ಪ್ರತಿಷ್ಠೆ, ಪ್ರತಿಜ್ಞೆಗಳ ಸುಳಿಯಲ್ಲಿ ನಾಯ್ಡು, ಜಗನ್
Team Udayavani, Sep 14, 2019, 5:04 AM IST
‘ಕೊನ್ನಿ ಸಾರ್ಲು ರಾಜಕೀಯಾನ್ನಿ ಕನ್ನೀಳ್ಳತೋ ರಾಯವಲಸಿ ಉಂಟುಂದಿ. ಮರಿಯು ಕೊನ್ನಿ ಸಾರ್ಲು ರಕ್ತಂಲೋ ಕೂಡ ರಾಯಾಲ್ಸಿ ವಸ್ತುಂದಿ. ಎಂದುಕಂಟೆ, ರಾಜಕೀಯಂ, ದ್ವೇಷಂ ಈ ರೆಂಡೂ ಒಕೇ ನಾಣೆಂ ಯುಕ್ಕ ರೆಂಡು ಮುಖಂಲಾಂಟಿವಿ!’ (ಕೆಲವೊಮ್ಮೆ ರಾಜಕೀಯವನ್ನು ಕಣ್ಣೀರಲ್ಲಿ ಬರೆಯಬೇಕಾಗುತ್ತದೆ. ಆದರೆ, ಮತ್ತೂ ಕೆಲವೊಮ್ಮೆ ಅದನ್ನು ರಕ್ತದಲ್ಲಿ ಬರೆಯಬೇಕಾಗುತ್ತದೆ. ಏಕೆಂದರೆ, ರಾಜಕೀಯ ಮತ್ತು ದ್ವೇಷ ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ! )
ಈ ಮಾತು ಆಂಧ್ರಪ್ರದೇಶದ ರಾಜಕೀಯಕ್ಕೆ ಭಾರೀ ಹೊಂದಾಣಿಕೆಯಾಗುತ್ತದೆ. ಪ್ರಸ್ತುತ ಅಲ್ಲಿ ನಡೆಯುತ್ತಿರುವ ವೈಎಸ್‌ಆರ್ ಕಾಂಗ್ರೆಸ್ ಸಂಸ್ಥಾಪಕ ಹಾಗೂ ಮುಖ್ಯಮಂತ್ರಿ ಜಗನ್ಮೋಹನ್ ರೆಡ್ಡಿ ಮತ್ತು ತೆಲುಗು ದೇಶಂ ನಾಯಕ ಚಂದ್ರಬಾಬು ನಾಯ್ಡು ನಡುವಿನ ಬೀದಿ ಕಾಳಗ ಮೇಲಿನ ಮಾತುಗಳಿಗೆ ಸಾಕ್ಷಿಯಾಗಿದೆ. ಮೇ 30ರಂದು ಜಗನ್ಮೋಹನ್ ರೆಡ್ಡಿ, ಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸಿದ್ದೇ ತಡ, ಚುನಾವಣಾ ಪೂರ್ವದಲ್ಲಿ ಜನರಿಗೆ ನೀಡಿದ್ದ ಆಶ್ವಾಸನೆಗಳನ್ನು ಈಡೇರಿಸುವಲ್ಲಿ ಒಂದು ನಿಮಿಷವೂ ತಡ ಮಾಡಿಲ್ಲ. ಆದರೆ, ಅದರ ಜತೆ ಜತೆಗೇ ಅವರು ತಮ್ಮ ತಂದೆಯ ರಾಜಕೀಯ ಕಡುವೈರಿಯಾದ ಚಂದ್ರಬಾಬು ನಾಯ್ಡು ಹಾಗೂ ಅವರ ಪಕ್ಷವಾದ ತೆಲುಗು ದೇಶಂ ಪಾರ್ಟಿಯನ್ನು (ಟಿಡಿಪಿ) ಹತ್ತಿಕ್ಕಲು ಸಿಗುವ ಯಾವುದೇ ಅವಕಾಶವನ್ನು ವ್ಯರ್ಥಗೊಳಿಸುತ್ತಿಲ್ಲ. ಚಂದ್ರಬಾಬು ನಾಯ್ಡು ಆರೋಪಿಸುವ ಪ್ರಕಾರ, ಆಂಧ್ರದಲ್ಲಿ ವೈಎಸ್‌ಆರ್‌ಸಿ ಅಧಿಕಾರಕ್ಕೆ ಬಂದಾಗಿನಿಂದ ಇಲ್ಲಿಯವರೆಗೆ 500ಕ್ಕೂ ಹೆಚ್ಚು ಟಿಡಿಪಿ ಕಾರ್ಯಕರ್ತರ ಮೇಲೆ ಮಾರಣಾಂತಿಕ ಹಲ್ಲೆಗಳಾಗಿವೆ. ಸುಮಾರು 7 ಟಿಡಿಪಿ ನಾಯಕರು ಹತರಾಗಿದ್ದಾರೆ. ಟಿಡಿಪಿಗೆ ಸೇರಿದ ಆಸ್ತಿ ಧ್ವಂಸವಾಗಿದೆ.
ನಾಯ್ಡು ಅಧಿಕಾರದಲ್ಲಿದ್ದಾಗ ಕೈಗೊಂಡಿದ್ದ ಹಲವಾರು ಯೋಜನೆಗಳು, ಟೆಂಡರ್‌ಗಳನ್ನು ರದ್ದುಗೊಳಿಸಿರುವ ಸಿಎಂ ಜಗ ನ್ಮೋಹನ್ ರೆಡ್ಡಿ, ತಮ್ಮದೇ ಸರ್ಕಾರದಿಂದ ಅದೇ ಯೋಜನೆಗಳ ಬಗ್ಗೆ, ಟೆಂಡರ್‌ಗಳ ಬಗ್ಗೆ ಪುನರ್ ನಿರ್ಧಾರ ಕೈಗೊಳ್ಳುತ್ತಿದ್ದಾರೆ ಎಂದು ನಾಯ್ಡು ಅಳಲು ತೋಡಿಕೊಂಡಿದ್ದಾರೆ. ಇತ್ತೀಚೆಗೆ, ನಾಯ್ಡು ಅಧಿಕಾರಾವಧಿಯಲ್ಲಿ ಸಾರ್ವಜನಿಕರ ಜನತಾ ದರ್ಶನಕ್ಕಾಗಿ ಸುಮಾರು 8 ಕೋಟಿ ರೂ. ವೆಚ್ಚದಲ್ಲಿ ಕಟ್ಟಲಾಗಿದ್ದ ‘ಪ್ರಜಾ ವೇದಿಕ’ ಕಟ್ಟಡವನ್ನು ಸರ್ಕಾರ ನೆಲಸಮ ಮಾಡಿದೆ. ಅಷ್ಟೇ ಅಲ್ಲ, ನಾಯ್ಡು ಅವರ ಕನಸಿನ ಕೂಸಾದ ಆಂಧ್ರಪ್ರದೇಶ ನೂತನ ರಾಜಧಾನಿ ಅಮರಾವತಿ ಯೋಜನೆಗೂ ಎಳ್ಳು ನೀರು ಬಿಟ್ಟು, ನಾಲ್ಕು ಹೊಸ ರಾಜಧಾನಿ ಸೃಷ್ಟಿಗೆ ಚಿಂತನೆ ನಡೆಸಿದೆ. ಮತ್ತೂಂದೆಡೆ, ನಾಯ್ಡು ಅವರಿಗೆ ನೀಡಲಾಗಿದ್ದ ಭದ್ರತೆಯನ್ನು ಹಿಂಪಡೆಯ ಲಾಗಿದೆ. ಅದರ ವಿರುದ್ಧ ನಾಯ್ಡು ನ್ಯಾಯಾಲಯಕ್ಕೂ ಹೋಗಿದ್ದಾರೆ. ಇಷ್ಟು ಸಾಲದೆಂಬಂತೆ, ನಾಯ್ಡು ಹಾಗೂ ಅವರ ಪುತ್ರ ನಾರಾ ಲೋಕೇಶ್ ಅವರನ್ನು ಗೃಹ ಬಂಧನದಲ್ಲಿ ಇರಿಸಿದ ಘಟನೆ ಬುಧವಾರ ನಡೆದಿದೆ.
ಇದು ಎಲ್ಲಿಗೆ ಹೋಗಿ ಮುಟ್ಟುತ್ತದೆಯೋ ಗೊತ್ತಿಲ್ಲ. ಜಗನ್ ಮಾತ್ರ ನಾಯ್ಡು ಅವರನ್ನು ನಾನಾ ರೀತಿಯಲ್ಲಿ ಕಾಡಲಾರಂಭಿಸಿದ್ದಾರೆ ಅನ್ನುವುದು ಮಾತ್ರ ಸತ್ಯ. ಆದರೆ, ನೆನಪಿಡಿ… ಇದು ಕೇವಲ ನಿನ್ನೆ ಮೊನ್ನೆಯ ದ್ವೇಷವಲ್ಲ.
ಸುಮಾರು 37 ವರ್ಷಗಳ ಹಿಂದೆ, ಕಾಂಗ್ರೆಸ್-ಟಿಡಿಪಿ ನಡುವೆ ಸೃಷ್ಟಿಯಾಗಿದ್ದ ಆ ರಾಜಕೀಯ ದ್ವೇಷವೇ ಈಗ ಜಗನ್ ಮತ್ತು ಚಂದ್ರಬಾಬು ನಾಯ್ಡು ನಡುವೆ ಅನುರಣಿಸುತ್ತಿದೆ.
1982ರಲ್ಲಿ ನಡೆದ ಆ ಘಟನೆ, ಆಂಧ್ರ ರಾಜಕೀಯದ ಚಿತ್ರಣವನ್ನೇ ಬದಲು ಮಾಡಿದ್ದು ಸುಳ್ಳಲ್ಲ. ಜತೆಗೆ, ಎನ್‌ಟಿಆರ್ ಎಂಬ ಜನಪ್ರಿಯ ನಾಯಕರೊಬ್ಬರನ್ನು ಆಂಧ್ರಪ್ರದೇಶಕ್ಕೆ ಕಾಣಿಕೆಯಾಗಿ ನೀಡಿತು. ಆಗ, ಭುಗಿಲೆದ್ದಿದ್ದ ಕಾಂಗ್ರೆಸ್ ವರ್ಸಸ್ ಟಿಡಿಪಿ ಯುದ್ಧವೇ ಈಗ ವೈಎಸ್‌ಆರ್ ಕಾಂಗ್ರೆಸ್ ವರ್ಸಸ್ ಟಿಡಿಪಿ ಎಂದು ಬದಲಾಗಿದೆಯಷ್ಟೆ.
ಏನಾಗಿತ್ತು ಅವತ್ತು?: ಆಂಧ್ರ ರೂಪುಗೊಂಡಾಗಿನಿಂದ ಸತತವಾಗಿ ಮೂರು ದಶಕಗಳವರೆಗೆ ಕಾಂಗ್ರೆಸ್ ಆ ರಾಜ್ಯದಲ್ಲಿ ಅಧಿಕಾರದಲ್ಲಿತ್ತು. 1979ರ ವಿಧಾನಸಭಾ ಚುನಾವಣೆಯಲ್ಲಿ 175 ಸ್ಥಾನಗಳನ್ನು ಗೆದ್ದು ಅಧಿಕಾರಕ್ಕೆ ಬಂದಿದ್ದ ಕಾಂಗ್ರೆಸ್, 1980ರಲ್ಲಿ ದಶಕಗಳ ಕಾಲ ನಿಷ್ಠಾವಂತರಾಗಿ ದುಡಿದಿದ್ದ, ದಲಿತ ವರ್ಗದ ತಂಗುಟೂರಿ ಅಂಜಯ್ಯರನ್ನು ಮುಖ್ಯಮಂತ್ರಿಯನ್ನಾಗಿ ನೇಮಿಸಿತ್ತು.1982ರಲ್ಲಿ ಅದೊಂದು ದಿನ ಕಾಂಗ್ರೆಸ್‌ನ ಯುವ ನಾಯಕ ರಾಜೀವ್ ಗಾಂಧಿ, ಆಂಧ್ರಪ್ರದೇಶಕ್ಕೆ ಭೇಟಿ ನೀಡಲು ಆಗಮಿಸಿದ್ದರು. ಅವರನ್ನು ಭರ್ಜರಿಯಾಗಿ ಸ್ವಾಗತಿಸಬೇಕೆಂದು ನಿರ್ಧರಿಸಿದ ಸಿಎಂ ಅಂಜಯ್ಯ, ಸುಮಾರು 200ಕ್ಕೂ ಹೆಚ್ಚು ಕಾರ್ಯಕರ್ತರನ್ನು ವಿಮಾನ ನಿಲ್ದಾಣದಲ್ಲಿ ಹಾಜರಿರುವಂತೆ ಮಾಡಿದ್ದರು. ಅವರ ಜತೆಗೆ, ಆಂಧ್ರದ ಜನಪದ ಕಲಾವಿದರು, ಡೋಲು ಇನ್ನಿತರ ಸಂಗೀತ ಸಾಮಗ್ರಿಗಳೊಂದಿಗೆ ಆಗಮಿಸಿ ಜಮಾಯಿಸಿದ್ದರು.
ವಿಮಾನ ಆಗಮಿಸಿ, ಅದರಿಂದ ರಾಜೀವ್ ಗಾಂಧಿ ಕೆಳಗಿಳಿದು ಬರುತ್ತಿದ್ದಂತೆ ವಿಮಾನ ನಿಲ್ದಾಣದಲ್ಲಿದ್ದ ಕಾರ್ಯಕರ್ತರೆಲ್ಲರೂ, ನಿಲ್ದಾಣದ ಛಾವಣಿಯೇ ಹಾರಿ ಹೋಗುವಂತೆ ಜಯಕಾರ ಹಾಕಿದರಲ್ಲದೆ, ಕುಣಿದು ಕುಪ್ಪಳಿಸಲು ಶುರು ಮಾಡಿದರು. ಅವರನ್ನು ನಿಯಂತ್ರಿಸಲು ಪೊಲೀಸರಷ್ಟೇ ಏಕೆ, ಖುದ್ದು ಮುಖ್ಯಮಂತ್ರಿ ಅಂಜಯ್ಯ ಅವರೇ ಹರಸಾಹಸ ಪಡಬೇಕಾಯಿತು. ಪರಿಸ್ಥಿತಿಯು ರಾಜೀವ್ ಪಾಲಿಗೆ ಎಷ್ಟು ಕಿರಿಕಿರಿ ಎನ್ನಿಸಿತು ಎಂದರೆ, ಮೊದಲೇ ವಿದೇಶಗಳಲ್ಲಿ ಓದಿ ಸಭ್ಯವಾಗಿದ್ದ ಅವರ ತಾಳ್ಮೆಯನ್ನು ಕೆಣಕಿತು ಈ ಘಟನೆ. ತಕ್ಷಣವೇ ಅಂಜಯ್ಯ ಕಡೆ ತಿರುಗಿ ರೇಗಿದ ರಾಜೀವ್, ‘ನಿಮ್ಮ ಹುಚ್ಚಾಟ ನೋಡಲು ನಾನು ನವದೆಹಲಿಯಿಂದ ಬರಬೇಕೇನ್ರಿ. ಏನಿದೆಲ್ಲಾ..? ನೀವೊಬ್ಬ ಬಫೂನ್’ ಎಂದು ಸಾರ್ವಜನಿಕರ ಎದುರಲ್ಲೇ ಅಂಜಯ್ಯ ಒಬ್ಬ ಮುಖ್ಯಮಂತ್ರಿ ಎಂಬ ಬೆಲೆಯನ್ನೂ ಕೊಡದೇ ಬಯ್ದುಬಿಟ್ಟರು. ಘಟನೆಯನ್ನು ಗಮನಿಸಿದ ಪತ್ರಕರ್ತರು ‘ರಾಜೀವ್ ಅವರು ತೆಲುಗು ಭಾಷಿಗರ ಸ್ವಾಭಿಮಾನ ಕೆಣಿಕಿದರು’ ಎಂಬರ್ಥದಲ್ಲಿ ಪರಿಣಾಮಕಾರಿ ವರದಿ ಮಾಡಿದರು. ಇದು ಭಾರೀ ಸಂಚಲನ ಸೃಷ್ಟಿಸಿತು.
ಆ ಹೊತ್ತಿಗೆ, ಚಲನಚಿತ್ರರಂಗದಲ್ಲಿ ಧ್ರುವತಾರೆಯಾಗಿ ಮೆರೆದು, ಕೋಟ್ಯಂತರ ಅಭಿಮಾನಿಗಳನ್ನು ಸಂಪಾದಿಸಿದ್ದ ಎನ್.ಟಿ.ರಾಮರಾವ್ ಅವರಿಗೆ ರಾಜಕೀಯಕ್ಕೆ ಬರಲು ಪ್ರೇರಣೆ ನೀಡಿತು ಈ ಘಟನೆ. ತೆಲುಗು ಭಾಷಿಗರ ಸ್ವಾಭಿಮಾನದ ರಕ್ಷಣೆಗಾಗಿಯೇ ಒಂದು ಪಕ್ಷ ಕಟ್ಟಬೇಕೆಂದು ಪ್ರತಿಜ್ಞೆ ಮಾಡಿದ ಅವರು, ಅದೇ ಹಠದಲ್ಲೇ ಕಟ್ಟಿದ ಪಕ್ಷವೇ ‘ತೆಲುಗು ದೇಶಂ ಪಾರ್ಟಿ’ (ಟಿಡಿಪಿ). ಈ ಸ್ವಾಭಿಮಾನದ ಕಿಚ್ಚು ಮತ್ತು ಎನ್‌ಟಿಆರ್ ಮಾಡಿದ ಪ್ರತಿಜ್ಞೆಯ ಪರಿಣಾಮ ಎಷ್ಟು ಗಾಢವಾಗಿತ್ತೆಂದರೆ, ಅದು ಮೂವತ್ತು ವರ್ಷಗಳ ಕಾಲ ಆಂಧ್ರವನ್ನು ಆಳಿದ್ದ ಕಾಂಗ್ರೆಸನ್ನು, 1983ರ ಚುನಾವಣೆಯಲ್ಲಿ ಅಧಿಕಾರದಿಂದ ಕಿತ್ತೂಗೆದು, ಕೇವಲ 9 ತಿಂಗಳ ಹಿಂದಷ್ಟೇ ಹುಟ್ಟಿದ್ದ ತೆಲುಗು ದೇಶಂ ಪಕ್ಷಕ್ಕೆ ಅಧಿಕಾರ ತಂದುಕೊಟ್ಟಿತು. ಅಷ್ಟರ ಮಟ್ಟಿಗೆ, ರಾಮರಾವ್ ಅವರ ಹಠ ದೊಡ್ಡ ಯಶಸ್ಸು ಕಂಡಿತ್ತು.
ಹೀಗೆ, ಕಾಂಗ್ರೆಸ್ ವಿರುದ್ಧ ತೊಡೆ ತಟ್ಟಿಯೇ ಅಸ್ತಿತ್ವಕ್ಕೆ ಬಂದ ಟಿಡಿಪಿ, ಕಾಲಾನುಕ್ರಮದಲ್ಲಿ ಕಾಂಗ್ರೆಸ್‌ನ ಬದ್ಧವೈರಿಯೇ ಆಗಿತ್ತು. ಆದರೆ, ಜಗನ್ಮೋಹನ್ ರೆಡ್ಡಿ, ಕಾಂಗ್ರೆಸ್ ತೊರೆದು ವೈಆರ್‌ಎಸ್ ಕಾಂಗ್ರೆಸ್ ಪಕ್ಷ ಸ್ಥಾಪಿಸಿದ ನಂತರ ಟಿಡಿಪಿ, ವೈಆರ್‌ಎಸ್‌ಸಿ ವಿರೋಧಿಯಾಯಿತು. ನಾಯ್ಡು ಹಾಗೂ ಜಗನ್ ಅವರು ಪ್ರಭಾವಿ ನಾಯಕರಾಗಿ ಬೆಳೆದಿದ್ದೂ ಹಠ, ಷಡ್ಯಂತ್ರಗಳ ಮೂಲಕವೇ. 1994ರಲ್ಲಿ ಎನ್‌ಟಿಆರ್ ಮೂರನೇ ಬಾರಿ ಸಿಎಂ ಆಗಿದ್ದಾಗ, ಚಂದ್ರಬಾಬು ನಾಯ್ಡು ಅವರು ತಮ್ಮ ಮಾವ ಎನ್‌ಟಿಆರ್‌ರಿಂದ ಪಕ್ಷದ ಅಧ್ಯಕ್ಷಗಿರಿ, ಸಿಎಂ ಹುದ್ದೆ-ಎರಡನ್ನೂ ತಮ್ಮ ನಿಯಂತ್ರಣಕ್ಕೆ ಪಡೆದು, 1999ರ ಸೆ. 1ರಂದು ಮುಖ್ಯಮಂತ್ರಿಯಾಗಿ ಅಧಿಕಾರಕ್ಕೆ ಬಂದರು. ಅದಾದ ನಂತರ, 1999ರ ಚುನಾವಣೆಯಲ್ಲೂ ಗೆದ್ದು ಬಂದು ಮತ್ತೆ ಸಿಎಂ ಆದರು.
ಆ ಕಾಲಘಟ್ಟದಲ್ಲಿ ಚಂದ್ರ ಬಾಬುವಿಗೆ ಸಡ್ಡು ಹೊಡೆಯಬಲ್ಲ ಏಕೈಕ ನಾಯಕನಾಗಿ ಉದಯಿಸಿದ್ದೆಂದರೆ, ಅದು ಕಾಂಗ್ರೆಸ್‌ನ ರಾಜಶೇಖರ್ ರೆಡ್ಡಿ. ಹಾಲಿ ಸಿಎಂ ಜಗನ್ಮೋಹನ್ ರೆಡ್ಡಿ ತಂದೆ. ಅಪಾರ ಜನಪ್ರಿಯತೆ ಗಳಿಸಿದ್ದ ರಾಜಶೇಖರ್‌ರ ಮೇಲೆ ಜನ ಎಂಥ ಹುಚ್ಚು ಅಭಿಮಾನ ಇಟ್ಟುಕೊಂಡಿದ್ದರೆಂದರೆ, ರೆಡ್ಡಿಯವರೇ ಮುಖ್ಯಮಂತ್ರಿಯಾಗಬೇಕೆಂದು ಹಾರೈಸಿ ಅವರ ಅಭಿಮಾನಿಯೊಬ್ಬ ದೇವಸ್ಥಾನವೊಂದರ ಮುಂದೆ ತನ್ನ ನಾಲಿಗೆಯನ್ನೇ ಅರ್ಪಿಸಿಕೊಂಡಿದ್ದ! ರೆಡ್ಡಿಯವರ ಸಮರ್ಥ ನಾಯಕತ್ವ, ಪಕ್ಷ ಸಂಘಟನೆಯ ಪರಿಣಾಮದಿಂದ ಕಾಂಗ್ರೆಸ್, 2004ರ ವಿಧಾನಸಭಾ ಚುನಾವಣೆಯಲ್ಲಿ ಗೆದ್ದು, ರೆಡ್ಡಿ ಮುಖ್ಯಮಂತ್ರಿಯಾದರು. ಆದರೆ, ಅಧಿಕಾರಕ್ಕೆ ಬಂದ ನಂತರ ಟಿಡಿಪಿಯನ್ನು ರಾಜಶೇಖರ್ ರೆಡ್ಡಿ ಬಗ್ಗುಬಡಿಯದೇ ಇರಲಿಲ್ಲ. ಖುದ್ದು ಚಂದ್ರಬಾಬು ನಾಯ್ಡು ಅವರೇ, ಮಾಧ್ಯಮಗಳ ಮುಂದೆ ಬಂದು ಆ ಬಗ್ಗೆ ಆರೋಪಿಸಿದ್ದರು.
2009ರಲ್ಲಿ ರಾಜಶೇಖರ ರೆಡ್ಡಿ ಹೆಲಿಕಾಪ್ಟರ್ ಅಪಘಾತದಲ್ಲಿ ಮೃತರಾದ ನಂತರ, ಸಿಎಂ ಗಾದಿಗಾಗಿ ಹೋರಾಟ ನಡೆಸಿದ ಜಗನ್ಮೋಹನ್ ರೆಡ್ಡಿ, ಆನಂತರ ಕಾಂಗ್ರೆಸ್‌ನಿಂದ ಹೊರಬಂದು 2011ರಲ್ಲಿ ‘ವೈಎಸ್‌ಆರ್ ಕಾಂಗ್ರೆಸ್’ ಹುಟ್ಟುಹಾಕಿದರು.
ಹಾಗೆಂದ ಮಾತ್ರಕ್ಕೆ ಸಿಎಂ ಗಾದಿವರೆಗಿನ ಅವರ ಹಾದಿ ಸುಗಮವಾಗಿತ್ತು ಎಂದೇನಲ್ಲ. 2012ರಲ್ಲಿ ಜಗನ್ಮೋಹನ ರೆಡ್ಡಿ ಆದಾಯ ಮೀರಿದ ಆಸ್ತಿ ಪ್ರಕರಣದಲ್ಲಿ ಸಿಲುಕುವಂತಾಯಿತು. ವಿವಿಧ ಹೂಡಿಕೆದಾರರಿಂದ 1,172 ಕೋಟಿ ರೂ.ಗಳನ್ನು ಅಕ್ರಮವಾಗಿ ಗಳಿಸಿದ್ದಾರೆಂದು ಸಿಬಿಐ, ಅವರ ವಿರುದ್ಧ ಪ್ರಕರಣ ದಾಖಲಿಸಿತು. ಆಗ, ವೈಎಸ್‌ಆರ್‌ಸಿಯಿಂದ ಸಂಸದರಾಗಿದ್ದ ಜಗನ್ಮೋಹನ್‌ರನ್ನು ಬಂಧಿಸಲಾಯಿತು. ಆನಂತರ ನಡೆದ ನ್ಯಾಯಾಲಯದ ವಿಚಾರಣೆಯಲ್ಲಿ, ಅವರು ಹೈದರಾಬಾದ್‌ನ ಚಂಚಲಗೂಡ ಜೈಲಿನಲ್ಲಿ ದಿನಕಳೆಯುವಂತಾಗಿತ್ತು.
2014ರಲ್ಲಿ ತಾವು ಜೈಲಿನಿಂದ ಬಿಡುಗಡೆಯಾದ ನಂತರ, ಎನ್‌ಡಿಎ ಮೊರೆ ಹೋದ ಜಗನ್ಮೋಹನ್ ರೆಡ್ಡಿಗೆ ಬಿಜೆಪಿ ಸಹಾಯ ಹಸ್ತ ಚಾಚಿತು. ಇದು ನಾಯ್ಡುಗೆ ಕಸಿವಿಸಿ ಉಂಟು ಮಾಡಿದ್ದು ಸುಳ್ಳಲ್ಲ. ಇತ್ತ, ಜಗನ್ಮೋಹನ್ ರೆಡ್ಡಿಯವರು, ಹಲವಾರು ಜನಪರ ಹೋರಾಟಗಳನ್ನು ರೂಪಿಸಿ ಜನಪ್ರಿಯರಾದರು. 2018ರಲ್ಲಿ ಚಂದ್ರಬಾಬು ನಾಯ್ಡು ಎನ್‌ಡಿಎಯಿಂದ ಹೊರಬಂದ ನಂತರ, ಎನ್‌ಡಿಎ ಸಖ್ಯ ಗಳಿಸುವಲ್ಲಿ ಜಗನ್ಮೋಹನ್ ರೆಡ್ಡಿ ಯಶಸ್ವಿಯಾಗಿದ್ದಾರೆ. ಅತ್ತ, ಎನ್‌ಡಿಎಯಿಂದ ಹೊರಬಂದಿರುವ ನಾಯ್ಡು ಏಕಾಂಗಿಯಾಗಿದ್ದಲ್ಲದೆ, ಅಧಿಕಾರವನ್ನೂ ಕಳೆದುಕೊಂಡಿದ್ದಾರೆ.
ಇದಿಷ್ಟೂ ಈ ಇಬ್ಬರೂ ನಾಯಕರ ಇಲ್ಲಿಯವರೆಗಿನ ರಾಜಕೀಯ ಪಯಣದ ಸಂಕ್ಷಿಪ್ತ ವಿವರಣೆ. ಸದ್ಯಕ್ಕೆ ಕಾಲ ಜಗನ್ಮೋಹನ್ ಕಡೆಗೆ ವಾಲಿದೆ. ಅವರ ಕೈಯ್ಯಲ್ಲಿ ಚಾಟಿ, ಬುಗುರಿ ಎರಡೂ ಇವೆ. ಹಾಗಾಗಿ, ನಾಯ್ಡು ಅವರನ್ನು ಆಡಿಸುತ್ತಿದ್ದಾರೆ. ಮುಂದೆ ಇದು ಉಲಾr ಆಗಬಹುದು. ಕಾದು ನೋಡಬೇಕಷ್ಟೆ.
1953ರ ಅಕ್ಟೋಬರ್ 1ರಂದು ಆಂಧ್ರಪ್ರದೇಶ ಅಸ್ತಿತ್ವಕ್ಕೆ ಬಂದಾಗಿನಿಂದ ಇಲ್ಲಿಯವರೆಗೆ ಆಂಧ್ರದ ನಾಯಕರಿಗೆ ರಾಜಕೀಯವೆಂದರೆ, ಅದೊಂದು ಗರ್ವ, ಸ್ವಾಭಿಮಾನ ಅಥವಾ ಪ್ರತಿಷ್ಠೆಯ ವಿಷಯ. ಅಲ್ಲಿನ ರಾಜಕೀಯ ಇತಿಹಾಸ ಕೆದಕಿದರೆ ಇಂಥ ಪ್ರತಿಷ್ಠೆಗಳೇ ಕಾಣಸಿಗುತ್ತವೆ. ಹಾಲಿ ಸಿಎಂ ಜಗನ್ಮೋಹನ್ ರೆಡ್ಡಿ ಮತ್ತು ಚಂದ್ರಬಾಬು ನಡುವೆ ದಶಕಗಳಿಂದ ಬೂದಿಮುಚ್ಚಿದ ಕೆಂಡದಂತಿದ್ದ ಇಂಥ ಪ್ರತಿಷ್ಠೆಯೇ ಈಗ ರಾಜಕೀಯ ದ್ವೇಷವಾಗಿ ಹೊತ್ತಿ ಉರಿಯಲಾರಂಭಿಸಿದೆ…
ಚೇತನ್ ಓ.ಆರ್
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.