ಪಂಜಾಬ್‌ನಲ್ಲಿ ಯಾರಿಗೆ ಜಯದ ಸಿಹಿ?
Team Udayavani, Jan 17, 2022, 7:25 AM IST
ಒಂದಿಲ್ಲೊಂದು ಕಾರಣದಿಂದಾಗಿ ಸದಾ ಸುದ್ದಿಯಲ್ಲೇ ಇರುವ ಪಂಜಾಬ್‌ನ ರಾಜಕೀಯವೇ ವಿಚಿತ್ರ. ಇಲ್ಲಿನ ರಾಜಕೀಯ ಹೇಗೆ ತನ್ನ ಚಿತ್ರಣವನ್ನು ಬದಲಿಸಿಕೊಳ್ಳುತ್ತದೆ ಎಂದು ಹೇಳುವುದೂ ಅಸಾಧ್ಯ. 2017ರ ಚುನಾವಣೆಯನ್ನೇ ತೆಗೆದುಕೊಳ್ಳಿ. ಆಗ ಪಂಜಾಬ್‌ನಲ್ಲಿ ಅಧಿಕಾರದಲ್ಲಿದ್ದ ಶಿರೋಮಣಿ ಅಕಾಲಿ ದಳ ಮತ್ತು ವಿಪಕ್ಷ ಕಾಂಗ್ರೆಸ್ ನಡುವೆ ನೇರ ಹಣಾಹಣಿ ಇದೆ ಎಂದೇ ಹೇಳಲಾಗುತ್ತಿತ್ತು. ಆದರೆ, ಸದ್ದುಗದ್ದಲವಿಲ್ಲದೇ ದಿಲ್ಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರ ಆಮ್ ಆದ್ಮಿ ಪಕ್ಷ ಧುತ್ತೆಂದು ಬಂದು ಕುಳಿತಿತ್ತು.
ವಿಪಕ್ಷ ಕಾಂಗ್ರೆಸ್ ಕೂಡ ಹೆಚ್ಚು ಕಡಿಮೆ ಪಂಜಾಬ್‌ನಲ್ಲಿ ತನ್ನ ಅಸ್ತಿತ್ವ ಕಳೆದುಕೊಂಡಿದೆ ಎಂದೇ ಹೇಳಲಾಗುತ್ತಿತ್ತು. ಆದರೆ ಆಗ ದಿಲ್ಲಿ ಹೈಕಮಾಂಡ್ ಅನ್ನೂ ಮೀರಿ, ಕ್ಯಾಪ್ಟನ್ ಅಮರೀಂದರ್ ಸಿಂಗ್ ಅವರು ತಮ್ಮನ್ನು ಪಂಜಾಬ್‌ನ ಕ್ಯಾಪ್ಟನ್ ಎಂದು ಬಿಂಬಿಸಿಕೊಂಡರು. ಪಂಜಾಬ್‌ನ ಮತದಾರರೂ ಅವರ ಕೈಬಿಡಲಿಲ್ಲ.
ವಿಶೇಷವೆಂದರೆ 2017ರ ಪಂಜಾಬ್ ಚುನಾವಣ ಫಲಿತಾಂಶ ವಿವಿಧ ಕಾರಣಗಳಿಗಾಗಿ ಸದ್ದು ಮಾಡಿತ್ತು. ವಿಪಕ್ಷ ಕಾಂಗ್ರೆಸ್ ಅಧಿಕಾರಕ್ಕೇರಿದರೆ ಆಡಳಿತದಲ್ಲಿದ್ದ ಶಿರೋಮಣಿ ಅಕಾಲಿ ದಳ ಮೂರನೇ ಸ್ಥಾನಕ್ಕೆ ಹೋಯಿತು. ಆಪ್ ಪಕ್ಷ ಎರಡನೇ ಸ್ಥಾನಕ್ಕೆ ಬಂದಿತು. ಇದು ಒಂದು ಲೆಕ್ಕಾಚಾರದಲ್ಲಿ ಶಿರೋಮಣಿ ಅಕಾಲಿ ದಳಕ್ಕೆ ದೊಡ್ಡ ಪೆಟ್ಟನ್ನೇ ನೀಡಿತು. ಇದಾದ ಬಳಿಕವೇ ಪ್ರತೀ ಬಾರಿ ಚುನಾವಣೆಯಲ್ಲಿ ದ್ವಿಪಕ್ಷೀಯ ಸ್ಪರ್ಧೆ ಕಾಣುತ್ತಿದ್ದ ಪಂಜಾಬ್ ರಾಜಕೀಯದಲ್ಲಿ ತ್ರಿಕೋನ ಸ್ಪರ್ಧೆ ಎರ್ಪಟ್ಟಿತು.
2022ರ ವಿಧಾನಸಭೆ ಚುನಾವಣೆಯೂ ಬೇರೊಂದು ಕಾರಣಕ್ಕಾಗಿ ಸದ್ದು ಮಾಡುತ್ತಿದೆ. ಪಂಜಾಬ್‌ನ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ಪಂಚಕೋನ ಫೈಟ್ ಕಾಣಿಸುತ್ತಿದೆ. ಕಾಂಗ್ರೆಸ್, ಆಪ್, ಎಸ್‌ಎಡಿ+ಬಿಎಸ್‌ಪಿ, ಬಿಜೆಪಿ+ಪಂಜಾಬ್ ಲೋಕ ಕಾಂಗ್ರೆಸ್+ಅಕಾಲಿ ಫ್ಯಾಕ್ಷನ್ ಮತ್ತು ರೈತರ ಸಂಯುಕ್ತ ಸಮಾಜ್ ಮೋರ್ಚಾ ನಡುವೆ ಸ್ಪರ್ಧೆ ಇದೆ. ಇದುವರೆಗೆ ಬಂದಿರುವ ಎಲ್ಲ ಚುನಾವಣ ಸಮೀಕ್ಷೆಗಳು ಅರವಿಂದ ಕೇಜ್ರಿವಾಲ್ ಅವರ ಆಮ್ ಆದ್ಮಿ ಪಕ್ಷವೇ ಹೆಚ್ಚಿನ ಸ್ಥಾನ ಗೆಲ್ಲಲಿದೆ ಎಂದು ಭವಿಷ್ಯ ನುಡಿದಿವೆ.
ಮೊದಲೇ ಹೇಳಿದಂತೆ ಈ ಬಾರಿಯ ಚುನಾವಣೆ ಬೇರೆ ಬೇರೆ ಕಾರಣಗಳಿಗಾಗಿ ಸುದ್ದಿಯಲ್ಲಿದೆ. ಪ್ರಮುಖವಾಗಿ ಇಲ್ಲಿನ ರಾಜಕೀಯ ಪಕ್ಷಗಳ ಒಳಗಿನ ಚಟುವಟಿಕೆಗಳೂ ಇಡೀ ದೇಶದ ಗಮನ ಸೆಳೆದಿವೆ. ಇಲ್ಲಿನ ಪ್ರಮುಖ ರಾಜಕೀಯ ಪಕ್ಷ ಕಾಂಗ್ರೆಸ್‌ನ ಆಂತರಿಕ ಕಚ್ಚಾಟಗಳು ದೇಶವ್ಯಾಪಿಯಾಗಿ ಸುದ್ದಿಯಲ್ಲಿವೆ. ಇದು ಈಗಲ್ಲ, ಕಳೆದ ಒಂದೂವರೆ ಎರಡು ವರ್ಷದಿಂದಲೂ ಒಳಜಗಳ ಮಾಮೂಲಿಯಾಗಿದೆ.
ಆರಂಭದಲ್ಲಿ ಮಾಜಿ ಸಿಎಂ ಕ್ಯಾಪ್ಟನ್ ಅಮರೀಂದರ್ ಸಿಂಗ್ ಮತ್ತು ಕಾಂಗ್ರೆಸ್ ನಾಯಕ ನವಜೋತ್ ಸಿಂಗ್ ಸಿಧು ನಡುವೆ ಆಂತರಿಕ ಸಂಘರ್ಷ ನಡೆಯುತ್ತಲೇ ಇತ್ತು. ಇದನ್ನು ಬಗೆಹರಿಸುವಲ್ಲಿ ಕಾಂಗ್ರೆಸ್ ಹೈಕಮಾಂಡ್ ಕೂಡ ಸೋತಿತ್ತು. ಆದರೂ ಎಲ್ಲೋ ಒಂದು ಕಡೆ ಹೈಕಮಾಂಡ್ ಸಿಧು ಪರವೇ ನಿಂತಿತು ಎಂಬ ಮಾತುಗಳು ಕೇಳಿಬಂದಿದ್ದವು. ಈ ಆಂತರಿಕ ಸಂಘರ್ಷದಿಂದಾಗಿ ಕ್ಯಾಪ್ಟನ್ ಸಿಎಂ ಸ್ಥಾನ ಕಳೆದುಕೊಂಡು, ಕಾಂಗ್ರೆಸ್ ಬಿಟ್ಟು ಹೊಸ ಪಕ್ಷವನ್ನೇ ಕಟ್ಟಿದರು. ಹೊಸದಾಗಿ ಬಂದ ದಲಿತ ಸಮುದಾಯದ ಸಿಎಂ ಚರಣ್ ಜಿತ್ ಸಿಂಗ್ ಚನ್ನಿ ಮತ್ತು ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ನವಜೋತ್ ಸಿಂಗ್ ಸಿಧು ನಡುವೆ ಸಂಘರ್ಷ ಏರ್ಪಟ್ಟಿತು. ಈಗಂತೂ ಕಾಂಗ್ರೆಸ್ ಇವರಿಬ್ಬರ ನಡುವಿನ ಆಂತರಿಕ ಜಗಳದಿಂದ ರೋಸಿಹೋಗಿದೆ. ಹೀಗಾಗಿಯೇ ಈ ಚುನಾವಣೆಯಲ್ಲಿ ಸಿಎಂ ಅಭ್ಯರ್ಥಿಯನ್ನಾಗಿ ಯಾರ ನ್ನೂ ಘೋಷಿಸಿಲ್ಲ. ಇದು ಚನ್ನಿ ಕೋಪಕ್ಕೆ ಕಾರಣವಾದರೆ, ಸಿಧು ಬಹಿರಂಗವಾಗಿಯೇ ಹೈಕಮಾಂಡ್ ವಿರುದ್ಧ ಕಿಡಿಕಾರಿದ್ದಾರೆ. ಈ ಎಲ್ಲ ಬೆಳವಣಿಗೆಗಳು ಕಾಂಗ್ರೆಸ್‌ಗೆ ಹೊಡೆತ ಕೊಡಬಹುದು ಎಂಬ ಮಾತುಗಳೂ ಕೇಳಿಬರುತ್ತಿವೆ.
ವಿಶೇಷವೆಂದರೆ, ಚನ್ನಿ ಅವರನ್ನು ಸಿಎಂ ಮಾಡಿದ್ದೇ, ಪಂಜಾಬ್‌ನಲ್ಲಿ ಪ್ರಬಲವಾಗಿರುವ ದಲಿತ ಸಮುದಾಯದ ಮತ ಗಳಿಸುವ ಉದ್ದೇಶದಿಂದ. ಆದರೆ ಹಾಲಿ ಸಿಎಂ ಆಗಿದ್ದರೂ ಇವರ ನೇತೃತ್ವದಲ್ಲಿ ಚುನಾವಣೆಗೆ ಹೋಗದೇ ಸಾಮೂಹಿಕ ನಾಯಕತ್ವದಡಿ ಹೋಗುತ್ತಿರುವುದು ಹಿನ್ನಡೆಗೂ ಕಾರಣವಾಗಬಹುದು. ಇಲ್ಲಿ ಮತದಾರರು ಮುಂದೆ ಯಾರು ಸಿಎಂ ಆಗುತ್ತಾರೆ ಎಂಬ ವಿಚಾರದಲ್ಲಿ ಸ್ಪಷ್ಟವಾಗಿ ಯಾವುದೇ ಮಾಹಿತಿ ಸಿಗದೇ ಬೇರೆ ಪಕ್ಷದತ್ತ ಹೋಗಬಹುದು ಎಂದು ವಿಶ್ಲೇಷಕರು ಹೇಳುತ್ತಾರೆ.
ಸಿಎಂ ಅಭ್ಯರ್ಥಿ ವಿಚಾರದಲ್ಲಿ ಆಪ್ ಕೂಡ ಇಂಥದ್ದೇ ಒಂದು ನಡೆ ಇಟ್ಟಿದೆ. ಇದುವರೆಗೆ ಭಗವಂತ್ ಮಾನ್ ಅವರೇ ಆಪ್‌ನ ಸಿಎಂ ಅಭ್ಯರ್ಥಿ ಎಂದೇ ಹೇಳಲಾಗುತ್ತಿತ್ತು. ದಿಢೀರನೇ ಮನಸ್ಸು ಬದಲಾವಣೆ ಮಾಡಿರುವ ದಿಲ್ಲಿ ಸಿಎಂ ಅರವಿಂದ ಕೇಜ್ರಿವಾಲ್, ಸಿಎಂ ಯಾರಾಗಬೇಕು ಎಂಬುದನ್ನು ಜನರೇ ನಿರ್ಧರಿಸಲಿ ಎಂದು ಎಸ್‌ಎಂಎಸ್ ಸಮೀಕ್ಷೆ ನಡೆಸುತ್ತಿದ್ದಾರೆ. ಇದು ಮಾನ್‌ಗೆ ಅಸಮಾಧಾನ ತಂದಿರಲೂಬಹುದು. ಹಾಗೆಯೇ ಜನ ಕೂಡ ಸಿಎಂ ಅಭ್ಯರ್ಥಿ ಆಯ್ಕೆ ವಿಚಾರದಲ್ಲಿ ಆಪ್ ಕೂಡ ಇತರ ಪಕ್ಷಗಳಂತೆಯೇ ವರ್ತಿಸುತ್ತಿದೆ ಎಂದು ಭಾವಿಸಿ, ಬೇರೊಂದು ಪಕ್ಷದತ್ತ ಮನಸ್ಸು ಮಾಡಬಹುದು.
ಬಿಜೆಪಿ-ಕ್ಯಾಪ್ಟನ್ ನೇತೃತ್ವದ ಪಂಜಾಬ್ ಲೋಕತಾಂತ್ರಿಕ ಪಕ್ಷ ಮೈತ್ರಿ ಮಾಡಿಕೊಂಡಿದ್ದು, ಇವರೂ ಯಾರನ್ನೂ ಸಿಎಂ ಅಭ್ಯರ್ಥಿ ಎಂದು ಘೋಷಿಸಿಲ್ಲ. ಇದುವರೆಗೆ ಪಂಜಾಬ್‌ನಲ್ಲಿ ಬಿಜೆಪಿ ಅಂಥ ದೊಡ್ಡ ಸಾಧನೆಯನ್ನೇನೂ ಮಾಡಿಲ್ಲ. ಶಿರೋಮಣಿ ಅಕಾಲಿ ದಳದ ಜತೆಗೆ ಮೈತ್ರಿ ಮಾಡಿಕೊಂಡೇ ಚುನಾವಣೆ ಎದುರಿಸಿದೆ. ಈಗ ಎಸ್‌ಎಡಿ ಬಿಟ್ಟು ಕ್ಯಾಪ್ಟನ್ ಪಕ್ಷದೊಂದಿಗೆ ಹೋಗುತ್ತಿದೆ.
ಇವರೆಲ್ಲರ ನಡುವೆ ಶಿರೋಮಣಿ ಅಕಾಲಿ ದಳ ಮಾತ್ರ, ಪ್ರಕಾಶ್ ಸಿಂಗ್ ಬಾದಲ್ ಪುತ್ರ ಸುಖ್‌ಬೀರ್ ಸಿಂಗ್ ಅವರೇ ಸಿಎಂ ಅಭ್ಯರ್ಥಿ ಎಂದು ಘೋಷಿಸಿದೆ. ಐದನೇ ಪಕ್ಷವಾಗಿರುವ ಸಂಯುಕ್ತ ಕಿಸಾನ್ ಮೋರ್ಚಾ ಕೂಡ ಸಿಎಂ ಅಭ್ಯರ್ಥಿಯನ್ನು ಘೋಷಿಸಿಲ್ಲ.
ಎಸ್‌ಎಡಿ ಹೊರತುಪಡಿಸಿ ಉಳಿದವರು ಏಕೆ ಸಿಎಂ ಅಭ್ಯರ್ಥಿಯನ್ನು ಘೋಷಿಸಿಲ್ಲ ಎಂಬುದಕ್ಕೆ ಕಾರಣಗಳೂ ಇವೆ. ಇಲ್ಲಿ ದಲಿತರು ಶೇ.31.9ರಷ್ಟಿದ್ದರೆ, ಜಾಟ್ ಸಿಕ್ಖರು ಶೇ.20ರಷ್ಟಿದ್ದಾರೆ. ಆದರೆ ರಾಜಕೀಯವಾಗಿ ಹೆಚ್ಚು ಪ್ರಬಲವಾಗಿರುವುದು ಜಾಟ್ ಸಿಕ್ಖರೇ ಆಗಿದ್ದಾರೆ. ಒಂದು ವೇಳೆ ಕಾಂಗ್ರೆಸ್ ಚನ್ನಿ ಅವರನ್ನು ಸಿಎಂ ಅಭ್ಯರ್ಥಿ ಎಂದು ಘೋಷಿಸಿದರೆ, ಜಾಟ್ ಸಿಕ್ಖರು ಕೈಬಿಡಬಹುದು ಎಂಬ ಆತಂಕವಿದೆ. ಇದೇ ಕಾರಣಕ್ಕಾಗಿಯೇ ಉಳಿದವರೂ ಸಿಎಂ ಅಭ್ಯರ್ಥಿ ಬಗ್ಗೆ ಘೋಷಣೆ ಮಾಡದೇ ಚುನಾವಣೆಗೆ ಹೋಗುತ್ತಿವೆ.
ಈ ಸಂಗತಿಗಳ ನಡುವೆ, ಕಳೆದ ಒಂದು ವರ್ಷದಿಂದ ನಡೆದ ರೈತರ ಪ್ರತಿಭಟನೆಗೆ ನಾಂದಿ ಹಾಡಿದವೂ ಪಂಜಾಬ್‌ನ ರೈತ ಸಂಘಟನೆಗಳೇ. ಈ ಬಳಿಕವಷ್ಟೇ ಹರಿಯಾಣ, ಉತ್ತರ ಪ್ರದೇಶದ ರೈತರೂ ಕೈಜೋಡಿಸಿದರು. ಅಂದರೆ ಕೇಂದ್ರ ಸರಕಾರ ಜಾರಿಗೆ ತಂದಿದ್ದ ಮೂರು ಕಾಯ್ದೆಗಳನ್ನು ಪ್ರಮುಖವಾಗಿ ವಿರೋಧಿಸಿ ಇಲ್ಲಿನ ರೈತ ಸಂಘಟನೆಗಳು ಪ್ರತಿಭಟನೆಯನ್ನು ಕೈಗೆತ್ತಿಕೊಂಡಿದ್ದವು. ಇದಕ್ಕೆ ಕಾಂಗ್ರೆಸ್, ಎಸ್‌ಎಡಿ, ಆಪ್ ಕೂಡ ಬೆಂಬಲ ನೀಡಿದ್ದವು. ಇತ್ತೀಚೆಗಷ್ಟೇ ಕೇಂದ್ರ ಸರಕಾರ ಈ ಮೂರನ್ನೂ ವಾಪಸ್ ಪಡೆದಿದೆ. ಈ ಚುನಾವಣೆಯಲ್ಲಿ ಪ್ರಮುಖ ವಿಚಾರವಾಗಬೇಕಿದ್ದ ಈ ಅಂಶ ಈಗ ಮೊನಚು ಕಳೆದುಕೊಂಡಿದೆ. ಆದರೆ ಈ ಮೂರು ಪಕ್ಷಗಳು ಮತ್ತು ಕಿಸಾನ್ ಸಂಯುಕ್ತ ಮೋರ್ಚಾ ಚುನಾವಣೆಯಲ್ಲಿ ಈ ಅಂಶ ಬಳಸಿಕೊಳ್ಳಲು ಮುಂದಾಗಿವೆ. ಆದರೆ ಬಿಜೆಪಿ ಮತ್ತು ಪಂಜಾಬ್ ಲೋಕ ಕಾಂಗ್ರೆಸ್ ರೈತರ ಬೇಡಿಕೆ ಈಡೇರಿಸಿದ್ದೇವೆ. ಹೀಗಾಗಿ ರೈತರು ತಮ್ಮ ಕೈಹಿಡಿಯಬಹುದು ಎಂದೇ ಭಾವಿಸಿವೆ.
ಇನ್ನು ಇತ್ತೀಚಿನ ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಬಿಜೆಪಿ ಮತ್ತು ಎಸ್‌ಎಡಿ ಪ್ರತ್ಯೇಕವಾಗಿ ಚುನಾವಣೆ ಎದುರಿಸುತ್ತಿವೆ. ರೈತರ ಕಾಯ್ದೆ ವಿರೋಧಿಸಿಯೇ ಎಸ್‌ಎಡಿ ಬಿಜೆಪಿ ಸಂಗ ತೊರೆದಿದೆ. ಆದರೆ ಬಿಜೆಪಿ ಮಾತ್ರ ಕ್ಯಾಪ್ಟನ್ ಅಮರೀಂದರ್ ಸಿಂಗ್ ಅವರ ಅನುಭವ ಮತ್ತು ಹೆಸರನ್ನು ಬಳಸಿಕೊಳ್ಳಲು ಮುಂದಾಗಿದೆ.
ಹಾಗೆಯೇ ಸಿಕ್ಖರ ಪವಿತ್ರ ಗ್ರಂಥ “ಗ್ರಂಥ
ಸಾಹೀಬ್’ಗೆ ಅವಮಾನ ಮಾಡಿದ ಆರೋಪದ ಮೇಲೆ ಇಬ್ಬರನ್ನು ಹತ್ಯೆ ಮಾಡಲಾಗಿದೆ. ಪಂಜಾಬ್‌ನ ಯಾವುದೇ ರಾಜಕೀಯ ಪಕ್ಷಗಳೂ ಈ ಹತ್ಯೆ ಬಗ್ಗೆ ಬಾಯಿ ಬಿಟ್ಟೇ ಇಲ್ಲ. ಹತ್ಯೆಯನ್ನು ಖಂಡಿಸಿದರೆ, ಸಿಕ್ಖ್ ಸಮುದಾಯ ಎಲ್ಲಿ ತಮ್ಮಿಂದ ದೂರವಾಗುತ್ತದೆಯೋ ಎಂಬ ಆತಂಕವೂ ಇದೆ. ಏನೇ ಆಗಲಿ, ಈ ಬಾರಿಯ ಪಂಜಾಬ್ ಚುನಾವಣೆ ಹೆಚ್ಚಿನ ರಂಗು ಪಡೆದಿರುವುದಂತೂ ಸತ್ಯ. ಈ ಕಾಳಗದಲ್ಲಿ ಆಪ್ ಮುಂದಿದ್ದರೂ, ಉಳಿದ ಪಕ್ಷಗಳು ಹೇಗೆ ಕಾರ್ಯತಂತ್ರ ಹೆಣೆಯಲಿವೆ ಎಂಬುದರ ಮೇಲೆ ಎಲ್ಲವೂ ನಿಂತಿದೆ.
– ಸೋಮಶೇಖರ ಸಿ.ಜೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Ramanagara: ಹೃದಯಾಘಾತದಿಂದ ಕಾವೇರಿ ನೀರಾವರಿ ನಿಗಮದ ಮಾಜಿ ಎಂಜಿನಿಯರ್ ನಿಧನ
Three Nation Trip: 5 ದಿನದಲ್ಲಿ 3 ದೇಶಗಳ ಪ್ರವಾಸ ಮುಗಿಸಿ ತವರಿಗೆ ಮರಳಿದ ಪ್ರಧಾನಿ ಮೋದಿ
BBK11: ಸೆಡೆಗಳನ್ನೆಲ್ಲ ಕಳ್ಸಿಯೇ ನಾನು ಮನೆಗೆ ಹೋಗೋದು- ಮತ್ತೆ ಗುಡುಗಿದ ರಜತ್
Mangaluru: ಟ್ರಾಯ್‌ನಿಂದ ಕರೆ ಮಾಡುವುದಾಗಿ ತಿಳಿಸಿ; 1.71 ಕೋ.ರೂ. ವಂಚನೆ
Daily Horoscope: ಉದ್ಯೋಗ ಸ್ಥಾನದಲ್ಲಿ ಹಲವು ಬಗೆಯ ಅವಕಾಶಗಳು, ಆರೋಗ್ಯ ವೃದ್ಧಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.