ಬಿಜೆಪಿ ಪ್ಲಸ್ 350 ಹಾಗೂ 150
Team Udayavani, Aug 28, 2017, 4:52 PM IST
1970-80ರ ದಶಕ. ಕಾಂಗ್ರೆಸ್ ಎಂಬುದು ಆಗಿನ ಸೋಲಿಸಲಾರದ ಪಕ್ಷ ಅಥವಾ ಸೋಲೇ ಕಾಣದ ಪಕ್ಷ. ಇಂದಿರಾ ಗಾಂಧಿ ಹೇರಿದ ತುರ್ತು ಪರಿಸ್ಥಿತಿ ವೇಳೆ ಜಯಪ್ರಕಾಶ್ ನಾರಾಯಣ್ ಅವರು ದೇಶಾದ್ಯಂತ ಎಬ್ಬಿಸಿದ ಹೋರಾಟದ ಬಿಸಿ ಕಾಂಗ್ರೆಸ್‌ಗೆ ಮೊದಲ ಬಾರಿಗೆ ಸೋಲಿನ ರುಚಿ ತೋರಿಸಿತ್ತು. ಆದರೆ ಜನತಾ ಪಕ್ಷದ ಒಳಜಗಳಗಳು ಕಾಂಗ್ರೆಸ್‌ನ ಈ ಸೋಲಿನ ದಿನಗಳನ್ನು ಬಹುಬೇಗನೇ ಮುಗಿಸಿದ್ದವು. ಇದೇ ತುರ್ತು ಪರಿಸ್ಥಿತಿ ವೇಳೆ ಜೈಲುಪಾಲಾದ ಅದೆಷ್ಟೋ ಮಂದಿ ಜನ ಸಂಘದ ಪ್ರತಿನಿಧಿಗಳು ಮುಂದೊಂದು ದಿನ ಕಾಂಗ್ರೆಸ್‌ಗೆ ಪರ್ಯಾಯವಾಗಿ ನಿಲ್ಲುತ್ತಾರೆ ಎಂಬ ಬಗ್ಗೆ ಇಂದಿರಾ ಗಾಂಧಿ ಅವರೂ ಸೇರಿದಂತೆ ಯಾರೊಬ್ಬರೂ ಯೋಚಿಸಿಯೇ ಇರಲಿಲ್ಲವೆಂಬುದು ಬೇರೆ ಮಾತು.
ಸರಿಯಾಗಿ ತುರ್ತು ಪರಿಸ್ಥಿತಿ ದಿನಗಳು ಮುಗಿದ ಬಳಿಕ ಕಾಂಗ್ರೆಸ್ ಮತ್ತೆ ಗೆಲುವಿನ ಹುಡುಕಾಟ ಮತ್ತು ಸೋಲಿನ ಮೇಲಿನ ಸೋಲಿಗಾಗಿ ಪರಿತಾಪ ಪಡುತ್ತಿದೆ. ಇದಕ್ಕೆ ಏನು ಕಾರಣ ಎಂಬುದು ಸ್ವತಃ ಕಾಂಗ್ರೆಸ್ಸಿಗರಿಗೆ ಗೊತ್ತಿದ್ದರೂ ಯಾರೊಬ್ಬರು ಬಾಯಿಬಿಡದ ಪರಿಸ್ಥಿತಿಯಲ್ಲಿ ಇದ್ದಾರೆ. ಇತ್ತೀಚಿನ ದಿನಗಳಲ್ಲಿ ಬಿಜೆಪಿ ವಲಯದಿಂದ ಕೇಳಿಬರುತ್ತಿರುವ ಮಾತು; ಕಾಂಗ್ರೆಸ್‌ನ ಮುಂಚೂಣಿಯಲ್ಲಿ ಎಷ್ಟು ದಿನ ರಾಹುಲ್ ಗಾಂಧಿ ಇರುತ್ತಾರೋ ಅಷ್ಟು ದಿನ ನಮ್ಮ ಗೆಲುವಿನ ಓಟಕ್ಕೆ ಯಾವುದೇ ಅಡ್ಡಿಯಿಲ್ಲ.
ಬಿಜೆಪಿ ಟಾರ್ಗೆಟ್ 350+ ಗುರಿ ಇಟ್ಟುಕೊಂಡು, 2019ಕ್ಕೆ ಸಜ್ಜಾಗುತ್ತಿದೆ. ಗೆಲುವಿನ ಗುರಿ ಕೇವಲ 350ಕ್ಕೇ
ನಿಲ್ಲಬಾರದು, ಅದು 400 ದಾಟಿ ಹೋಗಬೇಕು ಎಂಬುದು ಬಿಜೆಪಿ ಅಧ್ಯಕ್ಷ ಅಮಿತ್ ಶಾ ಅವರ ಕಟ್ಟುನಿಟ್ಟಿನ ಟಾರ್ಗೆಟ್. 2019ರ ಮುಂಚೆ ಬರುವ ವಿವಿಧ ರಾಜ್ಯಗಳ ವಿಧಾನಸಭೆ ಚುನಾವಣೆಗಳಲ್ಲಿ ಗೆದ್ದು, 2019ಕ್ಕೆ ಸೂಕ್ತ ವೇದಿಕೆ ಮಾಡಿಕೊಳ್ಳಬೇಕು…
ಹೌದು, ಕಾಂಗ್ರೆಸ್‌ನ ರಾಜಕೀಯ ವಲಯದಲ್ಲಿ ಇದೇ ಮಾತು ಕೇಳಿಬರುತ್ತಿದೆ. ಸದ್ಯದಲ್ಲಿ ಬಿಜೆಪಿಯ ಗೆಲುವಿನ ಓಘಕ್ಕೆ ಸರಿಯಾಗಿ ಎದ್ದು ನಿಲ್ಲುವುದೇ ಕಷ್ಟವಾಗುತ್ತಿದೆ. ಕಾಂಗ್ರೆಸ್ ಹಿಂದೆಂದೂ ಕಾಣದಂತಹ ಸಂ ಕಷ್ಟದ ದಿನಗಳಲ್ಲಿದೆ ಎಂದು ಸ್ವತಃ ಆ ಪಕ್ಷದ ನಾಯಕರೇ ಹೇಳುತ್ತಿದ್ದಾರೆ. ಆದರೆ ಮಾಧ್ಯಮದ ಮುಂದೆ ಹೇಳುವ ಇವರ್ಯಾರೂ, ಸೋನಿಯಾ ಗಾಂಧಿ ಅವರ
ಮುಂದೆಯಾಗಲಿ, ರಾಹುಲ್ ಗಾಂಧಿ ಮುಂದೆಯಾಗಲಿ ಹೇಳುವ ಸ್ಥಿತಿಯಲ್ಲೇ ಇಲ್ಲ ಎಂಬುದು ಬೇರೆ ಮಾತು.
ಕಾಂಗ್ರೆಸ್‌ನ ಈ ಸ್ಥಿತಿಯಲ್ಲಿ ಬಿಜೆಪಿ ಟಾರ್ಗೆಟ್ 350+ ಗುರಿ ಇಟ್ಟುಕೊಂಡು, 2019ಕ್ಕೆ ಸಜ್ಜಾಗುತ್ತಿದೆ. ಗೆಲುವಿನ ಗುರಿ ಕೇವಲ 350ಕ್ಕೇ ನಿಲ್ಲಬಾರದು, ಅದು 400 ದಾಟಿ ಹೋಗಬೇಕು ಎಂಬುದು ಬಿಜೆಪಿ ಅಧ್ಯಕ್ಷ ಅಮಿತ್ ಶಾ ಅವರ ಕಟ್ಟುನಿಟ್ಟಿನ ಟಾರ್ಗೆಟ್. 2019ರ ಮುಂಚೆ ಬರುವ ವಿವಿಧ ರಾಜ್ಯಗಳ ವಿಧಾನಸಭೆ ಚುನಾವಣೆಗಳಲ್ಲಿ ಗೆದ್ದು, 2019ಕ್ಕೆ ಸೂಕ್ತ ವೇದಿಕೆ ಮಾಡಿಕೊಳ್ಳಬೇಕು. ಈಗ ಮೋದಿಯ ವರ್ಚಸ್ಸು ಪರಾಕಾಷ್ಠೆಯ ಸ್ಥಿತಿಯಲ್ಲಿದೆ. ಆದರೆ ಇನ್ನೂ ಬಿಜೆಪಿ ಈ ಪ್ರಮಾಣದಲ್ಲಿ ಏರಿಲ್ಲ.
ನಾವು ಮೋದಿ ವರ್ಚಸ್ಸನ್ನೇ ಬಳಸಿಕೊಂಡು ಬಿಜೆಪಿಯನ್ನು ಎಲ್ಲ ಕಡೆಗಳಲ್ಲಿ ಬೆಳೆಸಬೇಕು ಎಂದು ಹೇಳುತ್ತಿದ್ದಾರೆ ಅಮಿತ್ ಶಾ. ಸುಮಾರು ಎರಡು ದಶಕಗಳ ನಂತರ ಕೇಂದ್ರದಲ್ಲಿ ಪೂರ್ಣ ಬಹುಮತದೊಂದಿಗೆ ಅಧಿಕಾರಕ್ಕೆ ಬಂದಿದ್ದೇವೆ. ಆದರೆ ಇದೇ ಗೆಲುವಿನ ಅಹಂಕಾರದಿಂದ ಮೈಮರೆತು ಕುಳಿತರೆ 2019ರಲ್ಲಿ ಮತ್ತೆ ಸಮ್ಮಿಶ್ರ ಸರ್ಕಾರದತ್ತಲೇ ಕಣ್ಣು ಹಾಕಬಹುದಾದ ಪರಿಸ್ಥಿತಿ ಬರಬಹುದು. ಹೀಗಾಗಿ ಯಾವುದೇ ಕಾರಣಕ್ಕೂ ಆಡಳಿತ ವಿರೋಧಿ ಭಾವನೆ ಎಂಬುದು ಜನರಲ್ಲಿ ಬರಲೇಕೂಡದು. ಅದು ಹೇಗೆ ಎಂದರೆ ಇಂದಿರಾ ಗಾಂಧಿ ಪ್ರಧಾನಿಯಾದ ಬಳಿಕ, ಅವರ ವರ್ಚಸ್ಸೇ ಪಕ್ಷವನ್ನು ಮತ್ತೆ ಮತ್ತೆ ಗೆಲ್ಲಿಸಿಕೊಂಡು ಹೋಯಿತಲ್ಲ ಹಾಗೆ ಎಂಬುದು ಅಮಿತ್ ಶಾ ಅವರ ಯೋಜನೆ. ಹೀಗಾಗಿಯೇ ಲೋಕಸಭೆ ಚುನಾವಣೆಗೆ ಇನ್ನೂ ಹತ್ತಿರತ್ತಿರ 2 ವರ್ಷ ಇದ್ದರೂ,
ಈಗಿನಿಂದಲೇ ಬಿಜೆಪಿ ಸಮರೋಪಾದಿಯಲ್ಲಿ ಸಿದ್ಧತೆ ನಡೆಸುತ್ತಿದೆ.
ಚುನಾವಣಾ ಚಾಣಾಕ್ಷ ಅಮಿತ್ ಶಾ ಅವರ ಮೊದಲ ಪ್ಲಾನ್ ದಕ್ಷಿಣ ಭಾರತ. ಕರ್ನಾಟಕ ಬಿಟ್ಟರೆ ಉಳಿದ ಕಡೆಗಳಲ್ಲಿ ಪಕ್ಷದ
ಸಾಧನೆ ಅಷ್ಟಕಷ್ಟೇ. ಈಗಾಗಲೇ ಕರ್ನಾಟಕದಲ್ಲಿ ಒಂದು ಬಾರಿ ಅಧಿಕಾರ ನಡೆಸಿರುವ ಬಿಜೆಪಿ, ಇದೀಗ ಸದ್ಯದಲ್ಲೇ ನಡೆಯಲಿರುವ ವಿಧಾನಸಭೆಯಲ್ಲಿ ಗೆಲ್ಲುವ ತವಕದಲ್ಲಿದೆ. ಇದಕ್ಕೆ ಪೂರಕವಾಗಿ ತಯಾರಿಗಳೂ ನಡೆಯುತ್ತಿವೆ. ಇದಕ್ಕಾಗಿ ಚುನಾವಣಾ ಉಸ್ತುವಾರಿಯಾಗಿ ಕೇಂದ್ರ ಸಚಿವ ಪ್ರಕಾಶ್ ಜಾವಡೇಕರ್ ಅವರನ್ನು ನೇಮಕ ಮಾಡಿದೆ. ಈಗಾಗಲೇ ಮುರುಳಿಧರ್ ರಾವ್ ರಾಜ್ಯ ಉಸ್ತುವಾರಿಯಾಗಿದ್ದರೂ, ಚುನಾವಣೆಗಾಗಿಯೇ ಪ್ರಕಾಶ್ ಜಾವಡೇಕರ್ ಮತ್ತು ಪಿಯೂಶ್ ಗೋಯಲ್ ಅವರನ್ನು ಅಮಿತ್ ಶಾ ನೇಮಕ ಮಾಡಿದ್ದಾರೆ. ಇಲ್ಲಿ ಯಾರೂ ಗಮನಿಸದ ಇನ್ನೊಂದು ವಿಷಯವೂ ಇದೆ.
2014ರ ಲೋಕಸಭೆ ಚುನಾವಣೆಯಲ್ಲಿ ಸೋತ 120 ಸ್ಥಾನಗಳ ಮೇಲೆ ವಿಶೇಷವಾಗಿ ಕಣ್ಣಿಟ್ಟಿರುವ ಅಮಿತ್ , ಕರ್ನಾಟಕದಲ್ಲಿನ ಈ ಗೆಲ್ಲಲಾ ರದ ಕ್ಷೇತ್ರಗಳ ಉಸ್ತುವಾರಿಯಾಗಿ ನಿರ್ಮಲಾ ಸೀತಾರಾಮನ್ ಅವರನ್ನೂ ನಿಯೋಜನೆ ಮಾಡಿದ್ದಾರೆ. ಇವರು ಮುಂದಿನ ಲೋಕಸಭೆ ಚುನಾವಣೆವರೆಗೆ ಸುಮಾರು 40 ಬಾರಿ ಕ್ಷೇತ್ರಕ್ಕೆ ಭೇಟಿ ನೀಡಿ ಪಕ್ಷ ಗೆಲ್ಲುವಂತೆ ಮಾಡಲು ನೋಡಿಕೊಳ್ಳಬೇಕು. ಕರ್ನಾಟಕದಲ್ಲಿ ಇಂಥ ಕ್ಷೇತ್ರವಾಗಿ ಬೆಂಗಳೂರು ಗ್ರಾಮಾಂತರ ಕ್ಷೇತ್ರವನ್ನು ಗುರುತಿಸಲಾಗಿದೆ.
ಇನ್ನು ಕೇರಳದಲ್ಲಿ ಒಂದು ವಿಧಾನಸಭೆ ಕ್ಷೇತ್ರ ಗೆದ್ದಿರುವ ಬಿಜೆಪಿ, ವೋಟ್ ಶೇರ್ ಅನ್ನೂ ಹೆಚ್ಚು ಮಾಡಿಕೊಂಡಿದೆ. 2019ರಲ್ಲಿ ಕಡೇ ಪಕ್ಷ ಮತ ಹಂಚಿಕೆ ಪ್ರಮಾಣವನ್ನು ಇನ್ನಷ್ಟು ಏರಿಕೆ ಮಾಡಿಕೊಳ್ಳುವ ಗುರಿ ಇದರದ್ದು. ಈ ಮಧ್ಯೆ, ತಮಿಳುನಾಡಿನಲ್ಲಿ ಬಿಜೆಪಿ ಸಾಧನೆ ಇದುವರೆಗೆ ಅಷ್ಟಕಷ್ಟೇ. ಜಯಲಲಿತಾ ಅವರು ನಿಧನರಾದ ಮೇಲೆ ಎಐಎಡಿಎಂಕೆ ನಾಯಕರಿಲ್ಲದ ಪಕ್ಷವಾಗಿದೆ. ಬಿಜೆಪಿಯ ಪ್ರಯತ್ನದ ಫಲವಾಗಿಯೇ ಪನ್ನೀರ್‌ಸೆಲ್ವಂ ಬಣ ಮತ್ತು ಪಳನಿಸ್ವಾಮಿ ಬಣಗಳು ಒಂದಾಗಿವೆ. ಆದರೆ ಶಶಿಕಲಾ ಬಣದ ದಿನಕರನ್ ಬಂಡೆದ್ದಿದ್ದರೂ, ಇವರನ್ನು ಕಾನೂನಿನ ಅಸ್ತ್ರ ಸುಮ್ಮನಾಗಿಸುವ ಸಂದರ್ಭ ಬಂದರೂ ಬರಬಹುದು ಎನ್ನಲಾಗುತ್ತಿದೆ. ಜತೆಗೆ, ಶಶಿಕಲಾಗಾಗಲಿ ಅಥವಾ ಅವರ ಪತಿ ನಟರಾಜನ್‌ಗಾಗಲಿ ಬಿಜೆಪಿ ಜತೆ ಹೋಗುವುದು ಇಷ್ಟವಿಲ್ಲ. ಇವರನ್ನು ಬದಿಗೆ ಸರಿಸಿ ಮುಂದೆ ಹೋಗಲು ಸಜ್ಜಾಗಿರುವ ಒಪಿಎಸ್ ಮತ್ತು ಇಪಿಎಸ್ ಜೋಡಿ ಬಿಜೆಪಿ ಜತೆ ಹೆಜ್ಜೆ ಹಾಕಲಿದೆ ಎಂದೇ ಹೇಳಲಾಗುತ್ತಿದೆ. ಇದಕ್ಕಿಂತ ಪ್ರಮುಖವಾಗಿ ರಾಜಕೀಯ ಪ್ರವೇಶಿಸಲು ಸಜ್ಜಾಗಿ ನಿಂತಿರುವ ಸೂಪರ್ ಸ್ಟಾರ್ ರಜನಿಕಾಂತ್ ಅವರನ್ನು ಬಿಜೆಪಿಗೆ ಸೆಳೆಯುವ ಪ್ರಯತ್ನಗಳೂ ಆಗುತ್ತಿವೆ.
ಆಂಧ್ರದಲ್ಲಿ ಬಿಜೆಪಿ ಅಂಗಪಕ್ಷ ಟಿಡಿಪಿಯೇ ಅಧಿಕಾರದಲ್ಲಿರುವುದರಿಂದ ಸದ್ಯಕ್ಕೆ ಇಲ್ಲಿಗೆ ಹೆಚ್ಚಿನ ಗಮನವಿಲ್ಲ. ಆದರೆ, ಪಕ್ಕದ ತೆಲಂಗಾಣದಲ್ಲಿ ಟಿಆ ರ್‌ಎಸ್ ಅಧಿಕಾರದಲ್ಲಿದ್ದು, ಇದು ವಿಷಯಾಧಾರಿತವಾಗಿ ಎನ್‌ಡಿಎಗೇ ಬೆಂಬಲ ನೀಡುತ್ತಿದೆ. ತೀರಾ ಎದಿರು ಹಾಕಿಕೊಳ್ಳಬೇಕಾದ ಪರಿಸ್ಥಿತಿ ಏನಿಲ್ಲ. ಆದರೂ, ಕಾಂಗ್ರೆಸ್ ಪ್ರತಿಪಕ್ಷ ಸ್ಥಾನದಲ್ಲಿದ್ದು, ಇದನ್ನೇ ಚದುರಿಸಿ ಎರಡನೇ ದೊಡ್ಡ ಪಕ್ಷವಾಗಿ ಗುರುತಿಸಿಕೊಳ್ಳುವುದು ಬಿಜೆಪಿ ಪ್ಲಾನ್.
ಒಡಿಶಾ ವಿಚಾರದಲ್ಲಿ ಬಿಜೆಪಿ ದೊಡ್ಡ ಹೆಜ್ಜೆಗಳನ್ನೇ ಇಡುತ್ತಿದೆ. ಇದುವರೆಗೆ ಸೋಲಿಲ್ಲದ ಸರದಾರನೆಂದೇ ಗುರುತಿಸಿಕೊಂಡಿರುವ ನವೀನ್ ಪಾಟ್ನಾಯಕ್ ಅವರನ್ನು ಹಣಿಯುವುದು ಬಿಜೆಪಿ ಗುರಿ. ಈಗಾಗಲೇ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಬಿಜೆಪಿ ಉತ್ತಮ ಸಾಧನೆ ಮಾಡಿದ್ದು, ಇದು ಒಂದು ಹಂತಕ್ಕೆ ನವೀನ್ ಪಾಟ್ನಾಯಕ್‌ಗೆ ಆತಂಕ ತಂದಿದೆ ಎನ್ನಬಹುದು. ಕೆಲವೊಮ್ಮೆ ಎನ್ ಡಿಎಗೆ ಬೆಂಬಲ ನೀಡುವ ನವೀನ್ ಪಾಟ್ನಾಯಕ್ ಅವರಿಂದ ಬಿಜೆಪಿಗೆ ಹೆಚ್ಚು ನಷ್ಟವಿಲ್ಲ. ಪಶ್ಚಿಮ ಬಂಗಾಳದಲ್ಲಿ ಸದ್ಯದ ಪರಿಸ್ಥಿತಿಯಲ್ಲಿ ಮಮತಾ ಬ್ಯಾನರ್ಜಿ ಅವರ ಪಕ್ಷವನ್ನು ಸೋಲಿಸುವುದು ಅ ಸಾಧ್ಯದ ಮಾತು. ಇತ್ತೀಚೆಗಷ್ಟೇ ನಡೆದ ಸ್ಥಳೀಯ ಪಂಚಾಯತಿ ಚುನಾವಣೆಯಲ್ಲಿ ಟಿಎಂಸಿ 148ರಲ್ಲಿ 140 ಗೆದ್ದಿದೆ. ಆದರೆ ಆರರಲ್ಲಿ ಗೆಲ್ಲುವ ಮೂಲಕ ಎರಡನೇ ಸ್ಥಾನಕ್ಕೆ ಬಂದ ಬಿಜೆಪಿಗೆ ಇದೇ ಸಮಾಧಾನದ ವಿಷಯ.
ಇನ್ನೂ ಕಾಂಗ್ರೆಸ್ ಸಂಪೂರ್ಣವಾಗಿ ಗಾಳಿಪಟವಾಗಿದ್ದು, ಸಿಪಿಎಂ ಕೂಡ ಇದೇ ದಾರಿಯಲ್ಲಿದೆ. ಹೀಗಾಗಿ ಮೋದಿ ವರ್ಚಸ್ಸನ್ನು ಬಳಸಿಕೊಂಡು ಪಶ್ಚಿಮ ಬಂಗಾಳದಲ್ಲಿ ಪಕ್ಷ ಕಟ್ಟುವುದು ಅಮಿತ್ ಶಾ ಗುರಿ. ಹೀಗಾಗಿಯೇ ಇತ್ತೀಚೆಗಷ್ಟೇ ಮಮತಾ ಬ್ಯಾನರ್ಜಿ ಅವರು, ಮೋದಿ ಅವರನ್ನು ಬೇಕಾದರೆ ಒಪ್ಪಬಹುದು. ಆದರೆ ಅಮಿತ್ ಶಾರನ್ನು ಮಾತ್ರ ಸಹಿಸಿಕೊಳ್ಳಲು ಸಾಧ್ಯವೇ ಇಲ್ಲ ಎಂದಿದ್ದರು. ಈ ಮಾತೇ ಅಮಿತ್ ಶಾ ಅವರ ಕುರಿತಂತೆ ಮಮತಾಗೆ ಇರುವ ಮನಸ್ಥಿತಿಯನ್ನು ಅಳೆಯಬಹುದು.
ಇನ್ನು ಮಧ್ಯಪ್ರದೇಶ, ಗುಜರಾತ್‌ನಲ್ಲಿ ಪಕ್ಷವನ್ನು ಮತ್ತೆ ಗೆಲುವಿನ ದಡಕ್ಕೆ ಮುಟ್ಟಿಸುವುದು ಅಮಿತ್ ಶಾ ಅವರ ಮಗದೊಂದು ಪ್ಲಾನ್. ಈಗಾಗಲೇ ಗುಜರಾತ್ ಉಸ್ತುವಾರಿಯಾಗಿ ಪಕ್ಕಾ ಚುನಾ ವಣಾ ಚಾಣಾಕ್ಷ ಎಂದೇ ಗುರುತಿಸಿಕೊಂಡಿರುವ ಅರುಣ್ ಜೇಟ್ಲಿ ಅವರನ್ನು ನಿಯೋಜನೆ ಮಾಡಲಾಗಿದೆ. ಮಧ್ಯ ಪ್ರದೇಶದಲ್ಲಿ 200ಕ್ಕೂ ಹೆಚ್ಚು ವಿಧಾನಸಭೆ ಸ್ಥಾನ ಗೆದ್ದು, ಆಡಳಿತ ವಿರೋಧಿ ಅಲೆ ಮೆಟ್ಟಬೇಕು ಎಂಬ ಚಿಂತನೆ ಇದೆ. ಗುಜರಾತ್‌ನಲ್ಲಿ ಕಾಂಗ್ರೆಸ್ ಪಾಲಿಗೆ ಸದ್ಯದ ಮಟ್ಟಿಗೆ ಆಸರೆಯಾಗಿದ್ದ ಶಂಕರ್ ಸಿಂಗ್ ವಘೇಲಾ ಅವರನ್ನು ಪಕ್ಷ ಬಿಡಿಸಿ, ಅಲ್ಲಿನ ಕೆಲವು ಪ್ರಭಾವಿ ನಾಯಕರನ್ನು ಪಕ್ಷಕ್ಕೆ ಎಳೆದಿರುವುದು ಗೆಲುವಿನ ತಂತ್ರದಿಂದಲೇ. ವಘೇಲಾ ಇನ್ನೂ ಬಿಜೆಪಿಗೆ ಬರದಿದ್ದರೂ, ಕಾಂಗ್ರೆಸ್‌ಗೆ ಮಾತ್ರ ಹೊಡೆತ ನೀಡುತ್ತಾರೆ ಎಂಬುದು ಅಷ್ಟೇ ಸತ್ಯ. ಅಸ್ಸಾಂನಲ್ಲಿನ ಲೋಕಸಭೆ ಸ್ಥಾನ ಮತ್ತು ತ್ರಿಪುರದ ವಿಧಾನಸಭೆ ಗೆಲ್ಲಬೇಕು ಎಂಬ ಟಾರ್ಗೆಟ್ ಅನ್ನು ಅಮಿತ್ ಶಾ ಪಕ್ಷದ ನಾಯಕರಿಗೆ ನೀಡಿದ್ದಾರೆ.
*ಸೋಮಶೇಖರ ಸಿ.ಜೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.