಂತಿದ್ದರಿಂದಲೇ ಇವತ್ತು ಅವರೆಲ್ಲ ಅಧಿಕಾರಕ್ಕೆ ಬಂದಿದ್ದಾರೆ. ಅದರ ಸುಖ ಉಣ್ಣುತ್ತಿದ್ದಾರೆ. ಆ ಅಧಿಕಾರ ಶಾಶ್ವತವಲ್ಲ. ಹಾಗಾಗಿ ಎದ್ದು ಬಂದು ಹೋರಾಟಕ್ಕೆ ಕೈಜೋಡಿಸುವುದು ಅವರ ಕರ್ತವ್ಯವಾಗಿದೆ. ಆ ಮೂಲಕ ಸಮಾಜದ ಋಣ ತೀರಿಸಬೇಕಾಗುತ್ತದೆ. ಇಲ್ಲವಾದರೆ ಅವರ ಪಾಡಿಗೆ ಅವರು ರಾಜಕೀಯ ಮಾಡಿಕೊಂಡಿರಲಿ, ನಮ್ಮ ಪಾಡಿಗೆ ನಾವು ಸಮುದಾಯಕ್ಕಾಗಿ ಹೋರಾಟ ಮಾಡುತ್ತೇವೆ. ಮುಂದೆ ಏನಾಗುತ್ತದೆ ನೋಡೋಣ.
-ಎದ್ದು ಬಂದು ಹೋರಾಟ ಮಾಡುವುದು ಕರ್ತವ್ಯ ಅಂತೀರಾ. ನಿಮ್ಮದೇ ಸಮುದಾಯದ ನಾಯಕ ಡಿ.ಕೆ.ಶಿವಕುಮಾರ್ ಸಭೆ ಮಾಡುವುದು ಬೇಡ ಅನ್ನೋದಲ್ದೇ, ಸಭೆಯ ಆವಶ್ಯಕತೆ ತಮಗಿಲ್ಲ ಎಂದು ಹೇಳಿದ್ದಾರಲ್ಲವೇ?
ಹೌದು ಅವರೊಬ್ಬ ಉಪಮುಖ್ಯಮಂತ್ರಿ ಹಾಗೂ ಒಂದು ಪಕ್ಷದ ಅಧ್ಯಕ್ಷರೂ ಆಗಿದ್ದಾರೆ. ಹಾಗಾಗಿ ಅವರ ಊಹೆ ಹಾಗಿರಬೇಕಾಗಿರುತ್ತದೆ. ಅವರು ಹೇಳಿದರು ಅಂತ ಬಿಟ್ಟುಬಿಡಲಿಕ್ಕಾಗುತ್ತದೆಯೇ? ಸರಕಾರದ ಪರವಾಗಿ ಅವರು ಇರುತ್ತಾರೆ. ಜನಾಂಗದ ಪರವಾಗಿ ನಾವು ಇರುತ್ತೇವೆ. ನಾಯಕರು ಕೆಲಸ ಮಾಡುವುದಿಲ್ಲ ಅಂದರೂ ನಾವು ಎದ್ದುನಿಂತು ಹೋರಾಟ ಮಾಡಲೇಬೇಕಾಗುತ್ತದೆ.
– ಒಕ್ಕಲಿಗ ಸಮುದಾಯ ಮತ್ತು ಸಮುದಾಯದ ನಾಯಕರ ನಡುವೆಯೇ ಈ ವಿಚಾರದಲ್ಲಿ ಭಿನ್ನಾಭಿಪ್ರಾಯಗಳಿವೆಯೇ?
ಹಾಗೇನಿಲ್ಲ. ಅವರ ಕೆಲಸ ಮಾಡಿಕೊಳ್ಳಲಿ. ಡಿ.ಕೆ.ಶಿವಕುಮಾರ್ ಮಾತ್ರವಲ್ಲ. ಎಲ್ಲ ಪಕ್ಷಗಳ ಸಮುದಾಯದ ನಾಯಕರಿಗೆ ಈ ಅನ್ಯಾಯ ನಿಲ್ಲಿಸಬೇಕು ಅಂತ ಮನವಿ ಮಾಡುತ್ತೇವೆ. ಇದಕ್ಕೆ ಕೈಜೋಡಿಸಿದರೆ ಒಳ್ಳೆಯದು. ಇಲ್ಲವಾದರೆ ಇಲ್ಲ. ಆದರೆ ಸಮುದಾಯಕ್ಕಾಗಿ ನಾವೊಂದು ಸಂಘ ಕಟ್ಟಿಕೊಂಡಿದ್ದೇವೆ. ಅದಕ್ಕೆ ನನ್ನನ್ನು ಅಧ್ಯಕ್ಷನನ್ನಾಗಿ ಆಯ್ಕೆ ಮಾಡಿದ್ದಾರೆ. ಉಳಿದ ಪದಾಧಿಕಾರಿಗಳೂ ಅದರಲ್ಲಿದ್ದಾರೆ. ನಾವೆಲ್ಲರೂ ನಮ್ಮ ಕರ್ತವ್ಯ ಮಾಡುತ್ತೇವೆ. ಮುಂದೆಯೂ ಚುನಾವಣೆಗಳು ಬಂದೇ ಬರುತ್ತವೆ. ಆಗ ಅವರಿಗೆ ಇದರ ಪ್ರತಿಫಲ ಏನು ಸಿಗಬಹುದು ಅಂತ ಅವರೇ ಊಹೆ ಮಾಡಿಕೊಳ್ಳಲಿ.
– ಅಷ್ಟಕ್ಕೂ ನಿಮ್ಮ ಹೋರಾಟದ ರೂಪುರೇಷೆಗಳು ಏನು?
ಈಗಲೇ ಇದರ ಬಗ್ಗೆ ಹೇಳಲಾಗುವುದಿಲ್ಲ. ಮುಂದಿನ ದಿನಗಳಲ್ಲಿ ಇದನ್ನು ಹೇಳುತ್ತೇವೆ. ಏನು ಮಾಡಬೇಕು? ಹೇಗೆ ಮಾಡಬೇಕು ಎಂಬುದನ್ನು 35 ನಿರ್ದೇಶಕರು, ಪದಾಧಿಕಾರಿಗಳು, ಜನಾಂಗದ ನಾಯಕರನ್ನೂ ಸೇರಿಸಿ, ಕಾನೂನಾತ್ಮಕ ಹೋರಾಟವೋ ಅಥವಾ ಪ್ರತಿಭಟನೆಗಳ ಮೂಲಕ ಹೋರಾಟ ಮಾಡಬೇಕೋ ಎಂಬುದನ್ನು ತೀರ್ಮಾನ ಮಾಡುತ್ತೇವೆ.
– ಒಕ್ಕಲಿಗರ ಸಂಘದಲ್ಲೇ ಒಗ್ಗಟ್ಟಿಲ್ಲ ಎಂಬ ಕೂಗು ಇದೆ. ಕಿತ್ತಾಡಿಕೊಂಡರೆ ಆಡಳಿತಾಧಿಕಾರಿ ನೇಮಕ ಮಾಡುವುದಾಗಿ ಈಚೆಗೆ ಡಿಸಿಎಂ ಕೂಡ ಎಚ್ಚರಿಕೆ ನೀಡಿ ಕಳುಹಿಸಿದ್ದಾರಲ್ಲಾ?
ನಮ್ಮಲ್ಲಿ ಯಾವುದೇ ಭಿನ್ನಾಭಿಪ್ರಾಯಗಳಿಲ್ಲ. ಸಂಘದ ಚುನಾವಣೆಗಳು ನಡೆಯುವ ಸಂದರ್ಭದಲ್ಲಿ ಮಾತ್ರ ಸಹಜವಾಗಿ ಸ್ಪರ್ಧೆ ಇದ್ದೇ ಇರುತ್ತದೆ. ನಾವು ಒಬ್ಬರನ್ನು ಬೆಂಬಲಿಸಿದರೆ, ಇನ್ನೊಬ್ಬರು ಮತ್ತೂಬ್ಬರನ್ನು ಬೆಂಬಲಿಸುತ್ತಾರೆ. ಇದರಲ್ಲಿ ತಪ್ಪೂ ಇಲ್ಲ. ಒಮ್ಮೆ ಚುನಾವಣೆ ಮುಗಿದ ಮೇಲೆ ನಾವೆಲ್ಲರೂ ಒಂದೇ. ಜನಾಂಗದ ಏಳಿಗೆಗೆ ನಾವು ಯಾವಾಗಲೂ ಒಟ್ಟಾಗಿಯೇ ಹೋರಾಟ ಮಾಡುತ್ತೇವೆ.
ಉದಯವಾಣಿ ಸಂದರ್ಶನ: ವಿಜಯ ಕುಮಾರ ಚಂದರಗಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Vijayapura: ಕಾಲುವೆಗೆ ಮಕ್ಕಳೊಂದಿಗೆ ತಾಯಿ ಹಾರಿದ ಪ್ರಕರಣ; ನಾಲ್ಕನೇ ಮಗುವಿನ ಶವ ಪತ್ತೆ
Congress; ಗೊಂದಲಗಳ ಮಧ್ಯೆ ದೆಹಲಿ ಪ್ರವಾಸ ಕೈಗೊಂಡ ಸಿಎಂ ಸಿದ್ದರಾಮಯ್ಯ
Cast Census Report: ಹಲವು ವಿರೋಧಗಳ ನಡುವೆಯೂ ಜಾತಿ ಗಣತಿ ರಹಸ್ಯ ನಾಳೆ ಬಯಲು?
Congress Office: ಬೆಳಗಾವಿ ಸಚಿವರ ಪ್ರತಿಷ್ಠೆಯ ಜಟಾಪಟಿ: ಸಿಎಂ ಸಿದ್ದರಾಮಯ್ಯ ಅಂಗಳಕ್ಕೆ?
Western Ghat: ಆರು ಜಿಲ್ಲೆಗಳಲ್ಲಿ ಭೂಕುಸಿತ ತಡೆಗೆ 400 ಕೋಟಿ ರೂ. ಯೋಜನೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.