ಮುಖ್ಯ ಮುಖವ್ಯಾವುದು ಮುಂದಿನ ಹೋರಾಟದಲ್ಲಿ?
Team Udayavani, Jul 17, 2017, 7:54 AM IST
ದೇಶದ ಬಹುಮುಖ್ಯ ಬೆಳವಣಿಗೆ ಸಂದರ್ಭದಲ್ಲಿ ರಾಹುಲ್ ಗಾಂಧಿ ದಿಢೀರನೇ ವಿದೇಶಕ್ಕೆ ಹೋಗುತ್ತಾರೆ. ವಿಶೇಷವೆಂದರೆ, ಅಭ್ಯರ್ಥಿ ಆಯ್ಕೆಯಿಂದ ಶುರುವಾಗಿ ಹೆಸರು ಘೋಷಿಸುವಾಗಲೂ ರಾಹುಲ್ ದೇಶದಲ್ಲಿ ಇರಲೇ ಇಲ್ಲ. ಇಂಥ ಸಂದರ್ಭದಲ್ಲಿ ಬೇರೆ ಬೇರೆ ಪಕ್ಷಗಳನ್ನು ಮನವೊಲಿಕೆ ಮಾಡುವ ಕೆಲಸವನ್ನು ಸೋನಿಯಾ ಅವರು ಮಾಡುತ್ತಾರೆ.
ಪ್ರತಿ ಬಾರಿಯೂ ಅಷ್ಟೇ, ಕೆಲವೊಂದು ರಾಜಕೀಯ ಸ್ಥಿತ್ಯಂತರಗಳು ಗೊತ್ತಿಲ್ಲದೇ ಆಗುತ್ತಲೇ ಇರುತ್ತವೆ. ಜತೆಗೆ ರಾಜಕೀಯದಲ್ಲಿ ಶಾಶ್ವತವಾಗಿ ಯಾರೂ ಶತ್ರುಗಳಲ್ಲ ಹಾಗೆಯೇ ಮಿತ್ರರೂ ಅಲ್ಲ ಎಂಬ ಮಾತುಗಳೂ ಕನ್ನಡಿಯೊಳಗಿನ ಪ್ರತಿಬಿಂಬದಷ್ಟೇ ಸತ್ಯವೂ ಹೌದು. ಪ್ರಧಾನಿ ನರೇಂದ್ರ ಮೋದಿ ಕಂಡರೆ ಬಿಹಾರ ಮುಖ್ಯಮಂತ್ರಿ ನಿತೀಶ್‌ಕುಮಾರ್ ಅವರಿಗೆ ಆಗುವುದೇ ಇಲ್ಲ. ಎಲ್ಲರಿಗಿಂತ ಮೊದಲು ಮೋದಿ ಅವರನ್ನು ರಾಜಕೀಯವಾಗಿ ದ್ವೇಷಿಸುವುದು ನಿತೀಶ್‌ಕುಮಾರ್ ಎಂಬ ಮಾತು ದೆಹಲಿ ರಾಜಕೀಯ ವಲಯದಲ್ಲಿ ಕೇಳಿಬರುತ್ತಲೇ ಇತ್ತು. ಆದರೆ, ವರ್ಷಗಳ ಹಿಂದೆ ಬಿಜೆಪಿ-ಜೆಡಿಯು ಒಟ್ಟಿಗೇ ಇದ್ದಾಗ ಮೋದಿ ಜತೆಗೆ ವೇದಿಕೆ ಹಂಚಿಕೊಳ್ಳಲ್ಲ ಎಂದು ನಿತೀಶ್ ಹಠ ಹಿಡಿದದ್ದು ಬಿಟ್ಟರೆ, ಮುಂದೆ ಭಾರಿ ಪ್ರಮಾಣದ ವಿರೋಧವೇನೂ ಕಾಣಿಸಲಿಲ್ಲ. ಜತೆಗೆ, ಎನ್‌ಡಿಎ ಸರ್ಕಾರ ರಚನೆಯಾದ ಮೇಲೆ ನರೇಂದ್ರ ಮೋದಿ ಅವರು ತೆಗೆದುಕೊಂಡ ಬಹುತೇಕ ಪ್ರಮುಖ ನಿರ್ಧಾರಗಳಿಗೆ ನಿತೀಶ್ ಜತೆಯಲ್ಲೇ ನಿಂತಿದ್ದಾರೆ. ಅದೂ ಇತರೆ ಪ್ರತಿಪಕ್ಷಗಳನ್ನು ಬಿಟ್ಟು.
ಹೌದು, ಇದನ್ನೆಲ್ಲಾ ಹೇಳಬೇಕಾಗಿ ಬಂದದ್ದು ರಾಜಕೀಯ ಬದಲಾವಣೆಗಳ ಬಗ್ಗೆ. 2019ಕ್ಕೆ ಪ್ರತಿಪಕ್ಷಗಳ ಸಾಲಿನಿಂದ ನಿತೀಶ್‌ಕುಮಾರ್ ಅವರೇ ಪ್ರಧಾನಿ ಅಭ್ಯರ್ಥಿ. ಇವರನ್ನು ಬಿಟ್ಟರೆ ಬೇರೆ ಫೇಸ್ ಇಲ್ಲವೇ ಇಲ್ಲ ಎಂಬ ಮಾತುಗಳು ಮಾಧ್ಯಮಗಳಲ್ಲಿ ಆಗಾಗ ಕೇಳಿಬರುತ್ತಲೇ ಇದ್ದವು. ಆದರೆ, ಇತ್ತೀಚೆಗಷ್ಟೇ ಈ ಮಾತಿಗೆ ಸ್ಪಷ್ಟನೆ ಕೊಟ್ಟಿರುವ ನಿತೀಶ್‌ಕುಮಾರ್, 2019ರಲ್ಲಿ ಪ್ರಧಾನಿ ಅಭ್ಯರ್ಥಿಯಾಗುವ ಯಾವುದೇ ಆಸೆ ನನಗಿಲ್ಲ ಎಂದು ಹೇಳುವ ಮೂಲಕ ಪ್ರತಿಪಕ್ಷಗಳ ಗುಂಪಿಗೆ ಶಾಕ್ ನೀಡಿದ್ದಾರೆ. ಆದರೂ, ಇನ್ನೂ ಹತ್ತಿರಹತ್ತಿರ ಎರಡು ವರ್ಷಗಳ ಸಮಯವಿರುವುದರಿಂದ ಆಗ ಏನುಬೇಕಾದರೂ ಆಗಬಹುದು. ನಿತೀಶ್ ಮನಸ್ಸು ಬದಲಿಸಿದರೂ ಅಚ್ಚರಿ ಏನಿಲ್ಲ. ಆದರೆ, ಇಷ್ಟೆಲ್ಲಾ ಹೇಳಬೇಕಾಗಿ ಬಂದದ್ದು, 2019ರ ಲೋಕಸಭೆ ಚುನಾವಣೆಗಾಗಿ ಪ್ರತಿಪಕ್ಷಗಳ ಅಥವಾ ಯುಪಿಎ ಕಡೆಯಿಂದ ತೋರಿಸಬೇಕಾಗಿರುವ “ಫೇಸ್’ ವಿಚಾರಕ್ಕಾಗಿ.
ಕಾಂಗ್ರೆಸ್ ಪಾಲಿಗೆ ಇಂದಿಗೂ ಪಕ್ಷದ ಉಪಾಧ್ಯಕ್ಷ ರಾಹುಲ್ ಅವರೇ ಪ್ರಧಾನಿ ಅಭ್ಯರ್ಥಿ. ಇದು ಈಗಿನದ್ದಲ್ಲ, ಹಿಂದೆ ಡಾ. ಮನಮೋಹನ್ ಸಿಂಗ್ ಅವರು 2014ರ ಲೋಕಸಭೆ ಚುನಾವಣೆ ವೇಳೆಯೂ ಪಕ್ಷ ಗೆದ್ದರೂ ತಾವು ಮುಂದೆ ಪ್ರಧಾನಿಯಾಗಲ್ಲ ಎಂದು ಹೇಳಿದ್ದರು. ಹೀಗಾಗಿ, 2014ರಲ್ಲೇ ಹೆಚ್ಚು ಕಡಿಮೆ ರಾಹುಲ್ ಗಾಂಧಿ ಅವರೇ ಯುಪಿಎ ಪಕ್ಷಗಳ ಕಡೆಯಿಂದ ಪ್ರಧಾನಿ ಅಭ್ಯರ್ಥಿ ಎಂದೇ ಬಿಂಬಿತವಾಗಿದ್ದರು. ಆದರೆ, 2019ಕ್ಕೂ ರಾಹುಲ್ ಗಾಂಧಿ ಅವರೇ ಪ್ರಧಾನಿ ಅಭ್ಯರ್ಥಿಯಾಗಿ ಇರುತ್ತಾರಾ? ಇತ್ತೀಚೆಗಷ್ಟೇ ಆಂಗ್ಲ ವಾಹಿನಿಯೊಂದರ ಜತೆ ಮಾತನಾಡಿದ್ದ ದೇಶದ ಪ್ರಸಿದ್ಧ ಇತಿಹಾಸಗಾರ ರಾಮಚಂದ್ರಗುಹಾ ಅವರು, ಅಸಾಧ್ಯವೆಂದೇ ಹೇಳಬಹುದಾದ ಒಂದು ಸಿನಾರಿಯೋ ಅಥವಾ ಫ್ಯಾಂಟಸಿ ರೂಪದ ಜೋಡಣೆಗಳನ್ನು ಬಿಚ್ಚಿಟ್ಟಿದ್ದರು. ಇವರ ಪ್ರಕಾರ, ಸದ್ಯಕ್ಕೆ ಕಾಂಗ್ರೆಸ್ ಎಂದರೆ ನಾಯಕನಿಲ್ಲದ ಪಕ್ಷ. ಹಾಗೆಯೇ ನಿತೀಶ್‌ಕುಮಾರ್ ಎಂದರೆ ಪಕ್ಷವೇ ಇಲ್ಲದ ನಾಯಕ. ಹೀಗಾಗಿ ಕಾಂಗ್ರೆಸ್ ಈಗಲೂ ಮನಸ್ಸು ಬದಲಾವಣೆ ಮಾಡಿ ನಿತೀಶ್‌ಕುಮಾರ್ ಅವರಿಗೆ ಕಾಂಗ್ರೆಸ್ ಅಧ್ಯಕ್ಷ ಪಟ್ಟ ಕಟ್ಟಿದರೆ 2019ರ ಚುನಾವಣಾ ಫಲಿತಾಂಶವೇ ಬೇರೆಯಾಗಬಹುದು ಎಂದಿದ್ದರು.
ಈ ಹಿಂದೆ ಕೂಡ ಗುಹಾ ಅವರು ರಾಹುಲ್ ನಾಯಕತ್ವದ ಬಗ್ಗೆ ಮಾತನಾಡಿ, ಇಂಥದ್ದೇ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದರು. ಮೋದಿ ಮತ್ತು ಅಮಿತ್ ಷಾ ಅವರನ್ನು ಎದುರಿಸಬೇಕಾದರೆ ಕಾಂಗ್ರೆಸ್‌ಗೆ ಪರ್ಯಾಯ ನಾಯಕತ್ವ ಅನಿವಾರ್ಯ ಎಂದೂ ಹೇಳಿದ್ದರು. ಇಲ್ಲದಿದ್ದರೆ ದೇಶವ್ಯಾಪಿ ಯಶಸ್ಸಿನ ಮೇಲೆ ಯಶಸ್ಸು ಹೊತ್ತು ಸಾಗುತ್ತಿರುವ ಈ ಜೋಡಿಗೆ ಸರಿಯಾಗಿ ಸವಾಲು ಹಾಕುವುದು ಕಷ್ಟವೇ ಎಂದು ಹೇಳಿದ್ದರು. ಇದೀಗ ಅದೇ ಮಾದರಿಯ ಮಾತುಗಳನ್ನಾಡಿರುವ ಗುಹಾ, ಇದಕ್ಕೆ ವಿಸ್ತೃತ ವಿವರಣೆಯನ್ನೂ ನೀಡಿದ್ದಾರೆ. ಇಡೀ ದೇಶವೇ ಕಂಡಂತೆ ನಿತೀಶ್‌ಕುಮಾರ್ ಒಬ್ಬ ಅತ್ಯಂತ ಗೌರವಾನ್ವಿತ ನಾಯಕ. ಪಕ್ಷ ರಾಜಕೀಯಗಳನ್ನು ಬದಿಗಿರಿಸಿ ಇಡೀ ದೇಶವೇ ನಿತೀಶ್ ಅವರನ್ನು ಒಪ್ಪುತ್ತದೆ. ನಿತೀಶ್ ಅವರು ಭ್ರಷ್ಟಾಚಾರವೂ ಸೇರಿದಂತೆ ಯಾವುದೇ ಸೈದ್ಧಾಂತಿಕ ಸಂಘರ್ಷಗಳಿಗೆ ಸಿಲುಕಿ ಹೆಸರನ್ನು ಕೆಡಿಸಿಕೊಂಡಿಲ್ಲ. ಹೀಗಾಗಿಯೇ ಪ್ರತಿಪಕ್ಷಗಳ ಸಾಲಿನಿಂದ ನಿತೀಶ್ ಅವರೇ ಪ್ರಧಾನಿ ಹುದ್ದೆಗೆ ಸೂಕ್ತ ಅಭ್ಯರ್ಥಿ
ಎಂದಿದ್ದಾರೆ. ಇದು ಕೇವಲ ಇತಿಹಾಸಕಾರ ಗುಹಾ ಅವರ ಮಾತುಗಳಿಗೆ ಸೀಮಿತವಾಗಿಲ್ಲ. ಸದ್ಯಕ್ಕೆ ಯುಪಿಎ ಜತೆಯಲ್ಲೇ ಇರುವ ರಾಷ್ಟ್ರೀಯ ಜನತಾ ದಳದ ನಾಯಕ ಲಾಲು ಪ್ರಸಾದ್ ಯಾದವ್ ಅವರೂ ಇಂಥದ್ದೇ ಮಾತುಗಳನ್ನಾಡಿದ್ದಾರೆ. ಆದರೆ ಅವರು ನಿತೀಶ್ ಅವರ ಹೆಸರನ್ನು ಪ್ರಸ್ತಾಪಿಸದೇ ಗಾಂಧಿ ಕುಟುಂಬದ ಮತ್ತೂಂದು ಕುಡಿ ಪ್ರಿಯಾಂಕಾ ವಾದ್ರಾ ಅವರತ್ತ ಬೆರಳು ತೋರುತ್ತಾರೆ. ಸದ್ಯದ ರಾಜಕೀಯ ಪರಿಸ್ಥಿತಿಯಲ್ಲಿ ಕಾಂಗ್ರೆಸ್ ಮುಖ್ಯಸ್ಥೆಯಾಗಿ ಪ್ರಿಯಾಂಕಾ ವಾದ್ರಾ ಬರಬೇಕು. ಜತೆಗೆ ಅವರ ಪತಿ ರಾಬರ್ಟ್ ವಾದ್ರಾ ಅವರೂ ಬರಲಿ. ಉತ್ತರ ಪ್ರದೇಶದಲ್ಲಿ ಮಾಯಾವತಿ ಮತ್ತು ಅಖೀಲೇಶ್ ಯಾದವ್ ಒಂದಾಗಲಿ, ಒಡಿಶಾದಿಂದ ನವೀನ್ ಪಟ್ನಾಯಕ್, ಪಶ್ಚಿಮ ಬಂಗಾಳದಿಂದ ಮಮತಾ ಬ್ಯಾನರ್ಜಿ, ದೆಹಲಿಯಿಂದ ಅರವಿಂದ್ ಕೇಜ್ರಿವಾಲ್ ಬಂದು ಎಲ್ಲರೂ ಸೇರಿ ಒಟ್ಟಾದರೆ 2019ರಲ್ಲಿ ನಮ್ಮದೇ ಗೆಲುವು ಎಂದ ಹೇಳಿದ್ದಾರೆ. ಆದರೆ ಇವರು ಎಲ್ಲಿಯೂ ರಾಹುಲ್ ಗಾಂಧಿ ಅವರ ಹೆಸರನ್ನೇ ಪ್ರಸ್ತಾಪಿಸಿಲ್ಲ. ಇದಕ್ಕೆ ಬದಲಾವಣೆ ಪ್ರಿಯಾಂಕಾ ವಾದ್ರಾ ಅವರನ್ನು ಮುಂಚೂಣಿಗೆ ತಂದು ನಿಲ್ಲಿಸಿದ್ದಾರೆ. ಲಾಲು ಅವರ ಈ ಅಭಿಪ್ರಾಯದಂತೆ ಹೋಗುವುದಾದರೆ ಕಾಂಗ್ರೆಸ್ ಪ್ರಿಯಾಂಕಾ ವಾದ್ರಾ ಅವರಿಗೇ ಮಣೆ ಹಾಕಬೇಕು.
ಇನ್ನು ಕೆಲವೇ ದಿನಗಳಲ್ಲಿ ಕಾಂಗ್ರೆಸ್‌ನ ಪದಾಧಿಕಾರಿಗಳ ಆಯ್ಕೆಗಾಗಿ ಚುನಾವಣೆ ಕೂಡ ನಡೆಯಲಿದೆ. ಒಂದು ಮೂಲಗಳ ಪ್ರಕಾರ, ಸೋನಿಯಾ ಗಾಂಧಿ ಅವರು, ಪಕ್ಷದ ಅಧ್ಯಕ್ಷೆ ಸ್ಥಾನ ತೊರೆದು, ರಾಹುಲ್ ಗಾಂಧಿ ಹಾದಿ ಸುಗಮ ಮಾಡಿಕೊಡುತ್ತಾರೆ ಎಂದೇ ಹೇಳಲಾಗುತ್ತಿದೆ. ಆದರೆ, ಇತ್ತೀಚಿನ ಬೆಳವಣಿಗೆಗಳನ್ನು ನೋಡಿದರೆ, ಇದೂ ಅಸಾಧ್ಯವೆಂದೇ ಹೇಳಲಾಗುತ್ತಿದೆ. ಇದಕ್ಕೆ ರಾಹುಲ್ ಗಾಂಧಿ ಅವರ ಕೆಲವು ನಿರ್ಧಾರಗಳು ಮತ್ತು ನಡೆಗಳು ಪುಷ್ಠಿ ನೀಡುತ್ತಿವೆ. ಮೊದಲನೆಯದಾಗಿ, ರಾಷ್ಟ್ರಪತಿ ಚುನಾವಣೆಯಂಥ ದೇಶದ ಬಹುಮುಖ್ಯ ಬೆಳವಣಿಗೆ ಸಂದರ್ಭದಲ್ಲಿ ರಾಹುಲ್ ಗಾಂಧಿ ದಿಢೀರನೇ ವಿದೇಶಕ್ಕೆ ಹೋಗುತ್ತಾರೆ. ವಿಶೇಷವೆಂದರೆ, ಅಭ್ಯರ್ಥಿ ಆಯ್ಕೆಯಿಂದ ಶುರುವಾಗಿ ಹೆಸರು ಘೋಷಿಸುವಾಗಲೂ ರಾಹುಲ್ ದೇಶದಲ್ಲಿ ಇರಲೇ ಇಲ್ಲ. ಇಂಥ ಸಂದರ್ಭದಲ್ಲಿ ಬೇರೆ ಬೇರೆ ಪಕ್ಷಗಳನ್ನು ಮನವೊಲಿಕೆ ಮಾಡುವ ಕೆಲಸವನ್ನು ಸೋನಿಯಾ ಗಾಂಧಿ ಅವರು ಮಾಡುತ್ತಾರೆ. ಕಡೆಗೆ ಮೀರಾಕುಮಾರ್ ಅವರನ್ನು ಆಯ್ಕೆ ಮಾಡಿ ಕಣಕ್ಕಿಳಿಸುತ್ತಾರೆ. ಎರಡನೆಯದಾಗಿ, ಚೀನಾ ರಾಯಭಾರಿ ಕಚೇರಿ ಭೇಟಿ ವಿವಾದ‡, ಇಲ್ಲೂ ಅಷ್ಟೇ, ವಿವಾದ ಎದ್ದ ದಿನ ಬೆಳಗ್ಗೆಯೇ ಪತ್ರಿಕಾಗೋಷ್ಠಿ ನಡೆಸಿದ್ದ ಪಕ್ಷದ ವಕ್ತಾರರು, ರಾಹುಲ್ ಗಾಂಧಿ ಚೀನಾ ರಾಯಭಾರಿಯನ್ನು ಭೇಟಿ ಮಾಡಲೇ ಇಲ್ಲ. ಇದೆಲ್ಲವೂ ಮೋದಿ ಭಕ್ತರ ಸುದ್ದಿ ವಾಹಿನಿಗಳು ಮಾಡುತ್ತಿರುವ ಸುಳ್ಳು ಸುದ್ದಿಗಳು ಎಂದು ಹೇಳಿದ್ದರು. ಆದರೆ ಕೆಲ ಹೊತ್ತಿನಲ್ಲೇ ರಾಹುಲ್ ಗಾಂಧಿ ಅವರು ಟ್ವೀಟ್ ಮಾಡಿ, ತಾವು ಚೀನಾ ರಾಯಭಾರಿಯನ್ನು ಭೇಟಿ ಮಾಡಿದ್ದು ಸತ್ಯ ಎಂದು ಹೇಳಿದ್ದಲ್ಲದೇ, ಜತೆಗೆ ಭೂತಾನ್ ರಾಯಭಾರ ಕಚೇರಿಗೂ ಹೋಗಿ ಬಂದುದಾಗಿ ಹೇಳಿಬಿಟ್ಟರು. ವಿಚಿತ್ರವೆಂದರೆ, ಕಾಂಗ್ರೆಸ್ ಆಗ ತಾನೇ ಪ್ರಧಾನಿ ನರೇಂದ್ರ ಮೋದಿ ಅವರು ಜಿ20 ಶೃಂಗದಲ್ಲಿ ಚೀನಾ ಅಧ್ಯಕ್ಷ ಕ್ಸಿಪಿಂಗ್ ಅವರನ್ನು ಭೇಟಿ ಮಾಡಿದ್ದನ್ನು ವಿರೋಧಿಸಿತ್ತು. ಸಿಕ್ಕಿಂ ಗಡಿ ವಿಚಾರದಲ್ಲಿ ಎರಡು ದೇಶಗಳ ನಡುವೆ ವೈಮನಸ್ಸು ಇರುವಾಗ ಫೋಟೋಗಾಗಿ ಭೇಟಿ ಕೊಟ್ಟದ್ದು ಸರಿಯೇ ಎಂದು ಛೇಡಿಸಿದ್ದರು. ಇಂಥ ಸಂದರ್ಭದಲ್ಲೇ ರಾಹುಲ್ ಗಾಂಧಿ ಅವರು ಅತ್ಯಂತ ರಹಸ್ಯವಾಗಿ ಚೀನಾ ರಾಯಭಾರ ಕಚೇರಿಗೆ ಹೋಗಿದ್ದು ಏಕೆ ಎಂಬ ಪ್ರಶ್ನೆಯನ್ನು ಬಿಜೆಪಿ ಕೇಳತೊಡಗಿದರೆ, ಕಾಂಗ್ರೆಸ್ ತೀವ್ರ ಮುಜುಗರಕ್ಕೀಡಾಯಿತು.
ಈ ಪ್ರಕರಣದಲ್ಲಿ ನಿಜವಾಗಿಯೂ ಆಗಿದ್ದುದು ಸಂವಹನದ ಕೊರತೆ. ಸುದ್ದಿ ವಾಹಿನಿಗಳಲ್ಲಿನ ಸುದ್ದಿ ನೋಡಿ ವಕ್ತಾರರು ಪ್ರತಿ ಹೇಳಿಕೆ ಕೊಟ್ಟ ನಂತರವೂ, ರಾಹುಲ್ ಗಾಂಧಿ ಅವರು ವಕ್ತಾರರ ಸ್ಪಷ್ಟನೆ ಬಗ್ಗೆ ಅರಿವೇ ಇಲ್ಲದೇ ಟ್ವಿಟರ್‌ನಲ್ಲಿ ಭೇಟಿಯ ಬಗ್ಗೆ ಒಪ್ಪಿಕೊಂಡಿದ್ದು ಕಾಂಗ್ರೆಸ್ ಪಾಲಿಗೆ ದೊಡ್ಡ ಆಘಾತವೇ ಆಗಿಬಿಟ್ಟಿತು. ಹೀಗಾಗಿಯೇ ಅಂದೇ ಸೋನಿಯಾ ಗಾಂಧಿ ಅವರು ಸಂವಹನದ ಕೊರತೆ ನಿವಾರಣೆಗಾಗಿ ಹಳೆ ತಲೆಗಳನ್ನೊಳಗೊಂಡ ಸಂವಹನ ತಂಡವನ್ನೇ ರಚಿಸಿತು. ಇದಾದ ಬಳಿಕ, ಕಾಂಗ್ರೆಸ್ 2019ಕ್ಕೆ ರಾಹುಲ್‌ಗೆ ಬದಲಿಯಾಗಿ ಬೇರೆಯವರನ್ನು ಮುಂದೆ ನಿಲ್ಲಿಸಬೇಕೇ ಅಥವಾ ಸೋನಿಯಾ ಅವರ ನೇತೃತ್ವದಲ್ಲಿ ಚುನಾವಣೆಗೆ ಹೋಗಬೇಕೇ ಎಂಬ ಸಂದಿಗ್ಧತೆಯಲ್ಲಿದೆ.
ಕೆಲವು ಸುದ್ದಿ ವಾಹಿನಿಗಳ ಪ್ರಕಾರ, ಮುಂದಿನ ಲೋಕಸಭೆ ಚುನಾವಣೆ ವೇಳೆಗೆ ರಾಹುಲ್ ಅವರನ್ನು ಪ್ರಧಾನಿ ಅಭ್ಯರ್ಥಿಯಾಗಿ ಬಿಂಬಿಸುವುದಿಲ್ಲ. ಆದರೆ ಯಾರನ್ನು ಬಿಂಬಿಸಲಾಗುತ್ತದೆ ಎಂಬ ಬಗ್ಗೆ ಇನ್ನೂ ಮಾಹಿತಿ ಇಲ್ಲ. ಅಲ್ಲದೆ ರಾಷ್ಟ್ರೀಯ ಪಕ್ಷಗಳೇ ಏಕೆ ಮೊದಲು ನಿರ್ಣಯ ತೆಗೆದುಕೊಳ್ಳಬೇಕು ಎಂಬ ಕೆಲವು ಪ್ರಾದೇಶಿಕ ಪಕ್ಷಗಳ ಚಿಂತನೆಯೂ ರಾಹುಲ್ ಪಾಲಿಗೆ ಅಡ್ಡಗಾಲಾದರೆ ಅಚ್ಚರಿಯೂ ಇಲ್ಲ. ಅಲ್ಲದೆ ಗಾಂಧಿ ಅವರ ಮೊಮ್ಮಗ ಗೋಪಾಲಕೃಷ್ಣ ಗಾಂಧಿ ಅವರನ್ನು ಉಪರಾಷ್ಟ್ರಪತಿ ಅಭ್ಯರ್ಥಿಯನ್ನಾಗಿ ಆಯ್ಕೆ
ಮಾಡಿದ ವೇಳೆ ಇಂಥ ಚಿಂತನೆಯೊಂದು ಮೊಳಕೆಯೊಡೆದಿದೆ ಎಂದೂ ಹೇಳಲಾಗುತ್ತಿದೆ.
ಸೋಮಶೇಖರ ಸಿ.ಜೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.