ಸಂಸ್ಕೃತಿ ಉಳಿಸಬೇಕಾದರೆ ಕಂಬಳ ನಡೆಯಲೇಬೇಕು


Team Udayavani, Jan 26, 2017, 10:58 AM IST

ankakaka-2.jpg

ಜಲ್ಲಿಕಟ್ಟು ಆಯೋಜನೆಗೆ ಅವಕಾಶ ನೀಡುವಂತೆ ತಮಿಳುನಾಡಿನಲ್ಲಿ ಹೋರಾಟಗಳು ನಡೆದು ಅಲ್ಲಿನ ಸರ್ಕಾರ ಸುಗ್ರೀವಾಜ್ಞೆ ಹೊರಡಿಸಿದ ಬೆನ್ನಲ್ಲೇ ಕರಾವಳಿಯ ಜಾನಪದ ಕ್ರೀಡೆ ಕಂಬಳ ಪುನಾರಂಭಕ್ಕೆ ರಾಜ್ಯದಲ್ಲಿ ಹೋರಾಟ ತೀವ್ರಗೊಂಡಿದೆ. ಕಂಬಳ ಒಂದು ಜಾನಪದ ಕ್ರೀಡೆ. ಅದರಲ್ಲಿ ಪ್ರಾಣಿಹಿಂಸೆ ಇಲ್ಲ. ವಿನಾ ಕಾರಣ ಅಂತಾರಾಷ್ಟ್ರೀಯ ಮಟ್ಟದ ಪ್ರಾಣಿದಯಾ ಸಂಘಗಳು ಸ್ಥಳೀಯ ಸಂಸ್ಕೃತಿ ನಾಶಮಾಡುವ ಪ್ರಯತ್ನಕ್ಕಿಳಿದಿವೆ ಎಂಬ ಆರೋಪಗಳೂ ಕೇಳಿ ಬರುತ್ತಿವೆ. ಇನ್ನೊಂದೆಡೆ ಜನರ ಬೇಡಿಕೆಗೆ ಮಣಿದಿರುವ ರಾಜ್ಯ ಸರ್ಕಾರ ಕಂಬಳ ಪುನಾರಂಭಿಸಲು ಸಿದ್ಧತೆ ಮಾಡಿಕೊಳ್ಳುತ್ತಿದೆ. ಇದರ ಬೆನ್ನಲ್ಲೇ ಪ್ರಾಣಿದಯಾ ಸಂಘಗಳು ಕಂಬಳದ ವಿರುದ್ಧ ನ್ಯಾಯಾಲಯದಲ್ಲಿ ಹೋರಾಟ ನಡೆಸಲು ಸಿದ್ಧತೆ ಮಾಡಿಕೊಳ್ಳುತ್ತಿವೆ. ಕಂಬಳದ ವಿಚಾರದಲ್ಲಿ ಪ್ರಾಣಿದಯಾ ಸಂಘಗಳು ಮತ್ತು ಜನರ ನಡುವೆ ನಡೆಯುತ್ತಿರುವ ಈ ಸಂಘರ್ಷದ ಕುರಿತು ಕಂಬಳದ ಪರ ನ್ಯಾಯಾಲಯದಲ್ಲಿ ವಾದ ಮಂಡಿಸುತ್ತಿರುವ ಮಾಜಿ ಅಡ್ವೋಕೇಟ್‌ ಜನರಲ್‌ ಹಾಗೂ ಹಿರಿಯ ವಕೀಲ ಡಾ.ಬಿ.ವಿ.ಆಚಾರ್ಯ ಅವರೊಂದಿಗೆ ಉದಯವಾಣಿ “ನೇರಾನೇರ’ ಮಾತಿಗಿಳಿಯಿತು.

ಪ್ರಾಣಿಹಿಂಸೆ ಕಾರಣಕ್ಕಾಗಿ ನಿಷೇಧಕ್ಕೊಳಗಾದ ಕಂಬಳವನ್ನು ಸರ್ಕಾರದ ಸುಗ್ರೀವಾಜ್ಞೆ, ಕಾಯ್ದೆಗಳ ಮೂಲಕ ಉಳಿಸಿಕೊಳ್ಳಲು ಸಾಧ್ಯವೇ?
    ಕಂಬಳದಲ್ಲಿ ಪ್ರಾಣಿ ಹಿಂಸೆ ನಡೆಯುತ್ತದೆ ಎಂದು ಹೇಳುವುದೇ ತಪ್ಪು. ಅದೊಂದು ಜಾನಪದ ಕ್ರೀಡೆ. ಅದಕ್ಕೆಂದೇ ಕೋಣಗಳನ್ನು ಸಾಕಿ ಕೆಸರುಗದ್ದೆಯಲ್ಲಿ ಓಡಿಸುತ್ತಾರೆ. ಕೋಣಗಳನ್ನು ಓಡಿಸುವಾತ ಚಾಟಿಯನ್ನು ಕೈಯ್ಯಲ್ಲಿ ಹಿಡಿದು ಹೆದರಿಸುತ್ತಾನೆಯೇ ಹೊರತು ಹೊಡೆಯುವುದಿಲ್ಲ. ಹೀಗಾಗಿ ಸರ್ಕಾರ ಸುಗ್ರೀವಾಜ್ಞೆ ಹೊರಡಿಸಿ ಅಥವಾ ಕಾಯ್ದೆ ರೂಪಿಸಿ ಕಂಬಳ ಪುನಾರಂಭಿಸಲು ಎಲ್ಲಾ ಅವಕಾಶಗಳಿವೆ.

ಸುಗ್ರೀವಾಜ್ಞೆ ಹೊರಡಿಸಲು ಅಥವಾ ಕಾಯ್ದೆ ರೂಪಿಸಲು ನಾವು ಸಿದ್ಧ. ಇದಕ್ಕೆ ಕೇಂದ್ರ ಸರ್ಕಾರ ಒಪ್ಪಬೇಕು ಎಂದು ರಾಜ್ಯ ಸರ್ಕಾರ ಹೇಳುತ್ತಿದೆಯಲ್ಲಾ?
    ಇಲ್ಲಿ ಎರಡು ಅಂಶಗಳು ಪ್ರಸ್ತಾಪವಾಗುತ್ತವೆ. ಮೊದಲನೆಯದಾಗಿ ಕಂಬಳ ಎಂಬುದು ಒಂದು ಕ್ರೀಡೆ. ಕ್ರೀಡೆ ರಾಜ್ಯವ್ಯಾಪ್ತಿಗೆ ಬರುತ್ತದೆ. ಹೀಗಾಗಿ, ಸುಗ್ರೀವಾಜ್ಞೆ ಹೊರಡಿಸಿದರೆ ಅಥವಾ ಕಾಯ್ದೆ ರೂಪಿಸಿದರೆ ಅದಕ್ಕೆ ಕೇಂದ್ರ ಸರ್ಕಾರದ ಅಂಕಿತ ಬೇಕಾಗುವುದಿಲ್ಲ. ಆದರೆ, ಈ ಸಂದರ್ಭದಲ್ಲಿ ಕೇಂದ್ರ ಸರ್ಕಾರದ ಕಾಯ್ದೆಗೆ ವಿರುದ್ಧವಾಗಿ ಏನಾದರೂ ಬದಲಾವಣೆ ಮಾಡುವುದಿದ್ದರೆ ಆಗ ರಾಷ್ಟ್ರಪತಿಗಳ ಅಂಕಿತ ಬೇಕಾಗುತ್ತದೆ. ಅಷ್ಟಕ್ಕೂ, ಕಂಬಳ ಪುನಾರಂಭಕ್ಕೆ ರಾಜ್ಯ ಸರ್ಕಾರ ಸುಗ್ರೀವಾಜ್ಞೆ ಹೊರಡಿಸಿದರೆ ಅಥವಾ ಕಾಯ್ದೆ ರೂಪಿಸಿದರೆ ನಾವು ಸಹಕರಿಸುತ್ತೇವೆ ಎಂದು ಕೇಂದ್ರ ಕಾನೂನು ಸಚಿವ ರವಿಶಂಕರ ಪ್ರಸಾದ್‌ ಅವರು ಈಗಾಗಲೇ ಹೇಳಿದ್ದಾರೆ. ಎರಡೂ ಸರ್ಕಾರಗಳ ಸಹಮತ ಇರುವುದರಿಂದ ಕಂಬಳ ಪುನಾರಂಭಕ್ಕೆ ಯಾವುದೇ ಸಮಸ್ಯೆ ಆಗುವುದಿಲ್ಲ.

ಜಲ್ಲಿಕಟ್ಟು ಸ್ಪರ್ಧೆಗೆ ತಮಿಳುನಾಡು ಸರ್ಕಾರ ಸುಗ್ರೀವಾಜ್ಞೆ ಹೊರಡಿಸಿದೆ ಮತ್ತು ವಿಧಾನಸಭೆಯಲ್ಲಿ ಕಾಯ್ದೆ ರೂಪಿಸಿದೆ. ಆದರೆ, ಕಂಬಳದ ವಿಚಾರದಲ್ಲಿ ಇಂತಹ ದಿಟ್ಟ ನಿರ್ಧಾರ ಕೈಗೊಳ್ಳಲು ರಾಜ್ಯ ಸರ್ಕಾರ ವಿಳಂಬ ಮಾಡುತ್ತಿರುವಂತಿದೆ?
    ಹಾಗೇನೂ ಕಾಣಿಸುತ್ತಿಲ್ಲ. ಜಲ್ಲಿಕಟ್ಟು ವಿಚಾರದಲ್ಲಿ ತಮಿಳುನಾಡಿನಲ್ಲಿ ಪ್ರತಿಭಟನೆ ಹಿಂಸಾರೂಪ ಪಡೆದು ಕಾನೂನು ಸುವ್ಯವಸ್ಥೆ ಹಾಳಾಗುತ್ತದೆ ಎಂಬ ಸಂದರ್ಭದಲ್ಲಿ ಸರ್ಕಾರ ಕ್ರಮ ಕೈಗೊಂಡಿದೆ. ಇದಾದ ಬೆನ್ನಲ್ಲೇ ರಾಜ್ಯದಲ್ಲಿ ಕಂಬಳ ಆರಂಭಕ್ಕೆ ಸುಗ್ರೀವಾಜ್ಞೆ ಜಾರಿಗೆ ತರಬೇಕು ಎಂಬ ಒತ್ತಾಯ ಕೇಳಿ ಬಂತು. ತಕ್ಷಣ ರಾಜ್ಯ ಸರ್ಕಾರ ಸಭೆ ಕರೆದು ಆ ಕುರಿತಂತೆ ಚರ್ಚಿಸಿದೆ. 

ತಮಿಳುನಾಡು ಸರ್ಕಾರದ ಸುಗ್ರೀವಾಜ್ಞೆ ಬಳಿಕ ನಡೆದ ಜಲ್ಲಿಕಟ್ಟು ಸ್ಪರ್ಧೆಯಲ್ಲಿ ಇಬ್ಬರು ಮೃತಪಟ್ಟಿದ್ದಾರೆ. ಇದನ್ನೇ ಮುಂದಿಟ್ಟುಕೊಂಡು ಪ್ರಾಣಿದಯಾ ಸಂಘಗಳು ಮತ್ತೆ ಸುಪ್ರೀಂಕೋರ್ಟ್‌ಗೆ ಹೋಗಿವೆ. ಹೀಗಿರುವಾಗ ಕಂಬಳಕ್ಕಾಗಿ ಸುಗ್ರೀವಾಜ್ಞೆ ಹೊರಡಿಸಿದರೆ ಮತ್ತೆ ಸಮಸ್ಯೆಯಾಗುವುದಿಲ್ಲವೇ?
    ಜಲ್ಲಿಕಟ್ಟು ಸ್ಪರ್ಧೆಯಲ್ಲಿ ಪ್ರತಿ ಬಾರಿ ಅನಾಹುತ ಸಂಭವಿಸುತ್ತದೆ. ಎತ್ತುಗಳು ಮತ್ತು ಮಾನವರು ಗಾಯಗೊಳ್ಳುವುದು, ಸಾಯುವುದು ನಡೆಯುತ್ತದೆ. ಆದರೆ, ಕಂಬಳದ ಇತಿಹಾಸದಲ್ಲಿ ಇದುವರೆಗೆ ಕೋಣ ಅಥವಾ ಜನ ಗಾಯಗೊಂಡಿದ್ದಾಗಲಿ, ಮೃತಪಟ್ಟಿದ್ದಾಗಲಿ ಒಂದಾದರೂ ಉದಾಹರಣೆ ಇದೆಯೇ? ಹೀಗಾಗಿ ಕಂಬಳವನ್ನು ಜಲ್ಲಿಕಟ್ಟು ಜತೆ ಹೋಲಿಸುವುದೇ ತಪ್ಪು.

ಕಂಬಳಕ್ಕೆ ಸಂಬಂಧಿಸಿದಂತೆ ಸರ್ಕಾರದ ಸುಗ್ರೀವಾಜ್ಞೆ ಅಥವಾ ಕಾಯ್ದೆ ಪ್ರಶ್ನಿಸಿ ಪ್ರಾಣಿದಯಾ ಸಂಘಗಳು ಮತ್ತೆ ಕೋರ್ಟ್‌ಗೆ ಹೋದರೆ?
    ಕಂಬಳ ಹಿಂಸಾತ್ಮಕವಾಗಿರುವುದಿಲ್ಲ ಎಂಬುದನ್ನು ಈಗಾಗಲೇ ಕೋರ್ಟ್‌ ಗಮನಕ್ಕೆ ತರಲಾಗಿದೆ. ಇದರ ಮಧ್ಯೆ ಕಂಬಳದ ಕುರಿತು ಪರಿಶೀಲಿಸಿ ವರದಿ ಸಲ್ಲಿಸಲು ತಜ್ಞರ ಸಮಿತಿ ರಚಿಸಲಾಗಿದೆ. ಈ ಸಮಿತಿ ವರದಿ ನೀಡುವವರೆಗೆ ಕಂಬಳ ನಡೆಸಲು ಅವಕಾಶ ಕೊಡಿ ಎಂದು ಸರ್ಕಾರ ನ್ಯಾಯಾಲಯವನ್ನು ಕೇಳಬಹುದು. ಅಷ್ಟಕ್ಕೂ ಕಂಬಳದಲ್ಲಿ ಪ್ರಾಣಿ ಅಥವಾ ಮಾನವ ಸಾವನ್ನಪ್ಪಿರುವ ಉದಾಹರಣೆ ಇಲ್ಲ. ಜತೆಗೆ ಗಾಯಗೊಂಡ ಪ್ರಸಂಗಗಳೂ ವರದಿಯಾಗಿಲ್ಲ. ಇದನ್ನೂ ಕೂಡ ಸರ್ಕಾರ ತನ್ನ ವಾದದಲ್ಲಿ ಸೇರಿಸಿಕೊಳ್ಳಬಹುದು.

ಜಲ್ಲಿಕಟ್ಟು ಮತ್ತು ಕಂಬಳ ಎರಡರಲ್ಲೂ ಪ್ರಾಣಿಗಳನ್ನು ಓಡಿಸಿ, ಹಿಂಸಿಸಲಾಗುತ್ತದೆ ಎಂಬ ಆರೋಪವಿದೆ. ಹೀಗಿರುವಾಗ ಹೋಲಿಕೆ ತಪ್ಪು ಹೇಗಾಗುತ್ತದೆ?
    ಜಲ್ಲಿಕಟ್ಟು ಎಂದರೆ ಎತ್ತುಗಳನ್ನು ಜನರ ಮಧ್ಯೆ ಓಡಿಸಿ ಹಿಡಿದಿಡುವುದು. ಇಲ್ಲಿ ಓಡುವ ಎತ್ತು ಮತ್ತು ಅದನ್ನು ಹಿಡಿಯಲು ಮುಂದಾಗುವ ಮಾನವರ ನಡುವೆ ಕಾಳಗ ನಡೆಯುತ್ತದೆ. ಈ ಕಾಳಗದಲ್ಲಿ ಯಾರು ಗೆಲ್ಲುತ್ತಾರೆ ಎಂಬುದು ಮುಖ್ಯವಾಗುತ್ತದೆ. ಎತ್ತುಗಳನ್ನು ಹಿಡಿಯಲು ಹೋಗಿ ಜನ ಗಾಯಗೊಳ್ಳುತ್ತಾರೆ. ಸಾವು ಕೂಡ ಸಂಭವಿಸುತ್ತದೆ. ಇನ್ನು ಎತ್ತುಗಳಿಗೂ ಗಾಯಗಳಾಗುತ್ತವೆ. ಅವುಗಳನ್ನು ಹಿಡಿದು ಎಳೆದಾಡುತ್ತಾರೆ. ಅಷ್ಟೇ ಅಲ್ಲ, ಎತ್ತುಗಳಿಗೆ ಮತ್ತು ಭರಿಸುವ ಕೆಲಸವೂ ನಡೆಯುತ್ತದೆ ಎಂದು ಹೇಳಲಾಗುತ್ತಿದೆ. ಆದರೆ, ಕಂಬಳ ಹಾಗಲ್ಲ. ಅದಕ್ಕೆಂದೇ ಸಾಕಿದ ಕೋಣಗಳನ್ನು ಕೆಸರು ಗದ್ದೆಯಲ್ಲಿ ಓಡಿಸಲಾಗುತ್ತದೆ. ಓಡಿಸುವಾತ ಕೈಯ್ಯಲ್ಲಿ ಚಾಟಿ ಹಿಡಿದುಕೊಳ್ಳುತ್ತಾನೆಯೇ ಹೊರತು ಹೊಡೆಯುವುದಿಲ್ಲ. 

ಕಂಬಳ ಒಂದು ಸಾಂಪ್ರದಾಯಿಕ ಕ್ರೀಡೆ ಎನ್ನುತ್ತಾರೆ. ಅಲ್ಲಿ ಕೋಣಗಳು ಸ್ಪರ್ಧೆ ಮಾಡಬೇಕಾಗುತ್ತದೆ. ಅದರಿಂದ ಅವುಗಳಿಗೆ ಹಿಂಸೆಯಾಗುವುದಿಲ್ಲವೇ?
    ಹಾಗಿದ್ದರೆ ಜನರ ಕ್ರೀಡೆ ಬಗ್ಗೆ ಏನು ಹೇಳುತ್ತೀರಿ? ಅಲ್ಲಿ ಓಡುವಾಗ, ಹಾರುವಾಗ ಮನುಷ್ಯರಿಗೆ ಸಮಸ್ಯೆಯಾಗುವುದಿಲ್ಲವೇ? ಕೈಕಾಲು ಮುರಿಯುವುದಿಲ್ಲವೇ? ಅದು ಹಿಂಸೆಯಲ್ಲವೇ? ಕ್ರೀಡೆಗೆ ಜನರನ್ನು ಹೇಗೆ ಸಿದ್ಧಪಡಿಸಲಾಗುತ್ತದೋ ಅದೇ ರೀತಿ ಕಂಬಳಕ್ಕೆ ವಿಶೇಷ ತಳಿಯ ಕೋಣಗಳನ್ನು ಸಿದ್ಧಪಡಿಸಲಾಗುತ್ತದೆ. ವರ್ಷ ಪೂರ್ತಿ ಅದನ್ನು ಕುಟುಂಬ ಸದಸ್ಯರಂತೆ ಸಾಕಿ ವರ್ಷಕ್ಕೆ ನಾಲ್ಕೈದು ಬಾರಿ ಕೆಸರುಗದ್ದೆಯಲ್ಲಿ ಓಡಿಸಲಾಗುತ್ತದೆ. ಕ್ರೀಡೆಯಲ್ಲಿ ಪ್ರಾಣಿಗಳಿಗೆ ಹಿಂಸೆಯಾಗುತ್ತದೆ ಎಂದರೆ ಮನುಷ್ಯರಿಗೂ ಹಿಂಸೆಯಾಗುವುದಿಲ್ಲವೇ? ಹಾಗೆಂದು ಕ್ರೀಡಾಕೂಟಗಳನ್ನು ನಿಷೇಧಿಸಲಾಗಿದೆಯೇ?

ಕಂಬಳ ಉಳಿಸಿಕೊಳ್ಳಲು ಕೋರ್ಟ್‌ನಲ್ಲಿ ಯಾವೆಲ್ಲಾ ಪ್ರಯತ್ನಗಳನ್ನು ನಡೆಸಲಾಯಿತು?
    ಕಂಬಳದಲ್ಲಿ ಕೋಣಗಳನ್ನು ಹಿಂಸಿಸುವುದಿಲ್ಲ ಎಂಬುದನ್ನು ವೀಡಿಯೋ ಸಹಿತ ಸಾಬೀತುಪಡಿಸಲಾಯಿತು. ಎತ್ತಿನ ಗಾಡಿ ಓಟಕ್ಕೂ ಕಂಬಳಕ್ಕೂ ಹೋಲಿಕೆ ಏಕೆ ಆಗುವುದಿಲ್ಲ ಎಂಬುದನ್ನೂ ವಿವರಿಸಲಾಯಿತು. ಅಷ್ಟೇ ಅಲ್ಲ, ಶ್ರೀಮಂತರ ಕುದುರೆ ರೇಸ್‌ಗೆ 
ಅವಕಾಶವಿದೆ. ಹಾಗಿದ್ದರೆ ಗ್ರಾಮೀಣರ ಕೋಣಗಳ ರೇಸ್‌ಗೆ ಏಕೆ ಅಡ್ಡಿ ಎಂದೂ ಪ್ರಶ್ನಿಸಲಾಯಿತು. ಜತೆಗೆ ಇದೊಂದು ಸಾಂಸ್ಕೃತಿಕ ಮತ್ತು ಭಾವನಾತ್ಮಕ ಕ್ರೀಡೆ ಎಂದು ಹೇಳಿ ಅದಕ್ಕಿರುವ ಇತಿಹಾಸ ವನ್ನೂ ವಿವರಿಸಲಾಯಿತು. 

ಹಾಗಿದ್ದರೆ ರಾಜ್ಯದಲ್ಲಿ ಕಂಬಳ ನಿಷೇಧಿಸಿ ಹೈಕೋರ್ಟ್‌ ಆದೇಶ ಹೊರಡಿಸಿದ್ದೇಕೆ?
    ಜಲ್ಲಿಕಟ್ಟು ಕುರಿತು ವಿವಾದ ಉಂಟಾದಾಗ ಕೇಂದ್ರ ಸರ್ಕಾರ ಅಧಿಸೂಚನೆಯೊಂದನ್ನು ಹೊರಡಿಸಿ ಎತ್ತುಗಳನ್ನು ಪ್ರದರ್ಶನಕ್ಕೆ ಅಲ್ಲದ (non-performing) ಪ್ರಾಣಿ ಎಂಬ ವಿಭಾಗದಿಂದ ತೆಗೆದು ಪ್ರದರ್ಶನದ (performing) ಪ್ರಾಣಿ ವಿಭಾಗಕ್ಕೆ ತಂದಿತ್ತು. ಈ ಅಧಿಸೂಚನೆಯನ್ನು ಸುಪ್ರೀಂಕೋರ್ಟ್‌ ರದ್ದುಗೊಳಿ ಸಿತ್ತು. ಅಂದರೆ, ಎತ್ತುಗಳು ಪ್ರದರ್ಶನಕ್ಕೆ ಬಳಸುವ ಪ್ರಾಣಿಗಳು ಅಲ್ಲ ಎಂಬುದನ್ನು ಸುಪ್ರೀಂಕೋರ್ಟ್‌ ಸ್ಪಷ್ಟಪಡಿಸಿತ್ತು. ಇದನ್ನೇ ಆಧಾರವಾಗಿಟ್ಟುಕೊಂಡು ಎತ್ತು ಮತ್ತು ಕೋಣ ಒಂದೇ ಕುಟುಂಬಕ್ಕೆ ಸೇರಿದ ಪ್ರಾಣಿ ಎಂಬ ಕಾರಣಕ್ಕೆ ಹೈಕೋರ್ಟ್‌ ಕೋಣ ಕೂಡ ಪ್ರದರ್ಶನದ ಪ್ರಾಣಿಯಲ್ಲ ಎಂದು ಕಂಬಳ ನಿಷೇಧಿಸಿದೆ.

ಇದನ್ನು ಕೋರ್ಟ್‌ ಗಮನಕ್ಕೆ ತಂದು ನಿಷೇಧ ತೆರವುಗೊಳಿಸಬಹುದಿತ್ತಲ್ಲವೇ?
    ಆ ಪ್ರಯತ್ನ ಆಗಿದೆ. ಪ್ರದರ್ಶನ ಅಥವಾ ಪ್ರದರ್ಶನಕ್ಕೆ ಅಲ್ಲದ ಪ್ರಾಣಿಗಳಲ್ಲಿ ಕೋಣ ಬರುವುದಿಲ್ಲ. ಎತ್ತು ಮತ್ತು ಕೋಣ ಬೇರೆ ಬೇರೆ. ಕಂಬಳ ಹಿಂಸಾತ್ಮಕವಾಗಿರುವುದಿಲ್ಲ. ಅಲ್ಲಿ ಕೋಣಗಳಿಗೆ ಯಾವುದೇ ಗಾಯ ಅಥವಾ ನೋವುಗಳಾಗುವುದಿಲ್ಲ ಎಂದು ಸ್ಪಷ್ಟಪಡಿಸಲಾಗಿದೆ. ಜತೆಗೆ ಪೊಲೀಸ್‌, ತಹಸೀಲ್ದಾರ್‌ ಸಮ್ಮುಖದಲ್ಲಿ ಕಂಬಳ ನಡೆಸಿ ಅದರ ವೀಡಿಯೋ ಚಿತ್ರೀಕರಣ ಮಾಡಿ 
ಕೋರ್ಟ್‌ಗೆ ನೀಡಲಾಗಿದೆ. ಆದರೆ, ರಾಜ್ಯದಲ್ಲಿ ನಡೆಯುವ ಎತ್ತಿನಗಾಡಿ ಓಟದಲ್ಲಿ ಎತ್ತುಗಳಿಗೆ ಹಿಂಸೆಯಾಗುವ ಮಾದರಿ ಕೋಣಗಳಿಗೂ ಹಿಂಸೆಯಾಗುತ್ತದೆ ಎಂಬ ಕಾರಣವನ್ನು ಕೋರ್ಟ್‌ ಮುಂದಿಡುತ್ತಿದೆ. ಹಾಗಾಗಿ ಎತ್ತಿನಗಾಡಿ ಓಟ ಹತ್ತಾರು ಕಿಲೋ ಮೀಟರ್‌ ನಡೆಯುತ್ತದೆ. ಕಂಬಳ ಕೇವಲ 110 ಮೀಟರ್‌ ಮಾತ್ರ ಎಂಬ ಅಂಶವನ್ನೂ ಕೋರ್ಟ್‌ ಗಮನಕ್ಕೆ ತರಲಾಗಿದೆ. 

ಕೋರ್ಟ್‌ ಏಕೆ ಈ ವಾದಗಳನ್ನು ಒಪ್ಪಿಕೊಳ್ಳುತ್ತಿಲ್ಲ.
    ಈ ಹಿಂದೆ ಸರ್ಕಾರ ಕಂಬಳ ನಡೆಸಲು ಅವಕಾಶ ನೀಡಿ ಆದೇಶ ಹೊರಡಿಸಿತ್ತು. ಆದರೆ, ಯಾವಾಗ ಹೈಕೋರ್ಟ್‌ ಕಂಬಳ ನಿಷೇಧಿಸಿ ಆದೇಶ ಹೊರಡಿಸಿತೋ ಆ ಸಂದರ್ಭದಲ್ಲಿ ನ್ಯಾಯಾಂಗ ನಿಂದನೆ ಭೀತಿಯಿಂದ ಸರ್ಕಾರ ಆ ಆದೇಶ ಹಿಂಪಡೆದಿತ್ತು. ಹೀಗಾಗಿ ಕೋರ್ಟ್‌ನಲ್ಲಿ ನಮಗೆ ಹಿನ್ನಡೆಯಾಯಿತು. ಇದೀಗ ಸರ್ಕಾರವೂ ಕಂಬಳದ ಪರವಾಗಿದೆ. ಮುಂದೆ ಕೋರ್ಟ್‌ನಲ್ಲಿ ಕಂಬಳ ನಿಷೇಧ ತೆರವಾಗಬಹುದು.

ಹಿಂದೆ ಜನರಿಗೆ ಯಾವುದೇ ಮನರಂಜನೆ ಇರಲಿಲ್ಲ. ಅದಕ್ಕಾಗಿ ಕಂಬಳದಂತಹ ಮನರಂಜನಾ ಚಟುವಟಿಕೆಗಳನ್ನು ನಡೆಸಲಾಗುತ್ತಿತ್ತು. ಈಗ ಎಲ್ಲಾ ಕಡೆ ಮನರಂಜನೆ ಸಿಗುತ್ತಿದೆ. ಹೀಗಿರುವಾಗ ಪ್ರಾಣಿಗಳನ್ನು ಬಳಸಿ ಏಕೆ ಮನರಂಜನೆ ತೆಗೆದುಕೊಳ್ಳಬೇಕು ಎಂಬ ವಾದವೂ ಇದೆ?
    ಎಲ್ಲಾ ಕಡೆ ಮನರಂಜನೆ ಸಿಗುತ್ತಿದೆ ಎಂಬ ಮಾತ್ರಕ್ಕೆ ನಮ್ಮ ಜಾನಪದ, ಸಂಸ್ಕೃತಿಯನ್ನು ಬಿಟ್ಟುಬಿಡಲು ಸಾಧ್ಯವಿಲ್ಲ. ನಮ್ಮ ದೇಶ ನಿಂತಿರುವುದೇ ವಿಭಿನ್ನ ಸಂಸ್ಕೃತಿಗಳ ನೆಲೆಗಟ್ಟಿನ ಮೇಲೆ. ಅದೇ ರೀತಿ ಕಂಬಳವೂ ನಮ್ಮ ಸಂಸ್ಕೃತಿಯ ಪ್ರತೀಕ. ಕೇವಲ ಟಿವಿ, ಸಿನಿಮಾ ನೋಡಿಕೊಂಡು ಅದನ್ನೇ ಮನರಂಜನೆ ಎಂದು ಹೇಳಿಕೊಂಡರೆ ಮಕ್ಕಳಲ್ಲಿ ಸಂಸ್ಕೃತಿ ಬೆಳೆಯುವುದಾದರೂ ಹೇಗೆ? ಕೋಣಗಳಿಗೂ ತೊಂದರೆ ಇಲ್ಲದ, ಜನರಿಗೂ ಸಮಸ್ಯೆಯಾಗದ ಮನರಂಜನಾ ಕ್ರೀಡೆಯನ್ನು ಈ ರೀತಿ ವ್ಯಾಖ್ಯಾನಿಸುವುದು ಸರಿಯಲ್ಲ.

ಕಂಬಳ ನಡೆಯದಿದ್ದರೆ ಆಗುವ ಸಮಸ್ಯೆ ಏನು?
    ಇದು ಕೇವಲ ಕೋಣಗಳನ್ನು ಓಡಿಸುವುದಕ್ಕೆ ಸೀಮಿತವಾದರೆ ಏನೂ ಆಗುವುದಿಲ್ಲ. ಆದರೆ, ಕಂಬಳ ಎಂಬುದು ಒಂದು ಜಾನಪದ ಕ್ರೀಡೆ. ಕರಾವಳಿ ಸಂಸ್ಕೃತಿಯ ಒಂದು ಭಾಗ. ಅಷ್ಟೇ ಅಲ್ಲ, ಕಂಬಳಕ್ಕೆಂದೇ ಪ್ರತ್ಯೇಕ ತಳಿಯ ಕೋಣಗಳಿವೆ. ಇದು ದೇಶದ ಪುರಾತನ ತಳಿಗಳಲ್ಲಿ ಒಂದು. ಈಗಾಗಲೇ ಕಂಬಳ ತಳಿಯ ಕೋಣಗಳ ಸಂಖ್ಯೆ ಸುಮಾರು 400ಕ್ಕೆ (200 ಜತೆ) ಇಳಿದಿದೆ. ಕಂಬಳ ಇಲ್ಲವಾದರೆ ಈ ಕೋಣಗಳನ್ನು ಯಾರೂ ಸಾಕುವುದಿಲ್ಲ. ಅಲ್ಲಿಗೆ ಸಂಸ್ಕೃತಿಯ ಒಂದು ಅಂಶ ಮತ್ತು ಪುರಾತನ ಕೋಣಗಳ ತಳಿ ಎರಡೂ ನಶಿಸಿದಂತಾಗುತ್ತದೆ. ಸಂಸ್ಕೃತಿ ಉಳಿಸಿ ಬೆಳೆಸಬೇಕಾದರೆ ಕಂಬಳ ನಡೆಯಲೇ ಬೇಕು.

ಸಂದರ್ಶನ
ಪ್ರದೀಪ್‌ ಕುಮಾರ್‌ ಎಂ.

ಟಾಪ್ ನ್ಯೂಸ್

BJp-pro-cow2

Chamarajpete: ಕೆಚ್ಚಲು ಕೊಯ್ದ ಪ್ರಕರಣ: ರಾಜ್ಯಾದ್ಯಂತ ಬಿಜೆಪಿ ಪ್ರತಿಭಟನೆ

infosys

ಮೈಸೂರಿನ ಇನ್ಫೋಸಿಸ್‌ ಕ್ಯಾಂಪಸ್‌ ಚಿರತೆ ಸೆರೆ ಕಾರ್ಯಾಚರಣೆ ಸ್ಥಗಿತ

Varooru1

Hubballi: ವರೂರಿನ ನವಗ್ರಹ ತೀರ್ಥಕ್ಷೇತ್ರದಲ್ಲಿ ಮಹಾಮಸ್ತಕಾಭಿಷೇಕಕ್ಕೆ ವಿಧ್ಯುಕ್ತ ಚಾಲನೆ

CKM–Shoola

Chikkaballapura: “ಈಶ’ದಲ್ಲಿ 54 ಅಡಿ ಎತ್ತರದ ತ್ರಿಶೂಲ ಲೋಕಾರ್ಪಣೆ

Cow-zammer

Chamarajpete: ಕೆಚ್ಚಲು ಕೊಯ್ದ ಕೇಸ್‌; 3 ಲಕ್ಷ ರೂ.ಮೌಲ್ಯದ 3 ಹಸು ಕೊಡಿಸಿದ ಸಚಿವ ಜಮೀರ್‌

Udupi: ಗೀತಾರ್ಥ ಚಿಂತನೆ-157: ಸೂಕ್ಷ್ಮ ಜಗತ್ತೂ, ಸ್ಥೂಲ ಜಗತ್ತೂ ಅನಂತ

Udupi: ಗೀತಾರ್ಥ ಚಿಂತನೆ-157: ಸೂಕ್ಷ್ಮ ಜಗತ್ತೂ, ಸ್ಥೂಲ ಜಗತ್ತೂ ಅನಂತ

Manjeshwar: ಟಿಪ್ಪರ್‌ನೊಳಗೆ ಯುವಕನ ನಿಗೂಢ ಸಾವು

Manjeshwar: ಟಿಪ್ಪರ್‌ನೊಳಗೆ ಯುವಕನ ನಿಗೂಢ ಸಾವು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Kenchappa-Gowda

ಮುಖ್ಯಮಂತ್ರಿ ಬದಲಾವಣೆ ಮಾಡುವುದಾದರೆ ಒಕ್ಕಲಿಗ ಸಮುದಾಯದ ಡಿಕೆಶಿಯನ್ನೇ ನೇಮಿಸಲಿ

EC-Comm-sangreshi1

ಜಿ.ಪಂ.,ತಾ.ಪಂ. ಚುನಾವಣೆ ವಿಳಂಬಕ್ಕೆ ಸರಕಾರವೇ ನೇರ ಹೊಣೆ, ನಾವು ಚುನಾವಣೆಗೆ ಸಿದ್ಧ: ಆಯೋಗ

ಅಪಾಯಕ್ಕೆ ಎದೆಯೊಡ್ಡಿ ವಕ್ಫ್ ವರದಿ ಮಾಡಿದ್ದು ನಾನು, ಅದರಿಂದ ಹಣ ಮಾಡಿದ್ದು ಅನೇಕರು!

ಅಪಾಯಕ್ಕೆ ಎದೆಯೊಡ್ಡಿ ವಕ್ಫ್ ವರದಿ ಮಾಡಿದ್ದು ನಾನು, ಅದರಿಂದ ಹಣ ಮಾಡಿದ್ದು ಅನೇಕರು!

Belagavi: ಅಧಿವೇಶನ ವೇಳೆ 10 ಲಕ್ಷ ಜನರ ಜತೆ ಸುವರ್ಣ ವಿಧಾನಸೌಧಕ್ಕೆ ಮುತ್ತಿಗೆ ಹಾಕುತ್ತೇವೆ…

Belagavi:ಅಧಿವೇಶನ ವೇಳೆ 10 ಲಕ್ಷ ಜನರ ಜತೆ ಸುವರ್ಣವಿಧಾನಸೌಧಕ್ಕೆ ಮುತ್ತಿಗೆ ಹಾಕುತ್ತೇವೆ…

ನಾನೂ ಸೀನಿಯರ್‌ ಲೀಡರ್‌, ರಾಜ್ಯಕ್ಕೆ ದಲಿತ ಸಿಎಂ ಪ್ರಸ್ತಾವ ಬಂದರೆ ಮುಂಚೂಣಿಯಲ್ಲಿರುವೆ

ನಾನೂ ಸೀನಿಯರ್‌ ಲೀಡರ್‌, ರಾಜ್ಯಕ್ಕೆ ದಲಿತ ಸಿಎಂ ಪ್ರಸ್ತಾವ ಬಂದರೆ ಮುಂಚೂಣಿಯಲ್ಲಿರುವೆ

MUST WATCH

udayavani youtube

ಮಿದುಳು ನಿಷ್ಕ್ರಿಯಗೊಂಡಿದ್ದ ಮಹಿಳೆಯ ಅಂಗಾಂಗ ದಾನ

udayavani youtube

ಅಮೇರಿಕಾದಲ್ಲಿ ವೈಕುಂಠ ಏಕಾದಶಿ ಸಂಭ್ರಮ

udayavani youtube

ನಕ್ಸಲರ ಶರಣಾಗತಿಯಲ್ಲಿ ಸರಕಾರದ ನಡೆ ಸಂಶಯ ಮೂಡಿಸುವಂತಿದೆ: ಅಣ್ಣಾಮಲೈ |

udayavani youtube

ಹೇಗಿತ್ತು ಎಂ.ಜಿ.ಎಂ ಅಮೃತ ಮಹೋತ್ಸವ ಸಂಭ್ರಮ

udayavani youtube

ಕೇರಳದ ಉತ್ಸವದ ಆನೆ ರೌದ್ರಾವತಾರ: ಹಲವರಿಗೆ ಗಾಯ | ವಿಡಿಯೋ ಸೆರೆ

ಹೊಸ ಸೇರ್ಪಡೆ

BJp-pro-cow2

Chamarajpete: ಕೆಚ್ಚಲು ಕೊಯ್ದ ಪ್ರಕರಣ: ರಾಜ್ಯಾದ್ಯಂತ ಬಿಜೆಪಿ ಪ್ರತಿಭಟನೆ

infosys

ಮೈಸೂರಿನ ಇನ್ಫೋಸಿಸ್‌ ಕ್ಯಾಂಪಸ್‌ ಚಿರತೆ ಸೆರೆ ಕಾರ್ಯಾಚರಣೆ ಸ್ಥಗಿತ

Varooru1

Hubballi: ವರೂರಿನ ನವಗ್ರಹ ತೀರ್ಥಕ್ಷೇತ್ರದಲ್ಲಿ ಮಹಾಮಸ್ತಕಾಭಿಷೇಕಕ್ಕೆ ವಿಧ್ಯುಕ್ತ ಚಾಲನೆ

CKM–Shoola

Chikkaballapura: “ಈಶ’ದಲ್ಲಿ 54 ಅಡಿ ಎತ್ತರದ ತ್ರಿಶೂಲ ಲೋಕಾರ್ಪಣೆ

Cow-zammer

Chamarajpete: ಕೆಚ್ಚಲು ಕೊಯ್ದ ಕೇಸ್‌; 3 ಲಕ್ಷ ರೂ.ಮೌಲ್ಯದ 3 ಹಸು ಕೊಡಿಸಿದ ಸಚಿವ ಜಮೀರ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.