ಸಿದ್ದರಾಮಯ್ಯ ಹೈಕಮಾಂಡ್‌ಗಿಂತ ಪವರ್‌ಫುಲ್!
Team Udayavani, May 11, 2017, 9:21 AM IST
ಸಿದ್ದರಾಮಯ್ಯ ಅವರನ್ನು ಕಾಂಗ್ರೆಸ್‌ಗೆ ಕರೆತರಲು ಮುಂಚೂಣಿ ಪಾತ್ರ ವಹಿಸಿದ್ದ ಎಚ್.ವಿಶ್ವನಾಥ್ ನಿರ್ಗಮನದ ಹಾದಿಯಲ್ಲಿದ್ದಾರೆ. ಕಾಂಗ್ರೆಸ್‌ನಲ್ಲಿ ತಮಗೆ ಅವಮಾನವಾಗಿದ್ದು ಪಕ್ಷ ಬಿಡಬಹುದು ಎಂದು ಸೂಕ್ಷ್ಮವಾಗಿ ಎಐಸಿಸಿ ಉಸ್ತುವಾರಿ ವೇಣುಗೋಪಾಲ್ ಅವರಿಗೆ ಮೂರು ಪುಟಗಳ ಸುದೀರ್ಘ ಪತ್ರವನ್ನೂ ಬರೆದಿದ್ದಾರೆ. ನಿಜಕ್ಕೂ ಎಚ್.ವಿಶ್ವನಾಥ್ ಹಾಗೂ ಸಿದ್ದರಾಮಯ್ಯ ನಡುವೆ ನಡೆದಿದ್ದೇನು? ಜೆಡಿಎಸ್ ಹಾಗೂ ಆ ಪಕ್ಷದ ನಾಯಕರನ್ನು ಟೀಕಿಸುತ್ತಿದ್ದ ವಿಶ್ವನಾಥ್ ಈಗ ಅದೇ ಪಕ್ಷ ಅಪ್ಪಿಕೊಳ್ಳಲು ಮುಂದಾಗಿರುವುದು ರಾಜಕೀಯದಲ್ಲಿ ಏನಾದರೂ ಆಗಬಹುದು ಎಂಬುದಕ್ಕೆ ಉದಾಹರಣೆ. ಪ್ರಸಕ್ತ ವಿದ್ಯಮಾನಗಳ ಬಗ್ಗೆ ವಿಶ್ವನಾಥ್ ಜತೆ “ನೇರಾ-ನೇರ’ ಮಾತುಕತೆಗೆ ಇಳಿದಾಗ…
ಸರ್, ನೀವು ಕಾಂಗ್ರೆಸ್ ಬಿಡ್ತೀರಂತೆ?
ಹಾಗಂತ ನಾನೆಲ್ಲೂ ಇನ್ನೂ ಹೇಳಿಲ್ಲವಲ್ಲ.
ಎಚ್.ಡಿ. ಕುಮಾರಸ್ವಾಮಿಯವರೇ ವಿಶ್ವನಾಥ್ ಬರ್ತಾರೆ ಅಂತ ಹೇಳಿದ್ದಾರಲ್ಲಾ?
ಇರಬಹುದು. ಆದರೆ, ನಾನು ಈ ಕ್ಷಣದವರೆಗೂ
ಕಾಂಗ್ರೆಸ್‌ನಲ್ಲೇ ಇದ್ದೇನೆ.
ಎಐಸಿಸಿ ಉಸ್ತುವಾರಿಗೆ ಬರೆದಿರುವ ಪತ್ರದಲ್ಲೇ ಪಕ್ಷ ಬಿಡಬಹುದು ಎಂದು ಹೇಳಿದ್ದೀರಲ್ಲ?
ಬಿಡಬಹುದು ಎಂದು ಹೇಳಿದ್ದೇನೆ, ಬಿಡುತ್ತೇನೆ ಎಂದಿಲ್ಲ.
ಹಾಗಾದರೆ, ಹೈಕಮಾಂಡ್ ನಿಮ್ಮ ನೋವು ಆಲಿಸುತ್ತದೆ ಎಂಬ ಆಶಾವಾದ ಇದೆ ಅಂದಾಯ್ತು?
ರಾಜಕಾರಣದಲ್ಲಿ ಆಶಾವಾದ ಇರಲೇಬೇಕು. ಅದೇ ಸ್ಫೂರ್ತಿ.
ಎಐಸಿಸಿ ಉಸ್ತುವಾರಿ ವೇಣುಗೋಪಾಲ್ ಬಳಿ ಏನು ಹೇಳಿದಿರಿ?
ವೇಣುಗೋಪಾಲ್ ನನ್ನ ಹಳೆಯ ಸ್ನೇಹಿತರು.
ಸಂಸತ್‌ನಲ್ಲಿ ಅಕ್ಕ-ಪಕ್ಕ ಕುಳಿತುಕೊಳ್ಳುತ್ತಿದ್ದೆವು. ರಾಜ್ಯದ ಉಸ್ತುವಾರಿಯಾಗಿ ನೇಮಕಗೊಂಡಿದ್ದಾರೆ. ಅವರ ಬಳಿ ಪಕ್ಷದ ಇಂದಿನ ಸ್ಥಿತಿಗತಿ ಹೇಳಿದ್ದೇನೆ. ಮೂರು ಪುಟದ ಪತ್ರವನ್ನೂ ಕೊಟ್ಟಿದ್ದೇನೆ.
ವೇಣುಗೋಪಾಲ್ ಏನು ಹೇಳಿದರು?
ನೀವು ಕಾಂಗ್ರೆಸ್‌ನ ಹಿರಿಯ ನಾಯಕರು. ಪಕ್ಷ ಬಿಡುವ ಆತುರದ ನಿರ್ಧಾರ ತೆಗೆದುಕೊಳ್ಳಬೇಡಿ. ಮೇಡಂ ಬಳಿ ಮಾತನಾಡುತ್ತೇನೆ ಎಂದು ತಿಳಿಸಿದ್ದಾರೆ.
ಸರ್, ನೇರವಾಗಿ ಹೇಳಿಬಿಡಿ, ಕಾಂಗ್ರೆಸ್‌ನಲ್ಲಿ ಇರಿ¤àರೋ, ಜೆಡಿಎಸ್ ಸೇರಿ¤ರೋ?
ಸದ್ಯಕ್ಕೆ ನಾನು ಕಾಂಗ್ರೆಸ್‌ನಲ್ಲಿದ್ದೇನೆ. ಮುಂದೇನು ಎಂಬುದು ತೀರ್ಮಾನದ ನಂತರ ಗೊತ್ತಾಗುತ್ತದೆ.
ನಿಮ್ಮ ಕೋಪ ಯಾರ ಮೇಲೆ?
ಹಿರಿತನ, ಅನುಭವ, ಪಕ್ಷ ಸೇವೆ ಪರಿಗಣಿಸದ ಮನಸ್ಥಿತಿಗಳ ಮೇಲೆ.
ಅದು ಯಾರು?
ಪಕ್ಷ ಮುನ್ನಡೆಸುವವರು, ಸರ್ಕಾರದ ನೇತೃತ್ವ ವಹಿಸಿರುವವರು.
ಹಾಗಾದರೆ ನಿಮಗೆ ಸಿದ್ದರಾಮಯ್ಯ ಮೇಲೆ ಸಿಟ್ಟಾ?
ವೈಯಕ್ತಿಕವಾಗಿ ನನಗೆ ಸಿದ್ದರಾಮಯ್ಯ ಅವರ ಮೇಲೆ ಕೋಪ ಇಲ್ಲ. ಆದರೆ, ಯಾರೂ ಪ್ರಶ್ನಿಸಲೇಬಾರದು ಎಂಬ ಅವರ ಧೋರಣೆ ಬಗ್ಗೆ ಅಸಮಾಧಾನ ಇದೆ. ಸಿದ್ದರಾಮಯ್ಯ ಮೊದಲಿನಂತಿಲ್ಲ. ಅವರ ವರ್ತನೆ, ಧೋರಣೆ, ಮಾತು ಎಲ್ಲವೂ ಬದಲಾಗಿದೆ. ಅವರ ಸುತ್ತ “ಜೀ ಹುಜೂರ್‌ಗಳ’ ಕೂಟ ಸೇರಿಕೊಂಡಿದೆ. ಅವರ ಮಾತೇ ಇವರಿಗೆ ವೇದವಾಕ್ಯವಾಗಿದೆ. ಜನಾಭಿಪ್ರಾಯ ಏನಿದೆ? ಸರ್ಕಾರದ ಬಗ್ಗೆ, ಕಾರ್ಯಕ್ರಮಗಳ ಬಗ್ಗೆ ಜನರ ಒಲವು ಹೇಗಿದೆ ಎಂಬುದು ಅವರಿಗೆ ಗೊತ್ತಾಗುತ್ತಿಲ್ಲ. ಬೇರೆಯವರು ಹೇಳಿದರೆ ಕೇಳುವ ವ್ಯವಧಾನವೂ ಇಲ್ಲ.
ಕಾರಣ ಏನಿರಬಹುದು?
ಪವರ್. ನೋಡಿ, ಅಧಿಕಾರ ಎಂಬುದು ಇದ್ದಾಗ ಈ ರೀತಿ ಆಗುತ್ತದೆ. ಆದರೂ ಅದನ್ನು ಮೀರಿ ತಮ್ಮತನ ಕಳೆದುಕೊಳ್ಳಬಾರದಿತ್ತು. ಆದರೆ, ದುರದೃಷ್ಟವಷಾತ್ ಸಿದ್ದರಾಮಯ್ಯ ಅವರು ವರ್ತುಲ ಬಿಟ್ಟು ಬರುತ್ತಿಲ್ಲ. ಇದು ನಿಜಕ್ಕೂ ಬೇಸರದ ಸಂಗತಿಯೂ ಹೌದು.
ಇರಬಹುದು. ಆದರೆ, ಕಾಂಗ್ರೆಸ್‌ನಲ್ಲಿ ಹೈಕಮಾಂಡ್ ಸುಪ್ರೀಂ ಅಲ್ಲವೇ?
ಸದ್ಯಕ್ಕೆ ಹೈಕಮಾಂಡ್ ಪವರ್‌ಫುಲ್ ಇಲ್ಲ..ಸಿದ್ದರಾಮಯ್ಯ ಅವರೇ ಹೈಕಮಾಂಡ್ ಆಗಿದ್ದಾರೆ.
ಕಾಂಗ್ರೆಸ್‌ಗೆ ಸಿದ್ದರಾಮಯ್ಯ ಅಷ್ಟು ಅನಿವಾರ್ಯವಾ?
ಅಧಿಕಾರ ಇದೆಯಲ್ಲ. ಹೀಗಾಗಿ, ಅನಿವಾರ್ಯ ಆಗಿದ್ದಾರೆ. ಸಿದ್ದರಾಮಯ್ಯ ಅವರಿಗೂ ಯಾರೂ ಬೇಕಿಲ್ಲ, ಅನಿವಾರ್ಯವೂ ಅಲ್ಲ. ಆದರೆ ಅಧಿಕಾರ ಹೋದ ನಂತರ ಸಿದ್ದರಾಮಯ್ಯ ಅವರಿಗೆ ಬೇರೆಯವರು ಅನಿವಾರ್ಯ ಆಗ್ತಾರೆ ಎಂಬುದು ನೆನಪಿಡಬೇಕು.
ಸಿದ್ದರಾಮಯ್ಯ ಕಾಂಗ್ರೆಸ್‌ಗೆ ಬರಲು ನೀವೇ ಕಾರಣಕರ್ತರಲ್ಲವೇ?
ಹೌದು. ಆಗ ನಾನು ಬೇಕಿದ್ದೆ. ಈಗ ಬೇಡವಾಗಿದ್ದೇನೆ. ನಾನು ಅಧಿಕಾರ ಬಯಸಿದವನಲ್ಲ, ಆದರೆ, ಆತ್ಮಗೌರವಕ್ಕೆ ಧಕ್ಕೆ ಬಂದರೆ ಸಹಿಸಿಕೊಳ್ಳುವುದು ಹೇಗೆ? ಪಕ್ಷದ ಕೆಲಸ ಮಾಡಲು ಸಿದ್ಧ ಎಂದರೂ ಅವಕಾಶ ಇಲ್ಲ. ಪಕ್ಷಕ್ಕೆ ನಮ್ಮ ಹಿರಿತನ ಬಳಸಿಕೊಳ್ಳಿ ಎಂದು ಬೇಡಿದರೂ ಕೇಳಿಸಿಕೊಳ್ಳು ವುದಿಲ್ಲ ಅಂದರೆ ಹೇಗೆ?
ಅವರ ಬಳಿ ಈ ಎಲ್ಲ ವಿಚಾರಗಳ ಬಗ್ಗೆ ನೇರವಾಗಿ ಮಾತನಾಡಬಹುದಿತ್ತಲ್ಲಾ?
ಎಲ್ಲಿ ಸಾಧ್ಯ? ಮಾತನಾಡಿದರೂ ಪ್ರಯೋಜನವೇನು? ಯಾರೂ ಪ್ರಶ್ನಿಸಬಾರದು ಎಂಬ ಮನಸ್ಥಿತಿಯಲ್ಲಿ ಅವರಿ ದ್ದಾರೆ. ಅವರ ಸುತ್ತ ಕೋಟೆ ಕಟ್ಟಿಕೊಂಡಿದ್ದಾರೆ. ಚಾಣಾಕ್ಷ ರಾಜಕಾರಣಿ ರಾಮಕೃಷ್ಣ ಹೆಗಡೆ ಅವರಂತವರ ಕಾಲದಲ್ಲೂ ಸಲಹೆ-ಸೂಚನೆ ನೀಡಲು ಆಡಳಿತ, ಅನುಭವ, ಹಿರಿತನವುಳ್ಳ ಚಿಂತಕರ ಚಾವಡಿ ಇತ್ತು.
ಹಾಗಾದರೆ, ಸಿದ್ದರಾಮಯ್ಯ ಅವರ ಬಳಿ ಚಿಂತಕರ ಚಾವಡಿ ಇಲ್ಲವೇ?
ಇದ್ದಾರಲ್ಲಾ, ಗೋವಿಂದರಾಜು..ವಗೈರೆ…
ನಿಮ್ಮನ್ನು ವಿಧಾನಪರಿಷತ್ ಸದಸ್ಯರನ್ನಾಗಿ ಮಾಡಲಿಲ್ಲ ಎಂದು ಕೋಪವಂತೆ?
ವಿಧಾನಪರಿಷತ್‌ಗೆ ಆಯ್ಕೆ ಮಾಡಿ ಎಂದು ಕೇಳಿದ್ದುಂಟು. ಆದರೆ, ಆ ಸ್ಥಾನ ಸಿಗಲಿಲ್ಲ ಎಂದು ಕೊರಗುವನಲ್ಲ ನಾನು. ಸ್ಥಾನ ನನಗೆ ಮುಖ್ಯವಲ್ಲ. ಸ್ವಾಭಿಮಾನ ಮುಖ್ಯ.
ಅಧಿಕಾರದ ಆಸೆಯಿಲ್ಲ ಅಂತಾದರೆ ಅಸಮಾಧಾನದ ಪ್ರಶ್ನೆಯೇ ಬರುವುದಿಲ್ಲವಲ್ಲಾ?
ನೋಡಿ, ನಾನು 1969ರಿಂದಲೇ ಸಾರ್ವಜನಿಕ ಜೀವನದಲ್ಲಿ ದ್ದೇನೆ. ನಾಲ್ಕು ದಶಕಗಳ ಕಾಲ ಕಾಂಗ್ರೆಸ್ ಪಕ್ಷಕ್ಕೆ ನನ್ನನ್ನು ಅರ್ಪಿಸಿಕೊಂಡಿದ್ದೇನೆ. ನಾನೊಬ್ಬನೇ ಅಲ್ಲ, ಪಕ್ಷದಲ್ಲಿರುವ ಹಿರಿಯರಿಗೆ ಗೌರವ ಕೊಡಿ ಎಂದು ಕೇಳುತ್ತಿದ್ದೇನೆ.
ಪಕ್ಷದಲ್ಲಿ ಹಿರಿಯ ನಾಯಕ ಸ್ಥಾನಮಾನ ಇದೆಯಲ್ಲಾ?
ಹಿರಿಯ ನಾಯಕ ಎನ್ನುವುದು 4 ದಶಕಗಳ ರಾಜಕಾರಣದ ಅನುಭವದಿಂದ ಬಂದಿರುವುದು. ಅದಕ್ಕೆ ತಕ್ಕಂತೆ ಪಕ್ಷದಲ್ಲಿ ಪ್ರಮುಖ ತೀರ್ಮಾನದ ಸಂದರ್ಭದಲ್ಲಿ ಪರಿಗಣಿಸಬೇಕಲ್ಲವೇ? ಇಷ್ಟು ವರ್ಷ ಕಾಂಗ್ರೆಸ್‌ಗೆ ದುಡಿದ ನಾನು ಗೌರವಯುತ ನಿರ್ಗಮನ ಬಯಸುವುದು ತಪ್ಪಾ?
ವಿಶ್ವನಾಥ್ ಒಬ್ಬರಿಗೆ ಹೀಗಾಗಿದೆಯಾ?
ಅಯ್ಯೋ, ಎಐಸಿಸಿ ಉಸ್ತುವಾರಿ ವೇಣುಗೋಪಾಲ್ ಅವರಿಗೆ ಸಲ್ಲಿಕೆಯಾಗಿರುವ ದೂರುಗಳು ನೋಡಿದರೆ ಗೊತ್ತಾಗುವುದಿಲ್ಲವೇ? ಸತೀಶ್ ಜಾರಕಿಹೊಳಿ, ಮಾಲೀಕಯ್ಯ ಗುತ್ತೇದಾರ್ ಅವರ ಸ್ಥಿತಿಯೂ ಇದೇ ಅಲ್ಲವೇ? ಸಿದ್ದರಾಮಯ್ಯ ಕಷ್ಟಕಾಲದಲ್ಲಿದ್ದಾಗ ಸಹಾಯ ಮಾಡಿದವರು ಸತೀಶ್ ಜಾರಕಿಹೊಳಿ. ಆದರೆ, ಅವರ ಕುಟುಂಬದಲ್ಲೇ ಬಿರುಕು ತಂದುಬಿಟ್ಟರು ಸಿದ್ದರಾಮಯ್ಯ.
ನಿಮಗೆ ಜೆಡಿಎಸ್‌ನಲ್ಲಿ ಹುಣಸೂರು ಟಿಕೆಟ್ ಖಾತ್ರಿ ಆಗಿದೆಯಂತೆ?
ಅಂತಹ ಚರ್ಚೆಯೇನೂ ನಡೆದಿಲ್ಲ.
ಯಡಿಯೂರಪ್ಪ ನಿಮ್ಮನ್ನು ಸಂಪರ್ಕಿಸಿದ್ದರಂತೆ?
ಯಡಿಯೂರಪ್ಪ ಸಂಪರ್ಕಿಸಿದ್ದು ನಿಜ. ಆದರೆ, ನಾನು ಇನ್ನೂ ಯಾವುದೇ ತೀರ್ಮಾನ ಕೈಗೊಂಡಿಲ್ಲ. ವೈಯಕ್ತಿಕ ಸ್ನೇಹ ಹಿನ್ನೆಲೆಯಲ್ಲಿ ಯಡಿಯೂರಪ್ಪ ಮಾತನಾಡಿದ್ದಾರೆ.
ಅಂದರೆ ನಿಮ್ಮ ಬಳಿ ಆಪ್ಶನ್‌ಗಳಿವೆ ಎಂದಾಯ್ತು?
ನೋಡಿ, ನಾನು ಕಾಂಗ್ರೆಸ್ ತ್ಯಜಿಸಿದ ಮೇಲಷ್ಟೇ ಮುಂದಿನ ಪ್ರಶ್ನೆಯಲ್ಲವೇ. ಕಾದು ನೋಡಿ ನಿಮಗೆ ಗೊತ್ತಾಗುತ್ತದೆ.
ಸಿದ್ದರಾಮಯ್ಯ ಅವರು ಈಗಲೂ ನಿಮ್ಮ ಜತೆ ಮಾತನಾಡಿದರೆ ಪಕ್ಷದಲ್ಲೇ ಉಳಿಯುತ್ತೀರಾ?
ಮೊದಲು ಮಾತನಾಡಲಿ.
ಸಿದ್ದರಾಮಯ್ಯ ಮಾತನಾಡಬಹುದು ಎಂಬ ವಿಶ್ವಾಸ ನಿಮಗೆ ಇದೆಯಾ?
ನೋಡೋಣ. ಹಿಂದಿನದು ನೆನಪಿದ್ದರೆ ಮಾತನಾಡಬಹುದು.
ಸಂಸದ ಧ್ರುವನಾರಾಯಣ್ ಸಂಧಾನ ಮಾತುಕತೆಗೆ ಬಂದಿದ್ರಂತೆ?
ಸ್ನೇಹಿತನಾಗಿ ಬಂದು ಮಾತನಾಡಿದರು. ನಾನೂ ಅವರಿಗೆ ಎಲ್ಲವನ್ನೂ ತಿಳಿಸಿದ್ದೇನೆ. ಅವರಿಗೂ ಎಲ್ಲವೂ ಗೊತ್ತಿದೆ.
ಇಷ್ಟು ವರ್ಷ ಕಾಂಗ್ರೆಸ್‌ನಲ್ಲಿದ್ದು ಬೇರೆ ಪಕ್ಷಕ್ಕೆ ಹೋಗಲು ಮನಸ್ಸು ಒಪ್ಪುತ್ತಾ?
ಮನಸ್ಸಿಗೆ ಘಾಸಿ ಆದಾಗ ಬೇರೆ ದಾರಿ ಏನಿರುತ್ತದೆ. ಅನಿವಾರ್ಯ ಸಂದರ್ಭದಲ್ಲಿ ಮೈಂಡ್‌ಸೆಟ್ ಬದಲಾಯಿಸಿ ಕೊಳ್ಳಬೇಕಾಗುತ್ತದೆ.
ನಿಮ್ಮ-ಸಿದ್ದರಾಮಯ್ಯ ನಡುವಿನ ಜಗಳಕ್ಕೆ ಬೇರೆ ಕಾರಣವೂ ಇದೆ ಅಂತಾರಲ್ಲಾ ?
ಅಂಥದ್ದೇನಿಲ್ಲ. ಪಕ್ಷಕ್ಕೆ ಕರೆತಂದು ಹಿರಿತನ ಬಿಟ್ಟುಕೊಟ್ಟ ನನ್ನ ಬಗ್ಗೆ ಕನಿಷ್ಠ ಕಾಳಜಿ ಸೌಜನ್ಯ ತೋರಿಸಿಲ್ಲವಲ್ಲ ಎಂಬ ನೋವು. ಉಪ ಚುನಾವಣೆಯಲ್ಲಿ ಆ ಭಾಗದ ಮುಖಂಡನಾದ ನನ್ನ ಭಾವಚಿತ್ರ ಸಹ ಬ್ಯಾನರ್‌ನಲ್ಲಿ ಹಾಕಲಿಲ್ಲ, ಅಂತಹ ತಪ್ಪು ನಾನೇನು ಮಾಡಿದ್ದೆ?
ಎಸ್.ಎಂ.ಕೃಷ್ಣ ಪಕ್ಷ ಬಿಟ್ಟಿದ್ದಾರೆ. ನೀವು ನಿರ್ಗಮನ ಹಾದಿಯಲ್ಲಿದ್ದೀರಿ? ಜನಾರ್ಧನ ಪೂಜಾರಿ, ಜಾಫರ್ ಷರೀಫ್ ಆಗ್ಗಾಗ್ಗೆ ಅಸಮಾಧಾನ ಹೊರಹಾಕ್ತಿದ್ದಾರೆ?
ನಿಮ್ಮ ಪ್ರಶ್ನೆಯಲ್ಲೇ ಉತ್ತರ ಇದೆಯಲ್ಲಾ. ಆ ಮೂವರು ನಾಯಕರು ಕಾಂಗ್ರೆಸ್ ಕಟ್ಟಿದವರೇ. ಆ ಮೂವರು ನಾಯಕರ ಜತೆ ನಾನೂ ಕೆಲಸ ಮಾಡಿದ್ದೇನೆ. ಪಕ್ಷ ಕಟ್ಟಿದ್ದೇನೆ. ಪಕ್ಷ ಕಟ್ಟಿದವರ ಸ್ಥಿತಿ ಎಲ್ಲಿಗೆ ಬಂದಿದೆ ನೋಡಿ.
ಹಾಗಾದರೆ ಕಾಂಗ್ರೆಸ್‌ಗೆ ರಾಜ್ಯದಲ್ಲಿ ಭವಿಷ್ಯ ಇಲ್ಲವೇ?
ಅದನ್ನು ಕಾಲ ನಿರ್ಧರಿಸುತ್ತದೆ.
ಸರ್ಕಾರದಲ್ಲಿ ಕ್ರಿಮಿನಲ್ ಸಚಿವರು ಇದ್ದಾರೆ ಅಂತ ಆರೋಪಿಸಿದಿರಿ, ಯಾರವರು?
ಅದನ್ನು ನಾನೇ ಹೇಳಬೇಕಾ. ಇಡೀ ರಾಜ್ಯಕ್ಕೆ ಗೊತ್ತಿದೆ.
ಕೊನೆಯ ಪ್ರಶ್ನೆ, ನೀವು ಜೆಡಿಎಸ್ ಹಾಗೂ ಆ ಪಕ್ಷದ ನಾಯಕರನ್ನು ಟೀಕಿಸುತ್ತಿದ್ದವರು. ಅದೇ ಪಕ್ಷ ಸೇರುವುದು ಮುಜುಗರವಾಗುವುದಿಲ್ಲವೇ?
ನಾನು ವೈಯಕ್ತಿಕವಾಗಿ ಎಂದೂ ಯಾರ ಬಗ್ಗೆಯೂ ಟೀಕಿಸಿಲ್ಲ. ಆಯಾ ಸಂದರ್ಭದ ರಾಜಕೀಯ ವಿದ್ಯಮಾನಗಳ ವಿಚಾರದಲ್ಲಿ ನಿಲುವು-ಒಲವು ಕುರಿತು ನನ್ನ ಅಭಿಪ್ರಾಯ ವ್ಯಕ್ತಪಡಿಸಿದ್ದೇನೆ. ಅದು ವ್ಯಕ್ತಿಗತ ಟೀಕೆಯಲ್ಲ. ಪರಿಸ್ಥಿತಿ, ಸನ್ನಿವೇಶ, ಕಾಲ ಬದಲಾಗುತ್ತಲೇ ಇರುತ್ತದೆ.
ಹಾಗಾದರೆ “ಹಳ್ಳಿಹಕ್ಕಿ’ ತೆನೆ ಹೊರಲು ಸಿದ್ಧ ಅಂತಾಯ್ತು?
ನೋ ಕಾಮೆಂಟ್ಸ್, ರೈಟ್ ನೌ ಐ ಆ್ಯಮ್ ಇನ್ ಕಾಂಗ್ರೆಸ್ (ಮುಗುಳ್ನಗೆ)
ಪಕ್ಷಕ್ಕೆ ಜೀವನವನ್ನೇ ಸಮರ್ಪಿಸಿಕೊಂಡ ಹಿರಿಯರ ಮನಸ್ಸಿಗೆ ನೋವು ಉಂಟಾಗಬಾರದಿತ್ತು. ಅಂಥ ವಾತಾವರಣ ನಿರ್ಮಾಣಕ್ಕೆ ಅವಕಾಶವೂ ಕೊಡಬಾರದಿತ್ತು. ಅಧಿಕಾರಕ್ಕೆ ಬರಲು ಕಾರಣರಾದವರನ್ನು ನಿರ್ಲಕ್ಷಿಸುವುದು ಸಂಸ್ಕೃತಿಯಲ್ಲ. ಜೆಡಿಎಸ್ ಬಿಟ್ಟು ಕಷ್ಟ ಕಾಲದಲ್ಲಿದ್ದಾಗ ಇದ್ದವರು ಯಾರು? ಈಗ ತಮ್ಮನ್ನು ಸುತ್ತುವರಿದಿರುವವರು ಯಾರು? ಎಂಬ ಬಗ್ಗೆ ಸಿದ್ದರಾಮಯ್ಯ ಒಮ್ಮೆ ಆತ್ಮಾವಲೋಕನ ಮಾಡಿಕೊಳ್ಳಲಿ..
ಸಂದರ್ಶನ: ಎಸ್.ಲಕ್ಷ್ಮಿನಾರಾಯಣ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಜಿ.ಪಂ.,ತಾ.ಪಂ. ಚುನಾವಣೆ ವಿಳಂಬಕ್ಕೆ ಸರಕಾರವೇ ನೇರ ಹೊಣೆ, ನಾವು ಚುನಾವಣೆಗೆ ಸಿದ್ಧ: ಆಯೋಗ
ಅಪಾಯಕ್ಕೆ ಎದೆಯೊಡ್ಡಿ ವಕ್ಫ್ ವರದಿ ಮಾಡಿದ್ದು ನಾನು, ಅದರಿಂದ ಹಣ ಮಾಡಿದ್ದು ಅನೇಕರು!
Belagavi:ಅಧಿವೇಶನ ವೇಳೆ 10 ಲಕ್ಷ ಜನರ ಜತೆ ಸುವರ್ಣವಿಧಾನಸೌಧಕ್ಕೆ ಮುತ್ತಿಗೆ ಹಾಕುತ್ತೇವೆ…
ನಾನೂ ಸೀನಿಯರ್ ಲೀಡರ್, ರಾಜ್ಯಕ್ಕೆ ದಲಿತ ಸಿಎಂ ಪ್ರಸ್ತಾವ ಬಂದರೆ ಮುಂಚೂಣಿಯಲ್ಲಿರುವೆ
Congress ಸರಕಾರದಲ್ಲಿ ಹಣಕಾಸು ಸಮಸ್ಯೆಯಿಂದ ಶಾಸಕರ ಬೇಡಿಕೆ ಈಡೇರಿಲ್ಲ ಎನ್ನುವುದು ವಾಸ್ತವ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.