ರಾಜನೀತಿ: ಹುಲ್ಲುಕಡ್ಡಿಗಳೇ ನಿತೀಶರನ್ನು ಕಾಯಬೇಕು!
Team Udayavani, Oct 19, 2020, 5:20 AM IST
ಕೆಲವೊಮ್ಮೆ ವಿರೋಧ ಸನ್ನಿವೇಶಗಳೂ ಅವಕಾಶಗಳಾಗುತ್ತವೆ. ಆದರೆ ಅದು ಹಾಗೆ ಪರಿವರ್ತಿಸಿ ಕೊಳ್ಳುವವರ ಸಾಮರ್ಥ್ಯವನ್ನು ಅವಲಂಬಿಸಿರುತ್ತದೆ. ನಿತೀಶರಿಗೆ ಆ ಸಾಮರ್ಥ್ಯ ಇದೆ ಎನ್ನುವುದಕ್ಕೆ ಅವರ ರಾಜಕೀಯ ಇತಿಹಾಸ ಸಾಕ್ಷಿ. ಜಾತಿ ಹಾಗೂ ಅಪರಾಧ ರಾಜಕಾರಣದ ಪೋಷಕನೆಂಬ ಕುಖ್ಯಾತಿಯನ್ನು ಅಂಟಿಸಿಕೊಳ್ಳುತ್ತಿರುವ ತೇಜಸ್ವಿ ಯಾದವ್ ಮುಖ್ಯಮಂತ್ರಿಯಾದರೆ ಮತ್ತೆ ಜಂಗಲ್‌ರಾಜ್ ಪ್ರತಿಷ್ಠಾಪನೆಯಾ ದೀತೆಂಬ ಸಣ್ಣದೊಂದು ಅಳುಕೂ ಸಹ ನಿತೀಶರಿಗೆ ಆಸರೆಯಾಗಿದೆ. ಇಂಥ ಹಲವು ಹುಲ್ಲುಕಡ್ಡಿಗಳು ಕೈ ಹಿಡಿಯಬೇಕಷ್ಟೇ.
ಬಿಹಾರವೀಗ ಸಮರ ಕಣ. ಪ್ರಜಾತಂತ್ರದ ಸತ್ವ ಪರೀಕ್ಷೆಗೆ ಸಿದ್ಧವಾಗಿರುವ ಅಖಾಡ. ಅಕ್ಟೋಬರ್ 28ರಿಂದ ನವೆಂಬರ್ 3ರವರೆಗೆ ನಡೆಯುವ ಕೊರೊನೋತ್ತರ ಭಾರತದ ಮೊದಲ ಸಾರ್ವತ್ರಿಕ ಚುನಾವಣೆಗೆ ವೇದಿಕೆಯೇನೋ ಸಿದ್ಧವಾಗಿದೆ. ಈ ಚುನಾವಣೆ ಹಲವಾರು ಹೊಸ ಬೆಳವಣಿಗೆಗಳಿಗೆ ಸಾಕ್ಷ್ಯವಾಗುವಂಥದ್ದು. ಒಂದು ವೇಳೆ ಈಗಿನ ಮುಖ್ಯಮಂತ್ರಿ ಎನ್‌ಡಿಎ ಕೂಟದ ನಿತೀಶ್ ಕುಮಾರ್ ಗೆದ್ದರೆ ಬಹುಶಃ ಹಿಂದಿ ರಾಜ್ಯಗಳ ಸುದೀರ್ಘ ಅವಧಿಯ ಆಡಳಿತವನ್ನು ನಡೆಸಿದ ಕೀರ್ತಿಗೆ ಭಾಜನರಾಗುತ್ತಾರೆ. ಆಕಸ್ಮಾತ್ ಯುಪಿಎ ಬಣ ಗೆದ್ದರೆ ತೇಜಸ್ವಿ ಯಾದವ್ (ಮುಖ್ಯಮಂತ್ರಿ ಅಭ್ಯರ್ಥಿ) ಅತ್ಯಂತ ಯುವ ಮುಖ್ಯಮಂತ್ರಿಯಾಗಿ ಹೊರಹೊಮ್ಮುತ್ತಾರೆ. ಅಲ್ಲಿಗೆ ಹದಿನೈದು ವರ್ಷಗಳ ರಾಜಕೀಯ ಒಂದು ಮಗ್ಗುಲು ಬದಲಿಸಿದಂತೆ.
ಪ್ರಾದೇಶಿಕ ಪಕ್ಷಗಳ ಅಖಾಡವಾಗಿರುವ ಬಿಹಾರದಲ್ಲಿ ಸದ್ಯ ರಾಷ್ಟ್ರೀಯ ಪಕ್ಷಗಳಿಗೆ ಜತೆಗೂಡಿ ಸಾಗುವುದಷ್ಟೇ ಇರುವ ಕೆಲಸ. 1990ರವರೆಗೆ ಕಾಂಗ್ರೆಸ್ ಪಕ್ಷದ ಅಧಿಪತ್ಯ ಇತ್ತಾದರೂ (1977ರಿಂದ 80ರವರೆಗಿನ ಜನತಾಪಕ್ಷದ ಆಡಳಿತ ಹೊರತುಪಡಿಸಿ) ಬಳಿಕ ಪ್ರಾದೇಶಿಕ ಪಕ್ಷಗಳ ಪಾರಮ್ಯ ಆರಂಭವಾಯಿತು. 2005ರವರೆಗೆ ಲಾಲೂ ಪ್ರಸಾದ್ ಯಾದವ್ ನೇತೃತ್ವದ ರಾಷ್ಟ್ರೀಯ ಜನತಾದಳ ಆಡಳಿತ ನಡೆಸಿ ದರೆ, ಆ ಬಳಿಕ ಇದುವರೆಗೆ ನಿತೀಶ್ ಕುಮಾರ್ ನೇತೃತ್ವದ ಜನತಾದಳ (ಯು) ಅಧಿಕಾರದಲ್ಲಿದೆ. ಈ ಸಂದರ್ಭದಲ್ಲಿ ರಾಷ್ಟ್ರೀಯ ಪಕ್ಷಗಳು ತಮ್ಮದೇ ಆದ ಅಸ್ತಿತ್ವವನ್ನು ಉಳಿಸಿಕೊಳ್ಳಲು ಪ್ರಯತ್ನಿಸಿವೆಯಾದರೂ ಸ್ವತಂತ್ರವಾಗಿ ಅಧಿಕಾರ ಗಳಿಸಲು ಸಾಧ್ಯವಾಗಿಲ್ಲ. ಹದಿನಾರನೇ ವಿಧಾನಸಭೆಗೆ ಪ್ರಸ್ತುತ ಎರಡೂ ಕೂಟಗಳು (ಎನ್‌ಡಿಎ ಮತ್ತು ಯುಪಿಎ) ತಮ್ಮ ಮುಖ್ಯಮಂತ್ರಿ ಅಭ್ಯರ್ಥಿಗಳನ್ನು ಪ್ರಕಟಿಸಿವೆ. ಬಿಜೆಪಿ ನೇತೃತ್ವದ ಎನ್‌ಡಿಎ ಅಭ್ಯರ್ಥಿ ನಿತೀಶ್ ಕುಮಾರ್. ಯುಪಿಎ ಅಭ್ಯರ್ಥಿ ತೇಜಸ್ವಿ ಯಾದವ್. ಇವೆರಡೂ ರಾಷ್ಟ್ರೀಯ ಪಕ್ಷಗಳ ಅನಿವಾರ್ಯ ಆಯ್ಕೆಗಳು.
ಪ್ರಸ್ತುತ ಎನ್‌ಡಿಎದಲ್ಲಿ ನಿತೀಶ್ ಕುಮಾರ್‌ಗೆ ಪೈಪೋಟಿ ನೀಡುವ ಅಭ್ಯರ್ಥಿಯಿಲ್ಲ. ಅಷ್ಟೇ ಅಲ್ಲ. ಎನ್‌ಡಿಎ ಕೂಟದ ಪ್ರಮುಖ ಪಕ್ಷವಾದ ಬಿಜೆಪಿಗೂ ಮತ್ತೆ ಗೆಲ್ಲುತ್ತೇವೆಂಬ ಪೂರ್ಣ ವಿಶ್ವಾಸವಿಲ್ಲ. ಅದಕ್ಕೆಂದೇ ಹೆಚ್ಚು ಆಲೋಚಿಸದೇ ಮುಖ್ಯಮಂತ್ರಿ ಸ್ಥಾನವನ್ನು ಜೆಡಿಯುನ ನಿತೀಶ್ ಕುಮಾರ್‌ಗೆ ಬಿಟ್ಟು ಕೊಡಲಾಗಿದೆ. ಈಗಾಗಲೇ ಸುಮಾರು 14 ವರ್ಷಗಳ ಕಾಲ ಆಡಳಿತ ನಡೆಸಿರುವ ನಿತೀಶ್‌ಗೂ ಈ ಬಾರಿ ಗೆದ್ದು ಬಂದರೆ ಬೋನಸ್. ಎನ್‌ಡಿಎಗೂ ಅಷ್ಟೇ. ಆದರೆ ಆರ್‌ಜೆಡಿಗೆ ಹಾಗಲ್ಲ. ಗೆದ್ದು ಬರುವ ಮೂಲಕ ತನ್ನ ಅಧಿಪತ್ಯದ ಯುವ ಪರ್ವವನ್ನು ಆರಂಭಿಸುವ ಸಮರೋತ್ಸಾಹವಿದೆ. ಅದಕ್ಕೆಂದೇ ಯಾದವ ಸಮುದಾಯದಲ್ಲಿ ಹೆಚ್ಚು ಜನಪ್ರಿಯವಾಗಿರುವ ಲಾಲೂ ಪ್ರಸಾದ್ ಯಾದವ್ ಅವರ ಎರಡನೆ ಮಗ ತೇಜಸ್ವಿ ಯಾದವ್ ಅವರನ್ನು ಸಿಎಂ ಅಭ್ಯರ್ಥಿಯಾಗಿ ಪ್ರಕಟಿಸಿರುವುದು. ಕಾಂಗ್ರೆಸ್ ನೇತೃತ್ವದ ಯುಪಿಎಗೂ ಗತ್ಯಂತರವಿಲ್ಲ, ಕೆಲವೇ ರಾಜ್ಯಗಳಲ್ಲಿ ಅಧಿಕಾರವನ್ನು ಹೊಂದಿರುವ ಕಾಂಗ್ರೆಸ್‌ಗೆ ಗಟ್ಟಿಯಾದ ಧ್ವನಿಯಲ್ಲಿ ವಿರೋಧಿಸುವ ಶಕ್ತಿಯಿಲ್ಲ; ಜತೆಗೆ ಮಹಾಘಟಬಂಧನದ ಆಯ್ಕೆ.
ಎಲ್ಲವೂ ಸರಿ ಇಲ್ಲ
ಸುಮಾರು ಹದಿನೈದು ವರ್ಷಗಳ ಲಾಲೂ ಪ್ರಸಾದ್ ಯಾದವ್‌ರ ಜಂಗಲ್ ರಾಜ್‌ನ್ನು ಕೊನೆಗೊಳಿಸಿ ಸುಶಾಸನ ತರಲು ಪ್ರತಿಷ್ಠಾಪನೆಯಾದವರು ನಿತೀಶ್ ಕುಮಾರ್. ಮೊದಲ ಐದು ವರ್ಷ ಅವಧಿಯಲ್ಲಿ ನಿತೀಶ್ ಕುಮಾರ್‌ಗೆ ಕೀರ್ತಿ ಮತ್ತು ಜನಪ್ರಿಯತೆ ತಂದುಕೊಟ್ಟಿದ್ದು ಸುಶಾಸನ. ಜನಪ್ರಿಯತೆ ಮತ್ತು ಜಾತಿ-ಸಮುದಾಯ ಓಲೈಸುವಿಕೆಯಷ್ಟೇ ರಾಜಕಾರಣ ಎಂಬಂತಿದ್ದ ಕಾಲದಲ್ಲಿ ಅಭಿವೃದ್ಧಿ ಕುರಿತ ಚರ್ಚೆ ಆರಂಭಿಸಿದ್ದು ನಿತೀಶರೇ. ಮರು ಆಯ್ಕೆಗೂ ಮೆಟ್ಟಿಲಾದದ್ದು ಅದೇ. ಮೂರನೇ ಅವಧಿ (2015)ಯಲ್ಲಿ ಕೆಲವು ಮಹಾತ್ವಾಕಾಂಕ್ಷೆಯ ಕಾರಣಗಳಿಗಾಗಿ ಎನ್‌ಡಿಎ ಬಿಟ್ಟು ಕಾಂಗ್ರೆಸ್‌ನ ಯುಪಿಎ ಗೆ ಹೋದರೂ ಎರಡೇ ವರ್ಷದಲ್ಲಿ ಮರಳಿ ಎನ್‌ಡಿಎ ತೆಕ್ಕೆಗೆ ಬಂದರು. ಈಗಲೂ ಅವರ ಮೇಲೆ ಜನ ಇಟ್ಟಿರುವ ಪ್ರೀತಿ ಒಂದೇ ಕಾರಣಕ್ಕೆ-ಜಂಗಲ್ ರಾಜ್ ಕೊನೆಗೊಳಿಸಿದ್ದು. ಆದರೀಗ ಮೂರನೇ ಅವಧಿಯಲ್ಲಿ ನಿತೀಶ್ ಕುಮಾರ್‌ರ ಮುಖಕ್ಕೂ ಕೆಸರು ರಾಚಿದೆ. ಜತೆಗೆ ಅವರ ವರ್ಚಸ್ಸು ಸಾಕಷ್ಟು ಕುಂದಿರುವುದು ಸ್ಪಷ್ಟ. ಅದೇ ಕಾರಣಕ್ಕೆ ಆಡಳಿತ ವಿರೋಧಿ ಅಲೆ ಸ್ಪಷ್ಟವಾಗಿದೆ.
ಕೋವಿಡ್ ಸಂದರ್ಭದಲ್ಲಿ ಊರಿಗೆ ವಾಪಸಾಗಲು ಬಯಸಿದ 20 ಲಕ್ಷ ಬಿಹಾರಿಗಳನ್ನು ಮನಃ ಪೂರ್ವಕವಾಗಿ ಸ್ವಾಗತಿಸಲಿಲ್ಲ ಎಂಬ ಅಪವಾದ ನಿತೀಶರ ಮೇಲಿದೆ. ಜತೆಗೆ ತರುವಾಯ ಸೃಷ್ಟಿಯಾದ ನಿರುದ್ಯೋಗ ಸಮಸ್ಯೆ ನಿರ್ವಹಣೆ, ಕೋವಿಡ್ 19 ಪರಿಸ್ಥಿತಿಯ ನಿರ್ವಹಣೆಯಲ್ಲಿನ ವೈಫಲ್ಯ, ಪಕ್ಷದೊಳಗಿನ ಒಳಜಗಳ, ಟಿಕೆಟ್ ಹಂಚಿಕೆಯಲ್ಲಿ ಆಗಿರುವ ಲೋಪ (ಪ್ರತಿ ಚುನಾವಣೆಯಲ್ಲೂ ಇದು ಸಾಮಾನ್ಯವಾದರೂ, ಎಷ್ಟೋ ಬಾರಿ ಬಂಡಾಯಗಾರರು ಮತ್ತು ಅವರು ಕಟ್ಟಿಕೊಳ್ಳುವ ಆ ಹೊತ್ತಿನ ಪಕ್ಷಗಳು ಮತ್ತೂಬ್ಬರ ಮಹಾತ್ವಾಕಾಂಕ್ಷೆಯ ದೋಣಿಯನ್ನು ಮುಳುಗಿಸಬಲ್ಲವು ಎಂಬುದು ಸಾಬೀತಾಗಿರುವ ಅಂಶ), ಕೆಲವು ಹಿರಿಯ ನಾಯಕರ ಮನಸ್ತಾಪ. ಅದರೊಂದಿಗೆ ಸ್ವಲ್ಪ ಆಸರೆಯಾಗಬಹುದಾಗಿದ್ದ ರಾಮ್ ವಿಲಾಸ್ ಪಾಸ್ವಾನ್ ಅವರ ಲೋಕಶಕ್ತಿ ಜನತಾದಳ (ಎಲ್‌ಜೆಪಿ) ಸ್ವತಂತ್ರವಾಗಿ ಸ್ಪರ್ಧಿಸಿರುವುದು-ನಿತೀಶರಿಗೆ ಚಿಂತೆಗೀಡುಮಾಡಿರುವ ಅಂಶಗಳು.
ಇತ್ತೀಚೆಗೆ ಮಾಧ್ಯಮ ಸಮೂಹಗಳ ಪರವಾಗಿ ನಡೆಸಿದ ಸಮೀಕ್ಷೆ ಪ್ರಕಾರವೂ ನಿತೀಶ್ ಪರ ಪ್ರಬ ಲವಾದ ಅಲೆ ಇಲ್ಲ. ಆದರೆ ಬಿಹಾರದ ಜನ ಗೊಂದಲ ದಲ್ಲಿದ್ದಾರೆ. ಆ ಸಮೀಕ್ಷೆ ಪ್ರಕಾರ ಶೇ. 84ರಷ್ಟು ಮಂದಿಗೆ ನಿತೀಶ್ ಮೇಲೆ ಅಪಾರವಾದ ಸಿಟ್ಟಿದೆ. ಹಾಗೆಂದು ಇದರಲ್ಲೇ ಸುಮಾರು ಶೇ. 30 ಮಂದಿ ಅವರೇ ಮುಖ್ಯಮಂತ್ರಿಯಾಗಲಿ ಎನ್ನುತ್ತಿದ್ದಾರೆ. ನಿಜ, ಶೇ. 54 ರಷ್ಟು ಮಂದಿ ಬದಲಾವಣೆಯನ್ನು ಬಯ ಸುತ್ತಿರಬಹುದು. ಆದರೆ, ಪ್ರಾದೇಶಿಕ ನೆಲೆಯಲ್ಲಿ ಕೊನೆ ಹಂತದಲ್ಲಿ ಮತಗಳ ಧ್ರುವೀಕರಣವಾಗುವುದು ಎರಡೇ ಕಾರಣಕ್ಕೆ. ಒಂದು- ಜಾತಿ ಲೆಕ್ಕಾಚಾರ. ಎರಡನೆ ಯದು-ಪ್ರಾದೇಶಿಕ ಲೆಕ್ಕಾಚಾರ. ಯಾದ ವರು-ಮುಸ್ಲಿಮರು ಒಂದೇ ಕಡೆ ನಿಂತರೂ ಉಳಿದ ಹಿಂದುಳಿದ ವರ್ಗದ ಎಲ್ಲರೂ ಇದೇ ಗುಂಪಿನಲ್ಲಿ ಗುರುತಿಸಿಕೊಳ್ಳುವಂಥ ಚಿತ್ರಣ ಸದ್ಯ ಬಿಹಾರದಲ್ಲಿಲ್ಲ.
ಕೆಲವೊಮ್ಮೆ ವಿರೋಧ ಸನ್ನಿವೇಶಗಳೂ ಅವಕಾಶ ಗಳಾಗುತ್ತವೆ. ಆದರೆ ಅದು ಹಾಗೆ ಪರಿವರ್ತಿಸಿ ಕೊಳ್ಳುವವರ ಸಾಮರ್ಥಯವನ್ನು ಅವಲಂಬಿಸಿರುತ್ತದೆ. ನಿತೀಶರಿಗೆ ಆ ಸಾಮರ್ಥಯ ಇದೆ ಎನ್ನುವುದಕ್ಕೆ ಅವರ ರಾಜಕೀಯ ಇತಿಹಾಸ ಸಾಕ್ಷಿ. ಅದಕ್ಕೆ ಪೂರಕವಾದ ಸಂಗತಿಗಳೂ ಸಾಕಷ್ಟಿವೆ. ಖಾಸಗಿ ಕ್ಷೇತ್ರದಲ್ಲೂ ಮೀಸಲು ಸೇರಿದಂತೆ ಕೆಲವು ಉಪಕ್ರಮಗಳು ನಿತೀಶರ ಪರವೂ ಹಿಂದುಳಿದ ವರ್ಗ ಕೊಂಚ ವಾಲುವಂತೆ ಮಾಡಿದೆ. ಇದಲ್ಲದೇ, ಲಾಲೂ ಪ್ರಸಾದ್ ಯಾದವ್ ಮತ್ತು ಕುಟುಂಬದ ಅಧಿಕಾರದ ಸಂದರ್ಭದಲ್ಲಿನ ಅರಾಜಕತೆ, ಸರ್ವಾಧಿಕಾರ ಧೋರಣೆಯ ಪರಿಣಾಮಗಳನ್ನು ಜನರು ಇನ್ನೂ ಮರೆತಿಲ್ಲ. ಈಗಾಗಲೇ ಜಾತಿ ಹಾಗೂ ಅಪರಾಧ ರಾಜಕಾರಣದ ಪೋಷಕನೆಂಬ ಕುಖ್ಯಾತಿಯನ್ನು ಅಂಟಿಸಿಕೊಳ್ಳುತ್ತಿರುವ ತೇಜಸ್ವಿ ಯಾದವ್ ಮುಖ್ಯಮಂತ್ರಿಯಾದರೆ ಮತ್ತೆ ಜಂಗಲ್‌ರಾಜ್ ಪ್ರತಿಷ್ಠಾಪನೆಯಾದೀತೆಂಬ ಸಣ್ಣದೊಂದು ಅಳುಕೂ ಸಹ ನಿತೀಶರಿಗೆ ಆಸರೆಯಾಗಿದೆ.
ಇಂಥ ಹಲವು ಹುಲ್ಲುಕಡ್ಡಿಗಳು ಕೈ ಹಿಡಿಯ ಬೇಕಷ್ಟೇ. ಹೀಗೆ ಹಲವು ಹುಲ್ಲುಕಡ್ಡಿಗಳು ನಿತೀಶರನ್ನು ಅಧಿಕಾರದ ದಡಕ್ಕೆ ತಲುಪಿಸಿದರೆ ಅದು ಅವರಿಗೆ ರಾಜಕೀಯ ಪುನರ್‌ಜನ್ಮವಷ್ಟೇ ಅಲ್ಲ; ಮತ್ತೂಂದು ಮಹಾತ್ವಾಕಾಂಕ್ಷೆಯ ಮೆಟ್ಟಿಲೇರಲು ಸಿಗುವ ಅವಕಾಶವೂ ಹೌದು.
ಅರವಿಂದ ನಾವಡ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Border-Gavaskar Test series ಇಂದಿನಿಂದ: ಹೋರಾಟಕ್ಕೆ ಭಾರತ-ಆಸ್ಟ್ರೇಲಿಯ ಸಿದ್ಧ
New Delhi: ರಾಷ್ಟ್ರ ರಾಜಧಾನಿಗೆ ನಂದಿನಿ ಲಗ್ಗೆ: ಹೈನುಗಾರರಿಗೂ ಸಿಗಲಿ ಮನ್ನಣೆ
Yasin Malik ವಿಚಾರಣೆಗೆ ತಿಹಾರ್ ಜೈಲಿನಲ್ಲೇ ಕೋರ್ಟ್ ರೂಂ: ಸುಪ್ರೀಂ
General Motors;1,000 ಉದ್ಯೋಗಿಗಳು ಕೆಲಸದಿಂದ ವಜಾ
Tallest and shortest; ವಿಶ್ವದ ಅತೀ ಕುಬ್ಜ, ಅತೀ ಎತ್ತರದ ಮಹಿಳೆಯರ ಸಮಾಗಮ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.