ಸವಾಲುಗಳನ್ನು ಮೆಟ್ಟಿ ನಿಲ್ಲುವರೇ ಬೊಮ್ಮಾಯಿ?


Team Udayavani, Aug 2, 2021, 6:50 AM IST

ಸವಾಲುಗಳನ್ನು ಮೆಟ್ಟಿ ನಿಲ್ಲುವರೇ ಬೊಮ್ಮಾಯಿ?

ಅಂತೂ ಮುಖ್ಯಮಂತ್ರಿ ಬದಲಾದರು. ಬಿ.ಎಸ್‌. ಯಡಿಯೂ­ರಪ್ಪ ಅವರು “ವಯಸ್ಸಿನ’ ಕಾರಣ ನೀಡಿ “ಅನಿವಾರ್ಯ’ವಾಗಿ ರಾಜೀನಾಮೆ ನೀಡಿದರು. ವಿಚಿತ್ರ ಪರಿಸ್ಥಿತಿಯಲ್ಲಿ ಬಸವರಾಜ ಬೊಮ್ಮಾಯಿ ಅವರನ್ನು ಯಡಿಯೂರಪ್ಪನವರೇ “ಮುಖ್ಯಮಂತ್ರಿ’­ಯಾಗಿಸಿದರು!

ಮುಖ್ಯಮಂತ್ರಿ ಬದಲಾವಣೆ ಸಂಬಂಧ ಬಿಜೆಪಿಯ ಪರ-ವಿರೋಧಿ ಬಣಗಳ ಹೇಳಿಕೆಗಳು, ಆರೋಪಗಳು, ಪ್ರತ್ಯಾರೋಪಗಳು… ಕಳೆದ ಕೆಲವು ತಿಂಗಳುಗಳಿಂದ ಪ್ರತೀ ದಿನ ಮುನ್ನೆಲೆಗೆ ಬರುತ್ತಿದ್ದವು. ಅಂತೂ ಯಡಿಯೂರಪ್ಪ ಬಣದವರ ಆಕಾಂಕ್ಷೆ ಈಡೇರಿದರೂ ಯಡಿಯೂ­ರಪ್ಪ ಆಪ್ತ ಬೊಮ್ಮಾಯಿ ಅವರನ್ನು ಸಿಎಂ ಎಂದು ಯಡಿಯೂರಪ್ಪ ಅವರಿಂದಲೇ ಘೋಷಿಸುವ ಮೂಲಕ  ಬಿಜೆಪಿ ವರಿಷ್ಠರು ತಮ್ಮದೇ ಆದ ಸಂದೇಶವನ್ನು ಪರ-ವಿರೋಧಿ ಬಣದವರಿಗೆ ನೀಡಿದ್ದಾರೆ.

ಒಂದಂತೂ ಸತ್ಯ. ರಾಜ್ಯ ಬಿಜೆಪಿಯಲ್ಲಿ ಯಡಿಯೂರಪ್ಪ ಅವರದು ಮೇರು ವ್ಯಕ್ತಿತ್ವ. ಸದ್ಯದ ಮಟ್ಟಿಗೆ ಎಷ್ಟೆಲ್ಲ ಪ್ರಯತ್ನಗಳನ್ನು ಮಾಡಿದರೂ ಅವರ ನಾಯಕತ್ವಕ್ಕೆ ಸರಿಹೊಂದುವ ಮತ್ತೂಂದು ವ್ಯಕ್ತಿತ್ವ ಬೆಳೆಯಲಿಲ್ಲ. ಕೆಲವರನ್ನು ಮುಖ್ಯಮಂತ್ರಿಗಳಾಗಿಸಿ, ಪಕ್ಷದ ವಿವಿಧ ಘಟಕಗಳಿಗೆ ಮುಖ್ಯಸ್ಥರಾಗಿಸಿ, ಡಿಸಿಎಂಗಳಾಗಿಸಿ ಅವಕಾಶ ಕೊಟ್ಟರೂ, ಮುಂದಿನ ವಿಧಾನಸಭೆ, ಅದರಲ್ಲೂ ಮುಂದಿನ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಗೆ ಹೆಚ್ಚು ಸ್ಥಾನಗಳನ್ನು ಕೊಡಿಸುವ ನಾಯಕತ್ವ ಕಾಣದೇ ಇರುವುದು ಬಹುಶಃ ಬಿಜೆಪಿ ದಿಲ್ಲಿ ನಾಯಕರ “ನಿರ್ಧಾರ’ಕ್ಕೆ ಕಾರಣವಾಗಿರಬಹುದು.

ಈಗಲೂ ಎಲ್ಲವೂ ಸರಿಯಿಲ್ಲ. ಮುಖ್ಯಮಂತ್ರಿ ಬೊಮ್ಮಾಯಿ  ಮತ್ತು ರಾಜ್ಯ ಬಿಜೆಪಿ ಇನ್ನು ಮುಂದೆ ಅನೇಕ ಸವಾಲು­ಗಳನ್ನು ಎದುರಿಸಲು ಸಜ್ಜಾಗಬೇಕಾಗಿದೆ.  ಕೊರೊನಾ ಮೂರನೇ ಅಲೆ ಆತಂಕ, ಪ್ರವಾಹ ಸಂಬಂಧಿ ಕಾರ್ಯಾಚರಣೆ ಮತ್ತು ಸರಕಾರ ಜನಸಾಮಾನ್ಯನತ್ತ ತಲುಪುವಂತೆ ನೋಡಿಕೊಳ್ಳುವುದು, ಆ ಮೂಲಕ ಜನಪ್ರಿಯ ಸರಕಾರ ಎನಿಸಿಕೊಂಡು ಮುಂದಿನ ಚುನಾವಣೆಗೆ ಸಜ್ಜಾಗಿ ಮತ್ತೆ ಅಧಿಕಾರಕ್ಕೆ ಬರುವಂತೆ ನೋಡಿಕೊಳ್ಳುವುದು, ರಾಜಕೀಯ ಅಸ್ಥಿರತೆಯಿಂದಾಗಿ ಆರಾಮವಾ­ಗಿರುವ ಅಧಿಕಾರಿಗ­ಳಿಂದ ಕೆಲಸ ಮಾಡಿಸುವ ಮೂಲಕ ಆಡಳಿತ ಯಂತ್ರಕ್ಕೆ ಚುರುಕು ಮೂಡಿಸುವುದು ಕೂಡ ಬೊಮ್ಮಾಯಿ ಮುಂದಿರುವ ಸವಾಲಾಗಿದೆ. ಆದರೆ  ಇವೆಲ್ಲ ಆಗಬೇಕಾದರೆ ಅವರಿಗೆ ಬೇಕಾದುದು ಸಚಿವರ‌, ಪಕ್ಷದ ಪ್ರಮುಖರ ಸಹಕಾರ ಅಥವಾ ಆ ಸಹಕಾರ ಸಿಗುವಂತೆ ನೋಡಿಕೊಳ್ಳುವುದು! ಅದು ಸಾಧ್ಯವೇ?

ಇದು ಪರೀಕ್ಷೆ ಸಮಯ: ಬಿಜೆಪಿ ವರಿಷ್ಠರು ಬೊಮ್ಮಾಯಿ ದಿಲ್ಲಿ ಭೇಟಿ ಸಂದರ್ಭದಲ್ಲಿ “ನಿಮಗಿದು ಪರೀಕ್ಷೆ ಸಮಯ’ ಎಂದು ಪರೋಕ್ಷವಾಗಿ ಹೇಳಿ ಕಳುಹಿಸಿದ್ದಾರೆ. ಆದರೆ  ಆ ಪರೀಕ್ಷೆಯ ಮಾನದಂಡಗಳನ್ನು ನಿರ್ಧರಿಸುವ ಅಂಶಗಳು ಯಾವುವು ಎಂದು ಸ್ವತಃ ಬೊಮ್ಮಾಯಿ ಗ್ರಹಿಸಿಕೊಂಡು ಅವುಗಳನ್ನು ಎದುರಿಸುವ ಛಾತಿಯನ್ನು ಬೆಳೆಸಿಕೊಳ್ಳಬೇಕಾಗಿದೆ.

ಮೊದಲನೆಯ ಸವಾಲು ಅವರ ಪಕ್ಷ, ಸಿದ್ಧಾಂತ ಮೂಲದ ಬಗ್ಗೆಯೇ ಆಗಿರುತ್ತದೆ. ಸಮಾಜವಾದಿ  ಮುಖಂಡ, ಮಾಜಿ ಮುಖ್ಯಮಂತ್ರಿ ಎಸ್‌.ಆರ್‌. ಬೊಮ್ಮಾಯಿ ಪುತ್ರರಾಗಿರುವ ಬೊಮ್ಮಾಯಿ, ಜೆ.ಎಚ್‌. ಪಟೇಲರ ರಾಜಕೀಯ ಕಾರ್ಯದರ್ಶಿಯಾ­ಗಿಯೂ ಸಮಾಜವಾದ ಪಾಠ ಕಲಿತವರು.  ಎಲ್ಲಕ್ಕಿಂತಲೂ ಪ್ರಮುಖ ವಾಗಿ ಅವರ ಮೂಲ ಇರುವುದು ಜನತಾಪರಿವಾರದಲ್ಲಿ. ಹಾಗಾಗಿಯೇ ಇರಬಹುದು, ಮಾಜಿ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿಯವರು ಬೊಮ್ಮಾಯಿಯವರನ್ನು “ಜನತಾದಳದ’ದ ಮುಖ್ಯಮಂತ್ರಿ ಎಂದು ಹೇಳಿದ್ದು. ಇದು “ಸ್ನೇಹ ಪೂರ್ವಕ’ವಾಗಿದ್ದರೂ, ರಾಜಕೀಯವಾಗಿ ಬಿಜೆಪಿಯನ್ನು ಕಾಲೆಳೆಯುವುದೇ ಆಗಿದೆ. ಬಿಜೆಪಿಯಲ್ಲಿ ಇನ್ನೊಬ್ಬ ಭ್ರಷ್ಟ ಮುಖ್ಯಮಂತ್ರಿ ಬರುತ್ತಾರೆ ಎಂದು ಪದೇ ಪದೆ ಹೇಳುತ್ತಿದ್ದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೂ “ಸ್ನೇಹಿತ ಬೊಮ್ಮಾಯಿ ಅವರಿಗೆ ಶುಭವಾಗಲಿ’ ಎಂದು ಹಾರೈಸಿದ್ದು ಒಂದು ರೀತಿಯ “ಸಾಫ್ಟ್ಕಾರ್ನರ್‌’ ಎಂದೆನಿಸುತ್ತದೆ.

ಆದರೆ, ಬೊಮ್ಮಾಯಿ ಅವರಿಗೆ ಅಧಿಕಾರದ ಸೂತ್ರ ನೀಡಿದ ಬಿಜೆಪಿ, ಅದರಲ್ಲೂ ಸಂಘ ಪರಿವಾರ ಖಂಡಿತಾ ಸೂಕ್ಷ್ಮವಾಗಿ ಅವಲೋಕನ ಮಾಡುತ್ತಲೇ ಇರುತ್ತದೆ. ಬೆನ್ನಿಗೇ ಸಂಘ ಪರಿವಾರದ ಮೂಲದಿಂದಲೇ ಬಂದ ರಾಜ್ಯ ನಾಯಕರ “ತಮಗೆ ಅವಕಾಶ ಸಿಕ್ಕಿಲ್ಲ’ ಎಂಬ ನೋವು, ಸಿಟ್ಟನ್ನು ಮುಂದಿನ ದಿನಗಳಲ್ಲಿ ಯಾವ ರೀತಿಯಲ್ಲಿ  ಪ್ರಕಟಿಸುತ್ತಾರೆ ಎನ್ನುವುದಕ್ಕೆ ಉತ್ತರಗಳನ್ನು ಬೊಮ್ಮಾಯಿಯವರು ಈಗಲೇ ಸಿದ್ಧಪಡಿಸಬೇಕಾಗಿದೆ.

ಯಡಿಯೂರಪ್ಪ ಪದತ್ಯಾಗಕ್ಕೆ ಪ್ರಮುಖವಾಗಿ ಪ್ರಯತ್ನಿಸಿದ್ದ ಬಸನಗೌಡ ಪಾಟೀಲ ಯತ್ನಾಳ್‌ ಅವರು, ನೇರವಾಗಿ ಬೊಮ್ಮಾಯಿ ಅವರಿಗೆ ತಮ್ಮ ಜಿಲ್ಲೆಗೆ ಸಚಿವ ಸ್ಥಾನ ಸಿಗದಿದ್ದರೆ ಅದರ ಪರಿಣಾಮ ಮುಂದಿನ ದಿನಗಳಲ್ಲಿ ಅರಿವಿಗೆ ಬರಲಿದೆ ಎಂದು ಖಡಕ್‌ ಸಂದೇಶ ರವಾನಿಸಿದ್ದಾರೆ. ತಮಗೆ ಸಿಎಂ ಆಗುವ ಅವಕಾಶ ಯಡಿಯೂರಪ್ಪ ಅವರ ಕುತಂತ್ರದಿಂದ ತಪ್ಪಿತು ಎಂದೂ ವಾಗ್ಧಾಳಿ ನಡೆಸಿದ್ದಾರೆ. ಯತ್ನಾಳ ಅವರು ನೂತನ ಸಿಎಂಗೆ ಇಷ್ಟು ಬೇಗ ಕಟುವಾಗಿ ಮಾತಾಡುತ್ತಾರೆ ಎಂದಾದರೆ, ಅವರ ಹಿಂದೆ ಖಂಡಿತಾ “ಶಕ್ತಿ’ಯೊಂದು ಇರುತ್ತದೆ.

ಮೂಲವಲಸಿಗ: ಇನ್ನೊಂದೆಡೆ ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ ಅವರು ತಾವು ಬೊಮ್ಮಾಯಿ ಸಂಪುಟದಲ್ಲಿ ಸಚಿವರಾಗುವುದಿಲ್ಲ ಎಂದು ಹೇಳುವ ಮೂಲಕ “ಅಸಹಕಾರ’ಕ್ಕೆ ಮುಂದಾಗಿದ್ದಾರೆಯೇ ಅಥವಾ ಆ ಹೇಳಿಕೆ ಮುಂದೆ ಬೇರೊಂದು ರಾಜಕೀಯ ಲೆಕ್ಕಾಚಾರ ಅಡಗಿದೆಯೇ ಎಂಬುದನ್ನು ಬೊಮ್ಮಾಯಿ   ಗಮನಿಸಿರುತ್ತಾರೆ. ಇನ್ನೊಂ­ದೆಡೆ ಹಿರಿಯ ನಾಯಕ ಕೆ.ಎಸ್‌. ಈಶ್ವರಪ್ಪ ತಾವು ಡಿಸಿಎಂ ಅಥವಾ ಸಚಿವರಾಗುವ ಮನದಾಳವನ್ನು ನೇರವಾಗಿ ತೋರ್ಪಡಿಸಿದ್ದಾರೆ. ಮೂಲ ಬಿಜೆಪಿಯ ನಾಯಕರನೇಕರು  ಪಕ್ಷ ಸಂಘಟಿಸಿದ ಸತ್ಕಾರಣಕ್ಕೆ ತಾವು ಸಚಿವರಾಗಬೇಕೆಂದು  ಆಶಯ ವ್ಯಕ್ತಪಡಿಸುತ್ತಿದ್ದಾರೆ. ಹಾಗೆಂದು ಅವರ ಆಸೆ ತಪ್ಪೇನಲ್ಲವಲ್ಲ!

ಇತ್ತಕಡೆಯಿಂದ ಉಮೇಶ್‌ ಕತ್ತಿ, ವಿ. ಸೋಮಣ್ಣರಂತಹ ಹಿರಿಯ ನಾಯಕರೂ ತಮ್ಮನ್ನು ಸಚಿವಮಂಡಲದಲ್ಲಿ ಸೇರಿಸಬೇಕೆಂದು ಆಸೆಪಡುತ್ತಿದ್ದಾರೆ.  ಇಲ್ಲಿ, ಗಮನಿಸಿಬೇಕಾದ ಅಂಶವೆಂದರೆ, ಸಂಘ ಪರಿವಾರದಿಂದ ಬಂದ ಮತ್ತು ಸಂಘ ಪರಿವಾರವಲ್ಲದ ಹಿರಿಯ ಶಾಸಕರು ಪಕ್ಷ ಅಧಿಕಾರಕ್ಕೆ ಬರಲು ಕಾರಣವಾಗಿರುವುದು ಮತ್ತು ಸಹಜವಾಗಿ ಸಚಿವಗಿರಿಗೆ ಕಣ್ಣಿಟ್ಟಿರುವುದು. ಆದರೆ, ಸಂಘ ಪರಿವಾರದ ಮೂಲವಿಲ್ಲದ ಬೊಮ್ಮಾಯಿ ಅವರು ಮುಖ್ಯಮಂತ್ರಿಯಾಗಿರುವಾಗ ಉಳಿದ ಡಿಸಿಎಂಗಳು, ಸಚಿವ ಸ್ಥಾನಗಳ ಪಾಲು ಯಾರಿಗೆ ಹೆಚ್ಚು ಸಿಗುತ್ತದೆ? ಅಥವಾ ಹೇಗೆ ಸಚಿವ ಸ್ಥಾನಗಳನ್ನು ಹಂಚಬೇಕೆನ್ನುವ ಬಹುದೊಡ್ಡ ಸಮಸ್ಯೆ ಬೊಮ್ಮಾಯಿ ಅವರಿಗೆ ಅದಾಗಲೇ ಎದುರಾಗಿ­ರಬಹುದು! ಮಾತ್ರವಲ್ಲ,  ಕಾಂಗ್ರೆಸ್‌ ಪಕ್ಷದಲ್ಲಿ ಕೇಳಿಬರುತ್ತಿರುವ “ಮೂಲ-ವಲಸಿಗ’ ಸಮಸ್ಯೆ (ಪಕ್ಷ ಸೇರಿದ ಮೇಲೆ ಮೂಲ-ವಲಸಿಗ ಪ್ರಶ್ನೆಯಿಲ್ಲ ಎಂದು ಆಯಾ ಪಕ್ಷಗಳ ಹಿರಿಯ ನಾಯಕರು ಹೇಳುತ್ತಲೇ ಇರುತ್ತಾರೆ) ಬಿಜೆಪಿಗೂ ಅಂಟಿಕೊಳ್ಳುತ್ತಿರುವುದನ್ನು ಯಡಿಯೂರಪ್ಪ ಅಧಿಕಾರಾವಧಿಯ ಕೊನೆ ಘಟ್ಟದಲ್ಲಿ ಗಮನಿಸಿದ್ದೇವೆ.  ಬಹುತೇಕ ವಲಸಿಗರಿಗೇ “ಸರಕಾರ ರಚನೆಗೆ ಕಾರಣರಾದ’ ಕಾರಣಕ್ಕೆ ಸಚಿವ ಸ್ಥಾನಗಳನ್ನು ಯಡಿಯೂರಪ್ಪ  ನೀಡಿದರೂ, ಮುಖ್ಯಮಂತ್ರಿ ಸಂಘ ಪರಿವಾರದ ಹಿನ್ನೆಲೆಯಿಂದ ಬಂದವರೆನ್ನುವುದು  ಸಹಕಾರಿಯಾ­ಗಿತ್ತು. ಈಗ? ಇಂತಹ ಸೂಕ್ಷ್ಮವನ್ನು ಬೊಮ್ಮಾಯಿ ಹೇಗೆ ನಿಭಾಯಿಸುತ್ತಾರೆ ಎನ್ನುವುದರಲ್ಲಿದೆ ಅವರ ಯಶಸ್ಸಿನ ಗುಟ್ಟು.

ಯಡಿಯೂರಪ್ಪ ಛಾಯೆ?: ಈಗಾಗಲೇ ವಿಪಕ್ಷಗಳ ಪಾಳಯದಿಂದ ಕೇಳಿಬರುತ್ತಿರುವ ಆರೋಪ ಎಂದರೆ ಬೊಮ್ಮಾಯಿ ಹಿಂದೆ ಯಡಿಯೂರಪ್ಪ ಛಾಯೆ ಇದೆ ಎನ್ನುವುದು. ಆ ಕಾರಣಕ್ಕಾ­ಗಿಯೇ ಮುಖ್ಯಮಂತ್ರಿಯಾಗಿ ಮೊದಲ ದಿನದ ಸುದ್ದಿಗೋಷ್ಠಿಯಲ್ಲಿ  ಬೊಮ್ಮಾಯಿ ಅವರು, ತಾವು ರಬ್ಬರ್‌ ಸ್ಟಾಂಪ್‌ ಆಗುವುದಿಲ್ಲ  ಎಂದು ಪತ್ರಕರ್ತರ ಪ್ರಶ್ನೆಗೆ ಉತ್ತರಿಸುವಂತೆ ಮಾಡಿದ್ದು! ಅದನ್ನು ಪುರಾವೆ ಸಹಿತ ಸಾಬೀತುಪಡಿಸಬೇಕಾದ ಅನಿವಾರ್ಯ ಅವರಿಗಿದೆ. ಯಾಕೆಂದರೆ,  ಅವರು ಸಿಎಂ ಪಟ್ಟವೇರಲು ಕಾರಣರಾದ ಯಡಿಯೂರಪ್ಪ ಅವರ ನೆರಳು ಕಳಚಿಕೊಳ್ಳುವುದು ಸುಲಭವಿಲ್ಲ.  ಆ  ಯತ್ನ ನಡೆಸಿದ್ದೇ ಆದರೆ, ಯಡಿಯೂರಪ್ಪ ಅವರಿಂದಲೇ ಸಿಎಂಗಳಾದ ಡಿ.ವಿ. ಸದಾನಂದ ಗೌಡ, ಜಗದೀಶ ಶೆಟ್ಟರ ಅವರು  ಮಾಜಿ ಸಿಎಂಗಳಾಗಿರುವ ದೃಷ್ಟಾಂತಗಳು ಬೊಮ್ಮಾಯಿ ಎದುರಿಗೆ ಇವೆ.

ಇವೆಲ್ಲವುಗಳಿಗೆ ಮಾಜಿ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರು ಬಹುತೇಕ ಕಾರಣರು! ಮತ್ತು ನಿಭಾಯಿಸಬಲ್ಲವರೂ ಅವರೇ. ಏಕೆಂದರೆ, ಬಿಜೆಪಿ ವರಿಷ್ಠರು, ಹೆಚ್ಚೇಕೆ, ಪ್ರಧಾನಿ ನರೇಂದ್ರ ಮೋದಿಯವರೇ ಯಡಿಯೂರಪ್ಪ ಅವರ ಪಕ್ಷಪ್ರೇಮವನ್ನು ಮತ್ತು ಈಗಲೂ ಪಕ್ಷ ಸಂಘಟಿಸಲು ಉತ್ಸುಕರಾಗಿರುವುದನ್ನು ಶ್ಲಾ ಸಿದ್ದಾರೆ.

ಅಂದರೆ ಖಂಡಿತಾ ಬಿಜೆಪಿ ವರಿಷ್ಠರು ಯಡಿಯೂರಪ್ಪ ಅವರ ಸಾಮರ್ಥ್ಯವನ್ನು ನಂಬಿಕೊಂಡಿದ್ದಾರೆ. ಅವರ ಬೆಂಬಲದಿಂದಲೇ ಮುಂಬರುವ ಚುನಾವಣೆಗಳನ್ನು ಎದುರಿಸುವ ನಿರೀಕ್ಷೆಯಲ್ಲಿದ್ದಾರೆ.  ಅದರರ್ಥ  ಬಸವರಾಜ ಬೊಮ್ಮಾಯಿ ಅವರ ನಾಯಕತ್ವವನ್ನು ಪಕ್ಷ ಅಷ್ಟಾಗಿ ನಂಬದೆ ಯಡಿಯೂರಪ್ಪ ಅವರನ್ನೇ ನೆಚ್ಚಿಕೊಂಡಿರುವುದು. ಈ ಸೂಕ್ಷ್ಮ ಎಳೆಯನ್ನು ಬೊಮ್ಮಾಯ ಅರ್ಥೈಸಿಕೊಂಡಿರುತ್ತಾರೆ. ಸ್ವಯಂ ನಾಯಕನಾಗುವ, ಅದರಲ್ಲೂ ಪ್ರಬಲ ಲಿಂಗಾಯತ ಸಮುದಾಯದ  ಮುಖಂಡನಾಗುವ “ಸುವರ್ಣಾವಕಾಶ’ ಇದ್ದರೂ, ಯಡಿಯೂರಪ್ಪ ಛಾಯೆಯಿಂದ ಹೊರಬಂದು ಆಡಳಿತ ನಡೆಸುವ ಇರಾದೆ ಇದ್ದರೂ, ಆ ಧಾವಂತ ತೋರಿಸಲು ಸಾಧ್ಯವಾಗದ “ಅನಿವಾರ್ಯತೆ’ ನೂತನ ಮುಖ್ಯಮಂತ್ರಿಗಿದೆ.

ಕೊರೊನಾ, ಪ್ರವಾಹ, ನೀರಾವರಿ ಸಮಸ್ಯೆಗಳು ಇತ್ಯಾದಿಗಳನ್ನು  ಎದುರಿಸಿ ಜನಕಲ್ಯಾಣವನ್ನು ಕಾಪಿಡುವುದು, ಜತೆಗೆ  ಪಕ್ಷದೊಳಗಿನ-­ಹೊರಗಿನ ರಾಜಕೀಯ ಸವಾಲುಗಳು,  ಲಿಂಗಾಯತ ನಾಯಕನಾಗಿ­ದ್ದರೂ, ಪಂಚಮಸಾಲಿ ನಾಯಕರನ್ನು ಜತೆಗಿಟ್ಟುಕೊಂಡು ಸರಕಾರ ನಡೆಸು­ವುದು,  ಮೂಲ ಬಿಜೆಪಿಗರನ್ನು ಜತೆಯಲ್ಲಿ ಇಟ್ಟುಕೊಳ್ಳುವುದು, ಹೆಚ್ಚೇಕೆ, ಪಕ್ಷ ವರಿಷ್ಠರ ಮತ್ತು ಯಡಿಯೂರಪ್ಪ ಅವರ ಆಕಾಂಕ್ಷೆಗಳನ್ನು ಈಡೇರಿಸಿಕೊಂಡೇ  ಬಿಜೆಪಿ ಪಕ್ಷಕ್ಕೆ “ಮುಂದಿನ ನಾಯಕನಾಗುವುದು’.. ಹೀಗೆ ಸವಾಲುಗಳ ಸರಮಾಲೆ ಬೊಮ್ಮಾಯಿ ಅವರ ಎದುರಿಗಿದೆ.

 

-ನವೀನ್‌ ಅಮ್ಮೆಂಬಳ

ಟಾಪ್ ನ್ಯೂಸ್

ರಾಷ್ಟ್ರ ರಾಜಧಾನಿಗೆ ನಂದಿನಿ ಲಗ್ಗೆ: ಹೈನುಗಾರರಿಗೂ ಸಿಗಲಿ ಮನ್ನಣೆ

New Delhi: ರಾಷ್ಟ್ರ ರಾಜಧಾನಿಗೆ ನಂದಿನಿ ಲಗ್ಗೆ: ಹೈನುಗಾರರಿಗೂ ಸಿಗಲಿ ಮನ್ನಣೆ

Yasin Malik

Yasin Malik ವಿಚಾರಣೆಗೆ ತಿಹಾರ್‌ ಜೈಲಿನಲ್ಲೇ ಕೋರ್ಟ್‌ ರೂಂ: ಸುಪ್ರೀಂ

court

Himachal Pradesh;ನಷ್ಟದಲ್ಲಿರುವ ಹೊಟೇಲ್‌ ಮುಚ್ಚಲು ಹೈಕೋರ್ಟ್‌ ಆದೇಶ

1-moi

Prime Minister Modi; ಗಯಾನಾ, ಡೊಮಿನಿಕಾ ಗೌರವ ಪ್ರದಾನ

Dinesh Gundu Rao: ಅನರ್ಹರ ಕಾರ್ಡ್‌ ರದ್ದು ತಪ್ಪಲ್ಲ, ಅರ್ಹರಿಗೆ ಅನ್ಯಾಯ ಆಗುವುದಿಲ್ಲ

Dinesh Gundu Rao: ಅನರ್ಹರ ಕಾರ್ಡ್‌ ರದ್ದು ತಪ್ಪಲ್ಲ, ಅರ್ಹರಿಗೆ ಅನ್ಯಾಯ ಆಗುವುದಿಲ್ಲ

1-jaga

Waqf ಮಸೂದೆ ಕರಡು ವರದಿ ಸಿದ್ಧ: ಜೆಪಿಸಿ ಅಧ್ಯಕ್ಷ ಪಾಲ್‌ ಘೋಷಣೆ

Court: ಮಾವೋವಾದಿ ಸೋಮನ್‌ ಕಾಸರಗೋಡು ಕೋರ್ಟಿಗೆ ಹಾಜರು

Court: ಮಾವೋವಾದಿ ಸೋಮನ್‌ ಕಾಸರಗೋಡು ಕೋರ್ಟಿಗೆ ಹಾಜರು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

PM Mod

2024 Election; ಲೋಕಸಭೆ ಚುನಾವಣೆಗೆ ಮುನ್ನುಡಿಯೇ ಈ ಫ‌ಲಿತಾಂಶ?

Jaishankar

Foreign policy; ಬದಲಾದ ವಿದೇಶಾಂಗ ನೀತಿಯ ಪರಿಭಾಷೆ

ED

Chhattisgarh ‘ಮಹಾದೇವ’ ಅಸ್ತ್ರಕ್ಕೆ ಬಲಿಯಾಗುವವರು ಯಾರು?

1-qwewew

Congress ಅಸಮಾಧಾನದ ಜ್ವಾಲೆ: ಸಮ್ಮಿಶ್ರ ವೈಖರಿಯಲ್ಲಿ ಸರಕಾರ‌?

1-VR-AG

ರಾಜಸ್ಥಾನದ ರಾಜಪಟ್ಟದ ಮೇಲೆ ಎಲ್ಲರ ಕಣ್ಣು; ‘ಕೈ’ ಹಿಡಿಯುತ್ತಾ ಗ್ಯಾರಂಟಿ?

MUST WATCH

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

udayavani youtube

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|

udayavani youtube

ಲಾಭದಾಯಕ ಗುಲಾಬಿ ಕೃಷಿ ಮಾಡುವ ವಿಧಾನ

udayavani youtube

ಗೀತೋತ್ಸವ ತ್ರಿಪಕ್ಷ ಶತವೈಭವ ಕಾರ್ಯಕ್ರಮಕ್ಕೆ ಆಮಂತ್ರಿಸಿದ ಪರ್ಯಾಯ ಪುತ್ತಿಗೆ ಶ್ರೀಗಳು

ಹೊಸ ಸೇರ್ಪಡೆ

ರಾಷ್ಟ್ರ ರಾಜಧಾನಿಗೆ ನಂದಿನಿ ಲಗ್ಗೆ: ಹೈನುಗಾರರಿಗೂ ಸಿಗಲಿ ಮನ್ನಣೆ

New Delhi: ರಾಷ್ಟ್ರ ರಾಜಧಾನಿಗೆ ನಂದಿನಿ ಲಗ್ಗೆ: ಹೈನುಗಾರರಿಗೂ ಸಿಗಲಿ ಮನ್ನಣೆ

Yasin Malik

Yasin Malik ವಿಚಾರಣೆಗೆ ತಿಹಾರ್‌ ಜೈಲಿನಲ್ಲೇ ಕೋರ್ಟ್‌ ರೂಂ: ಸುಪ್ರೀಂ

1-GM

General Motors;1,000 ಉದ್ಯೋಗಿಗಳು ಕೆಲಸದಿಂದ ವಜಾ

1-wqewe

Tallest and shortest; ವಿಶ್ವದ ಅತೀ ಕುಬ್ಜ, ಅತೀ ಎತ್ತರದ ಮಹಿಳೆಯರ ಸಮಾಗಮ

sensex

Sensex ಪತನ, ರೂಪಾಯಿ ಮೌಲ್ಯ ಸಾರ್ವಕಾಲಿಕ ಕುಸಿತ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.