2024 Election; ಲೋಕಸಭೆ ಚುನಾವಣೆಗೆ ಮುನ್ನುಡಿಯೇ ಈ ಫಲಿತಾಂಶ?
Team Udayavani, Dec 4, 2023, 6:30 AM IST
ಪಂಚರಾಜ್ಯ ವಿಧಾನಸಭೆ ಚುನಾವಣೆಯಲ್ಲಿನ ನಾಲ್ಕು ರಾಜ್ಯಗಳ ಫಲಿತಾಂಶ ಪ್ರಕಟವಾಗಿದ್ದು, ಮೂರು ಬಿಜೆಪಿ ಮತ್ತು ಒಂದು ಕಾಂಗ್ರೆಸ್ ಜಯಗಳಿಸಿವೆ. ಈ ಫಲಿತಾಂಶ ನಿರೀಕ್ಷಿತವಾದದ್ದೇನೂ ಅಲ್ಲ. ಮಧ್ಯಪ್ರದೇಶದಲ್ಲಿ ಬಿಜೆಪಿಗೆ ಆಡಳಿತ ವಿರೋಧಿ ಅಲೆ ಎದುರಾಗಿದ್ದರೂ, ಗೆದ್ದು ಅಚ್ಚರಿ ಮೂಡಿಸಿದೆ. ಅತ್ತ ರಾಜಸ್ಥಾನ ಮತ್ತು ಛತ್ತೀಸ್‌ಗಢದಲ್ಲಿ ಆಡಳಿತ ವಿರೋಧಿ ಅಲೆಗೆ ಸ್ವತಃ ಕಾಂಗ್ರೆಸ್ ಸೋತು ಹೋಗಿದೆ. ಇನ್ನು ತೆಲಂಗಾಣದಲ್ಲೂ ಆಡಳಿತ ವಿರೋಧಿ ಅಲೆಯಿಂದಾಗಿ ಬಿಆರ್‌ಎಸ್ ಸೋತಿದೆ.
ಹಿಂದಿ ಹಾರ್ಟ್‌ಲ್ಯಾಂಡ್ ಎನ್ನಿಸಿಕೊಂಡಿರುವ ಉತ್ತರ ಭಾರತದ ಮಧ್ಯಪ್ರದೇಶ, ರಾಜಸ್ಥಾನ ಮತ್ತು ಛತ್ತೀಸ್‌ಗಢ ಬಿಜೆಪಿ ಪಾಲಾಗಿವೆ. ಇಲ್ಲಿ ಮೋದಿ ಜನಪ್ರಿಯತೆ ಉತ್ತುಂಗದಲ್ಲಿರುವುದೂ ಈ ಫಲಿತಾಂಶ ತೋರಿಸಿಕೊಟ್ಟಿದೆ. ಈ ಮೂರರಲ್ಲೂ ಬಿಜೆಪಿ ಸಿಎಂ ಫೇಸ್ ಇಲ್ಲದೇ ಚುನಾವಣೆ ಎದುರಿಸಿತ್ತು. ಕಾಂಗ್ರೆಸ್‌ನ ಗ್ಯಾರಂಟಿಗಳಿಗೆ ಬದಲಾಗಿ, ಮೋದಿ ಅವರನ್ನೇ ಗ್ಯಾರಂಟಿ ರೂಪದಲ್ಲಿ ತೋರಿಸಿತ್ತು. ಇದು ಸಂಪೂರ್ಣವಾಗಿ ವಕೌìಟ್ ಆಗಿರುವ ಎಲ್ಲ ಲಕ್ಷಣಗಳು ತೋರುತ್ತಿವೆ.
ಇಲ್ಲಿ ಅಚ್ಚರಿಗೆ ಕಾರಣವಾಗಿರುವುದು ಛತ್ತೀಸ್‌ಗಢ ಫಲಿತಾಂಶ. ಇಲ್ಲಿನ ಸಿಎಂ ಭೂಪೇಶ್ ಬಘೇಲ್ ಜನಪ್ರಿಯತೆ ಉತ್ತುಂಗದಲ್ಲಿತ್ತು. ಒಂದು ಹಂತದಲ್ಲಿ ಲೀಡರ್‌ಲೆಸ್ ಪಕ್ಷವಾಗಿದ್ದ ಬಿಜೆಪಿ, ಅನಂತ ರದಲ್ಲಿ ರಮಣ್ ಸಿಂಗ್ ಅವರಿಗೆ ಮತ್ತೆ ಮಣೆ ಹಾಕಿದ್ದಲ್ಲದೇ, ಸ್ವತಃ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರೇ ಕಣಕ್ಕಿಳಿದರು. ಹೀಗಾಗಿ ತಳಮಟ್ಟದ ಸಂಘಟನೆಯಿಂದಾಗಿ ಬಿಜೆಪಿ ಗೆಲುವು ಸಾಧಿಸಿತು.
ಈ ಫಲಿತಾಂಶ ಬಿಜೆಪಿ ಮತ್ತು ಕಾಂಗ್ರೆಸ್ ನಡುವಿನ ಚುನಾವಣ ತಂತ್ರಗಾರಿಕೆಯ ವಿಚಾರವಾಗಿ ಬಹಳಷ್ಟು ಚರ್ಚೆ ಹುಟ್ಟುಹಾಕಿದೆ. ಆಡಳಿತ ವಿರೋಧಿ ಅಲೆಯನ್ನು ಮೀರಿ ಜಯಗಳಿಸುವ ಕಲೆಯನ್ನೂ ಬಿಜೆಪಿ ಕಲಿತುಕೊಂಡಿದೆ ಎಂಬು ದನ್ನು ಈ ಚುನಾವಣೆ ಸಾಬೀತು ಮಾಡಿದೆ. ರಾಜಸ್ಥಾನ ಮಾತ್ರ ಒಮ್ಮೆ ಕಾಂಗ್ರೆಸ್, ಒಮ್ಮೆ ಬಿಜೆಪಿಗೆ ಎಂಬ ಸಂಪ್ರದಾಯ ಮುಂದು ವರಿಸಿಕೊಂಡು ಬಂದಿದ್ದು, ಉಳಿದ ರಾಜ್ಯಗಳು ಈ ಸಂಪ್ರದಾಯ ಪಾಲನೆ ಮಾಡುತ್ತಿಲ್ಲ. ಮಧ್ಯಪ್ರದೇಶದಲ್ಲಿ ಶಿವರಾಜ್ ಸಿಂಗ್ ಚೌಹಾಣ್, ಸತತ ಮೂರು ಬಾರಿ ಗೆದ್ದು, 2018ರಲ್ಲಿ ಕೊಂಚ ಹಿನ್ನಡೆ ಅನುಭವಿಸಿದ್ದರು. ಆದರೆ ಬದಲಾದ ಸನ್ನಿವೇಶದಲ್ಲಿ ಮತ್ತೆ ಸಿಎಂ ಆಗಿದ್ದರು. ಈ ಬಾರಿ ಶಿವರಾಜ್ ಸಿಂಗ್ ಚೌಹಾಣ್ ಆಡಳಿತ ವಿರೋಧಿ ಅಲೆಗೆ ಕೊಚ್ಚಿ ಹೋಗಬಹುದು ಎಂದೇ ವ್ಯಾಖ್ಯಾನಿಸಲಾಗಿತ್ತು. ಜತೆಗೆ ಕಮಲ್‌ನಾಥ್ ಅವರ ಬಗ್ಗೆ ಸಿಂಪತಿ ಇದೆ ಎಂಬ ಮಾತುಗಳೂ ಕೇಳಿಬಂದಿದ್ದವು.
ವಿಚಿತ್ರವೆಂದರೆ ಬಿಜೆಪಿ ಕೂಡ ಆಡಳಿತ ವಿರೋಧಿ ಹಿನ್ನೆಲೆಯಲ್ಲೇ ಶಿವರಾಜ್ ಸಿಂಗ್ ಚೌಹಾಣ್ ಅವರನ್ನು ಮುಖ್ಯ ಮಂತ್ರಿ ಅಭ್ಯರ್ಥಿ ಎಂದು ಘೋಷಿಸಲೇ ಇಲ್ಲ. ಇದಕ್ಕೆ ಬದಲಾಗಿ, ಕೇಂದ್ರ ಸರಕಾರದಲ್ಲಿನ ಪ್ರಭಾವಿ ಸಚಿವರನ್ನೇ ಕರೆತಂದು, ಅಖಾಡಕ್ಕಿ ಳಿಸಲಾಗಿತ್ತು. ಜತೆಗೆ ಇವರು ಪ್ರತಿನಿಧಿಸುವ ಪ್ರದೇಶಗಳ ಜವಾ ಬ್ದಾರಿಯನ್ನೂ ನೀಡಲಾಗಿತ್ತು. ಸಾಮೂಹಿಕ ವಾಗಿ ಚುನಾ ವಣೆಗೆ ಹೋದ ಪರಿಣಾಮದಿಂದ ಬಿಜೆಪಿ ಅಭೂತಪೂರ್ವ ರೀತಿ ಯಲ್ಲಿ ಗೆದ್ದಿದೆ. ಅಲ್ಲದೆ ಇಲ್ಲಿ ಹಿಂದುತ್ವವೂ ವಕೌìಟ್ ಆಗಿದೆ.
ಬಿಜೆಪಿಯ ಇಂದಿನ ಗೆಲುವಿನಲ್ಲಿ ಶಿವರಾಜ್ ಸಿಂಗ್ ಚೌಹಾಣ್ ಅವರ ಪಾತ್ರವನ್ನು ತಳ್ಳಿಹಾಕುವಂತಿಲ್ಲ. ಆರಂಭದಲ್ಲಿ ಬಿಜೆಪಿಯ ಅಭ್ಯರ್ಥಿಗಳ ಪಟ್ಟಿಯಲ್ಲಿ ಶಿವರಾಜ್ ಸಿಂಗ್ ಚೌಹಾಣ್ ಅವರ ಹೆಸರೇ ಇರಲಿಲ್ಲ. ಜತೆಗೆ ಹಾಲಿ ಸಿಎಂ ಆಗಿದ್ದರೂ, ಮುಂದಿನ ಸಿಎಂ ಇವರೇ ಎಂದೂ ಬಿಂಬಿಸಲಿಲ್ಲ. ಈ ಬೆಳವಣಿಗೆಗಳಿಂದ ಬೇಸರಗೊಳ್ಳದ ಅವರು, ಪಕ್ಷವನ್ನು ಅಧಿಕಾರಕ್ಕೆ ತರುವ ನಿಟ್ಟಿನಲ್ಲಿ ಕೆಲಸ ಮಾಡಿದರು. ಮಧ್ಯಪ್ರದೇಶದಲ್ಲಿ ಬಿಜೆಪಿಗೆ ಹೆಚ್ಚಿನ ಪ್ರಮಾಣದ ಮಹಿಳೆಯರ ಮತ ಬಂದಿದ್ದು, ಇದಕ್ಕೂ ಶಿವರಾಜ್ ಸಿಂಗ್ ಚೌಹಾಣ್ ಅವರೇ ಕಾರಣ ಎಂದೇ ವಿಶ್ಲೇಷಿಸಲಾಗುತ್ತಿದೆ.
ರಾಜಸ್ಥಾನ ಫಲಿತಾಂಶದ ಬಗ್ಗೆ ಹೆಚ್ಚಿನ ನಿರೀಕ್ಷೆಗಳೇನು ಇರಲಿಲ್ಲ. ಇದಕ್ಕೆ ಕಾರಣ, ಈ ರಾಜ್ಯದ ಬದಲಾವಣೆಯ ಸಂಪ್ರದಾಯ. ಪ್ರತೀ 5 ವರ್ಷಕ್ಕೊಮ್ಮೆ ಸರಕಾರ ಬದಲಿಸುವುದು ಇಲ್ಲಿ ಮೊದಲಿ ನಿಂದಲೂ ನಡೆದುಬಂದ ಪದ್ಧತಿ. ವಿಶೇಷವೆಂದರೆ ಈ ಬದಲಾವಣೆ ಯಿಂದಾ ಗಿಯೇ ನಾವು ಅಧಿಕಾರಕ್ಕೆ ಬರುತ್ತೇವೆ ಎಂದು ಬಿಜೆಪಿ ಕೈಕಟ್ಟಿ ಕೂರಲಿಲ್ಲ. ಬದಲಾಗಿ ಚುನಾವಣೆಗೆ ಬೇರೆ ರೀತಿಯ ತಂತ್ರಗಾರಿಕೆ ರೂಪಿಸಿತು. ರಾಜ್ಯದಲ್ಲಿ ವಸುಂಧರಾ ರಾಜೇ ಅವರೇ ಅಗ್ರ ನಾಯಕಿ ಯಾಗಿದ್ದರೂ, ಇವರನ್ನು ಸಿಎಂ ಅಭ್ಯರ್ಥಿ ಎಂದು ಬಿಂಬಿಸಲಿಲ್ಲ. ಇಲ್ಲೂ ಕೇಂದ್ರ ಸಚಿವರು ಮತ್ತು ಸಂಸದರು ಅಖಾಡಕ್ಕೆ ಇಳಿದರು. ಮಧ್ಯಪ್ರದೇಶದಂತೆಯೇ ಇಲ್ಲೂ ಇವರಿಗೆ ಆಯಾ ಪ್ರದೇಶಗಳ ಜವಾಬ್ದಾರಿ ನೀಡಲಾಗಿತ್ತು.
ಇನ್ನು ಕಾಂಗ್ರೆಸ್ ಮಾತ್ರ ಆಂತರಿಕ ಕಚ್ಚಾಟಕ್ಕೆ ಬಲಿಯಾಯಿತು ಎಂದು ಹೇಳಲೇನೂ ಅಡ್ಡಿಯಿಲ್ಲ. ಅಶೋಕ್ ಗೆಹೊÉàಟ್ ಮತ್ತು ಸಚಿನ್ ಪೈಲಟ್ ಅವರ ನಡುವಿನ ಆಂತರಿಕ ಗುದ್ದಾಟ ಹೆಚ್ಚು ಪೆಟ್ಟುಕೊಟ್ಟಿತು. ಇನ್ನೇನು ಮತದಾನ ಸಮೀಪವಿದೆ ಎಂದಾಗ ಹೈಕಮಾಂಡ್ ಮಧ್ಯಪ್ರವೇಶಿಸಿ, ಒಗ್ಗಟ್ಟಾಗಿಯೇ ಚುನಾವಣೆಗೆ ಹೋಗುತ್ತಿದ್ದೇವೆ ಎಂದು ಬಿಂಬಿಸಲು ಯತ್ನಿಸಿತು. ಆದರೆ ಇದು ವಕೌìಟ್ ಆಗಲೇ ಇಲ್ಲ.
ತೆಲಂಗಾಣ ಮಾತ್ರ ಕಾಂಗ್ರೆಸ್‌ಗೆ ಜೀವ ತಂದಿದೆ. 10 ವರ್ಷಗಳ ಬಿಆರ್‌ಎಸ್ ಪಕ್ಷದ ಆಡಳಿತ ಕೊನೆಗೊಂಡಿದ್ದು, ಕಾಂಗ್ರೆಸ್ ಗೆಲುವು ಸಾಧಿಸಿದೆ. ರೇವಂತ್ ರೆಡ್ಡಿ ಅವರ ನಾಯಕತ್ವದಲ್ಲಿ ಚುನಾವಣೆಗೆ ಹೋಗಿದ್ದ ಕಾಂಗ್ರೆಸ್, ಕೆಸಿಆರ್ ಜನಪ್ರಿಯತೆಯನ್ನೂ ಮೀರಿ ಗೆಲುವು ಸಾಧಿಸಿದೆ. ಪ್ರಮುಖವಾಗಿ ಇಲ್ಲಿ ಕೆಲಸ ಮಾಡಿರುವುದು ರಾಹುಲ್ ಗಾಂಧಿಯವರ ಭಾರತ್ ಜೋಡೋ ಯಾತ್ರೆ ಮತ್ತು ರೇವಂತ್ ರೆಡ್ಡಿ ಅವರ ಸಂಘಟನೆ. ಕಳೆದ ಎರಡು-ಮೂರು ವರ್ಷಗಳ ಹಿಂದಿನ ಪರಿಸ್ಥಿತಿ ಹೋಲಿಕೆ ಮಾಡಿದರೆ ಕಾಂಗ್ರೆಸ್ ಈ ಮಟ್ಟಕ್ಕೆ ಪುನರುತ್ಥಾನವಾಗಲಿದೆ ಎಂಬುದು ಯಾರೂ ನಂಬಿರಲಿಲ್ಲ. ಈ ರಾಜ್ಯದಲ್ಲಿ ಬಿಆರ್‌ಎಸ್‌ಗೆ ಬಿಜೆಪಿಯೇ ಪ್ರತಿಸ್ಪರ್ಧಿ ಎಂದೇ ಭಾವಿಸಲಾಗಿತ್ತು. ಇದಕ್ಕೆ ಪೂರಕವಾಗಿ ಹೈದರಾಬಾದ್ ಮಹಾನಗರ ಪಾಲಿಕೆ ಚುನಾ ವಣೆಯಲ್ಲಿ ಬಿಜೆಪಿ ಉತ್ತಮ ಸ್ಥಾನ ಗಳಿಸಿ, ಪ್ರತಿಸ್ಪರ್ಧಿಯಾಗುವ ಮುನ್ಸೂಚನೆಯನ್ನೂ ನೀಡಿತು. ಆದರೆ ಭಾರತ್ ಜೋಡೋ ಯಾತ್ರೆ ಕಾಂಗ್ರೆಸ್‌ಗೆ ಸಂಘಟನೆಯ ಶಕ್ತಿ ತಂದು ಕೊಟ್ಟರೆ, ರೇವಂತ್ ರೆಡ್ಡಿ ತಮ್ಮ ತಂತ್ರಗಾರಿಕೆಯಿಂದ ಕಾರ್ಯ ಕರ್ತರನ್ನು ಒಗ್ಗೂಡಿಸಿದರು. ಜತೆಗೆ ಕರ್ನಾಟಕ ಚುನಾ ವಣೆಯಲ್ಲಿ ಕಾಂಗ್ರೆಸ್ ಗೆಲುವಿಗೆ ಕಾರಣವಾಗಿದ್ದ ಸುನಿಲ್ ಕುನ ಗೋಳು ಅವರ ಸ್ಟ್ರಾಟಜಿಯೂ ಉತ್ತಮವಾಗಿ ಕೆಲಸ ಮಾಡಿತು.
ಈ ನಾಲ್ಕು ರಾಜ್ಯಗಳ ಫಲಿತಾಂಶ ಮುಂದಿನ ಲೋಕಸಭೆ ಚುನಾವಣೆಗೆ ದಿಕ್ಸೂಚಿಯೇ ಎಂಬ ಪ್ರಶ್ನೆಗೆ ಹೌದು ಎಂದೇ ಉತ್ತರ ಕೊಡಬೇಕಾಗಬಹುದು. ಇದಕ್ಕೆ ಕಾರಣವೂ ಇದೆ. ಹಿಂದಿ ಭಾಷಿಕ ರಾಜ್ಯಗಳಲ್ಲಿ ಇಂದಿಗೂ ಮೋದಿ ಅವರ ವರ್ಚಸ್ಸು ಕಡಿಮೆಯಾಗಿಲ್ಲ ಎಂಬುದಕ್ಕೆ ಈ ಫಲಿತಾಂಶವೇ ಸಾಕ್ಷಿ. ಮೊದಲೇ ಹೇಳಿದ ಹಾಗೆ ಮೋದಿ ಗ್ಯಾರಂಟಿ ಮುಂದಿಟ್ಟುಕೊಂಡೇ ಬಿಜೆಪಿ ಚುನಾವಣೆಗೆ ಹೋಗಿತ್ತು. ಹಾಗೆಯೇ ಚುನಾವಣೆ ನಡೆದ ಈ ಮೂರು ರಾಜ್ಯಗಳು ಸೇರಿ, ಉತ್ತರ ಪ್ರದೇಶ, ಉತ್ತರಾಖಂಡ, ಹಿಮಾಚಲ ಪ್ರದೇಶ, ಝಾರ್ಖಂಡ್ ಸೇರಿ, ಹಿಂದಿ ಭಾಷಿಕ ರಾಜ್ಯಗಳಲ್ಲಿ ಮೋದಿ ವರ್ಚಸ್ಸು ಕೆಲಸ ಮಾಡುವುದು ಖಂಡಿತ. ಹೀಗಾಗಿ, ದೇಶದ ಉತ್ತರದಲ್ಲಿನ ರಾಜ್ಯಗಳಲ್ಲಿ ಬಿಜೆಪಿಗೆ ಹೆಚ್ಚು ಮತ ಬಂದಷ್ಟೂ ಕೇಂದ್ರದಲ್ಲಿ ಅಧಿಕಾರ ಹಿಡಿಯುವಲ್ಲಿ ಸಹಕಾರಿ ಯಾಗುತ್ತದೆ. ಆದರೆ ದಕ್ಷಿಣ ಭಾರತದಲ್ಲಿ ಬಿಜೆಪಿಗೆ ಕರ್ನಾಟಕ ಹೊರತುಪಡಿಸಿದರೆ, ಹೆಚ್ಚು ಬೆಂಬಲ ಕಷ್ಟ. ತೆಲಂಗಾಣದಲ್ಲಿ ಕಳೆದ ಬಾರಿಗಿಂತ ಈ ಬಾರಿ ಒಂದಷ್ಟು ಹೆಚ್ಚು ಸ್ಥಾನ ಪಡೆಯುವಲ್ಲಿ ಬಿಜೆಪಿ ಯಶಸ್ಸು ಗಳಿಸಬಹುದು.
ಆದರೆ, ಕಾಂಗ್ರೆಸ್ ಅನ್ನು ಸಂಪೂರ್ಣವಾಗಿ ತಳ್ಳಿಹಾಕಲು ಸಾಧ್ಯವೂ ಇಲ್ಲ. ನಾಲ್ಕೂ ರಾಜ್ಯಗಳಲ್ಲಿ ಕಾಂಗ್ರೆಸ್ ಹೀನಾಯವಾಗಿ ಸೋತಿಲ್ಲ. ಛತ್ತೀಸ್‌ಗಢದಲ್ಲಿ ಬಿಜೆಪಿ ಮತ ಪ್ರಮಾಣ ಶೇ.46 ರಷ್ಟಿದ್ದರೆ, ಕಾಂಗ್ರೆಸ್‌ನದ್ದು, ಶೇ.42 ಇದೆ. ಮಧ್ಯಪ್ರದೇಶದಲ್ಲಿ ಬಿಜೆಪಿ ಶೇ.48, ಕಾಂಗ್ರೆಸ್ ಶೇ.40 ಇದೆ. ರಾಜಸ್ಥಾನದಲ್ಲಿ ಬಿಜೆಪಿ ಶೇ.41 ಮತ್ತು ಕಾಂಗ್ರೆಸ್ ಶೇ.39ರಷ್ಟಿದೆ. ತೆಲಂಗಾಣದಲ್ಲಿ ಕಾಂಗ್ರೆಸ್ ಶೇ.39, ಬಿಜೆಪಿ ಶೇ.13ರಷ್ಟಿದೆ. ನಾಲ್ಕು ರಾಜ್ಯಗಳಲ್ಲಿ ಮೂರ ರಲ್ಲಿ ಸೋತಿದ್ದರೂ, ಕಾಂಗ್ರೆಸ್ ಮತ ಪ್ರಮಾಣ ಹೆಚ್ಚೇ ಇದೆ.
ಇಲ್ಲಿ ಸಮಸ್ಯೆಯಾಗಿರುವುದು ಕಾಂಗ್ರೆಸ್ ಹೈಕಮಾಂಡ್‌ನ ಶಕ್ತಿ. ಬಿಜೆಪಿ ಮತ್ತು ಕಾಂಗ್ರೆಸ್‌ಗೆ ಹೋಲಿಕೆ ಮಾಡಿದರೆ, ಪಕ್ಷದ ಮೇಲೆ ಬಿಜೆಪಿ ಹೈಕಮಾಂಡ್ ಹೆಚ್ಚು ಹಿಡಿತ ಹೊಂದಿದೆ. ಆದರೆ ಕಾಂಗ್ರೆಸ್ ಎಲ್ಲೋ ಒಂದು ಕಡೆಯಲ್ಲಿ ಈ ಹಿಡಿತ ತಪ್ಪಿಸಿಕೊಂಡಂತೆ ಕಾಣುತ್ತಿದೆ. ರಾಜ್ಯಗಳಲ್ಲಿ ಕಾಣುವ ಆಂತರಿಕ ಕಿತ್ತಾಟಗಳನ್ನು ಬಗೆಹರಿಸುವಲ್ಲಿ ಕಾಂಗ್ರೆಸ್ ಸ್ವಲ್ಪ ಹಿಂದೆ ಇದೆ. ಆದರೆ ಬಿಜೆಪಿ ಈ ನಿಟ್ಟಿನಲ್ಲಿ ಕೊಂಚ ಕಠಿನವಾಗಿದೆ. ಹೀಗಾಗಿ ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಹೈಕಮಾಂಡ್ ಇನ್ನಷ್ಟು ಗಟ್ಟಿಯಾದರೆ, ಗೆಲುವು ಕಷ್ಟವೇನಲ್ಲ ಎಂಬ ಮಾತುಗಳಿವೆ.
ಸೋಮಶೇಖರ ಸಿ.ಜೆ.