Interview; ನಾನು ಬಿಜೆಪಿಗೆ ಬರುತ್ತೇನೆ, ಆದರೆ ಒಂದು ಷರತ್ತು…!: ಕೆ.ಎಸ್. ಈಶ್ವರಪ್ಪ
ಪಕ್ಷದ ಶುದ್ಧೀಕರಣಕ್ಕೆ ನನ್ನ ಮಾತು ಕೇಳಲೇಬೇಕು!
Team Udayavani, Jul 10, 2024, 6:57 AM IST
ಭಾರತೀಯ ಜನತಾ ಪಕ್ಷ ಎಂಬುದು ಪ್ರಪಂಚದಲ್ಲೇ ಒಂದು ವಿಶೇಷವಾದ ಸಂಘಟನೆ. ಇದು ವ್ಯಕ್ತಿಗತವಾದದ್ದಲ್ಲ. ಬಿಜೆಪಿ ನನ್ನನ್ನು ಬಿಟ್ಟರೂ, ನಾನು ಬಿಜೆಪಿ ಬಿಟ್ಟಿಲ್ಲ. ನಾನು ರಾಜಕೀಯಕ್ಕೆ ಬಂದದ್ದು ಬಿಜೆಪಿಯಿಂದ. ನನ್ನ ಜೀವನವಿಡೀ ಬಿಜೆಪಿಯೇ. ಸಾಯುವವರೆಗೆ ಬಿಜೆಪಿ ಬಿಟ್ಟು ನಾನೆಂದೂ ಇಲ್ಲ. ಇರುವುದೂ ಇಲ್ಲ. ಅದು ನನಗೆ ತಾಯಿ ಸಮಾನ.
ಇದಿಷ್ಟೂ ಬಿಜೆಪಿಯಿಂದ 6 ವರ್ಷಗಳ ಕಾಲ ಉಚ್ಛಾಟನೆಗೆ ಒಳಗಾಗಿರುವ ಮಾಜಿ ಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ ಅವರ ಮಾತುಗಳು. ಪುತ್ರ ಕಾಂತೇಶ್‌ಗೆ ಹಾವೇರಿ ಟಿಕೆಟ್ ನಿರೀಕ್ಷಿಸಿದ್ದ ಈಶ್ವರಪ್ಪ, ಟಿಕೆಟ್ ಕೈತಪ್ಪುವ ಸುಳಿವು ಸಿಗುತ್ತಿದ್ದಂತೆ ಮಗನಿಗಲ್ಲದಿದ್ದರೂ ನನಗೇ ಟಿಕೆಟ್ ಕೊಡಿ, ನಾನೇ ನಿಲ್ಲುತ್ತೇನೆ ಎಂದಿದ್ದರು. ಆದರೂ ಪಕ್ಷ ಟಿಕೆಟ್ ಕೊಟ್ಟಿರಲಿಲ್ಲ. ಇದರಿಂದ ಬಂಡೆದಿದ್ದ ಈಶ್ವರಪ್ಪ, ಶಿವಮೊಗ್ಗ ಲೋಕಸಭಾ ಕ್ಷೇತ್ರದ ಬಿಜೆಪಿ ಅಧಿಕೃತ ಅಭ್ಯರ್ಥಿ ಬಿ.ವೈ. ರಾಘವೇಂದ್ರ ವಿರುದ್ಧ ತೊಡೆತಟ್ಟಿ ಚುನಾವಣ ಕಣಕ್ಕಿಳಿದಿದ್ದರು. ಪ್ರಧಾನಿ ನರೇಂದ್ರ ಮೋದಿ ಅವರ ಭಾವಚಿತ್ರ ಬಳಸಿ ಪ್ರಚಾರವನ್ನೂ ಮಾಡಿದ್ದರು. ಈ ಕಾರಣಗಳಿಂದ ಪಕ್ಷದಿಂದ ಉಚ್ಛಾಟನೆಯೂ ಆಗಿದ್ದಾರೆ.
ಆದರೀಗ ಪಕ್ಷ ನನ್ನನ್ನು ಬಿಟ್ಟರೂ, ನಾನು ಪಕ್ಷವನ್ನು ಬಿಟ್ಟಿಲ್ಲ ಎನ್ನುವ ಮೂಲಕ ರಾಜ್ಯ ಬಿಜೆಪಿ ರಾಜಕಾರಣದಲ್ಲಿ ಮತ್ತೆ ಚರ್ಚೆ ಹುಟ್ಟುಹಾಕಿದ್ದು, ಪಕ್ಷಕ್ಕೆ ಬರುವಂತೆ ನನಗೆ ಆಹ್ವಾನವಿದೆ. ಆದರೆ ನಾನೇ ಒಂದು ಷರತ್ತು ಹಾಕಿದ್ದೇನೆ ಎಂದಿದ್ದಾರೆ. ಉದಯವಾಣಿ ಪತ್ರಿಕೆ ಜತೆಗೆ ಮಾತನಾಡಿರುವ ಅವರ “ಷರತ್ತು’ ಏನೆಂಬುದನ್ನು “ನೇರಾನೇರ’ದಲ್ಲಿ ಹಂಚಿಕೊಂಡಿದ್ದಾರೆ.
ಪಕ್ಷ ನಿಮ್ಮನ್ನು ಸಂಪರ್ಕಿಸಿದೆಯೋ? ನೀವೇ ವರಿಷ್ಠರನ್ನು ಸಂಪರ್ಕ ಮಾಡಿದ್ದೀರೋ?
ನಾನು ಯಾರ ಹತ್ತಿರವೂ ಹೋಗುವುದಿಲ್ಲ, ಭೇಟಿಯನ್ನೂ ಮಾಡುವುದಿಲ್ಲ. ಜನರ ಸಮಸ್ಯೆಗಳನ್ನು ಪರಿಹಾರ ಮಾಡುವುದೇ ರಾಜಕಾರಣ. ಅದನ್ನು ನಾನು ಮಾಡುತ್ತಿದ್ದೇನೆ. ಮುಂದುವರಿಸುತ್ತೇನೆ. ನನ್ನನ್ನು ಪಕ್ಷಕ್ಕೆ ಕರೆಯುತ್ತಿದ್ದಾರೆ. ಅವರು ಯಾರು? ಯಾರಿಂದ ಆಹ್ವಾನ ಬಂದಿದೆ ಎಂಬುದೆಲ್ಲ ಈಗ ಅನಾವಶ್ಯಕ. ನಾನು ಯಾವ ಕಾರಣಕ್ಕಾಗಿ ಕೆಲವು ನಿರ್ಧಾರ ತೆಗೆದುಕೊಂಡಿದ್ದೆನೋ ಅದರ ಬಗ್ಗೆ ಇತ್ಯರ್ಥ ಮಾಡುವುದಾದರೆ ಮಾತುಕತೆ ಬರುವುದಾಗಿ ಹೇಳಿದ್ದೇನೆ. ಪಕ್ಷ ಶುದ್ಧೀಕರಣದ ವಿಚಾರದಲ್ಲಿ ನನ್ನ ನಿರ್ಧಾರ ಕೇಳುವುದಾದರೆ ಮಾತುಕತೆ ಮಾಡುತ್ತೇನೆ.
ನೀವು ಚುನಾವಣೆಯಲ್ಲಿ ಸ್ಪರ್ಧಿಸಿದ್ದೇಕೆ? ನಿಮ್ಮ ಉದ್ದೇಶವೇನಿತ್ತು?
ಬಿಜೆಪಿ ಎಂಬುದು ಪ್ರಪಂಚದಲ್ಲೇ ವಿಶೇಷವಾದ ಸಂಘಟನೆ. ಇದು ವ್ಯಕ್ತಿಗತವಾದದ್ದಲ್ಲ. ಯಾರೋ ಒಬ್ಬೊಬ್ಬರದ್ದಲ್ಲ. ಇಂಥಾ ಸಂಘಟನೆಗೆ ಕರ್ನಾಟಕದಲ್ಲಿ ಮಾತ್ರ ಬೇರೆ ರೂಪ ಇರಲು ಸಾಧ್ಯವಿಲ್ಲ. ಒಂದು ಕುಟುಂಬದ ಕೈಯಲ್ಲಿ ಪಕ್ಷ ಇರಬಾರದು ಎಂದು ಪ್ರಧಾನಿ ಮೋದಿ ಅವರು ಹಲವು ಬಾರಿ ಹೇಳಿದ್ದಾರೆ. ಇಲ್ಲಿ ಅಪ್ಪ-ಮಕ್ಕಳ ಕೈಯಲ್ಲಿ ಪಕ್ಷವಿದೆ. ಅಪ್ಪನಿಗೊಂದು ಹುದ್ದೆ, ಮಕ್ಕಳಿಬ್ಬರಿಗೂ ಒಂದೊಂದು ಹುದ್ದೆ. ದೇಶದಲ್ಲಿ ಎಲ್ಲಿಯಾದರೂ ಈ ವ್ಯವಸ್ಥೆ ಇದೆಯೇ? ಕರ್ನಾಟಕ ಬಿಜೆಪಿ ಈ ದೇಶದಲ್ಲಿ ಇಲ್ಲವೇ? ಈ ವಿಚಾರ ಚರ್ಚೆ ಆಗಬೇಕು, ಪಕ್ಷ ಶುದ್ಧೀಕರಣ ಆಗಬೇಕು ಎನ್ನುವ ದೃಷ್ಟಿಯಿಂದ ಚುನಾವಣೆಯಲ್ಲಿ ಸ್ಪರ್ಧಿಸಿದ್ದೆ. ಈ ಬಗ್ಗೆ ವರಿಷ್ಠರಿಗೂ ಹೇಳಿದ್ದೆ. ಮಾತನಾಡೋಣ ಎಂದಿದ್ದರು. ಇದು ಒಂದು ದಿನದ ಪ್ರಯತ್ನವಾಗಿರಲಿಲ್ಲ. ಅನಿವಾರ್ಯವಾಗಿ ಸ್ಪರ್ಧಿಸಬೇಕಾಯಿತು.
ನಿಮ್ಮ ಉದ್ದೇಶ ಈಡೇರಿದೆಯೇ? ಚುನಾವಣೆಯಲ್ಲಿ ಗೆಲ್ಲಲಾಗಲಿಲ್ಲವಲ್ಲ?
ಗೆಲ್ಲಬೇಕು ಎನ್ನುವ ಉದ್ದೇಶ ನನಗೆ ಇರಲಿಲ್ಲ. ಹಾಗಿದ್ದಿದ್ದರೆ ಕಾಂಗ್ರೆಸ್‌ನವರೂ ಕರೆದಿದ್ದರು, ಅಖೀಲೇಶ್ ಯಾದವ್ ಕೂಡ ದೂರವಾಣಿ ಕರೆ ಮಾಡಿ ಕರೆದಿದ್ದ. ನನ್ನ ಮೈಯಲ್ಲಿ ಇರುವುದು ಹಿಂದೂ ರಕ್ತ. ನಾನೆಂದೂ ಬಿಜೆಪಿ ಬಿಟ್ಟು ಹೋಗುವುದಿಲ್ಲ ಎಂದು ಅವರೆಲ್ಲರಿಗೂ ತುಂಬಾ ಸ್ಪಷ್ಟವಾಗಿ ಹೇಳಿದ್ದೇನೆ. ನರೇಂದ್ರ ಮೋದಿ, ಭಾರತೀಯ ಜನತಾ ಪಕ್ಷ ಬಿಟ್ಟು ಯಾರೂ ಗೆಲ್ಲಲು ಸಾಧ್ಯವಿಲ್ಲ ಎಂಬುದು ನನಗೆ ಗೊತ್ತಿತ್ತು. ನನ್ನ ಸ್ಪರ್ಧೆಯು ರಾಷ್ಟ್ರ, ರಾಜ್ಯ ಹಾಗೂ ಪರಿವಾರದ ಮಟ್ಟದಲ್ಲಿ ಒಂದು ಚರ್ಚೆಯನ್ನಂತೂ ಹುಟ್ಟು ಹಾಕಿದೆ. ನರೇಂದ್ರ ಮೋದಿ ಇದ್ದೂ, ಪಕ್ಷದ ಚಿಹ್ನೆ ಇದ್ದೂ ನಮ್ಮ ಪರಿಸ್ಥಿತಿ ಎಲ್ಲಿಗೆ ಬಂತು? ಲೋಕಸಭಾ ಚುನಾ ವಣೆಯಲ್ಲಿ 9 ಸ್ಥಾನ ಕಳೆದುಕೊಂಡೆವು, ವಿಧಾನಪರಿಷತ್ ಚುನಾ ವಣೆ ಯಲ್ಲಿ 3 ಸ್ಥಾನ ಕಳೆದುಕೊಂಡೆವು. ಅದಕ್ಕಾಗಿ ಹೇಳುತ್ತಿದ್ದೇನೆ ಇಂತಹ ಸಂದರ್ಭದಲ್ಲಿ ಪಕ್ಷ ಇನ್ನೂ ಹೀನಾಯ ಸ್ಥಿತಿಗೆ ಹೋಗಬಾರದು.
ಪಕ್ಷ ಶುದ್ಧೀಕರಣ ಎಂದರೇನು? ಈ ಹೋರಾಟದಲ್ಲಿ ನೀವು ಒಬ್ಬಂಟಿ ಆಗಿದ್ದೀರಿ ಎನಿಸುವುದಿಲ್ಲವೇ?
ಏನೇ ತೀರ್ಮಾನ ಇದ್ದರೂ ಅಪ್ಪ-ಮಕ್ಕಳೆ ತೆಗೆದುಕೊಳ್ಳುತ್ತಾರೆ. ಇದು ಸರಿಯಲ್ಲ. ಲೋಕಸಭೆ ಚುನಾವಣೆ ಮುಗಿಯುತ್ತಿದ್ದಂತೆ ನೈಋತ್ಯ ಪದವೀಧರ ಕ್ಷೇತ್ರಕ್ಕೆ ಡಾ| ಧನಂಜಯ್ ಸರ್ಜಿಯನ್ನು ಅಭ್ಯರ್ಥಿ ಎಂದು ಘೋಷಿಸಿ ಬಿಟ್ಟರು. ಈ ಬಗ್ಗೆ ಎಲ್ಲಿ ಚರ್ಚೆ ಆಯಿತು? ಇದರಿಂದ ಎಷ್ಟು ಹಿರಿಯ ಕಾರ್ಯಕರ್ತರಿಗೆ ನೋವಾಗಿದೆ ಗೊತ್ತೆ? ನಿನ್ನೆ-ಮೊನ್ನೆ ಬಂದವರಿಗೆ, ಇವರ ಸುತ್ತ ಓಡಾಡುವ ಜಾತಿಯವರಿಗೆ ಕೊಟ್ಟರೆ ಯಾವ ನ್ಯಾಯ ಎಂದು ಎಷ್ಟೋ ಜನ ಪ್ರಶ್ನಿಸಿದ್ದಾರೆ. ಪ್ರಮುಖರೆಲ್ಲ ಪಕ್ಕಕ್ಕೆ ಸರಿದಿದ್ದಾರೆ. ಅದೆಲ್ಲ ಸರಿ ಆಗಬೇಕೆಂದು ಚುನಾವಣೆಗೆ ನಿಂತಿದ್ದೆ. ಅದು ಚರ್ಚೆ ಆಗಿದೆ. ಕೆಲವರು ಬಹಿರಂಗವಾಗಿ ಹೇಳಿಕೊಳ್ಳಲು ತಯಾರಿಲ್ಲ, ಹೆದರುತ್ತಾರೆ. ನನಗ್ಯಾವ ಮುಲಾಜೂ ಇಲ್ಲ. ಈ ವಿಚಾರದಲ್ಲಿ ನಾನು ಒಬ್ಬಂಟಿಯೂ ಅಲ್ಲ. ನನ್ನ ಸ್ಪರ್ಧೆಯನ್ನು ಬೆಂಬಲಿಸಿದ ಅನೇಕರ ಮನಸ್ಸಿನಲ್ಲಿ ನೋವಿತ್ತು.
ನಿಮ್ಮದೇ ಮನಸ್ಥಿತಿ ಹೊಂದಿರುವ ಸದಾನಂದಗೌಡರು ನಿಮ್ಮ ಸ್ಪರ್ಧೆಯನ್ನು ಸರಿಯಲ್ಲ ಎಂದಿದ್ದಾರಲ್ಲ?
ಅನೇಕರು ದೂರವಾಣಿ ಕರೆ ಮಾಡಿ ನನ್ನ ನಿರ್ಧಾರ ಸರಿ ಎಂದಿದ್ದಾರೆ. ಅವರೆಲ್ಲರೂ ನನ್ನ ಜತೆಗೆ ಬರಬೇಕು ಎಂದು ನನ್ನ ಅಪೇಕ್ಷೆ ಇಲ್ಲ. ನನಗೆ ಪಕ್ಷ ಕೊಟ್ಟು ಸಂಸ್ಕಾರದ ಪ್ರಕಾರವೇ ಇದನ್ನು ಶುದ್ಧೀಕರಣ ಮಾಡಬೇಕೆಂದು ಹೊರಟಿದ್ದೇನೆ. ನಾನು ಯಾರ ಹೆಸರನ್ನೂ ಹೇಳಲು ಇಷ್ಟಪಡುವುದಿಲ್ಲ. ಸದಾನಂದಗೌಡರದ್ದು ವೈಯಕ್ತಿಕ ಅಭಿಪ್ರಾಯ ಏನೇ ಇರಲಿ, ನನ್ನನ್ನು ಭೇಟಿ ಮಾಡಿದಾಗ ನನ್ನ ಬಳಿ ವೈಯಕ್ತಿಕವಾಗಿ ಬೇರೆಯೇ ಮಾತನಾಡಿದ್ದಾರೆ. ಅದನ್ನು ಬಹಿರಂಗವಾಗಿ ಹೇಳಲ್ಲ. ನಾನು ಯಾರನ್ನೂ ಜತೆ ಮಾಡಿಕೊಳ್ಳುವುದಿಲ್ಲ. ಒಂದೇ ದಿನಕ್ಕೆ ಪಕ್ಷ ಶುದ್ಧೀ ಕರಣ ಆಗುವುದಿಲ್ಲ. ಇಂತಿಷ್ಟೇ ದಿನದಲ್ಲಿ ಆಗಬೇಕು ಎನ್ನಲು ನಾನ್ಯಾರು. ಆದರೆ ಒಂದಲ್ಲ ಒಂದು ದಿನ ಪ್ರಯತ್ನ ಫಲ ಕೊಟ್ಟೇ ಕೊಡುತ್ತದೆ.
ಪಂಚಾಯತ್ ಚುನಾವಣೆಗಳ ಮೇಲೂ ಇವೆಲ್ಲ ಪರಿಣಾಮ ಬೀರುವುದಿಲ್ಲವೇ?
ಲೋಕಸಭೆ ಚುನಾವಣೆ ಅಥವಾ ಮುಂಬರುವ ಪಂಚಾಯತ್ ಚುನಾವಣೆ ಮತ್ತದರ ಫಲಿತಾಂಶಗಳ ಬಗ್ಗೆ ತೀರ್ಮಾನ ಮಾಡುವುದು ನಾನಲ್ಲ. ಪರಿವಾರದ ಹಿರಿಯರಿದ್ದಾರೆ. ನಾನು ತೆಗೆದುಕೊಂಡ ನಿರ್ಧಾರ ಸರಿ ಇದೆ ಎನ್ನುವವರು ಬೇಗ ಅದಕ್ಕೊಂದು ಮುಕ್ತಿ ತರುತ್ತಾರೆ. ಇಲ್ಲದಿದ್ದರೆ ಇನ್ನಷ್ಟು ಅನುಭವ ಆದ ಮೇಲೆ ಮುಕ್ತಿ ತರುತ್ತಾರೆ ಅಷ್ಟೆ.
ಬಿಜೆಪಿ ನಿಮ್ಮನ್ನು ಉಚ್ಛಾಟಿಸಿದೆ. ಆದರೂ ನಾನು ಬಿಜೆಪಿಯಲ್ಲೇ ಇದ್ದೇನೆ ಎನ್ನುತ್ತೀರಲ್ಲಾ? ಏನಿದರ ಮರ್ಮ?
ನನ್ನ ಜೀವನವಿಡೀ ಬಿಜೆಪಿಯೇ. ನಾನು ರಾಜಕಾರಣಕ್ಕೆ ಬಂದದ್ದೂ ಬಿಜೆಪಿಯಿಂದಲೇ ಅವರು ನನ್ನನ್ನು ಅಮಾನತು ಮಾಡಿದರೂ ಸಾಯುವವರೆಗೆ ಬಿಜೆಪಿ ಬಿಟ್ಟು ನಾನೆಂದೂ ಇಲ್ಲ. ಆದರೆ ನಾನು ಪಕ್ಷದಲ್ಲಿ ಮುಂದುವರಿಯುತ್ತೇನೆ ಎಂದು ಎಲ್ಲಿಯಾದರೂ ಹೇಳಿದ್ದೇನೆಯೇ? ಇಲ್ಲ. ಭಾರತೀಯ ಜನತಾ ಪಕ್ಷದ ವಿಚಾರ, ಸಿದ್ಧಾಂತ ಎಂದಿಗೂ ಮರೆಯುವುದಿಲ್ಲ ಎಂದರ್ಥ. ಅಮಾನತು ಅವರು ಮಾಡಿರಬಹುದು. ಆ ಸಿದ್ಧಾಂತ ನನ್ನ ರಕ್ತದಿಂದ ಹೊರ ಹೋಗಲಾಗಲ್ಲ. ಅದು ನನ್ನ ತಾಯಿ ಸಮಾನ.
ಉದಯವಾಣಿ ಸಂದರ್ಶನ: ಸಾಮಗ ಶೇಷಾದ್ರಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಅಪಾಯಕ್ಕೆ ಎದೆಯೊಡ್ಡಿ ವಕ್ಫ್ ವರದಿ ಮಾಡಿದ್ದು ನಾನು, ಅದರಿಂದ ಹಣ ಮಾಡಿದ್ದು ಅನೇಕರು!
Belagavi:ಅಧಿವೇಶನ ವೇಳೆ 10 ಲಕ್ಷ ಜನರ ಜತೆ ಸುವರ್ಣವಿಧಾನಸೌಧಕ್ಕೆ ಮುತ್ತಿಗೆ ಹಾಕುತ್ತೇವೆ…
ನಾನೂ ಸೀನಿಯರ್ ಲೀಡರ್, ರಾಜ್ಯಕ್ಕೆ ದಲಿತ ಸಿಎಂ ಪ್ರಸ್ತಾವ ಬಂದರೆ ಮುಂಚೂಣಿಯಲ್ಲಿರುವೆ
Congress ಸರಕಾರದಲ್ಲಿ ಹಣಕಾಸು ಸಮಸ್ಯೆಯಿಂದ ಶಾಸಕರ ಬೇಡಿಕೆ ಈಡೇರಿಲ್ಲ ಎನ್ನುವುದು ವಾಸ್ತವ
ಬಿಜೆಪಿಗೆ ಇಡೀ ರಾಜ್ಯವೇ ಒಪ್ಪಿಕೊಳ್ಳುವಂಥ ಸರ್ವಸ್ಪರ್ಶಿ ನಾಯಕತ್ವ ಇನ್ನಷ್ಟೇ ಸಿಗಬೇಕಿದೆ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
BBK11: ವೀಕ್ಷಕರಿಗೆ ಸರ್ಪ್ರೈಸ್; ಮತ್ತೆ ಬಿಗ್ ಬಾಸ್‌ಗೆ ಗೋಲ್ಡ್ ಸುರೇಶ್
BGT 2024: ಮೆಲ್ಬೋರ್ನ್ ಪಂದ್ಯಕ್ಕೂ ಟೀಂ ಇಂಡಿಯಾಗೆ ಗಾಯಾಳುಗಳ ಸಮಸ್ಯೆ
Mohali: ನಾಲ್ಕಂತಸ್ತಿನ ಕಟ್ಟಡ ಕುಸಿದು 20 ವರ್ಷದ ಯುವತಿ ಸಾವು
Vijay Hazare Trophy: ಮತ್ತೊಂದು ದಾಖಲೆ ಬರೆದ 13ರ ಹರೆಯದ ವೈಭವ್ ಸೂರ್ಯವಂಶಿ
BBMP Notice: ವಿರಾಟ್ ಕೊಹ್ಲಿ ಸಹ ಮಾಲಿಕತ್ವದ ರೆಸ್ಟೋರೆಂಟ್‌ಗೆ ಬಿಬಿಎಂಪಿ ನೋಟಿಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.