ಬಿಜೆಪಿಯ ಗಾಳಕ್ಕೆ ಸಿಲುಕುವುದೇ ತೆಲಂಗಾಣ?


Team Udayavani, Jul 4, 2022, 6:30 AM IST

ಬಿಜೆಪಿಯ ಗಾಳಕ್ಕೆ ಸಿಲುಕುವುದೇ ತೆಲಂಗಾಣ?

“ದಕ್ಷಿಣದ ರಾಜ್ಯಗಳಲ್ಲಿ ಪ್ರಾಬಲ್ಯ…’
ಇದು ಬಿಜೆಪಿಯ ಬಹುದಿನಗಳ ಕನಸು. ಉತ್ತರ, ಈಶಾನ್ಯ ಭಾರತದ ಬಳಿಕ ಈಗ ಮಹಾರಾಷ್ಟ್ರ ಕೂಡ ಬಿಜೆಪಿಯ ತೆಕ್ಕೆಗೆ ಬಂದಿದೆ. ಈ ಮೂಲಕ ದೇಶದ ವಾಯವ್ಯ ಭಾಗದಲ್ಲೂ ಕೇಸರಿ ಬಾವುಟ ಹಾರಿಸಿರುವ ಬಿಜೆಪಿಯ ಮುಂದಿನ ಟಾರ್ಗೆಟ್‌ “ದಕ್ಷಿಣ ಭಾರತ’.

ಈ ಗುರಿ ಸಾಧನೆಗೆ ಬಿಜೆಪಿಯು ಹೆಬ್ಟಾಗಿಲನ್ನಾಗಿ ಆಯ್ಕೆ ಮಾಡಿಕೊಂಡಿರುವುದು ತೆಲಂಗಾಣವನ್ನು. ಪಕ್ಷದ “ಮಿಷನ್‌ ತೆಲಂಗಾಣ’ದ ಭಾಗವಾಗಿಯೇ ತನ್ನ ಎರಡು ದಿನಗಳ ರಾಷ್ಟ್ರೀಯ ಕಾರ್ಯಕಾರಿಣಿಯನ್ನು ಹೈದರಾಬಾದ್‌ನಲ್ಲಿ ನಡೆಸಿದೆ. 2018ರ ವಿಧಾನಸಭೆ ಚುನಾವಣೆಯಲ್ಲಿ ಠೇವಣಿಯನ್ನೂ ಕಳೆದುಕೊಂಡು, ಕೇವಲ ಒಂದು ಸೀಟು ಗಳಿಸುವ ಮೂಲಕ “ತೆಲಂಗಾಣದಲ್ಲಿ ಭವಿಷ್ಯವಿಲ್ಲದ ಪಕ್ಷ’ ಎಂದು ಕರೆಸಿಕೊಂಡಿದ್ದ ಬಿಜೆಪಿ, ಅನಂತರದ ವರ್ಷಗಳಲ್ಲಿ ಗಣನೀಯ ರಾಜಕೀಯ ಲಾಭ ಗಳಿಸುತ್ತಿರುವುದರ ಹಿಂದೆ ಬೇರು ಮಟ್ಟದ ಶ್ರಮವೂ ಎದ್ದುಕಾಣುತ್ತಿದೆ.

2019ರ ಸಾರ್ವತ್ರಿಕ ಚುನಾವಣೆಗೂ ಕೆಲವೇ ತಿಂಗಳ ಮೊದಲು ನಡೆದಿದ್ದ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಯ ಒಬ್ಬ ಅಭ್ಯರ್ಥಿಯಷ್ಟೇ ಆಯ್ಕೆಯಾಗಿದ್ದರು. ಆದರೆ ಅನಂತರ ನಡೆದ ಲೋಕಸಭೆ ಚುನಾವಣೆಯಲ್ಲಿ ಅಚ್ಚರಿಯ ರೀತಿಯಲ್ಲಿ 17ರ ಪೈಕಿ ನಾಲ್ಕು ಲೋಕಸಭಾ ಕ್ಷೇತ್ರಗಳನ್ನು ಕಮಲಪಕ್ಷ ತನ್ನದಾಗಿಸಿಕೊಂಡಿತು. ಅದರಲ್ಲೂ ನಿಜಾಮಾಬಾದ್‌ ಜಿಲ್ಲೆಯಲ್ಲಿ ಮುಖ್ಯಮಂತ್ರಿ ಕೆಸಿಆರ್‌ ಪುತ್ರಿ, ಸಂಸದೆ ಕವಿತಾ ಅವರೇ ಬಿಜೆಪಿ ಅಭ್ಯರ್ಥಿಯ ಮುಂದೆ ಸೋಲುಂಡಿದ್ದು ದೊಡ್ಡ ಸುದ್ದಿಯಾಯಿತು. ಈ ಗೆಲುವು ಬಿಜೆಪಿಯ ಆತ್ಮವಿಶ್ವಾಸವನ್ನು ಇಮ್ಮಡಿಗೊಳಿಸಿತು. ತೆಲಂಗಾಣದಲ್ಲಿ ಪ್ರಮುಖ ವಿಪಕ್ಷ ಕಾಂಗ್ರೆಸ್‌ ದುರ್ಬಲ ಗೊಳ್ಳುತ್ತಿರುವುದನ್ನು ಅರಿತು, ಆ ಸ್ಥಾನವನ್ನು ತುಂಬುವ ನಿಟ್ಟಿನಲ್ಲಿ ಹೆಜ್ಜೆಯಿಟ್ಟಿತು. ಇದರ ಫ‌ಲವೆಂಬಂತೆ, ಎರಡು ಪ್ರಮುಖ ಕ್ಷೇತ್ರಗಳ ಉಪಚುನಾವಣೆಯಲ್ಲಿ ಆಡಳಿತಾರೂಢ ತೆಲಂಗಾಣ ರಾಷ್ಟ್ರ ಸಮಿತಿ(ಟಿಆರ್‌ಎಸ್‌)ಗೆ ಶಾಕ್‌ ನೀಡಿ, ಬಿಜೆಪಿ ಗೆಲುವಿನ ನಗೆ ಬೀರಿತು. ಗ್ರೇಟರ್‌ ಹೈದರಾಬಾದ್‌ ಮಹಾನಗರ ಪಾಲಿಕೆ ಎಲೆಕ್ಷನ್‌ನಲ್ಲೂ 48 ಸೀಟುಗಳಲ್ಲಿ ಜಯ ಸಾಧಿಸಿತು (ಟಿಆರ್‌ಎಸ್‌ ಗೆದ್ದಿದ್ದು 56 ಸೀಟುಗಳನ್ನು). ಈ ಮೂಲಕ ಟಿಆರ್‌ಎಸ್‌ನ ಪ್ರಮುಖ ಚಾಲೆಂಜರ್‌ ನಾವೇ ಎಂಬ ಭಾವನೆ ಜನರ ಮನದಲ್ಲಿ ಬೇರೂರುವಂತೆ ಮಾಡಿತು. ಇನ್ನೊಂದೆಡೆ, ತೆಲಂಗಾಣದಲ್ಲಿ ಎರಡನೇ ಅತಿದೊಡ್ಡ ಪಕ್ಷವಾಗಿರುವ ಕಾಂಗ್ರೆಸ್‌ 2018ರಲ್ಲಿ 19 ಸೀಟುಗಳನ್ನು ಗಳಿಸಿತ್ತಾದರೂ, ಅನಂತರದಲ್ಲಿ ನಡೆದ ಪಕ್ಷಾಂತರ ಹಾಗೂ ಆಂತರಿಕ ಕಚ್ಚಾಟವು ಶಾಸಕರ ಸಂಖ್ಯೆಯನ್ನು ಈಗ 6ಕ್ಕೆ ತಂದು ನಿಲ್ಲಿಸಿದೆ. ಇದು ಕೂಡ ಬಿಜೆಪಿ ಪಾಲಿಗೆ ಸಿಹಿತುತ್ತು.

ತೆಲಂಗಾಣದಲ್ಲಿ ಅಧಿಕಾರದ ಚುಕ್ಕಾಣಿ ಹಿಡಿಯಲು ಬಿಜೆಪಿಯು ಈ ರಾಷ್ಟ್ರೀಯ ಕಾರ್ಯಕಾರಿಣಿಯನ್ನೇ ಸ್ಪ್ರಿಂಗ್‌ಬೋರ್ಡ್‌ ಅನ್ನಾಗಿ ಬಳಸುತ್ತಿದೆ. ಈ ಎರಡು ದಿನಗಳಲ್ಲಿ ತನ್ನ ನಾಯಕರನ್ನು 119 ಅಸೆಂಬ್ಲಿ ಕ್ಷೇತ್ರಗಳಿಗೂ ಕಳುಹಿಸಿ, ಜನರಿಂದ ಅಭಿಪ್ರಾಯ ಸಂಗ್ರಹಿಸುವ ಕೆಲಸವನ್ನು ಮಾಡಿದೆ. ರವಿವಾರ ಪ್ರಧಾನಿ ನರೇಂದ್ರ ಮೋದಿಯವರ ಸಾರ್ವಜನಿಕ ಸಭೆಗೆ 10 ಲಕ್ಷಕ್ಕೂ ಅಧಿಕ ಜನರನ್ನು ಸೇರಿಸುವ ಮೂಲಕ ಶಕ್ತಿಪ್ರದರ್ಶನ ಮಾಡಿರುವುದು ಕೂಡ ಕೆಸಿಆರ್‌ಗೆ ನಡುಕ ಹುಟ್ಟಿಸುವ ತಂತ್ರಗಳಲ್ಲಿ ಒಂದು.

“ಈ ಕಾರ್ಯಕ್ರಮದ ಬಳಿಕ ಕೆಸಿಆರ್‌ಗೆ ಉಳಿಯುವುದು ಕೇವಲ 520 ದಿನಗಳ ಅಧಿಕಾರಾವಧಿ ಮಾತ್ರ. ಅಂದರೆ, 2023ರ ಅಂತ್ಯದಲ್ಲಿ ನಡೆಯುವ ತೆಲಂಗಾಣ ವಿಧಾನಸಭೆ ಚುನಾವಣೆಯಲ್ಲಿ ರಾವ್‌ ಗದ್ದುಗೆಯಿಂದ ಇಳಿಯುವುದು ನಿಶ್ಚಿತ’ ಎನ್ನುತ್ತಿದ್ದಾರೆ ಬಿಜೆಪಿ ಮುಖಂಡರು.

ಬಿಜೆಪಿಯ ಕಾರ್ಯತಂತ್ರಗಳೇನು?: ಮೇ ತಿಂಗಳಿಂದಲೇ ಬಿಜೆಪಿಯ ಪ್ರಮುಖ ನಾಯಕರು ತೆಲಂಗಾಣಕ್ಕೆ ಭೇಟಿ ನೀಡುತ್ತಲೇ ಇದ್ದಾರೆ. ಪಕ್ಷದ ತೆಲಂಗಾಣ ರಾಜ್ಯ ಘಟಕದ ಅಧ್ಯಕ್ಷ ಕೆ.ಲಕ್ಷ್ಮಣ್‌ರನ್ನು ಉತ್ತರಪ್ರದೇಶದಿಂದ ರಾಜ್ಯ ಸಭೆಗೂ ಕಳುಹಿಸಿಕೊಡಲಾಗಿದೆ. ಮತ್ತೂಂದು ಪ್ರಮುಖ ಬೆಳವಣಿಗೆಯಲ್ಲಿ, ಇತ್ತೀಚೆಗಷ್ಟೇ ಹೈದರಾಬಾದ್‌ ಮಹಾ ನಗರ ಪಾಲಿಕೆಯ ಕಾರ್ಪೊರೇಟರ್‌ಗಳು ಮತ್ತು ರಾಜ್ಯ ಬಿಜೆಪಿ ನಾಯಕರನ್ನು ದಿಲ್ಲಿಗೆ ಕರೆಸಿಕೊಂಡು ಖುದ್ದು ಪ್ರಧಾನಿ ಮೋದಿ ಅವರೇ ಸಭೆ ನಡೆಸಿದ್ದಾರೆ. ಕೇಂದ್ರದಲ್ಲಿ ಆಡಳಿತದ ಚುಕ್ಕಾಣಿ ಹಿಡಿದ ಬಳಿಕ ಪ್ರಧಾನಿ ಮೋದಿಯವರು ರಾಜ್ಯದ ಪಾಲಿಕೆಯ ಕಾರ್ಪೊರೇಟರ್‌ಗಳೊಂದಿಗೆ ಈ ರೀತಿಯ ಅನೌಪಚಾರಿಕ ಸಂವಾದವನ್ನು ನಡೆಸಿರುವುದು ಇದೇ ಮೊದಲು. ಪ್ರತಿ ಬಾರಿ ಮೋದಿ ಹೈದರಾಬಾದ್‌ಗೆ ಭೇಟಿ ನೀಡಿದಾಗಲೂ ತಮ್ಮ ಭಾಷಣದಲ್ಲಿ “ವಂಶಾಡಳಿತದ’ ವಿರುದ್ಧ ನಿರಂತರ ವಾಗ್ಧಾಳಿ ನಡೆಸುತ್ತಿರುವುದು ಕೂಡ ಮೋದಿ ಸ್ಟ್ರಾéಟಜಿಯ ಒಂದು ಭಾಗ. “ವಂಶಾಡಳಿತವೇ ಪ್ರಜಾಪ್ರಭುತ್ವದ ಅತಿದೊಡ್ಡ ಶತ್ರು, ದೇಶದಲ್ಲಿ ಯಾವಾಗ ವಂಶಾಡಳಿತ ರಾಜಕೀಯ ಕೊನೆಗೊಳ್ಳುತ್ತದೋ, ಅಂದಿನಿಂದ ಅಭಿವೃದ್ಧಿ ಆರಂಭವಾಗುತ್ತದೆ’ ಎಂದು ಮೋದಿ ಪದೇ ಪದೆ ಹೇಳುತ್ತಿರುವುದನ್ನು ಗಮನಿಸಬಹುದು.

ತೆಲಂಗಾಣದ ಪ್ರತಿಯೊಂದು ಜಿಲ್ಲೆಯಲ್ಲೂ ಈಗ ಬಿಜೆಪಿ ಕಚೇರಿಗಳನ್ನು ತೆರೆಯಲಾಗಿದೆ, ಬೂತ್‌ ಉಸ್ತುವಾರಿಗಳನ್ನು ನೇಮಿಸಲಾಗಿದೆ, ಮನೆ ಮನೆಗೆ ತೆರಳಿ ಸಮೀಕ್ಷೆಗಳನ್ನು ನಡೆಸಲಾಗುತ್ತಿದೆ, ಎಲ್ಲ ಜಾತಿ ಹಾಗೂ ಪಕ್ಷಗಳಲ್ಲಿರುವ ಮತ ಸೆಳೆಯುವಂಥ ಸಾಮರ್ಥ್ಯವಿರುವ ನಾಯಕರನ್ನು ಗುರುತಿಸಲಾಗುತ್ತಿದೆ. ರಾಜ್ಯದ ಒಟ್ಟು ಜನಸಂಖ್ಯೆಯ ಶೇ.56ರಷ್ಟಿರುವ ಒಬಿಸಿ ಸಮುದಾಯವನ್ನು ಸೆಳೆಯುವ ನಿಟ್ಟಿನಲ್ಲೂ ಬಿಜೆಪಿ ಕೆಲಸ ಮಾಡುತ್ತಿದೆ. ಇದೇ ಸಮುದಾಯದ ಪ್ರಬಲ ನಾಯಕರಾದ ಬಂಡಿ ಸಂಜಯ್‌ರನ್ನೇ ಪಕ್ಷದ ರಾಜ್ಯಾಧ್ಯಕ್ಷರನ್ನಾಗಿ ನೇಮಕ ಮಾಡಲಾಗಿದೆ.

ಕೆಸಿಆರ್‌ ವಿರುದ್ಧ ಟೀಕಾಸ್ತ್ರ: ಆಡಳಿತಾರೂಢ ಟಿಆರ್‌ಎಸ್‌ ನಾಯಕ, ಸಿಎಂ ಕೆ. ಚಂದ್ರಶೇಖರ್‌ ರಾವ್‌ ವಿರುದ್ಧ ರಾಜ್ಯದಲ್ಲಿ ಸಹಜವಾಗಿಯೇ ಆಡಳಿತ ವಿರೋಧಿ ಅಲೆ ಸ್ವಲ್ಪ ಮಟ್ಟಿಗೆ ಸೃಷ್ಟಿಯಾಗಿದೆ. ತಾವು ಅಧಿಕಾರಕ್ಕೇರಿ 3000 ದಿನಗಳಾದರೂ, ಕನಿಷ್ಠ ಪಕ್ಷ 30 ಗಂಟೆಗಳ ಕಾಲ ಕೂಡ ಕಚೇರಿಗೆ ಬಂದಿಲ್ಲ ಎಂಬ ಆರೋಪ ಅವರ ಮೇಲಿದೆ. ಜತೆಗೆ, ಕುಟುಂಬ ರಾಜಕಾರಣಕ್ಕೆ ಒತ್ತು(ಕೆಸಿಆರ್‌, ಪುತ್ರ, ಪುತ್ರಿ, ಅಳಿಯನೇ ರಾಜ್ಯವಾಳುತ್ತಿದ್ದಾರೆ ಎಂಬ ಆರೋಪ), ಪ್ರತ್ಯೇಕ ತೆಲಂಗಾಣದ ಸೃಷ್ಟಿಗಾಗಿ ತ್ಯಾಗ ಮಾಡಿದವನ್ನು ನಿರ್ಲಕ್ಷ್ಯ ಮಾಡಿದ್ದಾರೆ, ಭ್ರಷ್ಟಾಚಾರ, ದುರಾಡಳಿತ ಮುಂತಾದ ಟೀಕಾಸ್ತ್ರಗಳನ್ನು ಬಳಸುತ್ತಲೇ ಬಿಜೆಪಿಯು ತೆಲಂಗಾಣದಲ್ಲಿ ತನ್ನ ಹೆಜ್ಜೆಗುರುತು ಮೂಡಿಸಲು ಶತಪ್ರಯತ್ನ ನಡೆಸುತ್ತಿದೆ.

ಐದೇ ವರ್ಷಗಳಲ್ಲಿ ಎಲ್ಲವೂ ಬದಲಾಯಿತು: 5 ವರ್ಷಗಳ ಹಿಂದೆ ಇದೇ ಅವಧಿಯಲ್ಲಿ ಎನ್‌ಡಿಎ ತನ್ನ ರಾಷ್ಟ್ರಪತಿ ಅಭ್ಯರ್ಥಿಯನ್ನಾಗಿ ರಾಮನಾಥ ಕೋವಿಂದ್‌ ಹೆಸರು ಘೋಷಿಸಿದಾಗ, ಇದೇ ಕೆ. ಚಂದ್ರಶೇಖರ್‌ ರಾವ್‌ ಅವರು ಬಿಜೆಪಿಯ ಪಕ್ಕಾ ಬೆಂಬಲಿಗರಾಗಿದ್ದರು. ಸಂಸತ್‌ನಲ್ಲೂ ಹಲವು ವಿಚಾರಗಳಲ್ಲಿ ನರೇಂದ್ರ ಮೋದಿ ಸರಕಾರದ ಪರ ನಿಂತಿದ್ದರು. ಆದರೆ, ಈಗ ಪರಿಸ್ಥಿತಿ ಯಾವ ಮಟ್ಟಕ್ಕೆ ತಲುಪಿದೆಯೆಂದರೆ, ಪ್ರಧಾನಿ ಮೋದಿ ಅವರು 3 ಬಾರಿ ಹೈದರಾಬಾದ್‌ಗೆ ಬಂದಾಗಲೂ ಬೇರೆ ಬೇರೆ ನೆಪಗಳನ್ನು ಹೇಳಿ ಅವರನ್ನು ಸ್ವಾಗತಿಸಲು ಹೋಗದೇ ಕೆಸಿಆರ್‌ ತಪ್ಪಿಸಿ ಕೊಂಡಿದ್ದಾರೆ. ಶನಿವಾರ ಮೋದಿ ಸ್ವಾಗತಕ್ಕೆ ತೆರಳದ ಕೆಸಿಆರ್‌, ಅದೇ ಏರ್‌ಪೋರ್ಟ್‌ಗೆ ಬಂದಿಳಿದಿದ್ದ ವಿಪಕ್ಷಗಳ ರಾಷ್ಟ್ರಪತಿ ಅಭ್ಯರ್ಥಿ ಯಶವಂತ್‌ ಸಿನ್ಹಾರನ್ನು ಆತ್ಮೀಯವಾಗಿ ಬರಮಾಡಿಕೊಂಡಿದ್ದಾರೆ.

ಬಿಜೆಪಿಯೇ ತನ್ನ ಪ್ರಮುಖ ಶತ್ರು ಎಂಬುದು ಈಗ ಕೆಸಿಆರ್‌ಗೆ ಅರ್ಥವಾಗಿಬಿಟ್ಟಿದೆ. ಹೀಗಾಗಿ, 70-80 ಕ್ಷೇತ್ರ ಗಳಲ್ಲಿ ಪ್ರಾಬಲ್ಯ ಹೊಂದಿರುವ ಕಾಂಗ್ರೆಸ್‌ನ ಮತಗಳನ್ನು ಸೆಳೆಯುವತ್ತ ರಾವ್‌ ಗಮನ ಕೇಂದ್ರೀಕರಿಸಿದ್ದಾರೆ. “ಅಹಂಕಾರಿ’, “ಶಾಸಕರಿಗೇ ಲಭ್ಯವಾಗುತ್ತಿಲ್ಲ’ ಎಂಬಿತ್ಯಾದಿ ಆರೋಪಗಳಿಂದ ಮುಕ್ತರಾಗಲೆಂದು ಕೆಸಿಆರ್‌ ಇತ್ತೀಚಿನ ದಿನಗಳಲ್ಲಿ ಶಾಸಕರೊಂದಿಗೆ ಸರಣಿ ಸಭೆಗಳನ್ನು ನಡೆಸುತ್ತಿದ್ದಾರೆ, ಅವರನ್ನು ಕೇಂದ್ರ ಸರಕಾರದ ವಿರುದ್ಧ ಛೂ ಬಿಡುವ ಕೆಲಸವನ್ನೂ ಆರಂಭಿಸಿದ್ದಾರೆ.

ಒಟ್ಟಿನಲ್ಲಿ, ಒಂದು ಕಡೆ ಕೆಸಿ ರಾವ್‌ ಅವರು ವಿವಿಧ ರಾಜ್ಯ ಗಳಿಗೆ ಭೇಟಿ ನೀಡಿ ಬಿಜೆಪಿ ವಿರುದ್ಧ ರಾಷ್ಟ್ರೀಯ ಮಟ್ಟದಲ್ಲಿ ವಿಪಕ್ಷಗಳನ್ನು ಒಗ್ಗೂಡಿಸುವ ಕೆಲಸದಲ್ಲಿ ನಿರತರಾಗಿದ್ದರೆ, ಮತ್ತೂಂದು ಕಡೆ ಬಿಜೆಪಿ ಸದ್ದಿಲ್ಲದೇ ಸಂಪನ್ಮೂಲಭರಿತ ರಾಜ್ಯವಾದ ತೆಲಂಗಾಣದಲ್ಲಿ ಕೆಸಿಆರ್‌ ರಾಜ್ಯಭಾರವನ್ನು ಕೊನೆಗಾಣಿಸುವ ಯತ್ನವನ್ನು ದ್ವಿಗುಣಗೊಳಿಸಿದೆ. ಚುನಾ ವಣೆ ಸಮೀಪಿಸುತ್ತಿರುವಂತೆ ಎಲ್ಲ ರಾಜಕೀಯ ಪಕ್ಷಗಳೂ ತಮ್ಮ ತಮ್ಮ ಕಾರ್ಯತಂತ್ರಗಳೊಂದಿಗೆ ಗ್ರೌಂಡ್‌ಗಿಳಿಯಲಿವೆ. ಯಾರು ಏನೇ ಕಸರತ್ತು ನಡೆಸಿದರೂ, ಕೊನೆಗೆ ಯಾರನ್ನು ಗೆಲ್ಲಿಸಬೇಕು ಎಂದು ನಿರ್ಧರಿಸುವವರು ಜನರು.

– ಹಲೀಮತ್‌ ಸಅದಿಯಾ

ಟಾಪ್ ನ್ಯೂಸ್

UV-Navaroopa

Manipal: ಗ್ರಾಮೀಣ ಓದುಗರ ಸ್ಪಂದನೆಯೇ ಯಶಸ್ಸು: ಎಂಡಿ, ಸಿಇಒ ವಿನೋದ್‌ ಕುಮಾರ್‌

uppunda1

Uppunda: ಶ್ರೀದುರ್ಗಾಪರಮೇಶ್ವರಿ ಅಮ್ಮನವರ ಸಂಭ್ರಮದ ಮನ್ಮಹಾರಥೋತ್ಸವ

Govinda-pai-Book

Udupi: ಗೋವಿಂದ ಪೈಗಳ ಸಂಶೋಧನ ಬರಹಗಳು ಸಮಗ್ರತೆಯ ಹೂರಣ: ಡಾ.ವಿವೇಕ್‌ ರೈ

DK SHI NEW

MLAs 50 ಕೋಟಿ ರೂ.; ಸಾಕ್ಷಿ ಕೊಡುವ ಹೊಣೆ ಯತ್ನಾಳ್‌ದು: ಡಿಕೆಶಿ

Patla-yakshadruva

Mangaluru: ಎಲ್ಲ ವರ್ಗದ ಜನರ ಸಹಕಾರದಿಂದ ಸಾಮಾಜಿಕ ಸಾಧನೆ: ಕನ್ಯಾನ ಸದಾಶಿವ ಶೆಟ್ಟಿ

Vijayendra (2)

Congress 40 ಪರ್ಸೆಂಟ್‌ ಕಮಿಷನ್‌ ಆರೋಪ ಸುಳ್ಳೆಂದು ಸಾಬೀತು: ಬಿಜೆಪಿ

police

Belgavi; ವೇಶ್ಯಾವಾಟಿಕೆ ಆರೋಪ: ತಾಯಿ, ಮಗಳನ್ನು ರಸ್ತೆಗೆ ಎಳೆದು ಹಲ್ಲೆ!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

PM Mod

2024 Election; ಲೋಕಸಭೆ ಚುನಾವಣೆಗೆ ಮುನ್ನುಡಿಯೇ ಈ ಫ‌ಲಿತಾಂಶ?

Jaishankar

Foreign policy; ಬದಲಾದ ವಿದೇಶಾಂಗ ನೀತಿಯ ಪರಿಭಾಷೆ

ED

Chhattisgarh ‘ಮಹಾದೇವ’ ಅಸ್ತ್ರಕ್ಕೆ ಬಲಿಯಾಗುವವರು ಯಾರು?

1-qwewew

Congress ಅಸಮಾಧಾನದ ಜ್ವಾಲೆ: ಸಮ್ಮಿಶ್ರ ವೈಖರಿಯಲ್ಲಿ ಸರಕಾರ‌?

1-VR-AG

ರಾಜಸ್ಥಾನದ ರಾಜಪಟ್ಟದ ಮೇಲೆ ಎಲ್ಲರ ಕಣ್ಣು; ‘ಕೈ’ ಹಿಡಿಯುತ್ತಾ ಗ್ಯಾರಂಟಿ?

MUST WATCH

udayavani youtube

ಇಂಗ್ಲೀಷ್ ಒಂದು ಭಾಷೆ ಅನ್ನೋದೇ ತಪ್ಪು -ಪ್ರಕಾಶ್ ಬೆಳವಾಡಿ

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

udayavani youtube

ಪುಂಗನೂರು ತಳಿಯ ಹಾಲು ಯಾವೆಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ?

ಹೊಸ ಸೇರ್ಪಡೆ

UV-Navaroopa

Manipal: ಗ್ರಾಮೀಣ ಓದುಗರ ಸ್ಪಂದನೆಯೇ ಯಶಸ್ಸು: ಎಂಡಿ, ಸಿಇಒ ವಿನೋದ್‌ ಕುಮಾರ್‌

puttige-4

Udupi; ಗೀತಾರ್ಥ ಚಿಂತನೆ 96 : ವ್ಯಾಮೋಹ ಜಾಲ vs ಜಾಗೃತಾತ್ಮ

uppunda1

Uppunda: ಶ್ರೀದುರ್ಗಾಪರಮೇಶ್ವರಿ ಅಮ್ಮನವರ ಸಂಭ್ರಮದ ಮನ್ಮಹಾರಥೋತ್ಸವ

Govinda-pai-Book

Udupi: ಗೋವಿಂದ ಪೈಗಳ ಸಂಶೋಧನ ಬರಹಗಳು ಸಮಗ್ರತೆಯ ಹೂರಣ: ಡಾ.ವಿವೇಕ್‌ ರೈ

DK SHI NEW

MLAs 50 ಕೋಟಿ ರೂ.; ಸಾಕ್ಷಿ ಕೊಡುವ ಹೊಣೆ ಯತ್ನಾಳ್‌ದು: ಡಿಕೆಶಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.