ಚಿದಂಬರ ರಹಸ್ಯ ಭೇದಿಸಲಿದೆಯೇ ಸಿಬಿಐ?
ಕಾಲಚಕ್ರ ಒಂದು ಪೂರ್ಣ ಸುತ್ತು ತಿರುಗಿದೆ
ಅರಕೆರೆ ಜಯರಾಮ್, Aug 29, 2019, 5:57 AM IST
ಐಎನ್‌ಎಕ್ಸ್ ಮೀಡಿಯಾ ಹಗರಣದಲ್ಲಿ ಕೇಂದ್ರದ ಮಾಜಿ ಸಚಿವ ಪಿ. ಚಿದಂಬರಂ ಅವರನ್ನು ಸಿಬಿಐ ಅಧಿಕಾರಿಗಳು ಬಂಧಿಸಿದ ಸುದ್ದಿಯನ್ನು ನೋಡುತ್ತಲೇ ಹಲವರು, ಭಾವನಾತ್ಮಕವಾಗಿ, ‘ಚಿದಂಬರಂ, ನೀವೂ ಕೂಡ’ ಎಂದು ಉದ್ಗರಿಸಿದರು. ಡಾ| ಸುಬ್ರಹ್ಮಣ್ಯಂ ಸ್ವಾಮಿ ಅವರೇ ಸ್ವತಃ ಚಿದಂಬರಂ ವಿರುದ್ಧವಾಗಿ ಹೋರಾಟ ನಡೆಸುತ್ತಿದ್ದರೂ ಪ್ರಕರಣದಲ್ಲಿ ಚಿದಂಬರಂ ಪಾತ್ರವಿರುವ ಕುರಿತು ನಂಬಿಕೆಯೇ ಹುಟ್ಟದ ಸ್ಥಿತಿಯಲ್ಲಿ ಹಲವರಿದ್ದಾರೆ. ಕೇಂದ್ರ ಸಚಿವರಾಗಿ ಅವರು ಹಲವು ಅಮಾಯಕರನ್ನು ಕ್ರಿಮಿನಲ್ ಪ್ರಕರಣಗಳಲ್ಲಿ ಸಿಲುಕಿಸಿ ಜೈಲಿಗಟ್ಟಿದ್ದನ್ನು ಮರೆಯಲು ಸಾಧ್ಯವೇ? ಅವರಿಗೆ ಜೈಲು ಶಿಕ್ಷೆ ಆಗಲೇಬೇಕು ಎಂದು ಡಾ| ಸ್ವಾಮಿ ಹೇಳಿದ್ದರು. ಚಿದಂಬರಂ ಅವರ ರಾಜಕೀಯ ಜೀವನವನ್ನು ಹತ್ತಿರದಿಂದ ಗಮನಿಸಿದವರಿಗೆ ಕೇಂದ್ರ ಸಚಿವರಾಗಿದ್ದ ಸಂದರ್ಭದಲ್ಲಿ ಅವರು ಕೈಗೊಂಡ ಪ್ರಶ್ನಾರ್ಹ ನಿರ್ಧಾರಗಳು, ಒಪ್ಪಂದಗಳು ಅರಿವಿಗೆ ಬಾರದೇ ಇರಲಿಕ್ಕಿಲ್ಲ.
ಚಿದಂಬರಂ ಅವರು ಕುರಿತಾಗಿ ಈ ಅಂಕಣ ಬರೆಯುತ್ತಿರುವಂತೆಯೇ ಐಎನ್‌ಎಕ್ಸ್ ಮೀಡಿಯಾ ಪ್ರಕರಣದಲ್ಲಿ ಸಿಬಿಐ ಚಿದಂಬರಂ ಅವರನ್ನು ಬಂಧಿಸಿರುವುದನ್ನು ಪ್ರಶ್ನಿಸಿ ಸಲ್ಲಿಕೆಯಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯೊಂದನ್ನು ಸುಪ್ರೀಂ ಕೋರ್ಟ್ ತಳ್ಳಿ ಹಾಕಿರುವ ಸುದ್ದಿಯೂ ಬಂತು. ಅದಕ್ಕೂ ಕೆಲವು ದಿನಗಳ ಮೊದಲು ದಿಲ್ಲಿಯ ಉಚ್ಚ ನ್ಯಾಯಾಲಯ ಚಿದಂಬರಂ ಅವರ ನಿರೀಕ್ಷಣಾ ಜಾಮೀನು ಅರ್ಜಿಯನ್ನು ತಿರಸ್ಕರಿಸಿತ್ತು. ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಚಿದಂಬರಂ ಸೂತ್ರಧಾರನಾಗಿರುವ ಕಾರಣ ಅವರಿಗೆ ಜಾಮೀನು ನೀಡಲು ಸಾಧ್ಯವಿಲ್ಲವೆಂದು ಜಸ್ಟೀಸ್ ಸುನಿಲ್ ಗರ್ಗ್ ತಮ್ಮ ಆದೇಶದಲ್ಲಿ ಹೇಳಿದ್ದರು. ಭ್ರಷ್ಟಾಚಾರದ ಆರೋಪ ಹೊತ್ತಿರುವ ರಾಜಕಾರಣಿಗಳ ವಿರುದ್ಧ ಜಸ್ಟೀಸ್ ಗರ್ಗ್ ಕಠಿಣ ನಿಲುವು ತಾಳಿರುವುದು ಎಲ್ಲರಿಗೂ ಗೊತ್ತೇ ಇದೆ. ಚಿದಂಬರಂ ಅವರಿಗೆ ಜಾಮೀನು ನಿರಾಕರಿಸಿದ ಹೈಕೋರ್ಟ್ ಹಾಗೂ ಸುಪ್ರೀಂ ಕೋರ್ಟ್ ನಡೆಯನ್ನು ಪ್ರಶ್ನಿಸುತ್ತಿರುವ ಕೆಲವರು, ಅಧಿಕಾರದಲ್ಲಿದ್ದ ಸಂದರ್ಭದಲ್ಲಿ ದೇಶದ ಅರ್ಥ ವ್ಯವಸ್ಥೆಗೆ ಮಾರಕವಾಗಬಲ್ಲ ಭ್ರಷ್ಟಾಚಾರ ಎಸಗಿರುವ ಗಂಭೀರ ಆರೋಪ ಚಿದು ಮೇಲಿರುವುದನ್ನು ಮರೆತಿದ್ದಾರೆ ಎನ್ನಿಸುತ್ತದೆ.
ಚಿದಂಬರಂ ತಪ್ಪು ಮಾಡಿರಬಹುದು ಎಂಬುದನ್ನು ನಂಬಲು ಕೆಲವರು ಈಗಲೂ ಸಿದ್ಧರಿಲ್ಲ. ಏಕೆಂದರೆ, ಪಳನಿಯಪ್ಪನ್ ಚಿದಂಬರಂ ಬೆಳೆಸಿಕೊಂಡಿರುವ ವ್ಯಕ್ತಿತ್ವ ಅಂತಹದು. ಕಳೆದ ಕೆಲವು ದಶಕಗಳಿಂದ ರಾಜಕೀಯ ಪ್ರವೇಶಿಸಿ ಯಶಸ್ಸು ಹಾಗೂ ಖ್ಯಾತಿ ಗಳಿಸಿದವರಲ್ಲಿ ಅವರೂ ಒಬ್ಬರು. ರಾಜಕಾರಣದ ಮೂಲಕ ಶ್ರೀಮಂತಿಕೆ ಗಳಿಸುವ, ತಂತ್ರಗಳನ್ನು ಹೆಣೆಯುವ ಅಥವಾ ಮಧ್ಯವರ್ತಿಯಾಗಿ ಕೆಲಸ ಮಾಡುವ ಮನೋವೃತ್ತಿಯ ವೃತ್ತಿಪರ ರಾಜಕಾರಣಿಯಾಗಿ ಅವರು ಕಾಣಿಸುವುದಿಲ್ಲ. ಭ್ರಷ್ಟಾಚಾರದ ಪ್ರಕರಣಗಳಲ್ಲಿ ಶಿಕ್ಷೆಗೆ ಗುರಿಯಾಗಿ ಜೈಲು ಕಂಬಿಗಳನ್ನು ಎಣಿಸುತ್ತಿರುವ ಓಂ ಪ್ರಕಾಶ್ ಚೌಟಾಲಾ ಅಥವಾ ಲಾಲೂ ಪ್ರಸಾದ್ ಯಾದವ್ ಮುಂತಾದವರಿಗೆ ವ್ಯತಿರಿಕ್ತವಾಗಿ ಚಿದಂಬರಂ ಮಾತು ಮೃದು. ಅವರ ಇಂಗ್ಲಿಷ್ ಭಾಷಣವಂತೂ ಕೇಳುವಂತಿರುತ್ತದೆ. ಕಾರ್ಪೊರೇಟ್ ಉದ್ಯಮಿಗಳು ಅಥವಾ ದೊಡ್ಡ ಶ್ರೀಮಂತರ ಪ್ರಕರಣಗಳನ್ನು ಮಾತ್ರ ಚಿದಂಬರಂ ಹಾಗೂ ಅವರ ಪತ್ನಿ ನಳಿನಿ ಕೈಗೆತ್ತಿಕೊಂಡು ವಾದಿಸುತ್ತಾರೆ, ಅದಕ್ಕಾಗಿ ದೊಡ್ಡ ಮೊತ್ತದ ಶುಲ್ಕವನ್ನೂ ಪಡೆಯುತ್ತಾರೆ. ಅಂಥವರು ಕೂಡ ಭ್ರಷ್ಟಾಚಾರದಲ್ಲಿ ತೊಡಗಿದ್ದಾರೆ ಎಂದರೆ ಅದು ಇನ್ನಷ್ಟು ಸಿರಿವಂತರಾಗುವ ಅತ್ಯಾಸೆಯೇ ಹೊರತು ಬೇರೇನಲ್ಲ. ಕೆಲವು ರಾಜಕಾರಣಿಗಳು ಕೇಳುತ್ತಾರೆ, ಅಂಬಾನಿ ಹಾಗೂ ಅದಾನಿ ಅವರಂಥವರೇ ತಮ್ಮ ಸಂಪತ್ತನ್ನು ವೃದ್ಧಿಸಿಕೊಳ್ಳಲು ಯತ್ನಿಸುತ್ತಾರೆ. ನಾವೇಕೆ ಮಾಡಬಾರದು? ಎಂದು. ಅಂಥವರು, ನಮ್ಮದು ಇನ್ನೂ ಸಾಮಾಜಿಕ ಪ್ರಜಾಪ್ರಭುತ್ವದಲ್ಲಿ ನಂಬಿಕೆ ಇಟ್ಟಿರುವ ರಾಷ್ಟ್ರ. ಇಲ್ಲಿ ಸಂಪತ್ತು ಕೆಲವೇ ಕೆಲವರ ಪಾಲಾಗಬಾರದು ಎಂಬ ಆದರ್ಶವಿದೆ. ನಮ್ಮ ಸಮಾಜವಾದವೂ ಕರ್ನಾಟಕ, ಕೇರಳದಲ್ಲಿರುವಂತೆ ರಾಜಕೀಯವಾಗಿ ದುರ್ಬಲವಾದ ಜಾತಿ ಹಾಗೂ ಪಂಗಡಗಳ ಕುಟುಂಬಗಳಿಗೆ ಸೇರಿದ ಕೃಷಿ ಭೂಮಿಯನ್ನು ಅವರಿಂದ ಕಸಿದುಕೊಳ್ಳುವುದನ್ನು ವಿರೋಧಿಸುತ್ತದೆ ಎಂಬುದನ್ನು ಮರೆಯಬಾರದು.
ಸೆಪ್ಟಂಬರ್ 1945ರಲ್ಲಿ ಜನಿಸಿದ ಚಿದಂಬರಂ ಆಗರ್ಭ ಶ್ರೀಮಂತರು. ಅವರ ಅಜ್ಜ (ತಾಯಿಯ ತಂದೆ) ರಾಜಾ ಶ್ರೀ ಅನ್ನಾಮಲೈ ಚೆಟ್ಟಿಯಾರ್ ಅವರು ಚೆಟ್ಟಿನಾಡಿನ ಶ್ರೀಮಂತ ಉದ್ಯಮಿಯಾಗಿದ್ದರು, ಹಣಕಾಸು ವ್ಯವಹಾರವನ್ನೂ ಮಾಡುತ್ತಿದ್ದರು. ಆದರೆ, ಉದಾರ ಹೃದಯಿ. ಅವರು ಇಂಡಿಯನ್ ಬ್ಯಾಂಕ್ ಹಾಗೂ ತಮಿಳುನಾಡಿನ ಅಣ್ಣಾಮಲೈ ವಿಶ್ವವಿದ್ಯಾಲಯಗಳ ಸ್ಥಾಪಕರೂ ಆಗಿದ್ದಾರೆ. ಚಿದಂಬರಂ ಅವರ ತಂದೆ ಕಂಡನೂರು ಪಳನಿಯಪ್ಪನ್ ಚೆಟ್ಟಿಯಾರ್ ಅವರು ಜವುಳಿ ಹಾಗೂ ತೋಟಗಾರಿಕೆಗೆ ಸಂಬಂಧಿಸಿದ ಉದ್ಯಮಗಳನ್ನು ನಡೆಸುತ್ತಿದ್ದವರು. ವಕೀಲರಾಗುವ ಉದ್ದೇಶದಿಂದ ಚೆನ್ನೈಯಲ್ಲಿ ಶಿಕ್ಷಣ ಪಡೆದ ಚಿದಂಬರಂ, ಪ್ರತಿಷ್ಠಿತ ಹಾರ್ವರ್ಡ್ ಬ್ಯುಸಿನೆಸ್ ಸ್ಕೂಲ್ನಿಂದ ಸ್ನಾತಕೋತ್ತರ ಪದವಿಯನ್ನೂ ಗಳಿಸಿದರು. ಚಿದಂಬರಂ ಅವರ ಮಾವ (ನಳಿನಿಯವರ ತಂದೆ) ಪಿ.ಎಸ್. ಕೈಲಾಸಂ ಸುಪ್ರೀಂ ಕೋರ್ಟ್‌ನ ಮಾಜಿ ನ್ಯಾಯಮೂರ್ತಿ.
ಚಿದಂಬರಂ ಸಹಿತ ಈಗಿನ ರಾಜಕಾರಣಿಗಳ ಸಮಸ್ಯೆ ಎಂದರೆ, ತಾವು ಅಧಿಕಾರದಲ್ಲಿದ್ದಾಗ ಮಕ್ಕಳು, ಕುಟುಂಬಸ್ಥರು ಹಾಗೂ ಬಂಧುಗಳು ತಮ್ಮ ಕಾರ್ಯಕ್ಷೇತ್ರದಲ್ಲಿ ಹಸ್ತಕ್ಷೇಪ ಮಾಡಲು ಅವಕಾಶ ನೀಡುವುದು ಅಥವಾ ತಮ್ಮ ಪ್ರಭಾವ ಬಳಸಿ ಅವರ ಉದ್ಯಮಗಳ ಬೆಳವಣಿಗೆಗೆ ನೆರವಾಗುವುದು. ಹೈಕೋರ್ಟ್ ನ್ಯಾಯಮೂರ್ತಿಗಳ ಮಕ್ಕಳು ಎಂದಾದರೂ ಅದೇ ನ್ಯಾಯಾಲಯಗಳಲ್ಲಿ ವಕೀಲರಾಗಿ ಕೆಲಸ ಮಾಡುವುದನ್ನು ನೋಡಿದ್ದೀರಾ? ಕರ್ನಾಟಕದ ಹೈಕೋರ್ಟ್‌ನಲ್ಲಿ ನ್ಯಾಯಾಧೀಶರ ಪತ್ನಿಯೊಬ್ಬರು ಬೇಡಿಕೆಯ ವಕೀಲೆಯಾಗಿದ್ದರು. ಇಂತಹ ಪ್ರಕರಣಗಳು ವಿರಳ. ನ್ಯಾಯಾಧೀಶರು ರಾಜಕಾರಣಿಗಳಂತಲ್ಲ. ಅವರು ಇಂಥದ್ದಕ್ಕೆಲ್ಲ ಅವಕಾಶ ಕೊಡುವುದಿಲ್ಲ.
ಕರ್ನಾಟಕದ ಹಲವು ರಾಜಕಾರಣಿಗಳು ಐಟಿ ಕಂಪೆನಿಗಳಲ್ಲಿ ಷೇರುಗಳನ್ನು ಹೊಂದಿದ್ದಾರೆ ಎಂಬುದು ಎಷ್ಟು ಜನರಿಗೆ ಗೊತ್ತು? ಈ ಉದ್ದಿಮೆಗಳಿಗೆ ಪ್ರೋತ್ಸಾಹ ನೀಡುವ ನೆಪದಲ್ಲಿ ಷೇರು ಮಾರುಕಟ್ಟೆಯ ಒಳಗುಟ್ಟುಗಳನ್ನೆಲ್ಲ ಅರಿಯುತ್ತ ಅವರೂ ಗುಪ್ತವಾಗಿ ಈ ಕಂಪನಿಗಳಲ್ಲಿ ಹೂಡಿಕೆ ಮಾಡುತ್ತಿದ್ದಾರೆ.
ಚಿದಂಬರಂ ವಿಚಾರದಲ್ಲಿ, ಅವರ ಪುತ್ರ ಕಾರ್ತಿ ಚಿದಂಬರಂ ಉದ್ಯಮಿಯಾಗಿ ಹಾಗೂ ರಾಜಕಾರಣಿಯಾಗಿ ಸಾಧಿಸಿದ ಅಭಿವೃದ್ಧಿಯೇ ಗಮನಾರ್ಹ ಅಂಶ. ಕೇಂದ್ರ ಸರಕಾರದಲ್ಲಿ ಸಚಿವರಾಗಿದ್ದ ಸಂದರ್ಭದಲ್ಲಿ ತಮ್ಮ ಪುತ್ರನ ವ್ಯಾವಹಾರಿಕ ಜಾಲದ ವಿಸ್ತರಣೆ ಆಗುತ್ತಿದ್ದರೂ ಚಿದಂಬರಂ ವಿರುದ್ಧ ಸ್ವಹಿತಾಸಕ್ತಿ ಸಂಘರ್ಷದ ಆರೋಪ ಏಕೆ ಕೇಳಿಬರಲಿಲ್ಲ ಎಂಬುದೇ ಆಶ್ಚರ್ಯದ ವಿಷಯ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಬೆಳೆಯುತ್ತಿದ್ದ ಕಂಪನಿಗಳ ಜಾಲಕ್ಕೆ ಕಾರ್ತಿ ಚಿದಂಬರಂ ಅವರೇ ಮಾಲಕರಾಗಿದ್ದರು. ದಿಲ್ಲಿಯಲ್ಲಿರುವ ಕಾಂಗ್ರೆಸ್ ಮುಖಂಡರೊಬ್ಬರ ಪ್ರಕಾರ, ಇತ್ತೀಚಿನ ಲೋಕಸಭಾ ಚುನಾವಣೆಯಲ್ಲಿ ಮಾಜಿ ಸಚಿವ ಚಿದಂಬರಂ ಅವರು ತಮಿಳುನಾಡಿನ ರಾಣಿಪೇಟ್ ಕ್ಷೇತ್ರದಿಂದ ತಮ್ಮ ಪುತ್ರನನ್ನು ಗೆಲ್ಲಿಸುವುದರಲ್ಲೇ ಹೆಚ್ಚು ಆಸಕ್ತರಾದರು. ದೇಶಾದ್ಯಂತ ಕಾಂಗ್ರೆಸ್ ಗೆಲ್ಲುವುದು ಅವರಿಗೆ ಮುಖ್ಯವಾಗಿರಲಿಲ್ಲ. ಡಿಎಂಕೆ ಜತೆಗೆ ಕಾಂಗ್ರೆಸ್ ಮಾಡಿಕೊಂಡ ಮೈತ್ರಿಯಿಂದಾಗಿ ಕಾರ್ತಿ ಚಿದಂಬರಂ ರಾಣಿಪೇಟ್ ಕ್ಷೇತ್ರವನ್ನು ಸುಲಭವಾಗಿ ಕೈವಶ ಮಾಡಿಕೊಂಡರು. ಆದರೆ, ಯಾವ ದೃಷ್ಟಿಯಿಂದಲೂ ಅವರು ಜನನಾಯಕರಲ್ಲ. ಚಿದಂಬರಂ ಕೂಡ ಅವಕಾಶವಾದಿ ರಾಜಕಾರಣದ ಭಾಗವಾಗಿ ಕಾಂಗ್ರೆಸ್ ಡಿಎಂಕೆ ಅಥವಾ ಎಐಎಡಿಎಂಕೆ ಜತೆಗೆ ಮಾಡಿಕೊಂಡ ಮೈತ್ರಿಗಳಿಂದಾಗಿಯೇ ರಾಜಕೀಯವಾಗಿ ಬೆಳೆದವರು. ಶಿವಗಂಗಾ ಲೋಕಸಭಾ ಕ್ಷೇತ್ರದಲ್ಲಿ ಚಿದಂಬರಂ 2009ರ ಚುನಾವಣೆಯಲ್ಲಿ ಕೇವಲ 3,554 ಮತಗಳಿಂದ ಪ್ರಯಾಸದ ಜಯ ಗಳಿಸಿದರು, ಅದೂ ಡಿಎಂಕೆ ಕೃಪಾಕಟಾಕ್ಷದಿಂದ. ಮೊದಲ ಎಣಿಕೆಯಲ್ಲಿ ಚಿದಂಬರಂ ಪರಾಭವಗೊಂಡಿದ್ದಾರೆ ಎಂದೇ ಘೋಷಿಸಲಾಗಿತ್ತು. ಬಹು ವಿವಾದಿತ ಮರು ಎಣಿಕೆ ಅವರಿಗೆ ಗೆಲುವನ್ನು ಕರುಣಿಸಿತು.
ಚಿದಂಬರಂ ಅವರಂತೆ, ಈ ದೇಶದಲ್ಲಿ ಅಧಿಕಾರದಲ್ಲಿರುವ ಅದೆಷ್ಟೋ ರಾಜಕಾರಣಿಗಳು ತಮ್ಮ ಕಚೇರಿಯನ್ನು ದುರ್ಬಳಕೆ ಮಾಡಿಕೊಂಡು, ತಮ್ಮ ಮಕ್ಕಳ ಉದ್ಯಮಗಳನ್ನು ಬೆಳೆಸಲು ಉದಾರವಾಗಿಯೇ ಸಹಾಯ ಮಾಡಿದ್ದಾರೆ. ಪುತ್ರ ಕಾಂತಿಲಾಲ್ ದೇಸಾಯಿ ಅವರ ಉದ್ಯಮಾಸಕ್ತಿಯಿಂದಾಗಿ ಮಾಜಿ ಪ್ರಧಾನಿ ಮೊರಾರ್ಜಿ ದೇಸಾಯಿ ಅವರು ಮುಜುಗರ ಅನುಭವಿಸುವಂತಾಗಿದ್ದು ಗೊತ್ತಲ್ಲವೇ? ಅವರು ಕೇಂದ್ರ ಹಣಕಾಸು ಸಚಿವರಾಗಿದ್ದ ವೇಳೆ ಭೂಪೇಶ್ ಗುಪ್ತಾ, ಮಧು ಲಿಮಯೆ ಮತ್ತಿತರರು ದೇಸಾಯಿ ಅವರ ಪುತ್ರನ ಮೇಲೆ ಸಂಸತ್ತಿನಲ್ಲೇ ಆರೋಪಗಳನ್ನು ಹೊರಿಸಿದರು. ಬಜೆಟ್‌ನ ಅಂಶಗಳ ಸೋರಿಕೆ ಮಾಡಿದ ಹಾಗೂ ಉದ್ಯಮಗಳಿಂದ ಹಣ ಸ್ವೀಕರಿಸಿದ ಆರೋಪ ವ್ಯಕ್ತವಾಗಿತ್ತು. ಮೊರಾರ್ಜಿ ಪ್ರಧಾನಿಯಾಗಿದ್ದಾಗ ಮತ್ತಷ್ಟು ಆರೋಪಗಳು ವ್ಯಕ್ತವಾದವು. ಆದರೆ, ಈಗಿನ ಭ್ರಷ್ಟಾಚಾರದ ಪ್ರಮಾಣಕ್ಕೆ ಹೋಲಿಸಿದರೆ ಕಾಂತಿಲಾಲ್ ಅವರ ಖಾತೆಗೆ ಹೋಗಿರಬಹುದಾದ ಹಣ ಜುಜುಬಿ.
ಸಂಸತ್ತಿನಲ್ಲಿ ತಮ್ಮ ವಿರುದ್ಧ ಆರೋಪಗಳು ವ್ಯಕ್ತವಾದಾಗ ಪ್ರಧಾನಿ ಇಂದಿರಾ ಗಾಂಧಿ ತಮ್ಮನ್ನು ಸಮರ್ಥಿಸಿಕೊಂಡು ಮಾತನಾಡಿದ್ದರೆಂದು ಮೊರಾರ್ಜಿ ತಮ್ಮ ಆತ್ಮಚರಿತ್ರೆಯಲ್ಲಿ ಉಲ್ಲೇಖೀಸಿದ್ದಾರೆ. ಮತ್ತೂಂದು ಸಂದರ್ಭದಲ್ಲಿ ಅಪರಿಚಿತ ವಿದೇಶಿಯರಿಂದ ಇಂದಿರಾ ಗಾಂಧಿ ಅವರು ವಜ್ರದ ಕಂಠೀಹಾರ ಹಾಗೂ ಮಿಂಕ್ ಕೋಟ್ ಕೊಡುಗೆ ಪಡೆದಿದ್ದಾರೆ ಎಂಬ ರಾಜ್ ನಾರಾಯಣ್ ಅವರ ಆರೋಪವನ್ನು ಖಂಡಿಸಿ ತಾವು ಮಾತನಾಡಿದ್ದನ್ನೂ ಬರೆದುಕೊಂಡಿದ್ದಾರೆ.
ಪಂಜಾಬ್ ಮುಖ್ಯಮಂತ್ರಿಯಾಗಿದ್ದ ಪ್ರತಾಪ್ ಸಿಂಗ್ ಕೈರಾನ್ ಅವರ ವಿರುದ್ಧ ಭ್ರಷ್ಟಾಚಾರ ಆರೋಪಗಳ ಪ್ರಕರಣದಲ್ಲಿ ನಿವೃತ್ತ ಮುಖ್ಯ ನ್ಯಾಯಮೂರ್ತಿ ಸುಧಿ ರಂಜನ್ ದಾಸ್ ನೇತೃತ್ವದಲ್ಲಿ ಜವಾಹರಲಾಲ ನೆಹರೂ ನೇತೃತ್ವದ ಕೇಂದ್ರ ಸರಕಾರ ತನಿಖಾ ಆಯೋಗವನ್ನು ರಚಿಸಿತ್ತು. ಪ್ರತಾಪ್ ಸಿಂಗ್ ಹಾಗೂ ಅವರ ಪುತ್ರರ ವಿಚಾರದಲ್ಲಿ ತನಿಖೆ ಕೈಗೊಂಡು ದಾಸ್ ಆಯೋಗ ಸಲ್ಲಿಸಿದ ವರದಿಯಲ್ಲಿ (1964), ಅಧಿಕಾರದಲ್ಲಿರುವ ರಾಜಕಾರಣಿಗಳ ಪುತ್ರರು ಉದ್ಯಮಗಳನ್ನು ನಡೆಸಬಾರದು ಎಂಬ ಕಾನೂನು ಅಥವಾ ನೈತಿಕ ನಿರ್ಬಂಧ ಎಲ್ಲಿಯೂ ಇಲ್ಲ. ಆದರೆ, ಉದ್ಯಮಕ್ಕೆ ಅನುಕೂಲವಾಗುವಂತೆ ಅಪ್ಪನ ಪ್ರಭಾವವನ್ನು ಬಳಸಿಕೊಳ್ಳುವುದಕ್ಕೆ ಅವಕಾಶವಿಲ್ಲ ಎಂದು ಹೇಳಲಾಗಿದೆ. ದೇಶ ವಿಭಜನೆಯ ಬಳಿಕ ಸಾಕಷ್ಟು ಹೊಡೆತ ತಿಂದಿದ್ದ ಪಂಜಾಬ್‌ನ ಅಭಿವೃದ್ಧಿಗೆ ಕೈರಾನ್ ಸಾಕಷ್ಟು ಶ್ರಮಿಸಿದ್ದರೂ, ಆಗಿನ ದಿನಗಳಲ್ಲಿ ಅವರು ಅತ್ಯಂತ ಭ್ರಷ್ಟ ರಾಜಕಾರಣಿ ಎನಿಸಿದ್ದರು.
ಕಾಲಚಕ್ರ ಒಂದು ಪೂರ್ಣ ಸುತ್ತು ತಿರುಗಿದೆ. ಕೇಂದ್ರದಲ್ಲಿ ಗೃಹ ಸಚಿವರಾಗಿದ್ದ ಸಂದರ್ಭದಲ್ಲಿ ಸಿಬಿಐ ಚಿದಂಬರಂ ಅವರ ಪೂರ್ಣ ನಿಯಂತ್ರಣದಲ್ಲಿತ್ತು. ಈಗ ಅವರು ಭ್ರಷ್ಟಾಚಾರ, ಅಧಿಕಾರ ದುರ್ಬಳಕೆ, ಅವ್ಯವಹಾರ ಹಾಗೂ ಅಕ್ರಮ ಹಣ ವರ್ಗಾವಣೆಯಂತಹ ಆರೋಪದಲ್ಲಿ ವಿಚಾರಣೆಗಾಗಿ ಕೆಲವು ದಿನಗಳನ್ನಾದರೂ ಸಿಬಿಐ ಕಸ್ಟಡಿಯಲ್ಲಿ ಕಳೆಯಬೇಕಾಗಿದೆ. ದೇವೇಗೌಡರ ಸಂಪುಟದಲ್ಲಿ ಕೇಂದ್ರ ಹಣಕಾಸು ಸಚಿವರಾಗಿ 1997ರಲ್ಲಿ ಅವರು ಮಂಡಿಸಿದ್ದ ಡ್ರೀಮ್ ಬಜೆಟ್‌ನ ಮೂಲಕ ಅನುಷ್ಠಾನಗೊಳಿಸಿದ ತೆರಿಗೆ ಸುಧಾರಣೆಯಂತಹ ಹಲವು ಉಪಕ್ರಮಗಳ ಖ್ಯಾತಿಯೂ ಈಗ ಮಂಕಾಗಿದೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.