ಕೈ ಪಾಳಯಕ್ಕಿದು ಆತಂಕ ಪರ್ವ
Team Udayavani, Mar 27, 2017, 10:39 AM IST
ಜೆಡಿಎಸ್‌ಗೆ ಕಾಂಗ್ರೆಸ್‌ಗಿಂತ ಬಿಜೆಪಿ ಬಗ್ಗೆಯೇ ಹೆಚ್ಚು ಭಯ
ಕಾಂಗ್ರೆಸ್‌ಗೆ ಒಂದು ರೀತಿಯಲ್ಲಿ ದೇಶಾದ್ಯಂತ ಆತಂಕ ಪರ್ವ, ಬೆಳಗಾದರೆ ಬಿಜೆಪಿಗೆ ಹೋಗೋರು ಯಾರೋ ಎಂದು ನೋಡುವ ಸ್ಥಿತಿ. ಒಂದು ರೀತಿಯಲ್ಲಿ 2015ರಲ್ಲೇ ಇದು ಆರಂಭಗೊಂಡಿತಾದರೂ ಇತ್ತೀಚೆಗೆ ಈ ಮೇನಿಯಾ ಹೆಚ್ಚಾಗಿದೆ. ನಜ್ಮಾ ಹೆಫ್ತುಲ್ಲಾ, ಜಗದಂಬಿಕಾ ಪಾಲ್, ರೀತಾ ಬಹುಗುಣ ಜೋಷಿ, ದಗ್ಗುಬಾಟಿ ಪುರಂದೇಶ್ವರಿ ಹೀಗೆ ಸಾಲು ಸಾಲು ನಾಯಕರು ಕಮಲದತ್ತ ಚಿತ್ತ ಹರಿಸಿದರು. ರಾಜ್ಯದ ಮಟ್ಟಿಗೆ ಹೇಳುವುದಾದರೆ ಎಸ್.ಎಂ.ಕೃಷ್ಣ ಅವರನ್ನು ಕಾಂಗ್ರೆಸ್ ಪಕ್ಷ ಮನೆ ಅಳಿಯನಂತೆ ನೋಡಿಕೊಂಡಿತ್ತು. ಜೀವನದ ಕೊನೇ ಘಟ್ಟದಲ್ಲಿ ಅವರೂ ಕಮಲದ ತೆಕ್ಕೆಗೆ ಬಂದಿದ್ದಾರೆ. ಅಧಿಕಾರದ “ವ್ಯಾಮೋಹ’ದ ಮುಂದೆ ಸಿದ್ಧಾಂತ, ಮೌಲ್ಯ, ಬದ್ಧತೆ, ವ್ಯಕ್ತಿತ್ವ ಎಂಬುದು ಗೌಣ ಅಥವಾ ಸವಕಲು.
ಉತ್ತರಪ್ರದೇಶ ಚುನಾವಣೆ ಫಲಿತಾಂಶ ಹೊರಬಿದ್ದ ನಂತರ ಮುಂದಿನ 2 ವರ್ಷಗಳಲ್ಲಿ ವಿಧಾನಸಭೆ ಚುನಾವಣೆ ಎದುರಾಗುವ ರಾಜ್ಯಗಳಲ್ಲಿ ಕಾಂಗ್ರೆಸ್ ಹಾಗೂ ಅಲ್ಲಿನ ಪ್ರಾದೇಶಿಕ ಪಕ್ಷಗಳಲ್ಲಿ ಚಿಂತೆ, ಆತಂಕ, ನಡುಕ ಎಲ್ಲವೂ ಒಮ್ಮೆಲೆ ಆರಂಭಗೊಂಡಿದೆ.
ಈ ವರ್ಷಾಂತ್ಯಕ್ಕೆ ಗುಜರಾತ್, 2018ರಲ್ಲಿ ಕರ್ನಾಟಕ, ಮಧ್ಯಪ್ರದೇಶ, ರಾಜಸ್ಥಾನ, 2019ರಲ್ಲಿ ಆಂಧ್ರಪ್ರದೇಶ-ತೆಲಂಗಾಣ ವಿಧಾನಸಭೆ ಚುನಾವಣೆ ಎದುರಿಸಲಿವೆ. ಉತ್ತರಪ್ರದೇಶದಲ್ಲಿ ಪ್ರಧಾನಿ ನರೇಂದ್ರ ಮೋದಿ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಯಶಸ್ವಿ ತಂತ್ರಗಾರಿಕೆ ಇತರೆಡೆಯೂ ವಿಸ್ತರಿಸಬಹುದೇ? ಎಂಬುದು ಇದೀಗ ರಾಜಕೀಯ ವಲಯಗಳಲ್ಲಿನ ಬಹುಚರ್ಚಿತ ವಿಷಯ.
ಉತ್ತರಪ್ರದೇಶವನ್ನೇ ಬುಟ್ಟಿಗೆ ಹಾಕಿಕೊಂಡ ಬಿಜೆಪಿಗೆ ಗುಜರಾತ್, ಮಧ್ಯಪ್ರದೇಶ, ರಾಜಸ್ಥಾನದ ಬಗ್ಗೆ ದೊಡ್ಡ ಮಟ್ಟದ ಚಿಂತೆಯೇನೂ ಇಲ್ಲ. ಆದರೆ, ಕರ್ನಾಟಕದಲ್ಲಿ ಮತ್ತೆ ಅಧಿಕಾರ ಹಿಡಿಯುವುದು ಬಿಜೆಪಿಯ ತತ್‌ಕ್ಷಣದ ಆದ್ಯತೆ. ಹೀಗಾಗಿಯೇ “ಟಾರ್ಗೆಟ್ ಕರ್ನಾಟಕ’ ಆಪರೇಷನ್ ಸದ್ದಿಲ್ಲದೆ ಪ್ರಾರಂಭಿಸಿದ್ದು ಅದರ ಪೂರ್ವಭಾವಿ ಕ್ರಿಯೆಯೇ ಶ್ರೀನಿವಾಸಪ್ರಸಾದ್, ಎಸ್.ಎಂ.ಕೃಷ್ಣ, ಜಯಪ್ರಕಾಶ್ ಹೆಗ್ಡೆ, ಕುಮಾರ್ ಬಂಗಾರಪ್ಪ ಸೇರಿ ಬರುವವರಿಗೆಲ್ಲಾ ರತ್ನಗಂಬಳಿ ಹಾಸಿ ಸ್ವಾಗತ ಕೋರುತ್ತಿರುವುದು. ಹಾಗೆಂದ ಮಾತ್ರಕ್ಕೆ ರಾಜ್ಯದಲ್ಲಿ ಬಿಜೆಪಿ ಭದ್ರವಾಗಿಲ್ಲ ಎಂದಲ್ಲ. ಇನ್ನೊಂದು ವರ್ಷದಲ್ಲಿ ರಾಜ್ಯದಲ್ಲಿ ಚುನಾವಣೆ ಇರುವುದರಿಂದ ಈಗಾಗಲೇ ರಾಜಕೀಯ ಪಕ್ಷಗಳ ಹಾಗೂ ಮತದಾರರ “ಮೂಡ್’ ಸಹ ಚುನಾವಣೆಯತ್ತಲೇ ಇದೆ. ಹೀಗಾಗಿ, ಟ್ರೆಂಡ್ ಸೆಟ್ ಮಾಡುವ ತಂತ್ರಗಾರಿಕೆ ಫಲವಾಗಿ ಬೇರೆ ಬೇರೆ ಪಕ್ಷಗಳಲ್ಲಿನ ರಾಜ್ಯ ಮಟ್ಟದ ಹಾಗೂ ಸ್ಥಳೀಯವಾಗಿ ಪ್ರಾಬಲ್ಯ ಹೊಂದಿರುವ ನಾಯಕರನ್ನು ಸೆಳೆಯುತ್ತಿದೆ.
ಈ ಮೂಲಕ, ಎಲ್ಲ ನಾಯಕರು ಬಿಜೆಪಿಗೆ ಹೋಗುತ್ತಿದ್ದಾರೆ, ಮುಂದೆ ಬಿಜೆಪಿಯೇ ರಾಜ್ಯದಲ್ಲಿ ಅಧಿಕಾರಕ್ಕೆ ಬರಬಹುದಾ ಎಂಬ “ಹುಯಿಲೆಬ್ಬಿಸುವುದು’ ಇದರ ಮೂಲ ಉದ್ದೇಶ. ಈ ಬಾರಿ ಬಿಜೆಪಿ ಸಾಕಷ್ಟು ಸಿದ್ಧತೆ ಮಾಡಿಕೊಂಡಿದೆ. ಅಮಿತ್ ಶಾ ತಂಡ ಜೂನ್ ವೇಳೆಗೆ ರಾಜ್ಯದಲ್ಲಿ ಠಿಕಾಣಿ ಹೂಡುವುದು ನಿಶ್ಚಿತ. ಪ್ರಧಾನಿ ಮೋದಿ ತೆರೆಯ ಹಿಂದಿದ್ದೇ ತಮ್ಮ ದಾಳ ಉರುಳಿಸುವುದು ಖಚಿತ.
ಕರ್ನಾಟಕ ಹಾಗೂ ಉ.ಪ್ರದೇಶ ರಾಜಕಾರಣಕ್ಕೆ ವ್ಯತ್ಯಾಸ ಇರಬಹುದು. ಆದರೆ, ಅಲೆ ತಾತ್ಕಾಲಿಕ ಎಂಬುದು ನಿಜವಾದರೂ ಅದರ ಪ್ರಭಾವ ಜೋರಾಗಿಯೇ ಇರುತ್ತದೆ. ಮೇಲ್ನೋಟಕ್ಕೆ ಉತ್ತರಪ್ರದೇಶದ ಫಲಿತಾಂಶ ರಾಜ್ಯದ ಮೇಲೆ ಏನೂ ಪರಿಣಾಮ ಬೀರುವುದಿಲ್ಲ ಎಂದು ಕಾಂಗ್ರೆಸ್ ಮತ್ತು ಜೆಡಿಎಸ್ ನಾಯಕರು ಹೇಳುತ್ತಾರಾದರೂ ಎರಡೂ ಪಕ್ಷಗಳು “ಶೇಕ್’ ಆಗಿರುವುದಂತೂ ನಿಜ. ಹೀಗಾಗಿ, ಬಿಜೆಪಿಯ ವೇಗಕ್ಕೆ ಬ್ರೇಕ್ ಹಾಕುವುದು ಈ ಪಕ್ಷಗಳಿಗೆ ಅನಿವಾರ್ಯವಾಗಿದೆ. ಉ. ಪ್ರದೇಶ ಚುನಾವಣೆ ಫಲಿತಾಂಶಕ್ಕೆ ಮುನ್ನ ಅಲ್ಲಿನ ಮಾದರಿಯಲ್ಲಿ ರಾಜ್ಯದಲ್ಲೂ ಮಹಾಮೈತ್ರಿ ಮಾಡಿಕೊಂಡರೆ ಹೇಗೆ ಎಂಬ ಚಿಂತನೆ ಇತ್ತು. ಒಂದೊಮ್ಮೆ ಅದಕ್ಕೆ ಪೂರಕವಾಗಿ ಅಲ್ಲಿ ಕಾಂಗ್ರೆಸ್-ಸಮಾಜವಾದಿ ಪಕ್ಷ ಮೈತ್ರಿಗೆ ಬೆಂಬಲ ದೊರೆತಿದ್ದರೆ ಇಲ್ಲೂ ರಾಜಕೀಯ ಚಿತ್ರಣ ಬದಲಾಗುತ್ತಿತ್ತು. ಆದರೆ, ಅಲ್ಲಿ ಆಡಳಿತ ವಿರೋಧಿ ಅಲೆಯಲ್ಲಿ ಸಮಾಜವಾದಿ ಪಕ್ಷ ಹಾಗೂ ಕಾಂಗ್ರೆಸ್ ಕೊಚ್ಚಿ ಹೋಗಿದ್ದರಿಂದ ಜೆಡಿಎಸ್ ಸದ್ಯಕ್ಕೆ ಅಂತಹ ಸಾಹಸ ಬೇಡ ಎಂಬ ನಿರ್ಧಾರಕ್ಕೆ ಬಂದಂತಿದೆ. ಆದರೂ ಬಿಜೆಪಿಯನ್ನು ಕಟ್ಟಿಹಾಕುವ ವಿಚಾರದಲ್ಲಿ ದೇವೇಗೌಡರು ತೀರಾ ತಲೆಕೆಡಿಸಿಕೊಂಡರೆ ಚುನಾವಣೆ ಪೂರ್ವ ಮೈತ್ರಿಯಲ್ಲದಿದ್ದರೂ ಕೆಲ ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸುವ ವಿಚಾರದಲ್ಲಿ ಕಾಂಗ್ರೆಸ್ ಜತೆ “ಹೊಂದಾಣಿಕೆ’ಗೆ ಸೀಮಿತವಾಗಬಹುದಷ್ಟೆ. ಡಿ.ಕೆ.ಶಿವಕುಮಾರ್ ಕೆಪಿಸಿಸಿ ಅಧ್ಯಕ್ಷ ಸ್ಥಾನ ಅಲಂಕರಿಸಿದರೆ ಆ ಸಾಧ್ಯತೆಯೂ ಅನುಮಾನ.
ರಾಜ್ಯದಲ್ಲಿ ಪ್ರಸ್ತುತ ರಾಜಕಾರಣದ ಸ್ಥಿತಿಗತಿ ನೋಡಿದರೆ ಬಿಜೆಪಿಗೆ ಅತಿಯಾದ ಆತ್ಮವಿಶ್ವಾಸ, ಜೆಡಿಎಸ್‌ಗೆ ವಿಶ್ವಾಸ, ಕಾಂಗ್ರೆಸ್‌ನಲ್ಲಿ ನಿರುತ್ಸಾಹ ಎಂಬ ಸ್ಥಿತಿಯಿದೆ. ಬಿಜೆಪಿಯು ಲಿಂಗಾಯಿತ ಮತ್ತು ಎಲ್ಲ ಜಾತಿಯ ಯುವ ಸಮೂಹವನ್ನು ಸೆಳೆಯುತ್ತಿದೆ. ಜೆಡಿಎಸ್ ಒಕ್ಕಲಿಗ ಸಮುದಾಯದ ಸಂಪೂರ್ಣ ಮತಬುಟ್ಟಿಗೆ ಕೈ ಹಾಕುವುದರ ಜತೆಗೆ ಅಹಿಂದದತ್ತ ಆಸೆಗಣ್ಣಿನಿಂದ ನೋಡುತ್ತಿದೆ. ಕಾಂಗ್ರೆಸ್ ತಮ್ಮ ಪಾರಂಪರಿಕ ಅಹಿಂದ ಮತಗಳತ್ತಲೇ ಹೆಚ್ಚು ಗಮನ ನೀಡಿದ್ದು ಜತೆಗೆ ಆಯಾ ಭಾಗಗಳಲ್ಲಿ ಪ್ರಭಾವ ಹೊಂದಿರುವ ಹಾಗೂ ಕಾಂಗ್ರೆಸ್ ಟಿಕೆಟ್ ಪಡೆದುಕೊಳ್ಳುವ ಲಿಂಗಾಯಿತ, ಒಕ್ಕಲಿಗ, ಬ್ರಾಹ್ಮಣ ಸಮುದಾಯದ ನಾಯಕರು ಸಹಜವಾಗಿ ಪಕ್ಷದ ಓಟ್‌ಬ್ಯಾಂಕ್ ಜತೆಗೆ ಸ್ವ ಸಾಮರ್ಥ್ಯದಿಂದ ಗೆದ್ದು ಬರಲಿದ್ದಾರೆ ಎಂಬ ಲೆಕ್ಕಾಚಾರದಲ್ಲೇ ಇದೆ. ಕಾಂಗ್ರೆಸ್ ಪಕ್ಷ ಸಹ ಉತ್ತರಪ್ರದೇಶ ಚುನಾವಣೆ ಫಲಿತಾಂಶ ನಂತರ ಭಯಗೊಂಡಿದೆಯಾದರೂ ಯಾವ ರೀತಿಯ ತಯಾರಿ ಮಾಡಿಕೊಳ್ಳಬೇಕು ಎಂಬ ಪೂರ್ವತಯಾರಿಯೂ ನಡೆದಿಲ್ಲ. ಕಾಂಗ್ರೆಸ್ಸಿಗರಿಗೆ ತಮ್ಮ ಸಾಮರ್ಥ್ಯದ ಬಗ್ಗೆ ಅಳುಕು ಶುರುವಾದಂತಿದೆ. ಬಿಜೆಪಿಯ ಅಲೆಯ ನಡುವೆಯೂ ಅಹಿಂದ ವರ್ಗ ತಮ್ಮ ಜತೆ ನಿಂತೇ ನಿಲ್ಲುತ್ತದೆ. ಐದು ವರ್ಷಗಳ ಸರ್ಕಾರದ ಸಾಧನೆಯ ಅಭಿವೃದ್ಧಿ “ಅಂಡರ್‌ಕರೆಂಟ್’ ರೀತಿಯಲ್ಲಿ ಕೈ ಹಿಡಿದೇ ತೀರುತ್ತದೆ ಎಂಬ ವಿಶ್ವಾಸ ಇರುವುದು ಸಿದ್ದರಾಮಯ್ಯ ಅವರಿಗೊಬ್ಬರಿಗೆ ಮಾತ್ರ. ಆದರೆ, ಜನಸಾಮಾನ್ಯರಲ್ಲಿ ಕಾಂಗ್ರೆಸ್ ಸರ್ಕಾರ ಮತ್ತು ಆಡಳಿತದ ಬಗ್ಗೆ ಯಾವ ಅಭಿಪ್ರಾಯವಿದೆ ಎಂಬುದನ್ನು ತಿಳಿದುಕೊಳ್ಳುವ ಪ್ರಯತ್ನ ಆಗಿಲ್ಲ.
ಒಂದು ವರ್ಷ ಚುನಾವಣೆ ಇರುವಾಗಲೂ ಮತದಾರರ ಪಲ್ಸ್ ಅರಿತು ಆ ನಿಟ್ಟಿನಲ್ಲಿ ರಣತಂತ್ರ ರೂಪಿಸುವ ಕೆಲಸವೂ ಆಗಿಲ್ಲ. ಕಾಂಗ್ರೆಸ್ ಐದು ವರ್ಷ ಅಧಿಕಾರ ನಡೆಸುವ ಅವಕಾಶ ಸಿಕ್ಕಾಗಲೂ ದಲಿತರೊಬ್ಬರಿಗೆ ಸಿಎಂ ಪಟ್ಟ ಕೊಡುವ ಸಾಧ್ಯತೆ ಇದ್ದರೂ ಕೊಡಲಿಲ್ಲ ಎಂಬ ಕೋಪ ಆ ಸಮುದಾಯಕ್ಕೆ ಇದ್ದೇ ಇದೆ. ಆ ಕೋಪ ತಣಿಸುವುದು ಇಲ್ಲಿ ಅತ್ಯಗತ್ಯ.
ರಾಜ್ಯದ ಮಟ್ಟಿಗೆ ಸೋನಿಯಾ, ರಾಹುಲ್, ಪ್ರಿಯಾಂಕಾಗಿಂತ “ಕಾಂಗ್ರೆಸ್’ ಹೆಸರು ಮತ್ತು ರಾಜ್ಯ ನಾಯಕರ ಸ್ವಸಾಮರ್ಥ್ಯ ಸಾಕು. ಪಕ್ಷಾಂತರದ ಹೊರತಾಗಿಯೂ ಕಾಂಗ್ರೆಸ್‌ನಲ್ಲಿ ಪ್ರಭಾವಿ ನಾಯಕರ ಕೊರತೆಯಿಲ್ಲ. ಇವರೆಲ್ಲ ಒಗ್ಗಟ್ಟಾದರೆ ಕಾರ್ಯಕರ್ತರು, ಮುಖಂಡರ ದಂಡು ಎದ್ದು ನಿಲ್ಲುತ್ತದೆ. ಮಲಗಿರುವವರು ಎದ್ದು ನಡೆಯುವ ಅಥವಾ ಬಿರುಸಾಗಿ ಹೆಜ್ಜೆ ಹಾಕುವ ಹಂತಕ್ಕಾದರೂ ಬರಬಹುದು. ಏಕೆಂದರೆ ರಾಜ್ಯದಲ್ಲಿ ಇನ್ನೂ ಕಾಂಗ್ರೆಸ್ “ಬೇಸ್’ ಪೂರ್ಣವಾಗಿ ನೆಲಕಚ್ಚಿಲ್ಲ. ಸರ್ಕಾರದ ಸಾಧನೆ ಆಧಾರದ ಮೇಲೆ ಜನರ ಮನಸ್ಸು ಗೆಲ್ಲುವ, ತಮ್ಮ ಶಕ್ತಿಯನ್ನು ಪಕ್ಷಕ್ಕೆ ಧಾರೆ ಎರೆದರೆ ಕಾಂಗ್ರೆಸ್ ತನ್ನ ಅಸ್ತಿತ್ವ ಉಳಿಸಿಕೊಳ್ಳಬಹುದು. ಆದರೆ, ಅಂತಹ ಲಕ್ಷಣಗಳೇ ಕಂಡುಬರುತ್ತಿಲ್ಲ.
ಇನ್ನು, ಜೆಡಿಎಸ್ ವಿಚಾರದಲ್ಲಿ ಹೇಳಬಹುದಾದರೆ
ಆ ಪಕ್ಷಕ್ಕೆ ಕಾಂಗ್ರೆಸ್‌ಗಿಂತ ಬಿಜೆಪಿ ಬಗ್ಗೆಯೇ ಹೆಚ್ಚು ಭಯ. ಯಾಕೆಂದರೆ ಸದ್ಯಕ್ಕೆ ಯಾರು ಏನೇ ಹೇಳಿದರೂ ಲಿಂಗಾಯಿತ ಸಮುದಾಯದ ಏಕಮೇವ ನಾಯಕ ಬಿ.ಎಸ್.ಯಡಿಯೂರಪ್ಪ ಬಿಜೆಪಿಯಲ್ಲಿರುವುದರಿಂದ ಅವರೇ ಮುಂದಿನ ಸಿಎಂ ಎಂದು ಘೋಷಣೆಯಾಗಿರುವುದರಿಂದ ಸಹಜವಾಗಿ ಆ ಸಮುದಾಯದ ಸಂಪೂರ್ಣ ಬೆಂಬಲ ದೊರೆಯಬಹುದು. ಜತೆಗೆ ಯುವ ಸಮೂಹವನ್ನು ಹಿಂದುತ್ವ ಅಜೆಂಡಾದಡಿ ಸೆಳೆದು, ಪ್ರಜ್ಞಾವಂತ ಮತದಾರರರನ್ನು ಮೋದಿ ತಮ್ಮ ಮಾತಿನಿಂದ ಮೋಡಿ ಮಾಡಿದರೆ, ಕೇಂದ್ರದಲ್ಲಿ ಅಧಿಕಾರದಲ್ಲಿರುವುದರಿಂದ ಸಂಪನ್ಮೂಲವೂ ಹರಿದು ಬಂದರೆ ಬಿಜೆಪಿಗೆ ಅನುಕೂಲವಾಗಬಹುದು ಎಂಬ ಆತಂಕ. ಬಿಜೆಪಿ ಸಂಖ್ಯೆ 100 ದಾಟಿದರೆ ಮತ್ತೈದು ವರ್ಷ ವನವಾಸದ ಚಿಂತೆ. ಪಕ್ಷ ಅಧಿಕಾರ ಕಂಡು ಈಗಾಗಲೇ ಹತ್ತು ವರ್ಷ ಆಗಿದೆ. ಮುಂದಿನ ಬಾರಿಯೂ ಅಧಿಕಾರ ಇಲ್ಲದಿದ್ದರೆ ಪಕ್ಷದ ಭವಿಷ್ಯ ಮಸುಕಾಗಬಹುದು. ಹೀಗಾಗಿ, ಬಿಜೆಪಿಯ ಗೆಲುವಿನ ಓಟಕ್ಕೆ ಬ್ರೇಕ್ ಹಾಕುವುದು ಜೆಡಿಎಸ್‌ನ ಸದ್ಯದ ಅನಿವಾರ್ಯತೆ.
ಜೆಡಿಎಸ್ ಇದೀಗ ಕಾಂಗ್ರೆಸ್‌ಗಿಂತ ಹೆಚ್ಚಾಗಿ ಬಿಜೆಪಿ ವೇಗ ನಿಯಂತ್ರಿಸುವ ಕೆಲಸ ಮಾಡುವತ್ತ ಚಿತ್ತ ಹರಿಸಿದೆ. ಕಾಂಗ್ರೆಸ್ ಬಗ್ಗೆ ಜೆಡಿಎಸ್ ತಲೆಕೆಡಿಸಿಕೊಳ್ಳುತ್ತಿಲ್ಲ ಎಂದಲ್ಲ. ಕಾಂಗ್ರೆಸ್ ಐದು ವರ್ಷ ಅಧಿಕಾರ ನಡೆಸಿರುವುದರಿಂದ ಸಹಜವಾಗಿ ಆಡಳಿತ ವಿರೋಧಿ ಅಲೆ ಇರಲಿದೆ. ಆ ಪಕ್ಷದಲ್ಲಿನ ಹಿರಿಯ ನಾಯಕರೇ ಬಹಿರಂಗವಾಗಿ ಪಕ್ಷ ಮತ್ತು ನಾಯಕತ್ವ ವಿರುದ್ಧ ಮಾತನಾಡುತ್ತಿರುವುದರಿಂದ ಸಹಜವಾಗಿ ಆ ಪಕ್ಷದ ಮೇಲೆ ಪರಿಣಾಮ ಬೀರಲಿದೆ. ಹೀಗಾಗಿ ತಮಗೆ ಹೆಚ್ಚು ಹೊಡೆತ ಬೀಳುವುದು ಬಿಜೆಪಿಯಿಂದ, ಅದರ ವಿರುದ್ಧ ನಮ್ಮ ಮುಖ್ಯ ಹೋರಾಟ ಮಾಡೋಣ ಎಂಬ ತೀರ್ಮಾನಕ್ಕೆ ಬಂದಂತಿದೆ.
ಆದರೆ, ಜೆಡಿಎಸ್‌ಗೆ ಮೂಲ ಕೊರತೆ ಪ್ರಭಾವಿ ನಾಯಕರದ್ದು ಮತ್ತು ಸಂಪನ್ಮೂಲದ್ದು. ಕಾಂಗ್ರೆಸ್ ಮತ್ತು ಬಿಜೆಪಿಯಲ್ಲಿರುವ ಶಕ್ತಿಶಾಲಿ ನಾಯಕರೆಲ್ಲರೂ ಒಂದು ಕಾಲದಲ್ಲಿ ಜನತಾ ಪರಿವಾರದವರೇ. ಆದರೆ, ಈಗ ಬಿಜೆಪಿ ಅಥವಾ ಕಾಂಗ್ರೆಸ್‌ನಲ್ಲಿರುವಷ್ಟು ಪ್ರಭಾವಿ ನಾಯಕರ ದಂಡು ಜೆಡಿಎಸ್‌ನಲ್ಲಿಲ್ಲ. ಆರ್ಥಿಕವಾಗಿ ನೆರವು ಕೊಡುವವರಲ್ಲೂ ಇಲ್ಲ. ಜತೆಗೆ ಎಷ್ಟೇ ಹೆಣಗಾಡಿದರೂ ಜೆಡಿಎಸ್ ಹಳೇ ಮೈಸೂರಿಗೆ ಸೀಮಿತ, ಒಕ್ಕಲಿಗರ ಪಕ್ಷ ಎಂಬ ಹಣೆಪಟ್ಟಿ ಕಳಚಿಕೊಳ್ಳಲಾಗುತ್ತಿಲ್ಲ. ಎಚ್.ಡಿ.ದೇವೇಗೌಡ, ಕುಮಾರಸ್ವಾಮಿ ಹಾಗೂ ಸ್ಥಳೀಯ ಮಟ್ಟದ ನಾಯಕರ ವರ್ಚಸ್ಸೇ ಶ್ರೀರಕ್ಷೆಯಾಗಬೇಕು. ಜೆಡಿಎಸ್‌ನದು ಏಕಾಂಗಿ ಹೋರಾಟ ಸ್ಥಿತಿ.
ಒಟ್ಟಾರೆ ರಾಜ್ಯದ ರಾಜಕಾರಣ ಅವಲೋಕಿಸುವುದಾದರೆ ಇವತ್ತಿನ ಸಂದರ್ಭದಲ್ಲಿ ಕಷ್ಟದ ಸ್ಥಿತಿಯಲ್ಲಿರುವುದು ಕಾಂಗ್ರೆಸ್. ಈ ನಾಲ್ಕು ವರ್ಷಗಳಲ್ಲಿ ಕಾಂಗ್ರೆಸ್ ಸರ್ಕಾರ ತಾನು ಮಾಡಿದ ಸಾಧನೆ “ಶೋಕೇಸಿಂಗ್’ ಮಾಡಿಕೊಳ್ಳಲೇ ಇಲ್ಲ. ಸರ್ಕಾರಕ್ಕೂ ಕೆಪಿಸಿಸಿಗೂ ಸಮನ್ವಯತೇ ಇರಲಿಲ್ಲ. ಇದೀಗ ಮೈ ಕೊಡವಿಕೊಂಡು ಬಿಜೆಪಿ ಮತ್ತು ಜೆಡಿಎಸ್ ವಿರುದ್ಧ ಹೋರಾಟ ನಡೆಸಬೇಕಿದೆ. ಇದು ಎಷ್ಟರ ಮಟ್ಟಿಗೆ ಸಾಧ್ಯ/ ಫಲ ಕೊಡಬಹುದೆಂದು ಕಾದು ನೋಡಬೇಕಷ್ಟೆ.
– ಎಸ್.ಲಕ್ಷ್ಮಿನಾರಾಯಣ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
ODI; ವೆಸ್ಟ್ ಇಂಡೀಸ್ ವಿರುದ್ಧ ಭಾರತದ ವನಿತೆಯರಿಗೆ 211 ರನ್ ಜಯ:ಸ್ಮೃತಿ ನರ್ವಸ್ 90
Hunsur: ವನ್ಯಪ್ರಾಣಿ ದಾಳಿಗೆ ಸುಮಾರು 70 ಸಾವಿರ ಬೆಲೆಬಾಳುವ ಎತ್ತು ಬಲಿ
Gundlupete ಬಂಡೀಪುರ: ಗಂಡಾನೆ ಕಳೇಬರ ಪತ್ತೆ
Highest honour: ಪ್ರಧಾನಿ ನರೇಂದ್ರ ಮೋದಿಗೆ ಕುವೈಟ್‌ನ ಅತ್ಯುನ್ನತ ಗೌರವ ಪ್ರದಾನ
Delhi; ಅಕ್ರಮ ಬಾಂಗ್ಲಾ ವಲಸಿಗರ ವಿರುದ್ಧ ಕಾರ್ಯಾಚರಣೆ: 175 ಮಂದಿ ಪತ್ತೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.