ಎಐಡಿಎಂಕೆ ಕಥೆ “ತೆರಿಯಾದ್ ಪೋಯ’
Team Udayavani, Feb 13, 2017, 3:45 AM IST
ನಲವತ್ತೈದು ವರ್ಷಗಳ ಹಿಂದೆ 1972 ರಲ್ಲಿ ಡಿಎಂಕೆಯಿಂದ ಹೊರಬಂದು “ಎಐಡಿಎಂಕೆ’ ಸ್ಥಾಪಿಸಿದ ಎಂಜಿಆರ್ 1987 ರಲ್ಲಿ ನಿಧನರಾದಾಗ ಇಂತದ್ದೇ ಪ್ರಶ್ನೆ ಮತ್ತು ಬಿಕ್ಕಟ್ಟು ಎದುರಾಗಿದ್ದು, ಪಕ್ಷದ ನಾಯಕತ್ವಕ್ಕಾಗಿ ಎಂಜಿಆರ್ ಪತ್ನಿ ಜಾನಕಿ ರಾಮಚಂದ್ರನ್ ಹಾಗೂ ಜಯಲಲಿತಾ ನಡುವೆ ತಿಕ್ಕಾಟ ನಡೆದು ಪಕ್ಷ ವಿಭಜನೆಯಾಗಿ ಎರಡು ಗುಂಪುಗಳಾಗಿತ್ತು. 1989 ರ ಚುನಾವಣೆ ಸೋಲಿನ ನಂತರ ಉಭಯ ಬಣಗಳು ವಿಲೀನಗೊಂಡು ಜಯಲಲಿತಾ ಪಕ್ಷವನ್ನು ತನ್ನ ತೆಕ್ಕೆಗೆ ತೆಗೆದುಕೊಂಡಿದ್ದರು. ಅಲ್ಲಿಂದ 2016 ಡಿಸೆಂಬರ್ 16 ರ ರಾತ್ರಿ 11.30 ರವರೆಗೆ ಎಐಡಿಎಂಕೆ ಎಂದರೆ “ಅಮ್ಮಾ’ ಅಷ್ಟೇ ಆಗಿತ್ತು.
ಜಯಲಲಿತಾ ನಿಧನದ ನಂತರ ರಾಜಕೀಯ ವಲಯದಲ್ಲಿ ಕೇಳಿಬಂದ ಮೊಟ್ಟ ಮೊದಲ ಪ್ರಶ್ನೆ ಮುಂದೆ “ಎಐಡಿಎಂಕೆ’ ಪಕ್ಷದ ಕಥೆ ಏನಾಗಬಹುದು? ತಮಿಳುನಾಡಿನ ರಾಜಕಾರಣ ಬಲ್ಲವರಲ್ಲಿ ಇಂತದ್ದೊಂದು ಪ್ರಶ್ನೆ ಮೂಡಿದ್ದು ಸಹಜ. ಸದ್ಯ ಅಲ್ಲಿ ನಡೆಯುತ್ತಿರುವ ವಿದ್ಯಮಾನಗಳು ಆ ಪ್ರಶ್ನೆಗೆ ಉತ್ತರ ನೀಡುವಂತಿದೆ. ಅಲ್ಲಿನ ರಾಜಕೀಯ “ಹೈಡ್ರಾಮಾ’ ರಾಷ್ಟ್ರದ ಗಮನ ಸೆಳೆದಿರುವುದಂತೂ ಹೌದು.
ಹಂಗಾಮಿ ಮುಖ್ಯಮಂತ್ರಿ ಪನ್ನೀರ್‌ಸೆಲ್ವಂ ಹಾಗೂ ಎಐಡಿಎಂಕೆ ಶಾಸಕಾಂಗ ಪಕ್ಷದ ನಾಯಕಿಯಾಗಿ ಆಯ್ಕೆಯಾಗಿರುವ ಶಶಿಕಲಾ ನಟರಾಜನ್ ನಡುವೆ ಅಧಿಕಾರಕ್ಕಾಗಿ ನಡೆದಿರುವ ತಿಕ್ಕಾಟ ಕ್ಷಣಕ್ಕೊಂದು ಸ್ವರೂಪ ಪಡೆಯುತ್ತಿದೆ. ಮೇಲ್ನೋಟಕ್ಕೆ ರಾಜ್ಯಪಾಲ ವಿದ್ಯಾಸಾಗರ್‌ರಾವ್ ಅಲ್ಲಿನ ಬಿಕ್ಕಟ್ಟು ಪರಿಹಾರಕ್ಕೆ ತೀರ್ಮಾನ ಕೈಗೊಳ್ಳಬಹುದಾದರೂ ಅಲ್ಲಿನ ಪರಿಸ್ಥಿತಿಯಲ್ಲಿ ನಿರ್ಧಾರ ಕೈಗೊಳ್ಳಲು ಅವರೂ ಹಿಂಜರಿಯುತ್ತಿದ್ದಾರೆ. ಹೀಗಾಗಿ, “ಚೆಂಡು’ ಇದೀಗ ಕೇಂದ್ರ ಸರ್ಕಾರದ ಅಂಗಳಕ್ಕೆ ತಲುಪುವಂತಾಗಿದೆ.
ಜಯಲಲಿತಾ ನಿಧನದ ನಂತರದ ವಿದ್ಯಮಾನಗಳಲ್ಲಿ ಕೇಂದ್ರದ ಬೆಂಬಲ ಶಶಿಕಲಾ ಅವರಿಗೆ ಇದೆ ಎಂಬ ಗುಸುಗುಸು ಇತ್ತಾದರೂ ಶಶಿಕಲಾ ಪತಿ ನಟರಾಜನ್‌ಗೆ ದಿಲ್ಲಿ ಕಾಂಗ್ರೆಸ್ ನಾಯಕರ ಜತೆ ಸಂಪರ್ಕ ಇದೆ ಎಂಬುದು ಗೊತ್ತಾದ ಮೇಲೆ ಇದೀಗ ಕೇಂದ್ರದ ವರಸೆ ಬದಲಾಗಿದೆ ಎಂಬ ಸುದ್ದಿಯೂ ರಾಜಕೀಯ ವಲಯಗಳಲ್ಲಿ ಚಾಲ್ತಿಯಲ್ಲಿದೆ.
ತಮಿಳುನಾಡಿನಲ್ಲಿ ಈಗ ಅಕ್ಷರಶಃ ರಾಜಕೀಯ ಅರಾಜಕತೆ ಸೃಷ್ಟಿಯಾಗುವುದರ ಜತೆಗೆ ಸಾಂವಿಧಾನಿಕ ಬಿಕ್ಕಟ್ಟು ಎದುರಾಗಿದೆ. ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದ ಪನ್ನೀರ್‌ಸೆಲ್ವಂ ಒತ್ತಡ ಹಾಕಿ ರಾಜೀನಾಮೆ ಪಡೆಯಲಾಗಿದೆ, ವಾಪಸ್ ಪಡೆಯಲು ಅವಕಾಶ ಕೊಡಿ ಎಂದು ಕೋರಿದ್ದಾರೆ. ಮತ್ತೂಂದೆಡೆ ಎಐಡಿಎಂಕೆ ಶಾಸಕಾಂಗ ಪಕ್ಷದ ನಾಯಕಿಯಾಗಿ ಆಯ್ಕೆಯಾದ ಶಶಿಕಲಾ ತಮಗೆ ಸರ್ಕಾರ ರಚಿಸಲು ಆಹ್ವಾನ ನೀಡಿ ಎಂದು ಪಟ್ಟು ಹಿಡಿದಿದ್ದಾರೆ. ಇದರ ನಡುವೆ, ಶಶಿಕಲಾ ಎಐಡಿಎಂಕೆ ಪ್ರಧಾನ ಕಾರ್ಯದರ್ಶಿಯಾಗಿ ಆಯ್ಕೆಯಾದ ವಿಧಾನವೇ ಸರಿಯಿಲ್ಲ, ಪಕ್ಷದ ಬೈಲಾ ಪ್ರಕಾರ ಆದ ಆಯ್ಕೆಯಲ್ಲ ಎಂಬ ದೂರು ಚುನಾವಣಾ ಆಯೋಗ ತಲುಪಿದೆ. ನಮ್ಮದೇ ನಿಜವಾದ ಎಐಡಿಎಂಕೆ ಎಂದು ಶಶಿಕಲಾ ಹಾಗೂ ಪನ್ನೀರ್‌ಸೆಲ್ವಂ ಹಕ್ಕು ಮಂಡಿಸುತ್ತಿದ್ದಾರೆ. ಎರಡೂ ಬಣಗಳು ಪರಸ್ಪರ ಉಚ್ಛಾಟನೆಯಲ್ಲೂ ತೊಡಗಿದ್ದಾರೆ.
ಈ ಹಂತದಲ್ಲಿ ರಾಜ್ಯಪಾಲರಿಗಾದರೂ ಉಳಿದಿರುವ ಮಾರ್ಗ ಎಂದರೆ ಒಂದು ಶಾಸಕಾಂಗ ಪಕ್ಷದ ನಾಯಕಿಯಾಗಿ ಆಯ್ಕೆಯಾಗಿರುವ ಶಶಿಕಲಾ ಅವರಿಗೆ ಸರ್ಕಾರ ರಚಿಸಲು ಆಹ್ವಾನ ಕೊಡುವುದು. ಸದ್ಯ ಅವರು ಶಾಸಕಿಯಲ್ಲವಾದರೂ ಆರು ತಿಂಗಳಲ್ಲಿ ವಿಧಾನಸಭೆಗೆ ಆರಿಸಿಬರುವ ಅವಕಾಶವಿದೆ. ಆದರೆ, ಶಶಿಕಲಾ ಅವರು ಶಾಸಕಾಂಗ ಪಕ್ಷದ ನಾಯಕಿಯಾಗಿ ಆಯ್ಕೆಯಾದ ನಂತರದ ಬೆಳವಣಿಗೆ, ಶಾಸಕರ “ಜಂಪಿಂಗ್’ ಪ್ರಹಸನ ಹಿನ್ನೆಲೆಯಲ್ಲಿ ಅಂತಹ ತೀರ್ಮಾನ ಕೈಗೊಳ್ಳುವುದು ಕಷ್ಟ. ಏಕೆಂದರೆ ಒಂದು ದಿನ ಶಶಿಕಲಾ ಕೈ ಮೇಲು ಎಂಬಂತೆ ಕಂಡುಬಂದರೆ ಇನ್ನೊಂದು ದಿನ ಸೆಲ್ವಂ ಪರ ಬೆಂಬಲ ಹೆಚ್ಚು ಎಂಬಂತೆ ಕಾಣಿಸುತ್ತಿದೆ. ಹೀಗಾಗಿ, ಕೇಂದ್ರಕ್ಕೆ ರಾಜ್ಯದ ಪರಿಸ್ಥಿತಿ ಕುರಿತು ವರದಿ ಸಲ್ಲಿಸಿ ಕಾಯುವುದು ಅವರಿಗಿರುವ ಎರಡನೇ ಹಾಗೂ ಸುರಕ್ಷಿತ ಮಾರ್ಗ.
ಇನ್ನು ಕೇಂದ್ರ ಸರ್ಕಾರಕ್ಕಿರುವ ಮಾರ್ಗ ಎಂದರೆ ಕುದುರೆ ವ್ಯಾಪಾರದ ಲಕ್ಷಣ ಇರುವುದರಿಂದ, ಬಿಕ್ಕಟ್ಟು ಬಗೆಹರಿಯುವವರೆಗೆ ತಾತ್ಕಾಲಿಕವಾಗಿ ಕೆಲಕಾಲ ರಾಷ್ಟ್ರಪತಿ ಆಳ್ವಿಕೆ ಜಾರಿಗೆ ಶಿಫಾರಸು ಮಾಡುವುದು ಎಂಬುದು ಕಾನೂನು ಪಂಡಿತರ ಅಭಿಪ್ರಾಯ, ಹೀಗಾಗಿ, ರಾಜ್ಯಪಾಲರು ಕೇಂದ್ರಕ್ಕೆ ನೀಡುವ ವರದಿ ಹಾಗೂ ಕೇಂದ್ರ ಸರ್ಕಾರ ಕೈಗೊಳ್ಳುವ ತೀರ್ಮಾನದ ಮೇಲೆ ಪನ್ನೀರ್‌ಸೆಲ್ವಂ ಹಾಗೂ ಶಶಿಕಲಾ ಭವಿಷ್ಯ ನಿರ್ಧಾರವಾಗಲಿದೆ.
ಸದ್ಯಕ್ಕೆ ತಮಿಳುನಾಡಿನ ರಾಜಕೀಯ ಬೆಳವಣಿಗೆಗಳಿಗೂ ತನಗೂ ಸಂಬಂಧವಿಲ್ಲ. ರಾಜ್ಯಪಾಲರ ವರದಿ ಬರಲಿ ಆಮೇಲೆ ನೋಡೋಣ ಎಂಬಂತೆ ಕೇಂದ್ರ ಸರ್ಕಾರ ತೋರ್ಪಡಿಸಿಕೊಳ್ಳುತ್ತಿದೆ. ಆದರೆ, ಸರ್ಕಾರದ ನೇತೃತ್ವ ವಹಿಸಿರುವ ಬಿಜೆಪಿ ಹಾಗೂ ಆರ್‌ಎಸ್‌ಎಸ್‌ನ ತಂತ್ರಗಾರಿಕೆಯೇ ಬೇರೆ ಇದೆ. ದಕ್ಷಿಣ ಭಾರತದಲ್ಲಿ ನೆಲೆ ವಿಸ್ತರಿಸಲು ಸಕಾಲಕ್ಕಾಗಿ ಕಾಯುತ್ತಿರುವ ಬಿಜೆಪಿ, ತಮಿಳುನಾಡಿನಲ್ಲಿ ಒದಗಿಬಂದಿರುವ ಅವಕಾಶ ಕೈಚೆಲ್ಲುವುದೇ? ಅತ್ತ ಪಂಚ ರಾಜ್ಯಗಳ ಚುನಾವಣೆ ನಡೆಯುತ್ತಿರುವುದರಿಂದ ತಮಿಳುನಾಡು ವಿದ್ಯಮಾನಗಳಲ್ಲಿ ಕೈ ಹಾಕಿದರೆ ಬೇರೆ ರೀತಿಯ ಸಂದೇಶ ರವಾನೆಯಾಗುತ್ತದೆ ಎಂಬ ಕಾರಣಕ್ಕೆ ಮೌನ ವಹಿಸಿದೆ ಅಷ್ಟೆ.
ಈ ನಡುವೆ, “ಕಬಾಲಿ’ ಖ್ಯಾತಿಯ ಸೂಪರ್‌ಸ್ಟಾರ್ ರಜನೀಕಾಂತ್ ಹೊಸ ಪಕ್ಷ ಸ್ಥಾಪಿಸುವ ಮಾತುಗಳು ಕೇಳಿಬರುತ್ತಿರುವುದು. ಆರ್‌ಎಸ್‌ಎಸ್ ಚಿಂತಕರ ಜತೆ ಸಮಾಲೋಚನೆ ನಡೆಸಿರುವುದು ಏನೋ ಘಟಿಸಲಿದೆ ಎಂಬುದರ ಮುನ್ಸೂಚನೆಯೇ ಎಂಬ ಚರ್ಚೆಯೂ ಆರಂಭವಾಗಿದೆ.
ಇದರ ನಡುವೆ, ಎಐಡಿಎಂಕೆಯ ಕಡು ವಿರೋಧಿ ಡಿಎಂಕೆ ಸಹ ತನ್ನದೇ ಆದ ಮಾರ್ಗದಲ್ಲಿ ರಾಜಕೀಯ ದಾಳ ಉರುಳಿಸುತ್ತಿದ್ದು, ಅರ್ಧಕ್ಕಿಂತ ಹೆಚ್ಚು ಶಾಸಕರನ್ನು ಸೆಳೆದರೆ ಸರ್ಕಾರ ರಚಿಸಲು ಬಾಹ್ಯ ಬೆಂಬಲದ ಆಶ್ವಾಸನೆಯನ್ನೂ ಪನ್ನೀರ್‌ಸೆಲ್ವಂಗೆ ನೀಡಿ ರಾಜಕೀಯ ತಂತ್ರಗಾರಿಕೆಯಲ್ಲಿ ತೊಡಗಿದೆ.
“ಕಲೈಂಜರ್’ ಕರುಣಾನಿಧಿ ಮನೆಯಲ್ಲೇ ಕುಳಿತು ಡಿಎಂಕೆ ಕಾರ್ಯಾಧ್ಯಕ್ಷ ಆಗಿರುವ ಪುತ್ರ ಸ್ಟಾಲಿನ್‌ಗೆ ಮಾರ್ಗದರ್ಶನ ನೀಡುತ್ತಿದ್ದಾರೆ. ಅವರ ಸೂಚನೆ ಮೇರೆಗೆ ಪನ್ನೀರ್‌ಸೆಲ್ವಂ ಅವರನ್ನು ಸ್ಟಾಲಿನ್ ಭೇಟಿಯಾಗಿದ್ದು. ಪನ್ನೀರ್‌ಸೆಲ್ವಂ “ಆಟ’ ನಿಜವಾಗಿಯೂ ಆರಂಭವಾಗಿದ್ದೇ ಸ್ಟಾಲಿನ್ ಭೇಟಿಯ ನಂತರ ಎಂಬುದು ಗಮನಾರ್ಹ.
ತಮಿಳುನಾಡು ವಿಧಾನಸಭೆಯಲ್ಲಿ ಎಐಡಿಎಂಕೆಗೆ ದೊಡ್ಡ ಮಟ್ಟದ ಬಹುಮತ ಏನೂ ಇಲ್ಲ. 235 ಬಲದ ವಿಧಾನಸಭೆಯಲ್ಲಿ ಎಐಡಿಎಂಕೆ 134 ಸ್ಥಾನ ಹೊಂದಿದ್ದರೆ ಡಿಎಂಕೆ 89, ಕಾಂಗ್ರೆಸ್ 8 ಸೇರಿ ಪ್ರತಿಪಕ್ಷಗಳದು 100 ಸ್ಥಾನಗಳಿವೆ. ಹೀಗಾಗಿ, ರಾಜಕೀಯದಲ್ಲಿ ಏನಾದರೂ ಆಗಬಹುದು. ಆದರೆ, ಎಲ್ಲರೂ ಲಾಭದ ದೃಷ್ಟಿಯಿಂದಲೇ ವ್ಯವಹರಿಸುವುದು.
ಪನ್ನೀರ್‌ಸೆಲ್ವಂ ಪರ ನಟ ಕಮಲಹಾಸನ್, ನಟಿ ಗೌತಮಿ, ಇನ್ನೊಬ್ಬ ನಟ ಆಲ್ ಇಂಡಿಯಾ ಸಮಥುವಾ ಮಕ್ಕಳ್ ಕಚ್ಚಿ ಅಧ್ಯಕ್ಷ ಶರತ್‌ಕುಮಾರ್ ಬೆಂಬಲಕ್ಕೆ ನಿಂತಿರುವುದು, ಜನಸಮುದಾಯದಿಂದಲೂ ಬೆಂಬಲದ ಮಹಾಪೂರ ಹರಿಯುತ್ತಿರುವುದು ಶಶಿಕಲಾ ಅವರಲ್ಲಿ ದಿಗಿಲು ಹುಟ್ಟಿಸಿರುವುದಂತೂ ಹೌದು. ಇವೆಲ್ಲ ನೋಡಿದರೆ ಶಶಿಕಲಾ ರಾಜಕೀಯ ಹೆಜ್ಜೆ ಸ್ವಲ್ಪ ಆತುರದ್ದಾಗಿತ್ತು ಎಂದು ಅನಿಸತೊಡಗಿದೆ. ಹೀಗಾಗಿಯೇ ತಮ್ಮ ಬದಲು ಬೇರೊಬ್ಬರನ್ನು ಮುಖ್ಯಮಂತ್ರಿ ಗಾದಿಯಲ್ಲಿ ಕುಳ್ಳಿರಿಸಿ ತಾವು ಕಿಂಗ್‌ಮೇಕರ್ ಆಗುವ ಯೋಚನೆಯನ್ನೂ ಶಶಿಕಲಾ ಮಾಡತೊಡಗಿದ್ದಾರೆ.
ಜಯಲಲಿತಾ ನಿಧನ ಸುದ್ದಿ ಅಧಿಕೃತವಾಗಿ ಪ್ರಕಟವಾದ ನಂತರ ತಮಿಳುನಾಡಿನಲ್ಲಿ ಅದರಲ್ಲೂ ಆಡಳಿತಾರೂಢ ಎಐಡಿಎಂಕೆ ಪಕ್ಷದಲ್ಲಿ ನಡೆದ ಪ್ರತಿ ವಿದ್ಯಮಾನ ಮೇಲ್ನೋಟಕ್ಕೆ ಎಲ್ಲವೂ ಸುಸೂತ್ರ, ಸುಗಮ ಎಂದು ಕಂಡರೂ ಆಗಿದ್ದೇ ಬೇರೆ. ಬೂದಿ ಮುಚ್ಚಿದ ಕೆಂಡದಂತಿದ್ದ ಎಐಡಿಎಂಕೆ ಆಂತರಿಕ ಬೇಗುದಿ ಪನ್ನೀರ್‌ಸೆಲ್ವಂ, ಜಯಲಲಿತಾ ಸಮಾಧಿ ಮುಂದೆ “ಧ್ಯಾನ’ ಮಾಡಿದ ನಂತರ ಸ್ಫೋಟಗೊಂಡಿತು.
ಪನ್ನೀರ್‌ಸೆಲ್ವಂ ಜಯಲಲಿತಾ ನಂಬಿಕಸ್ತ ಬಂಟ ಎಂಬುದು ತಮಿಳುನಾಡಿನಲ್ಲಿ ಜಗಜ್ಜಾಹೀರಾಗಿರುವ ವಿಷಯ. ಅಕ್ರಮ ಆಸ್ತಿ ಪ್ರಕರಣ ಸೇರಿದಂತೆ ಅಮ್ಮನಿಗೆ ಸಂಕಷ್ಟ ಸಮಯ ಎದುರಾದಾಗಲೆಲ್ಲಾ ಮುಖ್ಯಮಂತ್ರಿ ಗಾದಿಗೆ ತಾತ್ಕಾಲಿಕ ಆಯ್ಕೆ ಪನ್ನೀರ್‌ಸೆಲ್ವಂ. ಹೀಗಾಗಿ, ತಮಿಳುನಾಡಿನ ಜನರಲ್ಲೂ ಜಯಲಲಿತಾ ನಿಧನ ನಂತರ ಪನ್ನೀರ್‌ಸೆಲ್ವಂ ಮುಖ್ಯಮಂತ್ರಿಯಾಗಿದ್ದು ಸಮಾಧಾನ ತಂದಿತ್ತು.
ಆದರೆ, ಪಕ್ಷದ ಹಿಡಿತ ತನ್ನ ತೆಕ್ಕೆಗೆ ತೆಗೆದುಕೊಳ್ಳಲು ಮೊದಲಿನಿಂದಲೂ ಸಮಯ ಕಾಯುತ್ತಿದ್ದ ಚಿನ್ನಮ್ಮ “ಮನ್ನಾರ್‌ಗುಡಿ’ ಶಶಿಕಲಾನಟರಾಜನ್, ಅಮ್ಮ ನಿಧನದ ಮೂವತ್ತು ದಿನಗಳೊಳಗೆ ಪಕ್ಷದ ಪ್ರಧಾನಕಾರ್ಯದರ್ಶಿ ಪಟ್ಟಕ್ಕೇರಿ, 60 ದಿನಗಳಲ್ಲಿ ಎಐಡಿಎಂಕೆ ಶಾಸಕಾಂಗ ಪಕ್ಷದ ನಾಯಕಿಯೂ ಆಗಿ ಮುಖ್ಯಮಂತ್ರಿ ಹುದ್ದೆ ಅಲಂಕರಿಸಲು ಸಜ್ಜಾಗಿಯೇ ಬಿಟ್ಟರು. ಅಮ್ಮನಿಗಾಗಿ ತ್ಯಾಗ ಮಾಡಿದಂತೆ ಪನ್ನೀರ್‌ಸೆಲ್ವಂ ಚಿನ್ನಮ್ಮನಿಗಾಗಿ ತ್ಯಾಗ ಮಾಡಿದ್ದಾರೆ. ಚಿನ್ನಮ್ಮ ಮಾತ್ರ ಪಕ್ಷ, ಸರ್ಕಾರ ನಡೆಸಲು ಸಮಥೆì ಎಂದು ಬಿಂಬಿಸಿಕೊಳ್ಳುವ ಯತ್ನವೂ ಆಯಿತು.
ರಾಜಕೀಯವಾಗಿ ತುಳಿತಕ್ಕೊಳಗಾದವರು ಅಧಿಕಾರ ಪಡೆಯಲು ಕಾರಣರಾದ ಪೆರಿಯಾರ್ ರಾಮಸ್ವಾಮಿ, ಅಣ್ಣಾದೊರೈ, ಕಾಮರಾಜ್‌ರಂತಹ ನಾಯಕರ ಹೋರಾಟ ಕಂಡಿದ್ದ ತಮಿಳುನಾಡಿನಲ್ಲಿ ಪನ್ನೀರ್‌ಸೆಲ್ವಂ ನಡೆಯೂ ಅಚ್ಚರಿಯನ್ನೂ ಮೂಡಿಸಿತ್ತು.
ಆದರೆ, “ಅಧಿಕಾರದ ವ್ಯಾಮೋಹ’ದಲ್ಲಿ ತೋರುವ ಆತುರ ಬಹಳ ದಿನ ಸಂತಸ ಉಳಿಸುವುದಿಲ್ಲ ಎಂಬ ಮಾತು ಶಶಿಕಲಾ ವಿಚಾರದಲ್ಲಿ ನಿಜವಾಯಿತು. ತಮಿಳುನಾಡಿನಲ್ಲಿ ತಲೈವರ್ ಎಂಜಿಆರ್ ಹಾಗೂ ಪುರುಚ್ಚಿತಲೈವಿ ಜಯಲಲಿತಾ ಕಟ್ಟಿ ಬೆಳೆಸಿದ “ಎಐಡಿಎಂಕೆ’ ಕಥೆ ಏನು ಎಂದರೆ “ತೆರಿಯಾದ್ ಪೋಯ’ ಎಂಬಂತಾಗಿದೆ.
ಎಸ್.ಲಕ್ಷ್ಮಿನಾರಾಯಣ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Renukaswamy Case: ಹತ್ಯೆ ಸ್ಥಳದಲ್ಲಿ ನಟ ದರ್ಶನ್: ಫೋಟೋ ಸಾಕ್ಷ್ಯ
Chennamman-Kittur: ಯೋಧ ನರೇಶ ಯಲ್ಲಪ್ಪ ಅಗಸರ ಕೆರೆಗೆ ಹಾರಿ ಆತ್ಮಹತ್ಯೆ
Subhramanya: ಕುಕ್ಕೆ ಶ್ರೀಸುಬ್ರಹ್ಮಣ್ಯ ದೇವಸ್ಥಾನದ ಸೇವೆಗಳಲ್ಲಿ ವ್ಯತ್ಯಯ
Health Issue: ಸರ್ಜರಿಗಾಗಿ ಮುಂದಿನ ತಿಂಗಳು ಅಮೆರಿಕಕ್ಕೆ ಹೋಗುವೆ: ನಟ ಶಿವರಾಜ್‌ಕುಮಾರ್
Road Development: ಚಾರ್ಮಾಡಿ ಘಾಟಿ ರಸ್ತೆ ದ್ವಿಪಥ ಭಾಗ್ಯ ಸನ್ನಿಹಿತ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.