ಪೌರತ್ವ ತಿದ್ದುಪಡಿ ಕಾಯ್ದೆಗೆ ಮಮತಾ ವಿರೋಧ ಸರಿಯಲ್ಲ
Team Udayavani, Dec 20, 2019, 6:06 AM IST
50 ವರ್ಷಗಳ ಹಿಂದೆ ಅಜಯ್ ಮುಖರ್ಜಿ ನಡೆಸಿದ್ದ ಉಪವಾಸ ಆಗಿನ ಸ್ಥಿತಿಗೆ ಅಗತ್ಯವಿತ್ತು ಎನ್ನಬಹುದು. ಆದರೆ ಮಮತಾ ಪ್ರತಿಭಟನೆಯ ವಿಷಯದಲ್ಲಿ ಅಂಥ ಸಮರ್ಥನೆ ಕಷ್ಟ. ಮುಖ್ಯಮಂತ್ರಿಗಳು ಸಮಾಜದಲ್ಲಿ ಶಾಂತಿ ನೆಲೆಸಲು ಸಹಕರಿಸಬೇಕು. ಈಗ ದೇಶ ಪ್ರಕ್ಷುಬ್ಧವಾಗಿದ್ದು, ಸಣ್ಣ ಪ್ರಚೋದನೆಯೂ ಹಿಂಸಾರೂಪ ತಾಳಬಹುದು.
ಸರಿಯಾಗಿ 50 ವರ್ಷಗಳ ಹಿಂದೆ ಪಶ್ಚಿಮ ಬಂಗಾಳದ ಆಗಿನ ಮುಖ್ಯಮಂತ್ರಿ ದಿ. ಅಜಯ್ ಮುಖರ್ಜಿ ತಮ್ಮದೇ ಸರಕಾರದಿಂದ ಕಾನೂನು ಸುವ್ಯವಸ್ಥೆಗೆ ಭಂಗವಾಗಿದ್ದನ್ನು ಖಂಡಿಸಿ 3 ದಿನ ಉಪವಾಸ ಸತ್ಯಾಗ್ರಹ ಮಾಡಿದ್ದರು!
ಇದನ್ನು ನಂಬಲು ಕಷ್ಟವಾದರೂ, ಸತ್ಯ ಸಂಗತಿಯಾಗಿತ್ತು. ಬಾಂಗ್ಲಾ ಕಾಂಗ್ರೆಸ್ ಎಂಬ ಪಕ್ಷದ ಮುಖ್ಯಸ್ಥರಾಗಿದ್ದ ಅಜಯ್ ಮುಖರ್ಜಿ ಅವರು ಸಿಪಿಐಎಂ ಪ್ರಮುಖ ಪಾಲುದಾರನಾಗಿದ್ದ ಮೈತ್ರಿ ಸರಕಾರದಲ್ಲಿ ಮುಖ್ಯಮಂತ್ರಿಯಾಗಿದ್ದರು. ಆಗ ಭುಗಿಲೆದ್ದಿದ್ದ ದಂಗೆಯನ್ನು ನಿಯಂತ್ರಿಸಲು ಗೃಹ ಸಚಿವರಾಗಿದ್ದ ಸಿಪಿಎಂ ಮುಖಂಡ ಜ್ಯೋತಿ ಬಸು ಅವರು ಸಹಕರಿಸಿಲ್ಲ ಎಂಬುದನ್ನು ಖಂಡಿಸಿ ಅಜಯ್ ಮುಖರ್ಜಿ ಉಪವಾಸ ಸತ್ಯಾಗ್ರಹ ನಡೆಸಿದ್ದರು. ಆಗ ಮೈತ್ರಿಪಕ್ಷದ ಸರಕಾರದಲ್ಲಿ ಕಂದಾಯ ಸಚಿವರಾಗಿದ್ದ ಹರೇಕೃಷ್ಣ ಕೋನಾರ್ ಮತ್ತು ಕಾರ್ಮಿಕ ಸಚಿವರಾಗಿದ್ದ ಸೋಷಿಯಲಿಸ್ಟ್ ಯೂನಿಟಿ ಸೆಂಟರ್ ಆಫ್ ಇಂಡಿಯಾ ಪಕ್ಷದ ನಾಯಕರಾಗಿದ್ದ ಸುಬೋಧ್ ಬ್ಯಾನರ್ಜಿ ಅವರು ಭೂಮಾಲಕರಿಂದ ಬಲವಂತವಾಗಿ ಭೂಸ್ವಾಧೀನ ಮಾಡಲು, ಕೈಗಾರಿಕೋದ್ಯಮಿಗಳಿಗೆ ಮತ್ತು ವ್ಯಾಪಾರಿಗಳಿಗೆ ಘೇರಾವ್ ಹಾಕಲು ಬಹಿರಂಗವಾಗಿಯೇ ಸಹಕಾರ ನೀಡಿದ್ದರು. ಈ ಕಾರಣದಿಂದ ಎದ್ದಿದ್ದ ದಂಗೆಯನ್ನು ನಿಯಂತ್ರಿಸಲು ಪೊಲೀಸರಿಗೆ ಸೂಚನೆ ನೀಡಲು ಗೃಹಸಚಿವರಿಗೆ ಮುಖ್ಯಮಂತ್ರಿ ಸಲಹೆ ನೀಡಿದರೂ ಅದನ್ನು ಗೃಹ ಸಚಿವರಾಗಿದ್ದ ಜ್ಯೋತಿಬಸು ತಿರಸ್ಕರಿಸಿದ್ದರು. ಈ ಕಾರಣದಿಂದಾಗಿ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣವಾಗಿ ಹದಗೆಟ್ಟದ್ದನ್ನು ಖಂಡಿಸಿ ಅಜಯ್ ಮುಖರ್ಜಿ ಉಪವಾಸ ಕೂತಿದ್ದರು.
ಆಗ ರಾಜ್ಯದಲ್ಲಿ ಕೊಲೆ, ಲೂಟಿ, ಕಿಚ್ಚಿಡುವುದು ಗಂಭೀರ ಸ್ವರೂಪ ತಾಳಿತ್ತು. ಪ.ಬಂಗಾಳದಲ್ಲಿ ಒಂದು ನಾಗರಿಕ ಸರಕಾರ ಇದೆಯೇ ಎಂದು ಅಜಯ್ ಮುಖರ್ಜಿ ಪ್ರಶ್ನಿಸಿದ್ದರು. ಅವರು ಉಪವಾಸ ನಿರತರಾಗಿದ್ದಾಗ ಅವರ ಮೇಲೆಯೇ ಮಾರ್ಕ್ಸಿಸ್ಟ್ ನಾಯಕರು ಮತ್ತು ಕಾರ್ಯಕರ್ತರು ದೌರ್ಜನ್ಯ ನಡೆಸಿದ್ದರು. ಆಗ ಮಾರ್ಕ್ಸಿಸ್ಟ್ ಪಕ್ಷವು ತೋರಿದ್ದ ತಂತ್ರ, ಜಾಣತನವು ಜ್ಯೋತಿ ಬಸು ಅವರು ಬೇರೆ ಪಕ್ಷಗಳ ಸಹಾಯವಿಲ್ಲದೆ ಅಧಿಕಾರಕ್ಕೇರುವಂತೆ ಮಾಡಿತ್ತು. ಈ ಕಾರಣದಿಂದಾಗಿ ಅಧಿಕಾರಕ್ಕೇರಿದ್ದ ಸಿಪಿಎಂ ಪಕ್ಷದ ಜ್ಯೋತಿ ಬಸು ಅವರು 1977ರ ಜೂನ್‌ನಿಂದ 2000ದ ನವೆಂಬರ್‌ವರೆಗೆ ಮುಖ್ಯಮಂತ್ರಿಯಾಗಿದ್ದರು. ಬಳಿಕ ಅವರ ಉತ್ತರಾಧಿಕಾರಿಯಾಗಿ ಅಧಿಕಾರಕ್ಕೇರಿದ್ದ ಬುದ್ಧದೇವ್ ಭಟ್ಟಾಚಾರ್ಯ ಅವರು 2011ರ ಮೇ ತಿಂಗಳವರೆಗೆ ಅಧಿಕಾರದಲ್ಲಿದ್ದರು.
ಮಾರ್ಕ್ಸಿಸ್ಟ್ ನೇತೃತ್ವದಲ್ಲಿ ಇಲ್ಲಿ ರಾಜಕೀಯ ಸ್ಥಿರತೆ ಸಿಕ್ಕಿತ್ತಾದರೂ ಬೇರೊಂದು ರೀತಿಯಲ್ಲಿ ರಾಜ್ಯವು ಬಾಧಿಸುತ್ತಾ ಬಂದಿತ್ತು. ಇಂಥ ರಾಜಕೀಯ ಸ್ಥಿರತೆಯ ನಡುವೆಯೂ ಮಮತಾ ಬ್ಯಾನರ್ಜಿ ಹಾಗೂ ಅವರ ತೃಣಮೂಲ ಕಾಂಗ್ರೆಸ್ ಪಕ್ಷವು ಮಾರ್ಕ್ಸಿಸ್ಟ್ ಆಡಳಿತವನ್ನು ಕೊನೆಗಾಣಿಸಿ, ತಮ್ಮದೇ ಬ್ರ್ಯಾಂಡಿನ ಅರಾಜಕತೆ ಮತ್ತು ಋಣಾತ್ಮಕತೆಯ ಯುಗವನ್ನು ಆರಂಭಿಸಿದರು. ಹೆಚ್ಚು ಕಡಿಮೆ ಮರೆತುಹೋಗಿದ್ದ ಅರ್ಧ ಶತಮಾನದ ಹಿಂದಿನ ಬಂಗಾಳದ ಈ ಸ್ಥಿತಿಯನ್ನು ಈಗ ಹೇಳಲು ಕಾರಣವಾದುದು ಪ್ರಸ್ತುತ ಅಲ್ಲಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ನೇತೃತ್ವದಲ್ಲಿ ನಡೆಯುತ್ತಿರುವ ಪ್ರತಿಭಟನೆ. ಕೇಂದ್ರ ಸರಕಾರದ ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ)ಯನ್ನು ವಿರೋಧಿಸಿ ಮಮತಾ ಬ್ಯಾನರ್ಜಿ ರಸ್ತೆಗಿಳಿದು ಪ್ರತಿಭಟನೆ ಮಾಡುತ್ತಿದ್ದಾರೆ. ತಮ್ಮ ಈ ಹೋರಾಟವನ್ನು ಆಕೆ ಜನರ ಚಳವಳಿ ಮತ್ತು ಕೋಮು ಸಾಮರಸ್ಯಕ್ಕಾಗಿ ಮಾಡುತ್ತಿರುವ ಪ್ರತಿಭಟನೆ ಎನ್ನುತ್ತಿದ್ದಾರೆ. ರಾಷ್ಟ್ರೀಯ ನಾಗರಿಕ ನೋಂದಣಿ ಮತ್ತು ಸಿಎಎಯನ್ನು ಪಶ್ಚಿಮ ಬಂಗಾಳದಲ್ಲಿ ಜಾರಿಗೆ ತರಲು ಬಿಡುವುದೇ ಇಲ್ಲ ಎನ್ನುತ್ತಿದ್ದಾರೆ. ಈಗ ಇಲ್ಲಿ ಮೂಡಿರುವ ಪ್ರಶ್ನೆ ಏನೆಂದರೆ, ಅಧಿಕಾರದಲ್ಲಿರುವವರೇ ದೊಡ್ಡ ಹಿಂಸಾತ್ಮಕ ಪ್ರತಿಭಟನೆ, ಹೋರಾಟಕ್ಕೆ ಮುಂದಾದರೆ ಸಾಮಾನ್ಯ ನಾಗರಿಕರು ಮಾಡಬೇಕಾದ ಕರ್ತವ್ಯಗಳು ಏನು ಎಂಬುದು. ಹೀಗಾದಾಗ ಕಾನೂನು ಸುವ್ಯವಸ್ಥೆ ಹದಗೆಟ್ಟು ಭೀತಿಯ ಸ್ಥಿತಿ ನಿರ್ಮಾಣವಾಗುತ್ತದೆ ಎಂಬುದನ್ನು ಪ್ರತ್ಯೇಕವಾಗಿ ಹೇಳುವ ಆಗತ್ಯವಿಲ್ಲ.
1991ರಲ್ಲಿ ಆಗಿನ ಪ್ರಧಾನಿ ಪಿ.ವಿ. ನರಸಿಂಹರಾವ್ ಅವರ ಸರಕಾರವು ಕಾವೇರಿ ಜಲ ವಿವಾದ ನ್ಯಾಯಾಧಿಕರಣದ ಮಧ್ಯಂತರ ಆದೇಶವನ್ನು ಗೆಜೆಟ್‌ನಲ್ಲಿ ಪ್ರಕಟಿಸಲು ನಿರ್ಧರಿಸಿದಾಗ ಕರ್ನಾಟಕದಲ್ಲೂ ಮುಖ್ಯ ಮಂತ್ರಿ ಎಸ್. ಬಂಗಾರಪ್ಪ ಸೂಚನೆಯಂತೆ ಬಂದ್ ನಡೆದಿತ್ತು.
ಪಶ್ಚಿಮ ಬಂಗಾಳದಲ್ಲಿ ಸ್ವಾತಂತ್ರÂಪೂರ್ವದಲ್ಲೂ ಇಂಥ ಹಲವು ಸರಕಾರಿ ಪ್ರಾಯೋಜಿತ ಹಿಂಸಾತ್ಮಕ ಪ್ರತಿಭಟನೆ ನಡೆದಿತ್ತು. 1946ರಲ್ಲಿ ಇಲ್ಲಿನ ಮುಖ್ಯಮಂತ್ರಿಯಾಗಿದ್ದ ಮುಸ್ಲಿಂ ಲೀಗಿನ ಎಚ್. ಎಸ್. ಸುಹ್ರಾವರ್ಡಿ ಅವರು, ದೇಶ ವಿಭಜನೆಯ ಗುರಿ ಸಾಧನೆಗಾಗಿ ಮಹಮ್ಮದ್ ಅಲಿ ಜಿನ್ನಾ ಅವರು ಕರೆ ನೀಡಿದ್ದ ನೇರ ಕ್ರಮಕ್ಕೆ ಬಹಿರಂಗವಾಗಿಯೇ ಬೆಂಬಲ ನೀಡಿದ್ದರು. ಇದರ ಪರಿಣಾಮವಾಗಿ ಕೋಲ್ಕತಾದಲ್ಲಿ 1946ರ ಆ. 16ರಂದು ಹಿಂದೂಗಳ ದೊಡ್ಡ ಹತ್ಯಾಕಾಂಡ ನಡೆದಿತ್ತು. ಅದರ ಮುಂದಿನ ವರ್ಷ ಇಂಥ ಹಿಂದೂಗಳ ಹತ್ಯಾಕಾಂಡವು ನೋಖಲಿ ನಗರದಲ್ಲಿ ನಡೆದಿತ್ತು. ಈ ಅಮಾನವೀಯ ಮತ್ತು ಅತಿ ಕ್ರೂರ ಕೃತ್ಯಕ್ಕೆ ದೇವರು ಕೂಡ ಕೋಪಗೊಂಡಿದ್ದರು ಹಾಗೂ ಆ ಕೋಪವನ್ನು 1951ರಲ್ಲಿ ಮೇಘನಾ ನದಿಯನ್ನು ಉಕ್ಕಿ ಹರಿಯಿಸಿ ಮಹಾನೆರೆಯ ಮೂಲಕ ನೋಖಲಿ ನಗರವನ್ನು ಧ್ವಂಸ ಮಾಡುವ ಮೂಲಕ ತೋರಿಸಿದ್ದರು ಎಂಬ ಮಾತು ಜನರಿಂದ ಕೇಳಿ ಬಂದಿತ್ತು. ಈ ಪ್ರದೇಶವು ಈಗ ಬಾಂಗ್ಲಾದಲ್ಲಿದೆ. ಸುಹ್ರಾವರ್ಡಿ ಅವರು ಬಳಿಕ (1956-57)ಪಾಕಿಸ್ತಾನದ ಪ್ರಧಾನಿಯಾಗಿದ್ದರು. ನಂತರ ನಮ್ಮ ದೇಶದ ಪ್ರಮುಖ ನಾಯಕರೊಂದಿಗೆ ನೋಖಲಿಗೆ ತೆರಳಿ ಹಿಂದೆ ನಡೆದಿದ್ದ ಹಿಂದೂಗಳ ಮಹಾ ಹತ್ಯಾಕಾಂಡಕ್ಕೆ ಮೊಸಳೆ ಕಣ್ಣೀರು ಹಾಕಿದ್ದರು.
ಮಮತಾ ಬ್ಯಾನರ್ಜಿ ಹೋರಾಟಗಾರ್ತಿ
50 ವರ್ಷಗಳ ಹಿಂದೆ ಅಜಯ್ ಮುಖರ್ಜಿ ನಡೆಸಿದ್ದ ಉಪವಾಸ ಆಗಿನ ಸ್ಥಿತಿಯನ್ನು ಗಮನಿಸಿದಾಗ ಅಗತ್ಯವಿತ್ತು ಎನ್ನಬಹುದು. ಆದರೆ ಈಗಿನ ಮಮತಾ ಬ್ಯಾನರ್ಜಿ ಪ್ರತಿಭಟನೆಯ ವಿಷಯದಲ್ಲಿ ಅಂಥ ಸಮರ್ಥನೆ ಕಷ್ಟ. ಮುಖ್ಯಮಂತ್ರಿಗಳು ಮತ್ತು ಇತರ ಸಚಿವರು ದೇಶದ ಸಂವಿಧಾನವನ್ನು ಎತ್ತಿ ಹಿಡಿಯಬೇಕು ಮತ್ತು ಸಮಾಜದಲ್ಲಿ ಶಾಂತಿ ನೆಲೆಸಲು ಸಹಕರಿಸಿ ಪ್ರಗತಿಗಾಗಿ ದುಡಿಯಬೇಕು. ಈಗ ದೇಶ ಪ್ರಕ್ಷುಬ್ಧವಾಗಿದ್ದು, ಸಣ್ಣ ಪ್ರಚೋದನೆಯೂ ಹಿಂಸಾರೂಪ ತಾಳಬಹುದು. ಮಮತಾ ಬ್ಯಾನರ್ಜಿ ಅವರ ಒಂದು ಸಮಸ್ಯೆ ಏನೆಂದರೆ, ಅವರು ಈಗಲೂ ಉತ್ತಮ ಹೋರಾಟಗಾರರಾಗಿದ್ದಾರೆಯೇ ಹೊರತು ಆಡಳಿತಗಾರರಲ್ಲ. ತಾನೀಗಲೂ ಛಾತ್ರ ಪರಿಷತ್ (ಪಶ್ಚಿಮ ಬಂಗಾಳದ ಹಿಂದಿನ ಕಾಂಗ್ರೆಸ್ ವಿದ್ಯಾರ್ಥಿ ಘಟಕ) ನಾಯಕಿಯಾಗಿದ್ದೇನೆ ಎಂಬಂತಿದೆ ಮಮತಾರ ವರ್ತನೆ. ತಾನು ಈಗ ಹೊಂದಿರುವ ಹುದ್ದೆಯ ಘನತೆಗೆ ತಕ್ಕುದಲ್ಲದ ಭಾಷೆ, ವರ್ತನೆ, ಹಾವಭಾವವನ್ನು ಅವರು ತೋರಿಸುತ್ತಿದ್ದಾರೆ. ಬಂಗಾಳ ಪರವಾದ ಸಂಕುಚಿತ ಭಾವನೆ ಹೊಂದಿರುವ ಮಮತಾ ಅವರು ತೀಸ್ತಾ ನದಿ ವಿವಾದವನ್ನು ಪರಿಹರಿಸಲು ಆಗಿನ ಪ್ರಧಾನಿ ಮನಮೋಹನ್ ಸಿಂಗ್ ಜತೆಗೆ ಬಾಂಗ್ಲಾಕ್ಕೆ ಹೋಗಲೂ ನಿರಾಕರಿಸಿದ್ದರು. ಈಚೆಗೆ ಪ್ರಕರಣವೊಂದರಲ್ಲಿ ಕೋಲ್ಕತಾದ ಪೊಲೀಸ್ ಕಮಿಷನರ್‌ನನ್ನು ಬಂಧಿಸಲು ಬಂದಿದ್ದ ಸಿಬಿಐ ಅಧಿಕಾರಿಗಳಿಗೂ ತಡೆಯೊಡ್ಡಿ ಮಮತಾ ಸುದ್ದಿಯಾಗಿದ್ದರು.
ಅವರು ಕೇಂದ್ರ ರೈಲ್ವೇ ಸಚಿವರಾಗಿದ್ದಾಗಲೂ ಕೆಲವು ಸಂಕುಚಿತ ವರ್ತನೆಯಿಂದ ಸುದ್ದಿಯಾಗಿದ್ದರು. ಆಕೆ ತನ್ನ ರಾಜ್ಯ ಹೊರತುಪಡಿಸಿ ಬೇರೆ ರಾಜ್ಯದತ್ತ ದೃಷ್ಟಿ ಹರಿಸಿರಲೇ ಇಲ್ಲ.
ರಾಷ್ಟ್ರೀಯ ನಾಗರಿಕ ನೋಂದಣಿ ಮತ್ತು ಪೌರತ್ವ ತಿದ್ದುಪಡಿ ಕಾಯ್ದೆಗೆ ಮಮತಾ ಬ್ಯಾನರ್ಜಿ ಅವರ ವಿರೋಧಕ್ಕೆ ಕಾರಣವೇನು ಎಂಬುದಕ್ಕೆ ತುಂಬಾ ಆಲೋಚಿಸುವ ಅಗತ್ಯವೇನೂ ಇಲ್ಲ. ಅವರಿಗೆ ತನ್ನ ರಾಜ್ಯದಲ್ಲಿರುವ ಮುಸ್ಲಿಂ ಪ್ರಾಬಲ್ಯದ ಕ್ಷೇತ್ರಗಳ ಬಗ್ಗೆ ಚೆನ್ನಾಗಿ ತಿಳಿದಿದೆ. ಪಶ್ಚಿಮ ಬಂಗಾಳದ ಜನಸಂಖ್ಯೆಯಲ್ಲಿ ಮುಸ್ಲಿಮರ ಪಾಲು ಶೇ. 27ರಷ್ಟಿದೆ. ಅಲ್ಲಿನ 19 ಜಿಲ್ಲೆಗಳ ಪೈಕಿ 3ರಲ್ಲಿ ಮುಸ್ಲಿಮರು ಬಹುಸಂಖ್ಯಾತರು. ಆ ಮೂರು ಜಿಲ್ಲೆಗಳೆಂದರೆ ಮಾಲ್ಡ (ಶೇ. 51), ಮುರ್ಶಿದಾಬಾದ್ (ಶೇ. 66) ಮತ್ತು ಉತ್ತರ ದಿನಾಜ್‌ಪುರ್ (ಶೇ. 50). ಅಲ್ಲದೆ ದೇಶದ ಇತರ ಭಾಗಗಳಿಗೆ ಹೋಲಿಸಿದರೆ ಈ ರಾಜ್ಯದಲ್ಲಿ ಮುಸ್ಲಿಮರ ಜನಸಂಖ್ಯೆಯೂ ವೇಗವಾಗಿ ವರ್ಧಿಸುತ್ತಿದೆ. ಬಾಂಗ್ಲಾದಲ್ಲಿ ಮುಸ್ಲಿಮರನ್ನು ದಮನ ಮಾಡುವ ಯಾವ ಶಕ್ತಿಯೂ ಇಲ್ಲ. ಅವರಿಗೆ ಅಲ್ಲಿ ಬದುಕಲು ಯಾವುದೇ ಕಷ್ಟವಿಲ್ಲ. ಆದರೆ ಬಾಂಗ್ಲಾದಲ್ಲಿ ಅಲ್ಪಸಂಖ್ಯಾತ ಹಿಂದೂಗಳ ಸ್ಥಿತಿ ಸಂಕಷ್ಟದಿಂದಿದೆ. ಅವರನ್ನು ಅಲ್ಲಿಂದ ಹೊರದಬ್ಬುವ, ಶೋಷಿಸುವ ಕೆಲಸಗಳಾಗುತ್ತಿವೆ. ಪಾಕಿಸ್ಥಾನದ ವಿಷಯ ಬಿಡಿ, ಬಾಂಗ್ಲಾದಲ್ಲಿ ಎಷ್ಟು ಹಿಂದೂ ನಾಯಕರು ಮಂತ್ರಿಯಾಗಿದ್ದಾರೆ ಎಂಬ ಪ್ರಶ್ನೆಯನ್ನು ಯಾರಾದರೂ ಕೇಳುತ್ತಿದ್ದಾರೆಯೇ? ಅಲ್ಲಿನ ಏಕೈಕ ಹಿಂದೂ ಮುಖ್ಯ ನ್ಯಾಯಮೂರ್ತಿಯಾಗಿದ್ದ ಸುರೇಂದ್ರ ಕುಮಾರ್ ಸಿನ್ಹ ಎಂಬವರನ್ನು 2017ರಲ್ಲಿ ಕಾನೂನು ತಿದ್ದುಪಡಿ ಮಾಡಿ, ನ್ಯಾಯಮೂರ್ತಿಗಳನ್ನು ಬದಲಾಯಿಸಲು ಸಂಸತ್ತಿಗೆ ವಿಶೇಷ ಅಧಿಕಾರ ನೀಡಿ ರಾಜೀನಾಮೆ ಕೊಡಿಸಿ ಅಧಿಕಾರದಿಂದ ಕೆಳಗಿಳಿಸಲಾಗಿತ್ತು. ಗಾಂಧೀಜಿ ಕಾಲದ ಮೊದಲು ಕಾಂಗ್ರೆಸ್ಸಿನ ಅಧ್ಯಕ್ಷರಾಗಿದ್ದ ಅಂಬಿಕಾ ಚರಣ್ ಮುಜುಂದಾರ್ ಎಂಬುವರ ಸಂಬಂಧಿಯಾಗಿದ್ದ ಬಾಬು ಫಣಿಭೂಷಣ್ ಮುಜುಂದಾರ್ ಬಾಂಗ್ಲಾದ ಪ್ರಮುಖ ಹಿಂದೂ ರಾಜಕಾರಣಿಯಾಗಿದ್ದರು.
– ಅರಕೆರೆ ಜಯರಾಮ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Hydarabad: ಹೊಸ ವರ್ಷಕ್ಕೆ ಮಾರ್ಗಸೂಚಿ ಬಿಡುಗಡೆ ಮಾಡಿದ ಪೊಲೀಸರು, ಏನೇನಿದೆ ಮಾರ್ಗಸೂಚಿಯಲ್ಲಿ
Lok Adalat: ಲೋಕ್ ಅದಾಲತ್‌ನಲ್ಲಿ 38.8 ಲಕ್ಷ ವ್ಯಾಜ್ಯ ಇತ್ಯರ್ಥ
Bengaluru: ಒಬಾಮಾ ಭೇಟಿ ವೇಳೆ ಸ್ಫೋಟ ಸಂಚು: ಡಿ.23ಕ್ಕೆ ಶಿಕ್ಷೆ ಪ್ರಕಟ
Fraud: ಸಿಬಿಐ ಸೋಗಿನಲ್ಲಿ ವೃದ್ಧೆಗೆ 1.24 ಕೋಟಿ ರೂ. ವಂಚನೆ
Politicss; 1008 ಸಾಧುಸಂತರ ಪಾದಪೂಜೆ ಮೂಲಕ ಕ್ರಾಂತಿವೀರ ಬ್ರಿಗೇಡ್ ಗೆ ಚಾಲನೆ: ಈಶ್ವರಪ್ಪ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.