ಆನೆ ಕುಳಿತರೆ ಏಳಿಸಲು ಮತ್ತೆ 70 ವರ್ಷ ಬೇಕಾದೀತು!
ದೇಶದಲ್ಲಿ ಆಡಳಿತ ಪಕ್ಷಕ್ಕೆ ಪ್ರಬಲ ಮತ್ತು ಸಮರ್ಥ ವಿಪಕ್ಷ ಬೇಕೇ ಬೇಕು.
Team Udayavani, May 23, 2022, 10:40 AM IST
ದೇಶದ ಪ್ರಮುಖ ರಾಷ್ಟ್ರೀಯ ಪಕ್ಷವಾದ ಕಾಂಗ್ರೆಸ್‌ನ ಪುನರುಜ್ಜೀವನಕ್ಕೆ ರಾಜಸ್ಥಾನದ ಉದಯಪುರದಲ್ಲಿ ಚಿಂತನ ಶಿಬಿರದ ಮೂಲಕ ಚಾಲನೆ ನೀಡಿದ ಮೇಲೂ ಹೊರ ಹೋಗುವವರ ಸಂಖ್ಯೆಯೇನೂ ನಿಂತಿಲ್ಲ. ಕೆಲವೇ ತಿಂಗಳುಗಳಲ್ಲಿ ಚುನಾವಣೆ ಎದುರಿಸಬೇಕಾದ ಗುಜರಾತ್‌ನಲ್ಲಿ ಯುವ ನಾಯಕ ಹಾರ್ದಿಕ್ ಪಟೇಲ್ ಪಕ್ಷದ ಎಲ್ಲ ಸ್ಥಾನಗಳಿಗೂ ರಾಜೀನಾಮೆ ನೀಡಿ ಹೊರ ಹೋಗಿದ್ದಾರೆ. ಇತ್ತ ಪಂಜಾಬ್‌ನಲ್ಲಿ ಪಕ್ಷದ ಸ್ಥಿತಿಯಂತೂ ದಯನೀಯ.
ದೊಡ್ಡ ಸಿಕ್ಸರ್ ಬಾರಿಸುವುದಾಗಿ ಕ್ರೀಸ್‌ಗೆ ಇಳಿದು ಶೂನ್ಯಕ್ಕೆ ಬೌಲ್ಡ್ ಆದ ನವಜೋತ್ ಸಿಂಗ್ ಸಿಧುವಿನ ಅಬ್ಬರ ಕ್ರೀಡಾಂಗಣಕ್ಕಷ್ಟೇ ಸೀಮಿತ ಎಂಬುದು ಸಾಬೀತಾಗಿದೆ. ಈಗ ಅನ್ಯ ಪ್ರಕರಣ ಸಂಬಂಧ ಜೈಲಿನಲ್ಲಿದ್ದಾರೆ. ಪಂಜಾಬ್‌ನಲ್ಲಿ ಪಕ್ಷದ ಅಧ್ಯಕ್ಷರಾಗಿದ್ದ ಹಿರಿಯ ಮುಖಂಡ ಸುನಿಲ್ ಜಾಖಡ್ ಸಹ ಪಕ್ಷ ತ್ಯಜಿಸಿ ಬಿಜೆಪಿಗೆ ಸೇರಿದ್ದಾರೆ. ಆಮ್ ಆದ್ಮಿ ಪಕ್ಷದ ಬಾಗಿಲನ್ನು ಕಾಂಗ್ರೆಸ್‌ನವರು ಬಡಿಯುವ ಮೊದಲು ನಾವೇ ಒಳಗೆ ಕರೆದರೆ ಸೂಕ್ತ ಎಂಬುದೂ ಕಾರ್ಯತಂತ್ರವೇ. ಆಗ ಆಮ್ ಆದ್ಮಿ ಬಲಗೊಳ್ಳುವುದಿಲ್ಲ, ಕಾಂಗ್ರೆಸ್ ಬಲಹೀನಗೊಳ್ಳುತ್ತದೆ. 2024ರ ಲೋಕಸಭಾ ಚುನಾವಣೆ ಹೊತ್ತಿಗೆ ಪಕ್ಷದ ಸ್ಥಿತಿ ಕೊಂಚವಾದರೂ ಸುಧಾರಿಸಬೇಕೆಂಬ ಬಿಜೆಪಿಯ ಲೆಕ್ಕಾಚಾರದ ಭಾಗವೂ ಹೌದು. ಸುಮಾರು ಮೂರು ದಶಕಗಳಿಂದ ಕಾಂಗ್ರೆಸ್‌ನಲ್ಲೇ ಇದ್ದ ಹಳೆಯ ತಲೆ ಸುನಿಲ್ ಜಾಖಡ್‌ಗೆ ಬಿಜೆಪಿ ರಾಜ್ಯಸಭಾ ಸದಸ್ಯತ್ವವನ್ನು ನೀಡುವ ಸಾಧ್ಯತೆ ಇದೆ.
ಇವು ಕಾಂಗ್ರೆಸ್ ಚಿಂತನ ಶಿಬಿರದ ಅನಂತರದ ಬೆಳವಣಿಗೆಗಳು. ಆದರೆ ಚಿಂತನ ಶಿಬಿರದಲ್ಲಿನ ಚರ್ಚೆ, ಸಲಹೆ ಹಾಗೂ ಕಾರ್ಯತಂತ್ರಗಳು ಕಾಂಗ್ರೆಸ್‌ನ್ನು ಮತ್ತೆ ಮುನ್ನೆಲೆಗೆ ತಂದು ನಿಲ್ಲಿಸಬಹುದೇ? ಇಂಥದೊಂದು ಕುತೂಹಲ ಕೆಲವರಲ್ಲಿ ಮನೆ ಮಾಡಿದೆ. ಆದರೆ ಹಲವರಲ್ಲಿ ಕೊಂಚ ಕಷ್ಟ ಎನ್ನುವ ಅಭಿಪ್ರಾಯವೇ ಇದೆ. ಸದ್ಯದ ಮಟ್ಟಿಗೆ ದೇಶದಲ್ಲಿ ಆಡಳಿತ ಪಕ್ಷಕ್ಕೆ ಪ್ರಬಲ ಮತ್ತು ಸಮರ್ಥ ವಿಪಕ್ಷ ಬೇಕೇ ಬೇಕು. ಆಗಲೇ ಪ್ರಜಾತಂತ್ರದ ಆರೋಗ್ಯ ಚೆನ್ನಾಗಿರಲು ಸಾಧ್ಯ ಎಂಬುದು ಬರೀ ಆದರ್ಶದ ಮಾತಷ್ಟೇ ಅಲ್ಲ; ಅಗತ್ಯವೂ ಸಹ. ಎಷ್ಟೋ ಬಾರಿ ರಾಜ್ಯಶಾಸ್ತ್ರದ ಪಠ್ಯದ ಹೇಳಿಕೆಯಂತೆ ಇದು ಕಂಡರೂ ಆಡಳಿತ ಪಕ್ಷದ ಕಾವಲಿಗೆ ವಿಪಕ್ಷ ಬೇಕೇಬೇಕು. ಪ್ರಜಾತಂತ್ರದ ಉಳಿವಿಗೂ ಆ ವ್ಯವಸ್ಥೆಯೇ ಕಾವಲು. ಈ ಆಶಾವಾದದ ನೆಲೆಯಲ್ಲಿ ನಾವು ಕಾಂಗ್ರೆಸ್ ಮತ್ತೆ ಪುನರುಜ್ಜೀವನವಾದೀತು ಎಂದು ನಿರೀಕ್ಷಿಸಬಹುದು. ಆದರೆ ಉದಯಪುರದ ನಿರ್ಣಯಗಳ ಜಾರಿಗಿಂತಲೂ ಎಷ್ಟು ಪರಿಣಾಮಕಾರಿಯಾಗಿ ಅನುಷ್ಠಾನವಾಗುತ್ತದೊ ಪಾಲಿಸಲಾಗುತ್ತದೋ ಎನ್ನುವುದರ ಮೇಲೆಯೇ ಎಲ್ಲವೂ ನಿರ್ಧಾರವಾಗಲಿದೆ. ದೇಶದ ವಿಪಕ್ಷದ ಆರೋಗ್ಯ ಮತ್ತು ಕಾಂಗ್ರೆಸ್‌ನ ಭವಿಷ್ಯ ಎರಡೂ ಒಟ್ಟಿಗೇ ಇದೆ.
ಭರವಸೆಯ ಬೆಳ್ಳಿಮಿಂಚು ಎಲ್ಲಿ?: ಚಿಂತನ ಶಿಬಿರದ ಮೊದಲು “ಕೊನೆಗೂ ಕಾಂಗ್ರೆಸ್ ಸರಿ ಹೋಗುವ ಕಾಲ ಬಂದಿದೆ. ಜ್ಞಾನೋದಯವಾಗಿದೆ’ ಎಂದೆನಿಸಿತ್ತು. ಆ ದಿಸೆಯಲ್ಲಿ ಹೇಳುವುದಾದರೆ ಇದೊಂದು ಚಿಂತನ ಮಂಥನ ಒಳ್ಳೆಯ ಹೆಜ್ಜೆಯೇ. ಹೊಟ್ಟೆ ಹಾಳಾದರೆ ಸರಿಯಾಗಲು ಎರಡೇ ದಾರಿ. ಒಂದು ಅದೇ ಸರಿ ಹೋಗಲಿ ಎಂದು ಉಪವಾಸ ಕುಳಿತು ಕೊಳ್ಳುವುದು. ಮತ್ತೂಂದು ಒಳಗಿದದ್ದೆಲ್ಲ ಹೊರಗೆ ಕಕ್ಕಿ ಹಗುರವಾಗಿ ಸರಿಪಡಿಸಿಕೊಳ್ಳುವುದು. ಕಾಂಗ್ರೆಸ್ ಎರಡನ್ನೂ ಮಾಡಿದೆ. ಈಗ ಸರಿ ಹೋಗಲೇ ಬೇಕು. ಹಾಗೆಂದು ಶಿಬಿರ ಮುಗಿದ ಮೇಲೆ ಆಕಾಶದಲ್ಲಿ ಕಾರ್ಮೋಡ ಸೀಳಿ ಭರವಸೆಯ ಬೆಳ್ಳಿ ಮಿಂಚು ಮೂಡಿತೇ ಎಂದರೆ ಸ್ಪಷ್ಟವಾಗಿ ಇಲ್ಲ. ಕಾರ್ಮೋಡ ಕರಗುವ ಲಕ್ಷಣ ಗೋಚರಿಸಿದೆ. ಗೊತ್ತಿಲ್ಲ, ಬೀಸುವ ಗಾಳಿ ಮೋಡದ ಚಲನೆಯ ದಿಕ್ಕನ್ನು ನಿರ್ಧರಿಸುತ್ತದೆ!
ಶಿಬಿರದಲ್ಲಿ ಪ್ರಸ್ತಾವಿಸಿದ ಸಂಗತಿಗಳು ಪ್ರಮುಖವೇ. ಉದ್ದೇಶ ಮಹತ್ವದ್ದಾದರೂ ಅದರ ಪರಿಣಾಮ ಸಿಗುವುದು ಅನುಷ್ಠಾನದ ದಕ್ಷತೆಯಲ್ಲಿ. “ಭಾರತ್ ಜೋಡೋ’ ಮೂಲಕ ಜನರೊಂದಿಗೆ ಮತ್ತೆ ಸಂಪರ್ಕ ಸಾಧಿಸುವ ಪ್ರಯತ್ನ ಹೊಸದಲ್ಲವಾದರೂ ಒಳ್ಳೆಯದು. ತಳಮಟ್ಟದಲ್ಲಿ ಪಕ್ಷವನ್ನು ಪುನರ್ ಸಂಘಟಿಸುವ ಕೆಲಸಕ್ಕೆ ದೊಡ್ಡ ಮುಖಗಳಿಗಿಂತಲೂ ಸಂಘಟನಾಶೀಲ, ಚತುರ ಹಾಗೂ ಯುವ ಮುಖಂಡರು ಬೇಕು. ಅವರಿಗೆ ನಾಯಕತ್ವ ಗುಣವಿರಬೇಕು. ಅಂಥವರು ದೇಶಾದ್ಯಂತ ಎಷ್ಟರಮಟ್ಟಿಗೆ ಪಕ್ಷದಲ್ಲಿ ಇನ್ನೂ ಉಳಿದುಕೊಂಡಿದ್ದಾರೋ ಸ್ಪಷ್ಟತೆ ಇಲ್ಲ. ಒಂದೆರಡು ರಾಜ್ಯಗಳಲ್ಲಿ ಈ ಸ್ಥಿತಿ ಇರದಿರಬಹುದು. “ಭಾರತ್ ಜೋಡೋ’ ಪಕ್ಷದ ಬರೀ ಆಂದೋಲನವಲ್ಲ; ಜತೆಗೆ ಜನರೊಂದಿಗೆ ಸಂಪರ್ಕ ಕಲ್ಪಿಸುವಂಥ ಮಹಾ ಅಭಿಯಾನ. ಅದರ ಯಶಸ್ಸಿಗೆ ರಾಜ್ಯ, ಜಿಲ್ಲಾ, ತಾಲೂಕು, ಬೂತ್ ಮಟ್ಟದಲ್ಲಿ ಸಮರ್ಥ ಸಂಘಟನ ಚತುರರು ಹಾಗೂ ಪ್ರಬಲ ಕಾರ್ಯಕರ್ತರಿದ್ದರಷ್ಟೇ ಸಾಧ್ಯ. ಈ ಹಿನ್ನೆಲೆಯಲ್ಲಿ ಈ ಎಲ್ಲ ಹಂತಗಳಲ್ಲೂ ಸೂಕ್ತರಾದವರಿಗೆ ಹೊಣೆಗಾರಿಕೆ ವಹಿಸಿ, ಒಳಜಗಳಕ್ಕೆ ಮದ್ದು ಅರೆದು ಕಾರ್ಯಕ್ಷೇತ್ರಕ್ಕೆ ಇಳಿಯದಿದ್ದರೆ, ಮುಂದಿನ ಲೋಕಸಭಾ ಚುನಾವಣೆಯಲ್ಲಿ ಮಹತ್ವದ ಸಾಧನೆ ನಿರೀಕ್ಷಿಸುವುದು ಕಷ್ಟವಾದೀತು.
ಇದರೊಂದಿಗೆ ಒಂದು ಕುಟುಂಬಕ್ಕೆ ಒಂದೇ ಟಿಕೆಟ್ ಎನ್ನುವ ಮತ್ತೊಂದು ಅಂಶವೂ ಪ್ರಸ್ತುತ ಬಿಜೆಪಿ ಚಾಲನೆ ಬಿಟ್ಟಿರುವ ಕುಟುಂಬ ರಾಜಕಾರಣಕ್ಕೆ ಅವಕಾಶ ನೀಡುವುದಿಲ್ಲ ಎನ್ನುವುದಕ್ಕೆ ಸರಿ ಸಮಾನವಾದುದಲ್ಲ. ಆದರೆ ಹೊಸ ತಲೆಮಾರಿನಲ್ಲಿ ಸಣ್ಣದೊಂದು ಅವಕಾಶದ ನಿರೀಕ್ಷೆ ಹುಟ್ಟಿಸಬಹುದು. ಇದೂ ಸಹ ಎಷ್ಟರಮಟ್ಟಿಗೆ, ಯಾವ್ಯಾವ ಹಂತದಲ್ಲಿ ಅನುಷ್ಠಾನ ವಾಗುತ್ತದೆಯೋ ಕಾದು ನೋಡಬೇಕು.
ಕಾಂಗ್ರೆಸ್‌ನ ಪ್ರಬಲ ಮತ ಬ್ಯಾಂಕ್‌ಗಳೇ ಇಂದು ಬೇರೆಯವರ ಪಾಲಾಗಿವೆ. ಇಂಥ ಸಂದರ್ಭದಲ್ಲಿ ಎಸ್‌ಸಿ, ಎಸ್‌ಟಿ, ಒಬಿಸಿ ಮತ್ತಿತರ ವರ್ಗಗಳಿಗೆ ಪಕ್ಷದಲ್ಲಿನ ಅವಕಾಶಗಳ ಮೀಸಲು ಪ್ರಸ್ತಾವವೂ ಒಂದಿಷ್ಟು ಬದಲಾವಣೆಯನ್ನೂ ತರಬಹುದು. ಅದೂ ಸಹ ಅಂಶದ ಅನುಷ್ಠಾನದ ದಕ್ಷತೆಯಲ್ಲೇ. ಇದನ್ನು ಹೊರತುಪಡಿಸಿದಂತೆ ಕಾರ್ಯಕಾರಿ ಸಮಿತಿಗಳಲ್ಲಿ ಯುವ ಮುಖಗಳಿಗೆ ಅವಕಾಶ, ಬಿಜೆಪಿಯೊಂದಿಗೆ ಸೈದ್ಧಾಂತಿಕ ನೆಲೆಯಲ್ಲಿ ಹೋರಾಟದ ರೂಪುರೇಷೆ ಇತ್ಯಾದಿ ಸಂಗತಿಗಳೂ ಚರ್ಚಿತವಾಗಿ ಒಂದು ರೂಪ ಪಡೆದವು.
ಇದೆಲ್ಲದರ ಜತೆಗೆ ಪಕ್ಷದ ಸಂಪೂರ್ಣ ಪುನರ್‌ರಚನೆಯ ಸೊಲ್ಲು ಎತ್ತಿದ್ದ ಹಿರಿಯರಿಗೆ (ಜಿ23) ಸಣ್ಣದೊಂದು ಸಾಂತ್ವನ ಹೇಳಿ ತಟಸ್ಥಗೊಳಿಸಲಾಗಿದೆ. ಇದರಿಂದ ಹಿರಿಯರು ಸಂಪೂರ್ಣ ಸಮಾಧಾನವೇನೂ ಆಗಿಲ್ಲ. ಕಾಂಗ್ರೆಸ್‌ನ ನಾಯಕ ಹಾಗೂ ಮಾಜಿ ಪ್ರಧಾನಿ ಪಿ.ವಿ ನರಸಿಂಹರಾವ್ ಅವರು 1991ರಲ್ಲಿ ಬರ್ಖಾಸ್ತುಗೊಳಿಸಿದ್ದ ಪಕ್ಷದ ಸಂಸದೀಯ ಮಂಡಳಿಯ ಪುನರ್ ಸ್ಥಾಪನೆ ಇವರ ಪ್ರಮುಖ ಬೇಡಿಕೆಯಾಗಿತ್ತು. ಅದನ್ನು ಒಪ್ಪದ ಕಾಂಗ್ರೆಸ್ ಕಾರ್ಯಕಾರಿ ಸಮಿತಿ, ಮತ್ತೂಂದು ಸಲಹಾ ಸಮಿತಿಯನ್ನು ನೇಮಿಸುವ ಸಲಹೆಯನ್ನು ಮುಂದಿಟ್ಟಿತು. ಅನಿವಾರ್ಯವಾಗಿ ಹಿರಿಯರು ಇದಕ್ಕೆ ಸಮ್ಮತಿಸಿದ್ದಾರೆ. ಪರಿಸ್ಥಿತಿ ತಟಸ್ಥವೆನಿಸಿರಬಹುದು. ಇದು ಹೀಗೆಯೇ ಮುಂದೆಯೂ ಇದ್ದೀತೆಂದು ಹೇಳಲಾಗದು.
ಇಷ್ಟೆಲ್ಲ ಆಗಿಯೂ ಚರ್ಚಿಸದ ಅಥವಾ ಹಾಗೆಯೇ ಉಳಿದ ಪ್ರಮುಖ ಸಂಗತಿಯೆಂದರೆ ಕಾಂಗ್ರೆಸ್ ಪಕ್ಷದಲ್ಲಿನ ನಾಯಕತ್ವದ ವಿಷಯ. ಕೆಲವು ನಾಯಕರು ಮತ್ತೆ ರಾಹುಲ್ ಗಾಂಧಿಯ ಹೆಸರನ್ನೇ ಪ್ರಸ್ತಾವಿಸಿದ್ದಾರೆ. ಆದರೆ ಇತ್ತೀಚಿನ ಚುನಾವಣೆಗಳಲ್ಲಿ ಕಾಂಗ್ರೆಸ್ ನೆಲಕಚ್ಚುತ್ತಿರುವುದಕ್ಕೆ ಪ್ರಮುಖ ಕಾರಣವೆಂದರೆ ಬಿಜೆಪಿಯ ಪ್ರಬಲ ನಾಯಕ ಹಾಗೂ ಪ್ರಧಾನಿ ನರೇಂದ್ರ ಮೋದಿಗೆ ಎದುರಾಗಿ ಅಷ್ಟೇ ಪ್ರಬಲವಾದ ನಾಯಕನನ್ನು ರೂಪಿಸಲಾಗದಿದ್ದುದು.
ಬಿಜೆಪಿಯ ನರೇಂದ್ರ ಮೋದಿಗೆ ಇತಿಹಾಸದ ಕೊಂಡಿಯಾಗಲೀ ಕುಟುಂಬ ನಾಮಬಲದ ಬೆಂಬಲವಾಗಲೀ ಇಲ್ಲ. ಆದರೆ ಕಾಂಗ್ರೆಸ್‌ನಲ್ಲಿ ಗಾಂಧಿ ಹೆಸರಿನ ನಾಮ ಬಲವಿದ್ದೂ ಮೋದಿಯ ಪ್ರಭಾವವನ್ನು ಕುಗ್ಗಿಸ ಲಾಗುತ್ತಿಲ್ಲ. ಇದು ಒಪ್ಪಿಕೊಳ್ಳಲು ಸ್ವಲ್ಪ ಕಹಿ ಎನಿಸಿದರೂ ಒಪ್ಪಲೇಬೇಕಾದ ಸತ್ಯವೂ ಹೌದು. ಈ ಸಂಗತಿ ಕುರಿತು ಚರ್ಚೆ ನಡೆಯಬೇಕಿತ್ತು. ಒಂದು ವೇಳೆ ಏಕ ವ್ಯಕ್ತಿ/ಪಕ್ಷದ ನೆಲೆಯಲ್ಲಿ ಸಾಧ್ಯವಿಲ್ಲವಾದರೆ ಸಂಘಟನಾತ್ಮಕ ನೆಲೆಯಲ್ಲಾದರೂ (ತೃತೀಯ ರಂಗ ಇತ್ಯಾದಿ) ಮೋದಿಯನ್ನು ಕಟ್ಟಿ ಹಾಕಲು ಸಾಧ್ಯವೇ ಎಂದು ಯೋಚಿಸಬೇಕಿತ್ತು. ಈ ತೀರ್ಮಾನ 2024ರ ಲೋಕಸಭೆ ಚುನಾವಣೆಗೆ ಅಗತ್ಯವಿತ್ತು. ಅದು ಸಾಧ್ಯವಾಗಲೇ ಇಲ್ಲ.
ಕಾಂಗ್ರೆಸ್ ಮೊದಲು ಮಾಡಬೇಕಿರುವುದು ಕಳೆದು ಹೋದ ಮುಖಬೆಲೆಯನ್ನು ವಾಪಸು ಗಳಿಸುವುದು. ಅದಕ್ಕೆ ನಾಯಕತ್ವದ ಪ್ರಶ್ನೆಯೇ ಬಹಳ ಮುಖ್ಯ. ಅದು ಸರಿ ಹೋಗದೇ ಉಳಿದೆಲ್ಲವೂ ಅಷ್ಟೇ ಸಮರ್ಪಕವಾಗಿ, ನಾವಂದುಕೊಂಡ ರೀತಿಯಲ್ಲೇ ಸಾಗುತ್ತದೆ ಎಂದು ಹೇಳಲಾಗದು.
ಆನೆಯೊಂದು ಸದಾ ಓಡುತ್ತಿರಬೇಕೆಂದೇನೂ ಇಲ್ಲ; ಆದರೆ ನಡೆಯುತ್ತಲೇ ಇರಬೇಕು. ನಡೆಯುತ್ತಿರುವಂತೆ ನೋಡಿಕೊಳ್ಳಬೇಕು. ಯಾಕೆಂದರೆ ಒಮ್ಮೆ ಕುಳಿತರೆ ಅದನ್ನು ಏಳಿಸುವುದು ಕುಂಭಕರ್ಣನನ್ನು ನಿದ್ದೆಯಿಂದ ಏಳಿಸಿದಂತೆಯೇ ಮಹಾ ಪ್ರಯಾಸ. ಆನೆ ಕುಳಿತರೆ ಏಳಿಸಲು ಮತ್ತೆ ಎಪ್ಪತ್ತು ವರ್ಷ ಬೇಕಾದೀತು!
ಕಾಂಗ್ರೆಸ್ ಸಹ ಭಾರತೀಯ ಪ್ರಜಾತಂತ್ರ ವ್ಯವಸ್ಥೆಯಲ್ಲಿ ಆನೆಯೇ. ಈಗ ನಡೆಯುತ್ತಿದೆಯೋ ನಡೆದಂತೆ ತೋರು ತ್ತಿದೆಯೋ ಎಂಬುದು ಸ್ಪಷ್ಟವಾಗಬೇಕಿದೆ. ಆ ಶಕ್ತಿ ಕಾಂಗ್ರೆಸ್‌ನ ಪ್ರತೀ ಹಂತದ ನಾಯಕರಲ್ಲಿದೆ. ಅದು ಸರಿಹೋಗಬೇಕೆಂದರೆ ಆಂತರಿಕ ಚುನಾವಣೆಯೊಂದೇ ಮದ್ದು. ಅದಾಗದಿದ್ದರೆ ಆನೆ ನಡೆಯುವುದು ಕಷ್ಟವಾದೀತು. ಅದಾಗದಿದ್ದರೆ ಆನೆ ನಡೆಯುವುದು ಕಷ್ಟವಾದೀತು.
- ಅರವಿಂದ ನಾವಡ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Venur; ಚಿರತೆ ಓಡಾಟ; ಸಾರ್ವಜನಿಕರಲ್ಲಿ ಆತಂಕ; ಅರಣ್ಯಾಧಿಕಾರಿ- ಸಾರ್ವಜನಿಕರ ಸಭೆ
Bengaluru:ಕುಡಿದ ಅಮಲಲ್ಲಿದ್ದ ಚಾಲಕ; ರಕ್ಷಣೆಗಾಗಿ ಚಲಿಸುತ್ತಿದ್ದ ರಿಕ್ಷಾದಿಂದ ಜಿಗಿದ ಮಹಿಳೆ
Governor: ಮಣಿಪುರದ 19 ನೇ ರಾಜ್ಯಪಾಲರಾಗಿ ಅಜಯ್ ಭಲ್ಲಾ ಪ್ರಮಾಣ ವಚನ ಸ್ವೀಕಾರ
Bidar; ಗುತ್ತಿಗೆದಾರ ಸಚಿನ್ ಕೇಸ್; ತನಿಖೆ ಆರಂಭಿಸಿದ ಸಿಐಡಿ ತಂಡ
Prajwal Devaraj; ಶಿವರಾತ್ರಿಗೆ ʼರಾಕ್ಷಸʼ ಅಬ್ಬರ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.