ಗೂಂಡಾಗಳ ಕೈಗೆ ಕಾನೂನು ಕೊಟ್ಟಿದೆ ಸರ್ಕಾರ


Team Udayavani, Feb 23, 2018, 11:13 AM IST

r-ashok.jpg

ರಾಜ್ಯದಲ್ಲಿ ಹಿಂದೂ ಕಾರ್ಯಕರ್ತರ ಹತ್ಯೆ ವಿಚಾರ ಮರೆಯಾಗುತ್ತಿದ್ದಂತೆ ಇದೀಗ ವಿದ್ವತ್‌ ಎಂಬ ಯುವಕನ ಮೇಲೆ ಕಾಂಗ್ರೆಸ್‌ ಶಾಸಕರೊಬ್ಬರ ಪುತ್ರ ಮತ್ತು ಆತನ ಸಹಚರರಿಂದ ಹಲ್ಲೆ, ಕಾಂಗ್ರೆಸ್‌ ಮುಖಂಡರೊಬ್ಬರಿಂದ ಬಿಬಿಎಂಪಿಗೆ ಪೆಟ್ರೋಲ್‌ ಸುರಿದು ಬೆಂಕಿ ಹಚ್ಚುವ ಬೆದರಿಕೆ ನಡೆದಿದೆ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ ಎಂಬ ಆರೋಪ ಸಾಮಾನ್ಯವಾಗಿದೆ. ಈ ಎಲ್ಲಾ ವಿಚಾರಗಳ ಬಗ್ಗೆ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರದಲ್ಲಿದ್ದಾಗ ಉಪಮುಖ್ಯಮಂತ್ರಿಯಾಗಿದ್ದ, ಗೃಹ ಖಾತೆಯನ್ನೂ ನಿಭಾಯಿಸಿದ್ದ ಆರ್‌.ಅಶೋಕ್‌ ಅವರೊಂದಿಗೆ ಉದಯವಾಣಿ “ನೇರಾನೇರ’ ಮಾತಿಗಿಳಿದಾಗ…

*ನೀವು ಗೃಹ ಸಚಿವರಾಗಿದ್ದವರು, ಪೊಲೀಸ್‌ ಇಲಾಖೆಯಲ್ಲಿ ನಿಮ್ಮ ಸರ್ಕಾರದ ಅವಧಿಯಲ್ಲಿದ್ದವರೇ ಈಗಲೂ ಇದ್ದಾರೆ. ಕಾನೂನು ಸುವ್ಯವಸ್ಥೆ ಕಾಪಾಡುವವರು ಅವರೇ ಆಗಿರು ವಾಗ ಈಗೇಕೆ ಕಾನೂನು ಸುವ್ಯವಸ್ಥೆ ಸರಿಯಿಲ್ಲ ಎನ್ನುತ್ತೀರಿ?

ಹೌದು, ಬಹಳಷ್ಟು ಪ್ರಕರಣಗಳನ್ನು ಚಾಣಾಕ್ಷತನದಿಂದ ನಿಭಾಯಿಸಿ ಆರೋಪಿಗಳ ಮೇಲೆ ಕ್ರಮಕೈಗೊಂಡ ಅನೇಕ ಪೊಲೀಸರು ಇದ್ದಾರೆ. ಆದರೆ ಯಾರು ಕಾಂಗ್ರೆಸ್‌ನವರ ಪರವಾಗಿದ್ದಾರೆ, ಅವರ ಸೇವಕರಾಗಿರುತ್ತಾರೆ ಅಂಥವರಿಗೆ ಮಾತ್ರ ಒಳ್ಳೆಯ ಜಾಗದಲ್ಲಿ ಅವಕಾಶವೇ ಹೊರತು ಜನ ಸೇವಕ ಪೊಲೀಸರಿಗೆ ಅವಕಾಶ ನೀಡದೆ ಎತ್ತಂಗಡಿ ಮಾಡಲಾಗುತ್ತಿದೆ. ಕಾಂಗ್ರೆಸ್‌ನ ನಾಯಕರೇ ಪೊಲೀಸರ ಮೇಲೆ ಹಲ್ಲೆ ಮಾಡುತ್ತಿದ್ದರೂ ಅದಕ್ಕೆ ಕಡಿವಾಣ ಹಾಕಲು ಸರ್ಕಾರ ಮುಂದಾಗುತ್ತಿಲ್ಲ. ಇದನ್ನೆಲ್ಲಾ ಗಮನಿಸಿ ನಾವ್ಯಾಕೆ ಅಪಾಯ ಮೈಮೇಲೆ ಎಳೆದುಕೊಳ್ಳಬೇಕು ಎಂದು
ಪೊಲೀಸರು ಕೈಚೆಲ್ಲಿ ಕುಳಿತಿದ್ದಾರೆ. ಇದರಿಂದಾಗಿ ರಾಜ್ಯದಲ್ಲಿ ದುಷ್ಕೃತ್ಯ ಹೆಚ್ಚಾಗುತ್ತಿದ್ದು, ಲಾಂಗ್‌ -ಮಚ್ಚುಗಳನ್ನು ಹಿಡಿದುಕೊಂಡು ಗೂಂಡಾಗಳು ರಾಜಾರೋಷವಾಗಿ ದಂಧೆ ಮಾಡುತ್ತಿದ್ದಾರೆ. ಅಫೀಮು, ಗಾಂಜಾ ದಂಧೆ ಎಗ್ಗಿಲ್ಲದೆ ನಡೆಯುತ್ತಿದ್ದು, ಇದಕ್ಕೆ ಕಡಿವಾಣ ಹಾಕಲು ಪೊಲೀಸರೂ ಸಿದ್ಧರಿಲ್ಲ. ಹೀಗಾಗಿ ಇಡೀ ಪೊಲೀಸ್‌ ವ್ಯವಸ್ಥೆಯನ್ನೇ ಕಾಂಗ್ರೆಸ್‌ ಸರ್ಕಾರ ಹಾಳು ಮಾಡಿದೆ ಎಂಬುದು ನಿಸ್ಸಂದೇಹ.

*ವಿದ್ವತ್‌ ಮೇಲೆ ಶಾಸಕ ಎನ್‌.ಎ.ಹ್ಯಾರಿಸ್‌ ಪುತ್ರ ಮಹಮ್ಮದ್‌ ನಲಪಾಡ್‌ ಹ್ಯಾರಿಸ್‌ ಹಲ್ಲೆ ಮಾಡಿದ ಪ್ರಕರಣದಲ್ಲಿ ಶಾಸಕರೇ ಮುಂದೆ ನಿಂತು ಮಗನನ್ನು ಪೊಲೀಸರಿಗೆ ಶರಣಾಗುವಂತೆ ಮಾಡಿದ್ದಾರೆ. ಆತನ ವಿರುದ್ಧ 307 (ಕೊಲೆಯತ್ನ) ಪ್ರಕರಣ ದಾಖಲಾಗಿದೆ. ಹೀಗಿರುವಾಗ ಈ ಪ್ರಕರಣದಲ್ಲಿ ಸರ್ಕಾರ ಏನೂ ಮಾಡಿಲ್ಲ ಎಂದರೆ ಹೇಗೆ?

ಘಟನೆ ನಡೆದ ತಕ್ಷಣ ಪೊಲೀಸರು ಪ್ರಕರಣ ದಾಖಲಿಸಲು ಹಿಂದೇಟು ಹಾಕಿದರು. ಪೆಟ್ಟುತಿಂದ ವಿದ್ವತ್‌ ಮೇಲೆಯೇ ಮೊದಲ ದೂರು ದಾಖಲಿಸಿಕೊಂಡರು. ವಿದ್ವತ್‌ ಕುಡಿದಿದ್ದ ಎಂದು ಸುಳ್ಳು ದಾಖಲೆ ಸೃಷ್ಟಿಸಲು ಪೊಲೀಸರೇ ಒತ್ತಡ ಹೇರಿದರು. ಶಾಸಕರ ಪುತ್ರನಿಂದ ಹೊಡೆತ ತಿಂದು ಚಿಂತಾಜನಕ ಸ್ಥಿತಿಯಲ್ಲಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದವನನ್ನೇ ಅಪರಾಧಿ ಮಾಡಲು ಹೊರಟರು. ಯಾವಾಗ ಬಿಜೆಪಿಯವರು ಹಾಗೂ ಸಾರ್ವಜನಿಕರು ಬೀದಿಗಿಳಿದು ಪ್ರತಿಭಟಿಸಿದರೋ, ಠಾಣೆ ಮುಂದೆ ಧರಣಿ ಮಾಡಿದರೋ ನಂತರ ಆರೋಪಿಗಳ ವಿರುದ್ಧ 307 ಪ್ರಕಾರ ಪ್ರಕರಣ ದಾಖಲಿಸಿದರು. ಆರೋಪಿ ಮಹಮದ್‌ ನಲಪಾಡ್‌ ಪೊಲೀಸ್‌ ಠಾಣೆಗೆ ಗ್ಯಾಂಗ್‌ ಕಟ್ಟಿಕೊಂಡೇ ಬಂದಿದ್ದ. ಪ್ರತಿಭಟನಾಕಾರರು, ಮಾಧ್ಯಮದವರ ಮೇಲೆ ಆತನ ಜತೆಗಿದ್ದವರು ಹಲ್ಲೆ ಮಾಡಿದರು. ಇದು ಕಾಂಗ್ರೆಸ್‌ ಸರ್ಕಾರದ ಪಾಲಿಗೆ ನಾಚಿಕೆಗೇಡಿನ ವಿಷಯವಲ್ಲದೆ ಇನ್ನೇನು?

*ಈ ಒಂದು ಘಟನೆಯೇ ಕಾಂಗ್ರೆಸ್‌ ಸರ್ಕಾರಕ್ಕೆ ನಾಚಿಕೆಗೇಡಿನ ವಿಷಯ ಎಂದು ಹೇಗನ್ನುತ್ತೀರಿ?

ಈ ಘಟನೆ ಮಾತ್ರವಲ್ಲ, ತನ್ನ ಅಕ್ರಮಕ್ಕೆ ಸಹಕರಿಸಿಲ್ಲ ಎಂದು ಕಾಂಗ್ರೆಸ್‌ ಮುಖಂಡ ನಾರಾಯಣಸ್ವಾಮಿ ಎಂಬುವರು ಬಿಬಿಎಂಪಿ ಕಚೇರಿಗೆ ಪೆಟ್ರೋಲ್‌ ಸುರಿದು ಬೆಂಕಿ ಹಚ್ಚಲು ಮುಂದಾಗಿದ್ದ ಪ್ರಕರಣ ಬಯಲಿಗೆ ಬಂದ ಮೇಲೆ ಪೊಲೀಸರು ಅವರ ಮೇಲೆ ಏನು ಕ್ರಮ ಕೈಗೊಂಡರು? ರಾಜರಾಜೇಶ್ವರಿ ನಗರದಲ್ಲಿ ಬಿಜೆಪಿಯ ಕಮಲ ಚಿತ್ರ ಬರೆಯುತ್ತಿದ್ದವರ ತಲೆ ಮೇಲೆ ಕಲ್ಲು ಎತ್ತಿಹಾಕುತ್ತೇನೆ ಎಂದು ಬೆದರಿಸಿದ್ದ ಕಾಂಗ್ರೆಸ್‌ ಮುಖಂಡರ ವಿರುದ್ಧ ಏಕೆ ಕ್ರಮ ಕೈಗೊಂಡಿಲ್ಲ? ಬೆಂಗಳೂರು ಮಾತ್ರವಲ್ಲದೆ, ರಾಜ್ಯಾದ್ಯಂತ ಕಾಂಗ್ರೆಸ್‌ ಮುಖಂಡರು-ಕಾರ್ಯಕರ್ತರು ಅನ್ಯ ಪಕ್ಷಗಳ ಕಾರ್ಯಕರ್ತರು, ಜನ ಸಾಮಾನ್ಯರ ಮೇಲೆ ದೌರ್ಜನ್ಯ ನಡೆಸುತ್ತಿದ್ದರೂ ಸರ್ಕಾರ ಕಣ್ಣು ಮುಚ್ಚಿ ಕುಳಿತಿದೆ. ಸಾಕಷ್ಟು ಹಿಂದೂ ಕಾರ್ಯಕರ್ತರ ಕೊಲೆಯಾಗಿದೆ. ಈ ಸರ್ಕಾರ ಆರೋಪಿಗಳ ವಿರುದ್ಧ ಏನು ಕ್ರಮ ಕೈಗೊಂಡಿದೆ?

*ಅಫೀಮು, ಗಾಂಜಾ ದಂಧೆ ಅವ್ಯಾಹತವಾಗಿದೆ ಎನ್ನುತ್ತೀರಿ. ಅದನ್ನು ತಡೆಗಟ್ಟಬೇಕಾದದ್ದು ಪೊಲೀಸರು. ಪೊಲೀಸರು ವಿಫ‌ಲವಾದರೆ ಕಾಂಗ್ರೆಸ್‌ ಏನು ಮಾಡಲು ಸಾಧ್ಯ?

ಗಾಂಜಾ, ಅಫೀಮು ಬೇರೆ ಬೇರೆ ದೇಶಗಳ ಮೂಲಕ ಅವ್ಯಾಹತವಾಗಿ ಬೆಂಗಳೂರಿಗೆ ಬರುತ್ತಿದೆ. ಶಾಲಾ, ಕಾಲೇಜುಗಳ ಬಳಿ ಸಾಕಷ್ಟು ಸಿಗುತ್ತವೆ. ಇಷ್ಟು ರಾಜಾರೋಷವಾಗಿ ಮಾದಕ ವಸ್ತುಗಳು ಕಾಂಗ್ರೆಸ್‌ ಸರ್ಕಾರದ ಅವಧಿಯಲ್ಲಿ ಮಾತ್ರ ಬಿಕರಿಯಾಗುತ್ತವೆ. ಇದರ ವಿರುದ್ಧ ಕ್ರಮ ಕೈಗೊಳ್ಳುವ ಪೊಲೀಸರನ್ನು ಸರ್ಕಾರ ಎತ್ತಂಗಡಿ ಮಾಡುತ್ತಿದೆ. ನಿಷ್ಠಾವಂತ ಅಧಿಕಾರಿಗಳನ್ನು ಯಾವುದೋ ಜಾಗಕ್ಕೆ ವರ್ಗಾವಣೆ ಮಾಡಲಾಗುತ್ತಿದೆ. ಹೀಗಾಗಿ ಪೊಲೀಸರು ಕೈಚೆಲ್ಲಿ ಕುಳಿತಿದ್ದಾರೆ. 

ಪೊಲೀಸರ ಸ್ಥೈರ್ಯ ಕುಸಿದಿದೆ
ಕಾಂಗ್ರೆಸ್‌ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಪೊಲೀಸ್‌ ವರ್ಗಾವಣೆ ಅವಧಿಯನ್ನು ಎರಡು ವರ್ಷದಿಂದ ಒಂದು ವರ್ಷಕ್ಕೆ ಇಳಿಸಿದ್ದು, ವರ್ಗಾವಣೆಯಲ್ಲಿ ಭ್ರಷ್ಟಾಚಾರ ಮುಂತಾದ ಕಾರಣಗಳಿಂದ ಪೊಲೀಸರ ಮಾನಸಿಕ ಸ್ಥೈರ್ಯ ಕುಸಿದಿದೆ. ಗೃಹ ಇಲಾಖೆಗೆ ಯಾರು
ಮುಖ್ಯಸ್ಥರು? ಗೃಹ ಸಚಿವರೇ, ಕೆಂಪಯ್ಯನವರೇ, ಮುಖ್ಯಮಂತ್ರಿಗಳೇ ಎಂಬುದು ಗೊತ್ತಿಲ್ಲದೆ ಪೊಲೀಸರಿಗೆ ಈ ಇಲಾಖೆ ಎಂಬುದು ಮನೆಯೊಂದು ಮೂರು ಬಾಗಿಲು ಎನ್ನುವಂತಾಗಿದೆ. ನಾವಿಕನಿಲ್ಲದ ದೋಣಿಯಂತಾಗಿ ಯಾವ ಕಡೆ ಗಾಳಿ ಬೀಸುತ್ತದೋ ಆ ಕಡೆ ದೋಣಿ ಉಯಿಲಾಡುತ್ತಿದೆ. ಇದರ ಪರಿಣಾಮ ದೇಶದಲ್ಲೇ ಅತ್ಯಂತ ಹೆಚ್ಚು ಘನತೆ, ಗೌರವ ಹೊಂದಿದ್ದ ಪೊಲೀಸ್‌ ಇಲಾಖೆ ಈಗ ನಗೆಪಾಟಲಿಗೀಡಾಗಿದೆ. ಈ ಕಾರಣದಿಂದಲೇ ಕಾನೂನು ಸುವ್ಯವಸ್ಥೆ ಹಾಳಾಗಿದೆ.

*ಬಿಜೆಪಿ ಸರ್ಕಾರಕ್ಕಿಂತ ನಮ್ಮ ಸರ್ಕಾರದಲ್ಲಿ ಕಾನೂನು ಸುವ್ಯವಸ್ಥೆ ಉತ್ತಮವಾಗಿದೆ ಎಂದು ಗೃಹ ಸಚಿವರು ಅಂಕಿ-ಅಂಶ ಸಹಿತ ಸದನದಲ್ಲಿ ಹೇಳಿದ್ದಾರಲ್ಲಾ?

ಗೃಹ ಸಚಿವರಿಗೆ ತಮಗೆ ಬೇಕಾದ ಇಸವಿ ತೆಗೆದುಕೊಂಡು ಅಂಕಿ ಅಂಶ ಹೋಲಿಕೆ ಮಾಡಿ ಬಿಜೆಪಿ ವಿರುದ್ಧ ಆರೋಪ ಮಾಡುವುದಷ್ಟೇ ಕೆಲಸ. ಕಾನೂನು ಸುವ್ಯವಸ್ಥೆ ಸರಿಯಾಗಿದೆ ಎಂದರೆ ಅಪರಾಧಗಳಿಗೆ ಸಂಬಂಧಿಸಿದಂತೆ ಬೆಂಗಳೂರು ರಾಷ್ಟ್ರದಲ್ಲೇ ಎರಡನೇ ಸ್ಥಾನದ ಕುಖ್ಯಾತಿ ಪಡೆಯುತ್ತಿತ್ತೇ?

*ಬಿಜೆಪಿಯವರು ಹಿಂದುತ್ವ ಪ್ರತಿಪಾದಿಸುತ್ತಾ ಅಲ್ಪಸಂಖ್ಯಾತರನ್ನು ರೊಚ್ಚಿಗೆಬ್ಬಿಸುತ್ತಿದ್ದಾರೆ. ಇದರಿಂದಲೇ ಕಾನೂನು ಸುವ್ಯವಸ್ಥೆ ಹಾಳಾಗಿದೆ ಎನ್ನುತ್ತಿದೆ ಸರ್ಕಾರ.
 
ಬಿಜೆಪಿ ಸರ್ಕಾರ ಇದ್ದಾಗ ಸರ್ವರಿಗೂ ಸಮಪಾಲು, ಸಮಬಾಳು ಆಡಳಿತ ಕೊಟ್ಟಿದ್ದೆವು. ಯಾವತ್ತೂ ಹಿಂದೂ-ಮುಸ್ಲಿಂ ಎಂದು ತಾರತಮ್ಯ ಮಾಡಿಲ್ಲ. ಆದರೆ, ಕಾಂಗ್ರೆಸ್‌ ಬಂದ ಮೇಲೆ ಹಿಂದೂಗಳನ್ನು ಮತಾಂತರ ಮಾಡಿದ ಟಿಪ್ಪೂವಿನ ಜಯಂತಿ ಆಚರಿಸುವುದು, ವಿಜಯನಗರ ಸಾಮ್ರಾಜ್ಯವನ್ನು ಕೊಳ್ಳೆ ಹೊಡೆದು ಹಂಪಿಯನ್ನು ಹಾಳು ಹಂಪಿ ಮಾಡಿದ ಬಹಮನಿ ಸುಲ್ತಾನರ ಜಯಂತಿ ಆಚರಿಸಿ ಹಿಂದೂಗಳನ್ನು ಪ್ರಚೋದಿಸುತ್ತಿದೆ. 25ಕ್ಕೂ ಹೆಚ್ಚು ಹಿಂದೂ ಕಾರ್ಯಕರ್ತರ ಹತ್ಯೆ ನಡೆದರೂ ಅದಕ್ಕೆ ಕಾರಣರಾದ ಇಸ್ಲಾಂ ಮೂಲಭೂತವಾದಿ ಸಂಘಟನೆಗಳನ್ನು ಬೆಂಬಲಿಸುತ್ತಾ ಕೆಟ್ಟ ಘಟನೆಗಳು ನಡೆಯುವಂತೆ ಮಾಡುತ್ತಿದೆ. 

*ರಾಜ್ಯದಲ್ಲಿ ಹಿಂದೂಗಳು ಮಾತ್ರವಲ್ಲ, ಮುಸ್ಲಿಮರ ಹತ್ಯೆಗಳೂ ನಡೆದಿವೆಯಲ್ಲ? ಈ ಬಗ್ಗೆ ಏಕೆ ಬಿಜೆಪಿ ದನಿ ಎತ್ತುತ್ತಿಲ್ಲ?

ಎಲ್ಲಾ ಹತ್ಯೆಗಳು ಆಗುತ್ತಿರುವುದು ಕಾನೂನು ಸುವ್ಯವಸ್ಥೆ ಸರಿ ಇಲ್ಲದ ಕಾರಣ. ಎಲ್ಲಾ ಹತ್ಯೆಗಳ ವಿರುದ್ಧವೂ ಬಿಜೆಪಿ ದನಿ ಎತ್ತುತ್ತಿದೆ. ರಾಜ್ಯದಲ್ಲಿ ಹೇಳುವವರು, ಕೇಳುವವರು ಇಲ್ಲದ ಪರಿಸ್ಥಿತಿ ಇದೆ. ಕಾನೂನನ್ನು ಪೊಲೀಸರ ಕೈಯಿಂದ ಕಿತ್ತುಕೊಂಡಿರುವ ಕಾಂಗ್ರೆಸ್‌ ಸರ್ಕಾರ ಅದನ್ನು ಗೂಂಡಾಗಳ ಕೈಗೆ ಕೊಟ್ಟಿದೆ. 

*ಹತ್ಯೆ ನಡೆದಾಗ ಒಂದು ಧರಣಿ ನಡೆಸಿ ಹೋರಾಟ ತೀವ್ರ ಗೊಳಿಸುವ ಎಚ್ಚರಿಕೆ ನೀಡುತ್ತಾ ನಂತರ ಅದನ್ನು ಮರೆತು ಸುಮ್ಮನಾಗುವುದು ಬಿಜೆಪಿಯ ರಾಜಕೀಯವಲ್ಲವೇ?

ಪ್ರತಿಯೊಂದು ಹತ್ಯೆಯಾದಾಗ, ಕಾನೂನು ಸುವ್ಯವಸ್ಥೆ ಹದಗೆಟ್ಟಾಗ ಬಿಜೆಪಿ ಹೋರಾಟ ಮಾಡುತ್ತಲೇ ಬಂದಿದೆ. ಆದರೆ, ಕಾಂಗ್ರೆಸ್‌ ಸರ್ಕಾರದಲ್ಲಿ ಹತ್ಯೆ ಎಂಬುದು ದಿನನಿತ್ಯದ ಚಾಳಿಯಾಗಿದೆ. ಪ್ರತಿದಿನ ಇಂತಹ ಘಟನೆಗಳು ನಡೆಯುತ್ತಿದ್ದು, ಹೋರಾಟವೂ ನಡೆಯುತ್ತಿದೆ. ನಾವು ಶಕ್ತಿಯುತ ಹೋರಾಟ ನಡೆಸುತ್ತಿದ್ದರೂ ಈ ಸರ್ಕಾರದಲ್ಲಿ ಇವು ಎಲ್ಲೆಮೀರಿ ನಡೆಯುತ್ತಿದ್ದು, ನಮ್ಮ ಹೋರಾಟ ಬದಿಗೆ ಸರಿಯುವಂತೆ ಮಾಡಿದೆ.

*ಚುನಾವಣೆ ಸಮೀಪಿಸುತ್ತಿರುವುದರಿಂದ ಅಪರಾಧ ಚಟುವಟಿಕೆಗಳನ್ನು ರಾಜಕೀಯ ಕಾರಣಗಳಿಗಾಗಿ ಬಿಜೆಪಿ ದೊಡ್ಡದು ಮಾಡುತ್ತಿದೆ ಎಂಬ ಆರೋಪವಿದೆಯಲ್ಲಾ?

ರಾಜಕೀಯ ಮಾಡಲು ಬೇಕಾದಷ್ಟು ವಿಷಯಗಳಿವೆ. ಭ್ರಷ್ಟಾಚಾರ, ಇಲಾಖಾ ಮಟ್ಟದಲ್ಲಿ ನಡೆದಿರುವ ಅಕ್ರಮಗಳು, ಮುಖ್ಯಮಂತ್ರಿಗಳ ದುಬಾರಿ ವಾಚ್‌ ಪ್ರಕರಣ, ಮುಖ್ಯಮಂತ್ರಿ ಪುತ್ರನಿಗೆ ಟೆಂಡರ್‌ ನೀಡಿದ ಹಗರಣ, ಅರ್ಕಾವತಿ ಡಿನೋಟಿಫೀಕೇಷನ್‌ ಪ್ರಕರಣ… ಹೀಗೆ ಭ್ರಷ್ಟಾಚಾರದ ಸರಣಿಗಳೇ ಇವೆ. ಆದರೆ, ಕಾನೂನು ಸುವ್ಯವಸ್ಥೆ ರಾಜ್ಯಕ್ಕೆ ಮುಖ್ಯ. ಕಾನೂನು ಸುವ್ಯವಸ್ಥೆ ಸರಿಯಾಗಿದ್ದರೆ ಕರ್ನಾಟಕ ಉಳಿಯುತ್ತದೆ. ಹೀಗಾಗಿ ಆ ವಿಚಾರದಲ್ಲಿ ಬಿಜೆಪಿ ಹೆಚ್ಚು ಗಂಭೀರವಾಗಿದೆ. ಇದಕ್ಕೆ ರಾಜಕೀಯ ಬಣ್ಣ  ಬಳಿಯುವುದು ಕಾಂಗ್ರೆಸ್‌ನವರ ಮೂರ್ಖತನ.

*ಭ್ರಷ್ಟಾಚಾರಕ್ಕೆ ಸಂಬಂಧಿಸಿದಂತೆ ಆರೋಪಪಟ್ಟಿ ಬಿಡುಗಡೆ ಮಾಡುತ್ತೇವೆ ಎಂದು ಹೇಳಿಕೊಂಡು ದಾಖಲೆಗಳಿಲ್ಲದೆ ಅದನ್ನು ಕೈಬಿಟ್ಟು ಬೇರೆ ಬೇರೆ ವಿಚಾರಗಳನ್ನು ಕೈಗೆತ್ತಿಕೊಂಡು ಸರ್ಕಾರದ ವಿರುದ್ಧ ಆರೋಪ ಮಾಡುತ್ತಿದ್ದೀರಂತೆ?

ಹಗರಣಗಳ ಕುರಿತ ಆರೋಪಪಟ್ಟಿ ಸಿದ್ಧಪಡಿಸಲು ಸಮಿತಿ ನೇಮಕ ಮಾಡಿದ್ದು, ಈ ಸಮಿತಿ ದಾಖಲೆಗಳ ಸಹಿತ ಆರೋಪಪಟ್ಟಿ ಸಿದ್ಧಪಡಿಸಿದೆ. ಅದರ ಬಿಡುಗಡೆಗೆ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ಅವರ ಸೂಚನೆಗಾಗಿ ಕಾಯಲಾಗುತ್ತಿದೆ. ನಮ್ಮ ಮೇಲೆ ಭ್ರಷ್ಟಾಚಾರದ ಒಂದೇ ಒಂದು ಕೇಸ್‌ ಇಲ್ಲ ಎನ್ನುತ್ತಾರಲ್ಲಾ ಮುಖ್ಯಮಂತ್ರಿ ಸಿದ್ದರಾಮಯ್ಯ, ಹಾಗಿದ್ದರೆ ಅವರ ಮೇಲೆ ಎಸಿಬಿಯಲ್ಲಿ 47 ದೂರು ಹೇಗೆ ದಾಖಲಾಯಿತು? ಅವುಗಳ ಕಥೆ ಏನಾಯಿತು? 

*ಮುಖ್ಯಮಂತ್ರಿಗಳ ವಿರುದ್ಧ ಎಸಿಬಿಯಲ್ಲಿ ದಾಖಲಾಗಿದ್ದೆಲ್ಲ ಸುಳ್ಳು ದೂರು ಆಗಿದ್ದರಿಂದ ಹೇಗೆ ಕ್ರಮ ಕೈಗೊಳ್ಳಲು ಸಾಧ್ಯ?

ಸುಳ್ಳು ದೂರು ಎಂದು ಸಾಬೀತಾಗಬೇಕಾದರೆ ಮೊದಲು ತನಿಖೆಯಾಗಬೇಕಲ್ಲವೇ? ತನಿಖೆ ಆಗಿದೆಯಾ? ಎಫ್ಐಅರ್‌ ದಾಖಲಿಸಿ ತನಿಖೆ ನಡೆಸದೆ ಸುಳ್ಳು ದೂರು ಎಂದರೆ ಅರ್ಥವೇನಿದೆ? ಪ್ರತಿಪಕ್ಷಗಳ ನಾಯಕರ ವಿರುದ್ಧ ಎಸಿಬಿಯಲ್ಲಿ ದೂರು ದಾಖಲಾದರೆ ಅಂದೇ ತನಿಖೆ, ಅಂದೇ ಆರೋಪಪಟ್ಟಿ ಸಿದ್ಧಪಡಿಸಿ ಕೋರ್ಟ್‌ಗೆ ಸಲ್ಲಿಸುತ್ತಾರೆ. ಆದರೆ, ಕಾಂಗ್ರೆಸ್‌ನವರ ವಿರುದ್ಧ ದಾಖಲಾದರೆ ಎಸಿಬಿಯನ್ನೇ ಶೆಲ್ಟರ್‌ ಮಾಡಿಕೊಂಡು ಬದುಕುತ್ತಿದ್ದಾರೆ.

*ಕಾನೂನು ಸುವ್ಯವಸ್ಥೆ ಪಾಲಿಸುವಲ್ಲಿ ಸರ್ಕಾರದ ವೈಫ‌ಲ್ಯ’ ನಿಮ್ಮ ಚುನಾವಣಾ ವಿಚಾರವೇ?

ಇದನ್ನು ಚುನಾವಣಾ ವಿಚಾರ ಮಾಡುವುದಕ್ಕಿಂತ ಮೊದಲು ಬೆಂಗಳೂರು ಮತ್ತು ಕರ್ನಾಟಕ ರೌಡಿಗಳು, ಭಯೋತ್ಪಾದಕರಿಂದ ಮುಕ್ತವಾಗಬೇಕು. ಇದಕ್ಕಾಗಿ “ಸೇವ್‌ ಕರ್ನಾಟಕ’ ಎಂಬ ಹೋರಾಟ ಮಾಡುತ್ತಿದ್ದೇವೆ. ಚುನಾವಣೆಗೆ ವಿಷಯ ಸಾಕಷ್ಟಿದೆ.

*ಹಾಗಿದ್ದರೆ ನಿಮ್ಮ ಚುನಾವಣಾ ವಿಷಯ ಯಾವುದು?

ಇತ್ತೀಚೆಗೆ ಪ್ರಧಾನಿ ಮೋದಿ ಪ್ರಸ್ತಾಪಿಸಿದ 10 ಪರ್ಸೆಂಟ್‌ ಸರ್ಕಾರ ವಿಚಾರವೇ ನಮ್ಮ ಚುನಾವಣಾ ವಿಷಯ. 

*ಪರ್ಸೆಂಟೇಜ್‌ ಸರ್ಕಾರಕ್ಕೆ ದಾಖಲೆ ಕೊಡಿ ಎಂದು ಸಿಎಂ ಕೇಳಿದ್ದಾರೆ. ಇನ್ನೂ ದಾಖಲೆ ಕೊಟ್ಟಿಲ್ಲವಲ್ಲ?

ದಾಖಲೆ ಬೇಕಿದ್ದರೆ ಮುಖ್ಯಮಂತ್ರಿಗಳು ತಮ್ಮ ರಾಜಕೀಯ ಕಾರ್ಯದರ್ಶಿ ಗೋವಿಂದರಾಜು ಅವರ ಡೈರಿ ನೋಡಲಿ. ಅದರಲ್ಲಿ ಎಷ್ಟು ಪರ್ಸೆಂಟ್‌ ಎಂಬುದನ್ನು ಬರೆದಿದ್ದಾರೆ. ಇನ್ನು ಕಾಂಗ್ರೆಸ್‌ ಕಾರ್ಯಕರ್ತನೇ ಆಗಿರುವ ನಾರಾಯಣಸ್ವಾಮಿ ಬಿಬಿಎಂಪಿ ಕಚೇರಿಗೆ ಪೆಟ್ರೋಲ್‌ ಸುರಿದು ಬೆಂಕಿ ಹಚ್ಚಲು ಮುಂದಾದ ಸಂದರ್ಭದಲ್ಲಿ ಇಲ್ಲಿ ಲಂಚ, ಪರ್ಸಂಟೇಜ್‌ ಇಲ್ಲದಿದ್ದರೆ ಏನೂ ನಡೆಯುವುದಿಲ್ಲ ಎಂದು ಹೇಳಿದ್ದು ಬಹಿರಂಗವಾಗಿದೆ. ಇದಕ್ಕಿಂತ ದಾಖಲೆಗಳು ಬೇಕೇ?

*ಪ್ರಧಾನಿ ಹೇಳಿಕೆಗೆ ಸಿಎಂ ಸೂಕ್ತ ಉತ್ತರ ನೀಡಿದ್ದಾರಲ್ಲಾ?

ಎಲ್ಲಿ ಉತ್ತರ ಕೊಟ್ಟಿದ್ದಾರೆ? ಪ್ರಧಾನಿ ಮೋದಿ ಅವರು ಎಲ್ಲೂ ಮುಖ್ಯಮಂತ್ರಿ ಸಿದ್ದರಾಮಯ್ಯ ಹೆಸರು ಪ್ರಸ್ತಾಪಿಸದೆ ಕಾಂಗ್ರೆಸ್‌  ಸರ್ಕಾರ ಎಂದು ಹೇಳಿದ್ದಾರೆ. ಆದರೆ, ಮುಖ್ಯಮಂತ್ರಿ ಸಿದ್ದರಾಮಯ್ಯ ಮಾತ್ರ ಪ್ರಧಾನಿ ನರೇಂದ್ರ ಮೋದಿ ಅವರ ಬಗ್ಗೆ ವೈಯಕ್ತಿಕವಾಗಿ ಕೀಳು ಪದಗಳಿಂದ ಟೀಕಿಸಿದ್ದಾರೆ. ಅವರಿಗೆ ಘನತೆ, ಗೌರವ ಎಂಬುದು ಗೊತ್ತಿಲ್ಲ. ಯಾವ ರೀತಿ ನಡೆದುಕೊಳ್ಳಬೇಕು ಎಂಬುದನ್ನು ಕಲಿಯಬೇಕಾಗಿದೆ. ಯಾರ ಬಗ್ಗೆ ಮಾತನಾಡುತ್ತಿದ್ದೇನೆ? ಅವರ ಹಿನ್ನೆಲೆ ಏನು? ತಮ್ಮ ಹಿನ್ನೆಲೆ ಏನು ಎಂಬುದೂ ನಮ್ಮ ಮುಖ್ಯಮಂತ್ರಿಗಳಿಗೆ ಗೊತ್ತಿಲ್ಲ. ಪ್ರಧಾನಿ ಬಗ್ಗೆ ಕೀಳು ಪದಗಳನ್ನು ಬಳಸಿ ರಾಜಕೀಯವಾಗಿ ಕೆಟ್ಟ ಸಂಪ್ರದಾಯಕ್ಕೆ ನಾಂದಿ ಹಾಡಿದ್ದಾರೆ.

*ಕಾನೂನು ಸುವ್ಯವಸ್ಥೆ ಸರಿಯಾಗಲು ಸರ್ಕಾರ ಏನು ಮಾಡಬೇಕು?

ಗೃಹ ಇಲಾಖೆಗೆ ಬಿಗಿಯಾದ ನೇತೃತ್ವ ಬೇಕು. ಖಡಕ್‌ ಗೃಹ ಸಚಿವರಿರಬೇಕು. ಕೋಮು ಗಲಭೆ ನಿಯಂತ್ರಣ, ರೌಡಿಸಂ ಮಟ್ಟಹಾಕಲು ಸಮರ್ಥ ಅಧಿಕಾರಿಗಳನ್ನು ಆಯಾ ಭಾಗಕ್ಕೆ ನಿಯೋಜಿಸಬೇಕು. ಪೊಲೀಸ್‌ ವರ್ಗಾವಣೆ ದಂಧೆಯಾಗದೆ ಜನರಿಗೆ ತೊಂದರೆಯಾಗದಂತೆ 
ನೋಡಿಕೊಳ್ಳುವಂತಾಗಬೇಕು. ಪೊಲೀಸ್‌ ಇಲಾಖೆ ನೈತಿಕತೆಗೆ ಸಂಬಂಧಿಸಿದಂಥ ಇಲಾಖೆ. ಅವರಲ್ಲಿ ಆತ್ಮಸ್ಥೈರ್ಯ ತುಂಬಿದರೆ ಇಲಾಖೆ ಉತ್ತಮವಾಗಿ ನಡೆಯುತ್ತದೆ. 

ಸಂದರ್ಶನ
ಪ್ರದೀಪ್‌ ಕುಮಾರ್‌ ಎಂ.

ಟಾಪ್ ನ್ಯೂಸ್

ಕರಾವಳಿಯ ವಿವಿಧೆಡೆ ಸಂಭ್ರಮದ ವೈಕುಂಠ ಏಕಾದಶಿ

ಕರಾವಳಿಯ ವಿವಿಧೆಡೆ ಸಂಭ್ರಮದ ವೈಕುಂಠ ಏಕಾದಶಿ

Mangaluru: ಡೊಂಗರಕೇರಿ ಶ್ರೀ ವೆಂಕಟರಮಣ ದೇಗುಲ: ಪುಷ್ಪಯಾಗ, ಅಷ್ಟಾವಧಾನ ಸೇವೆ ಸಂಪನ್ನ

Mangaluru: ಡೊಂಗರಕೇರಿ ಶ್ರೀ ವೆಂಕಟರಮಣ ದೇಗುಲ: ಪುಷ್ಪಯಾಗ, ಅಷ್ಟಾವಧಾನ ಸೇವೆ ಸಂಪನ್ನ

Theft Case ಜುವೆಲರಿಯಿಂದ ಕಳವು: ಆರೋಪಿಗಳಿಗೆ ಜೈಲು

Theft Case ಜುವೆಲರಿಯಿಂದ ಕಳವು: ಆರೋಪಿಗಳಿಗೆ ಜೈಲು

Fraud Case ಹಣ ದ್ವಿಗುಣ ಮೆಸೇಜ್‌: 7.76 ಲಕ್ಷ ರೂ.ವಂಚನೆ

Fraud Case ಹಣ ದ್ವಿಗುಣ ಮೆಸೇಜ್‌: 7.76 ಲಕ್ಷ ರೂ.ವಂಚನೆ

Ashwin Vaishnav

Railway; 2 ವರ್ಷದಲ್ಲಿ 50 ಅಮೃತ್‌ ಭಾರತ ರೈಲು ಉತ್ಪಾದನೆ: ಅಶ್ವಿ‌ನಿ ವೈಷ್ಣವ್‌

Fraud Case: ವೈದ್ಯಕೀಯ ಸೀಟ್‌ ಕೊಡಿಸುವುದಾಗಿ ನಂಬಿಸಿ ವಂಚನೆ

Fraud Case: ವೈದ್ಯಕೀಯ ಸೀಟ್‌ ಕೊಡಿಸುವುದಾಗಿ ನಂಬಿಸಿ ವಂಚನೆ

Mangaluru: ಶ್ರೀ ಸುಧೀಂದ್ರ ಸ್ಮರಣ ಗುರು ವಂದನ ಕಾರ್ಯಕ್ರಮ, ಭಾವಚಿತ್ರ ಪಲ್ಲಕಿ ಉತ್ಸವ

Mangaluru: ಶ್ರೀ ಸುಧೀಂದ್ರ ಸ್ಮರಣ ಗುರು ವಂದನ ಕಾರ್ಯಕ್ರಮ, ಭಾವಚಿತ್ರ ಪಲ್ಲಕಿ ಉತ್ಸವ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಅಪಾಯಕ್ಕೆ ಎದೆಯೊಡ್ಡಿ ವಕ್ಫ್ ವರದಿ ಮಾಡಿದ್ದು ನಾನು, ಅದರಿಂದ ಹಣ ಮಾಡಿದ್ದು ಅನೇಕರು!

ಅಪಾಯಕ್ಕೆ ಎದೆಯೊಡ್ಡಿ ವಕ್ಫ್ ವರದಿ ಮಾಡಿದ್ದು ನಾನು, ಅದರಿಂದ ಹಣ ಮಾಡಿದ್ದು ಅನೇಕರು!

Belagavi: ಅಧಿವೇಶನ ವೇಳೆ 10 ಲಕ್ಷ ಜನರ ಜತೆ ಸುವರ್ಣ ವಿಧಾನಸೌಧಕ್ಕೆ ಮುತ್ತಿಗೆ ಹಾಕುತ್ತೇವೆ…

Belagavi:ಅಧಿವೇಶನ ವೇಳೆ 10 ಲಕ್ಷ ಜನರ ಜತೆ ಸುವರ್ಣವಿಧಾನಸೌಧಕ್ಕೆ ಮುತ್ತಿಗೆ ಹಾಕುತ್ತೇವೆ…

ನಾನೂ ಸೀನಿಯರ್‌ ಲೀಡರ್‌, ರಾಜ್ಯಕ್ಕೆ ದಲಿತ ಸಿಎಂ ಪ್ರಸ್ತಾವ ಬಂದರೆ ಮುಂಚೂಣಿಯಲ್ಲಿರುವೆ

ನಾನೂ ಸೀನಿಯರ್‌ ಲೀಡರ್‌, ರಾಜ್ಯಕ್ಕೆ ದಲಿತ ಸಿಎಂ ಪ್ರಸ್ತಾವ ಬಂದರೆ ಮುಂಚೂಣಿಯಲ್ಲಿರುವೆ

BR-patil

Congress ಸರಕಾರದಲ್ಲಿ ಹಣಕಾಸು ಸಮಸ್ಯೆಯಿಂದ ಶಾಸಕರ ಬೇಡಿಕೆ ಈಡೇರಿಲ್ಲ ಎನ್ನುವುದು ವಾಸ್ತವ

ಬಿಜೆಪಿಗೆ ಇಡೀ ರಾಜ್ಯವೇ ಒಪ್ಪಿಕೊಳ್ಳುವಂಥ ಸರ್ವಸ್ಪರ್ಶಿ ನಾಯಕತ್ವ ಇನ್ನಷ್ಟೇ ಸಿಗಬೇಕಿದೆ

ಬಿಜೆಪಿಗೆ ಇಡೀ ರಾಜ್ಯವೇ ಒಪ್ಪಿಕೊಳ್ಳುವಂಥ ಸರ್ವಸ್ಪರ್ಶಿ ನಾಯಕತ್ವ ಇನ್ನಷ್ಟೇ ಸಿಗಬೇಕಿದೆ

MUST WATCH

udayavani youtube

ಕೇರಳದ ಉತ್ಸವದ ಆನೆ ರೌದ್ರಾವತಾರ: ಹಲವರಿಗೆ ಗಾಯ | ವಿಡಿಯೋ ಸೆರೆ

udayavani youtube

ಫೋನ್ ಪೇ ಹೆಸರಿನಲ್ಲಿ ಹೇಗೆಲ್ಲಾ ಮೋಸ ಮಾಡುತ್ತಾರೆ ನೋಡಿ !

udayavani youtube

ನಿಮ್ಮ ತೋಟಕ್ಕೆ ಬೇಕಾದ ಗೊಬ್ಬರವನ್ನು ನೀವೇ ತಯಾರಿಸಬೇಕೆ ? ಇಲ್ಲಿದೆ ಸರಳ ಉಪಾಯ

udayavani youtube

ಮೈಲಾರಲಿಂಗ ಸ್ವಾಮಿ ಹೆಸರಿನಲ್ಲಿ ಒಂಟಿ ಮನೆಗಳೇ ಇವರ ಟಾರ್ಗೆಟ್ |

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

ಹೊಸ ಸೇರ್ಪಡೆ

ಕರಾವಳಿಯ ವಿವಿಧೆಡೆ ಸಂಭ್ರಮದ ವೈಕುಂಠ ಏಕಾದಶಿ

ಕರಾವಳಿಯ ವಿವಿಧೆಡೆ ಸಂಭ್ರಮದ ವೈಕುಂಠ ಏಕಾದಶಿ

Mangaluru: ಡೊಂಗರಕೇರಿ ಶ್ರೀ ವೆಂಕಟರಮಣ ದೇಗುಲ: ಪುಷ್ಪಯಾಗ, ಅಷ್ಟಾವಧಾನ ಸೇವೆ ಸಂಪನ್ನ

Mangaluru: ಡೊಂಗರಕೇರಿ ಶ್ರೀ ವೆಂಕಟರಮಣ ದೇಗುಲ: ಪುಷ್ಪಯಾಗ, ಅಷ್ಟಾವಧಾನ ಸೇವೆ ಸಂಪನ್ನ

Kasaragod: ರೈಲು ಪ್ರಯಾಣಿಕನ ನಗದು, ಲ್ಯಾಪ್‌ಟಾಪ್‌ ಕಳವು

Kasaragod: ರೈಲು ಪ್ರಯಾಣಿಕನ ನಗದು, ಲ್ಯಾಪ್‌ಟಾಪ್‌ ಕಳವು

Theft Case ಜುವೆಲರಿಯಿಂದ ಕಳವು: ಆರೋಪಿಗಳಿಗೆ ಜೈಲು

Theft Case ಜುವೆಲರಿಯಿಂದ ಕಳವು: ಆರೋಪಿಗಳಿಗೆ ಜೈಲು

Fraud Case ಹಣ ದ್ವಿಗುಣ ಮೆಸೇಜ್‌: 7.76 ಲಕ್ಷ ರೂ.ವಂಚನೆ

Fraud Case ಹಣ ದ್ವಿಗುಣ ಮೆಸೇಜ್‌: 7.76 ಲಕ್ಷ ರೂ.ವಂಚನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.