ಉಗ್ರರೇ ರಾಜಕಾರಣಿಯಾಗುವ ಮೊದಲ ಹಂತ!
Team Udayavani, Nov 28, 2017, 8:15 AM IST
ಪಾಕ್ ಸೇನೆಗೆ ಭಾರತದ ಜತೆಗೆ ಸಾಧ್ಯವಾದಷ್ಟೂ ಅಂತರ ಕಾಯ್ದುಕೊಳ್ಳಬೇಕಿದೆ. ಇದೇ ಕಾರಣಕ್ಕೆ ಸಯೀದ್‌ನಂತಹ ಉಗ್ರರಿಗೆ ಸೇನೆ ಮುನ್ನೆಲೆಗೆ ಬರಲು ಅವಕಾಶ ಮಾಡಿಕೊಡುತ್ತಿದೆ. ಆದರೆ ಸಯೀದ್‌ಗೆ ಚುನಾವಣೆ ಜಯಿಸುವುದು ಸುಲಭದ ಮಾತೇನಲ್ಲ. ಈ ಹಿಂದೆ ಧರ್ಮದ ಆಧಾರದಲ್ಲಿ, ಧಾರ್ಮಿಕ ಸಂಘಟನೆಗಳು ಪಾಕಿಸ್ಥಾನದಲ್ಲಿ ಚುನಾವಣೆ ಎದುರಿ ಸಿವೆಯಾದರೂ, ಬೆರಳೆಣಿಕೆ ಅಭ್ಯರ್ಥಿಗಳು ವೈಯಕ್ತಿಕ ಪ್ರಭಾವದಲ್ಲಿ ಗೆದ್ದಿದ್ದಾರಷ್ಟೇ. ಆದರೆ ಸಯೀದ್ ವಿಚಾರದಲ್ಲಿ ವಿಷಯ ಬೇರೆಯೇ ಇದೆ.
ಹಫೀಜ್ ಸಯೀದ್ ಎಂದಾಕ್ಷಣ ಭಾರತದಲ್ಲಿ ಮುಂಬಯಿ ದಾಳಿಯ ರಕ್ತ ಸಿಕ್ತ ಚಿತ್ರ ಕಣ್ಣಿಗೆ ರಾಚುತ್ತದೆ. ಸಾಲು ಸಾಲು ಹೆಣಗಳು… ಮುಂಬಯಿಯಲ್ಲಿ 26/11ರಲ್ಲಿ ನಡೆದ ದುರ್ಘಟನೆಯ ಚಿತ್ರಗಳು ಒಂದೊಂದಾಗಿ ತೆರೆದುಕೊಳ್ಳುತ್ತವೆ. ಅಂಥ ಕುಖ್ಯಾತಿಯ ಸಯೀದ್ ಈಗ ಮನೆಯಿಂದ ಹೊರಗೆ ಕಾಲಿಟ್ಟಿದ್ದಾನೆ. ಒಂದಷ್ಟು ಕಾಲ ಗೃಹ ಬಂಧನ, ಬಿಡುಗಡೆಯ ನಾಟಕದ ಪಾತ್ರಧಾರಿಯಾ ಗಿದ್ದ ಸಯೀದ್ ಈಗ ಬಹುಶಃ ಖಾಯಂ ಆಗಿ ಮನೆಯಿಂದ ಹೊರಗೆ ಕಾಲಿಟ್ಟಿದ್ದಾನೆ. ಬಿಡುಗಡೆಯಾಗುತ್ತಿದ್ದಂತೆಯೇ ಮಾತ ನಾಡುತ್ತಾ ಕಾಶ್ಮೀರದಲ್ಲಿ ನಮ್ಮ ಹೋರಾಟ ಇನ್ನಷ್ಟು ತೀವ್ರಗೊಳಿಸುತ್ತೇವೆ ಎಂದು ಘೋಷಿಸಿದ್ದು, ಆತ ನೇರವಾಗಿ ನಡೆದು ಬರುವುದು ಕಾಶ್ಮೀರಕ್ಕೇ ಎಂಬುದರ ಸೂಚಕ.
ಸಯೀದ್‌ನನ್ನು ಗೃಹ ಬಂಧನದಿಂದ ಬಿಡುಗಡೆ ಮಾಡುತ್ತಿ ರುವುದು ಆರಂಭದಲ್ಲಿ ಭಾರತಕ್ಕೆ ಒಂದು ಹಿನ್ನಡೆ ಎಂದಷ್ಟೇ ಕಾಣ ಬಹುದು. ಆದರೆ ಇದು ಅಮೆರಿಕ, ಚೀನ, ಪಾಕಿಸ್ಥಾನ ಮತ್ತು ಭಾರತದ ಮಧ್ಯದ ರಾಜತಾಂತ್ರಿಕ ನಿಲುವಿನಲ್ಲಿ ಉಂಟಾದ ಮಹತ್ವದ ಬದಲಾವಣೆಯ ಫಲಿತಾಂಶ. ಜತೆಗೆ ಪಾಕಿಸ್ಥಾನದ ಆಂತರಿಕ ಭಯೋತ್ಪಾದನೆ ಮಿಶ್ರಿತ ರಾಜಕಾರಣ ಇನ್ನಷ್ಟು ಮುನ್ನೆ ಲೆಗೆ ಬರುತ್ತಿರುವುದರ ಸಂಕೇತ. ಈ ಎಲ್ಲವನ್ನೂ ನಿರ್ಧರಿಸುವುದು 2018ರಲ್ಲಿ ಎದುರಾಗುವ ಪಾಕ್ ಚುನಾವಣೆ. ಸಯೀದ್ ಬಿಡುಗಡೆ ಈ ರಾಜಕಾರಣದ ಒಂದು ಅಧ್ಯಾಯ. ಅದೇ ಕಾರಣಕ್ಕೆ ಸಯೀದ್‌ನನ್ನು ಪುನಃ ಬಂ ಧಿಸುವಂತೆ ಪಾಕ್‌ಗೆ ಕೇವಲ ಮೇಲಿಂದ ಮೇಲೆ ಅಮೆರಿಕ ಒತ್ತಾಯ ಮಾಡಿತೇ ಹೊರತು, ಆತನನ್ನು ಸಂಪೂರ್ಣ ಹದ್ದುಬಸ್ತಿನಲ್ಲಿಡಲು ಅಮೆರಿಕಕ್ಕೂ ಮನಸ್ಸಿದ್ದಂತಿಲ್ಲ. ಹಾಗೆ ಮಾಡುವ ಮೂಲಕ ಪಾಕಿಸ್ಥಾನ ಚೀನಕ್ಕೆ ಇನ್ನಷ್ಟು ಹತ್ತಿರ ವಾಗಿ, ಉ.ಕೊರಿಯಾದ ಮೂಲಕ ತನ್ನನ್ನು ಚೀನ ಎದುರುಗೊಳ್ಳು ವುದು ಅಮೆರಿಕಕ್ಕೆ ಬೇಕಿಲ್ಲ. ಇವೆಲ್ಲದರಾಚೆಗೆ ಭಾರತಕ್ಕೆ ಇದೊಂದು ಮಹತ್ವದ ರಾಜತಾಂತ್ರಿಕ ನಿಲುವು ಬದಲಾವಣೆಯ ಕಾಲ.
ಸಯೀದ್ ಬಿಡುಗಡೆಗೆ ಪಾಕಿಸ್ಥಾನವನ್ನು ದೂರುತ್ತ ಕುಳಿತು ಕೊಳ್ಳು ವುದರಲ್ಲಿ ಇನ್ನು ಅರ್ಥವೇ ಇಲ್ಲ. ಬದಲಿಗೆ ಹೊಸ ಸಾಧ್ಯತೆಗಳತ್ತ ಅಮೆರಿಕದ ಜತೆ ಕುಳಿತು ನಿರ್ಧರಿಸುವುದೇ ಉತ್ತಮ. ಎಲ್ಲಕ್ಕಿಂತ ಮುಖ್ಯವಾಗಿ, ಸಯೀದ್‌ನನ್ನು ಕಾಶ್ಮೀರದಿಂದ ದೂರ ವಿಡು ವಷ್ಟೇ ಪ್ರಮುಖವಾದ ಇನ್ನೊಂದು ಸಂಗತಿಯೆಂದರೆ, ಪಾಕ್ ರಾಜಕಾರಣದಿಂದ ಸಯೀದ್‌ನನ್ನು ದೂರವಿಡಬೇಕಿರುವುದು. ಸಯೀದ್ ರಾಜಕಾರಣದ ಮುನ್ನೆಲೆಗೆ ಬರುವುದಕ್ಕೆ ಅವಕಾಶ ವಾಗಿದ್ದೇ ಪ್ರಧಾನಿ ನರೇಂದ್ರ ಮೋದಿ ಮತ್ತು ನವಾಜ್ ಷರೀಫ್ ಭೇಟಿ ಎಂಬುದೊಂದು ಮಾತು ಈಗ ಪಾಕ್ ರಾಜಕೀಯ ವಲಯದಲ್ಲಿ ಹರಿದಾಡುತ್ತಿದೆ. ನವಾಜ್ ಷರೀಫ್ ಅವರ ಪಕ್ಷ ಪ್ರಗತಿಪರ. ಭಾರತವನ್ನು ವಿರೋಧಿ ಸುವ ಸಾಂಪ್ರದಾಯಿಕ ಮನಸ್ಥಿತಿಯಿಂದ ಒಂದಷ್ಟು ಅಂತರವನ್ನು ಎಂದಿಗೂ ಕಾಯ್ದು ಕೊಂಡೇ ಬಂದಿದ್ದಾರೆ ಷರೀಫ್. ಇದನ್ನೇ ಬಳಕೆ ಮಾಡಿಕೊಳ್ಳಲು ಮೋದಿ ಯತ್ನಿಸಿರಬಹುದು.
ಆದರೆ ಈ ಘಟನೆ ಕಾಲಕ್ರಮೇಣ ಸಯೀದ್‌ನಂತಹ ಸೇನಾ ಪರವಾಗಿರುವ ಸಾಂಪ್ರದಾಯಿಕ ಸಂಘಟನೆಗಳ ಅಸ್ತಿತ್ವದ ಪ್ರಶ್ನೆ ಯಾಗಿ ಪರಿಣಮಿಸಿತು. ಇದೇ ಕಾರಣವನ್ನಿಟ್ಟುಕೊಂಡು, ಸೇನೆ ಯೊಂದಿಗೆ ಷರೀಫ್ ರಹಸ್ಯ ಭೇಟಿ ಮಾಡಿದ್ದನ್ನು ಉದ್ದೇಶಪೂರ್ವಕ ವಾಗಿ ಸಯೀದ್ ಪಡೆ ಬಹಿರಂಗಗೊಳಿಸಿತು. ಅನಂತರ ಪನಾಮಾ ಹಗರಣ ಒಂದು ನೆಪವಾಗಿ, ಷರೀಫ್ ಹುದ್ದೆ ತ್ಯಾಗವೂ ಆಯಿತು. ಅಲ್ಲಿಗೆ ಸರಕಾರ ಸೂತ್ರ ಕಳೆದುಕೊಂಡಿತು. ಇದಾದ ಕೆಲವೇ ದಿನಗಳಲ್ಲಿ ಸಯೀದ್ ನೇತೃತ್ವದಲ್ಲಿ ಮಿಲಿ ಮುಸ್ಲಿಮ್ ಲೀಗ್ ಹುಟ್ಟಿಕೊಂಡಿತ್ತು. ಅಂದಹಾಗೆ ಇಂಥದ್ದೊಂದು ಪಕ್ಷ ಸ್ಥಾಪಿಸಿ ಮುಖ್ಯ ವಾಹಿನಿಗೆ ಉಗ್ರ ಸಂಘಟನೆಗಳನ್ನು ತರುವುದು ಯಾವುದೇ ಹೊರದೇಶದ ಕೃತ್ಯವಲ್ಲ. ಬದಲಿಗೆ ಸೇನೆಯದ್ದೇ ಸಲಹೆಯಿದು. ಷರೀಫ್ ಪದತ್ಯಾಗಕ್ಕೂ ಮುನ್ನವೇ ಈ ಬಗ್ಗೆ ಸೇನೆ ಸಯೀದ್‌ಗೆ ಸಲಹೆ ಮಾಡಿತ್ತು. ಆದರೆ ಸಯೀದ್ ಆಗ ಅದನ್ನು ತಿರಸ್ಕರಿಸಿದ್ದನಂತೆ. ಪಕ್ಷ ಸ್ಥಾಪಿಸಿದ ಸಮಯದಲ್ಲಿ ಅಭ್ಯರ್ಥಿಗಳು ಚುನಾವಣೆ ಗೆಲ್ಲುವುದು ದೂರದ ಮಾತು ಎಂದೇ ಹೇಳಲಾಗಿದೆಯಾದರೂ ಪಕ್ಷ ಇನ್ನೂ ನೋಂದಣಿಯಾಗದಿದ್ದರೂ ಇಬ್ಬರು ಉಗ್ರರು ಚುನಾವಣೆಗೆ ಸ್ಪರ್ಧಿಸುವುದಾಗಿ ಘೋಷಿಸಿದ್ದಾರೆ. ಅಷ್ಟೇ ಅಲ್ಲ, ಇವರ ಪರವಾಗಿ ಭಾರೀ ಪ್ರಮಾಣದ ಪ್ರಚಾರವೂ ನಡೆಯುತ್ತಿದೆ. ಮುಂದಿನ ಚುನಾವಣೆಯ ವೇಳೆಗೆ, ಗನ್ ಮಡಿಲಲ್ಲಿಟ್ಟು ಕೊಂಡು ಸಯೀದ್ ಹಾಗೂ ಆತನ ಬೆಂಬಲಿಗರು ಸಂಸತ್ ಪ್ರವೇಶಿಸುವುದು ಬಹುತೇಕ ಖಚಿತ.
ಇದೆಲ್ಲದಕ್ಕೂ ಮೂಲ ಪಾಕ್ ಸೇನೆ. ಪಾಕ್ ಸೇನೆಗೆ ಭಾರತದ ಜೊತೆಗೆ ಸಾಧ್ಯವಾದಷ್ಟೂ ಅಂತರ ಕಾಯ್ದುಕೊಳ್ಳಬೇಕಿದೆ. ಇದೇ ಕಾರಣಕ್ಕೆ ಸಯೀದ್‌ನಂತಹ ಉಗ್ರರಿಗೆ ಸೇನೆ ಮುನ್ನೆಲೆಗೆ ಬರಲು ಅವಕಾಶ ಮಾಡಿಕೊಡುತ್ತಿದೆ. ಆದರೆ ಷರೀಫ್ ಮೊದಲಿನಿಂದಲೂ ಇದಕ್ಕೆ ವಿರೋಧ . ಈಗಾಗಲೇ ಷರೀಫ್‌ಗೆ ತನ್ನನ್ನು ಅ ಧಿಕಾರದಿಂದ ದೂರವಿಡುವಲ್ಲಿ ಸೇನೆಯದೇ ಪಾತ್ರವಿದೆ ಎಂಬುದು ಖಚಿತವಾಗಿ ಹೋಗಿದೆ. ಆದರೆ ಸಯೀದ್‌ಗೆ ಚುನಾವಣೆ ಜಯಿಸುವುದು ಸುಲಭದ ಮಾತೇನಲ್ಲ. ಈ ಹಿಂದೆ ಧರ್ಮದ ಆಧಾರದಲ್ಲಿ, ಧಾರ್ಮಿಕ ಸಂಘಟನೆಗಳು ಪಾಕಿಸ್ಥಾನದಲ್ಲಿ ಚುನಾವಣೆ ಎದುರಿ ಸಿವೆಯಾದರೂ, ಬೆರಳೆಣಿಕೆ ಅಭ್ಯರ್ಥಿಗಳು ವೈಯಕ್ತಿಕ ಪ್ರಭಾವ ದಲ್ಲಿ ಗೆದ್ದಿದ್ದಾರಷ್ಟೇ. ಆದರೆ ಸಯೀದ್ ವಿಚಾರದಲ್ಲಿ ವಿಷಯ ಬೇರೆಯೇ ಇದೆ. ಹಿಂದಿನಿಂದಲೂ ಸಯೀದ್ ಪಾಕ್ ಜನರೊಂದಿಗೆ ಸಂಪರ್ಕ ಹೊಂದಿದ್ದಾನೆ. ಸಮಾಜಸೇವೆಯ ಮುಖವಾಡ ಹಾಕಿ ಕೊಂಡೇ ತನ್ನ ಉಗ್ರ ಸಾಧನೆಯನ್ನೂ ಮಾಡುತ್ತಿದ್ದಾನೆ. ಇದೇ ಕಾರಣಕ್ಕೆ ಇಂದಿಗೂ ಅಮೆರಿಕದ ಕಣ್ಣಿಗೆ ಈತ ಉತ್ತಮ ಉಗ್ರನಾಗಿಯೇ ಉಳಿದಿದ್ದಾನೆ. ಅಫ್ಘಾನಿಸ್ಥಾನ ಇವನ ಕೇಂದ್ರವಲ್ಲ. ಬದಲಿಗೆ ಪಾಕ್ ಜನರ ಭಾವನೆಗೆ ತೀಕ್ಷ್ಣವಾಗಿ ಸ್ಪಂದಿಸುವ ಕಾಶ್ಮೀರ ಇವನ ಟಾರ್ಗೆಟ್. ಇದಕ್ಕೆ ಪೂರಕವಾಗಿ ಮುಸ್ಲಿಂ ಮೂಲಭೂತ ವಾದನ್ನು ಇನ್ನಷ್ಟು ಮುನ್ನೆಲೆಗೆ ತಂದು ಅದರ ನೆರಳಿನಲ್ಲಿ ಭಯೋತ್ಪಾದನೆಯನ್ನು ಬೆಳೆಸುವ ಮತ್ತೂಂದು ಭಾಗವಾಗಿ, ಈಗಿನ ಸರಕಾರದ ವಿರೋಧಿ ಮನಸ್ಥಿತಿ ಮೂಡಿಸಲು ಹೋರಾಟ ನಡೆಸಲಾಗಿದೆ. ಷರೀಫ್ ಸರಕಾರ ರಚಿಸಿದ್ದ ದೇಶವಿರೋಧಿ ಕಾನೂನಿಗೆ ಸಣ್ಣಪುಟ್ಟ ಸಂಘಟನೆಗಳು ಹೋರಾಟ ನಡೆಸಿವೆ. ಇವು ಪ್ರಸ್ತುತ ಸರಕಾರದ ವಿರುದ್ಧ ಜನರಲ್ಲಿ ಅಸಹನೆ ಮೂಡಿಸುವ ಮೊದಲ ಹಂತ.
ಹೀಗಾಗಿ ಈ ಎಲ್ಲ ಬೆಳವಣಿಗೆಗಳು ನೇರವಾಗಿ ಕಾಶ್ಮೀರಕ್ಕೆ ಮಾತ್ರವಲ್ಲ, ಭಾರತಕ್ಕೇ ಒಂದು ದೊಡ್ಡ ತಲೆನೋವು. ಮುಂದಿನ ವರ್ಷವೇ ಚುನಾವಣೆ ಎದುರಾಗಲಿರುವುದರಿಂದ ಕಾಶ್ಮೀರದಲ್ಲಿ ಕಲ್ಲೆಸೆತದಿಂದ ಆರಂಭವಾಗಿ ಉಗ್ರ ಚಟುವಟಿಕೆಗಳ ತೀವ್ರತೆ ಹೆಚ್ಚಬಹುದು. ಸಯೀದ್ ಬಿಡುಗಡೆ ಇದಕ್ಕೆ ಇನ್ನಷ್ಟು ಪ್ರಚೋದನೆ ನೀಡಿದೆ. ಸಾಮಾನ್ಯವಾಗಿ ಚುನಾವಣೆ ವೇಳೆ ಗಡಿಯಲ್ಲಿ ಗುಂಡಿನ ಕಾಳಗ ಹೆಚ್ಚಳವಾಗುತ್ತದೆ. ಗಡಿಯಲ್ಲಿ ಗುಂಡಿನ ಸದ್ದು ಕೇಳಿದಷ್ಟೂ ಸಯೀದ್ ಅದನ್ನು ಪಾಕಿಸ್ಥಾನದಲ್ಲಿ ಮತವಾಗಿ ಪರಿವರ್ತಿಸಲು ಪ್ರಯತ್ನಿಸುತ್ತಾನೆ. ಕಾಶ್ಮೀರವನ್ನು ಕಾಯ್ದುಕೊಳ್ಳುವುದರ ಜತೆಗೆ ಗಡಿ ಭದ್ರತೆ ಮಾಡುವುದು ನೇರವಾದ ಮತ್ತು ತಕ್ಷಣದ ಭಾರತದ ಕ್ರಮವೇನೋ ಹೌದು. ಆದರೆ ಸಯೀದ್‌ನನ್ನು ಇಡೀ ರಾಜಕೀಯ ದಿಂದ ದೂರವಿಡುವುದು ಸುಲಭದ ಮಾತಲ್ಲ. ಇದಕ್ಕೆ ಭಾರತದ ರಾಜತಾಂತ್ರಿಕ ಕ್ರಮ ಅತ್ಯಂತ ಅಗತ್ಯ.
ಒಂದೊಮ್ಮೆ ಪಾಕ್‌ನಲ್ಲಿ ರಾಜಕೀಯವಾಗಿ ಸಯೀದ್ ಪ್ರಾಮುಖ್ಯತೆ ಪಡೆದಿದ್ದೇ ಆದರೆ, ಪಾಕ್ ವಿಶ್ವದ ಇನ್ನೊಂದು ಉಗ್ರ ರಾಷ್ಟ್ರವಾಗಿ ರೂಪುಗೊಳ್ಳುವುದರಲ್ಲಿ ಸಂಶಯವೇ ಇಲ್ಲ. ಭಾರತದ ಗಡಿಯಲ್ಲೇ ಇಂಥದ್ದೊಂದು ರಾಷ್ಟ್ರ ಹುಟ್ಟಿಕೊಳ್ಳುವುದು ಚೀನಾದ ಆರ್ಥಿಕತೆಗೆ ತುರ್ತು ಅಗತ್ಯ. ಈ ಎಲ್ಲ ಬೆಳವಣಿಗೆಗಳನ್ನು ಪೋಷಿಸ ಲೆಂದೇ ಮಸೂದ್ ಅಜರ್‌ನನ್ನು ಚೀನಾ ಬೆಂಬಲಿಸುತ್ತಿದೆ. ಸಯೀದ್ ವಿಚಾರದಲ್ಲಿ ತನ್ನ ಮೇಲೆ ಅಮೆರಿಕ ಪ್ರಭಾವ ಬೀರಲಾ ಗದು ಎಂಬುದನ್ನು ಪಾಕ್ ವಿಶ್ವಕ್ಕೆ ತೋರಿಸಬೇಕಿದೆ. ಇದರಲ್ಲಿ ಪಾಕ್ ಗೆದ್ದರೆ ಚೀನ ಕೂಡ ಗೆದ್ದಂತೆ. ಅಮೆರಿಕ ಇದಕ್ಕೆ ತೀಕ್ಷ್ಣ ಕ್ರಮ ಕೈಗೊಂಡರೆ ಉತ್ತರ ಕೊರಿಯಾ ಸಂಬಂಧ ಹಳಸುವಂತೆ ಚೀನಾ ಚಿತಾವಣೆ ಮಾಡುವುದೂ ಖಚಿತ. ಹೀಗಾಗಿ ಪಾಕಿಸ್ಥಾನ ಮತ್ತು ಉ.ಕೊರಿಯಾ ಅಮೆರಿಕಕ್ಕೆ ಹಿತಶತ್ರುಗಳಾಗಿಯೂ, ಚೀನಕ್ಕೆ ಮಿತ್ರರಾಗಿಯೂ ಕೆಲಸ ಮಾಡುತ್ತಿವೆ. ಈ ಸಂಚಿನ ವೃತ್ತದಲ್ಲಿ ಭಾರತದ ರಾಜತಾಂತ್ರಿಕ ನಡೆ ಅತ್ಯಂತ ಸಂಕೀರ್ಣವಾಗಿದೆ. ಅಮೆರಿ ಕಕ್ಕೆ ಹಫೀಜ್ ಸಯೀದ್ ಹಾಗೂ ಲಷ್ಕರ್ ಎ ತೊಯ್ಬಾಗಳನ್ನೂ ತನ್ನ ಶತ್ರುವಲಯಕ್ಕೆ ಇಳಿಸಿಕೊಳ್ಳುವುದು ಈಗಲೇ ಬೇಕಿಲ್ಲ. ಇದೇ ಕಾರಣಕ್ಕೆ ಕೆಲವು ತಿಂಗಳುಗಳ ಹಿಂದೆ ಅಮೆರಿಕದ ನಿ ಧಿಯನ್ನು ಪಾಕಿಸ್ಥಾನ ಪಡೆಯಬೇಕೆಂದರೆ ಹಕ್ಕಾನಿ ನೆಟ್‌ವರ್ಕ್ ವಿರುದ್ಧ ಕಠಿನ ಕ್ರಮ ಕೈಗೊಳ್ಳಬೇಕು ಎಂದು ಘೋಷಿಸಿತೇ ಹೊರತು, ಭಾರತ ಶಿಫಾರಸು ಮಾಡಿದಂತೆ ಈ ಹೇಳಿಕೆಯಲ್ಲಿ ಲಷ್ಕರ್ ಎ ತೊಯ್ಬಾವನ್ನು ಸೇರಿಸಿಲ್ಲ. ಇದರರ್ಥ, ಅಮೆರಿಕಕ್ಕೆ ಲಷ್ಕರ್ ಉಗ್ರ ಸಂಘಟನೆಯನ್ನೂ ಈ ಪಟ್ಟಿಗೆ ಸೇರಿಸಿ ಚೀನವನ್ನು ಇನ್ನೂ ಒಂದು ಹಂತದಲ್ಲಿ ಎದುರಿಸುವುದು ಬೇಕಿಲ್ಲ.
ಆದರೆ ಇವೆಲ್ಲದರ ಮಧ್ಯೆಯೂ ಭಾರತ ತನ್ನ ಅಗತ್ಯ ಮತ್ತು ಆದ್ಯತೆಯನ್ನು ಹೇಗೆ ಪೂರೈಸಿಕೊಳ್ಳುತ್ತದೆ ಎಂಬುದು ಇಲ್ಲಿ
ಮುಖ್ಯ. ಲಷ್ಕರ್, ಇಂಡಿಯನ್ ಮುಜಾಹಿದೀನ್ ಹಾಗೂ ಜಮಾತ್ ಉದ್ ದಾವಾ ಸಂಘಟನೆಗಳನ್ನು ಈ ರಾಜಕೀಯ ಸಂಕೀರ್ಣ ಸಂರಚನೆಯಾಚೆಗೂ ಸದೆಬಡಿಯುವ ಬಗ್ಗೆ ಅಮೆರಿಕ ವನ್ನು ಮನವೊಲಿಸುವಲ್ಲಿ ಹಾಗೂ ಚೀನದೊಂದಿಗಿನ ವಹಿವಾ ಟನ್ನು ಈ ಉಗ್ರ ಜಾಲದಿಂದ ಸಂಪೂರ್ಣ ಪ್ರತ್ಯೇಕಿಸುವಲ್ಲಿ ಭಾರತದ ರಾಜತಾಂತ್ರಿಕ ನಡೆಯ ಯಶಸ್ಸಿದೆ. ಅಫ್ಘಾನಿಸ್ಥಾನದ ರಾಜಕಾರಣ ಮತ್ತು ಅಮೆರಿಕದ ಹಿತಾಸಕ್ತಿ ಇದರಲ್ಲಿ ಅತ್ಯಂತ ಮಹತ್ವದ ದಾರಿಯೂ ಹೌದು. ಭಾರತ ಈ ನಿಟ್ಟಿನಲ್ಲಿ ಮಹತ್ವದ ಸಾಧನೆ ಮಾಡಿದೆಯಾದರೂ ಈವರೆಗೆ ಇದರ ಪರ್ಯಾಯ ಲಾಭಗಳನ್ನು ಪಡೆಯುವ ಸನ್ನಿವೇಶ ಉದ್ಭವಿಸಿರಲಿಲ್ಲ. ಈಗ ಅಫ್ಘಾನಿಸ್ಥಾನ ಹಾಗೂ ಬಲೂಚಿಸ್ಥಾನವನ್ನು ಮುಂದಿಟ್ಟುಕೊಂಡು ಪಾಕಿಸ್ಥಾನದಲ್ಲಿ ಪ್ರಜಾತಂತ್ರವನ್ನು ರಕ್ಷಿಸಬೇಕಿದೆ. ಇದೊಂದೇ ಮುಂಬರುವ ಸಮಸ್ಯೆ ಯಿಂದ ಕಾಶ್ಮೀರ ಹಾಗೂ ಭಾರತವನ್ನು ರಕ್ಷಿಸಬಹುದು. ಷರೀಫ್ ಪದತ್ಯಾಗ ಹೇಗೆ ಈವರೆಗಿನ ನಡೆಗಳಿಗೆ ಕಾರಣವಾ ಯಿತೋ, ಸಯೀದ್ ಬಿಡುಗಡೆಯೂ ಭಾರತದ ರಾಜತಾಂತ್ರಿಕ ನಿಲುವಿನಲ್ಲಿನ ಬದಲಾವಣೆಗೆ ಕಾರಣವಾಗಬೇಕಿದೆ.
ಕೃಷ್ಣ ಭಟ್
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.