ಜಾತಿ-ಧರ್ಮ ರಾಜಕಾರಣ: ಯಾವುದು ನಿಜವಾದ ಕಾರಣ?
Team Udayavani, Aug 9, 2017, 12:50 PM IST
ರಾಜ್ಯದಲ್ಲಿರುವ ಲಿಂಗಾಯತ ಸಮುದಾಯದ ಒಂದು ವರ್ಗ ತಮ್ಮ ಜಾತಿಯನ್ನು ಧಾರ್ಮಿಕ ಅಲ್ಪಸಂಖ್ಯಾಕವೆಂದು ಘೋಷಿಸಬೇಕೆಂದು ಆಗ್ರಹಿಸುತ್ತಿರುವ ಈ ಸಂದರ್ಭದಲ್ಲಿ, ಈ ಹಿಂದೆ ಪಾರ್ಸಿಗಳು ಇದೇ ತೆರನ ಪ್ರಸ್ತಾವಕ್ಕೆ ಪ್ರತಿಕ್ರಿಯಿಸಿದ ಪ್ರಸಂಗವೊಂದು ನೆನಪಾಗುತ್ತಿದೆ. ದೇಶದ ಅತ್ಯಂತ ಚಿಕ್ಕ ಧಾರ್ಮಿಕ ಅಲ್ಪಸಂಖ್ಯಾಕ ವರ್ಗವಾದ ಪಾರ್ಸಿ ಸಮುದಾಯ ಇಂಥದೊಂದು ವಿಭಿನ್ನ ರೀತಿಯ ಬೇಡಿಕೆಯನ್ನು ಪ್ರಕಟಿಸಿದ್ದು 70 ವರ್ಷಗಳ ಹಿಂದೆ.
ತಮ್ಮದು ಅಲ್ಪಸಂಖ್ಯಾಕ ಸಮುದಾಯವೇನೋ ನಿಜ; ಆದರೆ ಸರಕಾರ ಈ ಕಾರಣವನ್ನು ಮುಂದೊಡ್ಡಿ ಯಾವುದೇ ರಿಯಾಯಿತಿ/ ವಿನಾಯಿತಿಗಳನ್ನು ನೀಡುವುದಾದರೆ, ಅದು ತಮಗೆ ಬೇಕಿಲ್ಲ ಎಂದು ಪಾರ್ಸಿ ಸಮುದಾಯ ಅಂದು ಸ್ವಯಂ ಪ್ರೇರಿತ ಹೇಳಿಕೆ ನೀಡಿತ್ತು; ಈ ಸಮುದಾಯದ ತ್ಯಾಗಬುದ್ಧಿಯನ್ನು ಅಂದು ಭಾರತದ ಉಪ ಪ್ರಧಾನಿಯಾಗಿದ್ದ ಸರ್ದಾರ್ ವಲ್ಲಭ ಭಾಯ್ ಪಟೇಲ್ ಸಂವಿಧಾನದ ಸಭೆಯಲ್ಲಿಯೂ ಅಭಿಮಾನಪೂರ್ವಕವಾಗಿ ಶ್ಲಾ ಸಿದ್ದರು. ಅತ್ಯಂತ ಚಿಕ್ಕ, ಆದರೆ ಅತ್ಯಂತ ಬಲಿಷ್ಠವಾಗಿರುವ ಸಮುದಾಯವೊಂದು ಹೀಗೆ ತನ್ನ ಸ್ವಾಭಿಮಾನದ ನಿಲುವನ್ನು ವ್ಯಕ್ತಪಡಿಸುತ್ತಿದೆ ಎಂದು ಪಟೇಲ್ ಮುಕ್ತಕಂಠದಿಂದ ಹೊಗಳಿದ್ದರು. ಪಾರ್ಸಿ ಸಮುದಾಯವನ್ನು ಒಂದು ಅಲ್ಪಸಂಖ್ಯಾಕ ಸಮುದಾಯವೆಂದು ಘೋಷಿಸಬೇಕೆಂಬ ಸಲಹೆಯನ್ನು ಹೀಗೆ ತಿರಸ್ಕರಿಸಿದ್ದವರು ಶಾಸನ ಸಭೆಯಲ್ಲಿನ ಪಾರ್ಸಿ ಸಮುದಾಯದ ಸದಸ್ಯ ರುಸ್ತುಂ ಕೆ. ಸಿಧ್ವಾ ಅವರು. “”ಸಮುದಾಯಗಳನ್ನು ಹೀಗೆ ಒಡೆಯುವ ಮೂಲಕ ಬ್ರಿಟಿಷ್ ಸರಕಾರ ಹೇಗೆ ನಮ್ಮೊಂದಿಗೆ ತುಂಟಾಟವಾಡುತ್ತಿದೆಯೆಂಬುದನ್ನು ನಾವು ಕಣ್ಣಾರೆ ಕಂಡಿದ್ದೇವೆ. ಈ ಶಾಸನ ಸಭೆಯಲ್ಲಿ ನಮ್ಮ ಅಲ್ಪಸಂಖ್ಯಾಕ ಸಮುದಾಯಕ್ಕೆ ಸಿಕ್ಕಿರುವ ಪ್ರಾತಿನಿಧ್ಯದಿಂದ ನಮ್ಮಲ್ಲಿ ಖಂಡಿತ ಸುರಕ್ಷಿತ
ಭಾವನೆ ಮೂಡಿದೆ; ನಾವೆಲ್ಲರೂ ಅವರ (ಹಿಂದೂಗಳ) ವೋಟುಗಳಿಂದಾಗಿ ಗೆದ್ದು ಬಂದವರು” ಎಂದೂ ಸಿಧ್ವಾ ಹೇಳಿದ್ದರು. ಆದರೂ ಮುಂದೆ, ಅಂದರೆ 1992ರ ಅಲ್ಪಸಂಖ್ಯಾಕರ ರಾಷ್ಟ್ರೀಯ ಆಯೋಗ ಕಾಯ್ದೆ ಹಾಗೂ 2004ರ ರಾಷ್ಟ್ರೀಯ ಅಲ್ಪಸಂಖ್ಯಾಕರ ಶೈಕ್ಷಣಿಕ ಸಂಸ್ಥೆಗಳ ಕಾಯ್ದೆಯಂಥ ಶಾಸನಗಳಡಿಯಲ್ಲಿ ಪಾರ್ಸಿಗಳ ಮತಧರ್ಮವು ಅಲ್ಪಸಂಖ್ಯಾಕರ ಧರ್ಮವೆಂದು ಪರಿಗಣಿತವಾಗಿದೆ; ಇದು ಬೇರೆ ಮಾತು.
ಪಾರ್ಸಿಗಳಿಗೆ ಹೋಲಿಸಿದರೆ ವೀರಶೈವ-ಲಿಂಗಾಯತರ ಸಮುದಾಯ ಕರ್ನಾಟಕದಲ್ಲಾದರೂ ಪ್ರಭಾವಶಾಲಿಯಾಗಿದೆ. 1956ರಿಂದಲೂ ಇವರು ರಾಜಕೀಯದಲ್ಲಿ ಪ್ರಾಬಲ್ಯ ಮೆರೆಯುತ್ತಾ ಬಂದಿದ್ದಾರೆ. 8 ಮುಖ್ಯಮಂತ್ರಿಗಳು, ಹಲವಾರು ಮಂತ್ರಿಗಳನ್ನು ಈ ಸಮುದಾಯ ನೀಡಿದೆ. 1921ರಲ್ಲಿ ಕನಿಷ್ಠ ಹಳೇ ಮೈಸೂರಿನಲ್ಲಾದರೂ ಹಿಂದುಳಿದ ವರ್ಗಗಳಿಗೆ ಕಲ್ಪಿಸಲಾಗಿದ್ದ ಮೀಸಲಾತಿಯ ಫಲಾನುಭವಿಗಳ ಪೈಕಿ ಹೆಚ್ಚಿನವರು ಲಿಂಗಾಯತರು ಹಾಗೂ ಒಕ್ಕಲಿಗ ಸಮುದಾಯ ದವರೇ ಆಗಿದ್ದರೆಂಬುದು ನಿಜವಾದರೂ ಮೂರು ಹಿಂದುಳಿದ ವರ್ಗಗಳ ಆಯೋಗಗಳ ಪೈಕಿ ಯಾವೊಂದು ಆಯೋಗವೂ ಇವರನ್ನು ಓಬಿಸಿ ವರ್ಗವೆಂದು ವರ್ಗೀಕರಿಸಲಿಲ್ಲ. ಡಾ| ನಾಗನಗೌಡ ನೇತೃತ್ವದ ಹಿಂದುಳಿದ ವರ್ಗಗಳ ಆಯೋಗ ಕೂಡ ಇವರ ಈ ಬೇಡಿಕೆಯನ್ನು ತಿರಸ್ಕರಿಸಿತು. ಅಲ್ಪಸಂಖ್ಯಾಕ ಸ್ಥಾನ-ಮಾನ ಒದಗಿಸಬೇಕೆಂಬ ಆಗ್ರಹಕ್ಕೆ ಕಾರಣ ಸುಸ್ಪಷ್ಟ – ಸಂವಿಧಾನದ 29ನೆಯ ಹಾಗೂ 30ನೆಯ ವಿಧಿಗಳಡಿಯಲ್ಲಿ ಸಿಗುವ ಪ್ರಯೋಜನ (ಭಾಷಿಕ-ಧಾರ್ಮಿಕ ಅಲ್ಪಸಂಖ್ಯಾಕರಿಗೆ ಸಿಗುತ್ತಿರುವ ಸಾಂಸ್ಕೃತಿಕ ಹಾಗೂ ಶೈಕ್ಷಣಿಕ ಹಕ್ಕು) ಲಭಿಸಬೇಕೆನ್ನುವುದು!
ದೇಶದಲ್ಲಿ ಅಲ್ಪಸಂಖ್ಯಾಕ ಸಮುದಾಯಗಳಿಂದ ಬಂದ ಸಚಿವರ ಸಂಖ್ಯೆಯ ಆಧಾರದಲ್ಲಿ ಹೇಳುವುದಾದರೆ, ನಿಜವಾದ ಅರ್ಥದಲ್ಲಿ ಅಲ್ಪಸಂಖ್ಯಾಕರು ಎನಿಸಿಕೊಳ್ಳುವವರು ಪಾರ್ಸಿಗಳು ಹಾಗೂ ಆಂಗ್ಲೋ ಇಂಡಿಯನ್ನರು. ಈಗೇನು ಹೇಳಲಾಗುತ್ತಿದೆಯೋ, ಇದಕ್ಕೆ ವ್ಯತಿರಿಕ್ತವಾದ ಸತ್ಯಸಂಗತಿ ಇಲ್ಲಿದೆ – ಲಿಂಗಾಯತ ಸಮುದಾಯಕ್ಕೆ ಪ್ರತ್ಯೇಕ ಸ್ಥಾನಮಾನ ದೊರೆಯಬೇಕೆಂಬ ಆಗ್ರಹ ಮೊತ್ತಮೊದಲ ಬಾರಿಗೆ ದೊಡ್ಡ ಗಂಟಲಲ್ಲಿ ವ್ಯಕ್ತವಾದುದು 1970ರ ದಶಕದ ಮಧ್ಯಭಾಗದಲ್ಲಿ- ಪ್ರಪ್ರಥಮ ಕರ್ನಾಟಕ ಹಿಂದುಳಿದ ವರ್ಗಗಳ ಆಯೋಗಕ್ಕೆ ಎಲ್.ಜಿ. ಹಾವನೂರರನ್ನು ನೇಮಿಸಿದಾಗ. ಲಿಂಗಾಯತ ಸಮುದಾಯವೆಂಬುದು ಹಿಂದೂ ಧರ್ಮದ ಚೌಕಟ್ಟಿನ ಹೊರಗಡೆಯೇ ಇರುವ ಪ್ರತ್ಯೇಕ ಧಾರ್ಮಿಕ ಸಮುದಾಯ ಎಂಬ ವಾದವನ್ನು ಅಂದು ಸರಕಾರಿ ಅಧಿಕಾರಿಯಾಗಿದ್ದು ಮುಂದೆ ರಾಜಕಾರಣಿಯಾಗಿ ಪರಿವರ್ತಿತರಾದ ಜೆ.ಬಿ. ಮಲ್ಲಾರಾಧ್ಯ ಅವರ ನೇತೃತ್ವದ ಅಖೀಲ ಕರ್ನಾಟಕ ವೀರಶೈವ ಮಹಾಸಭಾ ಮಂಡಿಸಿತ್ತು. ಆ ದಿನಗಳಲ್ಲಿ ವೀರಶೈವ ಮಹಾಸಭಾ ಸಂಘಟನೆ ಹಾವನೂರ್ ಆಯೋಗವನ್ನು ವಿರೋಧಿಸುವಲ್ಲಿ ಬ್ರಾಹ್ಮಣ ಸಮುದಾಯದೊಂದಿಗೆ ಕೈ ಜೋಡಿಸಿತ್ತು. ಆಗ ಅಖೀಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ನೇತೃತ್ವ ವಹಿಸಿದ್ದವರು ನಿವೃತ್ತ ಸರಕಾರಿ ಅಧಿಕಾರಿಯಾಗಿದ್ದ ಪಿ.ಎಚ್. ಕೃಷ್ಣ ರಾವ್. ಇಂದು ಇಂಥ ಬೇಡಿಕೆಯನ್ನು ಮುಂದೊಡ್ಡುತ್ತಿರುವವರು ಸಿದ್ದರಾಮಯ್ಯ ಸರಕಾರದಲ್ಲಿರುವ ಲಿಂಗಾಯತ ಸಚಿವರುಗಳು. ಇಲ್ಲಿ ಗಮನಿಸಲೇಬೇಕಾದ ಅಂಶವೆಂದರೆ, ಮಲ್ಲಾರಾಧ್ಯ ಅವರು ತಮ್ಮ ಬೇಡಿಕೆಗಾಗಿ ಆಗ್ರಹಿಸುತ್ತಿದ್ದ ದಿನಗಳಲ್ಲಿ ವೀರಶೈವರು ಹಾಗೂ ಲಿಂಗಾಯತರು ಒಂದೇ ಸಮುದಾಯಕ್ಕೆ ಸೇರಿದವರೇ/ ಇಲ್ಲವೇ ಎಂಬ ಇಂದಿನ ವಿವಾದ ಅಸ್ತಿತ್ವದಲ್ಲೇ ಇರಲಿಲ್ಲ.
ಹೊಸ ಧರ್ಮ: ಸಂವಿಧಾನದಲ್ಲಿ ಉಲ್ಲೇಖ ಇಲ್ಲ
ಒಂದು ವಾಸ್ತವಾಂಶವನ್ನು ಗಮನಿಸಬೇಕು. ಯಾಕೆಂದರೆ ಈಗ ನಡೆಯುತ್ತಿರುವ ಚರ್ಚೆಯಲ್ಲಿ ಈ ಅಂಶ ಕಣ್ಮರೆಯಾಗಿದೆ -ನಮ್ಮ ಸಂವಿಧಾನವಾಗಲಿ, ಭಾರತ ಸರಕಾರವಾಗಲಿ, ನ್ಯಾಯಾಂಗವಾಗಲಿ, ಅಸ್ತಿತ್ವದಲ್ಲಿ ಇಲ್ಲದ ಒಂದು ಹೊಸ ಧರ್ಮವನ್ನು ಸೃಷ್ಟಿ ಮಾಡಿಲ್ಲ. ಪ್ರತ್ಯೇಕ ಸ್ಥಾನ-ಮಾನ ನೀಡಬೇಕೆಂಬ ಲಿಂಗಾಯತರ ಬೇಡಿಕೆಯತ್ತ ಭಾರತ ಸರಕಾರ ಗಮನ ಹರಿಸಿದೆಯಾದರೂ ಅದು ಇನ್ನೂ ಯಾವುದೇ ನಿರ್ಧಾರ ತೆಗೆದುಕೊಂಡಿಲ್ಲ. ಅಥವಾ ರಾಮಕೃಷ್ಣ ಮಿಶನ್ ಹಾಗೂ ಆರ್ಯ ಸಮಾಜದಂಥ ಇತರ ಕೆಲ ಹಿಂದೂ ಸಂಘಟನೆಗಳು ಪ್ರಯತ್ನಿಸಿದಂತೆ ತಮ್ಮನ್ನು ಅಲ್ಪಸಂಖ್ಯಾಕ ಸಮುದಾಯವೆಂದು ಘೋಷಿಸಬೇಕೆಂದು ಕೋರಿ ಲಿಂಗಾಯತ ಸಮುದಾಯ ನ್ಯಾಯಾಲಯಗಳ ಮೊರೆ ಹೋಗಿಲ್ಲ. ಮೇಲೆ ಹೇಳಿದ ಹಿಂದೂ ಸಂಘಟನೆಗಳೆರಡರ ಪ್ರಯತ್ನವೂ ವಿಫಲವಾಗಿದೆ. ಹೆಚ್ಚೇನು, ಸಂವಿಧಾನದ 25ನೆಯ ವಿಧಿ ಹಾಗೂ ಇತರ ನಿಯಮಾವಳಿಗಳು ಹಿಂದೂಗಳಿಗೆ ಮಾತ್ರ ಅಥವಾ ವೀರಶೈವ ಲಿಂಗಾಯತರು, ಬ್ರಹ್ಮಸಮಾಜ, ಪ್ರಾರ್ಥನಾ ಸಮಾಜ ಅಥವಾ ಆರ್ಯ ಸಮಾಜದ ಅನುಯಾಯಿಗಳನ್ನೊಳಗೊಂಡ “ಇತರ ಹಿಂದೂ ಸಂಘಟನೆಗಳಿಗೆ’ ಮಾತ್ರ ಅನ್ವಯಿಸುವಂಥವು ಎಂದು ನ್ಯಾಯಾಲಯಗಳು ವಿವರಣೆ ನೀಡಿಯೂ ಆಗಿದೆ. ಲಿಂಗಾಯತರು ಎಲ್ಲ ಅಲ್ಲದಿದ್ದರೂ ಕೆಲವಾದರೂ ಹಿಂದೂ ದೇವತೆಗಳನ್ನು ಪೂಜಿಸುತ್ತಾರೆ; ಮುಸ್ಲಿಮರು ಹಾಗೂ ಕ್ರೈಸ್ತ ಸಮುದಾಯದವರಂತಲ್ಲದೆ ಲಿಂಗಾಯತರು ಹಿಂದೂಗಳಿಗೆ ಅನ್ವಯಿಸುವ ವೈಯಕ್ತಿಕ ಕಾಯ್ದೆಗಳ ವ್ಯಾಪ್ತಿಯೊಳಗಿದ್ದಾರೆಂಬುದೂ ಬಹುಮುಖ್ಯ ಅಂಶವಾಗಿದೆ.
ಬಾಂಬೆ ಹೈಕೋರ್ಟ್ ಹೇಳಿದ್ದೇನು?
ಲಿಂಗಾಯತ ಸಮುದಾಯದವರಿಗೆ ಸಂಬಂಧಿಸಿದಂತೆ ಸ್ವಾತಂತ್ರ್ಯಪೂರ್ವದ ದಿನಗಳಲ್ಲಿ (1943ರಲ್ಲಿ) ಬಾಂಬೆ ಹೈಕೋರ್ಟ್ ನೀಡಿದ್ದ ತೀರ್ಪೊಂದು ಕುತೂಹಲಕಾರಿಯಾಗಿದೆ. ನ್ಯಾಯಪೀಠ ಲಿಂಗಾಯತರೆಂದರೆ “ಪ್ರೊಟೆಸ್ಟೆಂಟ್ ಹಿಂದೂಗಳು’ ಎಂದು ಘೋಷಿಸಿ ಹೊರಡಿಸಿದ ತೀರ್ಪು ಇದು. ತಿರುಕನ ಗೌಡ ಮಲ್ಲನ ಗೌಡ ಹಾಗೂ ಶಿವಪ್ಪ ಪಾಟೀಲ್ ನಡುವಿನ ಪ್ರಕರಣ ಇದಾಗಿತ್ತು. “”ಲಿಂಗಾಯತರು ನಿಜವಾಗಿ ಪ್ರೊಟೆಸ್ಟೆಂಟ್ ಹಿಂದೂಗಳು; ಮೂರ್ತಿಪೂಜೆಯ ಪದ್ಧತಿ, ಬ್ರಾಹ್ಮಣ ವಿಧಿಯಾಚರಣೆಗಳು ಹಾಗೂ ಜಾತಿ ತಾರತಮ್ಯ ಇವುಗಳಿಂದ ಕಳಚಿಕೊಂಡವರು. ಆದರೆ ಅವರು ಹಿಂದೂ ದೇವರುಗಳೊಬ್ಬನನ್ನು ಪ್ರತಿಮೆ ಅಥವಾ ಮೂರ್ತಿಯ ರೂಪದಲ್ಲಿ ಅಲ್ಲದಿದ್ದರೂ ಸಂಕೇತದ ರೂಪದಲ್ಲಿ ಪೂಜಿಸುತ್ತಾರೆ. ಆದ್ದರಿಂದ ಅವರು ಜೈನರಿಗಿಂತಲೂ ಹೆಚ್ಚಾಗಿ ಹಿಂದೂ ಕಾನೂನಿನ ವ್ಯಾಪ್ತಿಯೊಳಗೆ ಬರುತ್ತಾರೆ” ಎಂದಿತ್ತು ಈ ನ್ಯಾಯಪೀಠ.
ಲಿಂಗಾಯತರು ಶೂದ್ರರೇ, ಬ್ರಾಹ್ಮಣರೇ ಎಂಬ ವಿವಾದಕ್ಕೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್ 1964ರಲ್ಲಿ ವಿಚಾರಣೆ ನಡೆಸಿತ್ತು. ಗುರಮ್ಮ ಭರತರ್ ಚನ್ನಬಸಪ್ಪ ಮತ್ತು ಮಲ್ಲಪ್ಪ ದೇಶ್‌ಮುಖ್ ಇವರ ನಡುವಿನ ಈ ಪ್ರಕರಣವನ್ನು ವಿಚಾರಣೆಗೆತ್ತಿಕೊಂಡವರು ನ್ಯಾ| ಕೆ. ಸುಬ್ಬರಾವ್. ಸಂಬಂಧಪಟ್ಟ ಅಧಿಕಾರಿಗಳನ್ನು ಹಾಗೂ ಸಂಘಟನೆಗಳನ್ನು ವಿಚಾರಣೆಗೊಳಪಡಿಸಿದ ಬಳಿಕ ನ್ಯಾಯಾಲಯ ಹೇಳಿದ್ದು ಹೀಗೆ – “”ಲಿಂಗಾಯತರು ಹಿಂದೂಗಳೇ ಆಗಿರಲಿ/ ಅಲ್ಲದಿರಲಿ, ಅವರು ಯಾವ ಕಾನೂನಿಗೆ ಬದ್ಧರು ಎಂಬುದನ್ನು ಅಗತ್ಯವಾಗಿ ಪರಿಶೀಲಿಸಲೇಬೇಕಿದೆ. ಗೋಪಾಲ್ ನರಹರಿ ಸಪ್ರ – ಹನುಮಂತ್ ಗಣೇಶ್ ಸಪ್ರ ಕೇಸಿನಲ್ಲಿ ಪ್ರೀವಿ ಕೌನ್ಸಿಲ್ ತೀರ್ಪು ನೀಡಿದಂದಿನಿಂದ (1879) ಅವರು ಹಿಂದೂ ಕಾನೂನಿಗೆ (ಶೂದ್ರರಿಗೆ ಅನ್ವಯಿಸುವ ರೀತಿಯಲ್ಲಿ) ಬಾಧ್ಯರು.”
ಲಿಂಗಾಯತರು ಹಿಂದೂಗಳಿಗಿಂತ ಭಿನ್ನರು ಎಂಬ ಅಭಿಪ್ರಾಯಕ್ಕೆ ಮಾಜಿ ರಾಷ್ಟ್ರಪತಿ ಡಾ| ಎಸ್. ರಾಧಾಕೃಷ್ಣನ್ ಅವರು ಅಸಮ್ಮತಿ ವ್ಯಕ್ತಪಡಿಸಿದ್ದರೂ ಪ್ರೊ| ಎಂ.ಆರ್. ಸಖಾರೆ ಅವರ “ಹಿಸ್ಟರಿ ಆ್ಯಂಡ್ ಫಿಲಾಸಫಿ ಆಫ್ ಲಿಂಗಾಯತ್ ರಿಲಿಜನ್’ ಎಂಬ ಗ್ರಂಥಕ್ಕೆ ಬರೆದಿರುವ ಮುನ್ನುಡಿಯಲ್ಲಿ ಅವರು, ಮೂಲತಃ “”ವೇದಪಾರಮ್ಯ ಹಾಗೂ ವರ್ಣಾಶ್ರಮ ಧರ್ಮದ ಆಧಾರದ ಮೇಲೆ ಹಿಂದೂಧರ್ಮ ನಿಂತಿದೆಯೆಂದು ಹೇಳುವುದು ನಿಜಕ್ಕೂ ಒಂದು ಸಂಕುಚಿತ ಅಭಿಪ್ರಾಯ” ಎಂದಿದ್ದಾರೆ. “ಲಿಂಗಾಯತರು ಜಾತಿ ತಾರತಮ್ಯವನ್ನು ವಿರೋಧಿಸುತ್ತಾರೆಂದ ಮಾತ್ರಕ್ಕೆ ಅವರನ್ನು ಹಿಂದೂಗಳಲ್ಲ ಎನ್ನಲಾಗದು’ ಎಂದೂ ಹೇಳಿದ್ದಾರೆ. ಹಿಂದೂ ಧರ್ಮವೆಂದರೆ ಮೂರ್ತಿ ಪೂಜೆ ಎಂದು ವ್ಯಾಖ್ಯಾನಿಸುವುದಾದರೆ, ಮೂರ್ತಿ ಪೂಜೆ ಹಿಂದೂಗಳ ಧರ್ಮ ಎನ್ನಬಹುದು ಎಂದು ಪ್ರೊ| ಸಖಾರೆ ಈ ಗ್ರಂಥದಲ್ಲಿ ಹೇಳಿದ್ದರು. “”ಆದರೆ ಇಲ್ಲೂ ಒಂದು ಅಂಶವಿದೆ; ಲಿಂಗಾಯತರು ಹಿಂದೂಗಳ ದೇವರುಗಳಲ್ಲೊಬ್ಬನಾದ ಶಿವನನ್ನು ಪೂಜಿಸುತ್ತಾರಾದ್ದರಿಂದ ಅವರದ್ದು ಹಿಂದೂ ಧರ್ಮ ಎನ್ನುವಂತಿಲ್ಲ. ಲಿಂಗಾಯತ ಧರ್ಮಕ್ಕೆ ಅದರದೇ ಪ್ರತ್ಯೇಕ ತಣ್ತೀ – ಸಿದ್ಧಾಂತ ಹಾಗೂ ಆಚರಣಾ ಕ್ರಮಗಳಿವೆ; ಅದನ್ನು ಹಿಂದೂ ಧರ್ಮದ ಉಪಧರ್ಮವೆಂದೂ ಪರಿಗಣಿಸಲಾಗದು” ಎಂದೂ ಪ್ರೊ| ಸಖಾರೆ ಈ ಪುಸ್ತಕದಲ್ಲಿ ಹೇಳಿದ್ದರು.
ಇದೇ ಸಂದರ್ಭದಲ್ಲಿ ಈ ಹಿಂದೆ ರಾಮಕೃಷ್ಣ ಮಿಶನ್ ಅವರು ಹಿಂದೂ ಧರ್ಮ ಕುರಿತಂತೆ ಸುಪ್ರೀಂಕೋರ್ಟಿನೆದುರು ವ್ಯಕ್ತಪಡಿಸಿದ್ದ ವಿಚಿತ್ರ ವಾದವೊಂದನ್ನು ನ್ಯಾಯಾಲಯ 2011ರಲ್ಲಿ ತಿರಸ್ಕರಿಸಿದ್ದನ್ನು ಉಲ್ಲೇಖೀಸಬೇಕಾಗಿದೆ. ರಾಮಕೃಷ್ಣ ಮಿಶನ್‌ನ ವ್ಯಾಪ್ತಿಯಲ್ಲಿರುವವರನ್ನು ಧಾರ್ಮಿಕವಾಗಿ ಹಿಂದೂಯೇತರರೆಂದು; “ಅನುವಂಶಿಕತೆ’ ಅಥವಾ ವಾರಸುದಾರಿಕೆಯ ದೃಷ್ಟಿಯಿಂದ “ಆಂಶಿಕ ಹಿಂದೂ’ಗಳೆಂದು ಮಾನ್ಯ ಮಾಡಬೇಕೇಂಬುದು ರಾಮಕೃಷ್ಣ ಮಿಶನ್ ಕೋರ್ಟಿಗೆ ಸಲ್ಲಿಸಿದ್ದ ಮನವಿಯಲ್ಲಿನ ಆಶಯವಾಗಿತ್ತು. ರಾಮಕೃಷ್ಣ ಮಿಶನ್ ಒಂದು ಧಾರ್ಮಿಕ ಪಂಥ (ಪಂಗಡ) ಅಥವಾ ಹಿಂದೂ ಧರ್ಮದ ಒಂದು ಉಪಾಧಿ ಎಂಬ 1995ರ ತೀರ್ಪೊಂದನ್ನು ನ್ಯಾಯಾಲಯ ಈ ತೀರ್ಪಿನ ಸಂದರ್ಭದಲ್ಲಿ ನೆನಪಿಸಿತಲ್ಲದೆ, ಅದಕ್ಕೆ ತನ್ನ ಸಮ್ಮತಿಯಿದೆಯೆಂದೂ ನೆನಪಿಸಿ ಸ್ಪಷ್ಟಪಡಿಸಿತು. ಸ್ವಾಮಿ ವಿವೇಕಾನಂದರು 1893ರಲ್ಲಿ ಶಿಕಾಗೋದ ಧರ್ಮಸಂಸತ್ತಿನಲ್ಲಿ ಓರ್ವ ಉತ್ಸಾಹಿ ಸಾಹಸಿಗ ಹಿಂದೂ ಸಂನ್ಯಾಸಿಯಾಗಿ ಪಾಲ್ಗೊಂಡದ್ದೇನೋ ಹೌದು; ಆದರೆ ಅಲ್ಲಿಂದ ಭಾರತಕ್ಕೆ ಮರಳಿದ ಬಳಿಕ ಅವರು ಹಿಂದೂ ಧರ್ಮದಿಂದ ಭಿನ್ನವಾದ ಧರ್ಮವೊಂದರ ಬೋಧಕರಾಗಿ ಪರಿವರ್ತಿತರಾದರೆಂಬ ವಾದವನ್ನು ರಾಮಕೃಷ್ಣ ಮಿಶನ್ ಮಂಡಿಸಿತ್ತು.
ಅರಕೆರೆ ಜಯರಾಮ್
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.