ಡೌಟೇ ಬೇಡ, ಜೋಡೆತ್ತುಗಳ ಹಾಗೆ ನಾನು, ಅನಂತ ಹೆಗಡೆ ಇಬ್ಬರೂ ಕೆಲಸ ಮಾಡುತ್ತೇವೆ…
ನನಗೂ ಅನಂತ್ ಹೆಗಡೆಗೂ ಮನಸ್ತಾಪವಿಲ್ಲ, ಸದ್ಯದಲ್ಲೇ ಭೇಟಿ ಮಾಡುವೆ; ಇಬ್ಬರೂ ಒಂದಾಗಿ ಚುನಾವಣೆ ನಡೆಸುತ್ತೇವೆ
Team Udayavani, Mar 27, 2024, 6:50 AM IST
“ಸಂಸದ ಅನಂತಕುಮಾರ್ ಹೆಗಡೆ ಹಾಗೂ ನನ್ನ ಮಧ್ಯೆ ಯಾವುದೇ ವಿರಸವಿಲ್ಲ. ಅಣ್ಣ-ತಮ್ಮ ಅಥವಾ ಜೋಡೆತ್ತುಗಳ ಹಾಗೆ ನಾವಿಬ್ಬರೂ ಪಕ್ಷಕ್ಕಾಗಿ ಕೆಲಸ ಮಾಡುತ್ತೇವೆ’ ಎಂದು ಉತ್ತರ ಕನ್ನಡ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ, ಮಾಜಿ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಅಭಿಪ್ರಾಯಪಟ್ಟಿದ್ದಾರೆ.ಹೈ ವೋಲ್ಟೇಜ್ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ನಿಯೋಜನೆಗೊಂಡ ಹಿನ್ನೆಲೆಯಲ್ಲಿ ಉದಯವಾಣಿಯ “ನೇರಾನೇರ’ ಸಂದರ್ಶನದಲ್ಲಿ ಈ ಅಭಿಪ್ರಾಯ ವ್ಯಕ್ತಪಡಿಸಿರುವ ಅವರು, ಅನಂತಕುಮಾರ್ ಹೆಗಡೆ ಭೇಟಿಗೆ ನಾನು ಸಮಯ ಕೇಳಿದ್ದೇನೆ. ಅವರ ಜತೆ ಮುಕ್ತ ಮನಸಿನಿಂದ ಚರ್ಚೆ ನಡೆಸುತ್ತೇನೆ. ನಮ್ಮಿಬ್ಬರ ಮಧ್ಯೆ ಯಾವುದೇ ವಿವಾದ-ಮನಸ್ತಾಪಗಳು ಇಲ್ಲ ಎಂದು ಹೇಳಿದ್ದಾರೆ.
ಸಂದರ್ಶನದ ಪೂರ್ಣಪಾಠ ಹೀಗಿದೆ…..
ಒಂದು ವಿಶೇಷವಾದ ಕಾಲಘಟ್ಟದಲ್ಲಿ ಲೋಕಸಭಾ ಚುನಾವಣೆಗೆ ಸ್ಪರ್ಧಿಸುತ್ತಾ ಇದ್ದೀರಿ. ಪರಿಸ್ಥಿತಿ ಹೇಗಿದೆ ? ಬಿಗುವಿನಿಂದ ಕೂಡಿದೆಯೋ, ಲಘುವಾಗಿದೆಯೋ ?
ಕಿತ್ತೂರು-ಖಾನಾಪುರವನ್ನು ಒಳಗೊಂಡಂತೆ ನಮ್ಮ ಉತ್ತರ ಕನ್ನಡ ಜಿಲ್ಲೆ ಬಿಜೆಪಿಯ ಭದ್ರಕೋಟೆ. ಸಂಸದರಾದ ಅನಂತಕುಮಾರ್ ಹೆಗಡೆಯವರು ಈ ಕ್ಷೇತ್ರದಲ್ಲಿ ನಿರಂತರವಾಗಿ ಗೆದ್ದು ಬಂದಿದ್ದಾರೆ. ಬಿಜೆಪಿಯನ್ನು ಗೆಲ್ಲಿಸಬೇಕೆಂಬುದು ಈ ಜಿಲ್ಲೆಯ ಜನರ ಆಸೆ. ಅದು ಈ ಬಾರಿಯೂ ಪುನರಾವರ್ತನೆಯಾಗುತ್ತದೆ. ಪ್ರಧಾನಿ ನರೇಂದ್ರ ಮೋದಿಯವರ ಸಾಧನೆಯನ್ನು ಮುಂದಿಟ್ಟುಕೊಂಡು ನಾವು ಚುನಾವಣೆ ಎದುರಿಸುತ್ತೇವೆ. ಚುನಾವಣೆ ಎಂದ ಮೇಲೆ ಸವಾಲು ಇದ್ದೇ ಇರುತ್ತದೆ. ನಾನು ಅತ್ಯಂತ ವಿಶ್ವಾಸದಿಂದ ಹೇಳುತ್ತೇನೆ, ನನ್ನ ಗೆಲುವಿನ ಬಗ್ಗೆ ಕಿಂಚಿತ್ ಸಂಶಯ- ಅಳುಕು ಬೇಡ. ದಾಖಲೆ ಮತಗಳ ಅಂತರದಿಂದ ಗೆಲ್ಲುತ್ತೇನೆ.
ಕಾಗೇರಿಯವರಿಗೆ ಉತ್ತರ ಕನ್ನಡ ಜಿಲ್ಲೆ ಹೊಸತಲ್ಲ. ಆದರೆ ಶಿರಸಿಯಿಂದ ಆಚೆಗೂ ಅವರು ತಮ್ಮ ನಾಯಕತ್ವವನ್ನು ವ್ಯಾಪಿಸಿಕೊಂಡಿಲ್ಲ. ಹೀಗಾಗಿ ವಿಸ್ತಾರವಾದ ಜಿಲ್ಲೆಯ ಆಶೋತ್ತರಕ್ಕೆ ಸ್ಪಂದಿಸುವುದು ಕಷ್ಟವಾಗಬಹುದೆಂಬ ಮಾತು ಕೇಳಿ ಬರುತ್ತಿದೆಯಲ್ಲ.
ನಾಯಕ- ನಾಯಕತ್ವ ಎಂದರೆ ಏನು? ಎಂಬುದು ಭಿನ್ನ ಭಿನ್ನ ವ್ಯಾಖ್ಯಾನದ ವ್ಯಾಪ್ತಿಗೆ ಒಳಪಡುವ ವಿಚಾರ. ಅದರ ಬಗ್ಗೆ ಬೇಕಾದರೆ ಸುದೀರ್ಘವಾಗಿ ಮಾತಾಡೋಣ. ಪ್ರತಿಯೊಬ್ಬ ವ್ಯಕ್ತಿಯ ರಾಜಕೀಯ ಜೀವನವೂ ಸವಾಲಿನಿಂದ ಕೂಡಿರುತ್ತದೆ. ನಾವೆಲ್ಲರೂ ತತ್‌ಕ್ಷಣಕ್ಕೆ ನಾಯಕರಾಗಿ ರೂಪುಗೊಂಡವರಲ್ಲ. ವಿದ್ಯಾರ್ಥಿ ಪರಿಷತ್ತಿನ ಹೋರಾಟದ ಹಾದಿಯಲ್ಲಿ ಬೆಳೆದು ಬಂದ ವ್ಯಕ್ತಿ ನಾನು. ಪಕ್ಷದ ತತ್ವ- ಸಿದ್ಧಾಂತ, ಹಿಂದುತ್ವದ ವಿಚಾರದಲ್ಲಿ ನಾನು ಯಾವತ್ತೂ ರಾಜಿ ಮಾಡಿಕೊಂಡಿಲ್ಲ. ಸೈದ್ಧಾಂತಿಕವಾಗಿ ಸಂಘಟನೆ ನನಗೆ ಕೊಟ್ಟ ಹೊಣೆಯನ್ನು ಯಶಸ್ವಿಯಾಗಿಯೇ ನಿಭಾಯಿಸಿದ್ದೇನೆ. ಮಾರ್ಗಗಳು ಬೇರೆಯಾದರೂ ಗುರಿ ಮಾತ್ರ ಒಂದೇ. ಅದೇ ರೀತಿ ಸರಕಾರಿ ಯೋಜನೆಗಳು ಹಾಗೂ ಕಾರ್ಯಕ್ರಮಗಳನ್ನು ಕ್ಷೇತ್ರಕ್ಕೆ ತರುವ ವಿಚಾರದಲ್ಲೂ ನಾನು ಹಿಂದೆ ಬಿದ್ದಿಲ್ಲ. ಶಾಸಕನಾಗಿ ಸದನದಲ್ಲಿ ಹೇಗೆ ಕಾರ್ಯ ನಿರ್ವಹಿಸಿದ್ದೇನೆಂಬುದಕ್ಕೆ ಸಾಕಷ್ಟು ಉದಾಹರಣೆಗಳಿವೆೆ. ನನ್ನಲ್ಲಿ ನಾಯಕತ್ವದ ಗುಣ ಇಲ್ಲದೇ ಇದ್ದಿದ್ದರೆ ಅಥವಾ ನಾನು ನಾಯಕನಾಗದೇ ಇದಿದ್ದರೆ ಆರು ಬಾರಿ ಶಾಸಕನಾಗಿ ಗೆಲ್ಲುವುದಕ್ಕೆ ಸಾಧ್ಯವಿತ್ತೇ ?
ಈ ಕ್ಷೇತ್ರ ಬಿಜೆಪಿಯ ಗಂಡುಮೆಟ್ಟಿನ ನೆಲ. ಹಾಲಿ ಸಂಸದರಿಗೆ ಜಿಲ್ಲೆಯ ಎಲ್ಲ ಭಾಗದಲ್ಲೂ ಪ್ರಭಾವವಿದೆ. ಟಿಕೆಟ್ ವಂಚಿತರಾದ ಅವರು ನಿಮ್ಮ ಗೆಲುವಿಗೆ ಸಹಕರಿಸುತ್ತಾರೆಂಬ ಭರವಸೆ ಇದೆಯೇ ?
ಖಂಡಿತ ಇದೆ. ಅನಂತಕುಮಾರ್ ಹೆಗಡೆ ನಿರಂತರವಾಗಿ ಈ ಕ್ಷೇತ್ರವನ್ನು ಪ್ರತಿನಿಧಿಸಿದವರು. ಕೇಂದ್ರ ಸರಕಾರದಲ್ಲಿ ಸಚಿವರಾಗಿಯೂ ಕೆಲಸ ಮಾಡಿದ್ದಾರೆ. ಅಭಿವೃದ್ಧಿ ವಿಚಾರದಲ್ಲಿ ತಮ್ಮದೇ ಆದ ವಿಶೇಷ ಕಲ್ಪನೆ ಹಾಗೂ ವೈಚಾರಿಕ ಸ್ಪಷ್ಟತೆಯನ್ನು ಹೊಂದಿರುವ ವ್ಯಕ್ತಿ. ಮೋದಿ ಮತ್ತೆ ಪ್ರಧಾನಿಯಾಗಬೇಕು, ಕ್ಷೇತ್ರದಲ್ಲಿ ಮತ್ತೆ ಬಿಜೆಪಿ ಗೆಲ್ಲಬೇಕೆಂದು ಅವರು ಈಗಾಗಲೇ ಹೇಳಿದ್ದಾರೆ. ಹಿಂದಿನಂತೆಯೇ ಈ ಬಾರಿಯೂ ಅವರು ಬಿಜೆಪಿ ಗೆಲುವಿನಲ್ಲಿ ಸಕ್ರಿಯ ಪಾತ್ರ ವಹಿಸುತ್ತಾರೆಂಬ ವಿಶ್ವಾಸವಿದೆ. ಮುಂದಿನ ದಿನಗಳಲ್ಲಿ ನಾನು ಅವರ ಅನುಭವ ಹಾಗೂ ಸಲಹೆಯನ್ನು ಪಡೆದುಕೊಳ್ಳುತ್ತೇನೆ. ನಾವಿಬ್ಬರೂ ಅಣ್ಣ-ತಮ್ಮಂದಿರಂತೆ, ಜೋಡೆತ್ತಿನ ರೀತಿಯಲ್ಲಿ ಕ್ಷೇತ್ರದ ಅಭಿವೃದ್ಧಿಗೆ ಕೆಲಸ ಮಾಡುತ್ತೇವೆ.
ಅನಂತ್ ಹೆಗಡೆ ಭೇಟಿ ಮಾಡಿ ಸಹಕಾರ ಕೇಳುತ್ತೀರಾ ?
ಖಂಡಿತ. ನನ್ನ ಹಾಗೂ ಅನಂತಕುಮಾರ್ ಮಧ್ಯೆ ವಿವಾದ, ವಿರಸ, ಮನಸ್ತಾಪಗಳು ಇಲ್ಲ. ಅವರ ಭೇಟಿಗೆ ನಾನು ಈಗಾಗಲೇ ಸಮಯ ಕೋರಿದ್ದೇನೆ. ಇಬ್ಬರೂ ಒಂದಾಗಿ ಚುನಾವಣೆ ನಡೆಸುತ್ತೇವೆ.
ಉತ್ತರ ಕನ್ನಡಕ್ಕೆ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ತಂದವರಿಗೆ ಮಾತ್ರ ನಮ್ಮ ಓಟ್ ಎಂಬ ಕೂಗಿರುವುದು ನಿಮ್ಮ ಗಮನಕ್ಕೆ ಬಂದಿದೆಯೇ ?
ಈ ಹೋರಾಟವನ್ನು ನಾನು ಗಮನಿಸಿದ್ದೇನೆ. ಮಾತ್ರವಲ್ಲ ಸ್ಪಂದಿಸಿದ್ದೇನೆ. ನಾನು ಸ್ಪೀಕರ್ ಆಗಿದ್ದ ಸಂದರ್ಭದಲ್ಲಿ ಜಿಲ್ಲೆಯ ಈ ಕೂಗಿನ ಬಗ್ಗೆ ಸರಕಾರದ ಗಮನ ಸೆಳೆದಿದ್ದೇನೆ. ಶಿರಸಿಯಲ್ಲಿ ಸುಮಾರು 180 ಕೋಟಿ ರೂ. ವೆಚ್ಚದಲ್ಲಿ 250 ಬೆಡ್ ಸಾಮರ್ಥ್ಯದ ಆಸ್ಪತ್ರೆ ನಿರ್ಮಾಣವಾಗುತ್ತಿದೆ.ಯಾವ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗೂ ಕಡಿಮೆ ಇಲ್ಲದಂತೆ ರೂಪಿಸಲಾಗಿದೆ. ಅದೇ ರೀತಿ ಘಟ್ಟದ ಕೆಳಗಿನ ತಾಲೂಕುಗಳಿಗೆ ಅನುಕೂಲ ಕಲ್ಪಿಸಲು ಕುಮಟಾದಲ್ಲಿ ಇಂಥದ್ದೇ ಒಂದು ಆಸ್ಪತ್ರೆ ನಿರ್ಮಾಣಕ್ಕೆ ನಮ್ಮ ಸರಕಾರ ಅಧಿಕಾರದಲ್ಲಿದ್ದಾಗ ಜಾಗ ಗುರುತಿಸಲಾಗಿತ್ತು. ಕೇಂದ್ರ ಹಾಗೂ ರಾಜ್ಯ ಸರಕಾರದ ಜತೆಗೆ ಸಮನ್ವಯ ನಡೆಸಿ ಈ ಕಾರ್ಯ ತ್ವರಿತವಾಗಿ ಅನುಷ್ಠಾನಗೊಳ್ಳುವಂತೆ ಮಾಡುವುದು ನನ್ನ ಜವಾಬ್ದಾರಿ ಎಂದು ಭರವಸೆ ನೀಡುತ್ತೇನೆ.
ಅಭಿವೃದ್ಧಿ ದೃಷ್ಟಿಯಿಂದ ಉ. ಕನ್ನಡ ನತದೃಷ್ಟ ಜಿಲ್ಲೆ ಎನ್ನಲಾಗುತ್ತದೆ. ಜಿಲ್ಲೆಗೆ ಏನು ನಿರೀಕ್ಷಿಸಬಹುದು ?
ಉಳಿದ ಜಿಲ್ಲೆಗಳಿಗೆ ಹೋಲಿಸಿ ನಮ್ಮ ಜಿಲ್ಲೆಯ ಅಭಿವೃದ್ಧಿ ಅಳೆಯು ವುದು ಸೂಕ್ತವಾಗುವುದಿಲ್ಲ. ಏಕೆಂದರೆ ನಮ್ಮದು ಶೇ.80ರಷ್ಟು ಅರಣ್ಯ ಪ್ರದೇಶವನ್ನು ಒಳಗೊಂಡ ಜಿಲ್ಲೆ. ಇದಕ್ಕೆ ಬಿಜೆಪಿಯ ಸಂಸದರು ಹಾಗೂ ಶಾಸಕರನ್ನು ದೂರಿದರೆ ಪ್ರಯೋಜನವಿಲ್ಲ. ಕಾಂಗ್ರೆಸ್ ಜಾರಿಗೆ ತಂದ ನೀತಿಗಳಿಂದಲೇ ಜಿಲ್ಲೆ ಅಭಿವೃದ್ಧಿಯಲ್ಲಿ ಹಿಂದುಳಿದಿದೆ.
ಸಂವಿಧಾನದ ಬಗ್ಗೆ ಚರ್ಚೆ ನಡೆಸಲು ಅವಕಾಶ ಮಾಡಿಕೊಟ್ಟ ಮೊದಲ ಸ್ಪೀಕರ್ ನೀವು. ಸಂವಿಧಾನ ನಿಮ್ಮ ಕೈ ಹಿಡಿಯುತ್ತದೆ ಎಂದು ನಂಬಿದ್ದೀರಾ ?
ಖಂಡಿತವಾಗಿಯೂ ಆ ನಂಬಿಕೆ ಇದೆ. ಡಾ| ಬಿ.ಆರ್.ಅಂಬೇಡ್ಕರ್ ನೇತೃತ್ವದಲ್ಲಿ ರಚನೆಯಾದ ಭಾರತದ ಸಂವಿಧಾನ ಶ್ರೇಷ್ಠ ರಾಷ್ಟ್ರ ಗ್ರಂಥ. ಅದರಲ್ಲಿ ನಾನು ಸಂಪೂರ್ಣ ನಂಬಿಕೆ ಹಾಗೂ ಶ್ರದ್ಧೆಯನ್ನು ಹೊಂದಿದ್ದೇನೆ. ನಾನು ಸಂವಿಧಾನದ ಚೌಕಟ್ಟನ್ನು ಮೀರದ ವ್ಯಕ್ತಿ. ಪ್ರತಿಯೊಬ್ಬರೂ ಸಂವಿಧಾನದ ಅಡಿಯಲ್ಲೇ ಕೆಲಸ ಮಾಡಬೇಕಾಗುತ್ತದೆ.
ಈ ಬಾರಿಯ ಚುನಾವಣೆಗೆ ಕಾಗೇರಿಯವರ ಧ್ಯೇಯವಾಕ್ಯ ಏನು?
ಮತ್ತೊಮ್ಮೆ ಮೋದಿ.
ನರೇಂದ್ರ ಮೋದಿಯವರು ಮತ್ತೂಮ್ಮೆ ಈ ದೇಶದ ಪ್ರಧಾನಿಯಾಗಬೇಕು. ಇದು ಬಿಜೆಪಿ ಹಾಗೂ ಪರಿವಾರ ಸಂಸ್ಥೆಗಳ ಮಾತಲ್ಲ. ಇಡೀ ದೇಶದ ಜನರ ಬಯಕೆ ಕೂಡ. ಅಷ್ಟೇ ಅಲ್ಲ, ಅದೆಷ್ಟೋ ಕಾಂಗ್ರೆಸ್ ಮುಖಂಡರು ಖಾಸಗಿಯಾಗಿ ಈ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ. ಪ್ರಸಕ್ತ ದೇಶದಲ್ಲಿ ಮೋದಿ ಅವರಷ್ಟು ಬದ್ಧತೆ ಇರುವ ನಾಯಕ ಯಾರಿದ್ದಾರೆ ಹೇಳಿ? ಮೋದಿ ಅವರ ಎರಡು ಅವಧಿಯ ಸಾಧನೆಯನ್ನು ನೋಡಿ, ಹಿಂದೆ ಅವರನ್ನು ವಿರೋಧಿಸುತ್ತಿದ್ದವರು ಸಹ ಮೋದಿ ಮತ್ತೂಮ್ಮೆ ದೇಶಕ್ಕೆ ಬೇಕು ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸುತ್ತಿದ್ದಾರೆ. ದೇಶದ ಸಮಗ್ರತೆ ಹಾಗೂ ಅಭಿವೃದ್ಧಿಗಾಗಿ ಪ್ರಧಾನಿ ಮೋದಿ ಅವರನ್ನು ಮೂರನೇ ಅವಧಿಗೆ ನಾವೆಲ್ಲರೂ ಸೇರಿ ಪ್ರಧಾನಿಯಾಗಿಸಬೇಕಿದೆ.
ಉದಯವಾಣಿ ಸಂದರ್ಶನ; ರಾಘವೇಂದ್ರ ಭಟ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Belagavi:ಅಧಿವೇಶನ ವೇಳೆ 10 ಲಕ್ಷ ಜನರ ಜತೆ ಸುವರ್ಣವಿಧಾನಸೌಧಕ್ಕೆ ಮುತ್ತಿಗೆ ಹಾಕುತ್ತೇವೆ…
ನಾನೂ ಸೀನಿಯರ್ ಲೀಡರ್, ರಾಜ್ಯಕ್ಕೆ ದಲಿತ ಸಿಎಂ ಪ್ರಸ್ತಾವ ಬಂದರೆ ಮುಂಚೂಣಿಯಲ್ಲಿರುವೆ
Congress ಸರಕಾರದಲ್ಲಿ ಹಣಕಾಸು ಸಮಸ್ಯೆಯಿಂದ ಶಾಸಕರ ಬೇಡಿಕೆ ಈಡೇರಿಲ್ಲ ಎನ್ನುವುದು ವಾಸ್ತವ
ಬಿಜೆಪಿಗೆ ಇಡೀ ರಾಜ್ಯವೇ ಒಪ್ಪಿಕೊಳ್ಳುವಂಥ ಸರ್ವಸ್ಪರ್ಶಿ ನಾಯಕತ್ವ ಇನ್ನಷ್ಟೇ ಸಿಗಬೇಕಿದೆ
Congress ಪಕ್ಷದಲ್ಲಿ ನಾಯಕತ್ವಕ್ಕಾಗಿ ಗಲಾಟೆ ಇಲ್ಲ
MUST WATCH
ಹೊಸ ಸೇರ್ಪಡೆ
Digital arrest: ವೃದ್ಧೆಗೆ ಡಿಜಿಟಲ್ ದಿಗ್ಬಂಧನ ಹಾಕಿ 10.21 ಲ. ರೂ. ಕಿತ್ತ ಸೈಬರ್ ವಂಚಕ
Director Guruprasad: ಗುರುಪ್ರಸಾದ್‌ಗೆ ಸಾಲ ಕೊಟ್ಟವರ ತನಿಖೆಗೆ ಸಿದ್ಧತೆ
Drunk & Drive Case: ಅತಿ ವೇಗದ ಚಾಲನೆ: 522 ಕೇಸ್, 1.29 ಲಕ್ಷ ದಂಡ
Bengaluru: ನಿಲ್ಲದ ಪಟಾಕಿ ಅವಘಡ: ಮತ್ತೆ 10 ಮಂದಿ ಕಣ್ಣಿಗೆ ತೊಂದರೆ
Sandalwood: ಕರಾವಳಿ ಸಂಸ್ಕೃತಿ ಸುತ್ತ ದಿಂಸೋಲ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.