ಮೆಗಾ ಯೋಜನೆಗಳ ಸುತ್ತಲೇ ಎಲೆಕ್ಷನ್ ಗಿರಕಿ
Team Udayavani, Sep 18, 2017, 8:19 AM IST
ಮುಂದಿನ ವರ್ಷ ಜಪಾನ್‌ನಲ್ಲಿ ಚುನಾವಣೆ ನಡೆಯಲಿದೆ. ಆದರೆ ಪ್ರಧಾನಿ ಅಬೆಯವರ ಜನಪ್ರಿಯತೆಯ ಗ್ರಾಫ್ ಇಳಿಯುತ್ತಿದೆ. ಅದಕ್ಕಾಗಿ ಅವರು ಇನ್ನಿಲ್ಲದ ಕಸರತ್ತು ನಡೆಸುತ್ತಿದ್ದಾರೆ. ಜತೆಗೆ ಅಬೆ ಇಮೇಜ್‌ಗೆ ಧಕ್ಕೆಯಾಗಿದೆ. ಇನ್ನು ಗುಜರಾತ್‌ನಲ್ಲಿ ಪಟೇಲರಿಗೆ ಮೀಸಲು ನೀಡುವ ವಿಚಾರದಲ್ಲಿ ಬಿಜೆಪಿಗೆ ಬಹಳಷ್ಟು ಹಿನ್ನಡೆಯಾದದ್ದು ಸತ್ಯ. ಅದಕ್ಕಾಗಿಯೇ ಸಿಎಂ ಬದಲಾವಣೆ ಮಾಡಲಾಯಿತು. ಇಲ್ಲಿಯೂ ಪ್ರಮುಖ ವರ್ಗವನ್ನು ಸಂತೈಸಲೋಸುಗ ಶತಪ್ರಯತ್ನ ನಡೆಸಲಾಗಿದೆ ಎಂಬುದು ಸುಳ್ಳಲ್ಲ.
ಯಾವುದೇ ದೇಶದ ರಾಜಕೀಯ ಇತಿಹಾಸ ತೆಗೆದುಕೊಂಡು ಕೊಂಚ ಪುಟಗಳನ್ನು ತಿರುವಿ ಹಾಕಿದಾಗ ಮೆಗಾ ಅಭಿವೃದ್ಧಿ ಯೋಜನೆಗಳ ಅನುಷ್ಠಾನದಲ್ಲಿ ಸಫಲತೆಯಷ್ಟೇ ಕೊರತೆಯೂ ಎದ್ದು ಕಾಣುತ್ತದೆ. ಅದರಲ್ಲೂ ನಮ್ಮ ದೇಶದ ಆಯ್ದ ಭಾಗಗಳಲ್ಲಿ ಹಿಂದಿನ ವರ್ಷಗಳ ಲ್ಲಿಯೂ ಸರ್ಕಾರಿ ಯೋಜನೆಗಳು ಫಲಪ್ರದ ವಾದದ್ದೂ, ವಿಫಲವಾದದ್ದೂ ಉಂಟು. ಅದೆಲ್ಲವು ಜಾರಿಗೊಳಿಸುವ ಹೊಣೆ ಹೊತ್ತಿರುವ ಅಧಿಕಾರಿ, ಜನನಾಯಕ ಮತ್ತು ಇತರರ ಬದ್ಧತೆ ಅವಲಂಬಿಸಿರುತ್ತದೆ. ಇದು ತಳಮಟ್ಟದ ವಿಚಾರವಾದರೆ, ಆಯಾ ರಾಷ್ಟ್ರಗಳ ರಾಜಧಾನಿ ಲೆಕ್ಕಾಚಾರದಲ್ಲಿ ದೂರಾಲೋಚನೆ ಬೇರೆಯೇ ಇರುತ್ತದೆ. ಜನಸಾಮಾನ್ಯರು ಅದರ ಆಳವನ್ನು ಅರಿಯಲು ಹೋಗುವುದೂ ಇಲ್ಲ. ಅಗತ್ಯವೂ ಇರುವುದಿಲ್ಲ.
ಇಷ್ಟೆಲ್ಲ ಪೀಠಿಕೆ ಏಕೆಂದರೆ ಬುಲೆಟ್ ಟ್ರೈನ್ ಯೋಜನೆ ಶಂಕು ಸ್ಥಾಪನೆಗೆ ಜಪಾನ್ ಪ್ರಧಾನಿ ಶಿಂಜೋ ಅಬೆ ಬಂದಿದ್ದರ ಹಿಂದಿನ ಕಥೆಯ ಬಗೆಗೆ. ಅವರು ಟೋಕಿಯೋದಿಂದ ನೇರವಾಗಿ ಬಂದಿಳಿ ದದ್ದೇ ಅಹಮದಾಬಾದ್‌ಗೆ. ಇದುವರೆಗಿನ ಪದ್ಧತಿ ನೋಡಿದರೆ ವಿದೇಶಿ ಸರ್ಕಾರಿ ಮುಖ್ಯಸ್ಥರು ನೇರವಾಗಿ ಬರುವುದು ನವದೆಹಲಿಗೆ. ಅಲ್ಲಿದ ಶಿಷ್ಟಾಚಾರ ಪ್ರಕಾರ ನಿಗದಿಯಾಗಿದ್ದರೆ ರಾಜಧಾನಿ ಹೊರತುಪಡಿಸಿದ ನಗರಗಳಿಗೆ ಭೇಟಿ ನೀಡುತ್ತಿದ್ದರು. ಆದರೆ ಅವರು ನೇರವಾಗಿ ಬಂದದ್ದೇ ಅಹಮದಾಬಾದ್‌ಗೆ. ಅಲ್ಲಿಯೇ ದ್ವಿಪಕ್ಷೀಯ ಮಾತುಕತೆ ನಡೆಸಿ ಹೋದರು. ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಗುಜರಾತ್‌ಗೆ ಬಂದಿದ್ದರೂ, ಅಧಿಕೃತ ಮಾತುಕತೆ ದಿಲ್ಲಿಯ ಅಧಿಕಾರದ ಪಡಸಾಲೆಯಲ್ಲೇ ನಡೆದಿತ್ತು.
ಅಬೆಯವರೇ ಭೂಮಿ ಪೂಜೆಗೆ ಬಂದುದರ ಹಿಂದೆ ಲೆಕ್ಕಾ ಚಾರವಿದೆ. ಹೇಳಿ ಕೇಳಿ ಅವರು 2012ರಿಂದ ಅಧಿಕಾರದಲ್ಲಿದ್ದಾರೆ. 2018ರ ಅಲ್ಲಿನ ಸಂಸತ್‌ನ ಕೆಳಮನೆ ನ್ಯಾಷನಲ್ ಡಯಟ್ ಆಫ್ ಜಪಾನ್‌ಗೆ ಅವಧಿಯಂತೆ ಚುನಾವಣೆ ನಡೆಯಲಿದೆ. ಆದರೆ ಇತ್ತೀಚಿನ ವರ್ಷಗಳಲ್ಲಿ ಅವರ ಜನಪ್ರಿಯತೆಯ ಗ್ರಾಫ್ ಕೆಳಗೆ ಇಳಿಯುತ್ತಿದೆ. ಅಬೆ ನಾಯಕತ್ವದ ಲಿಬರಲ್ ಡೆಮಾಕ್ರಾಟ್ ಪಕ್ಷಕ್ಕೆ ಟೋಕಿಯೋ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಭಾರಿ ಹಿನ್ನಡೆಯಾಗಿತ್ತು. ಕುತೂಹಲದ ಸಂಗತಿ ಏನೆಂದರೆ ಸೆ.13ರಂದು ಭಾರತದ ಪ್ರಧಾನಿ ನರೇಂದ್ರ ಮೋದಿ ಮತ್ತು ಜಪಾನ್ ಪ್ರಧಾನಿ ಶಿಂಜೋ ಅಬೆ ನಡೆಸಿದ ಒಂಬತ್ತು ಕಿಮೀ ದೂರದ ರೋಡ್ ಶೋನ ಫೋಟೋಗಳು ಜಪಾನ್‌ನ ಪ್ರಮುಖ ಪತ್ರಿಕೆಗಳ ಮುಖಪುಟದಲ್ಲಿಯೇ ಪ್ರಕಟವಾಗಿದ್ದವು.
ಶನಿವಾರ ಜಪಾನ್‌ನ ಪ್ರಮುಖ ಪತ್ರಿಕೆ “ದ ನಿಕ್ಕಿ’ಯ ಆನ್‌ಲೈನ್ ಆವೃತ್ತಿಯಲ್ಲಿ ಪ್ರಕಟವಾದ ಸುದ್ದಿ ಪ್ರಕಾರ ಈ ಮಾಸಾಂತ್ಯಕ್ಕೇ ಸಂಸತ್‌ನ ಕೆಳಮನೆ ವಿಸರ್ಜನೆ ಮಾಡಿ ಅವಧಿ ಪೂರ್ವ ಚುನಾವಣೆ ನಡೆಸುವ ಇರಾದೆ ಅಬೆಯವರದ್ದು. ಏಕೆಂದರೆ ಅವರು ಭಾರತ ಪ್ರವಾಸದಲ್ಲಿರುವಾಗಲೇ ಉತ್ತರ ಕೊರಿಯಾದ ಅಧ್ಯಕ್ಷ ಕಿಮ್ ಜಾಂಗ್ ಉನ್ ಅಮೆರಿಕವನ್ನು ಹುಚ್ಚು ನಾಯಿಗೆ ಹೊಡೆದಂತೆ ಹೊಡೆದು ಸಾಯಿಸುತ್ತೇವೆ, ಜಪಾನನ್ನು ಮುಳುಗಿಸುತ್ತೇವೆಂದು ಅಬ್ಬರಿಸಿ ಎರಡೂ ದೇಶಗಳು ಮೈಮುಟ್ಟುವಂತೆ ಅಣ್ವಸ್ತ್ರ ಕ್ಷಿಪಣಿ ಹಾರಿ ಬಿಟ್ಟಿದ್ದರು ನೋಡಿ. ಯಾವುದೇ ಯೋಜನೆ ಮತ್ತು ಘಟನೆಗಳು ರಾಷ್ಟ್ರ ರಾಜಧಾನಿಯಲ್ಲಿರುವ ಅಧಿಕಾರಸ್ಥರ ಮನಸ್ಸಿನ ಲೆಕ್ಕಾ ಚಾರ ಬೇರೆಯದನ್ನೇ ಮಾಡುತ್ತದೆ. ಅದನ್ನು ಚುನಾವಣಾ ವಿಚಾರ ವನ್ನಾಗಿಸುವ ಇರಾದೆಯಲ್ಲಿಯೂ ಇದ್ದಾರೆ ಅಬೆ. ಗುಜರಾತ್‌ನಿಂದ ಟೋಕಿಯೋಗೆ ತೆರಳಿದ ಬಳಿಕ ತಮ್ಮ ಪಕ್ಷ ಲಿಬರಲ್ ಡೆಮಾಕ್ರಾಟ್ ಪಕ್ಷದ ಪ್ರಧಾನ ಕಾರ್ಯದರ್ಶಿ ತೊಶಿಹಿರೊ ನಿಕಾಯ್ ಜತೆ ಕುಸಿಯುತ್ತಿರುವ ಜನಪ್ರಿಯತೆಯ ನಡುವೆ ಉಂಟಾದ ಉತ್ತರ ಕೊರಿಯಾ ತಂದಿಟ್ಟ ಆಘಾತವನ್ನು ಮತಗಳನ್ನಾಗಿ ಹೇಗೆ ಪರಿವರ್ತಿಸಬಹುದೆಂಬುದನ್ನು ಚರ್ಚಿಸಿದ್ದರು.
ಇನ್ನು ಜಪಾನ್‌ನಲ್ಲಿ ಹಾಲಿ ಪ್ರಧಾನಿ ಜಾರಿಗೆ ತಂದಿದ್ದ ಆರ್ಥಿಕ ನೀತಿ ಆರಂಭದಲ್ಲಿ ವಿಶ್ವದ ಪ್ರಮುಖ ನಾಯಕರಿಂದ ಮೆಚ್ಚುಗೆಗೆ ಒಳಪಟ್ಟು “ಅಬೆನಾಮಿಕ್ಸ್’ (ಶಿಂಜೋ ಅಬೆಯವರ ಸರಳ ಅರ್ಥವ್ಯವಸ್ಥೆ ನೀತಿ) ಎಂದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಸರು ತಂದುಕೊಟ್ಟಿತ್ತು. ಅದರಿಂದಾಗಿಯೇ 2012ರ ಚುನಾವಣೆ ಯಲ್ಲಿ ಅಬೆ ಪಕ್ಷ ಜಯಗಳಿಸಿತು. ಇನ್ನು ಟೋಕಿಯೋದಲ್ಲಿ ಶಾಲೆಯೊಂದಕ್ಕೆ ಸರ್ಕಾರಿ ಜಮೀನನ್ನು ಅತ್ಯಂತ ಕಡಿಮೆ ಮೊತ್ತದಲ್ಲಿ ನೀಡಿದ್ದು ಮತ್ತು ಹೇರಳ ಪ್ರಮಾಣದಲ್ಲಿ ಆರ್ಥಿಕ ನೆರವು ನೀಡಿದ್ದರಲ್ಲಿ ಅಬೆ ಪತ್ನಿ ಅಕಿ ಅಬೆ ವಿರುದ್ಧ ಆರೋಪಗಳಿವೆ. ಈ ಪ್ರಕರಣದ ವಿರುದ್ಧ ತನಿಖೆಯಾದರೂ ಆರೋಪಗಳ ನ್ನೇನೂ ಸಾಬೀತು ಮಾಡಲಿಲ್ಲ. ಆದರೆ ಅವರ ವರ್ಚಸ್ಸಿಗೆ ಧಕ್ಕೆ ಬಂದಿರುವುದಂತೂ ಸತ್ಯ.
ಅಬೆ ಪಕ್ಷಕ್ಕೆ ಸವಾಲಾಗಿರುವ ಮತ್ತೂಂದು ಘಟನೆ ಎಂದರೆ ನಿಕಟವರ್ತಿ, ಸಚಿವ ಟೊಮೊಮಿ ಇಂಡಾ ವಿರುದ್ಧ ರಕ್ಷಣಾ ಇಲಾಖೆಯಲ್ಲಿನ ಹಗಣದಿಂದಾಗಿ ರಾಜೀನಾಮೆ ನೀಡಬೇಕಾ ಗಿದ್ದು. ಅಬೆ ಚುನಾವಣೆಯಲ್ಲಿ ಸ್ಪರ್ಧಿಸದೇ ಇದ್ದರೆ ಅವರೇ ಪ್ರಧಾನಿ ಅಭ್ಯರ್ಥಿ ಎಂದೇ ಆಂತರಿಕ ವಲಯದಲ್ಲಿ ಚರ್ಚೆಯಾ ಗುತ್ತಿತ್ತು. ಇದು ಹೀಗಾದರೆ, ಅವರದ್ದೇ ಪಕ್ಷ ಲಿಬರಲ್ ಡೆಮಾ ಕ್ರಾಟ್‌ನಿಂದ ಸಿಡಿದು ಹೋದ ಯುರಿಕೋ ಕೊಯಿಕೆ ಸ್ಥಾಪನೆ ಮಾಡಿದ ಟೋಕಿಯೋ ಫಸ್ಟ್ ಪಕ್ಷ ಅಬೆಯವರಿಗೆ ಸವಲಾಗಿ ಬೆಳೆಯುತ್ತಿದೆ. ಏಕೆಂದರೆ ಅವರೇ ಟೋಕಿಯೋದ ಗವರ್ನರ್ ಕೂಡ ಆಗಿದ್ದಾರೆ. ಹೀಗಾಗಿ ತಮ್ಮ ಭಾರತ ಪ್ರವಾಸವನ್ನು ಅಲ್ಲಿನ ಪತ್ರಿಕೆಗಳಲ್ಲಿ ಆದ್ಯತೆಯಲ್ಲಿ ಪ್ರಕಟವಾಗುವಂತೆ ನೋಡಿಕೊಂಡು ಜಾರುತ್ತಿರುವ ವರ್ಚಸ್ಸಿನ ಗ್ರಾಫ್ ಕಾಯ್ದಿಟ್ಟುಕೊಳ್ಳುವ ಪ್ರಯತ್ನ ಮಾಡಿದ್ದಾರೆ. ಅಬೆ-ಮೋದಿ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಉತ್ತರ ಕೊರಿಯಾದ ಹೈಡ್ರೋಜನ್ ಬಾಂಬ್ ಪರೀಕ್ಷೆಯನ್ನೂ ಖಂಡಿಸಲಾಗಿತ್ತು.
ಇದುವರೆಗೆ ಓದಿದ್ದು ಜಪಾನ್ ಕತೆ. ಇನ್ನು ನಮ್ಮ ದೇಶಕ್ಕೆ ಬರೋಣ. ಬುಲೆಟ್ ಟ್ರೈನ್ ಅತ್ಯುತ್ತಮ ಯೋಜನೆಯಾದರೂ, ರಾಜಕೀಯ ಕೂಡ ಢಾಳಾಗಿಯೇ ಶುರುವಾಗಿದೆ. ಮಹಾರಾಷ್ಟ್ರ ದಲ್ಲಿ ಬಿಜೆಪಿಯ ಮಿತ್ರ ಪಕ್ಷ ಶಿವಸೇನೆ. ಹಲವಾರು ವಿಚಾರದಲ್ಲಿ ಬಿಜೆಪಿಗೆ ಟಾಂಗ್ ಕೊಡುತ್ತಾ ಬರುತ್ತಿರುವ ಉದ್ಧವ್ ಠಾಕ್ರೆ ನೇತೃತ್ವದ ಈ ಪಕ್ಷ ಈಗ ಪ್ರಧಾನಿಯವರ ಕನಸಿನ ಯೋಜನೆಯ ಬಗ್ಗೆಯೂ ಪ್ರಶ್ನೆಯೆತ್ತಿದೆ. ಇನ್ನು ಹೇಗಾದರೂ ಮಾಡಿ 2019ರ ಲೋಕಸಭೆ ಚುನಾವಣೆಯಲ್ಲಿ ಅಧಿಕಾರಕ್ಕೆ ಏರಬೇಕು. ಅದಕ್ಕಿಂತಲೂ ಮೊದಲೇ ನಡೆಯಲಿರುವ ಗುಜರಾತ್ ವಿಧಾನ ಸಭೆ ಚುನಾವಣೆ ಪ್ರಚಾರದಲ್ಲಿ ಪ್ರಧಾನಿ ನರೇಂದ್ರ ಮೋದಿ ಅದನ್ನು ಬಳಕೆ ಮಾಡಿಕೊಳ್ಳದೇ ಇರಲಾರರೇ ಎಂದು ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ ಸೆ.14ರಂದೇ ಪ್ರಶ್ನಿಸಿದ್ದರು. ಅಬೆ ನವದೆಹಲಿಗೆ ಬಾರದೆ ಅಹಮದಾಬಾದ್‌ಗೆ ಏಕೆ ಹೋದರು? ಬುಲೆಟ್ ಟ್ರೈನ್ ಮುಂಬೈನಿಂದ ಅಹಮದಾ ಬಾದ್‌ಗೆ ಮಾತ್ರ ಏಕೆ? ದೇಶದ ಉಳಿದೆಡೆ ಏಕಿಲ್ಲ? ಎಂಬಿತ್ಯಾದಿ ಪ್ರಶ್ನೆಯನ್ನು ಅವರು ಹಾಕಿದ್ದಾರೆ.
ಅದಕ್ಕೆ ಪೂರಕವಾಗಿ ಭಾನುವಾರ ಪ್ರಧಾನಿ ನರೇಂದ್ರ ಮೋದಿ ಯವರ 67ನೇ ಹುಟ್ಟುಹಬ್ಬವಿತ್ತು. ಅದೇ ದಿನದಂದು 56 ವರ್ಷಗಳ ಬಳಿಕ ನರ್ಮದಾ ನದಿಗೆ ಕಟ್ಟಲಾಗಿರುವ ಅಣೆಕಟ್ಟೆ ಉದ್ಘಾಟನೆಯಾಗಿದೆ. ಅದಕ್ಕಿಂತ ಎರಡು ದಿನಗಳ ಹಿಂದಷ್ಟೇ ಮೋದಿ ತವರು ರಾಜ್ಯದಲ್ಲಿದ್ದರು. ಇದೀಗ ಮತ್ತೆ ಅಲ್ಲಿಗೆ ಬಂದಿದ್ದಾರೆ. ಇಲ್ಲಿ ಉದ್ದೇಶ ಪ್ರಧಾನಿಯವರ ಗುಜರಾತ್ ಭೇಟಿ ತಪ್ಪು ಎಂದು ವಾದಿಸುವುದಲ್ಲ. ಏಕೆಂದರೆ ಪಟೇಲರಿಗೆ ಮೀಸಲು ನೀಡುವ ಹೋರಾಟದಲ್ಲಿ ಹಾರ್ದಿಕ್ ಪಟೇಲ್ ಮುಂಚೂಣಿಗೆ ಬಂದ ಬಳಿಕ ಪ್ರಧಾನಿಯವರು ಮತ್ತು ಬಿಜೆಪಿ ಅಧ್ಯಕ್ಷ ಅಮಿತ್ ಶಾ ಗುಜರಾತ್‌ನ ವಿಧಾನಸಭೆ ಚುನಾವಣೆ ಬಗ್ಗೆ ಇನ್ನಿಲ್ಲದ ಯೋಚನೆ ಮಾಡಬೇಕಾಗಿದೆ. ಅದಕ್ಕಾಗಿಯೇ ಮುಖ್ಯಮಂತ್ರಿಯಾಗಿದ್ದ ಆನಂದಿ ಬೆನ್ ಪಟೇಲ್‌ರನ್ನು ಕೆಳಗಿಳಿಸಿ ವಿಜಯ ರುಪಾಣಿ ಅವರನ್ನು ಮುಖ್ಯಮಂತ್ರಿಯನ್ನಾಗಿ ನೇಮಿಸಿದಾಗ ಪಟೇಲ್ ಸಮುದಾಯದ ಕೋಪ-ತಾಪ ತಗ್ಗಿಸಲು ನಿತಿನ್ ಪಟೇಲ್‌ರನ್ನು ಉಪ ಮುಖ್ಯಮಂತ್ರಿಯನ್ನಾಗಿ ಮಾಡಬೇಕಾಯಿತು.
ಪ್ರಧಾನಮಂತ್ರಿಯ ತವರು ರಾಜ್ಯದಲ್ಲಿನ ಚುನಾವಣೆ ಎಂದಾಗ ಹೈವೋಲ್ಟೆàಜ್ ಪ್ರಚಾರ, ಅದಕ್ಕೆ ತಕ್ಕಂತೆ ರಣತಂತ್ರ ಮಾಡಲೇ ಬೇಕಾಗುತ್ತದೆ. ಏಕೆಂದರೆ ಎನ್‌ಡಿಎಯೇತರ ಪಕ್ಷಗಳು ಹಾಲಿ ಕೇಂದ್ರ ಸರ್ಕಾರ ಕೈಗೊಂಡಿರುವ ನೋಟು ಅಮಾನ್ಯ ಸೇರಿದಂತೆ ಹಲವು ಯೋಜನೆಗಳು ವಿಫಲ ಎಂದೇ ಸಾಧಿಸುತ್ತಿವೆ. ಪರಿಸ್ಥಿತಿ ಹೀಗಿರುವಾಗ ಖುದ್ದಾಗಿ ಪ್ರಧಾನಿ ನರೇಂದ್ರ ಮೋದಿ ಗುಜರಾತ್‌ಗೆ ಆಗಮಿಸಿ ಅಲ್ಲಿನ ದೈನಂದಿನ ರಾಜಕೀಯದಲ್ಲಿ ಏನಾಗುತ್ತಿದೆ ಎಂದು ಪರಾಮರ್ಶೆ ನಡೆಸುವುದು ಸರಿಯಾಗಿಯೇ ಇದೆ. ಏಕೆಂದರೆ ಆ ರಾಜ್ಯದಲ್ಲಿ 2001ರಿಂದ ಬಿಜೆಪಿ ಸರ್ಕಾರ ಆಡಳಿತದಲ್ಲಿದೆ. ಹೀಗಾಗಿ, 2019ರ ಚುನಾವಣೆ ಗಮನದಲ್ಲಿರಿಸಿಕೊಂಡು ಗುಜರಾತ್ ವಿಧಾನಸಭೆ ಚುನಾವಣೆ ಗೆಲ್ಲಲೇ ಬೇಕಾಗಿದೆ. ಕೆಲ ದಿನಗಳ ಹಿಂದೆ ಎಬಿಪಿ ಸುದ್ದಿ ವಾಹಿನಿ ನಡೆಸಿದ ಸಮೀಕ್ಷೆ ಪ್ರಕಾರ ಬಿಜೆಪಿಯೇ ಅಧಿಕಾರ ಉಳಿಸಿಕೊಳ್ಳಲಿದೆ ಎಂದು ಚುನಾವಣಾ ಪೂರ್ವ ಭವಿಷ್ಯ ನುಡಿದಿತ್ತು. ಅದು ನಿಜವಾಗುತ್ತದೋ ಅಥವಾ ಬದಲಾವಣೆಯಾಗುತ್ತದೆಯೋ ಈಗಲೇ ಹೇಳಲು ಬರದು. ಒಂದಂತೂ ಸತ್ಯ. ಆ ರಾಜ್ಯದಲ್ಲಿ ಕಾಂಗ್ರೆಸ್‌ಗೆ ಪ್ರಬಲ ನಾಯಕತ್ವವಿಲ್ಲ. ಅದನ್ನೇ ವರವನ್ನಾಗಿಸಿಕೊಂಡು ಮತ್ತು ಬುಲೆಟ್ ಟ್ರೈನ್ ಮತ್ತು ನರ್ಮದಾ ಯೋಜನೆ ಜಾರಿಯ ಪೂರ್ಣತೆಯನ್ನು ಏಣಿಯನ್ನಾಗಿ ಪರಿವರ್ತನೆ ಮಾಡಿಕೊಂಡು ಮತ ಕೇಳುವುದಂತೂ ಖಚಿತವೇ. ಏಕೆಂದರೆ ದೇಶಕ್ಕೆ ಸ್ವಾತಂತ್ರ್ಯ ಬಂದು 70 ವರ್ಷಗಳಾದರೂ ಒಂದು ಅಣೆಕಟ್ಟಿನ ಕಾಮಗಾರಿ ಪೂರ್ತಿಯಾಗಿರಲಿಲ್ಲವೆಂದರೆ ಅಂತಾ ರಾಷ್ಟ್ರೀಯ ಮಟ್ಟದಲ್ಲಿ ನಗೆಪಾಟಲಿನ ವಿಚಾರವೇ. ಅದಕ್ಕೆ ಹಲವು ಪ್ರತಿರೋಧಗಳು ಉಂಟಾಗಿದ್ದವು ಎನ್ನುವುದು ಹಗಲಿನಷ್ಟೇ ಸತ್ಯ.
ಮೆಗಾ ಯೋಜನೆ ಮತ್ತು ಹಿಂದಿನ ಸರ್ಕಾರದ ನೀತಿಗಳ ಆಧರಿಸಿ ಚುನಾವಣೆ ಎದುರಿಸುವುದು ಅಮೆರಿಕದಲ್ಲಿಯೂ ಆಗಿ ಹೋಗಿದೆ. ಡೊನಾಲ್ಡ್ ಟ್ರಂಪ್ ಸರ್ಕಾರ ಐಟಿ ಉದ್ಯೋಗಿಗಳಿಗೆ ನೀಡುವ ಎಚ್-1ಬಿ ವೀಸಾಕ್ಕೆ ಈಗ ಬಹುತೇಕ ಕತ್ತರಿ ಬಿದ್ದಿದೆ. ಅದರ ಪರಿಣಾಮವೇ ಯುಎಇ, ಆಸ್ಟ್ರೇಲಿಯಾ ಮತ್ತಿತರ ರಾಷ್ಟ್ರಗಳಲ್ಲಿ ಅಲ್ಲಲ್ಲಿನ ಉದ್ಯೋಗ ಸ್ಥಳೀಯರಿಗೆ ಎಂಬ ನಿರ್ಣಯಕ್ಕೆ ಬರಲಾಗಿದೆ.
ಸದಾಶಿವ ಖಂಡಿಗೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.