ಕೇಡರ್ ಅಸಮಾಧಾನ ದೂರವಾಗಲಿದೆಯೇ?
Team Udayavani, May 8, 2017, 12:28 AM IST
ಪಕ್ಷದೊಳಗೆ ಕುದಿಯುತ್ತಿದ್ದ ಆಂತರಿಕ ಭಿನ್ನಮತದ ನಡುವೆಯೂ ಬಿಜೆಪಿ ರಾಜ್ಯ ಕಾರ್ಯಕಾರಿಣಿ ಯಾವುದೇ ಗೊಂದಲಗಳು ಉಂಟಾಗದೆ ಪೂರ್ಣಗೊಂಡಿದೆ. ಕೇಡರ್ ಆಧರಿತ ಪಕ್ಷ ಎಂದು ವಿಪಕ್ಷಗಳಿಂದಲೂ ಹೊಗಳಿಸಿಕೊಳ್ಳುತ್ತಿರುವ ಬಿಜೆಪಿಯಲ್ಲಿ ಉಂಟಾಗಿದ್ದ ಆ ಮೂಲ ಕಾರ್ಯಕರ್ತರ ಪಡೆಗೆ ಆಗಿರುವ ಅಸಮಾಧಾನ ಹೋಗಲಾಡಿಸುವ ತಕ್ಕಮಟ್ಟಿನ ಪ್ರಯತ್ನಗಳು ನಡೆದಿವೆ. ಸದ್ಯಕ್ಕೆ ವರಿಷ್ಠರ ಮುಂದಿರುವ ಸವಾಲು ಮುಖಂಡರ ಅಸಮಾಧಾನ ಹೋಗಲಾಡಿಸುವುದು. ಮುಂದಿನ ಚುನಾವಣೆಯಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲಿದೆ ಎಂಬ ವಾತಾವರಣ ಇರುವಾಗ ಅದೇನೂ ಕಷ್ಟದ ಕೆಲಸವಾಗುವುದಿಲ್ಲ. ಒಟ್ಟಿನಲ್ಲಿ ಬಿಕ್ಕಟ್ಟು ಬಗೆಹರಿಸಲು ದಾರಿಯೊಂದು ಅವರಿಗೆ ಸಿಕ್ಕಂತಾಗಿದೆ.
‘ಕಾಂಗ್ರೆಸ್ ಜನ ಸಮೂಹದ ಪಕ್ಷ ಎಂಬ ಹಳೆಯ ಮಾನದಂಡವನ್ನೇ ಇಟ್ಟುಕೊಂಡು ಮುಂದುವರಿದರೆ ತನ್ನದೇ ಆದ ಕೇಡರ್ ಹೊಂದಿರುವ ಬಿಜೆಪಿಗೆ ಚುನಾವಣೆಯಲ್ಲಿ ಸ್ಪರ್ಧೆ ಒಡ್ಡುವುದು ಕಷ್ಟ. ಪ್ರಸ್ತುತ ದೇಶವನ್ನು ಆಳುತ್ತಿರುವ ಮತ್ತು ಹಲವು ರಾಜ್ಯಗಳಲ್ಲಿ ಅಧಿಕಾರದಲ್ಲಿರುವ ಬಿಜೆಪಿ ಕೇಡರ್ (ಮೂಲ ಪಡೆ) ಹೊಂದಿರುವ ಪಕ್ಷ. ತಳ ಮಟ್ಟದಿಂದಲೂ ಅದಕ್ಕೆ ಕೇಡರ್ ಇದೆ. ಅದರ ಆಧಾರದ ಮೇಲೆ ಅವರು ಬೆಳೆಯುತ್ತಿದ್ದಾರೆ. ಆದ್ದರಿಂದ ಪಕ್ಷದ ಸಿದ್ಧಾಂತ, ಕಾರ್ಯಕ್ರಮ, ನಾಯಕತ್ವದ ಜತೆಗೆ ಕೇಡರ್ ಕೂಡ ಅಷ್ಟೇ ಮುಖ್ಯ’.
ಕೆಲ ದಿನಗಳ ಹಿಂದೆ ಕಾಂಗ್ರೆಸ್‌ನ ಹಿರಿಯ ನಾಯಕ, ಕಂದಾಯ ಸಚಿವ ಕಾಗೋಡು ತಿಮ್ಮಪ್ಪ ಅವರು ಹೇಳಿದ ಈ ಮಾತು ಕಾಂಗ್ರೆಸ್‌ಗೆ ನೀಡಿದ ಎಚ್ಚರಿಕೆ ಗಂಟೆಯಾದರೂ ಅದರಲ್ಲಿ ಬಿಜೆಪಿಯ ಇದುವರೆಗಿನ ಗೆಲುವಿನ ವಿಶ್ಲೇಷಣೆಯೂ ಇದೆ ಎಂಬುದು ಸ್ಪಷ್ಟ. ಒಂದೊಮ್ಮೆ ಸಂಸತ್ತಿನಲ್ಲಿ ಕೇವಲ ಎರಡೇ ಸ್ಥಾನಗಳನ್ನು ಹೊಂದಿದ್ದ ಬಿಜೆಪಿ ಇಂದು ಕೇಂದ್ರದಲ್ಲಿ ಮತ್ತು 17 ರಾಜ್ಯಗಳಲ್ಲಿ ಅಧಿಕಾರ ಹೊಂದಿದೆ ಎಂದಾದರೆ ಅದಕ್ಕೆ ಪಕ್ಷದ ಕಾರ್ಯಕರ್ತರ ಪಡೆ ಪ್ರಮುಖ ಕಾರಣ ಎಂಬುದನ್ನು ಎಲ್ಲರೂ ಒಪ್ಪಿಕೊಳ್ಳುತ್ತಾರೆ. ರಾಷ್ಟ್ರೀಯ ಸ್ವಯಂ ಸೇವಕ ಸಂಘದಲ್ಲಿ ಕಲಿತ ಶಿಸ್ತನ್ನು ಕಾರ್ಯಕರ್ತರು ಪಕ್ಷ ಸಂಘಟನೆಯಲ್ಲೂ ತೋರಿಸಿದ್ದರ ಪರಿಣಾಮ ಈ ಸಾಧನೆ ಸಾಧ್ಯವಾಗಿದೆ. 2008ರಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದಿದ್ದರ ಹಿಂದೆಯೂ ಕೆಲಸ ಮಾಡಿದ್ದು ಈ ಮೂಲ ಕಾರ್ಯಕರ್ತರ ಪಡೆ ಅರ್ಥಾತ್ ಕೇಡರ್.
ಆದರೆ, ಇಂದು ರಾಜ್ಯ ಬಿಜೆಪಿಯಲ್ಲಿ ಉದ್ಭವಿಸಿರುವ ಭಿನ್ನಾಭಿಪ್ರಾಯಗಳಿಗೆ ಕಾರಣವಾಗಿರುವುದು ಕಾಗೋಡು ತಿಮ್ಮಪ್ಪ ಅವರು ಹೇಳಿದ ಬಿಜೆಪಿ ಕೇಡರ್ ಮತ್ತು ಮತ್ತು ಅಧಿಕಾರ ರಾಜಕಾರಣದ ನಡುವಿನ ಸ್ಪರ್ಧೆಯೇ ಹೊರತು ಬೇರೇನೂ ಅಲ್ಲ. ಪಕ್ಷದ ನಾಯಕತ್ವವು ಮೂಲ ಕಾರ್ಯಕರ್ತರನ್ನು ಮೂಲೆಗುಂಪು ಮಾಡುತ್ತಿದೆ ಎಂಬುದು ಪಕ್ಷದ ಒಂದು ಗುಂಪು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರ ವಿರುದ್ಧ ತಿರುಗಿಬಿದ್ದು ಬಿಕ್ಕಟ್ಟು ಸೃಷ್ಟಿಯಾಗುವಂತಾಯಿತು. ಹಾಗೆಂದು ಇವರಿಗಿರುವ ಆಕ್ರೋಶ ಯಡಿಯೂರಪ್ಪ ಅವರ ವಿರುದ್ಧವಲ್ಲ, ಅವರ ಏಕಪಕ್ಷೀಯ ಧೋರಣೆಗಳ ವಿರುದ್ಧ. ಯಡಿಯೂರಪ್ಪ ಅವರನ್ನು ಮುಂದಿನ ಮುಖ್ಯಮಂತ್ರಿ, ನಮ್ಮ ನಾಯಕ ಎಂದು ಒಪ್ಪಿಕೊಂಡಿರುವ ಈ ಮುಖಂಡರಿಗೆ ಸಂಘಟನೆ ಜತೆಗೆ ನಾಯ ಕತ್ವ ಇದ್ದರೆ ಮಾತ್ರ ಅಧಿಕಾರಕ್ಕೆ ಬರಲು ಸಾಧ್ಯ ಎಂಬುದೂ ಅವರಿಗೆ ಗೊತ್ತಿದೆ. ಈ ಕಾರಣಕ್ಕಾಗಿಯೇ ನಿಮ್ಮೊಂದಿಗೆ ಸಂಘಟನೆಯನ್ನೂ ಕರೆದೊಯ್ಯಿರಿ ಎಂದು ಯಡಿಯೂರಪ್ಪ ಅವರನ್ನು ಒತ್ತಾಯಿಸುತ್ತಿದ್ದಾರೆ.
ಬಿಜೆಪಿಯಲ್ಲಿ ಮೂಲ ಕಾರ್ಯಕರ್ತರು ಮತ್ತು ನಾಯಕತ್ವ ಎರಡೂ ಬೇರೆ ಬೇರೆಯಾದರೆ ಇಬ್ಬರೂ ಸೋಲಬೇಕಾಗುತ್ತದೆ ಎಂಬುದಕ್ಕೆ 2013ರ ವಿಧಾನಸಭೆ ಚುನಾವಣೆ ಮತ್ತು ಎರಡೂ ಒಟ್ಟಿಗಿದ್ದರೆ ಗೆಲ್ಲಬಹುದು ಎಂಬುದಕ್ಕೆ 2014ರ ಲೋಕಸಭೆ ಚುನಾವಣೆಗಳೇ ಸಾಕ್ಷಿ. 2013ರ ಚುನಾವಣೆ ವೇಳೆ ಯಡಿಯೂರಪ್ಪ ಅವರು ಬಿಜೆಪಿ ತೊರೆದು ಕೆಜೆಪಿ ಕಟ್ಟಿದಾಗ ಕೇಡರ್ ಆಧಾರಿತ ಪಕ್ಷವಾದ ಬಿಜೆಪಿ ಗಳಿಸಿದ್ದು ಕೇವಲ 40 ಸ್ಥಾನವಾದರೆ, ಯಡಿಯೂರಪ್ಪ ನೇತೃತ್ವದ ಕೆಜೆಪಿ ಆರು ಸ್ಥಾನಕ್ಕೆ ತೃಪ್ತಿಪಟ್ಟುಕೊಳ್ಳಬೇಕಾಯಿತು. ಆದರೆ, ಮತ್ತೆ ನಾಯಕತ್ವ (ಯಡಿಯೂರಪ್ಪ) ಮತ್ತು ಸಂಘಟನೆ ಒಂದಾಗಿ ಕೇವಲ ಒಂದು ವರ್ಷದೊಳಗೆ ನಡೆದ ಲೋಕಸಭೆ ಚುನಾವಣೆಯಲ್ಲಿ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಇದ್ದರೂ 28 ಸ್ಥಾನಗಳ ಪೈಕಿ ಬಿಜೆಪಿ 17 ಸ್ಥಾನ ಗೆದ್ದಿತ್ತು. ಪ್ರಸ್ತುತ ಸಂಘಟನೆ ನಿರ್ಲಕ್ಷಿಸಲಾಗುತ್ತಿದೆ ಎನ್ನುವ ಗುಂಪು ನೀಡುತ್ತಿರುವ ಉದಾಹರಣೆಯೂ ಇದುವೇ ಆಗಿದೆ.
ಮೈಸೂರಿನಲ್ಲಿ ಎರಡು ದಿನಗಳ ಕಾಲ ನಡೆದ ರಾಜ್ಯ ಕಾರ್ಯಕಾರಿಣಿಯಲ್ಲೂ ಚರ್ಚೆಯಾಗಿದ್ದು ಇದೇ ವಿಚಾರಗಳು. ನೇರವಾಗಿ ಈ ವಿಚಾರ ಪ್ರಸ್ತಾಪವಾಗದಿದ್ದರೂ ಮುಂದಿನ ವರ್ಷ ನಡೆಯಲಿರುವ ವಿಧಾನಸಭೆ ಚುನಾವಣೆಗೆ ಸಂಘಟನೆ ಮತ್ತು ನಾಯಕತ್ವವನ್ನು ಒಟ್ಟಾಗಿ ಕೊಂಡೊಯ್ದು ಹೇಗೆ ಅಧಿಕಾರದ ಚುಕ್ಕಾಣಿ ಹಿಡಿಯಬೇಕು ಎಂಬುದೇ ಎರಡು ದಿನಗಳಲ್ಲಿ ಪಕ್ಷ ಸಂಘಟನೆ ಕುರಿತಂತೆ ನಡೆದ ಚರ್ಚೆಯ ಒಟ್ಟಾರೆ ತಾತ್ಪರ್ಯ. ಸಂಘಟನೆ ಕುರಿತ ಚರ್ಚೆಗೆ ಆದ್ಯತೆ ಸಿಗಬೇಕು ಎಂಬ ಕಾರಣಕ್ಕಾಗಿಯೇ ಪಕ್ಷದ ಆಂತರಿಕ ಬಿಕ್ಕಟ್ಟಿನ ಕುರಿತು ಯಾರೂ ಸೊಲ್ಲೆತ್ತಬಾರದು ಎಂದು ವರಿಷ್ಠರು ಮೊದಲೇ ಸೂಚನೆ ನೀಡಿದ್ದರು. ಶಿಸ್ತು ಕ್ರಮಕ್ಕೆ ಹೆದರಿ ಮುಖಂಡರು ಅದನ್ನು ಪಾಲಿಸಿದರಾದರೂ ಕಾರ್ಯಕಾರಿಣಿಯಲ್ಲಿ ಹೊರಹೊಮ್ಮಿದ ಫಲಿತಾಂಶ ಸಂಘಟನೆಯ ಪರವಾಯಿತು ಎಂಬುದಕ್ಕೆ ಕೈಗೊಂಡ ನಿರ್ಣಯಗಳೇ ಸಾಕ್ಷಿಯಾಗಿ ಕಣ್ಣಮುಂದಿದೆ.
ರಾಜ್ಯ ಬಿಜೆಪಿಯಲ್ಲಿ ಮೂಡಿರುವ ಬಿಕ್ಕಟ್ಟಿಗೆ ಮದ್ದರೆಯಲು ವರಿಷ್ಠರು ವಿಳಂಬ ಧೋರಣೆ ಅನುಸರಿಸಲು ಕಾರ್ಯಕಾರಿಣಿ ಕೂಡ ಕಾರಣವಾಗಿರಬಹುದು ಎಂಬುದು ಅದರಿಂದ ಹೊರಹೊಮ್ಮಿದ ಫಲಿತಾಂಶದಿಂದ ಗೊತ್ತಾಗುತ್ತಿದೆ. ಸಂಧಾನ, ಎಚ್ಚರಿಕೆ ಮೂಲಕ ಭಿನ್ನಮತ ಬಗೆಹರಿಸಲು ಪ್ರಯತ್ನಿಸಿ ಅದು ಸಫಲವಾದರೂ ಒಳಗೊಳಗೇ ಅದು ಕುದಿಯುತ್ತಲೇ ಇರುತ್ತದೆ. ಯಾವುದೇ ಸಂದರ್ಭದಲ್ಲೂ ಅದು ಮತ್ತೆ ಸ್ಫೋಟವಾಗಬಹುದು. ಅದಕ್ಕೆ ಮುನ್ನ ಎಲ್ಲರೂ ಒಟ್ಟು ಸೇರಿ ಕುಳಿತು ಚರ್ಚಿಸಲಿ. ಆಗ ಭಿನ್ನಮತ ಶಮನವಾಗಬಹುದು. ಇಲ್ಲದಿದ್ದರೆ ಎಲ್ಲರ ಮನೋಭಾವ, ಗುರಿ, ಉದ್ದೇಶ ಸ್ಪಷ್ಟವಾಗುತ್ತದೆ. ಅದನ್ನು ಆಧರಿಸಿ ಬಿಕ್ಕಟ್ಟು ಶಮನಕ್ಕೆ ಸೂತ್ರಗಳನ್ನು ಸಿದ್ಧಪಡಿಸಬಹುದು ಎಂಬ ಕಾರಣಕ್ಕೆ ಕಳೆದ ಒಂದು ತಿಂಗಳಿನಿಂದ ವರಿಷ್ಠರು ಕಾದು ನೋಡುವ ನಿರ್ಧಾರಕ್ಕೆ ಬಂದಿದ್ದರು.
ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಅಭ್ಯರ್ಥಿಯನ್ನಾಗಿ ನೇಮಿಸಿ ಪಕ್ಷದ ನಾಯಕತ್ವ ವಹಿಸಿದ್ದು ಕೆಲವರಿಗೆ ಇಷ್ಟವಿಲ್ಲ. ಹೀಗಾಗಿಯೇ ಬಿಕ್ಕಟ್ಟು ಸೃಷ್ಟಿಯಾಯಿತು ಎಂಬುದಾಗಿ ಬಿಂಬಿಸಲು ಇದುವರೆಗೆ ಪ್ರಯತ್ನ ನಡೆಯುತ್ತಿತ್ತು. ನಮ್ಮ ವಿರೋಧ ಯಡಿಯೂರಪ್ಪ ಅವರಿಗೆ ಅಲ್ಲ, ಮೂಲ ಕಾರ್ಯಕರ್ತರನ್ನು ದೂರವಿಡುತ್ತಿರುವ ಅವರ ಏಕಪಕ್ಷೀಯ ತೀರ್ಮಾನಗಳಿಗೆ ಎಂದು ಅಸಮಾಧಾನಿತರು ಪದೇ ಪದೇ ಹೇಳುತ್ತಿದ್ದರೂ ಸಂಖ್ಯಾಬಲ ಕಡಿಮೆ ಇದ್ದುದರಿಂದ ಅವರ ಮಾತನ್ನು ಕೇಳುವ ಪರಿಸ್ಥಿತಿಯಲ್ಲಿ ಯಾರೂ ಇರಲಿಲ್ಲ. ಆದರೆ, ಕಾರ್ಯಕಾರಣಿಯಲ್ಲಿ ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಪರಿಗಣಿಸಿದ್ದು, ಅವರ ನಾಯಕತ್ವದ ಬಗ್ಗೆ ಯಾರಿಗೂ ಭಿನ್ನಾಭಿಪ್ರಾಯವಿಲ್ಲ. ನಾಯಕತ್ವವು ಮೂಲ ಕಾರ್ಯಕರ್ತರನ್ನು ಸಂಘಟನೆಯೊಂದಿಗೆ ಜೋಡಿಸಿಕೊಂಡು ಹೋಗಬೇಕು ಎಂಬುದೇ ಪ್ರಮುಖ ಬೇಡಿಕೆ ಎಂಬುದು ಸ್ಪಷ್ಟವಾಗಿ ಹೊರಹೊಮ್ಮಿದೆ. ಇನ್ನು ಮುಂದೆ ಅದರ ಆಧಾರದ ಮೇಲೆ ರಾಜ್ಯ ಬಿಜೆಪಿಯಲ್ಲಿ ಮೂಡಿರುವ ಭಿನ್ನಮತ ಹೋಗಲಾಡಿಸಲು ರಾಷ್ಟ್ರೀಯ ನಾಯಕರಿಗೆ ದಾರಿ ಸಿಕ್ಕಿದಂತಾಗಿದೆ.
ಜಿಲ್ಲಾ ಪದಾಧಿಕಾರಿಗಳ ನೇಮಕ, ಅದರಲ್ಲೂ ಮುಖ್ಯವಾಗಿ ಜಿಲ್ಲಾ ಅಧ್ಯಕ್ಷರ ನೇಮಕದಲ್ಲಿ ಸಂಘಟನೆಯವರಿಗಿಂತ ಹೊಸಬರಿಗೆ ಆದ್ಯತೆ ನೀಡಲಾಗಿದೆ. ಅವರು ಮೂಲ ಕಾರ್ಯಕರ್ತರನ್ನು ಜತೆಗೂಡಿಕೊಂಡು ಕೆಲಸ ನಿರ್ವಹಿಸುತ್ತಿಲ್ಲ. ಹೀಗಾಗಿ ಸ್ಥಳೀಯ ಮಟ್ಟದಲ್ಲಿ ಸಂಘಟನೆ ಚುರುಕುಗೊಳಿಸುವ ಕಾರ್ಯ ಸರಿಯಾಗಿ ನಡೆಯುತ್ತಿಲ್ಲ ಎಂಬ ಆರೋಪಗಳಿಗೂ ಕಾರ್ಯಕಾರಿಣಿ ಪರಿಹಾರ ಕಂಡುಕೊಂಡಿದೆ. ಕೇಂದ್ರ ಸರ್ಕಾರದ ಸಾಧನೆಗಳು, ರಾಜ್ಯ ಸರಕಾರದ ವೈಫಲ್ಯಗಳನ್ನು ಜನರಿಗೆ ತಿಳಿಸುವ ಉದ್ದೇಶದಿಂದ ರಾಜ್ಯಾದ್ಯಂತ ಸುಮಾರು 10 ಸಾವಿರ ವಿಸ್ತಾರಕರನ್ನು ನೇಮಿಸಲು ನಿರ್ಧರಿಸಲಾಗಿದ್ದು, ಈ ಸಂದರ್ಭದಲ್ಲಿ ಸಂಘಟನೆಯ ಮೂಲ ಕಾರ್ಯಕರ್ತರಿಗೆ ಅವಕಾಶ ಸಿಗುತ್ತದೆ. ಅದೇ ರೀತಿ ಮುಂಬರುವ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಸ್ಥಳೀಯವಾಗಿ ಕಾರ್ಯಕರ್ತರ ಮೂಲಕ ಹಲವು ಕಾರ್ಯಕ್ರಮಗಳನ್ನು ರೂಪಿಸುವ ಬಗ್ಗೆಯೂ ತೀರ್ಮಾನ ಕೈಗೊಳ್ಳಲಾಗಿದೆ. ಆ ಮೂಲಕ ಮೂಲ ಕಾರ್ಯಕರ್ತರ ಅಸಮಾಧಾನಕ್ಕೆ ಪರಿಹಾರ ಸಿಕ್ಕಿದಂತಾಗಿದೆ. ಬರ ಪರಿಹಾರ ಕಾಮಗಾರಿ ವಿಚಾರದಲ್ಲಿ ನಾಲ್ಕು ತಂಡಗಳನ್ನು ರಚಿಸಲಾಗಿದ್ದು, ಇದರಲ್ಲಿ ಅಸಮಾಧಾನಿತ ಮುಖಂಡರಿಗೂ ಅವಕಾಶ ನೀಡಲಾಗಿದೆ.
ಹೀಗಾಗಿ ಸದ್ಯದ ಮಟ್ಟಿಗೆ ಮೂಲ ಕಾರ್ಯಕರ್ತರಲ್ಲಿ ಇದ್ದ ಅಸಮಾಧಾನ ಕೊಂಚ ತಿಳಿಯಾಗಿದ್ದು, ಮುಖಂಡರಲ್ಲಿ ಇರುವ ಅಸಮಾಧಾನ ಹೋಗಲಾಡಿಸುವುದಷ್ಟೇ ರಾಷ್ಟ್ರೀಯ ನಾಯಕರಿಗಿರುವ ಪ್ರಮುಖ ಸವಾಲು. ಮುಂಬರುವ ಚುನಾವಣೆಯಲ್ಲಿ ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ ಈ ಮುಖಂಡರಿಗೆ ಉತ್ತಮ ಸ್ಥಾನಮಾನ ಸಿಗುತ್ತದೆ. ಅದನ್ನೇ ಆಧಾರವಾಗಿಟ್ಟುಕೊಂಡು ಎಚ್ಚರಿಕೆ ಮೂಲಕ ಅವರನ್ನು ಹದ್ದುಬಸ್ತಿನಲ್ಲಿಡಲು ಸಾಧ್ಯವಾಗುತ್ತದೆ. ಅಸಮಾಧಾನಿತ ಮುಖಂಡರು ಸದ್ಯಕ್ಕೆ ಸಮಾಧಾನಗೊಳ್ಳುತ್ತಿರುವ ಕಾರ್ಯಕರ್ತರನ್ನು ಮತ್ತೆ ರೊಚ್ಚಿಗೇಳುವಂತೆ ಮಾಡಬಾರದು ಎಂಬ ಕಾರಣಕ್ಕೆ ಮುಖಂಡರು ಬಹಿರಂಗ ಹೇಳಿಕೆಗಳನ್ನು ನೀಡದಂತೆ ಕಾರ್ಯಕಾರಿಣಿ ಮೂಲಕ ವರಿಷ್ಠರು ಅವರಿಗೆ ಎಚ್ಚರಿಕೆ ಸಂದೇಶ ರವಾನಿಸಿದ್ದಾರೆ. ಒಟ್ಟಿನಲ್ಲಿ ರಾಜ್ಯ ಕಾರ್ಯಕಾರಿಣಿಯಲ್ಲಿ ಬಿಕ್ಕಟ್ಟು ಶಮನ ಆಗದೇ ಇದ್ದರೂ ಅದಕ್ಕೆ ದಾರಿ ರೂಪಿಸಿಕೊಳ್ಳುವಲ್ಲಿ ಬಿಜೆಪಿ ಸಫಲವಾಗಿದೆ. ಆ ದಾರಿಯಲ್ಲಿ ಯಾವ ರೀತಿ ಸಾಗುತ್ತದೆ ಎಂಬುದಷ್ಟೇ ಸದ್ಯ ಉಳಿದಿರುವ ಪ್ರಶ್ನೆ.
– ಪ್ರದೀಪ್ ಕುಮಾರ್ ಎಂ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
PoK ಪ್ರದೇಶದಲ್ಲಿ ಚಾಂಪಿಯನ್ಸ್ ಟ್ರೋಫಿ ಪಂದ್ಯಗಳು: ಬಿಸಿಸಿಐ ನಿಂದ ತೀವ್ರ ಖಂಡನೆ
Congress: ಸರ್ಕಾರದಲ್ಲಿ ಒಬ್ಬರು ಏತಿ ಅಂದರೆ ಮತ್ತೊಬ್ಬರು ಪ್ರೇತಿ ಅಂತಾರೆ: ಆರ್.ಅಶೋಕ್
50 cr for 50 Cong MLAs ; ಎಸ್ ಐಟಿ ತನಿಖೆಗೆ ಎಚ್.ಡಿ.ಕುಮಾರಸ್ವಾಮಿ ಒತ್ತಾಯ
‘Kanguva’; ಮೊದಲ ದಿನವೇ 58.62 ಕೋಟಿ ರೂ. ಬಾಚಿದ ಕಂಗುವ
Udupi: ಮೀನುಗಾರಿಕೆ ಕಾರ್ಮಿಕ ಸಾವು; ಪ್ರಕರಣ ದಾಖಲು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.