ಇನ್ನಷ್ಟು ಬಲಗೊಳ್ಳಬೇಕು ಪಕ್ಷಾಂತರ ನಿಷೇಧ ಕಾನೂನು


Team Udayavani, Jul 30, 2019, 5:08 AM IST

a-33

ಪ್ರಸಕ್ತ ರಾಷ್ಟ್ರ ಹಾಗೂ ರಾಜ್ಯ ರಾಜಕೀಯದಲ್ಲಿ ನಡೆಯುತ್ತಿರುವ ಬೆಳವಣಿಗೆಗಳು ಹಾಗೂ ಆ ಬಗ್ಗೆ ಸುಪ್ರೀಂಕೋರ್ಟ್‌ ಸೇರಿದಂತೆ ಸಾಂವಿಧಾನಿಕ ಸಂಸ್ಥೆಗಳ ಸೂಚನೆಗಳು, ನಿರ್ದೇಶನಗಳು, ಆದೇಶಗಳನ್ನು ಸೂಕ್ಷ್ಮವಾಗಿ ಗಮನಿಸಿದಾಗ ಚುನಾವಣೆ ನಡೆಯುವ ರೀತಿಗಳು, ಜನಪ್ರತಿನಿಧಿಗಳ ಹಕ್ಕು ಹಾಗೂ ಅಧಿಕಾರ ದುರ್ಬಳಕೆ ಜನಪ್ರತಿನಿಧಿಗಳ ನಿಯಂತ್ರಣಕ್ಕೆ ಕಾನೂನಿನಲ್ಲಿರುವ ಲೋಪಗಳನ್ನು ನೋಡಿದಾಗ ರಾಜಕೀಯಕ್ಕೆ ಸಂಬಂಧಿಸಿದಂತೆ ಸಂವಿಧಾನದಲ್ಲಿನ ಕಾನೂನುಗಳು ದುರ್ಬಲವಾಗಿವೆ ಎನ್ನುವುದು ಎಂತಹ ಸಾಮಾನ್ಯನಿಗೂ ಅನಿಸುತ್ತದೆ.

ಸದ್ಯದ ಮಟ್ಟಿಗೆ ರಾಷ್ಟ್ರ ರಾಜಕಾರಣದಲ್ಲಿ ಪಕ್ಷಾಂತರ ಪರ್ವ ನಿರಂತರವಾಗಿ ನಡೆಯುತ್ತಿದೆ. ಅದಕ್ಕೆ ಪ್ರಮುಖ ರಾಷ್ಟ್ರೀಯ ಪಕ್ಷಗಳೇ ಪ್ರೇರಣೆಯಾಗಿ ನಿಂತಿರುವುದು ಪ್ರಜಾಪ್ರಭುತ್ವ ವ್ಯವಸ್ಥೆ ದೌರ್ಬಲ್ಯ ಎಂದೇ ಭಾವಿಸಬೇಕಾಗುತ್ತದೆ. ಸದ್ಯದ ಪರಿಸ್ಥಿತಿಯಲ್ಲಿ ಚುನಾವಣೆ ರಾಜಕಾರಣಕ್ಕೆ ಸಂಬಂಧಿಸಿದಂತೆ ಇರುವ ಕಾನೂನುಗಳು ಸಾಮಾನ್ಯ ಜನರ ಹಿತ ಕಾಯುವುದಕ್ಕಿಂತ ಅಧಿಕಾರಸ್ಥರ ಅನುಕೂಲಕ್ಕೆ ಹೆಚ್ಚು ಉಪಯುಕ್ತವಾಗುವ ರೀತಿಯಲ್ಲಿಯೇ ಬಳಕೆಯಾಗುತ್ತಿವೆ.

ಪಶ್ಚಿಮ ಬಂಗಾಳ ಹಾಗೂ ಗೋವಾ ಶಾಸಕರ ಪಕ್ಷಾಂತರ, ಆಂಧ್ರಪ್ರದೇಶದ ತೆಲಗುದೇಶಂ ಪಕ್ಷದ ರಾಜ್ಯಸಭಾ ಸದಸ್ಯರ ಪಕ್ಷಾಂತರ ಪ್ರಕ್ರಿಯೆ, ಯಾವುದೇ ಕಾನೂನು ತೊಡಕಿಲ್ಲದೆ ಆಯ್ಕೆಯಾದ ಪಕ್ಷದಿಂದ ಇನ್ನೊಂದು ಪಕ್ಷಕ್ಕೆ ಪಕ್ಷಾಂತರವಾಗಲು ಮುಕ್ತ ಅವಕಾಶ ನೀಡಿರುವುದು ಹಾಲಿ ಪಕ್ಷಾಂತರ ನಿಷೇಧ ಕಾನೂನಿನ ದೌರ್ಬಲ್ಯವೇ ಸರಿ.

ಇನ್ನು ಕರ್ನಾಟಕದ 16 ಜನ ಶಾಸಕರ ರಾಜೀನಾಮೆ ಪರ್ವವಂತೂ ಅಸ್ತಿತ್ವದಲ್ಲಿರುವ ಒಂದು ಸರ್ಕಾರವನ್ನೇ ಪತನಗೊಳಿಸಿದ್ದು, ರಾಜೀನಾಮೆ ಸಲ್ಲಿಸಿ ತಕ್ಷಣವೇ ಅಂಗೀಕರಿಸಲು ಸ್ಪೀಕರ್‌ಗೆ ಸೂಚಿಸುವಂತೆ ಶಾಸಕರು ಸುಪ್ರೀಂಕೋರ್ಟ್‌ ಮೆಟ್ಟಿಲೇರಿದ್ದು, ವಿಪ್‌ ವಿಷಯದಲ್ಲಿ ಸುಪ್ರೀಂ ಕೋರ್ಟ್‌ ಒಂದು ರಾಷ್ಟ್ರೀಯ ಪಕ್ಷಕ್ಕೆ ಇರುವ ಸಾಂವಿಧಾನಿಕ ಅಧಿಕಾರವನ್ನೇ ಕತ್ತಲಲ್ಲಿಡುವಂತಹ ತೀರ್ಪು ನೀಡುವುದು, ಮಧ್ಯಾಹ್ನದೊಳಗೆ ವಿಶ್ವಾಸ ಮತ ಸಾಬೀತು ಪಡೆಸುವಂತೆ ರಾಜ್ಯಪಾಲರು ಮುಖ್ಯಮಂತ್ರಿಗೆ ನಿರ್ದೇಶನ ನೀಡುವುದು, ರಾಜೀನಾಮೆ ಸಲ್ಲಿಸಿರುವ ಶಾಸಕರನ್ನು ಅನರ್ಹಗೊಳಿಸುವ ಸಂಬಂಧ ಸ್ಪೀಕರ್‌ ತಮಗೆ ಸಮಯ ಸಿಕ್ಕಾಗ ತೀರ್ಪು ಪ್ರಕಟಿಸಲು ಅವಕಾಶ ಕಲ್ಪಿಸಿರುವುದು, ಇದೆಲ್ಲವೂ, ಅಧಿಕಾರದಲ್ಲಿರುವವರ ವಿವೇಚನೆಗೆ ತಕ್ಕಂತೆ ಆದೇಶಗಳನ್ನು ಮಾಡಲು ಸಂವಿಧಾನದಲ್ಲಿ ಮುಕ್ತ ಅವಕಾಶ ಕಲ್ಪಿಸಿದಂತಾಗಿದೆ.

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಯಾವುದೇ ತೀರ್ಪು ಪ್ರಕಟಗೊಂಡರೂ, ಅದರ ಹಿಂದೆ ಹಿತಾಸಕ್ತಿ ಕೆಲಸ ಮಾಡಿದೆ ಎಂಬ ಭಾವನೆ ಮೂಡುವಂತಾದರೆ, ಆ ಕಾನೂನಿನಲ್ಲಿ ಏನೋ ಲೋಪ ಇದೆ ಎಂದೇ ಅರ್ಥ. ಎಲ್ಲ ಸಂಶಯಗಳನ್ನು ಮೀರಿ, ಯಾವುದೇ ಪರ್ಯಾಯ ಆಲೋಚನೆಗೆ ಅವಕಾಶ ನೀಡದಂತೆ ಹೊರ ಬೀಳುವುದೇ ತೀರ್ಪಾಗಿರಬೇಕು. ಆದರೆ, ಪ್ರಸಕ್ತ ರಾಜಕೀಯ ಬೆಳವಣಿಗೆಗಳಲ್ಲಿ ಸಂವಿಧಾನಿಕ ಸಂಸ್ಥೆಗಳಾದ, ಸುಪ್ರೀಂ ಕೋರ್ಟ್‌, ರಾಜ್ಯಪಾಲರು, ವಿಧಾನಸಭಾಧ್ಯಕ್ಷರ ನಿರ್ದೇಶನಗಳು, ಆದೇಶಗಳ ಬಗ್ಗೆ ಸಾಮಾನ್ಯ ಜನರು ಮುಕ್ತವಾಗಿ ಸಂಶಯ ವ್ಯಕ್ತಪಡಿಸುವಂತಾಗಿದೆ. ಯಾವ ತೀರ್ಪಿನ ಹಿಂದೆ ಯಾವ ಹಿತಾಸಕ್ತಿ ಇದೆ ಎಂದು ಬಹಿರಂಗವಾಗಿಯೇ ಮಾತನಾಡುವಂತ ಪರಿಸ್ಥಿತಿ ನಿರ್ಮಾಣವಾಗಿದೆ.

ರಾಜ್ಯದಲ್ಲಿ ಜೆಡಿಎಸ್‌ ಹಾಗೂ ಕಾಂಗ್ರೆಸ್‌ನ ಹದಿನಾರು ಶಾಸಕರ ರಾಜೀನಾಮೆ ಪ್ರಕರಣ ಹಾಗೂ ಕುಮಾರಸ್ವಾಮಿ ವಿಶ್ವಾಸ ಮತ ಯಾಚನೆ ಸಂದರ್ಭದಲ್ಲಿ ವಿಧಾನಸಭಾಧ್ಯಕ್ಷ ರಮೇಶ್‌ ಕುಮಾರ್‌ ಎಷ್ಟೇ ಪ್ರಾಮಾಣಿಕವಾಗಿ ನಡೆದುಕೊಳ್ಳುವ ಪ್ರಯತ್ನ ನಡೆಸಿದರೂ, ಅವರ ನಡೆಯ ಬಗ್ಗೆ ಬಿಜೆಪಿ ಹಾಗೂ ಸಮಾಜದ ಒಂದು ವರ್ಗ ಸಂಶಯ ದೃಷ್ಟಿಯಿಂದ‌ಲೇ ನೋಡುವಂತಾಯಿತು. ಶಾಸಕರು ರಾಜೀನಾಮೆ ಸಲ್ಲಿಸಿದ ಸಂದರ್ಭದಲ್ಲಿ ಶನಿವಾರ, ಭಾನುವಾರ ರಜೆ ಎನ್ನುವುದನ್ನು ಒತ್ತಿ ಹೇಳಿದ್ದ ಸ್ಪೀಕರ್‌ ಅವರನ್ನು ಅನರ್ಹ ಗೊಳಿಸುವ ತೀರ್ಪು ಭಾನುವಾರವೇ ಪ್ರಕಟಿಸಿರುವುದು. ಅಧಿಕಾರ ಸ್ಥರ ಅನುಕೂಲ ಸಿಂಧು ವ್ಯವಸ್ಥೆಯ ಪ್ರತೀಕದಂತೆ ಕಾಣುತ್ತಿದೆ.

ಸದ್ಯ ರಾಜ್ಯ ಹಾಗೂ ರಾಷ್ಟ್ರ ರಾಜಕಾರಣದಲ್ಲಿ ನಡೆಯುತ್ತಿರುವ ಬೆಳವಣಿಗೆಗಳನ್ನು ಗಮನಸಿದಾಗ ದೇಶದ ಪ್ರಜಾಪ್ರಭುತ್ವ ಆತಂಕದ ಪರಿಸ್ಥಿತಿ ಎದುರಿಸುತ್ತಿದೆ ಎನಿಸುವುದರಲ್ಲಿ ಅನುಮಾನವಿಲ್ಲ. ಸಾಮಾನ್ಯ ಪ್ರಜೆಗಳು ಈಗಿನ ವ್ಯವಸ್ಥೆಯಲ್ಲಿ ಮತ ಹಾಕಿ ನಂತರ ನಡೆಯುವ ರಾಜಕೀಯ ಮೇಲಾಟಗಳನ್ನೆಲ್ಲಾ ಅಸಹಾಯಕರಾಗಿ ನೋಡುವಂತಹ ಪರಿಸ್ಥಿತಿ ಇದೆ. ಅಧಿಕಾರಸ್ಥರ ಅಧಿಕಾರ ದುರ್ಬಳಕೆ ಹಾಗೂ ಪ್ರಜೆಗಳು ಅಹಾಯಕರಾಗುವುದು ಆರೋಗ್ಯವಂತ ಪ್ರಜಾಪ್ರಭುತ್ವದ ಲಕ್ಷಣವಲ್ಲ. ಈ ಬೆಳವಣಿಗೆಗಳು ಪ್ರಜಾಪ್ರಭುತ್ವ ವ್ಯವಸ್ಥೆಯ ದೌರ್ಬಲ್ಯಗಳ ದುರುಪಯೋಗದಂತೆ ಕಾಣಿಸುತ್ತಿವೆ.

ಈಗಿನ ಪರಿಸ್ಥಿತಿಯನ್ನು ಗಮನಿಸಿದಾಗ ಕೇವಲ ಚುನಾವಣಾ ಸುಧಾರಣೆಗಳನ್ನು ಮಾಡುವುದರಿಂದ ವ್ಯವಸ್ಥೆ ಸರಿದಾರಿಗೆ ಬರುತ್ತದೆ ಎನ್ನುವ ನಂಬಿಕೆ ಉಳಿದಿಲ್ಲ. ಏಕೆಂದರೆ, ಕಾನೂನು ರೂಪಿಸುವವರಿಗಿಂತ ಕಳ್ಳರಿಗೆ ಪರ್ಯಾಯ ಮಾರ್ಗಗಳ ಬಗ್ಗೆ ಹೆಚ್ಚು ಅರಿವಿರುತ್ತದೆ. ಹೀಗಾಗಿ 1951 ರ ಪ್ರಜಾ ಪ್ರತಿನಿಧಿ ಕಾಯ್ದೆಗೆ ಆರಂಭದಿಂದಲೂ ಸುಧಾರಣೆಯ ಪ್ರಕ್ರಿಯೆಗಳು ನಡೆಯುತ್ತಲೇ ಇವೆ. ಆದರೆ, ಅಂದಿನಿಂದ ಇದುವರೆಗಿನ ವ್ಯವಸ್ಥೆಯನ್ನು ಸರಿದಾರಿಗೆ ತರುವ ಪ್ರಯತ್ನದಲ್ಲಿ ಯಶಸ್ಸು ಕಂಡಂತೆ ಕಾಣುತ್ತಿಲ್ಲ.

ಚುನಾವಣಾ ವ್ಯವಸ್ಥೆ ಸುಧಾರಣೆಗಾಗಿ 1964 ರಲ್ಲಿ ಸಂತಾನಂ ಸಮಿತಿ ನೀಡಿರುವ ವರದಿ, ನಂತರದ ದಿನೇಶ್‌ ಗೋಸ್ವಾಮಿ, ವೋಹ್ರಾ ಸಮಿತಿ, ಎಡಿಆರ್‌ (ಅಸೋಸಿಯೇಷನ್‌ ಫಾರ್‌ ಡೆಮಾಕ್ರಟಿಕ್‌ ರಿಫಾಮ್ಸ್‌) ಸಂಸ್ಥೆ ನೀಡಿರುವ ಶಿಫಾರಸ್ಸುಗಳು, ಅಭ್ಯರ್ಥಿಗಳು ಚುನಾವಣೆಯಲ್ಲಿ ಮಾಡಬೇಕಾದ ವೆಚ್ಚ, ರಾಜಕೀಯ ಅಪರಾಧೀಕರಣಕ್ಕೆ ಶಿಕ್ಷೆ, ಪಕ್ಷಾಂತರ ನಿಷೇಧ ಕಾಯ್ದೆ ಜಾರಿಯಾಗಿದ್ದರೂ, ಅದೆಲ್ಲವನ್ನೂ ತಮ್ಮ ಅನುಕೂಲಕ್ಕೆ ತಕ್ಕಂತೆ ಬಳಸಿಕೊಳ್ಳುವ ರಾಜಕೀಯ ವ್ಯವಸ್ಥೆ ನಿರ್ಮಾಣವಾಗುತ್ತಿವೆ. ಹೀಗಾಗಿ ಹಾಲಿ ಕಾನೂನುಗಳು, ಅನೇಕ ಸಮಿತಿಗಳು ನೀಡಿರುವ ವರದಿಗಳ ಆಧಾರದಲ್ಲಿ ಇನ್ನಷ್ಟು ಬಲಗೊಳ್ಳುವುದರ ಜೊತೆಗೆ ಕೇವಲ ಚುನಾವಣೆ ಸುಧಾರಣೆಯಷ್ಟೇ ಅಲ್ಲ ರಾಜಕೀಯ ವ್ಯವಸ್ಥೆಯನ್ನೂ ಸುಧಾರಿಸುವ ದಿಟ್ಟ ಕೆಲಸ ಆಗಬೇಕಿದೆ.

ಒಬ್ಬ ವ್ಯಕ್ತಿ ಸಾರ್ವಜನಿಕ ಜೀವನಕ್ಕೆ ಕಾಲಿಟ್ಟ ಸಂದರ್ಭದಲ್ಲಿ ಅವನ ಮೊದಲ ಆದ್ಯತೆ ಸಮಾಜ ಸೇವೆ ಆಗಿರುತ್ತದೆ. ರಾಜಕಾರಣಕ್ಕೆ ಕಾಲಿಡುವ ಪ್ರತಿಯೊಬ್ಬ ವ್ಯಕ್ತಿಯೂ ಆರಂಭದಲ್ಲಿ ಆಡುವ ಮಾತು ಕೂಡ ಅದೇ ಆಗಿರುತ್ತದೆ. ಹೀಗಾಗಿ ಸಾರ್ವಜನಿಕ ಸೇವೆಗೆ ಬರುವ ವ್ಯಕ್ತಿ ಯಾವಾಗಲೂ ತನ್ನ ವೈಯಕ್ತಿಕ ಜೀವನದಲ್ಲಿ ಕೆಲವು ತ್ಯಾಗಗಳನ್ನು ಮಾಡಬೇಕಾಗುತ್ತದೆ. ಯಾವುದೇ ಸಾರ್ವಜನಿಕ ಜೀವನದಲ್ಲಿರುವ ವ್ಯಕ್ತಿ ಅಥವಾ ಜನಪ್ರತಿನಿಧಿಯ ನಿರ್ಧಾರಗಳಿಂದ ಸಾಮಾನ್ಯ ಜನರ ಹಕ್ಕುಗಳ ಉಲ್ಲಂಘನೆಯಾಗುವುದೂ ಕೂಡ ಪ್ರಜಾಪ್ರಭುತ್ವದ ಮೌಲ್ಯಗಳಿಗೆ ಧಕ್ಕೆ ತಂದಂತೆ ಆಗುತ್ತದೆ. ಜನಪ್ರತಿನಿಧಿಯ ನಿರ್ಧಾರದಿಂದ ಪ್ರಜೆಗಳ ಹಕ್ಕುಗಳಿಗೆ ಧಕ್ಕೆಯಾಗದಂತಹ ವ್ಯವಸ್ಥೆ ಜಾರಿಯಾಗಬೇಕಿದೆ.

ಈಗಿರುವ ರಾಜಕೀಯ ವ್ಯವಸ್ಥೆಯಲ್ಲಿ ಬದಲಾವಣೆಗಳಾಗ ದಿದ್ದರೆ, ಪ್ರಜಾಪ್ರಭುತ್ವ ಅಸಹಾಯಕವಾಗಿದೆ ಎಂದೇ ಅರ್ಥ. ಅದಕ್ಕಾಗಿ ಕೆಲವೊಂದು ಬದಲಾವಣೆಗಳು ಅಗತ್ಯವಿದೆ.

•ಒಬ್ಬ ವ್ಯಕ್ತಿ ಒಂದು ರಾಜಕೀಯ ಪಕ್ಷದ ಸದಸ್ಯನಾದ ಮೇಲೆ ಆ ವ್ಯಕ್ತಿ ಕನಿಷ್ಠ ಎರಡು ವರ್ಷ ಯಾವುದೇ ಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶವಿರಬಾರದು. ಇದು ಚುನಾವಣೆ ಪೂರ್ವ ಪಕ್ಷಾಂತರ ಪರ್ವಕ್ಕೆ ತಡೆಯೊಡ್ಡಿದಂತಾಗುತ್ತದೆ. ಇದರಿಂದ ಚುನಾವಣೆಯಲ್ಲಿ ಟಿಕೆಟ್ ಪಡೆಯುವುದಕ್ಕೋಸ್ಕರವೇ ಪಕ್ಷಾಂತರ ಮಾಡುವ ವ್ಯವಸ್ಥೆಗೆ ಕಡಿವಾಣ ಹಾಕಿದಂತಾಗುತ್ತದೆ.

•ಯಾವುದೇ ಒಬ್ಬ ವ್ಯಕ್ತಿ ಒಂದು ಪಕ್ಷದ ಚಿನ್ಹೆಯಡಿ ಸ್ಪರ್ಧಿಸಿ ಗೆದ್ದ ಮೇಲೆ, ಐದು ವರ್ಷ ಅಥವಾ ಆ ವಿಧಾನಸಭೆಯ ಅವಧಿ ಇರುವವರೆಗೆ ಅದೇ ಪಕ್ಷದಲ್ಲಿ ಶಾಸಕನಾಗಿ ಮುಂದುವರೆಯುವುದು ಕಡ್ಡಾಯವಾಗಬೇಕು. ಒಂದು ವೇಳೆ, ರಾಜೀನಾಮೆ ಸಲ್ಲಿಸಿದರೂ, ಅವರು ಎರಡು ಅವಧಿಗೆ ಅಥವಾ ಹತ್ತು ವರ್ಷ ಚುನಾವಣೆಗೆ ಸ್ಪರ್ಧೆಗೆ ಅವಕಾಶ ಇಲ್ಲದಂತಾಗಬೇಕು.

•ಪಕ್ಷೇತರ ಹಾಗೂ ಪ್ರಾದೇಶಿಕ ಪಕ್ಷಗಳಿಂದ ಆಯ್ಕೆಯಾಗುವ ಶಾಸಕರಿಗೂ ಈ ನಿಯಮ ಅನ್ವಯವಾಗುವಂತಾಗಬೇಕು. ಚುನಾವಣೆ ನಡೆದ ನಂತರ ಮೊದಲ ಅಧಿವೇಶನದ ಸಂದರ್ಭದಲ್ಲಿ ಪಕ್ಷೇತರ ಶಾಸಕರು ಹಾಗೂ ಸಣ್ಣ ಪುಟ್ಟ ಪಕ್ಷಗಳಿಂದ ಆಯ್ಕೆಯಾದ ಯಾವುದೇ ಸದಸ್ಯರು ತಮ್ಮ ನಿಷ್ಠೆಯನ್ನು ಪ್ರಕಟಿಸುವಂತಾಗಬೇಕು. ಆಡಳಿತ ಅಥವಾ ಪ್ರತಿಪಕ್ಷ ಯಾರ ಪರವಾಗಿ ತಾವಿರುತ್ತೇವೆ ಎನ್ನುವುದನ್ನು ಪ್ರಕಟಿಸಿದ ನಂತರ ಆ ಅವಧಿಗೆ ಅವರ ನಿಷ್ಠೆ ಬದಲಾವಣೆಗೆ ಅವಕಾಶವಿರಬಾರದು. ಒಂದು ವೇಳೆ, ನಿಷ್ಠೆ ಬದಲಾಯಿಸಿದರೆ, ಅದನ್ನೂ ಕೂಡ ಪಕ್ಷಾಂತರ ನಿಷೇಧವೆಂದೇ ಪರಿಗಣಿಸುವಂತಾಗಬೇಕು.

•ಶಾಸಕರ ರಾಜೀನಾಮೆಯನ್ನು ಸ್ವೀಕರಿಸಲು, ತಿರಸ್ಕರಿಲು ಹಾಗೂ ಅನರ್ಹಗೊಳಿಸಲು ಸ್ಪೀಕರ್‌ಗೆ ನಿರ್ಧಿಷ್ಠ ಸಮಯ ನಿಗದಿಪಡಿಸಬೇಕು. ರಾಜೀನಾಮೆ ಸಲ್ಲಿಸಿದ ಶಾಸಕರು ಒತ್ತಾಯ ಪೂರ್ವಕವಾಗಿ ರಾಜೀನಾಮೆ ಸಲ್ಲಿಸಿದ್ದರೆ, ಹದಿನೈದು ದಿನದಲ್ಲಿ ಅದನ್ನು ವಾಪಸ್‌ ಪಡೆಯಲು ಅವಕಾಶ, ಹದಿನೈದು ದಿನಗಳಲ್ಲಿ ಅವರ ವಿಚಾರಣೆ ಪೂರ್ಣಗೊಳಿಸಲು ಸ್ಪೀಕರ್‌ಗೆ ಅವಕಾಶ ಕಲ್ಪಿಸುವುದು. ಒಂದು ವೇಳೆ, ಸ್ಪೀಕರ್‌ ನಿಗದಿತ ಅವಧಿಯಲ್ಲಿ ತೀರ್ಪು ಪ್ರಕಟಿಸದಿದ್ದರೆ, ರಾಜೀನಾಮೆ ಅಂಗೀಕಾರವಾಗಿವೆ ಎಂದು ಅಥೈಸಿಕೊಳ್ಳುವಂತಹ ನಿಯಮ ಜಾರಿಯಾಗಬೇಕು.

•ಒಬ್ಬ ವ್ಯಕ್ತಿ ಒಂದು ಚುನಾವಣೆಯಲ್ಲಿ ಏಕಕಾಲಕ್ಕೆ ಎರಡು ಕ್ಷೇತ್ರಗಳಿಗೆ ಸ್ಪರ್ಧೆಗೆ ಅವಕಾಶವಿಲ್ಲದಂತಾಗಬೇಕು ಹಾಗೂ ಚುನಾವಣೆಯಲ್ಲಿ ಸೋತ ವ್ಯಕ್ತಿ ಆ ಅವಧಿಗೆ ರಾಜ್ಯಸಭೆ ಹಾಗೂ ವಿಧಾನ ಪರಿಷತ್ತಿಗೂ ನೇಮಕವಾಗದಂತಾಗಬೇಕು. ರಾಜಕೀಯ ನಾಯಕತ್ವ ಯಾರೊಬ್ಬರಿಂದಲೇ ನಡೆಯುತ್ತದೆ ಎನ್ನುವ ಮನಸ್ಥಿತಿಯಿಂದ ಹೊರಬರಬೇಕು. ಇಂತಹ ಸಂದರ್ಭದವೇ ಮತ್ತೂಬ್ಬ ನಾಯಕನ ಉದಯಕ್ಕೆ ಕಾರಣವಾಗುತ್ತದೆ. ಇಲ್ಲಿ ಅವರ ವ್ಯಕ್ತಿ ಸ್ವಾತಂತ್ರ್ಯಕ್ಕೆ ಧಕ್ಕೆಯಾಗುತ್ತದೆ ಎನ್ನುವ ಸಾಮಾನ್ಯ ವಾದ ಮುಂದಿಡಲಾಗುತ್ತದೆ. ಆದರೆ, ಒಬ್ಬ ವ್ಯಕ್ತಿಯ ಸ್ವಾತಂತ್ರ್ಯ ಹರಣದ ಹೆಸರಿನಲ್ಲಿ ಪ್ರಜಾಪ್ರಭುತ್ವದ ಮೂಲ ಆಶಯವಾದ ಪ್ರಜೆಗಳ ಹಕ್ಕುಗಳ ಹರಣವಾಗುತ್ತಿರುವುದು ಚರ್ಚೆಯಾಗದಿರುವುದು ದುರಂತ.

•ರಾಜಕಾರಣಿಗಳ ವಿರುದ್ಧ ದಾಖಲಾಗುವ ಅಪರಾಧ ಪ್ರಕರಣಗಳು, ಚುನಾವಣಾ ಅಕ್ರಮಗಳ ಪ್ರಕರಣಗಳ ಕುರಿತು ವಿಶೇಷ ನ್ಯಾಯಾಲಯದಲ್ಲಿ ಆರು ತಿಂಗಳಲ್ಲಿಯೇ ತೀರ್ಪು ಹೊರಬೀಳುವಂತಾಗಬೇಕು. ಒಂದು ವೇಳೆ, ಜನಪ್ರತಿನಿಧಿ ಅಪರಾಧಿ ಎಂತಾದರೆ, ಉಳಿದ ಅವಧಿಗೆ ಎರಡನೇ ಸ್ಥಾನ ಪಡೆದ ಅಭ್ಯರ್ಥಿಯನ್ನೇ ಜಯಶೀಲರನ್ನಾಗಿ ಘೋಷಣೆ ಮಾಡುವಂತಾಗಬೇಕು. (ಕ್ರೀಡಾ ಕ್ಷೇತ್ರದಲ್ಲಿ ಮೊದಲ ಸ್ಥಾನ ಪಡೆದ ಕ್ರೀಡಾಪಟುವಿನ ವಿರುದ್ಧ ಆರೋಪ ಸಾಬೀತಾದರೆ, ಅವರಿಗೆ ದೊರೆತ ಪದಕ ಹಾಗೂ ಸ್ಥಾನವನ್ನು ಎರಡನೇ ಸ್ಥಾನ ಪಡೆದವರಿಗೆ ವರ್ಗಾಯಿಸುವ ಸರಳ ವ್ಯವಸ್ಥೆ ನಮ್ಮಲ್ಲಿಯೇ ಜಾರಿಯಲ್ಲಿದೆ)

•ಸರ್ಕಾರ ರಚನೆ, ವಿಶ್ವಾಸ ಮತ ಯಾಚನೆ, ರಾಜ್ಯಪಾಲರ ಹಸ್ತಕ್ಷೇಪ, ಸುಪ್ರೀಂ ಕೋರ್ಟ್‌ ಮಧ್ಯ ಪ್ರವೇಶ ಮಾಡುವ ಪ್ರಕ್ರಿಯೆಗಳಿಗೂ ನಿರ್ಧಿಷ್ಠ ನಿಯಮಾವಳಿಗಳ ರಚನೆಯಾಗುವುದು ಸೂಕ್ತ.

ವ್ಯವಸ್ಥೆಯ ಸುಧಾರಣೆಗೆ ಕೇಂದ್ರದಲ್ಲಿ ಅಧಿಕಾರದಲ್ಲಿರುವ ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರ ಹೆಚ್ಚು ಪ್ರಾಶಸ್ತ್ಯ ನೀಡಬೇಕಿದೆ. ಒಂದು ವೇಳೆ, ಆಡಳಿತ ಪಕ್ಷ ನಿರ್ಲಕ್ಷ್ಯ ತೋರಿದರೂ, ಪ್ರತಿಪಕ್ಷಗಳು ತಮ್ಮ ಜವಾಬ್ದಾರಿಯಿಂದ ನುಣುಚಿಕೊಳ್ಳವಂತಾಗಬಾರದು. ರಾಜಕೀಯ ಪಕ್ಷಗಳು ವ್ಯವಸ್ಥೆ ಸುಧಾರಣೆಗೆ ಹಿಂದೇಟು ಹಾಕಿದರೂ, ಪ್ರಜಾಪ್ರಭುತ್ವದ ಉಳಿವಿಗಾಗಿ ಪ್ರಜೆಗಳೆ ಬದಲಾವಣೆಗಾಗಿ ಹೋರಾಟ ನಡೆಸುವ ಅನಿವಾರ್ಯತೆ ಇದೆ. ಬೀದಿಗಿಳಿದು ಹೋರಾಡುವುದು ಒಂದು ಭಾಗವಾದರೆ, ಸಾಮಾಜಿಕ ಜಾಲ ತಾಣವನ್ನು ಪ್ರಜಾಪ್ರಭುತ್ವದ ಉಳಿವಿಗಾಗಿ ಅಸ್ತ್ರವನ್ನಾಗಿ ಬಳಸಿಕೊಂಡರೂ ತಪ್ಪೇನಿಲ್ಲ.

– ಶಂಕರ ಪಾಗೋಜಿ

ಟಾಪ್ ನ್ಯೂಸ್

Kannada-Sahitya-Sammelana-2024

Mandya Sahitya Sammelana: ನಾಳೆಯಿಂದ ಅಕ್ಷರ ಜಾತ್ರೆಗೆ ಸಕ್ಕರೆ ನಗರಿ ಸಜ್ಜು

hdd

Government: ಮೀಸಲಾತಿ ಪರಾಮರ್ಶೆ ಮಾಜಿ ಪಿಎಂ ಸಲಹೆ ಚಿಂತನಾರ್ಹ

Kallabete

Udupi: ಕಳ್ಳಬೇಟೆ ನಿಗ್ರಹ ಸಿಬಂದಿಗೆ ಕತ್ತಿ ಕೋಲುಗಳೇ ಆಯುಧ!

UDP-DC

Udupi: ಇಂದ್ರಾಳಿ ರೈಲ್ವೇ ಮೇಲ್ಸೇತುವೆ: ಜ.10ರಿಂದ ವಾಹನ ಬಳಕೆಗೆ ಮುಕ್ತಗೊಳಿಸಿ: ಡಿಸಿ

Udupi: ಗೀತಾರ್ಥ ಚಿಂತನೆ-129: ಓನರ್‌ಶಿಪ್‌ ಮೇಲೇ ಕಣ್ಣು!

Udupi: ಗೀತಾರ್ಥ ಚಿಂತನೆ-129: ಓನರ್‌ಶಿಪ್‌ ಮೇಲೇ ಕಣ್ಣು!

Belagavi ಅಧಿವೇಶನ ತೃಪ್ತಿ ತಂದಿಲ್ಲ: ಛಲವಾದಿ ಬೇಸರ

Belagavi ಅಧಿವೇಶನ ತೃಪ್ತಿ ತಂದಿಲ್ಲ: ಛಲವಾದಿ ಬೇಸರ

Lok Adalat: 39 ಲಕ್ಷ ಕೇಸ್‌ ಇತ್ಯರ್ಥ; ಪುನಃ ಒಂದಾದ 307 ದಂಪತಿ

Lok Adalat: 39 ಲಕ್ಷ ಕೇಸ್‌ ಇತ್ಯರ್ಥ; ಪುನಃ ಒಂದಾದ 307 ದಂಪತಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

PM Mod

2024 Election; ಲೋಕಸಭೆ ಚುನಾವಣೆಗೆ ಮುನ್ನುಡಿಯೇ ಈ ಫ‌ಲಿತಾಂಶ?

Jaishankar

Foreign policy; ಬದಲಾದ ವಿದೇಶಾಂಗ ನೀತಿಯ ಪರಿಭಾಷೆ

ED

Chhattisgarh ‘ಮಹಾದೇವ’ ಅಸ್ತ್ರಕ್ಕೆ ಬಲಿಯಾಗುವವರು ಯಾರು?

1-qwewew

Congress ಅಸಮಾಧಾನದ ಜ್ವಾಲೆ: ಸಮ್ಮಿಶ್ರ ವೈಖರಿಯಲ್ಲಿ ಸರಕಾರ‌?

1-VR-AG

ರಾಜಸ್ಥಾನದ ರಾಜಪಟ್ಟದ ಮೇಲೆ ಎಲ್ಲರ ಕಣ್ಣು; ‘ಕೈ’ ಹಿಡಿಯುತ್ತಾ ಗ್ಯಾರಂಟಿ?

MUST WATCH

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

udayavani youtube

ಮನೆ ತೊರೆದಿದ್ದ ವ್ಯಕ್ತಿ 14 ವರ್ಷಗಳ ಬಳಿಕ ಮರಳಿ ಗೂಡಿಗೆ.

ಹೊಸ ಸೇರ್ಪಡೆ

Kannada-Sahitya-Sammelana-2024

Mandya Sahitya Sammelana: ನಾಳೆಯಿಂದ ಅಕ್ಷರ ಜಾತ್ರೆಗೆ ಸಕ್ಕರೆ ನಗರಿ ಸಜ್ಜು

hdd

Government: ಮೀಸಲಾತಿ ಪರಾಮರ್ಶೆ ಮಾಜಿ ಪಿಎಂ ಸಲಹೆ ಚಿಂತನಾರ್ಹ

Kallabete

Udupi: ಕಳ್ಳಬೇಟೆ ನಿಗ್ರಹ ಸಿಬಂದಿಗೆ ಕತ್ತಿ ಕೋಲುಗಳೇ ಆಯುಧ!

Fake-Gold

Mangaluru: ನಕಲಿ ಚಿನ್ನ ಅಡವಿಟ್ಟು ವಂಚನೆ; 7ನೇ ಸಲ ಬಂದಾಗ ಸಿಕ್ಕಿಬಿದ್ದ ಮಹಿಳೆ!

Suside-Boy

PaduBidri: ಬಸ್‌ ಢಿಕ್ಕಿ: ಪಾದಚಾರಿ ಸಾವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.