ಭಾರತವನ್ನು ಆಲಿಂಗಿಸಿಕೊಳ್ಳುತ್ತಿರುವುದೇಕೆ ಅಮೆರಿಕ?
Team Udayavani, Jun 26, 2023, 7:38 AM IST
ಭಾರತ ಮತ್ತು ಅಮೆರಿಕದ ನಡುವೆ ಉತ್ತಮ ಸಂಬಂಧ ಇಂದು ನಿನ್ನೆಯದಲ್ಲ. ಆದರೆ ಹಿಂದೆ ಭಾರತದ ನಾಯಕರ ಕೈಕುಲುಕಿ, ಹೆಗಲ ಮೇಲೆ ಕೈ ಹಾಕಿ ಸ್ವಾಗತಿಸುತ್ತಿದ್ದ ಅಮೆರಿಕ, ಇಂದು ಕೈ ಮುಗಿದು ಬರಮಾಡಿಕೊಳ್ಳುವಂಥ ಹಂತಕ್ಕೆ ತಲುಪಿದೆ. ಹಾಗೆಂದು ಅಮೆರಿಕಕ್ಕೆ ಭಾರತದ ಮೇಲೆ ಗೌರವ, ಪ್ರೀತಿ ಉಕ್ಕಿ ಹರಿಯುತ್ತಿದೆ ಎಂದರ್ಥವಲ್ಲ.
ಭಾರತದೊಂದಿಗೆ ಗಾಢ ಸಂಬಂಧವನ್ನು ಬಯಸುತ್ತಿರುವ ಅಮೆರಿಕದ ಲೆಕ್ಕಾಚಾರ ಒಂದೆರಡಲ್ಲ. ಅದು ತಾನು ಏನನ್ನೇ ಕೊಡುವುದಿದ್ದರೂ ಅದಕ್ಕೆ ಪ್ರತಿಯಾಗಿ ತನಗೇನು ಸಿಗುತ್ತದೆ ಎಂದು ಲೆಕ್ಕ ಹಾಕಿಕೊಂಡೇ ಮುಂದಡಿಯಿಡುವಂಥ ದೇಶ.
ಪ್ರಧಾನಿ ನರೇಂದ್ರ ಮೋದಿ ಅವರ ಅಮೆರಿಕ ಪ್ರವಾಸವು ಜಗತ್ತಿನ ಅತೀ ಪ್ರಾಚೀನ ಮತ್ತು ಅತೀದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರಗಳ ನಡುವಿನ ಬಾಂಧವ್ಯವು ಬಲಗೊಳ್ಳುತ್ತಿರುವುದಕ್ಕೆ ಅನೇಕ ಸಾಕ್ಷಿಗಳನ್ನು ಒದಗಿಸಿತು. ಈ ಶತಮಾನದ ಆರಂಭದಲ್ಲಿ ರಕ್ಷಣ ಸಹಕಾರದ ವಿಚಾರದಲ್ಲಿ ಭಾರತ ಮತ್ತು ಅಮೆರಿಕ ಅಪರಿಚಿತರು ಎಂಬಂಥ ಸ್ಥಿತಿಯಿತ್ತು. ಆದರೆ ಈಗ ಅಮೆರಿಕವು ಭಾರತದ ಒಂದು ಪ್ರಮುಖ ರಕ್ಷಣ ಪಾಲುದಾರನ ಪಾತ್ರ ವಹಿಸಿದೆ. ಬಾಹ್ಯಾಕಾಶದಿಂದ ಸಮುದ್ರದವರೆಗೆ, ವಿಜ್ಞಾನದಿಂದ ಸೆಮಿ ಕಂಡಕ್ಟರ್‌ವರೆಗೆ, ಸ್ಟಾರ್ಟ್‌ಅಪ್‌ನಿಂದ ಸುಸ್ಥಿರತೆಯವರೆಗೆ, ಇಂಧನದಿಂದ ಶಿಕ್ಷಣದವರೆಗೆ ಪ್ರತಿಯೊಂದು ಕ್ಷೇತ್ರದಲ್ಲೂ ಕೈಜೋಡಿಸುವ ಹಂತಕ್ಕೆ ಬಂದಿದ್ದೇವೆ. ಏಕೆಂದರೆ ಪ್ರಸ್ತುತ ಜಾಗತಿಕ ಸನ್ನಿವೇಶದಲ್ಲಿ ಅಮೆರಿಕಕ್ಕೆ ಭಾರತದ ಸ್ನೇಹ ಸ್ವಲ್ಪ ಹೆಚ್ಚೇ ಎನ್ನುವಷ್ಟು ಅಗತ್ಯವಿದೆ.
1999ರಲ್ಲಿ ಪಾಕಿಸ್ಥಾನದ ಪಡೆಗಳು ಹಿಮಾಲಯದ ಪರ್ವತ ಶ್ರೇಣಿಯನ್ನು ತಲುಪಿದಾಗ, ಭಾರತದ ಸಶಸ್ತ್ರ ಪಡೆಗಳು ಸಂಘರ್ಷ ವಲಯದ ಜಿಪಿಎಸ್ ದತ್ತಾಂಶ ನೀಡುವಂತೆ ಅಮೆರಿಕದ ಬಾಗಿಲು ಬಡಿದಿದ್ದವು. ಆದರೆ ಅಮೆರಿಕ ಕ್ಯಾರೇ ಎನ್ನದೇ ಭಾರತದ ಮನವಿಯನ್ನು ಕಸದ ಬುಟ್ಟಿಗೆ ಹಾಕಿತ್ತು. 1971ರಲ್ಲಿ ಪಾಕಿಸ್ಥಾನದ ಸೇನೆಗೆ ಹಿನ್ನಡೆಯಾಗುತ್ತಿದೆ ಎಂದು ಅರಿವಾದಾಗ ಅಂದಿನ ಅಮೆರಿಕ ಅಧ್ಯಕ್ಷ ರಿಚರ್ಡ್ ನಿಕ್ಸನ್ ಅವರು ಅಣ್ವಸ್ತ್ರಚಾಲಿತ ವಿಮಾನವಾಹಕ ನೌಕೆಯನ್ನು ಹೊಂದಿದ್ದ ಯುಎಸ್ ಸೆವೆಂತ್ ಫ್ಲೀಟ್ ಅನ್ನು ಬಂಗಾಲ ಕೊಲ್ಲಿಯತ್ತ ಮುನ್ನುಗ್ಗಲು ಆದೇಶಿಸಿದ್ದರು. ಪಾಕಿಸ್ಥಾನವನ್ನು ಬೆಂಬಲಿಸಿ, ಭಾರತದ ಮೇಲೆ ಒತ್ತಡ ತರುವ ತಂತ್ರ ಇದಾಗಿತ್ತು. ಆದರೆ ಈಗ ಕಾಲ ಬದಲಾಗಿದೆ. ಭಾರತದೊಂದಿಗೆ ಎಲ್ಲ ಕ್ಷೇತ್ರಗಳಲ್ಲೂ ನಂಟು ಬೆಳೆಸಿಕೊಳ್ಳಲು ಅಮೆರಿಕ ತುದಿಗಾಲಲ್ಲಿ ನಿಂತಿದೆ. ತನ್ನ ಶತ್ರುಗಳಾದ, ರಷ್ಯಾ ಮತ್ತು ಚೀನದ ವಿರುದ್ಧ ಸೆಟೆದು ನಿಲ್ಲಬೇಕೆಂದರೆ ಭಾರತವು ನಮ್ಮ ಬೆನ್ನಿಗಿರಬೇಕು ಎಂಬ ಸತ್ಯ ಅಮೆರಿಕಕ್ಕೆ ಅರಿವಾಗಿದೆ. ಇದು ಭಾರತ ಮತ್ತು ಅಮೆರಿಕದ ದ್ವಿಪಕ್ಷೀಯ ಸಂಬಂಧದ ಟರ್ನಿಂಗ್ ಪಾಯಿಂಟ….
ಚೀನ ವಿರುದ್ಧದ ಅಸ್ತ್ರ: ಭಾರತ ಮತ್ತು ಅಮೆರಿಕಕ್ಕೆ ಚೀನ ಸಮಾನ ಶತ್ರು. ಇಂಡೋ-ಪೆಸಿಫಿಕ್ ಹಾಗೂ ಹಿಂದೂ ಮಹಾಸಾಗರ ಪ್ರದೇಶದಲ್ಲಿ ಚೀನ ತನ್ನ ಕಬಂಧಬಾಹುಗಳನ್ನು ಚಾಚುತ್ತಲೇ ಇದೆ. ಚೀನದ ವಿಸ್ತರಣಾವಾದ, ಆಕ್ರಮಣಕಾರಿ ನೀತಿಯಿಂದ ಇಂಡೋ ಪೆಸಿಫಿಕ್ ಪ್ರದೇಶವನ್ನು ಉಳಿಸಿಕೊಳ್ಳಬೇಕೆಂದರೆ ಅಮೆರಿಕಕ್ಕಿರುವ ಏಕೈಕ ಆಯ್ಕೆಯೇ ಭಾರತ. ಭಾರತವನ್ನು ಹೊರಗಿಟ್ಟರೆ ಅಮೆರಿಕದ ಇಂಡೋ-ಪೆಸಿಫಿಕ್ ಸ್ಟ್ರಾ$Âಟಜಿಯು ಕೇವಲ “ಪೆಸಿಫಿಕ್ ಕಾರ್ಯತಂತ್ರ’ವಾಗಿ ಉಳಿಯುತ್ತದೆ. ಅದೇ ರೀತಿ, ಅಮೆರಿಕವನ್ನು ಹೊರಗಿಟ್ಟರೆ ಚೀನಕ್ಕೆ ಕೌಂಟರ್ ಕೊಡುವ ಭಾರತದ ಸಾಮರ್ಥ್ಯವೂ ಕುಗ್ಗುತ್ತದೆ. ಈ ವಿಚಾರ ಸ್ಪಷ್ಟವಾಗಿ ಅರ್ಥವಾಗಿರುವ ಕಾರಣದಿಂದಲೇ ಉಭಯ ರಾಷ್ಟ್ರಗಳೂ ಒಂದಕ್ಕೊಂದು ಆಲಿಂಗಿಸಿಕೊಳ್ಳುತ್ತಿವೆ.
ಒಂದು ರೀತಿಯಲ್ಲಿ ಉಭಯ ದೇಶಗಳ ನಂಟು ಗಟ್ಟಿಯಾಗಲು ಪ್ರಮುಖ ಕಾರಣವೇ ಚೀನ. ಅಮೆರಿಕದ ಸೂಪರ್ ಪವರ್ ಪಟ್ಟಕ್ಕೆ ಸವಾಲೆಸೆಯುವಂಥ ತಾಕತ್ತು ಇರುವುದು ಚೀನಕ್ಕೆ ಮಾತ್ರ. ಪ್ರಧಾನಿ ಮೋದಿ ಅವರ ಅಮೆರಿಕ ಪ್ರವಾಸ ಆರಂಭವಾಗುವ ಒಂದೆರಡು ದಿನಗಳ ಹಿಂದಷ್ಟೇ ಅಮೆರಿಕ ವಿದೇಶಾಂಗ ಸಚಿವ ಆಂಟನಿ ಬ್ಲಿಂಕನ್ ಚೀನಕ್ಕೆ ಧಾವಿಸಿದ್ದರು. ಚೀನ ಅಧ್ಯಕ್ಷ ಕ್ಸಿ ಜಿನ್ ಪಿಂಗ್ ಸೇರಿ ಹಲವು ಪ್ರಮುಖರೊಂದಿಗೆ ಮಾತುಕತೆಯನ್ನೂ ನಡೆಸಿದ್ದರು. ಆದರೆ ವಾಷಿಂಗ್ಟನ್‌ನ ವಿದೇಶಾಂಗ ಮತ್ತು ಆರ್ಥಿಕ ನೀತಿಗಳಿಗೆ ಚೀನ ಸೊಪ್ಪು ಹಾಕಲಿಲ್ಲ. ಬ್ಲಿಂಕನ್ ಹೋದ ದಾರಿಗೆ ಸುಂಕವಿಲ್ಲ ಎಂಬಂತೆ ವಾಪಸಾದರು. ರಷ್ಯಾ-ಉಕ್ರೇನ್ ಯುದ್ಧ, ಹೆಚ್ಚುತ್ತಿರುವ ಚೀನದ ಪ್ರಾಬಲ್ಯ, ದೇಶೀಯವಾಗಿ ಆಗುತ್ತಿರುವ ಒತ್ತಡ ಅಮೆರಿಕಕ್ಕೆ ತಲೆನೋವು ಉಂಟುಮಾಡಿದೆ. ಹೀಗಾಗಿ ಪ್ರಸ್ತುತ ಜಾಗತಿಕ ಪರಿಸ್ಥಿತಿಯಲ್ಲಿ ಭಾರತವನ್ನು ವ್ಯೂಹಾತ್ಮಕ ಪಾಲುದಾರ ದೇಶವನ್ನಾಗಿ ಅಮೆರಿಕವು ಪರಿಗಣಿಸಲೇಬೇಕಿದೆ.
ಇಂಡೋ ಪೆಸಿಫಿಕ್‌ನಲ್ಲಿ ಪ್ರಾದೇಶಿಕ ದಿಗ್ಗಜನೆಂದರೆ ಭಾರತ. ವ್ಯೂಹಾತ್ಮಕವಾಗಿ ಮತ್ತು ಆರ್ಥಿಕವಾಗಿ ಭಾರತ ಬಲಿಷ್ಠವಾದಷ್ಟೂ, ಚೀನದ ಆಕ್ರಮಣಕಾರಿ ನೀತಿಗೆ ಬ್ರೇಕ್ ಹಾಕಲು ಸಾಧ್ಯ. ಅಮೆರಿಕವು ಈ ಬಾರಿ ಭಾರತದೊಂದಿಗೆ ಮಾಡಿಕೊಂಡ ಒಪ್ಪಂದಗಳೇ ಅದರ ಹಿಂದಿನ ಲೆಕ್ಕಾಚಾರದ ಕಥೆಯನ್ನು ಹೇಳುತ್ತವೆ.
ಇನ್ನು ಕೃತಕ ಬುದ್ಧಿಮತ್ತೆ, ಕ್ವಾಂಟಮ್ ಕಂಪ್ಯೂಟಿಂಗ್, ಸೂಪರ್ ಕಂಪ್ಯೂಟಿಂಗ್‌ನಂಥ ತಂತ್ರಜ್ಞಾನಗಳಲ್ಲಿ ಚೀನ ಮೇಲುಗೈ ಸಾಧಿಸಬಾರದು ಎನ್ನುವ ಕಾರಣಕ್ಕಾಗಿ ಅಮೆರಿಕವು ಚೀನಕ್ಕೆ ನಿರ್ಬಂಧ ಹೇರಿ, ಜಗತ್ತಿನ ಇತರ ದೇಶಗಳೊಂದಿಗೆ ಪಾಲುದಾರಿಕೆ ಮಾಡಿಕೊಳ್ಳುತ್ತಿದೆ. ಚೀನವೇನಾದರೂ ಈ ತಂತ್ರಜ್ಞಾನಗಳನ್ನು ತನ್ನ ಸೇನೆಗೆ ಅಳವಡಿ ಸಿಕೊಂಡರೆ ಅಪಾಯ ಕಟ್ಟಿಟ್ಟ ಬುತ್ತಿ ಎಂಬ ಆತಂಕ ದೊಡ್ಡಣ್ಣನದ್ದು. ಭಾರತ ಮತ್ತು ಅಮೆರಿಕ ಕೈಜೋಡಿಸಿದರೆ ಚೀನದ ನೆಗೆತಕ್ಕೆ ಅಡ್ಡಗಾಲು ಹಾಕಬಹುದು.
ಇನ್ನೊಂದೆಡೆ ವಾಸ್ತವಿಕ ಗಡಿ ನಿಯಂತ್ರಣ ರೇಖೆಯಲ್ಲಿ ಚೀನದ ಕಿರುಕುಳವನ್ನು ಸಮರ್ಥವಾಗಿ ಎದುರಿಸಬೇಕೆಂದರೆ ಭಾರತಕ್ಕೂ ದೊಡ್ಡಮಟ್ಟದ ಭದ್ರತಾ ಸಹಕಾರದ ಅಗತ್ಯವಿದೆ. ಸೇನಾ ಸಂಘರ್ಷವೇನಾದರೂ ಎದುರಾದರೆ ಮಿತ್ರರಾಷ್ಟ್ರಗಳ ನೆರವು ಬೇಕಾಗುತ್ತದೆ. ಅದಕ್ಕೂ ಮೊದಲು ಚೀನದ ಸೇನಾ ಕಾರ್ಯಾಚರಣೆ ಸಾಮರ್ಥ್ಯ, ಕಾರ್ಯತಂತ್ರಗಳು ಮತ್ತು ದೌರ್ಬಲ್ಯಗಳು ಸೇರಿದಂತೆ ಎಲ್ಲ ಸೂಕ್ಷ¾ ವಿಚಾರಗಳ ಬಗ್ಗೆಯೂ ಅರಿವಿರಬೇಕಾಗುತ್ತದೆ. ಜತೆಗೆ ರಾಜತಾಂತ್ರಿಕ ಕಾರ್ಯತಂತ್ರಗಳೂ ಬೇಕು. ಅಮೆರಿಕದ ಸಖ್ಯವು ಈ ಎಲ್ಲ ವಿಚಾರಗಳಲ್ಲೂ ಭಾರತಕ್ಕೆ ಲಾಭವಾಗಿ ಪರಿಣಮಿಸಲಿದೆ.
ರಷ್ಯಾದಿಂದ ದೂರ: ಉಕ್ರೇನ್ ಮೇಲೆ ರಷ್ಯಾ ಯುದ್ಧ ಸಾರಿದ ಬಳಿಕ ರಷ್ಯಾ ಮತ್ತು ಭಾರತದ ಬಾಂಧವ್ಯ ಮತ್ತಷ್ಟು ಗಟ್ಟಿಯಾಗಿದ್ದು ಇಡೀ ಜಗತ್ತಿಗೇ ಗೊತ್ತಿರುವ ವಿಚಾರ. ಈಗಲೂ ಭಾರತ ರಷ್ಯಾದಿಂದ ಭಾರೀ ಪ್ರಮಾಣದಲ್ಲಿ ತೈಲ ಆಮದು ಮಾಡಿಕೊಳ್ಳುತ್ತಿದೆ. ರಷ್ಯಾಕ್ಕೆ ಭಾರತ ಇಷ್ಟೊಂದು ಹತ್ತಿರವಾಗುವುದು ಅಮೆರಿಕಕ್ಕೆ ನುಂಗಲಾರದ ತುತ್ತಿದ್ದಂತೆ. ರಷ್ಯಾ ಸಹವಾಸದಿಂದ ಭಾರತವನ್ನು ದೂರವುಳಿಯುವಂತೆ ಮಾಡುವ ಅಮೆರಿಕದ ಬಯಕೆಯ ಫಲವೇ ಮೊನ್ನೆ ನಡೆದ ರಕ್ಷಣ, ಬಾಹ್ಯಾಕಾಶ ಒಪ್ಪಂದಗಳು.
ಆರ್ಥಿಕತೆಗೆ ವೇಗ: ಆರ್ಥಿಕತೆಯ ವಿಚಾರಕ್ಕೆ ಬಂದರೆ ಕೊರೊನಾ ಅನಂತರದಲ್ಲಿ ಚೇತರಿಕೆಯ ಹಾದಿಯಲ್ಲಿದ್ದ ಪಾಶ್ಚಾತ್ಯ ಮತ್ತು ಯುರೋಪ್ ದೇಶಗಳ ಆರ್ಥಿಕತೆಗೆ ರಷ್ಯಾ-ಉಕ್ರೇನ್ ಯುದ್ಧ ದೊಡ್ಡ ಹೊಡೆತ ನೀಡಿತು. ಈ ದೇಶಗಳು ಆರ್ಥಿಕ ಬಿಕ್ಕಟ್ಟಿನ ಚಕ್ರವ್ಯೂಹದಲ್ಲಿ ಸಿಲುಕುವಂತಾದವು. ಉಕ್ರೇನ್‌ಗೆ ನೆರವಾಗುವ ಭರದಲ್ಲಿ ಅಮೆರಿಕದ ಅನುತ್ಪಾದಕ ಸೇನಾ ವೆಚ್ಚವೂ ಹೆಚ್ಚಿತು. ಆದರೆ ಇತ್ತ ಭಾರತವು ರಷ್ಯಾ-ಉಕ್ರೇನ್ ಸಂಘರ್ಷದಲ್ಲಿ ತನ್ನ ರಾಜತಾಂತ್ರಿಕ ತಟಸ್ಥ ನಿಲುವು ತಾಳಿತು. “ನಿನ್ನ ಶತ್ರುವು ನನ್ನ ಶತ್ರು ಆಗಲೇಬೇಕೆಂದಿಲ್ಲ’ ಎಂಬ ಸ್ಪಷ್ಟ ಸಂದೇಶವನ್ನು ಭಾರತ ಅಮೆರಿಕಕ್ಕೆ ರವಾನಿಸಿತು. ರಷ್ಯಾಕ್ಕೆ ಬೆಂಬಲ ನೀಡಿದ ಎಲ್ಲ ದೇಶಗಳಿಗೂ ನಿರ್ಬಂಧ ಹೇರಿದ ಅಮೆರಿಕವು ಭಾರತದ ವಿಚಾರದಲ್ಲಿ ಅನಿವಾರ್ಯವಾಗಿ ಮೃದುಧೋರಣೆ ತಾಳಬೇಕಾಯಿತು.
ಭಾರತವು ಹೊಂದಿರುವ ಅಗಾಧವಾದ ಗ್ರಾಹಕ ಮಾರುಕಟ್ಟೆ ಕೂಡ ಇದಕ್ಕೆ ಕಾರಣವಿರಬಹುದು. ಅಮೆರಿಕದ ಕಂಪೆನಿಗಳಿಗೆ ಬಂಡವಾಳ ಹೂಡಿಕೆ ಮಾಡಲು ಭಾರತ ಪ್ರಶಸ್ತ ಸ್ಥಳ. ಉಕ್ರೇನ್-ರಷ್ಯಾ ಯುದ್ಧದ ಬಳಿಕ ಆರ್ಥಿಕವಾಗಿ ಹಿನ್ನಡೆ ಅನುಭವಿಸುತ್ತಿರುವ ಅಮೆರಿಕದ ದೈತ್ಯ ಬಹುರಾಷ್ಟ್ರೀಯ ಕಂಪೆನಿಗಳಿಗೆ ಭಾರತವೇ ಈಗ ತುತ್ತಿನ ಚೀಲ. ಆ್ಯಪಲ್‌ನಿಂದ ಹಿಡಿದು ಅಮೆಜಾನ್‌ವರೆಗೂ ಅಮೆರಿಕದ ಸಂಸ್ಥೆಗಳಿಗೆ ದೊಡ್ಡ ಮಾರುಕಟ್ಟೆಯಿರುವುದು ಭಾರತದಲ್ಲಿ. ಅಮೆರಿಕದಲ್ಲಿರುವ ಹಣಕಾಸು ಸಂಸ್ಥೆಗಳೂ ಭಾರತೀಯ ಸ್ಟಾರ್ಟ್‌ಅಪ್‌ಗಳಿಗೆ ಬಂಡವಾಳ ಹೂಡಿಕೆದಾರನಾಗಿ ಹೊರಹೊಮ್ಮಿವೆ. ಅಮೆರಿಕದ ವಿವಿಗಳಲ್ಲಿ ಸಾವಿರಾರು ಭಾರತೀಯ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಅಮೆರಿಕದ ಅನೇಕ ಟೆಕ್ ಕಂಪೆನಿಗಳಿಗೆ ಈ ವಿದ್ಯಾರ್ಥಿಗಳೇ ಬೆನ್ನೆಲುಬು. ಫಾರ್ಚೂನ್ 500 ಕಂಪೆನಿಗಳ ಪೈಕಿ 60 ಕಂಪೆನಿಗಳನ್ನು ಮುನ್ನಡೆಸುತ್ತಿರುವವರು ಭಾರತೀಯ ಮೂಲದವರು. ಹೀಗಾಗಿ ಭಾರತಕ್ಕೆ ಅಮೆರಿಕ ಬೇಕಿರುವುದಕ್ಕಿಂತಲೂ, ಅಮೆರಿಕಕ್ಕೆ ಭಾರತವೇ ಅಗತ್ಯ ಎಂಬ ಸ್ಥಿತಿ ನಿರ್ಮಾಣವಾಗಿದೆ.
ಒಟ್ಟಿನಲ್ಲಿ ಈ ಎಲ್ಲ ಬೆಳವಣಿಗೆಗಳು ಭಾರತಕ್ಕೆ ಸಕಾರಾತ್ಮಕ ಪರಿಣಾಮವನ್ನೇ ಉಂಟುಮಾಡಲಿದೆ. ಎಲ್ಲ ಕ್ಷೇತ್ರಗಳಲ್ಲೂ ಚೀನವನ್ನು ಮೀರಿಸಿ ಬೆಳೆಯಬೇಕು, ಭಾರತವು ಜಾಗತಿಕ ಉತ್ಪಾದಕನಾಗಿ ಹೊರಹೊಮ್ಮಿ ದೈತ್ಯ ಶಕ್ತಿಯಾಗಿ ಬೆಳೆದು ನಿಲ್ಲಬೇಕು ಎಂಬ ಭಾರತದ ಕನಸಿಗೂ ರೆಕ್ಕೆ ಬಂದಿದೆ.
~ ಹಲೀಮತ್ ಸಅದಿಯಾ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.