ನಿರುಪಯುಕ್ತ ಬೋರ್‌ವೆಲ್‌ ಯಾರು ಮುಚ್ಚಬೇಕು?


Team Udayavani, Apr 28, 2017, 1:34 AM IST

Patil-H-K-600.jpg

ಅನುಪಯುಕ್ತ ತೆರೆದ ಕೊಳವೆ ಬಾವಿಯ ಬಳಿ ಆಟವಾಡುವ ಮುಗ್ಧ ಮಕ್ಕಳು ಆಕಸ್ಮಿಕವಾಗಿ ಬಿದ್ದು ಸಾವನ್ನಪ್ಪುವ ಪ್ರಕರಣಗಳು ರಾಜ್ಯದಲ್ಲಿ ಮರುಕಳಿಸುತ್ತಲೇ ಇವೆ. ಇದಕ್ಕೆ ಕಾರಣ ಸರಕಾರದ ವೈಫ‌ಲ್ಯವೋ, ಜನರಲ್ಲಿ ಜಾಗೃತಿಯ ಕೊರತೆಯೋ? ಈ ಕುರಿತು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್‌ ಸಚಿವ ಎಚ್‌.ಕೆ.ಪಾಟೀಲ್‌ ಅವರೊಂದಿಗೆ ‘ಉದಯವಾಣಿ’ ಮಾತಿಗಿಳಿದಾಗ…

ಸರ್‌, ಮತ್ತೂಂದು ಕೊಳವೆ ಬಾವಿ ದುರಂತ ಸಂಭವಿಸಿದೆಯಲ್ಲಾ?
ಮೊದಲೇ ಹೇಳಿಬಿಡುತ್ತೇನೆ. ಝಂಜರವಾಡ ಪ್ರಕರಣ ನೋವಿನ ಸಂಗತಿ. ಇಂತಹ ದುರಂತ ನಡೆಯಬಾರದು. ಇದು ಸರಕಾರದಿಂದ ಕೊರೆದ ಬೋರ್‌ವೆಲ್‌ ಆಗಿರಲಿಲ್ಲ.

ಸರಕಾರದಿಂದ ಕೊರೆದ ಬೋರ್‌ವೆಲ್‌ ಅಲ್ಲ ಸರಿ, ಖಾಸಗಿಯವರು ಕೊರೆಸಿದ್ದಾದರೂ ಮುಚ್ಚಬೇಕಿತ್ತಲ್ಲವೇ?
ಖಂಡಿತ ಹೌದು. ಆ ವಿಚಾರದಲ್ಲಿ ಬೇರೆ ಮಾತಿಲ್ಲ. ಆದರೆ, ಗ್ರಾಮೀಣ ಭಾಗದಲ್ಲಿ ಸುರಕ್ಷತೆ ಬಗ್ಗೆ ಎಷ್ಟು ಎಚ್ಚರಿಕೆ ವಹಿಸಬೇಕೋ ಅಷ್ಟು ವಹಿಸದಿರುವುದು ಬೇಸರದ ಸಂಗತಿ.

ನಿಮ್ಮ ಮಾತಿನ ಅರ್ಥ?
ನೋಡಿ, ಕೃಷಿ ಕ್ಷೇತ್ರದಲ್ಲಿ ಬಹಳಷ್ಟು ಸಂದರ್ಭಗಳಲ್ಲಿ ಗಂಡಾಂತರದ ನಡುವೆಯೇ ಕೆಲಸ ನಡೆಯುತ್ತದೆ. ಹಾವು, ಚೇಳು ಕಾಟ, ಮಳೆ ನೀರು ನಿಂತಾಗ ಹೊಂಡಗಳ ಭಯ ಸಾಮಾನ್ಯವಾಗಿಬಿಟ್ಟಿದೆ. ಸ್ವಲ್ಪ ಜಾಗ್ರತೆ ವಹಿಸಿದರೆ ಸಾವು-ನೋವು ಘಟನೆ ತಡೆಯಬಹುದು. ಹೀಗಾಗಿ ನಿರುಪಯುಕ್ತ ಕೊಳವೆ ಬಾವಿಗಳನ್ನು ಮುಚ್ಚುವ ಕೆಲಸವನ್ನು ಸರಕಾರವೇ ಮಾಡಬೇಕು ಅಂತಿಲ್ಲ, ಪ್ರತಿಯೊಬ್ಬ ನಾಗರಿಕನೂ ಮನಸ್ಸು ಮಾಡಿದರೆ ಇಂತಹ ದುರಂತ ತಪ್ಪಿಸಬಹುದು.

ಸಾರ್ವಜನಿಕರ ಸ್ಪಂದನೆ ಕಡಿಮೆ ಅಂತೀರಾ?
ಹಾಗಲ್ಲ. ಎಲ್ಲೋ ಒಂದು ಕಡೆ ತೆರೆದ ಕೊಳವೆ ಬಾವಿ ನೋಡಿದರೆ, ಯಾರಪ್ಪಾ, ಇದು ಕೊರೆದಿದ್ದು ಬುದ್ಧಿ ಇಲ್ಲವೇ ಎಂದು ಮಾತನಾಡಿ ಸುಮ್ಮನಾಗುತ್ತಾರೆ. ಆದರೆ, ಅದನ್ನು ಮುಚ್ಚಿಸುವ ಬಗ್ಗೆ ಸ್ಥಳೀಯರನ್ನು ಒಟ್ಟುಗೂಡಿಸಿಕೊಂಡು ಮುತುವರ್ಜಿ ವಹಿಸುವುದು ಅಥವಾ ಸ್ಥಳೀಯ ಪಂಚಾಯಿತಿಗೆ ಮಾಹಿತಿ ನೀಡುವುದು ಕಡಿಮೆ. ಹೀಗಾಗಿ, ಎಲ್ಲೋ ಒಂದು ಕಡೆ ವ್ಯವಸ್ಥೆಯಲ್ಲಿನ ಲೋಪವೂ ಇಂತಹ ಘಟನೆಗಳಿಗೆ ಕಾರಣ ಆಗುತ್ತಿದೆ.

ಹಾಗಾದರೆ ಇಂತಹ ಪ್ರಕರಣದಲ್ಲಿ ಸರಕಾರದ ವೈಫ‌ಲ್ಯವೇ ಇಲ್ಲವೇ?
ಇಲ್ಲಿ, ಸರಕಾರದ ವೈಫ‌ಲ್ಯ ಎಂದು ನೇರವಾಗಿ ಹೇಳಲಾಗದು. ಹಿಂದೊಮ್ಮೆ 2014ರಲ್ಲಿ ಇಂತಹ ಘಟನೆಯಾದಾಗ ರಾಜ್ಯಾದ್ಯಂತ ಅಭಿಯಾನ ನಡೆಸಿ 1,47,780 ಅಸುರಕ್ಷಿತ ಕೊಳವೆ ಬಾವಿ ಗುರುತಿಸಿ ಮುಚ್ಚಲಾಯಿತು. ಆ ನಂತರ ಸ್ಥಳೀಯ ಪಂಚಾಯಿತಿ ಅಧಿಕಾರಿಗೂ ಸರ್ಕಾರಿ ಅಥವಾ ಖಾಸಗಿ ಬೋರ್‌ವೆಲ್‌ ಕೊರೆದ ನಂತರ ಅನುಪಯುಕ್ತ ಎಂದಾದರೆ ಅಸುರಕ್ಷಿತವಾಗಿ ಬಿಡದಂತೆ ಸೂಚಿಸಲಾಗಿತ್ತು.

ಸ್ಥಳೀಯ ಪಂಚಾಯತ್‌ ಅಭಿವೃದ್ಧಿ ಅಧಿಕಾರಿ ಮತ್ತು ಗ್ರಾಮ ಲೆಕ್ಕಿಗರು ಈ ಬಗ್ಗೆ ತಪಾಸಣೆ ಮಾಡಬೇಕು ಎಂದೂ ಸುತ್ತೋಲೆ ಹೊರಡಿಸಿದ್ದೀರಿ. ಅದು ಅನುಷ್ಟಾನ ಆಗಿದ್ದರೆ ಹೀಗಾಗುತ್ತಿತ್ತಾ?
ಪಂಚಾಯತ್‌ ಅಧಿಕಾರಿಗೆ ಹೊಣೆಗಾರಿಕೆ ಕೊಟ್ಟಿದ್ದು ನಿಜ. ಆದರೆ, ಅವರಿಗೂ ಕೆಲಸದ ಒತ್ತಡ. ಮೊದಲೇ ಹೇಳಿದಂತೆ ಎಲ್ಲರ ಹೊಣೆಗಾರಿಕೆಯೂ ಇದೆ.

2014ರ ನಂತರ ಮತ್ತೆ ಎಷ್ಟು ಅಸುರಕ್ಷಿತ ಕೊಳವೆ ಬಾವಿ ಪತ್ತೆ ಹಚ್ಚಲಾಗಿದೆ?
ಸರಕಾರದ ವತಿಯಿಂದ ಕೊರೆಸುವ ಎಲ್ಲ ಕೊಳವೆ ಬಾವಿ ನೀರು ಸಿಗದೆ ಇದ್ದ ಪಕ್ಷದಲ್ಲಿ ಕಡ್ಡಾಯವಾಗಿ ಸುರಕ್ಷಿತ ಕ್ರಮಗಳೊಂದಿಗೆ ಮುಚ್ಚುವಂತೆ ಆದೇಶ ಹೊರಡಿಸಿ ಅದು ಬಹುತೇಕ ಪಾಲನೆಯೂ ಆಗಿದ್ದರಿಂದ ಮತ್ತೆ ತಪಾಸಣೆ ಮಾಡುವ ಪ್ರಮೇಯ ಬರಲಿಲ್ಲ. ಆದರೆ, ಕೆಲವೆಡೆ ಖಾಸಗಿಯಾಗಿ ಕೊರೆಸಿರುವ ಕೊಳವೆಬಾವಿ ನೀರು ಸಿಗದ ಕಾರಣ ಹಾಗೇ ಬಿಟ್ಟಿರುವುದರಿಂದ ದುರಂತಗಳು ನಡೆಯುತ್ತಿವೆ.

ಖಾಸಗಿಯಾಗಿ ಬೋರ್‌ವೆಲ್‌ ಕೊರೆಯುವವರಿಗೆ ನಿಯಂತ್ರಣ ಕ್ರಮಗಳೇ ಇಲ್ಲವೇ?
ಸರಕಾರ ಇಂತಹ ಪ್ರಕರಣ ಗಂಭೀರವಾಗಿಯೇ ಪರಿಗಣಿಸಿದೆ. ಹೀಗಾಗಿಯೇ ಕಾಯ್ದೆಗೆ ತಿದ್ದುಪಡಿ ತರಲು ಮುಂದಾಗಿದೆ. ಬರುವ ಅಧಿವೇಶನದಲ್ಲೇ ಆ ಕೆಲಸ ಆಗಲಿದೆ.

ಅಸುರಕ್ಷಿತ ಕೊಳವೆ ಬಾವಿ ಮುಚ್ಚಿಸುವ ವಿಚಾರದಲ್ಲಿ ಇಲಾಖೆಗಳ ನಡುವಿನ ಸಮನ್ವಯತೆ ಕೊರತೆ ಕಾರಣವಾ?
ಇಲ್ಲ, ಬೋರ್‌ವೆಲ್‌ ವಿಚಾರ ಗಣಿ ಮತ್ತು ಭೂ ವಿಜ್ಞಾನ, ಕೃಷಿ, ಕಂದಾಯ ಇಲಾಖೆಗಳ ವ್ಯಾಪ್ತಿಗೆ ಬರುತ್ತಾದರೂ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಸಚಿವನಾಗಿ ನಾನೇ ಹೊಣೆಗಾರಿಕೆ ತೆಗೆದುಕೊಳ್ಳುತ್ತೇನೆ. ನನ್ನ ಇಲಾಖೆ ವ್ಯಾಪ್ತಿಗೆ ಬರುವುದಿಲ್ಲ ಎಂದು ಬಿಡುವ ಮಾತೇ ಇಲ್ಲ. ಕಠಿಣ ಕಾನೂನು ರೂಪಿಸುವ ನಿಟ್ಟಿನಲ್ಲಿ ಅಧಿಕಾರಿಗಳಿಗೆ ಸೂಚಿಸಿದ್ದೇನೆ.

ಯಾವ ರೀತಿಯ ಕಠಿಣ ಕ್ರಮ ಆಗಬಹುದು?
ಸರ್ಕಾರಿ ಅಥವಾ ಖಾಸಗಿ ಬೋರ್‌ವೆಲ್‌ಗ‌ಳು ಕೊರೆದ ನಂತರ ಅಸುರಕ್ಷಿತವಾಗಿ ಬಿಟ್ಟರೆ ಅಧಿಕಾರಿಯಿಂದ ಹಿಡಿದು, ಬೋರ್‌ವೆಲ್‌ ಕೊರೆಸಿದ ವ್ಯಕ್ತಿಯವರೆಗೆ ಸಂಬಂಧಪಟ್ಟ ಎಲ್ಲರನ್ನೂ ಜವಾಬ್ದಾರರನ್ನಾಗಿ ಮಾಡುವುದು. ದಂಡ ಮತ್ತು ಶಿಕ್ಷೆ ಸೇರಿದಂತೆ ಬಿಗಿ ಕ್ರಮಗಳು ಇರಲಿವೆ.

ಖಾಸಗಿಯವರ ತೆರೆದ ಕೊಳವೆಬಾವಿ ವಿಚಾರದಲ್ಲಿ ನಿಯಮ ಸಡಿಲ ಯಾಕೆ?
ಸರಕಾರ ಈ ವಿಚಾರದಲ್ಲಿ ಸುಮ್ಮನೆ ಇರುವ ಪ್ರಶ್ನೆ ಇಲ್ಲ. ನಿಯಮಾವಳಿ ಸಡಿಲಗೊಳಿಸಿಯೂ ಇಲ್ಲ, ಈಗಲೂ ಕೆಲ ನಿಯಮಗಳು ಇವೆ. ಆದರೂ ಪರಿಣಾಮಕಾರಿ ಕಾನೂನು ಅಗತ್ಯ ಎಂಬ ಹಿನ್ನೆಲೆಯಲ್ಲಿ ತಿದ್ದುಪಡಿ ತರಲಾಗುತ್ತಿದೆ. ಸುಗ್ರೀವಾಜ್ಞೆ ಮೂಲಕವೂ ಜಾರಿಗೊಳಿಸಲು ಸರಕಾರ ಬದ್ಧ.

ಉತ್ತರ ಕರ್ನಾಟಕ ಭಾಗದಲ್ಲೇ ಇಂತಹ ಘಟನೆಗಳು ಹೆಚ್ಚಾಗುತ್ತಿವೆಯಲ್ಲಾ?
ಯಾವುದೇ ಭಾಗದಲ್ಲೂ ಹೀಗಾಗಬಾರದು. ಆದರೂ ಉ.ಕರ್ನಾಟಕದಲ್ಲಿ ಪದೇ ಪದೆ ಆಗುತ್ತಿರುವುದು ನೋವಿನ ಸಂಗತಿ. ಅಲ್ಲಿ ಕೃಷಿಕರು ತಮ್ಮ ಮಕ್ಕಳನ್ನೂ ಜತೆಗೆ ಗದ್ದೆಗಳಿಗೆ ಕರೆದೊಯ್ಯುತ್ತಾರೆ. ಅದು ಅನಿವಾರ್ಯ ಸಹ. ಮನೆಯಲ್ಲಿ ಬಿಟ್ಟು ಹೋದರೆ ನೋಡಿಕೊಳ್ಳುವವರು ಇರುವುದಿಲ್ಲ. 

ನಿಮ್ಮ ಇಲಾಖೆಯ ಮಹತ್ವಾಕಾಂಕ್ಷಿ ಕಾರ್ಯಕ್ರಮ ಪ್ರತಿಯೊಬ್ಬರಿಗೂ ಶುದ್ಧ ಕುಡಿಯುವ ನೀರು ಪೂರೈಕೆ ಹಾಗೂ ಬಯಲು ಶೌಚ ಮುಕ್ತ ಎಲ್ಲಿಗೆ ಬಂತು?
ಆತ್ಯಂತ ಹೆಮ್ಮೆಯಿಂದ ಹೇಳುತ್ತೇನೆ. ಎರಡೂ ಕಾರ್ಯಕ್ರಮಗಳು ದೇಶದಲ್ಲೇ ಕ್ರಾಂತಿಕಾರಕ. 

ಎರಡೂ ಯೋಜನೆಗಳಲ್ಲೂ ಅವ್ಯವಹಾರ, ಭ್ರಷ್ಟಾಚಾರ ಆರೋಪ ಇದೆಯಲ್ಲಾ?
ಟೀಕೆ ಮಾಡುವವರು ದಾಖಲೆ ಕೊಡಬೇಕಲ್ಲವೇ? ಆರೋಪ ಮಾಡಲಿಕ್ಕಾಗಿಯೇ ಮಾಡಿದರೆ ಏನು ಮಾಡಲು ಸಾಧ್ಯ. ನನಗೆ ಗೊತ್ತು, ನೀವು ಯಾಕೆ ಕೇಳುತ್ತಿದ್ದೀರಿ ಅಂತ. ಇತ್ತೀಚೆಗೆ ಪ್ರತಿಪಕ್ಷ ನಾಯಕ ಶೆಟ್ಟರ್‌ ಕೆಲವು ಆರೋಪ ಮಾಡಿದ್ದರು. ಆದರೆ, ಅದು ತಪ್ಪು ಗ್ರಹಿಕೆ.

ಹಾಗಾದರೆ ಈ ಯೋಜನೆಗಳು ಶೇ.100ರಷ್ಟು ಪಾರದರ್ಶಕವಾಗಿವೆಯೇ?
ಸ್ವಲ್ಪ ಮಟ್ಟಿನ ವ್ಯತ್ಯಾಸ ಆಗಿರಬಹುದು. ಏನೂ ತೊಂದರೆಯೇ ಇಲ್ಲ ಎಂದು ಹೇಳುವವ ನಾನಲ್ಲ. ಆದರೆ, ಸಕ್ಸಸ್‌ ಪ್ರಮಾಣ ಎಷ್ಟು ಎಂಬುದು ಗಮನಿಸಬೇಕು. ಶುದ್ಧ ಕುಡಿಯುವ ನೀರಿನ ಘಟಕ ವಿಚಾರ ತೆಗೆದುಕೊಳ್ಳುವುದಾದರೆ ಈಗಾಗಲೇ 9,155 ಘಟಕ ಪ್ರಾರಂಭಿಸಲು ಮಂಜೂರಾತಿ ನೀಡಿ 8745 ಘಟಕಗಳು ಕಾರ್ಯನಿರ್ವಹಿಸುತ್ತಿವೆ. 1.50 ಕೋಟಿ ಜನಕ್ಕೆ ಶುದ್ಧ ನೀರು ಕೊಡುತ್ತಿದ್ದೇವೆ ಎಂದು ಎದೆ ತಟ್ಟಿ ಹೇಳಬಲ್ಲೆ.

ಹಾಗಾದರೆ ರಾಜ್ಯಪೂರ್ತಿ ಶುದ್ಧ ಕುಡಿಯುವ ನೀರು ಪೂರೈಕೆಯಾಗುತ್ತಿದೆಯಾ? 
ರಾಜ್ಯ ಪೂರ್ತಿ ಶುದ್ಧ ಕುಡಿಯುವ ನೀರು ಕೊಡಬೇಕು ಎಂಬುದು ನಮ್ಮ ಗುರಿ. ಆ ನಿಟ್ಟಿನಲ್ಲೇ ಕೆಲಸ ಮಾಡುತ್ತಿದ್ದೇವೆ. 20 ಸಾವಿರ ಶುದ್ಧ ಕುಡಿಯುವ ನೀರು ಘಟಕಗಳಿಗೆ ಬೇಡಿಕೆ ಇದೆ. ಘಟಕ ನಮ್ಮಲ್ಲಿ ಪ್ರಾರಂಭಿಸಿ ಎಂದು ಶಾಸಕರು, ಸಂಸದರು, ವಿಧಾನಪರಿಷತ್‌ ಸದಸ್ಯರು ಸೇರಿ ಜನಪ್ರತಿನಿಧಿಗಳು 11 ಸಾವಿರ ಅರ್ಜಿ ಸಲ್ಲಿಸಿದ್ದಾರೆ. ಈ ಬಾರಿಯ ಬಜೆಟ್‌ನಲ್ಲಿ 10 ಸಾವಿರ ಘಟಕ ಪ್ರಾರಂಭಿಸಲು ಮಂಜೂರಾತಿ ಕೋರಿದ್ದೆವು. ಆರ್ಥಿಕ ಇತಿಮಿತಿಯಲ್ಲಿ 2500 ಘಟಕಗಳಿಗೆ ಅನುಮತಿ ದೊರೆತಿದೆ. 

ನಿಮ್ಮ ಸರಕಾರದ ಅವಧಿ ಇನ್ನೊಂದು ವರ್ಷ ಮಾತ್ರ, ಅಷ್ಟರಲ್ಲಿ ಎಲ್ಲ ಕಡೆ ಘಟಕ ಸ್ಥಾಪನೆ ಸಾಧ್ಯವಾ?
ಆದಷ್ಟೂ ಪ್ರಯತ್ನ ಮಾಡ್ತೇವೆ. ಇದುವರೆಗೂ ಮಾಡಿರುವ ಸಾಧನೆ ಕಡಿಮೆಯೇನಲ್ಲ. ಆಕಳು, ಹಸು ತೊಳೆಯುತ್ತಿದ್ದ ಕೆರೆಯ ನೀರನ್ನೇ ಜನರು ಕುಡಿಯುತ್ತಿದ್ದರು. ಶೌಚಾಲಯ ಮತ್ತು ಕುಡಿಯುವ ನೀರಿನ ವಿಚಾರದಲ್ಲಿ ಹಳ್ಳಿ ಜನರನ್ನು ಎರಡನೇ ದರ್ಜೆ ನಾಗರಿಕರನ್ನಾಗಿ ನೋಡುವ ಸ್ಥಿತಿ ನಿವಾರಿಸಿ ಗೌರವಯುತ ಜೀವನ ನಡೆಸಲು ಅವಕಾಶ ಮಾಡಿಕೊಟ್ಟಿದ್ದೇವೆ. ಒಂದೆರೆಡು ಕಡೆ ನಾನಾ ಕಾರಣಕ್ಕೆ ಶುದ್ಧ ಕುಡಿಯುವ ನೀರು ಘಟಕ ಕಾರ್ಯನಿರ್ವಹಿಸದಿರಬಹುದು, ಹಾಗಂತ ಇಡೀ ಯೋಜನೆಯನ್ನು ದೂರುವುದು ಬೇಡ. ಸಲಹೆ ಕೊಡಿ, ತಪ್ಪಿದ್ದರೆ ತೋರಿಸಿ ನಾನಂತೂ ತೆರೆದ ಮನಸ್ಸಿನಿಂದ ಇದ್ದೇನೆ.

ಬಯಲು ಶೌಚ ಮುಕ್ತ ಬರೀ ಘೋಷಣೆಯಾ?
ಯಾರು ಹೇಳಿದ್ದು ಹಾಗಂತ. ನಮ್ಮ ಸಾಧನೆಯನ್ನು ಅಂಕಿ-ಅಂಶಗಳೇ ಹೇಳುತ್ತವೆ. ನಾವು ಅಧಿಕಾರಕ್ಕೆ ಬಂದಾಗ 2013ರಲ್ಲಿ 85,14,554 ಲಕ್ಷ ಕುಟುಂಬಗಳ ಪೈಕಿ ಶೌಚಾಲಯ ಇದ್ದದ್ದು 30,15,254 ಕುಟುಂಬಗಳಲ್ಲಿ ಮಾತ್ರ. ಅಂದರೆ ಶೇ.35 .41 ರಷ್ಟು . ಇದೀಗ 2017 ರಲ್ಲಿ ಶೌಚಾಲಯ ಹೊಂದಿರುವ ಕುಟುಂಬಗಳ ಪ್ರಮಾಣ ಶೇ.69. 24 ಲಕ್ಷ ಶೌಚಾಲಯಗಳ ನಿರ್ಮಾಣ ಈ ವರ್ಷ ಪೂರ್ತಿಯಾಗಲಿದೆ. 10 ಸಾವಿರ ಗ್ರಾಮಗಳು, ಒಂದು ಸಾವಿರ ಪಂಚಾಯತ್‌ಗಳು ಬಯಲು ಬಹಿರ್ದೆಸೆ ಮುಕ್ತವಾಗಲಿವೆ.

ಪ್ರತಿ ಕುಟುಂಬಕ್ಕೂ ಶೌಚಾಲಯ ಕಡ್ಡಾಯ ಮಾಡಬಹುದಲ್ಲವಾ?
ನಮಗೂ ಗೊತ್ತಿದೆ, ವೈಯಕ್ತಿಕವಾಗಿ ಮನೆ ಅಥವಾ ಸಮುದಾಯ ಶೌಚಾಲಯ ನಿರ್ಮಾಣ ಮಾಡದೆ ಬಯಲು ಬಹಿರ್ದೆಸೆ ಮುಕ್ತ ಗುರಿ ಈಡೇರದು. ಗ್ರಾಮೀಣ ಭಾಗದಲ್ಲಿ ಆರ್ಥಿಕವಾಗಿ ಹಿಂದುಳಿದ ಕುಟುಂಬಗಳಿಗೆ  ಏನಾದರೂ ಮಾಡಿಕೊಳ್ಳಿ ಶೌಚಾಲಯ ನಿರ್ಮಿಸಿ ಎಂದು ಗೆರೆ ಹೊಡೆದು ನಿಯಮ ಮಾಡಲಾಗದು. 

ಸರಕಾರದ ವತಿಯಿಂದಲೇ ಉಚಿತವಾಗಿ ಶೌಚಾಲಯ ನಿರ್ಮಾಣ ಮಾಡಿಕೊಡಬಹುದಲ್ಲವೇ?
ಸರಕಾರ ಆ ನಿಟ್ಟಿನಲ್ಲಿ ಸಾಕಷ್ಟು ಪ್ರಯತ್ನ ಮಾಡುತ್ತಿದೆ. ಗದಗದಲ್ಲಿ ನಿರ್ಮಿಸಿರುವ ಸಾರ್ವಜನಿಕ ಶೌಚಾಲಯ 100 ಯೋಜನೆಗಳಲ್ಲೇ ದಿ ಬೆಸ್ಟ್‌ ಎಂಬ ಹೆಗ್ಗಳಿಕೆ ಪಾತ್ರವಾಗಿದೆ. ಶುದ್ಧ ಕುಡಿಯುವ ನೀರಿನ ಘಟಕ, ಶೌಚಾಲಯ ನಿರ್ಮಾಣದಿಂದ ಗ್ರಾಮೀಣ ಭಾಗದಲ್ಲಿ ಜನರ ಆರೋಗ್ಯ ಸ್ಥಿತಿ ಯಾವ ಮಟ್ಟದಲ್ಲಿ ಸುಧಾರಿಸಿದೆ ಎಂಬುದನ್ನು ಖಾಸಗಿ ವೈದ್ಯರ ಬಳಿ ಹೋಗಿ ಕೇಳಿ. ನೀವೇ ಪ್ರತಿ ಗ್ರಾಮದಲ್ಲಿ ವಾಸ್ತವದ ಅಧ್ಯಯನ ಮಾಡಿ, ಯಶಸ್ವಿಯಾಗಿದ್ದರೆ ಯಶಸ್ಸು ಅಂತ ಹೇಳಿ, ವೈಫ‌ಲ್ಯ ಇದ್ದರೂ ಹೇಳಿ ನಾವು ತಿದ್ದಿಕೊಳ್ತೇವೆ. ಆದರೆ, ಏನೂ ಮಾಡಿಯೇ ಇಲ್ಲ, ಆಗಿಯೇ ಇಲ್ಲ, ಎಲ್ಲ ಘೋಷಣೆ ಎಂದು ನಮ್ಮ ಶ್ರಮ ಮತ್ತು ಬದ್ಧತೆಗೆ ತಣ್ಣೀರು ಎರಚುವ ಕೆಲಸ ಮಾಡಬೇಡಿ ಎಂಬುದು ಪ್ರತಿಪಕ್ಷದ ಸನ್ಮಿತ್ರರಲ್ಲಿ ನನ್ನ ಮನವಿ.

ಇವು ಆಕಸ್ಮಿಕ
ಅನುಪಯುಕ್ತ ಅಸುರಕ್ಷಿತ ಕೊಳವೆ ಬಾವಿಗಳಲ್ಲಿ ಮಕ್ಕಳು ಬೀಳುವ ಪ್ರಕರಣಗಳು ಆಕಸ್ಮಿಕ. ಇಂತಹ ದುರಂತ ಮರುಕಳಿಸದಂತೆ ತಡೆಯುವ ನಿಟ್ಟಿನಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಇಲಾಖೆಯಂತೂ ಕೈ ಕಟ್ಟಿ ಕೂರುವ ಪ್ರಶ್ನೆಯೇ ಇಲ್ಲ. ಅದು ಸರಕಾರ ಕೊರೆಸಿದ ಬೋರ್‌ವೆಲ್‌ ಆಗಲಿ, ಖಾಸಗಿಯವರು ಕೊರೆಸಿದ ಬೋರ್‌ವೆಲ್‌ ಆಗಿರಲಿ, ದುರಂತಕ್ಕೆ ಕಾರಣವಾದರೆ ಸಂಬಂಧಪಟ್ಟವರನ್ನೇ ಹೊಣೆಗಾರಿಕೆ ಮಾಡುವ ನಿಟ್ಟಿನಲ್ಲಿ ಬಲವಾದ ಕಾನೂನು ಜಾರಿಗೊಳಿಸದೆ ಬಿಡುವುದಿಲ್ಲ.

ಎಲ್ಲೋ ಒಂದು ಕಡೆ ಸಾರ್ವಜನಿಕರು ತೆರೆದ ಕೊಳವೆ ಬಾವಿ ನೋಡಿದರೆ, ಯಾರಪ್ಪಾ, ಇದು ಕೊರೆದಿದ್ದು ಬುದ್ಧಿ ಇಲ್ಲವೇ ಎಂದು ಮಾತನಾಡಿ ಸುಮ್ಮನಾಗುತ್ತಾರೆ. ಆದರೆ, ಅದನ್ನು ಮುಚ್ಚಿಸುವ ಬಗ್ಗೆ ಸ್ಥಳೀಯರನ್ನು ಒಟ್ಟುಗೂಡಿಸಿಕೊಂಡು ಮುತುವರ್ಜಿ ವಹಿಸುವುದು ಅಥವಾ ಸ್ಥಳೀಯ ಪಂಚಾಯಿತಿಗೆ ಮಾಹಿತಿ ನೀಡುವುದು ಕಡಿಮೆ. 

– ಸಂದರ್ಶನ: ಎಸ್‌. ಲಕ್ಷ್ಮೀನಾರಾಯಣ

ಟಾಪ್ ನ್ಯೂಸ್

Arecanut

Hike Price: ಮಾರುಕಟ್ಟೆಯಲ್ಲಿ ಡಬ್ಬಲ್‌ ಚೋಲ್‌ ಚಾಲಿ ಅಡಿಕೆ ಧಾರಣೆ ಏರಿಕೆ

ANF-Coombing

History: ನಕ್ಸಲ್‌ ಚಳವಳಿಯ ರಕ್ತಸಿಕ್ತ ಇತಿಹಾಸ; ಸಾವಿನೊಂದಿಗೆ ಪೊಲೀಸ್‌-ನಕ್ಸಲ್‌ ಮುಖಾಮುಖಿ

Tirupathi

TTD Resolution: ಇನ್ನು ಹಿಂದೂಯೇತರರಿಂದ ತಿರುಮಲ ತಿರುಪತಿ ದೇವಸ್ಥಾನ ಮುಕ್ತ!

Naxal-Postmartam

Naxal Vikram Gowda: ಮೂರು ಬಾರಿ ತಪ್ಪಿಸಿಕೊಂಡವ ಹುಟ್ಟೂರಲ್ಲೇ ಪ್ರಾಣ ತೆತ್ತ

Naxal-Vikram-Sister

Naxal Vikram Encounter: ಟಿವಿ ನೋಡಿ ವಿಷಯ ತಿಳಿಯಿತು, ನಮಗೆ ಯಾರೂ ಹೇಳಿಲ್ಲ: ಸಹೋದರಿ

Himachal-Bhavan

Order: ಬಾಕಿ ಹಣ ಕೊಡದ್ದಕ್ಕೆ ದಿಲ್ಲಿಯ ಹಿಮಾಚಲ ಭವನ ಹರಾಜು: ʼಕೈʼ ಸರಕಾರಕ್ಕೆ ಹಿನ್ನಡೆ

Russia-Putin

‘New Phase’ of War: ರಷ್ಯಾ ಅಧ್ಯಕ್ಷ ವ್ಲಾಡಿಮಿರ್‌ ಪುತಿನ್‌ ಅಣ್ವಸ್ತ್ರ ದಾಳಿ ಎಚ್ಚರಿಕೆ!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Belagavi: ಅಧಿವೇಶನ ವೇಳೆ 10 ಲಕ್ಷ ಜನರ ಜತೆ ಸುವರ್ಣ ವಿಧಾನಸೌಧಕ್ಕೆ ಮುತ್ತಿಗೆ ಹಾಕುತ್ತೇವೆ…

Belagavi:ಅಧಿವೇಶನ ವೇಳೆ 10 ಲಕ್ಷ ಜನರ ಜತೆ ಸುವರ್ಣವಿಧಾನಸೌಧಕ್ಕೆ ಮುತ್ತಿಗೆ ಹಾಕುತ್ತೇವೆ…

ನಾನೂ ಸೀನಿಯರ್‌ ಲೀಡರ್‌, ರಾಜ್ಯಕ್ಕೆ ದಲಿತ ಸಿಎಂ ಪ್ರಸ್ತಾವ ಬಂದರೆ ಮುಂಚೂಣಿಯಲ್ಲಿರುವೆ

ನಾನೂ ಸೀನಿಯರ್‌ ಲೀಡರ್‌, ರಾಜ್ಯಕ್ಕೆ ದಲಿತ ಸಿಎಂ ಪ್ರಸ್ತಾವ ಬಂದರೆ ಮುಂಚೂಣಿಯಲ್ಲಿರುವೆ

BR-patil

Congress ಸರಕಾರದಲ್ಲಿ ಹಣಕಾಸು ಸಮಸ್ಯೆಯಿಂದ ಶಾಸಕರ ಬೇಡಿಕೆ ಈಡೇರಿಲ್ಲ ಎನ್ನುವುದು ವಾಸ್ತವ

ಬಿಜೆಪಿಗೆ ಇಡೀ ರಾಜ್ಯವೇ ಒಪ್ಪಿಕೊಳ್ಳುವಂಥ ಸರ್ವಸ್ಪರ್ಶಿ ನಾಯಕತ್ವ ಇನ್ನಷ್ಟೇ ಸಿಗಬೇಕಿದೆ

ಬಿಜೆಪಿಗೆ ಇಡೀ ರಾಜ್ಯವೇ ಒಪ್ಪಿಕೊಳ್ಳುವಂಥ ಸರ್ವಸ್ಪರ್ಶಿ ನಾಯಕತ್ವ ಇನ್ನಷ್ಟೇ ಸಿಗಬೇಕಿದೆ

Congress ಪಕ್ಷದ‌ಲ್ಲಿ ನಾಯಕತ್ವಕ್ಕಾಗಿ ಗಲಾಟೆ ಇಲ್ಲ

Congress ಪಕ್ಷದ‌ಲ್ಲಿ ನಾಯಕತ್ವಕ್ಕಾಗಿ ಗಲಾಟೆ ಇಲ್ಲ

MUST WATCH

udayavani youtube

ಲಾಭದಾಯಕ ಗುಲಾಬಿ ಕೃಷಿ ಮಾಡುವ ವಿಧಾನ

udayavani youtube

ಗೀತೋತ್ಸವ ತ್ರಿಪಕ್ಷ ಶತವೈಭವ ಕಾರ್ಯಕ್ರಮಕ್ಕೆ ಆಮಂತ್ರಿಸಿದ ಪರ್ಯಾಯ ಪುತ್ತಿಗೆ ಶ್ರೀಗಳು

udayavani youtube

ಶರಣಾಗತಿಗೆ ಸೂಚಿಸಿದರೂ ಸ್ಪಂದಿಸಿಲ್ಲ, ಗುಂಡಿನ ಚಕಮಕಿಯಲ್ಲಿ ಮೋಸ್ಟ್ ವಾಂಟೆಡ್‌ ನಕ್ಸಲ್ ಸಾವು

udayavani youtube

ಉಚ್ಚಿಲದ ರೆಸಾರ್ಟ್‌ ಈಜುಕೊಳದಲ್ಲಿ ಮುಳುಗಿ ಮೂವರು ವಿದ್ಯಾರ್ಥಿನಿಯರ ಸಾ**ವು

udayavani youtube

ಇಂಗ್ಲೀಷ್ ಒಂದು ಭಾಷೆ ಅನ್ನೋದೇ ತಪ್ಪು -ಪ್ರಕಾಶ್ ಬೆಳವಾಡಿ

ಹೊಸ ಸೇರ್ಪಡೆ

4

Mangaluru: ಕಾರಿಗೆ ಬೆಂಕಿ; ನಿರ್ವಹಣ ನಿರ್ಲಕ್ಷ್ಯ ಕಾರಣ?

3

Ullal: ಬಡವರ ಬಿಪಿಎಲ್‌ ಕಿತ್ತುಕೊಳ್ಳಬೇಡಿ

2

Belthangady: ತ್ಯಾಜ್ಯ ಸಂಸ್ಕರಣೆ ಘಟಕಕ್ಕೆ 1.18 ಕೋಟಿ ರೂ.

1

Madanthyar: ಗುರುವಾಯನಕೆರೆ-ಉಪ್ಪಿನಂಗಡಿ ರಸ್ತೆಗೆ ತೇಪೆ ಕಾರ್ಯ

Arecanut

Hike Price: ಮಾರುಕಟ್ಟೆಯಲ್ಲಿ ಡಬ್ಬಲ್‌ ಚೋಲ್‌ ಚಾಲಿ ಅಡಿಕೆ ಧಾರಣೆ ಏರಿಕೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.