Congress ಅಸಮಾಧಾನದ ಜ್ವಾಲೆ: ಸಮ್ಮಿಶ್ರ ವೈಖರಿಯಲ್ಲಿ ಸರಕಾರ?
Team Udayavani, Oct 23, 2023, 8:00 AM IST
ಕಾಂಗ್ರೆಸ್ ಅಂದರೆ ಹೀಗೇನೇ… ಅಧಿಕಾರ ಇಲ್ಲದಾಗ ಭುಜಕ್ಕೆ ಭುಜ ಕೊಟ್ಟು, ಕೈಗೆ ಕೈಜೋಡಿಸಿ ಒಂದೇ ಮನಸ್ಸಿ ನಿಂದ ಒಗ್ಗಟ್ಟಿನಿಂದ ಹೋರಾಟ ನಡೆಸುವುದು, ಅಧಿಕಾರಕ್ಕೆ ಬಂದಾಗ “ಅಧಿಕಾರ’ ಕ್ಕಾಗಿ ಹೋರಾಡುವುದು (ಕಿತ್ತಾಡುವುದು), ಬಣ ರಾಜಕಾರಣ- ಗುಂಪುಗಾರಿಕೆ, ಪರಸ್ಪರ ಮುನಿಸು, ಪಕ್ಷದ ಚೌಕಟ್ಟು ಮೀರಿ ಬಹಿರಂಗವಾಗಿಯೇ ಹೇಳಿಕೆ-ಅಸಮಾಧಾನ ವ್ಯಕ್ತಪಡಿಸುವುದು, ಕೆಲಸಕ್ಕೆ ಭಂಗ ತರುವಂತಹ ಬಾಯಿ ಚಪಲದ ಮಾತುಗಳು. ಈಗ ರಾಜ್ಯದಲ್ಲಿ ಅಕ್ಷರಶಃ ನಡೆಯುತ್ತಿರುವುದೇ ಇದು. ಒಂದು ಕಡೆ ಅಧಿಕಾರಸ್ಥರು, ಇನ್ನೊಂದು ಕಡೆ ಅಧಿಕಾರ ವಂಚಿತರು, ಮತ್ತೂಂದೆಡೆ ಅಧಿಕಾರ ನಿರೀಕ್ಷಿತರು… ಹೀಗೆ ರಾಜ್ಯ ಕಾಂಗ್ರೆಸ್ ಮೂರು ಬಣಗಳಾಗಿದ್ದು ಸದ್ದಿಲ್ಲದೆ “ಬಣ ರಾಜಕಾರಣ’ ಒಳಗೊಳಗೆ ಜೋರಾಗಿದೆ. ಆಗೊಮ್ಮೆ ಈಗೊಮ್ಮೆ ಅಸಮಾಧಾನದ ಕಿಡಿ ಹೊರ ಹಾಕುತ್ತಿರುವ ಬಣಗಳಿಂದ ಮುಂದೆ ಅಸಮಾಧಾನದ ಜ್ವಾಲೆ ಸ್ಫೋಟಿಸಿದರೂ ಅಚ್ಚರಿ ಇಲ್ಲ.
ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಭರ್ಜರಿ ಗೆಲುವು ಸಿಕ್ಕ ಬಳಿಕ ರಾಜ್ಯದಲ್ಲಿ 5 ವರ್ಷ ಸ್ಥಿರ ಸರಕಾರ ಮತ್ತೆ ಸ್ಥಾಪನೆಯಾಗಲಿದೆ. ದಕ್ಷ, ಪಾರದರ್ಶಕ ಹಾಗೂ ಭ್ರಷ್ಟಾಚಾರರಹಿತ ಸರಕಾರವನ್ನು ಕಾಂಗ್ರೆಸ್ ಪಕ್ಷ ರಾಜ್ಯದ ಜನರಿಗೆ ನೀಡಲಿದೆ ಎಂಬ ನಿರೀಕ್ಷೆಗಳಿದ್ದವು. ಚುನಾವಣೆ ಮುನ್ನ ಘೋಷಿಸಿದ್ದ 5 ಗ್ಯಾರಂಟಿಗಳ ಪೈಕಿ ನಾಲ್ಕು ಗ್ಯಾರಂಟಿಗಳನ್ನು ಜಾರಿಗೊಳಿಸಿದ್ದೇ ಸಮಾಧಾನ- ಸಾಧನೆ. ನಿಜಕ್ಕೂ ಇದು ಹೆಗ್ಗಳಿಕೆಯ ಸಂಗತಿ. ಮಹಿಳೆ ಯ ರಿಗೆ ಸಾರಿಗೆ ಸಂಸ್ಥೆ ಬಸ್‌ಗಳಲ್ಲಿ ಉಚಿತ ಪ್ರಯಾಣ ಸೌಲಭ್ಯದ “ಶಕ್ತಿ’ ಯೋಜನೆ, 200 ಯೂನಿಟ್‌ವರೆಗೂ ಉಚಿತ ವಿದ್ಯುತ್ ಕಲ್ಪಿಸುವ “ಗೃಹ ಜ್ಯೋತಿ’, ಬಿಪಿಎಲ್ ಕುಟುಂಬ ಗಳಿಗೆ ಉಚಿತವಾಗಿ 5 ಕೆ.ಜಿ. ಅಕ್ಕಿ ಜತೆಗೆ ಹೆಚ್ಚು ವರಿ ಯಾಗಿ 5 ಕೆ.ಜಿ. ಅಕ್ಕಿ (ಸದ್ಯಕ್ಕೆ ನಗದು) ಪೂರೈಸುವ “ಅನ್ನಭಾಗ್ಯ’ ಯೋಜನೆ ಜತೆಗೆ ಪ್ರತೀ ಮನೆಯೊಡತಿಯ ಖಾತೆಗೆ ಮಾಸಿಕ 2 ಸಾವಿರ ರೂ. ಪಾವತಿಸುವ “ಗೃಹ ಲಕ್ಷ್ಮಿ’ ಯೋಜನೆಗಳನ್ನು ಅಲ್ಪ ಅವಧಿಯಲ್ಲಿಯೇ ಜಾರಿಗೊಳಿಸಿದ ಸಾಧನೆ ಸರಕಾರದ ಮುಂದಿದ್ದರೂ ಹೇಳಿಕೊಳ್ಳುವಂತಹ ಸಂಭ್ರಮ ಆಡಳಿತ ಪಕ್ಷದ ಶಾಸಕರಲ್ಲಿ ಕಾಣುತ್ತಿಲ್ಲ. ಕಾರಣ ಸರಕಾರದ ಬೊಕ್ಕಸದ ಹಣವನ್ನು ಗ್ಯಾರಂಟಿ ಯೋಜನೆ ಗಳು ನುಂಗುತ್ತಿದ್ದು ಶಾಸಕರಿಗೆ ವಿಶೇಷ ಅನುದಾನವೂ ಸೇರಿದಂತೆ ಕ್ಷೇತ್ರದ ಅಭಿವೃದ್ಧಿ ಕೆಲಸಗಳಿಗೆ ಧಾರಾಳವಾಗಿ ಹಣ ಕೊಡಲು ಸಾಧ್ಯವಾಗದೆ ಸರಕಾರದ ಕೈಕಟ್ಟಿ ಹಾಕ ಲಾಗಿದೆ. ಈ ಪರಿಸ್ಥಿತಿಯೇ ಈಗ ಆಡಳಿತ ಪಕ್ಷವನ್ನು ಅತೃ ಪ್ತರ ಮನೆಯಂತೆ ಮಾಡಿದೆ.
ಹೋಳಿಗೆ ಊಟಕ್ಕೆ ಹೋಗಿ ನಿತ್ಯದ ಊಟ “ಮಿಸ್’ ಮಾಡಿಕೊಂಡ ಅನುಭವ ಕಾಂಗ್ರೆಸ್ ಶಾಸಕರಿಗೆ ಈಗ ಆಗುತ್ತಿದೆ. ಹೀಗಾಗಿ ಹಸಿದ ವರಂತೆ ಅವರಿಂದ ಆಗೊಮ್ಮೆ-ಈಗೊಮ್ಮೆ ಅಸಮಾಧಾನದ ಹೇಳಿಕೆಗಳು ಹೊರ ಬರುತ್ತಿವೆ. ಸಚಿವರ ಕಾರ್ಯವೈಖರಿಗೆ ಕಾಂಗ್ರೆಸ್ ಶಾಸಕರೇ ಆಕ್ರೋಶ ವ್ಯಕ್ತಪಡಿಸಿದ ಉದಾಹರಣೆಗಳಿವೆ. ಆಡಳಿತ ಪಕ್ಷದಲ್ಲಿ 136 ಶಾಸಕರಿದ್ದರೂ ಕಾಂಗ್ರೆಸ್ ಮನೆಯಲ್ಲಿ ಶಾಂತಿ ಇಲ್ಲ, ನೆಮ್ಮದಿ ಇಲ್ಲ. ಕಾರಣ ಕೈಯಲ್ಲಿ ಕಾಸಿಲ್ಲ.
ಎರಡು “ಶಕ್ತಿ’ ಕೇಂದ್ರಗಳು
ಮುಖ್ಯಮಂತ್ರಿ ಸಿದ್ದರಾ ಮಯ್ಯ ಹಾಗೂ ಉಪ ಮುಖ್ಯ ಮಂತ್ರಿ ಡಿ.ಕೆ.ಶಿವಕುಮಾರ್ ಅವರು ಕಾಂಗ್ರೆಸ್ ಸರಕಾರದ ಜೋಡೆತ್ತುಗಳೆಂದು ಕರೆಯಬಹುದು. ಈ ಜೋಡೆತ್ತುಗಳ ನಡುವೆ ಒಗ್ಗಟ್ಟು- ಹೊಂದಾಣಿಕೆ, ಕೊಡು-ಕೊಳ್ಳುವಿಕೆ ಹೇಗಿರುತ್ತದೋ ಅದೇ ರೀತಿ ಶಾಸಕರಲ್ಲೂ ಇರುತ್ತದೆ. ಇಲ್ಲಿ ವ್ಯತ್ಯಾಸವಾದರೆ ಅದು ಶಾಸಕರ ವಲಯದಲ್ಲೂ ಪರಿಣಾಮ ಬೀರುತ್ತದೆ. ಈಗ ಆಗಿರುವುದೇ ಇದೆ. ನಮ್ಮ ನಡುವೆ ಯಾವುದೇ ಭಿನ್ನಾಭಿಪ್ರಾಯ ಇಲ್ಲ, ಒಗ್ಗಟ್ಟಾಗಿದ್ದೇವೆ ಎಂದು ಪದೇ ಪದೆ ಜೋಡೆತ್ತುಗಳು ಹೇಳಿದರೂ ಈಗ ಯಾರೂ ನಂಬುವ ಸ್ಥಿತಿಯಲ್ಲಿ ಇಲ್ಲ. ಜೋಡೆತ್ತುಗಳ ನಡುವೆ ಬಿರುಕು ಕಾಣಿಸಿಕೊಂಡಿದ್ದರಿಂದಲೇ ಕಾಂಗ್ರೆಸ್‌ನಲ್ಲಿ ಬಣ ರಾಜಕಾರಣ ಆರಂಭವಾಗಿದೆ.
ಕಾಂಗ್ರೆಸ್ ಸರಕಾರದ ಎರಡು “ಶಕ್ತಿ’ ಕೇಂದ್ರಗಳು ಸಮ್ಮಿಶ್ರ ಸರಕಾರದ ಛಾಯೆಯಂತಿವೆ. ಬಿಜೆಪಿ-ಜೆಡಿಎಸ್ ಸಮ್ಮಿಶ್ರ ಸರಕಾರ ಹಾಗೂ ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರಕಾರದ ಅವಧಿಯಲ್ಲಿ ಎಚ್.ಡಿ.ಕುಮಾರಸ್ವಾಮಿ ಸಿಎಂ, ಬಿ.ಎಸ್. ಯಡಿಯೂರಪ್ಪ ಹಾಗೂ ಡಾ| ಜಿ.ಪರಮೇಶ್ವರ್ ಅವರು ಕ್ರಮವಾಗಿ ಡಿಸಿಎಂ ಆಗಿದ್ದರು. ಆಗ ಆಡಳಿತ ಪಕ್ಷಗಳ ನಡುವೆ ಹೊಂದಾಣಿಕೆ ಇಲ್ಲದೆ “ನಾನೊಂದು ತೀರ- ನೀನೊಂದು ತೀರ’ ಎಂಬ ಬೆಳವಣಿಗೆಗಳು ನಡೆ ದಿದ್ದವು. ಈಗ ಸಿಎಂ ಸಿದ್ದರಾಮಯ್ಯ-ಡಿಸಿಎಂ ಡಿ.ಕೆ.ಶಿವಕುಮಾರ್ ನಡುವೆ ಹಲವು ವಿಷಯಗಳಲ್ಲಿ ಒಮ್ಮತವಿಲ್ಲದೆ ಅದೇ ವಾತಾವರಣ ಸೃಷ್ಟಿಯಾಗುತ್ತಿದೆ. ಎರಡು ಶಕ್ತಿ ಕೇಂದ್ರಗಳು ಎರಡು ಬಣಗಳ ಸೃಷ್ಟಿಗೆ ಕಾರಣವಾಗುತ್ತಿವೆ. ಚುನಾವಣೆಗೂ ಮುನ್ನ ಅವರು ಜೋಡೆತ್ತುಗಳಾಗಿದ್ದರು, ಚುನಾವಣೆ ಅನಂತರ ಜೋಡೆತ್ತುಗಳಾಗಿ ಉಳಿದಿಲ್ಲ ಎಂಬ ಮಾತುಗಳು ಕಾಂಗ್ರೆಸ್ ವಲಯದಿಂದಲೇ ಕೇಳಿ ಬರುತ್ತಿವೆ.
ಸಿದ್ದರಾಮಯ್ಯ ಅವರು ತಮ್ಮ ಸಿಎಂ ಕುರ್ಚಿ ಉಳಿಸಿ ಕೊಳ್ಳಲು (5 ವರ್ಷ) ತಮ್ಮದೇ ರೀತಿಯ ರಾಜಕೀಯ ದಾಳಗಳನ್ನು ಉರುಳಿಸುತ್ತಿದ್ದರೆ, ಎರಡೂವರೆ ವರ್ಷಗಳ ಅನಂತರ ಇಲ್ಲವೇ ಲೋಕಸಭಾ ಚುನಾವಣೆ ಬಳಿಕ ಸಿಎಂ ಕುರ್ಚಿ ಮೇಲೆ ಕೂರಲು ಡಿಕೆಶಿ ತಮ್ಮದೇ ತಂತ್ರಗಾರಿಕೆ ಗಳನ್ನು ರೂಪಿಸುತ್ತಿದ್ದಾರೆ. ಇನ್ನೊಂದೆಡೆ ಸಚಿವಾಕಾಂಕ್ಷಿಗಳು ಸಹ ಎರಡೂವರೆ ವರ್ಷಗಳ ತನಕ ಕಾಯುವ ಸ್ಥಿತಿಯಲ್ಲಿ ಇಲ್ಲ. ಲೋಕಸಭಾ ಚುನಾವಣೆ ಬಳಿಕ ಸಂಪುಟ ಪುನಾರಚನೆ ಆಗಬೇಕೆಂದು ಒತ್ತಡ ಹೇರುವ ಸಾಧ್ಯತೆಗಳಿವೆ. ಒಂದು ವೇಳೆ ಕಾಂಗ್ರೆಸ್ 14 ರಿಂದ 18 ಸ್ಥಾನ ಗೆದ್ದರೆ ಯಾವುದೇ ಬದಲಾವಣೆ ಆಗದಿರಬಹುದು. ಆದರೆ ಸಿಂಗಲ್ ಡಿಜಿಟ್‌ಗೆ ಇಳಿದರೆ ಸಂಪುಟಕ್ಕೆ ಅಪಾಯ ಕಟ್ಟಿಟ್ಟ ಬುತ್ತಿ. ಉಸ್ತುವಾರಿ ಸಚಿವರ ಕಾರ್ಯದಕ್ಷತೆ ಪರಾಮರ್ಶೆಗೆ ಕೂಗು ಕೇಳಿ ಬರಬಹುದು.
ಲೋಕಸಭಾ ಚುನಾವಣೆ ಬಳಿಕ ಉದ್ಭವವಾಗುವ ಬೆಳವಣಿಗೆಗಳ ಅನಂತರ ರಾಜಕೀಯ ತೀರ್ಮಾನಗಳಲ್ಲಿ ಸಿಎಂ-ಡಿಸಿಎಂ ನಡುವೆ ಹೊಂದಾಣಿಕೆ-ಒಗ್ಗಟ್ಟು ಬರಲು ಸಾಧ್ಯವೇ ಇಲ್ಲ. ಈಗಾಗಲೇ ಹಲವು ವಿಷಯಗಳಲ್ಲಿ ಮನಸ್ಸುಗಳು ಒಡೆದು ಹೋಗಿವೆ. ಪರಸ್ಪರ ಅಪನಂಬಿಕೆ ಗಳು ಮೂಡಿವೆ. ಸಿದ್ದರಾಮಯ್ಯ ಅವರು ಸಿಎಂ ಆಗಿದ್ದರೂ ಅವರಲ್ಲಿ ಉತ್ಸಾಹ ಇಲ್ಲ, ಸದಾ ಒತ್ತಡದಲ್ಲಿ ಇದ್ದಂತೆ ಕಾಣುತ್ತಿದ್ದರೆ ಡಿಕೆಶಿಯಲ್ಲಿ ಹುಮ್ಮಸ್ಸು ಇದೆ, ಹೆಜ್ಜೆ ಅಲ್ಲ ದಾಪುಗಾಲು ಹಾಕುತ್ತಿದ್ದಾರೆ. ಬಹಳ ಅಗ್ರೇಸ್ಸಿವ್ ಆಗಿದ್ದಾರೆ. ಸಿಎಂ ಭಾಗಿಯಾಗುವ ಪ್ರತಿಯೊಂದು ಸಭೆ, ಸಮಾರಂಭ ಗಳಲ್ಲಿ ಸಮನಾಗಿ ಪಾಲ್ಗೊಳ್ಳುತ್ತಿದ್ದಾರೆ. ಇದನ್ನು ಮುಖ್ಯ ಮಂತ್ರಿ ಗಳ ಆಪ್ತ ವಲಯ ಅನಗತ್ಯ ಮಧ್ಯಪ್ರವೇಶವೆಂದು ಬಿಂಬಿಸುತ್ತಿದೆ. ಈ ಎಲ್ಲವೂ ಜೋಡೆತ್ತುಗಳ ನಡುವೆ ದಿನೇ ದಿನೆ ಮನಸ್ತಾಪ ಹೆಚ್ಚಾಗಲು ಕಾರಣವಾಗುತ್ತಿದೆ. ಇದು ಯಾರನ್ನು ಎಲ್ಲಿಗೆ ತಂದು ನಿಲ್ಲಿಸುತ್ತದೋ ಕಾದು ನೋಡಬೇಕು.
ಡಿಕೆಶಿ ಪ್ರಭಾವ ಕುಗ್ಗಿಸಲಿಕ್ಕೆ 3 ಡಿಸಿಎಂ
ಡಿಸಿಎಂ ಡಿ.ಕೆ.ಶಿವಕುಮಾರ್ ಅವರ ಪ್ರಭಾವ ಕುಗ್ಗಿಸ ಲೆಂದೇ ಸಿಎಂಗೆ ಆಪ್ತರಾದ ಸಹಕಾರ ಸಚಿವ ಕೆ.ಎನ್.ರಾಜಣ್ಣ ಅವರು ಮೂರು ಡಿಸಿಎಂ ಹುದ್ದೆ ಸೃಷ್ಟಿಸಬೇಕೆಂಬ ಪ್ರಸ್ತಾವ ಮುಂದಿಟ್ಟ ಬಳಿಕ ಸಾಕಷ್ಟು ಪರ-ವಿರೋಧದ ಚರ್ಚೆಗಳು ನಡೆದವು. ಈ ಪ್ರಸ್ತಾವನೆಯ ಬೀಜ ಬಿತ್ತಿದವರು ಯಾರೆಂದು ಹೇಳುವ ಅಗತ್ಯವಿಲ್ಲ. ಡಿ.ಕೆ.ಶಿವಕುಮಾರ್ ಅವರ “ಒನ್ ಮ್ಯಾನ್ ಶೋ’ ಗೆ ಕಡಿವಾಣ ಹಾಕಲೆಂದೇ ಮೂರು ಡಿಸಿಎಂ ಹುದ್ದೆಗಳ ಸೃಷ್ಟಿ ಚಲಾವಣೆಗೆ ಬಂತು. ಲಿಂಗಾಯತ, ಪರಿಶಿಷ್ಟರು (ಎಸ್‌ಸಿ-ಎಸ್‌ಟಿ), ಮುಸ್ಲಿಮರಿಗೆ ತಲಾ ಒಂದೊಂದು ಡಿಸಿಎಂ ಹುದ್ದೆ ಕೊಟ್ಟರೆ ಆಗ ಡಿಕೆಶಿ ಮೂರು-ಮತ್ತೂಂದರ ಸಾಲಿನಲ್ಲಿರುತ್ತಾರೆ. ಏಕಚಕ್ರಾಧಿಪತ್ಯ ಸಾಮ್ರಾಜ್ಯಕ್ಕೆ ಕಡಿವಾಣ ಹಾಕಿದಂತೆ ಆಗುತ್ತದೆ ಎಂಬುದು ಸಿಎಂ ಆಪ್ತ ಬಣದ ಲೆಕ್ಕಾಚಾರ. ಇವೆಲ್ಲವನ್ನು ನೋಡಿದರೆ ಕಾಂಗ್ರೆಸ್ ಸರಕಾರದಲ್ಲಿ ಯಾವುದೂ ಸರಿ ಇಲ್ಲ, ಎಲ್ಲವೂ ಸುಗಮವಾಗಿಲ್ಲವೆಂದು ಹೇಳಬಹುದು.
ಭ್ರಷ್ಟಾಚಾರದ ಸುಳಿಗೆ
ಕಾಂಗ್ರೆಸ್ ಪಕ್ಷ ಹಿಂದಿನ ಬಿಜೆಪಿ ಸರಕಾರದ ವಿರುದ್ಧ ಭ್ರಷ್ಟಾ ಚಾರ ವನ್ನೇ ಪ್ರಮುಖ ಅಸ್ತ್ರವನ್ನಾಗಿ ಮಾಡಿಕೊಂಡು ಹೋರಾಟ ನಡೆಸಿ ಅಧಿಕಾರಕ್ಕೆ ಬಂದಿತ್ತು. ಆದರೆ ಅದೇ ಪಕ್ಷ ಅಧಿಕಾರಕ್ಕೆ ಬಂದ ಕೆಲವೇ ತಿಂಗಳಲ್ಲಿ ಭ್ರಷ್ಟಾಚಾರದ ಸುಳಿಗೆ ಸಿಲುಕಿದೆ. ಅಧಿಕಾರಿಗಳ ವರ್ಗಾವಣೆ, ಗುತ್ತಿಗೆದಾರರಿಂದ ಕಮೀಷನ್ ಆರೋಪ ಎದುರಿಸುತ್ತಿದೆ. ಭ್ರಷ್ಟಾಚಾರ ನಿಯಂತ್ರಿಸುವ ಹಾಗೂ ಅಡಳಿತದಲ್ಲಿ ದಕ್ಷತೆ ತರುವ ಸಿಎಂ ಸಿದ್ದರಾಮಯ್ಯ ಅವರ ಮಾತು ಜಾರಿಗೆ ಬರುತ್ತಿಲ್ಲ ಎಂಬ ಮಾತುಗಳು ರಾಜಕೀಯ ವಲಯದಲ್ಲಿ ಕೇಳಿ ಬರುತ್ತಿವೆ. ಈ ಕಾರಣದಿಂದಲೇ ತಮ್ಮ ಆಪ್ತ ಸ್ನೇಹಿತ ಬಿ.ಆರ್.ಪಾಟೀಲ್ “2013 ರಲ್ಲಿ ಇದ್ದ ಸಿದ್ದರಾಮಯ್ಯ ಈಗ ಇಲ್ಲ’ ಎಂದು ಇತ್ತೀಚೆಗೆ ಹೇಳಿದ್ದು ಸಾಕಷ್ಟು ಅರ್ಥ ಪೂರ್ಣ ಹಾಗೂ ಸಕಾಲಿಕವಾಗಿದೆ. ಸಿದ್ದರಾಮಯ್ಯ ಆಡಳಿತದಿಂದ ರಾಜ್ಯದ ಜನ ಬಹಳ ನಿರೀಕ್ಷಿಸುತ್ತಿದ್ದು ಅದು ಸಿಗಲಿದೆ ಎಂಬ ವಿಶ್ವಾಸ ಈಗಲೂ ಇದೆ. ಈ ನಿಟ್ಟಿನಲ್ಲಿ ಸಿಎಂ ಸಂಕಲ್ಪ ಮಾಡಬೇಕಿದೆ.
ಬೆಳಗಾವಿ ಕಂಟಕ
ಬೆಳಗಾವಿಯ “ಅಣ್ಣ-ಸಹೋದರಿ’ ನಡುವೆ ಉಂಟಾಗಿ ರುವ ಮನಸ್ತಾಪ (ಸತೀಶ್ ಜಾರಕಿಹೋಳಿ- ಲಕ್ಷ್ಮೀ ಹೆಬ್ಟಾಳ್ಕರ್) ಈ ಸರಕಾರಕ್ಕೂ ಕಂಟಕ ತರುವುದೇ ಎಂಬ ರೀತಿ ವ್ಯಾಖ್ಯಾನಗಳು ನಡೆದಿವೆ. ಹಿಂದೆ ರಮೇಶ್ ಜಾರಕಿಹೋಳಿ- ಲಕ್ಷ್ಮೀ ಹೆಬ್ಟಾಳ್ಕರ್ ನಡುವೆ ಡಿಸಿಸಿ ಬ್ಯಾಂಕ್ ಅಧ್ಯಕ್ಷರ ಚುನಾವಣೆ ವಿಷಯದಲ್ಲಿ ಶುರುವಾದ ಸಂಘರ್ಷ ಅನಂತರ ಸಮ್ಮಿಶ್ರ ಸರಕಾರದ ಪತನದವರೆಗೂ ಬಂದು ನಿಂತಿತು. ಈಗ ಸತೀಶ್ ಜಾರಕಿಹೊಳಿ ಸಿಎಂ ಸಿದ್ದರಾಮಯ್ಯ ಅವರ ಆಪ್ತರಾಗಿದ್ದರೆ ಲಕ್ಷ್ಮೀ ಹೆಬ್ಟಾಳ್ಕರ್ ಡಿಸಿಎಂ ಡಿಕೆಶಿ ಆಪ್ತ ಬಣದಲ್ಲಿದ್ದಾರೆ. ಇಲ್ಲೂ ಸಹ ಬಣ ರಾಜಕಾರಣ ಎದ್ದು ಕಾಣುತ್ತಿದೆ. ಬೆಳಗಾವಿ ವಿಷಯದಲ್ಲಿ ಯಾರ ಕೈ ಮೇಲಾಗಲಿದೆ ಎಂಬುದಕ್ಕೆ ಮುಂದಿನ ದಿನಗಳಲ್ಲಿ ಉತ್ತರ ಸಿಗಲಿದೆ.
ಎಂ.ಎನ್.ಗುರುಮೂರ್ತಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Pro Kabaddi: ಪಾಟ್ನಾ-ಗುಜರಾತ್ ಟೈ
BBK11: ನಿಮ್ಮ ಉಸ್ತುವಾರಿ ನೋಡಿ ಹೇಸಿಗೆ ಆಯಿತು.. ಚೈತ್ರಾ ಬಾಯಿ ಮುಚ್ಚಿಸಿದ ಕಿಚ್ಚ
C.T.Ravi issue: ಕೋರ್ಟ್‌ನಲ್ಲಿರುವ ವಿಚಾರದ ಬಗ್ಗೆ ಚರ್ಚಿಸುವುದು ಸರಿಯಲ್ಲ: ಜಿ.ಪರಮೇಶ್ವರ್
Padubidri: ದ್ವಿಚಕ್ರ ವಾಹನಕ್ಕೆ ಲಾರಿ ಢಿಕ್ಕಿ; ಸಹ ಸವಾರ ಸಾವು
Kundapura: ತ್ರಾಸಿ ಕಡಲ ಕಿನಾರೆಯಲ್ಲಿ ಮಗುಚಿದ ಜೆಟ್ ಸ್ಕೀ ಬೋಟ್; ರೈಡರ್ ನಾಪತ್ತೆ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.