ವೈದ್ಯರ ಅಕ್ರಮ ಸಂಪತ್ತಿನ ಚಾಳಿ ಹಾಗೂ ಐಟಿ ದಾಳಿ
Team Udayavani, Dec 6, 2017, 12:04 PM IST
ಸ್ವಪ್ರಚಾರಕ್ಕಾಗಿ ಏಜೆನ್ಸಿಗಳನ್ನು ಬಳಸಿಕೊಳ್ಳುವುದು ವೈದ್ಯಕೀಯ ನೀತಿಗೆ ವಿರುದ್ಧ ಎಂಬುದು ಎಲ್ಲರಿಗೂ ಚೆನ್ನಾಗಿ ಗೊತ್ತಿದೆ. ಆದರೆ ಹೆಚ್ಚಿನ ವೈದ್ಯರುಗಳು ಇದನ್ನೆಲ್ಲ ಲೆಕ್ಕಿಸುವುದಿಲ್ಲ. ಸ್ವತಃ ವೈದ್ಯರಾಗಿದ್ದ ಮಾಜಿ ಆರೋಗ್ಯ ಸಚಿವ, ಡಾ| ಎ.ಬಿ. ಮಾಲಕ ರೆಡ್ಡಿಯವರು ಇಂಥ ಸ್ವಪ್ರಚಾರ ನಿರತ ವೈದ್ಯರನ್ನು ಈ ಹಿಂದೆ ತರಾಟೆಗೆ ತೆಗೆದುಕೊಂಡದ್ದುಂಟು. ಜಾಹೀರಾತುಗಳು ಹಾಗೂ ಪತ್ರಿಕಾ ಬರಹಗಳ ಮೂಲಕ ತಮ್ಮನ್ನೇ ಮೆರೆಸಿಕೊಂಡವರನ್ನು ಗೇಲಿ ಮಾಡಿದ್ದೂ ಉಂಟು.
ಆದಾಯ ತೆರಿಗೆ ಅಧಿಕಾರಿಗಳು ಇತ್ತೀಚೆಗೆ ಬೆಂಗಳೂರಿನಲ್ಲಿ ಸ್ತ್ರೀ ರೋಗ ತಜ್ಞೆಯೊಬ್ಬರ ಒಡೆತನದ ನಿವಾಸ, ಆಸ್ಪತ್ರೆ,ಔಷಧ ವಿತರಕ ಸಂಸ್ಥೆ, ರೋಗ ನಿದಾನ ಕೇಂದ್ರ (ಡಯಾಗ್ನೋಸ್ಟಿಕ್ ಲ್ಯಾಬೊರೇಟರಿ) ಕಟ್ಟಡಗಳ ಮೇಲೆ ದಾಳಿ ನಡೆಸಿದ್ದು ಸರಿಯಷ್ಟೆ? ಒಂದಂತೂ ಸ್ಪಷ್ಟ. ಇತ್ತೀಚೆಗೆ ರಾಜ್ಯದ ಖಾಸಗಿ ರಂಗದ ವೈದ್ಯರು, “ಕರ್ನಾಟಕ ಖಾಸಗಿ ವೈದ್ಯಕೀಯ ಸಂಸ್ಥೆಗಳ ತಿದ್ದುಪಡಿ ಮಸೂದೆ’ಯಲ್ಲಿನ ಕೆಲವು ಪ್ರಸ್ತಾವಗಳನ್ನು ಸಡಿಲಗೊಳಿಸಬೇಕೆಂದು ಆಗ್ರಹಿಸಿ, ಸರಕಾರದ ಮೇಲೆ ತಂದ ಒತ್ತಡಕ್ಕೆ ಸರಕಾರ ಮಣಿಯಕೂಡದಿತ್ತು ಎಂಬ ಕೆಲವರ ಅಭಿಪ್ರಾಯವನ್ನು ಮೊನ್ನೆ ಬುಧವಾರ ನಡೆದ ದಾಳಿ ಸಮರ್ಥಿಸುವಂತಿದೆ.
ಖಾಸಗಿ ವೈದ್ಯರು ನಡೆಸಿದ ಅನಿರೀಕ್ಷಿತ ಹಾಗೂ ಅಭೂತಪೂರ್ವ ಪ್ರತಿಭಟನೆಯ ಪರಿಣಾಮವಾಗಿ ರಾಜ್ಯ ಸರಕಾರ ಪ್ರಸ್ತಾವಿತ ತಿದ್ದುಪಡಿ ಮಸೂದೆಯಲ್ಲಿನ ಕೆಲವು ಶರತ್ತುಗಳನ್ನು ಕೈಬಿಟ್ಟಿತು. ಕರ್ನಾಟಕದ ಜನತೆ ತುದಿಗಾಲಲ್ಲಿ ನಿರೀಕ್ಷಿಸುತ್ತಿದ್ದ ಶಾಸನ ಇದಾ ಗಿತ್ತು; ಆದರೆ ದುರದೃಷ್ಟವಶಾತ್ ಸರಕಾರ ಈ ನಿರೀಕ್ಷೆಯನ್ನು ಭಗ್ನ ಗೊಳಿಸಿತು. ಸಂವಿಧಾನದಡಿಯಲ್ಲಿ ಹಾಗೂ ವಿವಿಧ ಶಾಸನಗಳಡಿ ಯಲ್ಲಿ ರೋಗಿಗಳಿಗೆ ತಮ್ಮದೇ ಆದ ಹಕ್ಕುಗಳಿವೆ ಎಂದು ಸರಕಾರ ಮೂಲ ಮಸೂದೆಯಲ್ಲಿ ಸ್ಪಷ್ಟವಾಗಿ ಗುರುತಿಸಿತ್ತು.
ಇದೀಗ, ಎಲ್ಲಕ್ಕಿಂತ ಮೊದಲಿಗೆ, ಕಳೆದ ಬುಧವಾರ ದಾಳಿ ನಡೆಸಿದ ಆದಾಯ ತೆರಿಗೆ ಅಧಿಕಾರಿಗಳನ್ನು ನಾವು ಅಭಿನಂದಿಸ ಬೇಕಾ ಗಿದೆ. ಖಾಸಗಿ ವೈದ್ಯರ ಹಾಗೂ ರೋಗನಿದಾನ ಕೇಂದ್ರಗಳ ನಡುವೆ ಏರ್ಪಟ್ಟಿರುವ ಗಾಢ ಸಂಬಂಧವನ್ನು ತೆರಿಗೆ ಅಧಿಕಾರಿಗಳು ಬಯಲಿಗೆಳೆದಂತಾಗಿದೆ. ಈ ಅಪವಿತ್ರ ಸಂಬಂಧದ ದುಷಲ ವೆಂದರೆ, ರೋಗಿಗಳ ಶೋಷಣೆ. ಹಾಗೆ ನೋಡಿದರೆ ಇಂಥ ಅನಪೇಕ್ಷಿತ ಸಂಬಂಧ ಯಾರಿಗೂ ಗೊತ್ತಿಲ್ಲದ್ದೇನಲ್ಲ. ಮೊನ್ನೆಯ ದಾಳಿಯ ಮೂಲಕ ಆದಾಯ ತೆರಿಗೆ ಅಧಿಕಾರಿಗಳು ಇಂಥ “ಹೈಟೆಕ್’ ಹಾಗೂ “ಸ್ಪೆಶಲೈಸ್ಡ್’ ವಂಚನಾ ಜಾಲವನ್ನು ಯಶಸ್ವಿಯಾಗಿ ಬಯಲುಗೊಳಿಸಿದಂತಾಗಿದೆ. ಭಾರತೀಯ ವೈದ್ಯಕೀಯ ಮಂಡಳಿ ಹಾಗೂ ಕರ್ನಾಟಕ ಘಟಕ ಇಷ್ಟು ವರ್ಷಗಳಲ್ಲಿ ಶ್ರದ್ಧೆಯಿಂದ ಮಾರ್ಗದರ್ಶಿ ಸೂತ್ರಗಳನ್ನು ರವಾನಿಸುವುದರ ಹೊರತಾಗಿ ಏನು ಮಾಡುತ್ತಿದ್ದವು ಎಂಬುದೇ ಅಚ್ಚರಿ ಹುಟ್ಟಿಸುವ ಸಂಗತಿ. ಸ್ಪಷ್ಟವಾಗಿ ಹೇಳಬೇಕೆಂದರೆ ವೈದ್ಯಕೀಯ ವೃತ್ತಿಯ ಸ್ವ-ನಿಯಂತ್ರಣ ಸಂಹಿತೆ, ಇಂಥ ದುರ್ವರ್ತನೆಗಳನ್ನು ತಡೆಯುವಲ್ಲಿ ತೀರಾ ವಿಫಲವಾಗಿದೆ. ಇಂಥದೊಂದು ಸನ್ನಿವೇಶದಲ್ಲಿ ಸರಕಾರದ ಮಧ್ಯ ಪ್ರವೇಶ ಬೇಕೇ ಬೇಕು ಎನ್ನುವಂತಾಗಿದೆ. ಹೀಗಿರುತ್ತ, ರಾಜ್ಯಸರಕಾರ ಖಾಸಗಿ ವೈದ್ಯಕೀಯ ಸಂಸ್ಥೆಗಳ ನಿಯಂತ್ರಣಕ್ಕೆ ತಕ್ಕ ಕ್ರಮ ಕೈಗೊಳ್ಳಲೇ ಬೇಕೆಂದು, ವೈದ್ಯಕೀಯ ಶಿಕ್ಷಣ ಹಾಗೂ ಚಿಕಿತ್ಸಾ ಕ್ಷೇತ್ರದ ಲಾಬಿಗೆ ಮಣಿಯಲೇ ಕೂಡದೆಂದು ನಾಡಿನ ಜನತೆ ಆಶಿಸುವುದು ಸಹಜವೇ ಆಗಿದೆ.
ಈ ಸ್ತ್ರೀ ರೋಗ ತಜ್ಞೆ ಪದ್ಮಶ್ರೀ ಪುರಸ್ಕೃತೆ!
ಗಮನಿಸಲೇಬೇಕಾದ ಅಂಶವೆಂದರೆ, ಆದಾಯ ತೆರಿಗೆ ಅಧಿಕಾ ರಿಗಳ ದಾಳಿಗೆ ತುತ್ತಾಗಿರುವ ಈ ಸ್ತ್ರೀ ರೋಗ ತಜ್ಞೆ, ವೈದ್ಯಕೀಯ ಕ್ಷೇತ್ರಕ್ಕೆ ತಾನು ಸಲ್ಲಿಸಿರುವ ಸೇವೆಗಾಗಿ ಕೇಂದ್ರ ಸರಕಾರದಿಂದ ನೀಡಲಾಗುವ ಪದ್ಮಶ್ರೀ ಪ್ರಶಸ್ತಿಗೆ ಪಾತ್ರರಾದವರು! ಈಕೆಗೆ ಈ “ಗೌರವ’ ದೊರೆತದ್ದು 2014ರಲ್ಲಿ. ಕರ್ನಾಟಕ ಸರಕಾರವೇ ಈ ಪ್ರಶಸ್ತಿಗೆ ಈಕೆಯ ಹೆಸರನ್ನು ಶಿಫಾರಸು ಮಾಡಿರಲೂ ಸಾಕು. ತನ್ನ ಕ್ಷೇತ್ರದಲ್ಲಿನ ಸಾಮರ್ಥ್ಯದ ಬಗ್ಗೆ ಈಕೆ ಏನೇ ಹೇಳಿಕೊಂಡಿರಲಿ, ರಾಜ್ಯ ಹಾಗೂ ಕೇಂದ್ರ ಸರಕಾರಗಳು ಕೇವಲ ಮಾಧ್ಯಮಗಳ ವರದಿಗಳನ್ನು ನೆಚ್ಚುವ ಬದಲಿಗೆ ಈಕೆಯ ಸೇವಾ ಕ್ಷೇತ್ರಕ್ಕೆ ಸಂಬಂಧಿಸಿದಂತೆ ವ್ಯಕ್ತವಾದ ಅಭಿಪ್ರಾಯಗಳನ್ನು ಹಾಗೂ ವೈದ್ಯ ಕೀಯ ಪತ್ರಿಕೆಗಳಲ್ಲಿ ಪ್ರಕಟವಾದ ಲೇಖನಗಳನ್ನು ಆಧರಿಸಿಯೇ ಮುಂದುವರಿಯಬೇಕಿತ್ತು. ಪಾಕಿಸ್ಥಾನದ ಮಗುವೊಂದರ ಹೃದಯ ಶಸ್ತ್ರಚಿಕಿತ್ಸೆ ನಡೆಸಿದ್ದನ್ನೇ ಸಾಧನೆಯೆಂದು ಬಿಂಬಿಸಿ
ಅಥವಾ ಇಂಥದೇ ಕಾರಣಗಳನ್ನು ಮುಂದಿಟ್ಟು ಉನ್ನತ ರಾಷ್ಟ್ರೀಯ ಗೌರವಗಳನ್ನು “ದಕ್ಕಿಸಿ’ಕೊಂಡ ವೈದ್ಯರ “ಕೇಸು’ಗಳನ್ನು ಈ ಅಂಕಣಕಾರ ಬಲ್ಲ. ಭಾರತೀಯರೇ ಆಗಿರಲಿ, ಪಾಕಿಸ್ಥಾನೀಯರೇ ಆಗಿರಲಿ ಹೃದಯ ಸಂಬಂಧಿ ಕಾಯಿಲೆಗಳಲ್ಲಿ “ಭಿನ್ನತೆ’ಯೆಂಬುದಿಲ್ಲ. ಭಾರತ ಹಾಗೂ ಪಾಕಿಸ್ಥಾನದ ಸರಕಾರಗಳ ನಡುವೆ “ಕೆಟ್ಟ ರಕ್ತ’ಹರಿಯುತ್ತಿರಬಹುದಾದರೂ ಮನುಷ್ಯ ಮನುಷ್ಯರ ನಡುವಿನ ಸಂಬಂಧದಲ್ಲಿ ಇಂಥ “ಕೆಟ್ಟ ರಕ್ತ’ದ ಪಾತ್ರವಿಲ್ಲ. ಹೀಗಿದ್ದರೂ ಸರಕಾರವೊಂದರ ಪ್ರಶಸ್ತಿಯನ್ನೋ, ಉನ್ನತ ರಾಷ್ಟ್ರ ಪ್ರಶಸ್ತಿಯನ್ನೋ ಪಡೆದವರು, ಹಾಗೆ ಪಡೆಯಲು ಎಸಗಿದ ತಪ್ಪುಗ ಳಿಂದಾಗಿಯೇ ಅವುಗಳನ್ನು ದಕ್ಕಿಸಿಕೊಂಡರೆಂದು ಮುಂದೆ ತಿಳಿದು ಬಂದರೆ, ಈ ಪ್ರಮಾದಕ್ಕಾಗಿ ಸರಕಾರಗಳನ್ನು ಆಕ್ಷೇಪಿಸುವಂತಿಲ್ಲ ಎಂಬುದೂ ನಿಜವೇ. ಅಲ್ಲದೆ, ಕನಿಷ್ಠ ಪದ್ಮ ಪ್ರಶಸ್ತಿಗಳ ಮಟ್ಟಿಗಾದರೂ ಪೊಲೀಸ್ ಅಥವಾ ಗುಪ್ತಚರ ಇಲಾಖೆಯ ವರದಿಗಳನ್ನು ತರಿಸಿಕೊಂಡು ಪರಿಶೀಲಿಸಲಾಗುತ್ತದೆಂದು ನಾವು ಸಹಜವಾಗಿಯೇ ನಿರೀಕ್ಷಿಸಬಹುದಾಗಿದೆ. ನ್ಯಾಯಾಧೀಶರನ್ನು ಹಾಗೂ ನ್ಯಾಯವಾದಿಗಳನ್ನು ನೇಮಕಮಂಡಳಿಯ ಮೂಲಕ ಉಚ್ಚ ನ್ಯಾಯಾಲಯದ ಹಾಗೂ ಸರ್ವೋಚ್ಚ ನ್ಯಾಯಾಲಯದ ನ್ಯಾಯಾಧೀಶರನ್ನಾಗಿ ನೇಮಿಸುವ ಸಂದರ್ಭದಲ್ಲೂ ಕೇಂದ್ರ ಸರಕಾರ ಗುಪ್ತಚರ ಇಲಾಖೆಯ ವರದಿಗಳನ್ನು ಪರಿಶೀಲಿಸಿಯೇ ಮುಂದುವರಿಯುತ್ತದೆ. ಹೀಗಿದ್ದರೂ ಸಾಂವಿಧಾನಿಕ ಹುದ್ದೆಗಳನ್ನು ನಿಭಾಯಿಸಲು ಮುಂದಾಗುವ ವ್ಯಕ್ತಿಗಳ ಬಗ್ಗೆ ಪೊಲೀಸರಿಂದ ನಡೆಯಬೇಕಾದ ತಪಾಸಣೆ ಹಾಗೂ ಪರಿಶೀಲನೆಯ ಪ್ರಕ್ರಿಯೆಗೆ ಸಂಬಂಧಿಸಿದಂತೆ ಟೀಕೆಗಳು ಕೇಳಿಬಂದಿರುವುದೇ ಹೆಚ್ಚು. ಈ ದಿನಗಳಲ್ಲಿ ಅನೇಕ ಖಾಸಗಿ ವೈದ್ಯರು ಹಾಗೂ ಆಸ್ಪತ್ರೆಗಳು ತಮ್ಮ ವೃತ್ತಿ ತಜ್ಞತೆ, ರೋಗಿಗಳ ತಪಾಸಣೆಯಲ್ಲಿನ ತಮ್ಮ ಸಾಧನೆ ಹಾಗೂ ನೀಡುತ್ತಿರುವ ಸೇವೆ – ಇವುಗಳ ಬಗ್ಗೆ ಜಾಹೀರಾತುಗಳನ್ನು ನೀಡಲು ಜಾಹೀರಾತು ಪ್ರಚಾರ ಸಂಸ್ಥೆಗಳನ್ನು ಅವಲಂಬಿಸಿರುತ್ತವೆ ಎಂಬುದನ್ನಿಲ್ಲಿ ಅಗತ್ಯವಾಗಿ ಗಮನಿಸಬೇಕು.
ಹೀಗೆ ಸ್ವಪ್ರಚಾರಕ್ಕಾಗಿ ಏಜೆನ್ಸಿಗಳನ್ನು ಬಳಸಿಕೊಳ್ಳುವುದು ವೈದ್ಯ ಕೀಯ ನೀತಿಗೆ ವಿರುದ್ಧ ಎಂಬುದು ಎಲ್ಲರಿಗೂ ಚೆನ್ನಾಗಿ ಗೊತ್ತಿದೆ. ಆದರೆ ಹೆಚ್ಚಿನ ವೈದ್ಯರುಗಳು ಇದನ್ನೆಲ್ಲ ಲೆಕ್ಕಿಸುವುದಿಲ್ಲ. ಸ್ವತಃ ವೈದ್ಯರಾಗಿದ್ದ ಮಾಜಿ ಆರೋಗ್ಯ ಸಚಿವ, ಡಾ| ಎ.ಬಿ. ಮಾಲಕ ರೆಡ್ಡಿಯವರು ಇಂಥ ಸ್ವಪ್ರಚಾರ ನಿರತ ವೈದ್ಯರನ್ನು ಈ ಹಿಂದೆ ತರಾಟೆಗೆ ತೆಗೆದುಕೊಂಡದ್ದುಂಟು. ಜಾಹೀರಾತುಗಳು ಹಾಗೂ ಪತ್ರಿಕಾ ಬರಹಗಳ ಮೂಲಕ ತಮ್ಮನ್ನೇ ಮೆರೆಸಿಕೊಂಡವರನ್ನು ಗೇಲಿ ಮಾಡಿದ್ದೂ ಉಂಟು. ನಮ್ಮ ಕೆಲ ಖಾಸಗಿ ವೈದ್ಯರುಗಳು ತಮ್ಮ ತಜ್ಞತೆ ಕುರಿತಂತೆ ಕೊಚ್ಚಿಕೊಂಡಿರುವುದನ್ನು ನೋಡಿದರೆ, ಅವರಲ್ಲಿ ಕನಿಷ್ಠ ಕೆಲವರಿಗಾದರೂ ಇಷ್ಟರೊಳಗೆ ನೊಬೆಲ್ ಪ್ರಶಸ್ತಿ ಬರಬೇಕಿತ್ತು ಎಂದು ಯಾರಿಗಾದರೂ ಅನ್ನಿಸದೆ ಇರದು. ತಮ್ಮನ್ನೇ ಮಾರುಕಟ್ಟೆ ಸರಕನ್ನಾಗಿಸಿಕೊಂಡಿರುವ ಇಂಥ ವೈದ್ಯರ ಮೇಲೆ ವೈದ್ಯಕೀಯ ಮಂಡಳಿ ಕಠಿನ ಕ್ರಮ ತೆಗೆದುಕೊಳ್ಳಲೇಬೇಕಾಗಿದೆ.
ಪದ್ಮಶ್ರೀ ಪ್ರಶಸ್ತಿ ವಾಪಾಸು ಪಡೆಯಿರಿ
ಈಗ ಕೇಂದ್ರ ಸರಕಾರ, ಈ ಪ್ರಸೂತಿ ತಜ್ಞೆಯ ಕೇಸಿನಲ್ಲಿ ಮಧ್ಯೆ ಪ್ರವೇಶಿಸಬೇಕು. ಈಕೆ ತೆರಿಗೆ ವಂಚನೆ ಹಾಗೂ ಅಪ್ರಾಮಾಣಿಕ ರೀತಿಯಲ್ಲಿ ಹಣ ಬಾಚಿದ್ದನ್ನು ಆದಾಯ ತೆರಿಗೆ ಅಧಿಕಾರಿಗಳು ಸಾಬೀತುಗೊಳಿಸಿದ ಬೆನ್ನಿಗೆ, ಅಂದು ಈಕೆಗೆ ನೀಡಲಾಗಿದ್ದ ಪದ್ಮಶ್ರೀ ಪ್ರಶಸ್ತಿಯನ್ನು ಹಿಂದಕ್ಕೆ ಪಡೆದುಕೊಳ್ಳಬೇಕು. ಈಗ ನಡೆಸಲಾಗಿರುವ ದಾಳಿ ಕಾರ್ಯಾಚರಣೆ, ಈಕೆಯ ಪ್ರಮಾದವನ್ನು ಸಾಬೀತು ಪಡಿಸುವ ದೃಷ್ಟಿಯಿಂದ ಏನೇನೂ ಸಾಲದು! ರಾಜ್ಯ ಸರಕಾರ ಈಗ ಖಾಸಗಿ ವೈದ್ಯರ ರೋಗ ನಿದಾನ ಕೇಂದ್ರಗಳು ಹಾಗೂ ಸಂತಾನ ಸಾಮರ್ಥ್ಯ ಚಿಕಿತ್ಸಾಲಯಗಳ ಮೇಲೆ ಕ್ರಮ ತೆಗೆದುಕೊಳ್ಳಬೇಕು; ಇಷ್ಟು ವರ್ಷಗಳ ಕಾಲ ನಡೆಯುತ್ತ ಬಂದಿರುವಂತೆ ಕಾನೂನು ಕ್ರಮ ಸಂಹಿತೆಗಳನ್ನು ಕಡತಗಳಿಗೆ ಮಾತ್ರ ಸೀಮಿತಗೊಳಿಸದೆ ಕಟ್ಟುನಿಟ್ಟಾಗಿ ಜಾರಿಗೆ ತರಬೇಕು.
ದುರದೃಷ್ಟವಶಾತ್, ದೇಶದ ಕಾನೂನನ್ನು ಭಂಗಿಸಿದವರ ಅಪರಾಧ ಸಾಬೀತುಪಡಿಸುವ ಬಲಿಷ್ಠ ಪುರಾವೆಗಳಿದ್ದರೂ ಅಂಥ ವ್ಯಕ್ತಿಗಳಿಗೆ ಹಿಂದೆ ನೀಡಲಾಗಿದ್ದ ಪದ್ಮ ಪ್ರಶಸ್ತಿಗಳನ್ನು ಕೇಂದ್ರ ಸರಕಾರ ಹಿಂಪಡೆಯಲು ಮುಂದಾದ ಒಂದೇ ಒಂದು ಉದಾಹರಣೆಯೂ ನಮ್ಮಲ್ಲಿ ಇಲ್ಲ. ಅಮೆರಿಕ ನಿವಾಸಿ ಹೊಟೇಲ್ ಮಾಲೀಕ ಸಂತ್‌ಸಿಂಗ್ ಛs…ವಾಲ್ ಅವರ ಕತೆ ಕೇಳಿ. ಈ ಮನುಷ್ಯನಿಗೆ 2010ರಲ್ಲಿ ಆಗಿನ ಮನಮೋಹನ್ ಸಿಂಗ್ ನೇತೃತ್ವದ ಯುಪಿಎ ಸರಕಾರ ಪದ್ಮಭೂಷಣ ಪ್ರಶಸ್ತಿಯನ್ನು ನೀಡಿತ್ತು. ಸಿಬಿಐ, ಈತನ ಮೇಲೆ 90ಲಕ್ಷ ಡಾಲರ್ ಮೊತ್ತವನ್ನೊಳಗೊಂಡ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ, ಆರೋಪಪಟ್ಟಿ ದಾಖಲಿಸಿತ್ತು. ಇದರಿಂದ ಮುಜುಗರಕ್ಕೊಳಗಾದ ಕಾಂಗ್ರೆಸ್ ಪಕ್ಷ, ಪ್ರಶಸ್ತಿಗಳನ್ನು ನೀಡುವಾಗ ಯಾರು ಅವುಗಳ ಗೌರವ ಹೆಚ್ಚಿಸುತ್ತಾರೋ ಅವರಿಗೆ ನೀಡಬೇಕೇ ಹೊರತು ಆರೋಪಗಳಿಂದ ಕಲಂಕಿತರಾದವರಿಗಲ್ಲ’ ಎಂಬ ಹೇಳಿಕೆ ನೀಡಿತು. ಇನ್ನೊಂದು ಪ್ರಕರಣ ಪಂಜಾಬ್ ಪೊಲೀಸ್ ಮುಖ್ಯಸ್ಥ ಕೆ.ಪಿ.ಎಸ್. ಗಿಲ್ ಅವರಿಗೆ ಸಂಬಂಧಿಸಿದೆ. ಪಂಜಾಬಿನ ಐಎಎಸ್ ಅಧಿಕಾರಿಣಿ ರೂಪೆನ್‌ದೇವ್ ಬಜಾಜ್ ಜತೆಗೆ ಗಿಲ್ ಅವರು ಅಸಭ್ಯವಾಗಿ ನಡೆದುಕೊಂಡರೆನ್ನಲಾದ ಪ್ರಕರಣ ಇದು. ಗಿಲ್ ಅವರು ಪಾರ್ಟಿಯೊಂದರಲ್ಲಿ ಇಂಥ ನಡವಳಿಕೆ ತೋರಿದ್ದಾರೆ, ಅವರಿಗೆ ನೀಡಲಾಗಿರುವ ಪದ್ಮಶ್ರೀ ಪ್ರಶಸ್ತಿಯನ್ನು ಕೇಂದ್ರ ಸರಕಾರ ಹಿಂದಕ್ಕೆ ಪಡೆಯಬೇಕು; ಇಂಥ ವ್ಯಕ್ತಿಗಳು ಇಂಥ ಉನ್ನತ ಪ್ರಶಸ್ತಿಗಳಿಗೆ ಅರ್ಹರಲ್ಲವೆಂಬ ಸಂದೇಶ ನಮ್ಮ ಸಮಾಜಕ್ಕೆ ತಲುಪ ಬೇಕು’ ಎಂದಾಕೆ ಆಗ್ರಹಿಸಿದ್ದರು. ಆದರೆ ಛs…ವಾಲ್ ಹಾಗೂ ಗಿಲ್ ಇಬ್ಬರೂ ತಮ್ಮ ಪ್ರಶಸ್ತಿಗಳನ್ನು ತಮ್ಮಲ್ಲೇ ಉಳಿಸಿಕೊಂಡರು. ಪಂಜಾಬ್‌ನಲ್ಲಿನ ಉಗ್ರಗಾಮಿಗಳ ಉಪಟಳವನ್ನು ಮಟ್ಟ ಹಾಕಿದ ಕೀರ್ತಿಯನ್ನು ಸಂಪಾದಿಸಿದ್ದ ಗಿಲ್ ತಮ್ಮ ಧಾಷ್ಟéìದ ವರ್ತನೆಗೂ ಅಷ್ಟೇ ಖ್ಯಾತರು. ರೂಪೆನ್‌ದೇವ್ ಬಜಾಜ್ ಅವರ ಆಗ್ರಹದ ಹೇಳಿಕೆಯನ್ನು ಅಪಹಾಸ್ಯ ಮಾಡಿದ ಅವರು, “ಪದ್ಮಶ್ರಿ ಬಗ್ಗೆ ನನಗೆ ಯಾವ ಚಿಂತೆಯೂ ಇಲ್ಲ; ಕೇಳದೇ ಬಂದ ಗೌರವ ಅದು’ ಎಂದಿದ್ದರು. ಈಗ ಬೆಂಗಳೂರಿನಲ್ಲಿ ದಾಳಿಗೆ ಗುರಿಯಾಗಿರುವ ಸ್ತ್ರೀರೋಗ ತಜ್ಞೆ ಕೂಡ, ತನಗೆ ಬಂದ ಪದ್ಮ ಪ್ರಶಸ್ತಿ ತಾನು ಯಾವುದೇ ರೀತಿಯ ಲಾಬಿ ಮಾಡದೆ ತನಗೆ ದಕ್ಕಿದ್ದೆಂದೂ, ತನ್ನ ವೃತ್ತಿಯಲ್ಲಿನ ಜನಪ್ರಿಯತೆಯನ್ನು ಅದು ಯಾವ ರೀತಿಯಲ್ಲೂ ಹೆಚ್ಚಿಸಿಲ್ಲವೆಂದೂ ಹೇಳಬಹುದೇನೋ.
2013ರಲ್ಲಿ ಆಂಧ್ರ ಪ್ರದೇಶದ ಉಚ್ಚ ನ್ಯಾಯಾಲಯ, ತೆಲುಗು ಚಿತ್ರ ನಟರಾದ ಮೋಹನ್ ಬಾಬು ಹಾಗೂ ಬ್ರಹ್ಮಾನಂದ ಅವರಿಗೆ, ಅವರಲ್ಲಿರುವ ಪದ್ಮಶ್ರೀ ಪ್ರಶಸ್ತಿಯನ್ನು ಸರಕಾರಕ್ಕೆ ಮರಳಿಸುವಂತೆ ಆದೇಶಿಸಿತ್ತು. ಇವರಿಬ್ಬರೂ ತಮ್ಮ ಚಿತ್ರವೊಂದರ ಪ್ರಚಾರದ ವೇಳೆ ಪದ್ಮ ಪ್ರಶಸ್ತಿಯ ಗೌರವವನ್ನು ದುರುಪಯೋಗ ಪಡಿಸಿಕೊಂಡಿ ದ್ದಾರೆಂದು ದೂರಲಾಗಿದ್ದ ಅರ್ಜಿಗೆ ಸಂಬಂಧಿಸಿದ ಪ್ರಕರಣ ಇದು. ಆದರೆ ಇಬ್ಬರೂ ಕೋರ್ಟಿನ ಮಾತಿಗೆ ಸೊಪ್ಪು ಹಾಕಲಿಲ್ಲ.
2010ರಲ್ಲಿ ಕೇಂದ್ರದ ಗೃಹ ಸಚಿವಾಲಯ ಒಂದು ನಿರ್ಧಾರ ತೆಗೆದುಕೊಂಡಿತು. ವೃತ್ತಿಯಲ್ಲಿನ ನೈತಿಕತೆಗೆ ಎಳ್ಳುನೀರು ಬಿಟ್ಟ ಪೊಲೀಸ್ ಅಧಿಕಾರಿಗಳ ಪದಕ ಪಾರಿತೋಷಕಗಳನ್ನು ಹಿಂಪಡೆ ಯುವ ನಿರ್ಧಾರ ಅದು. ರಾಷ್ಟ್ರಪತಿ ಪ್ರಶಸ್ತಿಗೆ ಪಾತ್ರರಾಗಿದ್ದ ಪೊಲೀಸ್ ಅಧಿಕಾರಿಗಳು ಕೂಡ ಕಪ್ಪುಹಣದೊಂದಿಗೆ ಸಿಕ್ಕಿಬಿದ್ದ ದ್ದುಂಟು. ಈ ಹಿಂದೆ ಹರಿಯಾಣದ ಪೊಲೀಸ್ ಮುಖ್ಯಾಧಿಕಾರಿ ಎಸ್.ಪಿ.ಎಸ್. ರಾಠೊಡ್ ಅವರು ಹುಡುಗಿಯೊಬ್ಬಳ ಮಾನ ಹರಣ ಮಾಡಿದರೆಂಬ ಆರೋಪದ ಹಿನ್ನೆಲೆಯಲ್ಲಿ ಅವರಿಗೆ ಬಂದಿದ್ದ ಪ್ರಶಸ್ತಿಗಳು ಹಾಗೂ ಪದಕಗಳನ್ನು ಹಿಂಪಡೆಯಬೇಕೆಂಬ ಕೂಗು ಕೇಳಿಬಂದಿತ್ತು.
ಇನ್ನು ನಮ್ಮ ಕರ್ನಾಟಕದ ರಾಜ್ಯೋತ್ಸವ ಪ್ರಶಸ್ತಿಯತ್ತ ಗಮನ ಹರಿಸೋಣ. ಈ ಪ್ರಶಸ್ತಿಗೆ ಪಾತ್ರರಾಗಬೇಕಾದ ಗಣ್ಯರ ಆಯ್ಕೆಗಾಗಿ ಕರ್ನಾಟಕ ಸರಕಾರ ಪ್ರತಿ ವರ್ಷ ವಿಶೇಷ ಸಮಿತಿ ಯೊಂದನ್ನು ಅಸ್ತಿತ್ವಕ್ಕೆ ತರುತ್ತಿರುವುದು ಈಚಿನ ವರ್ಷಗಳಲ್ಲಷ್ಟೆ. ಪುರಸ್ಕಾರ ಯೋಗ್ಯ ವ್ಯಕ್ತಿಗಳ ಕೊಡುಗೆಗಳನ್ನು ಕೂಲಂಕಷವಾಗಿ ಪರಿಶೀಲಿ ಸುವುದು ಈ ಸಮಿತಿಯ ಕೆಲಸ. ಹಿಂದೆಲ್ಲ
ಇಂಥ ಸಮಿತಿ ಯೆಂಬುದೊಂದು ಇರಲಿಲ್ಲ; ಪ್ರಶಸ್ತಿ ನೀಡಿಕೆಯ ದಿನವಾದ ನವೆಂಬರ್ ಒಂದರಂದು ಕೂಡ ಮುಖ್ಯಮಂತ್ರಿಯ ಮರ್ಜಿಗನು ಸಾರವಾಗಿ ಪ್ರಶಸ್ತಿ ಪುರಸ್ಕೃತರ ಯಾದಿಗೆ ಕೆಲ ಹೆಸರುಗಳು ಸೇರ್ಪಡೆಗೊಂಡದ್ದಿದೆ. ಎಸ್. ಬಂಗಾರಪ್ಪ ಅವರು ಮುಖ್ಯಮಂತ್ರಿ ಯಾಗಿದ್ದಾಗ ದೂರದರ್ಶನದ ಮಹಿಳಾ ಅಧಿಕಾರಿಯೊಬ್ಬರಿಗೆ ರಾಜ್ಯೋತ್ಸವ ಪ್ರಶಸ್ತಿಯನ್ನು ನೀಡಲಾಗಿತ್ತು. ಮುಂದೆ ಕೆಲವೇ ದಿನಗಳಲ್ಲಿ ಆಕೆ ಲಂಚ ಸ್ವೀಕರಿಸುತ್ತಿದ್ದಾಗಲೇ ಸಿಬಿಐಯ ಬಲೆಗೆ ಬಿದ್ದರು!
ಅರಕೆರೆ ಜಯರಾಮ್
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.