ಸುದ್ದಿ ಮಾಧ್ಯಮದವರು ಸತ್ಯಹರಿಶ್ಚಂದ್ರರೇನ್ರೀ?
Team Udayavani, Apr 6, 2017, 11:13 AM IST
ಈ ಬಾರಿಯ ಬಜೆಟ್ ಅಧಿವೇಶನ ಹೊಸದೊಂದು ನಿರ್ಣಯಕ್ಕೆ ಸಾಕ್ಷಿಯಾಯಿತು. ಜನಪ್ರತಿನಿಧಿಗಳ ಬಗ್ಗೆ ಮಾಧ್ಯಮಗಳಲ್ಲಿ ಅದರಲ್ಲೂ ವಿದ್ಯುನ್ಮಾನ ಮಾಧ್ಯಮಗಳಲ್ಲಿ ಪ್ರಸಾರವಾಗುವ ವರದಿಗಳ ಬಗ್ಗೆ ಉಭಯ ಸದನಗಳಲ್ಲೂ ಪ್ರಸ್ತಾಪಗೊಂಡು ಪಕ್ಷಾತೀತವಾಗಿ ಆಕ್ರೋಶ ವ್ಯಕ್ತವಾಗಿ ಅಂತಿಮವಾಗಿ ಮಾಧ್ಯಮಗಳ ನಿಯಂತ್ರಣಕ್ಕೆ ಕೈಗೊಳ್ಳಬೇಕಾದ ಕ್ರಮ ಕುರಿತು ವರದಿ ನೀಡಲು ಸದನ ಸಮಿತಿ ರಚಿಸುವ ನಿರ್ಣಯವನ್ನು ಕೈಗೊಳ್ಳಲಾಯಿತು. ಇದೀಗ ಸ್ಪೀಕರ್ ಕೆ.ಬಿ.ಕೋಳಿವಾಡ ಅವರು ಇಡೀ ಪ್ರಕರಣದ ಕೇಂದ್ರಬಿಂದುವಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಕೆ.ಬಿ.ಕೋಳಿವಾಡ ಅವರೊಂದಿಗೆ ಮಾತುಕತೆಗೆ ಇಳಿದಾಗ.
ಮಾಧ್ಯಮಗಳ ನಿಯಂತ್ರಣಕ್ಕೆ ಸದನ ಸಮಿತಿ ರಚನೆ ನಿರ್ಣಯ ವಿವಾದದ ಸ್ವರೂಪ ಪಡೆದಿದೆಯಲ್ಲಾ?
ಯಾವುದೇ ವಿವಾದ ಇಲ್ಲ, ಇದೆಲ್ಲವೂ ಮಾಧ್ಯಮಗಳ ಸೃಷ್ಟಿಯಷ್ಟೇ. ಇಲ್ಲಿ ವಿವಾದ ಏನೈತಿ? ನಾನು ಮೊದಲೇ ಸ್ಪಷ್ಟಪಡಿಸುತ್ತೇನೆ, ಇದು ಮಾಧ್ಯಮಗಳ ನಿಯಂತ್ರಣಕ್ಕೆ ರಚನೆ ಮಾಡಿರುವ ಸಮಿತಿಯಲ್ಲ. ಮಾಧ್ಯಮಗಳಲ್ಲಿ ಪ್ರಸಾರವಾಗುವ ವರದಿ ಹಾಗೂ ಕಾರ್ಯಕ್ರಮಗಳ ಗುಣಮಟ್ಟ ಸುಧಾರಣೆಗಾಗಿ ಮಾಡಿರುವ ಸಮಿತಿ.
ಆದರೆ, ಪ್ರಕರಣದ ಕೇಂದ್ರಬಿಂದು ನೀವಾಗಿದ್ದೀಧಿರಲ್ಲಾ?
ಇಲ್ಲ, ಇದರಲ್ಲಿ ನನ್ನದೇನು ಪಾತ್ರ ಐತಿ? ಎರಡೂ ಸದನಗಳಲ್ಲಿ ವಿಷಯ ಪ್ರಸ್ತಾಪಿಸಲು ಸದಸ್ಯರು ಮನವಿ ಸಲ್ಲಿಸಿದರು. ಮಾತನಾಡಲು ಅವಕಾಶ ಮಾಡಿಕೊಟ್ಟೆ, ವಿಧಾನಮಂಡಲದ ಕಾರ್ಯವಿಧಾನ ನಿಯಮಾವಳಿಗಳ ಪ್ರಕಾರವೇ ಅವಕಾಶ ಕೊಟ್ಟಿದ್ದೆ. ಪಕ್ಷಾತೀತವಾಗಿ ಸದಸ್ಯರು ಸುದೀರ್ಘವಾಗಿ ಮಾತನಾಡಿದರು. ಅಂತಿಮವಾಗಿ ಸದನದ ಅಭಿಪ್ರಾಯಕ್ಕೆ ಮನ್ನಣೆ ನೀಡಿ ಸಮಿತಿ ರಚಿಸುವ ನಿರ್ಣಯ ಕೈಗೊಳ್ಳಲಾಯಿತು. ಇದು ನನ್ನ ವೈಯಕ್ತಿಕ ತೀರ್ಮಾನವೇನೂ ಅಲ್ಲವಲ್ಲ.
ಸಮಿತಿ ರಚನೆ ನಿರ್ಣಯಕ್ಕೆ ವಿರೋಧ, ಆಕ್ಷೇಪ ವ್ಯಕ್ತವಾಗುತ್ತಿದೆಯಲ್ಲಾ?
ನೋಡಿ. ಸಚಿವರಾದ ಬಸವರಾಜ ರಾಯರೆಡ್ಡಿ ಅವರು ಮಾತ್ರ ಇದಕ್ಕೆ ಸದನದಲ್ಲೇ ವಿರೋಧ ವ್ಯಕ್ತಪಡಿಸಿದ್ದರು. ಉಳಿದಂತೆ ಯಾರೂ ಚಕಾರ ಎತ್ತಿರಲಿಲ್ಲ. ಪಕ್ಷಾತೀತವಾಗಿ ಸದಸ್ಯರು ತಾವು ಅನುಭವಿಸಿದ ನೋವು ತೋಡಿಕೊಂಡರು. ಆಗ ಸುಮ್ಮನಿದ್ದ ಪ್ರತಿಪಕ್ಷ ನಾಯಕ ಜಗದೀಶ್ ಶೆಟ್ಟರ್ ಅವರು ಈಗ ಸಮಿತಿ ಬೇಡ ಎಂದರೆ ಏನರ್ಥ? ನನಗಂತೂ ಅರ್ಥವಾಗುತ್ತಿಲ್ಲ.
ಜಗದೀಶ್ ಶೆಟ್ಟರ್ ಒಬ್ಬರೇ ಅಲ್ಲ, ಬೇರೆಯವರದೂ ವಿರೋಧ ಇದೆಯಲ್ಲಾ?
ಇರಬಹುದು. ಆದರೆ, ಇಲ್ಲಿ ಮೂಲ ಪ್ರಶ್ನೆ, ವಿಷಯ ಎರಡೂ ಸದನಗಳಲ್ಲಿ ಚರ್ಚೆಯಾದಾಗ ಇವರೆಲ್ಲಾ ಮೌನವಾಗಿದ್ದರಲ್ಲಾ.. ಈಗೇಕೆ ವಿರೋಧ ವ್ಯಕ್ತಪಡಿಸುತ್ತಿದ್ದಾರೆ ಎಂಬುದನ್ನು ನೀವೇ ಹೋಗಿ ಕೇಳ್ರಲಾ.
ಸಮಿತಿ ಅಧ್ಯಕ್ಷ ಸ್ಥಾನದ ಹೊಣೆಗಾರಿಕೆ ವಹಿಸಿಕೊಳ್ಳಲು ಸಚಿವ ರಮೇಶ್‌ಕುಮಾರ್ ಒಪ್ಪಿಲ್ಲವಂತೆ?
ಹಾಗಂತ ನಿಮಗೆ ಹೇಳಿದರಾ? ಬಹಿರಂಗವಾಗಿ ಸ್ಟೇಟ್‌ಮೆಂಟ್ ಮಾಡಿದಾರಾ? ನೀವೇ (ಮಾಧ್ಯಮಗಳು) ಎಲ್ಲವನ್ನೂ ಸೃಷ್ಟಿ ಮಾಡಿದರೆ ಹ್ಯಾಂಗಾ? ಇಡೀ ಸದನದ ಒಮ್ಮತಾಭಿಪ್ರಾಯದ ಮೇರೆಗೆ ರಮೇಶ್‌ಕುಮಾರ್ ಅವರನ್ನು ಸಮಿತಿ ಅಧ್ಯಕ್ಷರನ್ನಾಗಿ ನೇಮಿಸಲಾಗಿದೆ. ರಮೇಶ್‌ಕುಮಾರ್ ಅವರ ಹೆಸರನ್ನು ಸೂಚಿಸಿದ್ದು ಸದಸ್ಯರೇ.
ರಮೇಶ್‌ಕುಮಾರ್ ನಿಮಗೆ ಪತ್ರ ಬರೆದಿದ್ದು ಸುಳ್ಳಾ?
ಪತ್ರ ಬರೆದಿದ್ದಾರೆ. ಆದರೆ, ಆ ಪತ್ರದಲ್ಲಿ ಏನೈತಿ ಎಂಬುದು ನನಗೆ ಗೊತ್ತೈತಿ. ಸೌಹಾರ್ದಯುತವಾಗಿ ಈ ವಿಷಯ ಬಗೆಹರಿಸಬಹುದಾ? ಎಂಬುದರ ಬಗ್ಗೆ ವಿಚಾರ ಮಾಡಿ ಎಂದು ಪತ್ರ ಬರೆದಿದ್ದಾರೆ. ಆವರ ಸಲಹೆಯೂ ಸೂಕ್ತ ಇದೆ. ಅದರ ಬಗ್ಗೆಯೂ ನಾವೂ ವಿಚಾರ ಮಾಡಬಹುದು. ತಪ್ಪೇನಿಲ್ಲ, ಅದಕ್ಕಾಗಿಯೇ ಎಲ್ಲ ಮಾದ್ಯಮ ಮುಖ್ಯಸ್ಥರ ಸಭೆ ಕರೆದು ನಾನು ಚರ್ಚಿಸಲಿದ್ದೇನೆ. ಇದರಲ್ಲಿ ಯಾರಿಗೂ ಪ್ರತಿಷ್ಠೆ ಬೇಕಿಲ್ಲ. ಆದರೆ, ರಮೇಶ್‌ಕುಮಾರ್ ಅವರು ಅಧ್ಯಕ್ಷ ಸ್ಥಾನ ವಹಿಸಿಕೊಳ್ಳಲು ಒಪ್ಪಿಲ್ಲ ಎಂಬದು ಸುಳ್ಳು.
ಸದನ ಸಮಿತಿಯಲ್ಲಿ ಬಿಜೆಪಿಯ ಸದಸ್ಯರು ಇರುಧಿವುದಿಲ್ಲ ಎಂದು ಪ್ರತಿಪಕ್ಷ ನಾಯಕ ಜಗದೀಶ್ ಶೆಟ್ಟರ್ ಹೇಳಿದ್ದಾರಲ್ಲಾ?
ಇರಬಹುದು. ಅದು ಅವರ ಪಕ್ಷಕ್ಕೆ ಬಿಟ್ಟ ವಿಚಾರ. ಆದರೆ, ಅದನ್ನು ಸದನದಲ್ಲೇ ಹೇಳಬಹುದಿತ್ತಲ್ಲವಾ? ಅವರದೇ ಪಕ್ಷದ ಸದಸ್ಯರು ಮಾತನಾಡಿದ್ದಲ್ಲವೇ? ಸದನದ ಹೊರಗೆ ಹೋದ ನಂತರ ಏನೇನೋ ಲೆಕ್ಕಾಚಾರ ಹಾಕಿಕೊಂಡು ಮಾತನಾಡಿದ್ರೆ ಏನು ಮಾಡಲು ಸಾಧ್ಯ?
ಹಾಗಲ್ಲ, ಇದ್ದಕ್ಕಿದ್ದಂತೆ ಮಾಧ್ಯಮಗಳ ವಿಚಾರ ಪ್ರಸ್ತಾಪಧಿವಾಯಿತಲ್ಲಾ?
ನೋಡಿ, ಸುದ್ದಿ ಮಾಧ್ಯಮದವರು ಶೇ.100 ಕ್ಕೆ 100 ರಷ್ಟು ಸತ್ಯ ಹರಿಶ್ಚಂದ್ರರೇನ್ರೀ? ಅವರೂ ತಪ್ಪು ಮಾಡ್ತಾರೆ. ಶಾಸಕಾಂಗ, ಕಾರ್ಯಾಂಗ ಹಾಗೂ ನ್ಯಾಯಾಂಗದ ನಂತರ ನಾಲ್ಕನೇ ಅಂಗ ಎಂದು ಬಿಂಬಿಸಿರುವ ಮಾಧ್ಯಮವೂ ಸಾಮಾಜಿಕ ಹೊಣೆಗಾರಿಕೆ, ಸಮಾಜದ ಸ್ವಾಸ್ಥ್ಯ ಕಾಪಾಡುವ ಜವಾಬ್ದಾರಿ ಹೊಂದಿರುತ್ತದೆ. ಈ ನಿಟ್ಟಿನಲ್ಲಿ ಕೆಲವು ವೇಳೆ ಸುದ್ದಿ, ಕಾರ್ಯಕ್ರಮ ಪ್ರಸಾರ ವೇಳೆ ವೈಯಕ್ತಿಕ ತೇಜೋವಧೆ, ವೈಭವೀಕರಣದಿಂದ ಸಮಸ್ಯೆಯೂ ಆಗಿರುತ್ತದೆ. ಜನಪ್ರತಿನಿಧಿಗಳಿಗೂ ಮಾನಸಿಕವಾಗಿ ಹಿಂಸೆಯೂ ಆಗಿರಧಿಬಹುದು. ಉದಾಹರಣೆಗೆ ಬಿಜೆಪಿ ಶಾಸಕ ರಾಜುಕಾಗೆ ಅವರು, ನಾನು ಆತ್ಮಹತ್ಯೆ ಮಾಡಿಕೊಳ್ಳುವುದು ಬಾಕಿ ಇತ್ತು ಎಂದು ಸದನದಲ್ಲೆ ಹೇಳಿದರು. ರಮೇಶ್‌ಕುಮಾರ್ ಅವರು ಪರಿಷತ್‌ನಲ್ಲಿ ಸಾಕಷ್ಟು ಮಾತನಾಡಿದರು. ಅಂತಿಮವಾಗಿ ಸರ್ಕಾರದ ಸಚೇತಕರೇ ಸದನ ಸಮಿತಿ ನಿರ್ಣಯ ಮಂಡಿಸಿ ಎಲ್ಲರೂ ಒಕ್ಕೊರಲಿನಿಂದ ಒಪ್ಪಿದರು. ನಾಡಿನ ಜನತೆಗೂ ಇದು ಗೊತ್ತಿದೆ.
ಹಾಗಾದ್ರೆ ಮಾಧ್ಯಮಗಳ ಮೇಲೆ ನಿಯಂತ್ರಣಕ್ಕೆ ಸ್ಪೀಕರ್ ಹೊರಟಿದ್ದಾರೆ ಎಂದು ಬಿಂಬಿಸಲಾಯಿತಾ?
ಹಾಗಂತ ಯಾವ ಸದಸ್ಯರೂ ಹೇಳಿಲ್ಲ. ಅದೂ ಮಾಧ್ಯಮದ ಸೃಷ್ಟಿಯೇ. ಎಲ್ಲ ಸದಸ್ಯರೂ ಒಪ್ಪಿದ ಮೇಲೆ ಮತ್ತೆ ನನ್ನದೇನಿದೆ? ಆದರೆ, ಸದನದಲ್ಲಿ ತಾಸುಗಟ್ಟಲೆ ಚರ್ಚೆ ನಡೆಯುವಾಗ ಸುಮ್ಮನಿದ್ದ ಕೆಲವರು ಹೊರಗೆ ವಿರೋಧ ವ್ಯಕ್ತಪಡಿಸುತ್ತಿರುವುದು ಬೇಸರ ತರಿಸಿದೆ. ನಾನು ಅದಕ್ಕೆ ಹೆಚ್ಚು ತಲೆಕೆಡಿಸಿಕೊಳ್ಳಲು ಹೋಗುವುದಿಲ್ಲ. ಇದು ಗಂಭೀರ ಹಾಗೂ ಸೂಕ್ಷ್ಮ ವಿಚಾರ. ಸಮಾಜದ ಮೇಲೆ ದುಷ್ಪರಿಣಾಮ ಬೀರುವ ಅಥವಾ ಸಮಾಜದ ಸ್ವಾಸ್ಥ್ಯ ಹಾಳು ಮಾಡುವ, ಉದ್ದೇಶಪೂರ್ವಕವಾಗಿ ಅಥವಾ ಪೂರ್ವಗ್ರಹಪೀಡಿತವಾಗಿ ಜನಪ್ರತಿನಿಧಿ ಅಥವಾ ಗಣ್ಯರ ತೇಜೋವಧೆ ಮಾಡುವುದರ ವಿರುದ್ಧದ ಧ್ವನಿ ಇದು. ಇದನ್ನು ಸಮಾಜ ಸುಧಾರಣೆಯ ಒಂದು ಭಾಗ ಎಂಬ ದೃಷ್ಟಿಕೋನದಿಂದ ನೋಡಬೇಕು. ಇದೂ ಚರ್ಚಾರ್ಹ ಎಂಬುದು ನನ್ನ ನಿಲುವು.
ಆಯ್ತು ಆ ವಿಷಯ ಬಿಡಿ. ಶಾಸಕರು ಸದನದ ಕಲಾಪಧಿಗಳಲ್ಲಿ ಕಡ್ಡಾಯ ಹಾಜರಾತಿಗೆ ಕೈಗೊಂಡ ಕ್ರಮ ಎಲ್ಲಿಗೆ ಬಂತು?
ಈ ಹಿಂದೆ ಶಾಸಕರು ಸದನಕ್ಕೆ ಹಾಜರಾದಾಗ ಬೆಳಗಿನ ವೇಳೆ ಒಮ್ಮೆ ಮಾತ್ರ ಅಟೆಂಡೆನ್ಸ್ ಪುಸ್ತಕದಲ್ಲಿ ಸಹಿ ಮಾಡಿಸಿಕೊಳ್ಳಲಾಗುತ್ತಿತ್ತು. ಬೆಳಗ್ಗೆ ಸಹಿ ಮಾಡಿ ಬಂದು ಹೊರಟವರು ಮಧ್ಯಾಹ್ನದ ಕಲಾಪಗಳಿಗೆ ಬರುತ್ತಿರಲಿಲ್ಲ. ಸದನದಲ್ಲಿ ಖಾಲಿ ಕುರ್ಚಿಗಳ ಚಿತ್ರಗಳು ಪತ್ರಿಕೆಗಳಲ್ಲಿ ಪ್ರಕಟವಾಗುತ್ತಿದ್ದವು. ಮಾಧ್ಯಮಗಳಲ್ಲಿ ಈ ಬಗ್ಗೆ ಟೀಕೆಧಿಗಳು ಸಹ ಬಂದಿದ್ದವು. ಈ ಹಿನ್ನೆಲೆಯಲ್ಲಿ ಕಲಾಪಕ್ಕೆ ಹಾಜರಾಗುವ ಶಾಸಕರು ಬೆಳಗ್ಗೆ ಮತ್ತು ಮಧ್ಯಾಹ್ನ ಸಹಿ ಹಾಕಬೇಕು ಎಂದು ಕಡ್ಡಾಯ ಮಾಡಲಾಗಿದೆ. ಅದರಂತೆ ಸಹಿ ಮಾಡುತ್ತಿದ್ದಾರೆ.
ಕೆಲವು ಶಾಸಕರು ನಿಮ್ಮ ಕ್ರಮಕ್ಕೆ ಅಸಮಾಧಾನ ವ್ಯಕ್ತಧಿಪಡಿಸಿದರಂತೆ? ನಾವೇನೂ ಶಾಲಾ ಮಕ್ಕಳಲ್ಲ ಎಂದು ಹೇಳಿದರಂತೆ?
ಅದನ್ನು ನಿಮ್ಮ ಬಳಿ ಹೇಳಿದರಾ? ನನಗಂತೂ ಯಾರೂ ಹೇಳಿಲ್ಲ ನೋಡ್ರೀಪಾ. ಎಲ್ಲ ನೀವೇ ಹೇಳ್ತೀರಿ, ಶಾಸಕರು ಸದನಕ್ಕೆ ಬರಲಿಲ್ಲಾ ಅಂದ್ರೆ ಸುದ್ದಿ ಮಾಡ್ತೀರಿ, ಏನಾದರೂ ಸುಧಾರಣೆ ಕ್ರಮ ಕೈಗೊಂಡರೆ ಹೆಡ್‌ಮಾಸ್ಟರ್ ಕಂಟ್ರೋಲ್ ಅಂತೀರಿ. ಏನ್ ಮಾಡಬೇಕು ನೀವೇ ಹೇಳಿಬಿಡ್ರಲಾ?
ನಿಮ್ಮ ಕಾಳಜಿ ಬಗ್ಗೆ ಸದಸ್ಯರಿಗೆ ಯಾಕೆ ನಿರಾಸಕ್ತಿ?
ಹಾಗೇನಿಲ್ಲ, ಸದನ ಸುಸೂತ್ರವಾಗಿ ನಡೆಯಲು ಎಲ್ಲರೂ ನನಗೆ ಸಹಕಾರ ಕೊಟ್ಟಿದ್ದಾರೆ. ಎಲ್ಲರ ಸಲಹೆ-ಸೂಚನೆ ಪಡೆದೇ ತೀರ್ಮಾನ ಕೈಗೊಳ್ಳಲಾಗಿದೆ. ಇದು ಒಮ್ಮತದ ತೀರ್ಮಾನ. ಬೇರೆ ರಾಜ್ಯಗಳ ವಿಧಾನಸಭೆಯಲ್ಲೂ ನಮ್ಮದೇ ಮಾದರಿ ಅನುಸರಿಸುವ ಬಗ್ಗೆ ಚರ್ಚೆಗಳು ನಡೆದಿವೆ.
ಶಾಸಕರು ಸದನಕ್ಕೆ ಹಾಜರಾಗಲು ನಿಗಾ ವಹಿಸಧಿಬೇಕಾದ ಸ್ಥಿತಿ ಇದೆಯಾ?
ಹಾಗಂತಲ್ಲ. ಕ್ಷೇತ್ರಗಳ ಕೆಲಸ ಕಾರ್ಯದ ಒತ್ತಡ ಸೇರಿ ಸಾಕಷ್ಟು ಸಮಸ್ಯೆಗಳು ಇರುತ್ತವೆ. ಆ ವಿಷಯದಲ್ಲಿ ನಾನೂ ಒಪ್ಪುತ್ತೇನೆ. ಆದರೆ, ಸದನ ನಡೆಯುವಾಗ ಆದಷ್ಟೂ ಮಟ್ಟಿಗೆ ಕಲಾಪದಲ್ಲಿ ಪಾಲ್ಗೊಂಡು ಜನಪರ ಚರ್ಚೆಗಳಲ್ಲಿ ಭಾಗವಹಿಸಿ ತಮ್ಮ ಕ್ಷೇತ್ರಗಳ ಸಮಸ್ಯೆಯನ್ನೂ ಪ್ರಸ್ತಾಪಿಸಿ ಸರ್ಕಾರದಿಂದ ಉತ್ತರ ಪಡೆಯಲಿ ಎಂಬುದಷ್ಟೇ ನನ್ನ ಸದಾಶಯ.
ಆದರೆ, ನಿಮ್ಮ ಸದಾಶಯ ಸದಸ್ಯರಿಗೆ ಅಪಥ್ಯಧಿವಾಗಿದೆಯಲ್ಲಾ?
ಎಲ್ಲರೂ ನಾವು ಹೇಳಿದಂತೆ ಇರಬೇಕು ಅಥವಾ ಹೀಗೇ ನಡೆಯಬೇಕು ಎಂದು ಕೋಲು ಹಿಡಿದು ಹೆಡ್‌ಮಾಸ್ಟರ್ ರೀತಿ ಮಾಡಲು ಸಾಧ್ಯವಿಲ್ಲ. ಸದಸ್ಯರೂ ನನ್ನ ಉದ್ದೇಶ ಅರ್ಥಮಾಡಿಕೊಂಡಿದ್ದಾರೆ, ಎಲ್ಲ ಪಕ್ಷದವರೂ ಸ್ಪಂದಿಸುತ್ತಿದ್ದಾರೆ. ಆದರೆ, ಮಾಧ್ಯಮಗಳೇ ಬೇರೆ ರೀತಿಯ ಅರ್ಥಕಲ್ಪಿಸುತ್ತವೆ.
ನಿಮ್ಮ ಕ್ರಮ ಸರಿ ಸಾರ್. ಆದರೆ, ಪ್ರತಿದಿನದ ಶಾಸಕರ ಹಾಜರಾತಿ ಬಗ್ಗೆ ಪ್ರತಿದಿನ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡುವುದಾಗಿ ಹೇಳಿದ್ದಿರಿ, ಅದು ಸಾಧ್ಯವಾಗಲಿಲ್ಲವಲ್ಲಾ?
ಹೌದು. ಖಂಡಿತ, ಆ ಕೆಲಸ ಮಾಡಿಯೇ ತೀರುತ್ತೇನೆ. ನೋಡಿ, ಸದನ ಆರಂಭವಾಗುತ್ತಿದ್ದಂತೆ ಬೆಳಗಿನ ವೇಳೆ ಪ್ರಶ್ನೋತ್ತರ ಹಾಗೂ ಇತರೆ ಕಲಾಪ ಮುಗಿದ ನಂತರವೇ ಬೇರೆ ವಿಚಾರ ಪ್ರಸ್ತಾಪಕ್ಕೆ ಅವಕಾಶ ಎಂಬ ನಿಯಮ ರೂಪಿಸಿ ವಿಧಾನಮಂಡಲದ ನಿಯಮಾವಳಿಗೆ ತಿದ್ದುಪಡಿ ಸಹ ಬೆಳಗಾವಿ ಅಧಿವೇಶನದಲ್ಲಿ ತರಲಾಯಿತು. ಇದೀಗ ಅದರಿಂದ ಎಷ್ಟು ಸುಸೂತ್ರವಾಗಿ ಸದನ ನಡೆಯುತ್ತಿದೆ. ರಾಜ್ಯದ ಜನರ ವಿಚಾರ ಚರ್ಚೆಯಾಗಿ ಸರ್ಕಾರದಿಂದ ಉತ್ತರ ಸಿಗುತ್ತಿದೆ. ಹೀಗಾಗಿ, ನನ್ನ ಕಾಳಜಿ ಅರ್ಥ ಮಾಡಿಕೊಳ್ಳಿ.
ಲೋಕಸಭೆ-ರಾಜ್ಯಸಭೆ ಮಾದರಿಯಲ್ಲಿ ರಾಜ್ಯದಲ್ಲೂ ವಿಧಾನಮಂಡಲ ಕಲಾಪ ಪ್ರಸಾರಕ್ಕೆ ಪ್ರತ್ಯೇಕ ಚಾನೆಲ್ ಆರಂಭದ ಪ್ರಕ್ರಿಯೆ ಎಲ್ಲಿವರೆಗೆ ಬಂತು?
ಆ ಬಗ್ಗೆ ಸಮಿತಿ ರಚಿಸಲಾಗಿದೆ. ಈಗಾಗಲೇ ಸಮಿತಿ ಆ ನಿಟ್ಟಿನಲ್ಲಿ ಸಾಕಷ್ಟು ಮಾಹಿತಿ ಕಲೆಹಾಕಿದೆ. ಸಮಿತಿಯು ನೀಡುವ ವರದಿ ಹಾಗೂ ಶಿಫಾರಸು ಅನ್ವಯ ಆ ಕುರಿತು ಕ್ರಮ ಕೈಗೊಳ್ಳಲಾಗುವುದು. ರಾಜ್ಯದ ಮಟ್ಟಿಗೆ ಅಂತಹ ಚಾನೆಲ್‌ನ ಅವಶ್ಯಕತೆ ಇದೆ.
ಮಾಧ್ಯಮಗಳ ವಿಚಾರ ಇದ್ದಕ್ಕಿದ್ದಂತೆ ಅಧಿವೇಶನದಲ್ಲಿ ಪ್ರಸ್ತಾಪವಾಗಲು ಕಾರಣವಾದರೂ ಏನು?
ಅದು ಸದಸ್ಯರನ್ನು ಕೇಳಿ. ಅಧಿವೇಶನದಲ್ಲಿ ವಿಷಯ ಪ್ರಸ್ತಾಪಿಸಲು ಅವಕಾಶ ಕೋರಿದ್ದು ಸದಸ್ಯರೇ ಅಲ್ಲವೇ? ಸದನದ ಸದಸ್ಯರು ಯಾವುದೇ ವಿಷಯ ಪ್ರಸ್ತಾಪಕ್ಕೆ ಅವಕಾಶ ಕೋರಿದರೆ ನಿಯಮಾವಳಿಗಳ ಪ್ರಕಾರ ಅನುಮತಿ ಕೊಡಬೇಕಾಗಿದ್ದು ನನ್ನ ಕರ್ತವ್ಯವಲ್ಲವೇ? ಸ್ಪೀಕರ್ ಸ್ಥಾನದಲ್ಲಿ ಕುಳಿತು ನಾನು ಸದಸ್ಯರ ಹಿತಾಸಕ್ತಿ ಹಾಗೂ ರಾಜ್ಯದ ಜನರ ಹಿತಾಸಕ್ತಿ ಎರಡನ್ನೂ ಕಾಪಾಡುವುದು ಮುಖ್ಯವಲ್ಲವೇ?
ಸಂದರ್ಶನ ಎಸ್.ಲಕ್ಷ್ಮಿನಾರಾಯಣ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Belagavi:ಅಧಿವೇಶನ ವೇಳೆ 10 ಲಕ್ಷ ಜನರ ಜತೆ ಸುವರ್ಣವಿಧಾನಸೌಧಕ್ಕೆ ಮುತ್ತಿಗೆ ಹಾಕುತ್ತೇವೆ…
ನಾನೂ ಸೀನಿಯರ್ ಲೀಡರ್, ರಾಜ್ಯಕ್ಕೆ ದಲಿತ ಸಿಎಂ ಪ್ರಸ್ತಾವ ಬಂದರೆ ಮುಂಚೂಣಿಯಲ್ಲಿರುವೆ
Congress ಸರಕಾರದಲ್ಲಿ ಹಣಕಾಸು ಸಮಸ್ಯೆಯಿಂದ ಶಾಸಕರ ಬೇಡಿಕೆ ಈಡೇರಿಲ್ಲ ಎನ್ನುವುದು ವಾಸ್ತವ
ಬಿಜೆಪಿಗೆ ಇಡೀ ರಾಜ್ಯವೇ ಒಪ್ಪಿಕೊಳ್ಳುವಂಥ ಸರ್ವಸ್ಪರ್ಶಿ ನಾಯಕತ್ವ ಇನ್ನಷ್ಟೇ ಸಿಗಬೇಕಿದೆ
Congress ಪಕ್ಷದಲ್ಲಿ ನಾಯಕತ್ವಕ್ಕಾಗಿ ಗಲಾಟೆ ಇಲ್ಲ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.