ರಾಜ್ಯದಲ್ಲಿ ಪರ್ಯಾಯ ಪ್ರಸ್ತಾವ
Team Udayavani, Apr 17, 2017, 11:01 AM IST
ಉಪ ಚುನಾವಣೆಯಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸದೆ ನಮ್ಮ ಬೆಂಬಲ ಯಾರಿಗೂ ಇಲ್ಲ, ನಾವು ತಟಸ್ಥ ಎಂದು ಜೆಡಿಎಸ್ ಹೇಳಿತ್ತು. ಫಲಿತಾಂಶದ ನಂತರ ಮುಖ್ಯಮಂತ್ರಿ ಸಿದ್ದರಾಮಯ್ಯ, ಎರಡೂ ಕಡೆ ನಮಗೆ ಸಹಾಯ ಮಾಡಿದ್ದಕ್ಕೆ ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ.ದೇವೇಗೌಡ, ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿಯವರಿಗೆ ಧನ್ಯವಾದ ಆರ್ಪಿಸಿದರು. ಇದಕ್ಕೆ ಎಚ್.ಡಿ. ಕುಮಾರಸ್ವಾಮಿಯವರು ಸ್ವಾಗತಿಸಿ, ನಾವು ಅಭ್ಯರ್ಥಿ ಹಾಕದ ಕಾರಣ ಕಾಂಗ್ರೆಸ್‌ನವರಿಗೆ ಅನುಕೂಲವಾಗಿದೆ ಎಂದೂ ಹೇಳಿದರು. ಈ ಮಧ್ಯೆ, ದಿಲ್ಲಿಯಲ್ಲಿ ಸೋನಿಯಾ ಗಾಂಧಿ, ರಾಹುಲ್‌ಗಾಂಧಿ ಭೇಟಿಯಾದ ನಂತರ ಮಾಧ್ಯಮದ ಜತೆ ಮಾತನಾಡಿದ ಸಿದ್ದರಾಮಯ್ಯ, ಉಪ ಚುನಾವಣೆಯಲ್ಲಿ ಬೆಂಬಲ ನೀಡಿದ ಎಚ್.ಡಿ.ದೇವೇಗೌಡರನ್ನು ಸದ್ಯದಲ್ಲೇ ಭೇಟಿ ಮಾಡಿ ಧನ್ಯವಾದ ಹೇಳೆ¤àನೆ, ಎಚ್.ಡಿ.ರೇವಣ್ಣ ಜತೆ ದೂರವಾಣಿ ಮೂಲಕ ಮಾತಾಡಿದ್ದೇನೆ ಎಂದಿದ್ದಾರೆ. ಹೈಕಮಾಂಡ್ ನಾಯಕರ ಭೇಟಿ ನಂತರವಷ್ಟೇ ಈ ಹೇಳಿಕೆ ಹೊರಬಿದ್ದಿದೆ ಎಂಬುದು ಗಮನಾರ್ಹ. ಸದ್ಯಕ್ಕೆ ರಾಜ್ಯದಲ್ಲಿ ಜೆಡಿಎಸ್ ಹಾಗೂ ಕಾಂಗ್ರೆಸ್‌ಗೆ ರಾಜಕೀಯ ಶತ್ರು “ಬಿಜೆಪಿ’ . ಮುಂದಾ…….? ಕಾದುನೋಡಬೇಕಷ್ಟೇ.
ರಾಜ್ಯದಲ್ಲಿ ಅನಿರೀಕ್ಷಿತವಾಗಿ ಎದುರಾದ ಎರಡು ವಿಧಾನಸಭೆ ಕ್ಷೇತ್ರಗಳ ಉಪ ಚುನಾವಣೆ ಫಲಿತಾಂಶ ರಾಜ್ಯ ರಾಜಕಾರಣವನ್ನು ಸ್ವಲ್ಪ ಮಟ್ಟಿಗೆ “ಶೇಕ್’ ಮಾಡಿದೆ. ಉತ್ತರಪ್ರದೇಶದ ಗೆಲುವಿನಿಂದ ಅಮಿತೋತ್ಸಾಹದಲ್ಲಿದ್ದ ಬಿಜೆಪಿ ವೇಗಕ್ಕೆ ಬ್ರೇಕ್ ಬಿದ್ದಿದ್ದರೆ, ಎರಡೂ ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿ ಬೀಗುತ್ತಿರುವ ಕಾಂಗ್ರೆಸ್‌ನಲ್ಲಿ ಒಂದೆಡೆ ಖುಷಿ ಮತ್ತೂಂದೆಡೆ ಮುಂದಿನ ಮುಖ್ಯಮಂತ್ರಿ ಪಟ್ಟ ಹಾಗೂ ಕೆಪಿಸಿಸಿ ಗಾದಿ ಮೇಲೆ ಕಣ್ಣಿಟ್ಟವರಲ್ಲಿ ತಳಮಳವೂ ಶುರುವಾಗಿದೆ.
ಹಾಗೆ ನೋಡಿದರೆ, ಉಪ ಚುನಾವಣೆ ಫಲಿತಾಂಶ ರಾಜ್ಯ ರಾಜಕೀಯ ಇತಿಹಾಸದಲ್ಲಿ ಎಂದೂ ಸಾರ್ವತ್ರಿಕ ಚುನಾವಣೆ ದಿಕ್ಸೂಚಿಯಾಗಿಲ್ಲ. ಆದರೂ, ಈ ಬಾರಿ ಉತ್ತರಪ್ರದೇಶ ಚುನಾವಣೆ ಫಲಿತಾಂಶದ ಬೆನ್ನಲ್ಲೇ ರಾಜ್ಯದಲ್ಲಿ ಎರಡು ವಿಧಾನಸಭೆ ಕ್ಷೇತ್ರಗಳ ಉಪ ಚುನಾವಣೆ ನಡೆದಿದ್ದು, ಈ ಉಪ ಚುನಾವಣೆ ಒಂದು ರೀತಿಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ನಡುವೆ ನಡೆದ ಕಾಳಗದಂತೆ ಬಿಂಬಿತವಾಗಿ ಜೆಡಿಎಸ್ “ಮೌನ ಸಮ್ಮತಿ’ ಪಾತ್ರ ನಿರ್ವಹಿಸಿದ್ದರಿಂದ ಸಹಜವಾಗಿ ಈ ಫಲಿತಾಂಶದ ಬಗ್ಗೆ ನಾನಾ ರೀತಿಯ ವ್ಯಾಖ್ಯಾನ-ವಿಶ್ಲೇಷಣೆಗಳಾಗುತ್ತಿವೆ.
ಉಪ ಚುನಾವಣೆ ಫಲಿತಾಂಶ ರಾಜ್ಯ ರಾಜಕಾರಣದಲ್ಲಿ ಸ್ವಲ್ಪ ಮಟ್ಟಿನ ಬಿಸಿ ಮುಟ್ಟಿಸಿರುವುದು ನಿಜ. ಎರಡು ಕ್ಷೇತ್ರಗಳಲ್ಲಿ ದೊರಕಿರುವ ಗೆಲುವು ಕಾಂಗ್ರೆಸ್ ಪಾಲಿಗಂತೂ ಮಹತ್ವದ್ದೇ. “ನೋಡ್ತಾ ಇರಿ, ಯಾರು ಏನೇ ಹೇಳಿದರೂ ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ 120 ಸ್ಥಾನ ಗೆಲ್ಲಲಿದೆ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಲು ಧೈರ್ಯ ಕೊಟ್ಟಿರುವುದು ಇದೇ ಫಲಿತಾಂಶ.
ಕಾಂಗ್ರೆಸ್‌ನಲ್ಲಿ ಸಿದ್ದರಾಮಯ್ಯ ಸದ್ಯಕ್ಕೆ ಪ್ರಶ್ನಾತೀತ, ಪ್ರಬಲ ನಾಯಕನಾಗಿ ಹೊರಹೊಮ್ಮಿರುವುದೇನೋ ನಿಜ. ಉಪಚುನಾವಣೆ ಗೆಲುವು ಕಾಂಗ್ರೆಸ್‌ಗೆ “ಟಾನಿಕ್’ನಂತಾಗಿರುವುದು ಸತ್ಯ. ಆದರೆ, ಮುಂದಿನ ಹಾದಿ ಸುಗಮವಲ್ಲ ಎಂಬದು ಖುದ್ದು ಸಿದ್ದರಾಮಯ್ಯ ಅವರಿಗೂ ಗೊತ್ತಿದೆ. ಕೆಪಿಸಿಸಿ ಅಧ್ಯಕ್ಷಗಿರಿ ವಿಚಾರ, ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಟಿಕೆಟ್ ಹಂಚಿಕೆ ವಿಚಾರ, ಪ್ರಚಾರದ ನಾಯಕತ್ವ ವಿಷಯ ಅಲ್ಲಿ ಇತ್ಯರ್ಥ ಆಗಬೇಕಿದೆ. ಅದು ನಿರ್ಧಾರವಾದ ನಂತರವಷ್ಟೇ ಕಾಂಗ್ರೆಸ್ ವಿಧಾನಸಭೆ ಚುನಾವಣೆಯಲ್ಲಿ ಎಷ್ಟು ಸಾಧನೆ ಮಾಡಲಿದೆ ಎಂದು ಅಂದಾಜು ಮಾಡಲು ಸಾಧ್ಯ.
ಇನ್ನು ಉಪ ಚುನಾವಣೆಯಲ್ಲಿ ಸೋಲಿನ ಗಾಯ ಆರಬೇಕಾದರೆ ಬಿಜೆಪಿಗೂ ಸ್ವಲ್ಪ ಸಮಯ ಬೇಕಾಗುತ್ತದೆ. ಅತಿಯಾದ ಆತ್ಮವಿಶ್ವಾಸದಲ್ಲಿದ್ದವರಿಗೆ ಮುಟ್ಟಿ ನೋಡಿಕೊಳ್ಳುವಂತೆ ಆಗಿದೆ. ಹೀಗಾಗಿ, ಇದೀಗ ಆತ್ಮಾವಲೋಕನ, ಸೋಲಿನ ಪರಾಮರ್ಶೆ, ಒಳ ಹಾಗೂ ಹೊರ ಕಾರಣಗಳ ಅಧ್ಯಯನ ನಡೆದು ಮತ್ತೆ “ಟ್ರ್ಯಾಕ್’ಗೆ ಬರಬೇಕಿದೆ. ಯಡಿಯೂರಪ್ಪ ನಾಯಕತ್ವದ ಬಗ್ಗೆ ಒಳಗೊಳಗೆ ಕಿಯ್ಯೋ ಮರೊ ಎನ್ನುತ್ತಿದ್ದವರು ಇದೀಗ ಬಹಿರಂಗವಾಗಿಯೇ “ಏನಾಯ್ತು’ ಎಂದು ಪ್ರಶ್ನಿಸುವಂತಾಗಿದೆ. ಮುಂದಿನ ದಿನಗಳಲ್ಲಿ ಈಶ್ವರಪ್ಪ ಮತ್ತು ಅವರ ರಾಯಣ್ಣ ಬ್ರಿಗೇಡ್ ಯಾವ ರೀತಿ ವರಸೆ ತೋರುತ್ತದೆ ಎಂಬುದು ಇಲ್ಲಿ ಗಮನಿಸಬೇಕಿದೆ. ಬಿಜೆಪಿ ಹೈಕಮಾಂಡ್ ಯಡಿಯೂರಪ್ಪ ಅವರಿಗೆ ಎಷ್ಟರ ಮಟ್ಟಿಗೆ ಮಣೆ ಹಾಕುತ್ತದೆ ಎಂಬುದೂ ಕಾದು ನೋಡಬೇಕಾಗುತ್ತದೆ.
ಬಿಜೆಪಿ, ಕಾಂಗ್ರೆಸ್ ಹೊರತುಪಡಿಸಿದರೆ ತಟಸ್ಥವಾಗಿದ್ದುಕೊಂಡೇ ಮನದಾಸೆ ತೀರಿಸಿಕೊಂಡ ಜೆಡಿಎಸ್ ಬಗ್ಗೆಯೂ ಮೈ ಮರೆಯುವಂತಿಲ್ಲ. ರಾಜ್ಯದಲ್ಲಿ ಕನಿಷ್ಠ 75 ರಿಂದ 100 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿಯ ಸೋಲು-ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸುವ ಶಕ್ತಿ ಆ ಪಕ್ಷಕ್ಕಿದೆ. ಅದೇ ಜೆಡಿಎಸ್‌ನ “ಗುಡ್‌ವಿಲ್’ ಸಹ. ಅದಕ್ಕೆ ಸ್ಯಾಂಪಲ್ ಎಂಬಂತೆ ಉಪ ಚುನಾವಣೆಯಲ್ಲಿ ಅಭ್ಯರ್ಥಿ ಕಣಕ್ಕೆ ಇಳಿಸದೆ ತನ್ನ ಸೀಮಿತ ಶಕ್ತಿ ಪ್ರದರ್ಶಿಸಿದೆ.
ಪರ್ಯಾಯ ಕೂಗು
ಈ ಮಧ್ಯೆ ವಿಧಾನಸಭೆ ಚುನಾವಣೆಗೆ ಒಂದು ವರ್ಷ ಬಾಕಿ ಇರುವಾಗ ಮತ್ತೆ ರಾಜ್ಯದಲ್ಲಿ “ಪರ್ಯಾಯ’ ಕೂಗು ಕೇಳಿಬರುತ್ತಿದೆ. ಕಾಂಗ್ರೆಸ್, ಬಿಜೆಪಿ, ಜೆಡಿಎಸ್‌ಗೆ ಪರ್ಯಾಯ ರಾಜಕಾರಣ ಹುಟ್ಟುಹಾಕುವ ಪ್ರಯತ್ನಗಳು ಪ್ರಾರಂಭವಾಗಿವೆ.
ಆ ಪೈಕಿ ಮೊದಲನೆಯದು ಸರ್ವೋದಯ ಪಕ್ಷ ಸ್ವರಾಜ್ ಇಂಡಿಯಾ ಪಕ್ಷದಲ್ಲಿ ವಿಲೀನ ಪ್ರಕ್ರಿಯೆ. ಆಮ್ ಆದ್ಮಿ ಪಾರ್ಟಿ ಕಟ್ಟಿದ ಸಂದರ್ಭದಲ್ಲಿ ಅರವಿಂದ ಕೇಜ್ರಿವಾಲ್ ಜತೆಗಿದ್ದ ಯೋಗೇಂದ್ರ ಯಾದವ್, ಪ್ರಶಾಂತ ಭೂಷಣ್ ಪ್ರತ್ಯೇಕವಾಗಿ ಸ್ಥಾಪಿಸಿಕೊಂಡಿರುವ ಸ್ವರಾಜ್ ಇಂಡಿಯಾ ಪರ್ಯಾಯ ರಾಜಕಾರಣದ ಘೋಷಣೆಯಡಿ ಹೊರಟಿದೆ. ದೇವನೂರು ಮಹದೇವ ಹಾಗೂ ರೈತ ಸಂಘದ ಪುಟ್ಟಣ್ಣಯ್ಯ ಜತೆಗೂಡಿ ತಮ್ಮ ಸರ್ವೋದಯ ಪಕ್ಷವನ್ನು ಸ್ವರಾಜ್ ಇಂಡಿಯಾದಲ್ಲಿ ವಿಲೀನಗೊಳಿಸಿದ್ದಾರೆೆ.
ಹೊಸ ಘೋಷಣೆ ಮತ್ತು ಭರವಸೆಗಳೊಂದಿಗೆ ದೇಶಾದ್ಯಂತ ಆಂದೋಲನ ಪ್ರಾರಂಭಿಸಿರುವ ಸ್ವರಾಜ್ ಇಂಡಿಯಾ ಯುವಕ ಪಡೆ, ಐಟಿ-ಬಿಟಿ ಉದ್ಯೋಗಿಗಳನ್ನು ಸೆಳೆಯಲು ಹೊರಟಿದೆ. ಕರ್ನಾಟಕದಲ್ಲಿ ಸರ್ವೋದಯ ಕರ್ನಾಟಕ ವಿಲೀನದೊಂದಿಗೆ ಕೆಲ ರೈತ ಹಾಗೂ ದಲಿತ ಸಂಘಟನೆಗಳೂ ಅದರಡಿ ಗುರುತಿಸಿಕೊಂಡಂತಾಗಿದೆ.
ಮತ್ತೂಂದೆಡೆ ಜನಸಂಗ್ರಾಮ ಪರಿಷತ್ ಮುಖ್ಯಸ್ಥ ಸಾಮಾಜಿಕ ಕಾರ್ಯಕರ್ತ ಎಸ್.ಆರ್.ಹಿರೇಮs… ಅವರು ಜನಾಂದೋಲನಗಳ ಮಹಾಮೈತ್ರಿ ಹೆಸರಿನಲ್ಲಿ “ಜನಪರ್ಯಾಯ ಕಟ್ಟೋಣ’ ಎಂಬ ಘೋಷಣೆಯಡಿ ರಾಜ್ಯಾದ್ಯಂತ ಜಾಥಾ ಆರಂಭಿಸಲು ಮುಂದಾಗಿದ್ದಾರೆ. ಇವರ ಜತೆಗೂ ದಲಿತ ಸಂಘರ್ಷ ಸಮಿತಿ, ರೈತ ಸಂಘ ಮುಖಂಡರು ಹಾಗೂ ಆಮ್ ಆದ್ಮಿ ಪಕ್ಷದಲ್ಲೇ ಇದ್ದು ಅಲ್ಲಿಂದ ಹೊರಬಂದು ಲಂಚ ಮುಕ್ತ ಕರ್ನಾಟಕ ಸಂಘಟನೆ ಕಟ್ಟಿಕೊಂಡಿದ್ದ ರವಿಕೃಷ್ಣಾರೆಡ್ಡಿ ಸಹ ಜತೆಗೂಡಿದ್ದಾರೆ.
ರಾಜ್ಯದಲ್ಲಿ ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಜತೆಗೆ ಜೆಡಿಯು, ಸಿಪಿಐ, ಸಿಪಿಎಂ, ಆರ್‌ಪಿಐ, ಬಿಎಸ್‌ಪಿ, ಎಸ್‌ಪಿ, ಎನ್‌ಸಿಪಿ, ಲೋಕಜನಶಕ್ತಿ, ಕನ್ನಡ ಚಳವಳಿ ವಾಟಾಳ್ ಪಕ್ಷಗಳು ಇವೆ. ಚುನಾವಣೆಯಲ್ಲಿ ಅಭ್ಯರ್ಥಿಗಳನ್ನೂ ಕಣಕ್ಕಿಳಿಸುತ್ತವೆ.
ಪ್ರತಿ ಚುನಾವಣೆ ಸಂದರ್ಭದಲ್ಲಿ ಪರ್ಯಾಯ ಕೂಗು ಕೇಳಿ ಬರುತ್ತದೆ. ಒಂದಷ್ಟು ಪಕ್ಷಗಳು ಹುಟ್ಟಿಕೊಳ್ಳುತ್ತವೆ. ಹಿಂದೊಮ್ಮೆ ಸಾಹಿತಿ ಚಂದ್ರಶೇಖರ ಪಾಟೀಲರು, ಕರ್ನಾಟಕ ರಕ್ಷಣಾ ವೇದಿಕೆಯ ಟಿ.ಎ.ನಾರಾಯಣಗೌಡರು ಅಂತಹ ಪ್ರಯತ್ನ ಮಾಡಿದ್ದರು. ಚುನಾವಣೆ ನಂತರ ಭ್ರಮನಿರಸನಗೊಂಡು ಸುಮ್ಮನಾಗಿದ್ದರು. ಕನ್ನಡನಾಡು, ಅರಸು ಸಂಯುಕ್ತ ಪಕ್ಷ, ಜನತಾಪಕ್ಷ ಪುನರ್ ಸಂಘಟನೆಯ ಪ್ರಯತ್ನವೂ ಒಂದು ಚುನಾವಣೆಯಲ್ಲಿ ನಡೆದಿತ್ತು. ಅದು ಯಶಸ್ಸು ಕಾಣಲಿಲ್ಲ.
ಅಷ್ಟೇಕೆ ಕಳೆದ 2013 ರ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಯಿಂದ ಸಿಡಿದು ಹೊರ ಹೋಗಿದ್ದ ಯಡಿಯೂರಪ್ಪ ಕೆಜೆಪಿ ಕಟ್ಟಿದ್ದರು. ಅದೇ ಪಕ್ಷದಿಂದ ಹೊರ ಹೋಗಿದ್ದ ಶ್ರೀರಾಮುಲು ಬಿಎಸ್‌ಆರ್ ಕಾಂಗ್ರೆಸ್ ಕಟ್ಟಿದ್ದರು. ಅಶೋಕ್ ಖೇಣಿ ಅಖೀಲ ಕರ್ನಾಟಕ ಮಕ್ಕಳ ಪಕ್ಷ ಕಟ್ಟಿದ್ದರು. ಆ ನಂತರ ಖೇಣಿ ಪಕ್ಷ ಬಿಟ್ಟು ಉಳಿದ ಎರಡೂ ಪಕ್ಷಗಳು ಬಿಜೆಪಿಯಲ್ಲಿ ವಿಲೀನವಾದವು.
ಕೆಜೆಪಿಯಿಂದ ಗೆಲುವು ಸಾಧಿಸಿದ್ದ ಬಿ.ಆರ್.ಪಾಟೀಲ್, ಬಿಎಸ್‌ಆರ್ ಕಾಂಗ್ರೆಸ್‌ನಿಂದ ಗೆದ್ದಿರುವ ಪಿ.ರಾಜೀವ್ ವಿಲೀನ ಸಂದರ್ಭದಲ್ಲಿ ಬಿಜೆಪಿ ಜತೆ ಹೋಗದೆ ಪ್ರತ್ಯೇಕವಾಗಿ ಗುರುತಿಸಿಕೊಂಡಿದ್ದು, ಆಗ್ಗಾಗ್ಗೆ ಪರ್ಯಾಯ ಕುರಿತು ಚರ್ಚೆಯಲ್ಲಿ ತೊಡಗಿದ್ದೂ ಉಂಟು.
ರಾಜ್ಯ ಮಟ್ಟಿಗೆ ಹೇಳಬೇಕಾದರೆ ದಲಿತ, ಕಾರ್ಮಿಕ, ರೈತ ಹಾಗೂ ಕನ್ನಡಪರ ಸಂಘಟನೆಗಳ ಶಕ್ತಿ ಕಡಿಮೆಯೇನಲ್ಲ. ಈ ನಾಲ್ಕೂ ಶಕ್ತಿಗಳು ಒಟ್ಟುಗೂಡಿದರೆ ಪ್ರಬಲ ರಾಜಕೀಯ ವೇದಿಕೆಯಾಗುವುದರಲ್ಲಿ ಅನುಮಾನವೇ ಇಲ್ಲ. ಇದು ರಾಜ್ಯ ರಾಜಕೀಯ ಇತಿಹಾಸದಲ್ಲಿ ಕೆಲವೊಮ್ಮೆ ಸಾಬೀತು ಆಗಿದೆ. ಆದರೆ, ಪ್ರಸ್ತುತ ರಾಜಕೀಯವಾಗಿ ಬೇರೆ ಬೇರೆ ಪಕ್ಷ, ಸಂಘಟನೆಗಳ ಜತೆ ಗುರುತಿಸಿಕೊಂಡು ಹರಿದು ಹಂಚಿ ಹೋಗಿರುವುದರಿಂದ ಒಗ್ಗಟ್ಟು ಸಾಧ್ಯವಿಲ್ಲದಂತಾಗಿದೆ. ಕಾವೇರಿ, ಮಹದಾಯಿ, ಕೃಷ್ಣಾ, ನೆಲ-ಜಲ-ಭಾಷೆ ವಿಚಾರ ಬಂದಾಗ ಎಲ್ಲರೂ ಒಂದಾದರೂ ಚುನಾವಣೆ ವಿಷಯದಲ್ಲಿ ಸುಮ್ಮನಾಗುತ್ತಾರೆ. ಈ ಎಲ್ಲ ಶಕ್ತಿಗಳನ್ನು ಒಟ್ಟುಗೂಡಿಸಿ ಮುನ್ನಡೆಸುವ ಸಾಮರ್ಥ್ಯವುಳ್ಳ ನಾಯಕತ್ವದ ಕೊರತೆ ಇದೆ. ಹೀಗಾಗಿ, ಪರ್ಯಾಯ ಎಂಬುದು ಚುನಾವಣೆಗೆ ಮುಂಚೆ ಹುಟ್ಟಿ, ಚುನಾವಣೆ ಮುಗಿಯುತ್ತಲೇ ಭ್ರಮನಿರಸನಗೊಂಡು ಬರ್ಖಾಸ್ತಾಗಿದ್ದೇ ಜಾಸ್ತಿ.
ಎಸ್. ಲಕ್ಷ್ಮೀನಾರಾಯಣ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Dharwad High Court: ಹಂಪಿ ನರಹರಿ ತೀರ್ಥರ ವೃಂದಾವನ ಪೂಜೆ ಯಥಾಸ್ಥಿತಿಗೆ
Eshwara Khandre: ಉದ್ದಿಮೆಗಳಿಗೆ 30 ದಿನದಲ್ಲಿ ಮಾಲಿನ್ಯ ನಿಯಂತ್ರಣ ಮಂಡಳಿ ಕ್ಲಿಯರೆನ್ಸ್
Congress ಶಾಸಕ ನರೇಂದ್ರಸ್ವಾಮಿಗೆ ಕೆಎಸ್‌ಪಿಸಿಬಿ ಅಧ್ಯಕ್ಷ ಪಟ್ಟ?
ಎ.ಎಂ. ಪ್ರಸಾದ್ ಮುಂದಿನ ಮುಖ್ಯ ಮಾಹಿತಿ ಆಯುಕ್ತ? ಮಾಹಿತಿ ಆಯೋಗಕ್ಕೂ ಸದಸ್ಯರ ನೇಮಕ?
Bidar Robbery Case: ಹೈದರಾಬಾದ್‌ನಲ್ಲಿ ಇನ್ನಿಬ್ಬರ ಸಾಥ್!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.