ಸಂಪೂರ್ಣ ಬದಲಾವಣೆ ನಮ್ಮ ಘೋಷಣೆ
Team Udayavani, Nov 1, 2017, 12:29 PM IST
ರಾಜ್ಯದಲ್ಲಿ ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಜತೆಗೆ ಬಿಎಸ್‌ಪಿ, ಎಡಪಕ್ಷ, ಜೆಡಿಯು, ಜನತಾರಂಗ ಹೀಗೆ ಹಲವಾರು ಪಕ್ಷ-ಒಕ್ಕೂಟಗಳು ಮುಂದಿನ ವಿಧಾನಸಭೆ ಚುನಾವಣೆಗೆ ಸಜ್ಜಾಗುತ್ತಿದ್ದು, ಮತ್ತೂಂದೆಡೆ ಮಾಜಿ ಡಿವೈಎಸ್‌ಪಿ ಅನುಪಮಾ ಶೆಣೈ ಸಹ ಹೊಸದೊಂದು ಪಕ್ಷದ ಸ್ಥಾಪನೆಗೆ ಮುಂದಾಗಿದ್ದಾರೆ. ಇದರ ನಡುವೆಯೇ ನಟ ಉಪೇಂದ್ರ ರಾಜ್ಯ ರಾಜಕಾರಣಕ್ಕೆ “ಕರ್ನಾಟಕ ಪ್ರಜ್ಞಾವಂತರ ಜನತಾಪಕ್ಷ’ ಮೂಲಕ ಆರಂಗೇಟ್ರಂ ಮಾಡಿದ್ದು ಜನ ಹೇಗೆ ಸ್ವೀಕರಿಸುತ್ತಾರೆಂಬ ಕುತೂಹಲವಿದೆ. ದೇಶದ ಖ್ಯಾತಿವೆತ್ತ
ರಾಜಕಾರಣಿಗಳು, ಪ್ರಗತಿಪರ ಚಿಂತಕರು, ಸಾಹಿತಿಗಳು, ಹೋರಾಟಗಾರರು ಭಾಗಿಯಾಗಿ ಲಕ್ಷಾಂತರ ಕಾರ್ಯಕ್ರಮಗಳಿಗೆ ಸಾಕ್ಷಿಯಾಗಿರುವ “ಗಾಂಧಿಭವನ’ದಲ್ಲಿ ಹೊಸ ಪಕ್ಷದ ಘೋಷಣೆ ಮಾಡಿದ ಉಪೇಂದ್ರ “ಉದಯವಾಣಿ’ ಜತೆ ನೇರಾ-ನೇರ ಮಾತುಕತೆಗೆ ಇಳಿದಾಗ.
ಕೆಪಿಜೆಪಿ ಇತರೆ ರಾಜಕೀಯ ಪಕ್ಷಗಳಿಂತ ಭಿನ್ನ ಹೇಗೆ?
ಜನರೇ ಈ ಪಕ್ಷದ ಹೈಕಮಾಂಡ್, ಜಾತಿ-ದುಡ್ಡು ಇಲ್ಲಿ ನಗಣ್ಯ, ಕೆಲಸ ಇಲ್ಲಿ ಮಾತನಾಡುತ್ತದೆ. ಜನರಿಂದ ಜನರಿಗಾಗಿಯೇ ಇರುವ ಪಕ್ಷ ಕೆಪಿಜೆಪಿ.
ರಾಜಕಾರಣ ಕಲುಷಿತಗೊಂಡಿರುವ ಸಂದರ್ಭದಲ್ಲಿ ನಿಮ್ಮ ಘೋಷವಾಕ್ಯ ವರ್ಕ್ ಔಟ್ ಆಗುತ್ತಾ?
ರಾಜಕೀಯ ಎಂದರೆ “ಇನ್‌ವೆಸ್ಟ್‌ಮೆಂಟ್’ ಎಂಬಂತಾಗಿರುವ ಈ ಸಂದರ್ಭದಲ್ಲಿ ಬದಲಾವಣೆಗಾಗಿಯೇ ಹೊಸ ಪ್ರಯೋಗಕ್ಕೆ ಕೈ ಹಾಕಿದ್ದೇನೆ. ನಾನು ಭ್ರಮೆಯಲ್ಲಿಲ್ಲ, ಸೋಲು-ಗೆಲುವು ಮುಖ್ಯವೇ ಅಲ್ಲ, ಬದಲಾವಣೆ ಜನರ ಕೈಯಲ್ಲಿದೆ.
ದೇವರಾಜ ಅರಸು, ರಾಮಕೃಷ್ಣ ಹೆಗಡೆ, ಬಂಗಾರಪ್ಪ, ಸಿದ್ದರಾಮಯ್ಯ, ಯಡಿಯೂರಪ್ಪ ಪ್ರಾದೇಶಿಕ ಪಕ್ಷ ಸ್ಥಾಪಿಸಿ ಯಶಸ್ಸು ಕಂಡಿಲ್ಲವಲ್ಲ?
ಇರಬಹುದು. ಆದರೆ, ನನಗೆ ರಾಜ್ಯದ ಜನರ ಮೇಲೆ ನಂಬಿಕೆ ಇದೆ. ದೇವರ ಪ್ರೇರಣೆ ಎಂದೇ ಹೇಳಬೇಕು, ಇಂತದ್ದೊಂದು ಪ್ರಯತ್ನಕ್ಕೆ ಸಂಕಲ್ಪ ತೊಟ್ಟಿದ್ದೇನೆ. ನಾನು ನನ್ನ ಕಾರ್ಯದಲ್ಲಿ ಯಶಸ್ವಿಯಾಗುವ ದೃಢ ವಿಶ್ವಾಸವಿದೆ. ಏನು ಆಗದಿದ್ದರೂ ಒಂದಷ್ಟು ಬದಲಾವಣೆಯಂತೂ ಮಾಡಿಯೇ ತೀರುತ್ತೇನೆ. ಸಂಪೂರ್ಣ ಬದಲಾವಣೆ ನಮ್ಮ ಘೊಷಣೆ.
ಹಾಗಲ್ಲ, ರಾಜ್ಯದಲ್ಲಿ ಜಾತಿ, ದುಡ್ಡು ಎಲ್ಲ ಬೆಂಬಲ ಇದ್ದವರೂ ಪ್ರಾದೇಶಿಕ ಪಕ್ಷ ಸ್ಥಾಪಿಸಿ ಯಶ ಕಂಡಿಲ್ಲವಲ್ಲ?
ಜಾತಿ-ದುಡ್ಡು ಮುಖ್ಯವೇ ಅಲ್ಲ. ನಾವು ಜಾತಿ, ಹೆಸರು, ದುಡ್ಡು ಇದರ ಹಿಂದೆ ಬೀಳುವವರೂ ಇಲ್ಲ. ನಮ್ಮದು ಶುದ್ಧ -ಪಾರದರ್ಶಕ- ಜನಸಾಮಾನ್ಯರ ಪಕ್ಷ. ಜನ ಮನಸ್ಸು ಮಾಡಿದರೆ ಯಾವುದೂ ಅಸಾಧ್ಯವಲ್ಲ.
ರಾಜಕಾರಣ ಎಂದರೆ ನಿರಾಶೆ, ವಿವಾದ, ಭ್ರಷ್ಟಾಚಾರ. ಇವೆಲ್ಲವನ್ನೂ ಮೆಟ್ಟಿ ನಿಲ್ಲುತ್ತೀರಾ?
ಖಂಡಿತ. ಆ ವಿಶ್ವಾಸದೊಂದಿಗೇ ಜನರ ಜತೆಗೂಡಿದ್ದೇನೆ. ಮುಂದಿನ ವಿಧಾನಸಭೆ ಚುನಾವಣೆ ಮಾತ್ರ ನನ್ನ ಗುರಿಯಲ್ಲ, ಒಂದೊಮ್ಮೆ ಅಲ್ಲಿ ನಿರೀಕ್ಷಿತ ಯಶಸ್ಸು ಸಿಗದಿದ್ದರೂ ಹತಾಶನಾಗುವುದೂ ಇಲ್ಲ, ನಿರಾಸೆಯಿಂದ ಸುಮ್ಮನಾಗುವುದೂ ಇಲ್ಲ, ಸಾಯುವವರೆಗೂ ನನ್ನ ಪ್ರಯತ್ನ ನಾನು ಮುಂದುವರಿಸುತ್ತೇನೆ.
ಸಮಾಜದಲ್ಲಿ ಬದಲಾವಣೆ ತರುವ ವಿಚಾರದಲ್ಲಿ ಆಳವಾದ ಅಧ್ಯಯನ ಬೇಕಲ್ಲವೇ?
ನಾನು ಸಿನಿಮಾ ರಂಗಕ್ಕೆ ಬರುವ ಮುಂಚೆಯಿಂದಲೂ ಏನನ್ನೋ ಸಾಧಿಸುವ ತುಡಿತ, ಛಲ. ನನಗೆ ರಾಜ್ಯದ ಎಲ್ಲ ವರ್ಗದ ಜನರ ಸಮಸ್ಯೆ ಗೊತ್ತಿದೆ. ಅದಕ್ಕೆ ಪರಿಹಾರವೂ ಅವರಲ್ಲೇ ಇದೆ. ಆದರೆ, ಅದನ್ನು ಕಂಡುಕೊಳ್ಳುತ್ತಿಲ್ಲ. ಆ ದಾರಿ ನಾನು ತೋರಿಸುತ್ತೇನೆ.
ರಾಜ್ಯದ 224 ಕ್ಷೇತ್ರಗಳಲ್ಲಿ ಸ್ಪರ್ಧಿಸುವ ಜನಪ್ರಿಯತೆ, ಸಾಮರ್ಥ್ಯ ಇರುವ ಅಭ್ಯರ್ಥಿಗಳು ನಿಮಗೆ ಸಿಗ್ತಾರಾ?
ಅಭ್ಯರ್ಥಿಗಳಿಗೆ ಕೊರತೆಯಿಲ್ಲ, ಆದರೆ ಉತ್ತಮರನ್ನು ಗುರುತಿಸಿ ಅವಕಾಶ ಕೊಡಬೇಕಿದೆ. ಒಂದೊಮ್ಮೆ ನನಗೆ ಸಮಾಧಾನ ತರದಿದ್ದರೆ ನಾನು ಸ್ಪರ್ಧೆಗೆ ಇಳಿಸುವುದಿಲ್ಲ. ಎಲ್ಲ ಕಡೆ ಸ್ಪರ್ಧೆ ಮಾಡಲೇಬೇಕು ಎಂಬ ಹಠ ಏನಿಲ್ಲ.
ರಾಜಕೀಯ ನಿಮಗೆ ಆಗಿಬರುತ್ತಾ?
ರಾಜಕೀಯ ಎನ್ನುವುದಕ್ಕಿಂತ ಪ್ರಜಾಕೀಯ ಎನ್ನುವುದು ಸೂಕ್ತ. ರೈತರು, ಕಾರ್ಮಿಕರು, ಜನಸಾಮಾನ್ಯರು ಪ್ರಜಾಕೀಯದ ಜೀವಾಳ. ಅವರು ಬಯಸಿದ ಸರ್ಕಾರ ಇರಬೇಕು. ಅದಕ್ಕೆ ಒಂದು ವೇದಿಕೆ ಸಿದ್ಧಪಡಿಸಿದ್ದೇನೆ. ಮುಂದಿನದು ಜನರಿಗೆ ಬಿಟ್ಟಿದ್ದು. ರಾಜಕೀಯ ಆಗಿರುತ್ತಾ ಎಂಬ ನಿಮ್ಮ ಪ್ರಶ್ನೆಗೆ ಮುಂದಿನ ದಿನಗಳಲ್ಲಿ ಉತ್ತರ ಸಿಗಲಿದೆ.
ನಿಮ್ಮ ಜತೆ ನಿಮ್ಮ ಪತ್ನಿಯೂ ರಾಜಕಾರಣಕ್ಕೆ ಪ್ರವೇಶಿಸುವರೇ?
ಪತ್ನಿ ನನ್ನ ಕೆಲಸಕ್ಕೆ ಸದಾ ಜತೆಗೂಡಲಿದ್ದಾರೆ. ಆಕೆ ಫೇಮಸ್ಸು ಅಂತ ಆಕೆಯನ್ನು ಚುನಾವಣೆ ಕಣಕ್ಕೆ ಇಳಿಸೋಲ್ಲ. ಅಷ್ಟೇ ಅಲ್ಲ ಯಾರೋ ಫೇಮಸ್ಸು ಅಂತ ಅವರ ಮಕ್ಕಳು, ಕುಟುಂಬದವರಿಗೂ ಮಣೆ ಹಾಕುವುದಿಲ್ಲ.
ಪ್ರಸ್ತುತ ಇರುವ ರಾಜಕೀಯ ಪಕ್ಷಗಳ ಬಗ್ಗೆ ನಿಮ್ಮ ಅಭಿಪ್ರಾಯವೇನು?
ದೇಶ ಹಾಗೂ ರಾಜ್ಯದಲ್ಲಿರುವ ಯಾವ ರಾಜಕೀಯ ಪಕ್ಷಗಳಿಗೂ ನಾನು ದೂಷಿಸಲು ಹೋಗುವುದಿಲ್ಲ. ನಾನೇನು ಅಂದುಕೊಂಡಿದ್ದೇನೋ ಅದನ್ನು ಸಾಧಿಸುವುದು ಮಾತ್ರ ನನ್ನ ಮುಂದಿನ ಗುರಿ. ಇಡೀ ಜೀವನ ಇನ್ನೊಬ್ಬರತ್ತ ಬೆಟ್ಟು ಮಾಡಿ ತೋರಿಸಿಕೊಂಡು ಕಳೆದುಹೋಗುವುದು ನನಗೆ ಇಷ್ಟವಿಲ್ಲ. ಆದರೆ, ಜಾತಿ-ದುಡ್ಡು ಎಂಬುದೇ ಇದೀಗ ಮುಖ್ಯವಾಗಿರುವುದು ದುರಂತ. ಇದರ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವುದು ಅಗತ್ಯ.
ನಿಮಗೆ ರಾಜಕೀಯ ಬೇಕಿತ್ತಾ?
ಒಂದಷ್ಟು ಮಂದಿಯಲ್ಲಿ ಈ ಪ್ರಶ್ನೆ ಮೂಡಬಹುದು. ಆದರೆ, ಫಾರ್ಮ್ ಹೌಸ್‌ನಲ್ಲಿ ನೆಮ್ಮದಿಯಾಗಿ ಇದ್ದು 70-80 ವರ್ಷ ಆದ ಮೇಲೆಯೂ “ಛೇ’ ಏನಾದರೂ ಮಾಡಬೇಕಿತ್ತಲ್ಲ ಎಂದು ಕೊರಗುವುದಕ್ಕಿಂತ ಏನಾದರೂ ಮಾಡುವುದೇ ಆದರೆ ಈಗಲೇ ಮಾಡುವುದು ಸೂಕ್ತ ಎಂಬ ತೀರ್ಮಾನ ಮಾಡಿ ನುಗ್ಗಿದ್ದೇನೆ. ನನ್ನ ನಿರ್ಧಾರ ಅಛಲ, ಹಿಂದೆ ಹೋಗುವ ಪ್ರಶ್ನೆಯೇ ಇಲ್ಲ.
ರಾಜಕೀಯ ಎಂದರೆ ಅಪಮಾನ, ಹಿಂಸೆ, ಸವಾಲು ಎದುರಿಸಬೇಕಾಗುತ್ತದೆ?
ಅದೆಲ್ಲದಕ್ಕೂ ಮಾನಸಿಕವಾಗಿ ಸಿದ್ಧವಾಗಿಯೇ ಸಂಕಲ್ಪ ತೊಟ್ಟು “ಅಖಾಡ’ ಪ್ರವೇಶಿಸಿದ್ದೇನೆ. ಸಿನಿಮಾ ಬೇರೆ, ರಾಜಕಾರಣ ಬೇರೆಯಲ್ಲವೇ? ಹೌದು. ನನಗೆ ಗೊತ್ತಿದೆ. ಆದರೆ, ಎಲ್ಲಿಂದಾದರೂ ಬದಲಾವಣೆಗೆ ಪ್ರಯತ್ನ ಆಗಲೇಬೇಕಲ್ಲವೇ. ಅದು ನನ್ನಿಂದಲೇ ಪ್ರಾರಂಭವಾಗಲಿ ಎಂದು ಮುಂದಾಗಿದ್ದೇನೆ. ಒಂದು ರೀತಿಯಲ್ಲಿ ಹೇಳಬೇಕಾದರೆ “ಪ್ರಜಾಕೀಯ ಪ್ರಜ್ಞಾವಂತರಿಗೆ ಮಾತ್ರ, ನಾನು ಗೆದ್ದಾಗಿದೆ ಇನ್ನೇನಿದ್ರೂ ಜನರು ಗೆಲ್ಲಬೇಕಷ್ಟೇ.
ಆಂಧ್ರಪ್ರದೇಶದಲ್ಲಿ ಚಿರಂಜೀವಿಯಂತಹ ಸ್ಟಾರ್ ನಟ ರಾಜಕೀಯ ಪಕ್ಷ ಸ್ಥಾಪಿಸಿ ಯಶಸ್ಸು ಕಾಣದ ಉದಾಹರಣೆ ಇದೆ.
ನಾನು ಚಿರಂಚೀವಿ ಅಥವಾ ಪವನ್‌ಕಲ್ಯಾಣ್ ಅಲ್ಲ, ಎನ್‌ಟಿಆರ್, ಎಂಜಿಆರ್ ಆಗಲೂ ಬಯಸುವುದಿಲ್ಲ, ನಾನು ನಾನೇ. ಮತ್ತೂಬ್ಬರಿಗೆ ನನ್ನ ಹೋಲಿಕೆ ಬೇಡ.
ಕರ್ನಾಟಕದಲ್ಲಿಯೂ ಸಿನಿಮಾ ನಟರು ದೊಡ್ಡ ಮಟ್ಟದಲ್ಲಿ ರಾಜಕೀಯದಲ್ಲಿ ಸಕ್ಸಸ್ ಆಗಿಲ್ಲವಲ್ಲಾ?
ಯಾಕೆ ಹಾಗೆ ಹೇಳುತ್ತೀರಿ. ಅಂಬರೀಷ್, ರಮ್ಯಾ ಸೇರಿ ಹಲವು ನಟರು ಯಶಸ್ವಿಯಾಗಿರುವ ಉದಾಹರಣೆಯೂ ಇದೆ. ಆದರೆ, ಇದುವರೆಗೂ ರಾಜ್ಯದಲ್ಲಿ ಯಾವುದೇ ಸಿನಿಮಾ ನಟರು ಹೊಸ ಪಕ್ಷ ಸ್ಥಾಪಿಸಿದ ಉದಾಹರಣೆಯಿಲ್ಲ.
ನಿಮಗೆ ರಾಜಕೀಯ ಪ್ರವೇಶಕ್ಕೆ ಸ್ಫೂರ್ತಿ ಏನು?
ಜನರ ಸೇವೆ ಮಾಡಬೇಕು. ಏನಾದರೂ ಸಮಾಜಕ್ಕೆ ಕೊಡಬೇಕೆಂಬ ಬಯಕೆಯೇ ಸ್ಫೂರ್ತಿ. ನೋಡಿ ಪ್ರಸ್ತುತ ಶೇ.20ರಷ್ಟು ಜನರು ಮಾತನಾಡುತ್ತಿದ್ದಾರೆ. ಉಳಿದ ಶೇ.80ರಷ್ಟು ಜನರು ಸುಮ್ಮನಿದ್ದಾರೆ. ಆ ಸುಮ್ಮನಿರುವ ಜನರು ಮಾತನಾಡುವಂತೆ ಮಾಡುವುದು ನನ್ನ ಗುರಿ.
ನಿಮ್ಮ ಮಾತಿನ ಅರ್ಥ?
ಏನಿಲ್ಲ. ಮೌನವಾಗಿದ್ದುಕೊಂಡು ಸಮಾಜ, ರಾಜಕಾರಣ, ಭ್ರಷ್ಟಾಚಾರದ ಬಗ್ಗೆ ಮಾತನಾಡಬಾರದು. ಎಲ್ಲದರ ಬಗ್ಗೆ ಧ್ವನಿ ಎತ್ತಬೇಕು. ಯಾವ ಪ್ರಾಜೆಕ್ಟ್ಗೆ ಎಷ್ಟು ಹಣ ಖರ್ಚಾಗಿದೆ, ಪಾರದರ್ಶಕತೆ ಇದೆಯಾ ಎಂಬುದನ್ನು ಜನ ಪ್ರಶ್ನಿಸುವಂತಾಗಬೇಕು. ಒಂದೊಂದು ರೂಪಾಯಿಗೂ ಲೆಕ್ಕ ಇರಬೇಕು. ಪಾರದರ್ಶಕತೆ ಇರಬೇಕು.
ಈಗಿನ ರಾಜಕೀಯ ಪರಿಸ್ಥಿತಿಯಲ್ಲಿ ಇದೆಲ್ಲವೂ ಸಾಧ್ಯವಾ?
ಯಾಕೆ ಸಾಧ್ಯವಿಲ್ಲ. ಸಾಧ್ಯವಾಗುವಂತೆ ಮಾಡಬೇಕಿದೆ. ಬರೀ ಮಾತನಾಡಿಕೊಂಡು ಇದ್ದರೆ ಏನೂ ಆಗುವುದಿಲ್ಲ.
ನಿಮ್ಮ ಹೋರಾಟಕ್ಕೆ ರೈತ, ಕಾರ್ಮಿಕ, ಕನ್ನಡಪರ, ದಲಿತ ಸಂಘಟನೆಗಳು, ಸಾಹಿತಿ-ಚಿಂತಕರನ್ನು ಸೇರಿಸಿಕೊಳ್ಳಬಹುದಿತ್ತಲ್ಲ?
ನನಗೆ ಜನರೇ ಮುಖ್ಯ. ಅವರೇ ಎಲ್ಲ. ಸಂಘಟನೆಗಳು ಅಥವಾ ವೇದಿಕೆಗಳ ಪ್ರವೇಶ ಆದರೆ ಮತ್ತೆ ಗುಂಪುಗಾರಿಕೆ, ಅಸಮಾಧಾನ, ನಾಯಕತ್ವದ ವಿವಾದಗಳು ಉಂಟಾಗಲಿವೆ. ಹೀಗಾಗಿ ಅದರ ಗೊಡವೆಯೇ ಬೇಡ ಎಂದು ನಾನು “ಫ್ರೆಶ್’ ಆ್ಯಂಡ್ “ಕ್ಲೀನ್’ ರಾಜಕಾರಣಕ್ಕೆ ಮುಂದಾಗಿದ್ದೇನೆ.
ಚಿತ್ರರಂಗದಿಂದ ನಿಮ್ಮ ಪ್ರಯತ್ನಕ್ಕೆ ಬೆಂಬಲ ಹೇಗಿದೆ?
ಚಿತ್ರರಂಗದಿಂದಲೂ ನನಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಯಶ್, ಶಿವಣ್ಣ, ಸುದೀಪ್ ಸಹ ನನ್ನೊಂದಿಗೆ ಮಾತನಾಡಿ ಪ್ರೋತ್ಸಾಹದ, ಆತ್ಮವಿಶ್ವಾಸದ ಮಾತುಗಳನ್ನಾಡಿದ್ದಾರೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಮಂದಿ ಜತೆಗೂಡಬಹುದು.
ಕರ್ನಾಟಕ ಪ್ರಜ್ಞಾವಂತರ ಜನತಾಪಕ್ಷ ಅಧಿಕಾರಕ್ಕೆ ಬಂದರೆ ಮುಖ್ಯಮಂತ್ರಿ ಉಪೇಂದ್ರ ಅವರೇನಾ?
ನನಗಿಂತ ಬುದ್ಧಿವಂತ, ಯೋಗ್ಯವಂತ ಯಾರೇ ಇದ್ದರೂ ಅವರೇ ಮುಖ್ಯಮಂತ್ರಿ ಆಗ್ತಾರೆ. ಇಲ್ಲಿ ನೇಮು ಫೇಮು ಮುಖ್ಯವೇ ಅಲ್ಲ. ಕೆಲಸ ಮಾತ್ರ ಮಾತನಾಡಬೇಕು. ನಮ್ಮ ದೊಡ್ಡ ಸಮಸ್ಯೆ ಎಂದರೆ ಪ್ರತಿಯೊಂದರಲ್ಲೂ ಹೆಸರು ಬಯಸುವುದು. ಆದರೆ, ನಮ್ಮಲ್ಲಿ ಅದಕ್ಕೆ ಅವಕಾಶವಿಲ್ಲ.
ಲೋಕಸಭೆ, ಬಿಬಿಎಂಪಿಗೂ ಸ್ಪರ್ಧೆ
“ವಿಧಾನಸಭೆಯಷ್ಟೇ ಅಲ್ಲ, ಲೋಕಸಭೆ ಚುನಾವಣೆ ಆ ನಂತರದ ಬಿಬಿಎಂಪಿ ಚುನಾವಣೆಗೂ ಕರ್ನಾಟಕ ಪ್ರಜ್ಞಾವಂತರ ಜನತಾಪಕ್ಷ ಸ್ಪರ್ಧೆಗೆ ಸಿದ್ಧ’. ಉತ್ತಮ ಅಭ್ಯರ್ಥಿಗಳು, ಜನಸೇವಕರು ನಮಗೆ ಮುಖ್ಯ. ನಮ್ಮ ಮಾನದಂಡ ಪ್ರಕಾರ ಅಭ್ಯರ್ಥಿಗಳು ಸಿಗದಿದ್ದರೆ ಅನಿವಾರ್ಯ ಎಂದು ತುರುಕಲು ಹೋಗುವುದಿಲ್ಲ. ನಮ್ಮ ಅಜೆಂಡಾ ಸದ್ಯದಲ್ಲೇ ಜನರ ಮುಂದೆ ಇಡಲಿದ್ದೇವೆ. ನಮ್ಮ ಕಲ್ಪನೆಯ
ಕರ್ನಾಟಕದ ಅಭಿವೃದ್ಧಿಗೆ ಏನು ಮಾಡಬೇಕು ಎಂಬುದು ಅದರಲ್ಲಿರುತ್ತದೆ.
ಸಂದರ್ಶನ
ಎಸ್.ಲಕ್ಷ್ಮಿನಾರಾಯಣ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಅಪಾಯಕ್ಕೆ ಎದೆಯೊಡ್ಡಿ ವಕ್ಫ್ ವರದಿ ಮಾಡಿದ್ದು ನಾನು, ಅದರಿಂದ ಹಣ ಮಾಡಿದ್ದು ಅನೇಕರು!
Belagavi:ಅಧಿವೇಶನ ವೇಳೆ 10 ಲಕ್ಷ ಜನರ ಜತೆ ಸುವರ್ಣವಿಧಾನಸೌಧಕ್ಕೆ ಮುತ್ತಿಗೆ ಹಾಕುತ್ತೇವೆ…
ನಾನೂ ಸೀನಿಯರ್ ಲೀಡರ್, ರಾಜ್ಯಕ್ಕೆ ದಲಿತ ಸಿಎಂ ಪ್ರಸ್ತಾವ ಬಂದರೆ ಮುಂಚೂಣಿಯಲ್ಲಿರುವೆ
Congress ಸರಕಾರದಲ್ಲಿ ಹಣಕಾಸು ಸಮಸ್ಯೆಯಿಂದ ಶಾಸಕರ ಬೇಡಿಕೆ ಈಡೇರಿಲ್ಲ ಎನ್ನುವುದು ವಾಸ್ತವ
ಬಿಜೆಪಿಗೆ ಇಡೀ ರಾಜ್ಯವೇ ಒಪ್ಪಿಕೊಳ್ಳುವಂಥ ಸರ್ವಸ್ಪರ್ಶಿ ನಾಯಕತ್ವ ಇನ್ನಷ್ಟೇ ಸಿಗಬೇಕಿದೆ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
PM Modi: 43 ವರ್ಷದ ಬಳಿಕ ಪ್ರಧಾನಿ ಮೋದಿ ಕುವೈತ್ ಭೇಟಿ… ಇಲ್ಲಿದೆ ಎರಡು ದಿನದ ವೇಳಾಪಟ್ಟಿ
UI Movie Review: ಫೋಕಸ್ ಸಿಗೋವರೆಗೆ ಸಿನ್ಮಾ ನೋಡ್ತಾನೇ ಇರಿ!
Bantwal; ನಿಷೇಧವಿದ್ದರೂ ಹಳೇಯ ಸೇತುವೆಯಲ್ಲಿ ಸಂಚಾರ; ಸಿಲುಕಿಕೊಂಡ ಗೂಡ್ಸ್ ವಾಹನ
ರಬಕವಿ-ಬನಹಟ್ಟಿ: ಸಚಿವರಿಂದ ಬೇಡಿಕೆ ಈಡೇರಿಸುವ ಭರವಸೆ… ತಿಂಗಳ ಬಳಿಕ ನೇಕಾರರ ಹೋರಾಟ ಅಂತ್ಯ
German: ಮಾರುಕಟ್ಟೆಗೆ ನುಗ್ಗಿದ ಕಾರು, ಇಬ್ಬರು ಸಾವು, 60ಕ್ಕೂ ಹೆಚ್ಚು ಗಾಯ, ವೈದ್ಯನ ಬಂಧನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.