ಬುದ್ಧಿಜೀವಿಗಳು, ಸಿದ್ಧಾಂತವಾದಿಗಳು ಬೇಡವೆ ಬಿಜೆಪಿಗೆ?


Team Udayavani, Jul 25, 2018, 2:42 PM IST

buddijeevi.png

ಪತ್ರಕರ್ತ ಚಂದನ್‌ ಮಿತ್ರ ಅವರೀಗ ಬಿಜೆಪಿಯನ್ನು ತ್ಯಜಿಸಿ ತೃಣಮೂಲ ಕಾಂಗ್ರೆಸ್‌ಗೆ ಸೇರ್ಪಡೆಗೊಂಡಿದ್ದಾರೆ. ಅವರ ಈ ನಡೆ ಒಂದು ಮೇಲ್ಪಂಕ್ತಿಯ ನಡವಳಿಕೆಯಂತೆ ತೋರಿಬರುತ್ತಿದೆ. ಬುದ್ಧಿಜೀವಿಗಳು ಹಾಗೂ ಸುಶಿಕ್ಷಿತರೀಗ ಬಿಜೆಪಿಯಿಂದ ನಿರ್ಗಮಿಸತೊಡಗಿದ್ದಾರೆ ಅಥವಾ ಪಕ್ಷದೊಳಗೇ ಇರುವ ಇಂಥವರು “ಆಂತರಿಕ ಟೀಕಾಕಾರ/ವಿಮರ್ಶಕರಾಗಿ ಕಂಡು ಬರುತ್ತಿದ್ದಾರೆ. ಇಲ್ಲವೇ ತಮ್ಮೊಳಗೇ ಅಸಮಾಧಾನದಿಂದ ಸಿಡಿಮಿಡಿಗೊಳ್ಳುತ್ತಿದ್ದಾರೆ. 

ಮಿತ್ರ ಅವರು ದೀರ್ಘ‌ಕಾಲದಿಂದ ಬಿಜೆಪಿಯ ರಾಷ್ಟ್ರಮಟ್ಟದ ವಕ್ತಾರರಾಗಿದ್ದರು. ಪಕ್ಷದ ನಿಷ್ಠಾವಂತ ಸಮರ್ಥಕರಾಗಿದ್ದರು. 2013ರಲ್ಲಿ ನೋಬೆಲ್‌ ಪ್ರಶಸ್ತಿ ಪುರಸ್ಕೃತ ಅರ್ಥಶಾಸ್ತ್ರಜ್ಞ ಅಮರ್ತ್ಯ ಸೇನ್‌ ಅವರ ಬಗ್ಗೆ ಮಿತ್ರ ಅವರು ಏನು ಹೇಳಿದ್ದಾರೆ ಎಂಬುದನ್ನು ನೆನಪಿಸಿಕೊಳ್ಳಿ. ನರೇಂದ್ರಮೋದಿ ಭಾರತದ ಪ್ರಧಾನಿ ಯಾಗುವುದನ್ನು ನೋಡುವುದು ನನಗೆ ಇಷ್ಟವಿಲ್ಲ ಎಂದಿದ್ದರು ಅಮರ್ತ್ಯ ಸೇನ್‌. ಇದರಿಂದ ಕೋಪಗೊಂಡಿದ್ದ ಚಂದನ್‌ ಮಿತ್ರ ಅವರು, ಅಮರ್ತ್ಯ ಸೇನರಿಗೆ ವಾಜಪೇಯಿ ನೇತೃತ್ವದ ಎನ್‌ಡಿಎ ಸರಕಾರ ನೀಡಿದ್ದ ಭಾರತ ರತ್ನವನ್ನು ಅವರಿಂದ ಹಿಂಪಡೆಯಬೇಕು ಎಂದು ಖಾರವಾಗಿ ಪ್ರತಿಕ್ರಿಯಿಸಿದ್ದರು. “ನೀವು ನಿಮ್ಮ ಅನಗತ್ಯ ಟೀಕೆಗಳನ್ನು ಭಾರತದಲ್ಲಿ ಹರಡುವುದು ಬೇಕಾಗಿಲ್ಲ. ನೀವು ಹೊಟ್ಟೆಪಾಡಿಗಾಗಿ ಕಾಂಗ್ರೆಸ್‌ಗೆ (ನಿಮ್ಮ ಚಿಂತನೆಗಳನ್ನು) ಮಾರಾಟ ಮಾಡುವವರೆಂಬುದು ನಮಗೆ ಗೊತ್ತಿದೆ’ ಎಂದಿದ್ದರು. ಆಕ್ಸ್‌ಫ‌ರ್ಡ್‌ ವಿ.ವಿ.ಯಲ್ಲಿ ಇತಿಹಾಸ ಶಾಸ್ತ್ರದಲ್ಲಿ ಡಾಕ್ಟರೇಟ್‌ ಪಡೆದಿರುವ ಚಂದನ್‌ ಮಿತ್ರರ ನಿಲುವು ಇದಾಗಿತ್ತು. ಅವರು ಭಾಗವಹಿಸಿದ್ದ ಕೆಲವು ವಿಚಾರಗೋಷ್ಠಿಗಳಿಗೆ ನಾನೂ ಹೋಗಿದ್ದೆ. ಬಿಜೆಪಿ ಹಾಗೂ ಮೋದಿ ಬಗ್ಗೆ ಸಹ ಪತ್ರಕರ್ತರು ಹಾಗೂ ಇತರರು ಏನಾದರೂ ಟೀಕೆ ಮಾಡಿದಲ್ಲಿ ಮಿತ್ರ ಅವರು ಮಧ್ಯ ಪ್ರವೇಶಿಸಿ ಅಲ್ಲಗಳೆದು ಮಾತನಾಡುತ್ತಿದ್ದರು. ಕರ್ನಾಟಕದಲ್ಲಿ ಬಿಜೆಪಿ ಬಳ್ಳಾರಿಯ ರೆಡ್ಡಿ ಸಹೋದರರ ಮೇಲೆ ಅಗತ್ಯಕ್ಕಿಂತ ಹೆಚ್ಚು ಅವಲಂಬಿತವಾಗಿದೆ ಎಂದು ಯಾರಾದರೂ ಹೇಳಿದಲ್ಲಿ, ಈ ಮಾತನ್ನು ಕೇಳಿ ಸಹಿಸಿಕೊಳ್ಳಲು ಅವರಿಗೆ ಸಾಧ್ಯವಾಗುತ್ತಿರಲಿಲ್ಲ. ಯಡಿಯೂರಪ್ಪನವರ ಪ್ರಥಮ ಸರಕಾರ ಇದ್ದಾಗಿನ ಮಾತಿದು.

ಎಲ್‌.ಕೆ. ಆಡ್ವಾಣಿಯವರ ನಿಷ್ಠಾವಂತ ಅನುಯಾಯಿಯಾಗಿದ್ದ ಚಂದನ್‌ ಮಿತ್ರ, ಬಿಜೆಪಿಯೊಳಗಿದ್ದುಕೊಂಡೇ ಟೀಕಿಸುತ್ತ ಉಳಿದಿರುವವರ ಹಾಗಲ್ಲ. ಅವರು ನೇರವಾಗಿ ರಾಜಿನಾಮೆ ನೀಡಿ ಹೊರಬಂದಿದ್ದಾರೆ. ಇನ್ನೊಬ್ಬ ಲೇಖಕ ಹಾಗೂ ಚಿಂತಕ ಅರುಣ್‌ ಶೌರಿ ಬಿಜೆಪಿಯ ಕಕ್ಷೆಯೊಳಗಿರುವವರೇ ಆಗಿದ್ದಾರೆ. ಪಕ್ಷದ ರಾಜ್ಯಸಭಾ ಸದಸ್ಯರಾಗಿ ಮುಂದುವರಿದಿರುವ ಇಳಿವಯಸ್ಸಿನ ರಾಮ್‌ ಜೇಠ್ಮಲಾನಿ ಅವರು ಕಾಂಗ್ರೆಸ್‌, ತೃಣಮೂಲ ಹಾಗೂ ತೆಲುಗು ದೇಶಂನ ನಾಯಕರಿಗಿಂತಲೂ ಕಟುವಾಗಿ ದೊಡ್ಡ ಗಂಟಲಲ್ಲಿ ನರೇಂದ್ರ ಮೋದಿಯವರನ್ನು ಮತ್ತು ಪಕ್ಷವನ್ನು ಟೀಕಿಸುತ್ತಿರುವವರು. ಚಿತ್ರ ನಟ ಶತ್ರುಘ್ನ ಸಿನ್ಹ ಅವರ ನಡವಳಿಕೆಯೂ ಹೀಗೆಯೇ. ಮಾಜಿ ಕೇಂದ್ರ ಸಚಿವ ಯಶವಂತ ಸಿನ್ಹಾ ಅವರ ಕತೆ ಸ್ವಲ್ಪ ಮಟ್ಟಿಗೆ ಭಿನ್ನ. ಅವರು ಪಕ್ಷದೊಳಗೇ ಇದ್ದಾರೆ; ಅವರ ಮಗ ಮೋದಿ ಸಂಪುಟದಲ್ಲಿ ಓರ್ವ ಸಚಿವರಾಗಿದ್ದಾರೆ; ಆದರೆ ಸಿನ್ಹಾ ಅವರು ಪಕ್ಷವನ್ನು ಟೀಕಿಸುತ್ತಲೇ ಬಂದಿದ್ದಾರೆ.

ಬಿಜೆಪಿ ನಾಯಕತ್ವ ಹೀಗೆ “ಆಂತರಿಕ ಟೀಕಾಕಾರ’ರಾಗಿರುವ ವರನ್ನು ಸಹಿಸುತ್ತ ಬಂದಿದೆ; ರಾಂ ಜೇಠ್ಮಲಾನಿ, ಯಶವಂತ ಸಿನ್ಹಾ ಮತ್ತಿತರರನ್ನು ಪಕ್ಷದಿಂದ ಉಚ್ಚಾಟಿಸಲಾಗಿಲ್ಲ. ಬಹುಶಃ ಉಚ್ಚಾಟ ನೆಯಂಥ ತೀವ್ರಕ್ರಮವನ್ನು ಕೈಗೊಂಡರೆ ಇವರು ಇನ್ನಷ್ಟು ಗದ್ದಲ ವೆಬ್ಬಿಸಿಯಾರು; ಇವರನ್ನು ನಿಯಂತ್ರಿಸುವುದು ಸಾಧ್ಯವಾಗ ಲಾರದು ಎಂಬುದು ಇದರ ಕಾರಣವಿರಬಹುದು. ಈಗಾಗಲೇ ವಾಮಪಂಥೀಯ ಬುದ್ಧಿಜೀವಿಗಳು ಬಿಜೆಪಿ ಹಾಗೂ ಆರೆಸ್ಸೆಸ್‌ಗಳನ್ನು ಅಸಹಿಷ್ಣುಗಳೆಂದೂ, ವಿರೋಧ ವ್ಯಕ್ತಪಡಿಸುವವರ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಹತ್ತಿಕ್ಕಲಾಗುತ್ತಿದೆಯೆಂದೂ ಟೀಕಿಸು ತ್ತಿದ್ದು, ಈ ಟೀಕೆ ಸರಿಯಲ್ಲ ಎಂದು ತೋರಿಸಿಕೊಡುವುದು ಬಿಜೆಪಿ ನಾಯಕತ್ವದ ಉದ್ದೇಶವಾಗಿರಲೂಬಹುದು. ಡಾ| ಸುಬ್ರಹ್ಮಣ್ಯ ಸ್ವಾಮಿಯವರ ಗತಚರಿತ್ರೆಯ ಅರಿವಿದ್ದೂ ನರೇಂದ್ರ  ಮೋದಿ ಯವರು ಸ್ವಾಮಿಯವರನ್ನು ರಾಜ್ಯಸಭೆಯ ನಾಮಾಂಕಿತ ಸದಸ್ಯ ರಾಗಿಸಿರುವುದನ್ನು ಬಿಜೆಪಿ – ಆರೆಸ್ಸೆಸ್‌ ಟೀಕಾಕಾರರು ಅಗತ್ಯ ವಾಗಿ ಗಮನಿಸಬೇಕು. ಅಟಲ್‌ ಬಿಹಾರಿ ವಾಜಪೇಯಿಯವರನ್ನು 1942ರ ಸುಮಾರಿಗೆ ಬ್ರಿಟಿಷ್‌ ಪಕ್ಷಪಾತಿಯೆಂದು, ಎಲ್‌.ಕೆ. ಅಡ್ವಾಣಿ ಯವರನ್ನು ಪಾಕಿಸ್ಥಾನದಿಂದ ವಲಸೆ ಬಂದವರೆಂದು ಸ್ವಾಮಿಯವರು ಟೀಕಿಸಿದ್ದನ್ನು ನಾನೇ ವರದಿ ಮಾಡಿದ್ದಿದೆ. ಸ್ವಾಮಿ ಅವರು ಭಾರತಕ್ಕೀಗ ಕೈಕೊಟ್ಟು ಹೋಗಿರುವ ವಿಜಯ ಮಲ್ಯರಿಗೆ ಆಧಾರಶಕ್ತಿಯಾಗಿ ನಿಂತು ಕರ್ನಾಟಕದಲ್ಲಿ ಅಧಿಕಾರಕ್ಕೆ ಬರಲು ನಡೆಸಿದ ಪ್ರಯತ್ನವನ್ನು ಹೇಗೆ ಮರೆಯುವುದಕ್ಕೆ ಸಾಧ್ಯ.

ಚಂದನ್‌ ಮಿತ್ರರ ನಡೆಯನ್ನು ಇನ್ನೊಂದು ದೃಷ್ಟಿಯಿಂದ ನೋಡುವುದಾದರೆ, ಇಂಥವರು ಒಂದು ರಾಜಕೀಯ ಪಕ್ಷದಿಂದ ಸಿಗುವ ಸೌಲಭ್ಯಗಳನ್ನೆಲ್ಲ ಅನುಭೋಗಿಸಿ ಆಮೇಲೆ ಅದರಿಂದ ಹೊರಬೀಳುವವರು. ಅವರು ಮಧ್ಯ ಪ್ರದೇಶದಿಂದ ರಾಜ್ಯಸಭೆಗೆ ನಾಮಕರಣ ಸದಸ್ಯರಾಗಿ ಪ್ರವೇಶ ಪಡೆದವರು. ಬಳಿಕ ಅದೇ ರಾಜ್ಯದಿಂದ ಇನ್ನೊಮ್ಮೆ ರಾಜ್ಯಸಭೆಗೆ ಆಯ್ಕೆಯಾದವರು. ಯಶವಂತ ಸಿನ್ಹಾ ಕೂಡ ಅಷ್ಟೇ. ಹಿಂದೆ ಎಎಎಸ್‌ ಅಧಿಕಾರಿಯಾ ಗಿದ್ದ ಸಿನ್ಹಾ ಅವರು ಓರ್ವ “ಬಿಜೆಪಿ’ಗನೆಂಬುದಕ್ಕಿಂತಲೂ  ಹೆಚ್ಚಾಗಿ ಜನತಾ ಪಕ್ಷದ ಮನುಷ್ಯನೆನ್ನಬಹುದು. ಕೇಂದ್ರದಲ್ಲಿ ಚಂದ್ರಶೇಖರ ಸಂಪುಟದಲ್ಲಿ ಸಚಿವರಾಗಿದ್ದವರು ಅವರು. ಕೇಂದ್ರದಲ್ಲಿ ವಿತ್ತ ಸಚಿವರಾಗಿ ವಿದೇಶಾಂಗ ಸಚಿವರಾಗಿ ಅಧಿಕಾರವನ್ನು ಅನುಭವಿಸಿದವರು ಅವರು. ಇನ್ನು ದುಬಾರಿ ಫೀ ತೆಗೆದುಕೊಳ್ಳುವ ಲಾಯರ್‌ ಎಂದೇ ಪರಿಗಣಿತರಾಗಿರುವ ಜೇಠ್ಮಲಾನಿ, ಆಂಶಕಾಲಿಕ ರಾಜಕಾರಣಿಯಾಗಿದ್ದರೂ ಕೇಂದ್ರದಲ್ಲಿ ಕಾನೂನು ಸಚಿವರಾಗಿದ್ದವರು.

ಇನ್ನು, ಕೇವಲ ಅಧಿಕಾರ ಹಿಡಿಯಬೇಕೆಂಬ ಒಂದೇ ಒಂದು ಉದ್ದೇಶದಿಂದ ಬಿಜೆಪಿ ತನ್ನ ಹಳೆಯ ನಿಷ್ಠಾವಂತರಿಗೆ ಸಲ್ಲಬೇಕಿದ್ದ ಅವಕಾಶವನ್ನು ನಿರಾಕರಿಸುವಲ್ಲಿ ಹಿಂಜರಿಕೆ ತೋರಿಲ್ಲವೆಂದೇ ಹೇಳಬೇಕು. ಉದಾಹರಣೆಗೆ ರಾಜ್ಯಪಾಲರ ನೇಮಕದ ಕ್ರಮವನ್ನೇ ನೋಡಿ ಪಕ್ಷಕ್ಕೆ ಹೊಸಬರಾದ, ಮಾಜಿ ಕಾಂಗ್ರೆಸಿಗ ಬನ್ವಾರಿಲಾಲ್‌ ಪುರೋಹಿತರಂಥವರು ತಮಿಳುನಾಡಿನ ರಾಜ್ಯ ಪಾಲರಾಗುತ್ತಾರೆ. ಅದೇ ನಮ್ಮವರೇ ಆದ ಡಿ.ಎಚ್‌. ಶಂಕರಮೂರ್ತಿಯಂಥವರು ವಿಧಾನ ಪರಿಷತ್ತಿನ ಸಭಾಧ್ಯಕ್ಷ ಹುದ್ದೆಯಲ್ಲೇ ತೃಪ್ತಿ ಕಾಣಬೇಕಾಗುತ್ತದೆ. ಬಿಜೆಪಿ ಆಡಳಿತವಿರುವ ರಾಜ್ಯಗಳಲ್ಲಿ ಇಂಥ ಉದಾಹರಣೆಗಳು ಬೇಕಷ್ಟಿವೆ. ಇಂಥವರ ಪಾಡು ಹೀಗಿದ್ದರೆ, ದಿವಂಗತ ಎಂ. ರಾಜಶೇಖರಮೂರ್ತಿ ಹಾಗೂ ರೈತ ಸಂಘದ ನಾಯಕ ಬಾಬಾ ಗೌಡ ಪಾಟೀಲರಂಥ “ಪ್ರಯಾಣಿಕರು’, ಕೇಂದ್ರದಲ್ಲಿ ಸಚಿವ ಪದವಿಯೆಂಬ “ಬಸ್‌ ನಿಲ್ದಾಣ’ವನ್ನು ಅನಾಯಾಸವಾಗಿ ತಲುಪಿಬಿಡುತ್ತಾರೆ.

ಈಗ ದೇಶದ ಆಡಳಿತದ ಚುಕ್ಕಾಣಿ ಹಿಡಿದಿರುವ ಬಿಜೆಪಿ ಕೂಡ ಕಾಂಗ್ರೆಸ್‌ ಮತ್ತಿತರ ಪಕ್ಷಗಳಂತೆಯೇ ಆಂತರಿಕ ಪ್ರಜಾ ಪ್ರಭುತ್ವದ ಕೊರತೆಯಿಂದ ಬಳಲುತ್ತಿರುವಂತೆ ತೋರುತ್ತಿದೆ. 

ಪಕ್ಷದ ವೇದಿಕೆಯಲ್ಲೇ ಅಹವಾಲುಗಳನ್ನು, ದೂರು ದುಮ್ಮಾನ ಗಳನ್ನು ಸ್ವೀಕರಿಸುವ ವ್ಯವಸ್ಥೆಯಿದ್ದಿದ್ದಲ್ಲಿ ಜೇಠ್ಮಲಾನಿ ಹಾಗೂ ಯಶವಂತ್‌ ಸಿನ್ಹಾರಂಥ ಟೀಕಾಕಾರರು ಸಾರ್ವಜನಿಕವಾಗಿ ಹೇಳಿಕೆ ನೀಡುವ ಪ್ರಮೇಯ ಬರುತ್ತಿರಲಿಲ್ಲವೇನೋ. ಬಿಜೆಪಿ ನಾಯಕರು ಸ್ತುತಿಪಾಠಕರ ಬಗ್ಗೆ, ಅವಕಾಶವಾದಿಗಳ ಬಗ್ಗೆ ಎಚ್ಚರಿಕೆ ವಹಿಸಬೇಕಾದ ಅಗತ್ಯವಿದೆ. ಉದಾಹರಣೆಗೆ, ಆಡ್ವಾಣಿ ಯವರಿಗೆ ನಿಷ್ಠರಾಗಿದ್ದವರ ಪೈಕಿ ಅನೇಕರು (ಇವರಲ್ಲಿ ಕರ್ನಾಟಕದ ಕೆಲವರೂ ಇದ್ದಾರೆ) ಇಂದು ಮೋದಿ – ಅಮಿತ್‌ ಶಾ ಅವರಿರುವ ಬೋಗಿಗೆ ಹಾರಿ ಬಂದಿದ್ದಾರೆ. ಪ್ರಧಾನಿಯೇ ಇರಲಿ, ಇತರ ಯಾರೇ ಇರಲಿ, ಅವರ ಸುತ್ತಮುತ್ತ ನಡೆಯುವ ವ್ಯಕ್ತಿ ಪೂಜೆ, ಹೊಗಳು ಭಟ್ಟಂಗಿತನವನ್ನು ನಿವಾರಿಸುವ ಕೆಲಸ ಬಿಜೆಪಿಯಿಂದ ಬಿಡಿ, ಯಾವ ಪಕ್ಷದಿಂದಲೂ ನಡೆದೀತೆಂಬ ನಿರೀಕ್ಷೆಯನ್ನು ನಾವಿಂದು ಇರಿಸಿಕೊಳ್ಳುವ ಹಾಗೆಯೇ ಇಲ್ಲ.

ಬಿಜೆಪಿಯಂಥ ರಾಷ್ಟ್ರೀಯ ಪಕ್ಷವೊಂದರಲ್ಲಿ ಬುದ್ಧಿಜೀವಿಗಳು ಹಾಗೂ ಸಿದ್ಧಾಂತವಾದಿಗಳಿಗೂ ಸಾಕಷ್ಟು ಅವಕಾಶಬೇಕು. ಕೇವಲ ವೃತ್ತಿಪರ ರಾಜಕಾರಣಿಗಳು ಹಾಗೂ ದುಡ್ಡಿನ ಚೀಲಗಳ ಮೇಲಷ್ಟೇ ಅವಲಂಬಿತರಾದರೆ ಸಾಲದು. ಚಿಂತಕರನ್ನು, ಬುದ್ಧಿ ಜೀವಿಗಳನ್ನು ಕಳೆದುಕೊಂಡರೆ ಪಕ್ಷಕ್ಕೇ ನಷ್ಟ. ರಾಷ್ಟ್ರೀಯ ಪಕ್ಷಗಳ ಒಳಗೆ ಟೀಕಾಕಾರರು ಬೇಕೇಬೇಕು; ಅವರು ಸಲಹೆಗಳ ಮೇರೆಗೆ ಲೋಪದೋಷಗಳನ್ನು ತಿದ್ದುವ ಕೆಲಸ ನಡೆಯಬೇಕು.

ಅಮಿತ್‌ ಶಾರಂಥ ನಾಯಕರಿಗೆ ಅವರದೇ ಮಿತಿಗಳಿವೆ. ಅವರಿಗೆ ಚುನಾವಣೆಯನ್ನು ಗೆಲ್ಲುವುದಷ್ಟೇ ಮುಖ್ಯ, ಪಕ್ಷದ ಸಿದ್ಧಾಂತಗಳ ಪ್ರತಿಪಾದಕರಾಗಿದ್ದ ಕೆ. ಗೋವಿಂದಾಚಾರ್ಯರಂಥವರು ಇಂದು ಎಲ್ಲೂ ಕಂಡುಬರುತ್ತಿಲ್ಲ; ಕೇಳಿಬರುತ್ತಿಲ್ಲ. ಇನ್ನು, ಮೆಹಬೂಬಾ ಮುಫ್ತಿ ನೇತೃತ್ವದ ಪ್ರತ್ಯೇಕತಾವಾದಿ ಪಕ್ಷವಾದ ಪಿಡಿಪಿಯೊಂದಿಗೆ ಬಿಜೆಪಿಯ ಮೈತ್ರಿ ಸರಕಾರ ಅಸ್ತಿತ್ವಕ್ಕೆ ಬರಲು ಕಾರಣರಾದ ಪಕ್ಷದ ರಾಷ್ಟ್ರೀಯ ಮಹಾಕಾರ್ಯದರ್ಶಿ ರಾಮ್‌ ಮಾಧವ್‌ ಅವರು ಇದ್ದಾರೆನ್ನಿ. ಮುಸ್ಲಿಮರೇ ಹೆಚ್ಚಾಗಿರುವ ಕಾಶ್ಮೀರ ಕಣಿವೆಯಲ್ಲಿ (ರಾಜ್ಯದ ಎಲ್ಲ ಕಡೆ ಅಲ್ಲ) ಬಿಜೆಪಿ ಇನ್ನೂ ಸರಿಯಾಗಿ ನಿಭಾಯಿ ಸಲಾಗದ ಕೆಲವು ಪ್ರಶ್ನೆಗಳಿವೆ. ಈ ಪ್ರಶ್ನೆಗಳೆಂದರೆ – ಏಕೆ ಇದುವರೆಗೆ ರಾಜ್ಯದಲ್ಲಿದ್ದ ಮೈತ್ರಿ ಸರಕಾರ ಕಾಶ್ಮೀರಿ ಪಂಡಿತರಿಗೆ ತಾಯ್ನಾಡಿಗೆ ಮರಳುವ ಅವಕಾಶ ನೀಡುವಲ್ಲಿ ವಿಫ‌ಲವಾಯಿತು; ಕಲ್ಲೂ ತೂರಿದ ಪ್ರತಿಭಟನಾಕಾರರಿಗೆ ಮೆಹಬೂಬ ಮುಫ್ತಿಯವರು ಕ್ಷಮಾದಾನ ಮಾಡಿದ ಬಳಿಕವೂ ಏಕೆ ಮೈತ್ರಿ ಸರಕಾರವನ್ನು ಮುಂದುವರಿಯಲು ಅವಕಾಶವೀಯಲಾಯಿತು ಇತ್ಯಾದಿ. ಬಹುಶಃ ಮೈತ್ರಿ ವ್ಯವಸ್ಥೆಯನ್ನು ಉಳಿಸಿಕೊಳ್ಳುವುದಕ್ಕೆಂದೇ ಕೇಂದ್ರ ಸರಕಾರ ಸಂವಿಧಾನದ 35ಎ ವಿಧಿಯನ್ನು ಪ್ರಶ್ನಿಸಿದ ದೂರುಗಳ ವಿಚಾರಣೆಯನ್ನು ಮುಂದೂಡುವಂತೆ ಸರ್ವೋಚ್ಚ ನ್ಯಾಯಾಲಯವನ್ನು ವಿನಂತಿಸಿತು. ರಾಜ್ಯದ ಖಾಯಂ ನಿವಾಸಿಗಳ ಬಗೆಗೊಂದು ಸ್ಪಷ್ಟ ವ್ಯಾಖ್ಯೆಯನ್ನು ರೂಪಿಸಿ, ಅವರಿಗೆ ವಿಶೇಷ ಹಕ್ಕು ಹಾಗೂ ಸವಲತ್ತುಗಳನ್ನು ಒದಗಿಸುವ ಅಧಿಕಾರವನ್ನು ಈ 35ಎ ವಿಧಿ ಜಮ್ಮು – ಕಾಶ್ಮೀರದ ವಿಧಾನಸಭೆಗೆ ನೀಡುತ್ತ ದೆಂಬುದಕ್ಕಾಗಿಯೇ ಹೀಗೆ ಮಾಡಲಾಯಿತೆ? ಅಚ್ಚರಿಯೆಂದರೆ, ಪಾಕಿಸ್ಥಾನದಿಂದ ಬಂದು ರಾಜ್ಯದಲ್ಲಿ ನೆಲೆಸಿರುವ ಹಿಂದೂ ವಲಸಿಗರಿಗೆ ಪೂರ್ಣ ಪ್ರಮಾಣದ ಪೌರತ್ವ ನೀಡಲೂ ಪಿಡಿಪಿ – ಬಿಜೆಪಿ ಸರಕಾರಕ್ಕೆ ಸಾಧ್ಯವಾಗದೆ ಹೋಯಿತು.

ದೇಶದ ಬಹುತೇಕ ಭಾಗಗಳಲ್ಲಿ ಬಿಜೆಪಿಯ ಆಡಳಿತವಿದ್ದರೂ, 1950ರ ದಶಕದಲ್ಲಿ ಇದೇ ರೀತಿ ಅಧಿಕಾರದ ಮೇಲುಗೈ ಹೊಂದಿದ್ದ ಕಾಂಗ್ರೆಸ್‌ ಪಕ್ಷದ ಅಂದಿನ ಸ್ಥಿತಿಗೆ ಹೋಲಿಸಿದರೆ, ಬಿಜೆಪಿ ಸಮರ್ಥ ಆಡಳಿತಗಾರರನ್ನಾಗಲಿ, ಚಿಂತನಶೀಲ ರಾಜಕಾರಣಿ ಗಳನ್ನು ದೊಡ್ಡ ಸಂಖ್ಯೆಯಲ್ಲಿ ಹೊಂದಿಲ್ಲವೆಂದೇ ಹೇಳಬೇಕು. ಜವಾಹರಲಾಲ್‌ ನೆಹರೂ ನೇತೃತ್ವದ ಅಂದಿನ ಕಾಂಗ್ರೆಸ್‌ಪಕ್ಷ, ಸಿ. ರಾಜಗೋಪಾ ಲಾಚಾರಿ, ಜೆ.ಬಿ. ಕೃಪಲಾನಿ, ಪುರುಷೋತ್ತಮ ದಾಸ್‌ ಟಂಡನ್‌ ಪ್ರೊ| ಎನ್‌.ಜಿ. ರಂಗ ಅಥವಾ ಮಿನೂ ಮಸಾನಿಯವರಂಥ ಟೀಕಾಕಾರರನ್ನು ಕೆಲವು ವರ್ಷಗಳ ಕಾಲ ಸಹಿಸಿಕೊಂಡಿತ್ತು. ರಾಷ್ಟ್ರೀಯ ನಾಯಕರ ಸುತ್ತ ವೈಯಕ್ತಿಕ ಆರಾಧನೆಯ ಗೌಜು ಗದ್ದಲದ ಪರಂಪರೆ ಬೆಳೆದು ಬಂದುದು ಮುಂದಿನ ವರ್ಷಗಳಲ್ಲಿ; ವಿಶೇಷವಾಗಿ ಇಂದಿರಾಗಾಂಧಿ ಅಧಿಕಾ ರಕ್ಕೆ ಬಂದ ಬಳಿಕದ ವರ್ಷಗಳಲ್ಲಿ.

ಪಂಡಿತ್‌ ನೆಹರೂ ಅವರ ಸರಕಾರ ಪುರುಷೋತ್ತಮ ಟಂಡನ್‌ ಅವರಿಗೆ ಭಾರತರತ್ನ ಬಿರು ದನ್ನು ನೀಡಿತ್ತು; ಈ ಮೂಲಕ ನೆಹರೂ ತಾನೋರ್ವ ಮುತ್ಸದ್ದಿ ಎಂಬುದನ್ನು ತೋರಿಸಿಕೊಟ್ಟರು. 1950ರಲ್ಲಿ ನಾಶಿಕ್‌ನಲ್ಲಿ ನಡೆ
ದಿದ್ದ ಕಾಂಗ್ರೆಸ್‌ ಮಹಾಧಿವೇಶನದಲ್ಲಿ ಟಂಡನ್‌ ಅವರು ನೆಹರೂ ಅವರ ಅಭ್ಯರ್ಥಿಯಾಗಿದ್ದ ಕೃಪಲಾನಿಯವರನ್ನು ಸೋಲಿಸುವ ಮೂಲಕ ನೆಹರೂರವರನ್ನು ಮುಜುಗರಕ್ಕೀಡುಮಾಡಿದ್ದರು.

ಮೊನ್ನೆ ಲೋಕಸಭೆಯಲ್ಲಿ ಮೋದಿ ಸರಕಾರದ ವಿರುದ್ಧದ ಅವಿಶ್ವಾಸ ಗೊತ್ತುವಳಿ ಮೇಲಿನ ಚರ್ಚೆಯ ಸಂದರ್ಭದಲ್ಲಿ ಪ್ರಖರ ಟೀಕಾ ಪ್ರಹಾರ ಸಹಿತವಾದ ಭಾಷಣವಿತ್ತ ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ, ಇದರ ಬೆನ್ನಿಗೇ ಪ್ರಧಾನಿಯವರನ್ನು ಅಪ್ಪಿಕೊಂಡು ಅವರ ಕೈ ಕುಲುಕುವ ಮೂಲಕ ತನ್ನ ತಾತನ ನಡವಳಿಕೆಯನ್ನು ಅನುಸರಿಸುವ ಪ್ರಯತ್ನಕ್ಕಿಳಿದರು ಎನ್ನಬಹುದೆ? ಇದೊಂದು “ಕೆಟ್ಟ ಸಂಸದೀಯ ಶಿಷ್ಟಾಚಾರ’ ಎಂದು ಸ್ಪೀಕರ್‌ ಸುಮಿತ್ರಾ ಮಹಾಜನ್‌ ಅವರು ಅಭಿಪ್ರಾಯಪಟ್ಟರಾದರೂ, ನಿಜವಾಗಿ ಇದೊಂದು ಉತ್ತಮ ನಡವಳಿಕೆಯೇ ಹೌದು.

– ಅರಕೆರೆ ಜಯರಾಮ್‌

ಟಾಪ್ ನ್ಯೂಸ್

arrested

16 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಛೋಟಾ ರಾಜನ್ ಗ್ಯಾಂಗ್‌ನ ಸದಸ್ಯ ಅರೆಸ್ಟ್

Actor Allu Arjun: ಕಾಲ್ತುಳಿತ ಪ್ರಕರಣ-ನಟ ಅಲ್ಲುಗೆ ರೆಗ್ಯುಲರ್‌ ಜಾಮೀನ ಮಂಜೂರು

Actor Allu Arjun: ಕಾಲ್ತುಳಿತ ಪ್ರಕರಣ-ನಟ ಅಲ್ಲುಗೆ ರೆಗ್ಯುಲರ್‌ ಜಾಮೀನ ಮಂಜೂರು

Vijay Hazare; ವಾಸುಕಿ,ಗೋಪಾಲ್‌ ಬೊಂಬಾಟ್‌ ಬೌಲಿಂಗ್;‌ ಸೌರಾಷ್ಟ್ರ ವಿರುದ್ದ ಗೆದ್ದ ಕರ್ನಾಟಕ

Vijay Hazare; ವಾಸುಕಿ,ಗೋಪಾಲ್‌ ಬೊಂಬಾಟ್‌ ಬೌಲಿಂಗ್;‌ ಸೌರಾಷ್ಟ್ರ ವಿರುದ್ದ ಗೆದ್ದ ಕರ್ನಾಟಕ

Congress; ಡಿನ್ನರ್ ಮೀಟಿಂಗ್ ನಲ್ಲಿ ವಿಶೇಷ ಇಲ್ಲ: ಸಚಿವ ಭೈರತಿ ಸುರೇಶ್

Congress; ಡಿನ್ನರ್ ಮೀಟಿಂಗ್ ನಲ್ಲಿ ವಿಶೇಷ ಇಲ್ಲ: ಸಚಿವ ಭೈರತಿ ಸುರೇಶ್

Test Cricket; After Rohit, now Virat..: What is in ‘that’ message sent by BCCI?

Test Cricket; ರೋಹಿತ್‌ ಆಯ್ತು, ಈಗ ವಿರಾಟ್..:‌ ಬಿಸಿಸಿಐ ಕಳಿಸಿದ ʼಆʼ ಸಂದೇಶದಲ್ಲಿ ಏನಿದೆ?

Gangolli: ಪಂಚಾಯತ್‌ನೊಳಗೆ ನಮಾಜ್‌; ಹಿಂದೂ ಹಿತರಕ್ಷಣಾ ಸಮಿತಿ ಪ್ರತಿಭಟನೆ

Gangolli: ಪಂಚಾಯತ್‌ನೊಳಗೆ ನಮಾಜ್‌; ಹಿಂದೂ ಹಿತರಕ್ಷಣಾ ಸಮಿತಿ ಪ್ರತಿಭಟನೆ

Anandpur: ಮುಂದುವರೆದ ಕಾಡಾನೆಗಳ ದಾಳಿ… ಇಲಾಖೆ ವಿರುದ್ಧ ರೈತರ ಆಕ್ರೋಶ

Anandpur: ಮುಂದುವರೆದ ಕಾಡಾನೆಗಳ ದಾಳಿ… ಇಲಾಖೆ ವಿರುದ್ಧ ರೈತರ ಆಕ್ರೋಶ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಅತೃಪ್ತಿ ಹಣಿಯಲು ಚಾಣಕ್ಯ ಸಂದೇಶದ ತಂತ್ರ 

ಅತೃಪ್ತಿ ಹಣಿಯಲು ಚಾಣಕ್ಯ ಸಂದೇಶದ ತಂತ್ರ 

ಮೇಲ್ಮನೆಗೆ ಗೊಗೋಯ್‌, ವಿಪಕ್ಷ ಸಭಾತ್ಯಾಗ

ಮೇಲ್ಮನೆಗೆ ಗೊಗೋಯ್‌, ವಿಪಕ್ಷ ಸಭಾತ್ಯಾಗ

ಸಂವಿಧಾನ: ಅಂಬೇಡ್ಕರ್‌ ಜತೆಗೆ ನಪಿಸಿಕೊಳ್ಳಬೇಕಾದವರು

ಸಂವಿಧಾನ: ಅಂಬೇಡ್ಕರ್‌ ಜತೆಗೆ ನೆನಪಿಸಿಕೊಳ್ಳಬೇಕಾದವರು

kala-43

ಬ್ರಿಟನ್‌ ವಿತ್ತದ ಕೀಲಿ ಕೈ ಭಾರತೀಯ ಮೂಲದವರ ಕೈಯಲ್ಲಿ

jai-43

ನೂತನ ಸಚಿವ ಪರಿವಾರ -ಬಿಜೆಪಿಗೆ ಹೊರೆಯೇ, ವರವೇ?

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

arrested

16 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಛೋಟಾ ರಾಜನ್ ಗ್ಯಾಂಗ್‌ನ ಸದಸ್ಯ ಅರೆಸ್ಟ್

Actor Allu Arjun: ಕಾಲ್ತುಳಿತ ಪ್ರಕರಣ-ನಟ ಅಲ್ಲುಗೆ ರೆಗ್ಯುಲರ್‌ ಜಾಮೀನ ಮಂಜೂರು

Actor Allu Arjun: ಕಾಲ್ತುಳಿತ ಪ್ರಕರಣ-ನಟ ಅಲ್ಲುಗೆ ರೆಗ್ಯುಲರ್‌ ಜಾಮೀನ ಮಂಜೂರು

Vijay Hazare; ವಾಸುಕಿ,ಗೋಪಾಲ್‌ ಬೊಂಬಾಟ್‌ ಬೌಲಿಂಗ್;‌ ಸೌರಾಷ್ಟ್ರ ವಿರುದ್ದ ಗೆದ್ದ ಕರ್ನಾಟಕ

Vijay Hazare; ವಾಸುಕಿ,ಗೋಪಾಲ್‌ ಬೊಂಬಾಟ್‌ ಬೌಲಿಂಗ್;‌ ಸೌರಾಷ್ಟ್ರ ವಿರುದ್ದ ಗೆದ್ದ ಕರ್ನಾಟಕ

ಗದಗ: ಮಾವು ಬಂಪರ್‌ ಬೆಳೆ ನಿರೀಕ್ಷೆ- ಬೆಳೆಗಾರರಿಗೆ ಸಂತಸ

ಗದಗ: ಮಾವು ಬಂಪರ್‌ ಬೆಳೆ ನಿರೀಕ್ಷೆ- ಬೆಳೆಗಾರರಿಗೆ ಸಂತಸ

Congress; ಡಿನ್ನರ್ ಮೀಟಿಂಗ್ ನಲ್ಲಿ ವಿಶೇಷ ಇಲ್ಲ: ಸಚಿವ ಭೈರತಿ ಸುರೇಶ್

Congress; ಡಿನ್ನರ್ ಮೀಟಿಂಗ್ ನಲ್ಲಿ ವಿಶೇಷ ಇಲ್ಲ: ಸಚಿವ ಭೈರತಿ ಸುರೇಶ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.