ಸಿನಿ ರಂಗದ ಮೇಲೆ ಐಟಿ ದಾಳಿ: ಇಷ್ಟೇಕೆ ಮಹತ್ವ?
Team Udayavani, Jan 9, 2019, 1:57 AM IST
ತಲೆಯ ಮೇಲೆ ಬಾಂಬು ಬಿದ್ದವರಂತೆ ಆಘಾತಗೊಂಡವರೆಂದರೆ, ಅತಿ ಪ್ರಶಂಸೆಯೊಂದಿಗೆ ಕೆಲ ಸಿನಿ ಕಲಾವಿದರುಗಳನ್ನು ದೇವತೆಗಳಂತೆ ಬಿಂಬಿಸಿರುವ ಕನ್ನಡ ಟಿ.ವಿ. ಪತ್ರಕರ್ತರುಗಳ ಪೈಕಿ ಕೆಲವರು ಮಾತ್ರ. ಇಂಥ ಪತ್ರಕರ್ತರು ಅಥವಾ ಟಿ.ವಿ. ವಾಹಿನಿಗಳ ಮಾಲೀಕರು ಇಂಥ ನಟ ನಟಿಯರ ಜನ್ಮ ದಿನ, ವಿವಾಹ ಸಮಾರಂಭಗಳನ್ನು ಮಾತ್ರವಲ್ಲ, ಈ ನಟನಟಿಯರ ಮನೆ ಜಗಳಗಳನ್ನು ದೊಡ್ಡ ರೀತಿಯಲ್ಲಿ ಪ್ರಸಾರಿಸುತ್ತಿದ್ದವರು. ನಮ್ಮ ವೀಕ್ಷಕರಿಗೆ ಇವೆಲ್ಲ ಇಷ್ಟ ಎಂಬ ರೀತಿಯಲ್ಲಿ ಅವರೆಲ್ಲ ಇಂಥ ಪ್ರಚಾರಾವೇಶವನ್ನು ತೋರುತ್ತ, ತೋರಿಸುತ್ತ ಬಂದಿದ್ದಾರೆ.
ಕನ್ನಡದ ಕೆಲ ಚಿತ್ರ ನಟರು ಹಾಗೂ ಚಿತ್ರೋದ್ಯಮಕ್ಕೆ ಸಂಬಂಧಿಸಿದ ಇನ್ನಿತರ ಕೆಲವರ ನಿವಾಸಗಳ ಮೇಲೆ ನಡೆದಿರುವ ಆದಾಯ ಕರ ಅಧಿಕಾರಿಗಳ ದಾಳಿ ಘಟನೆಗಳನ್ನು ಕುರಿತಂತೆ ಕರ್ನಾಟಕದ ಜನತೆ ಸ್ವಲ್ಪ ಮಟ್ಟಿನ ಸಂಯಮದಿಂದಲೇ ಪ್ರತಿಕ್ರಿಯಿಸಿದ್ದಾರೆ. ಚಿತ್ರರಂಗದ ಕೆಲ ವ್ಯಕ್ತಿಗಳ ಮೇಲೆ ಕನಿಷ್ಠ ಪಕ್ಷ ಚಿತ್ರವೀಕ್ಷಕರಲ್ಲಿ ಇನ್ನೂ ಕಂಡು ಬರುತ್ತಿರುವ ಆರಾಧನಾ ಭಾವವನ್ನು ಪರಿಗಣಿಸಿದರೆ ರಾಜ್ಯದಲ್ಲಿ ಈ ದಾಳಿಗಳಿಗೆ ಸಂಬಂಧಿಸಿದಂತೆ ಯಾವುದೇ ತೆರನ ಗಂಭೀರ ಪ್ರತಿಭಟನೆಗಳು ನಡೆದಿಲ್ಲ ಎಂದುಕೊಳ್ಳುವಂತಾಗಿದೆ.
ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿಯವರು ಸ್ವತಃ ಈ ಚಿತ್ರೋದ್ಯಮದ ಭಾಗವೇ ಆಗಿದ್ದರೂ ಅವರು ಐಟಿ ದಾಳಿಗಳನ್ನು ಕುರಿತಂತೆ ನೀಡಿದ ಪ್ರತಿಕ್ರಿಯೆಯ ರೀತಿ ಶ್ಲಾಘನೀಯವೆಂದೇ ಹೇಳಬೇಕು. ಚಲನಚಿತ್ರ ಕಲಾವಿದರು ಅಷ್ಟೇನೂ “ವಿಶೇಷ ವ್ಯಕ್ತಿಗಳು’ ಎನ್ನುವಂತಿಲ್ಲ ಎಂದವರು ಹೇಳಿರುವುದಾಗಿ ವರದಿಗಳು ಹೇಳುತ್ತವೆ. ಬಿಜೆಪಿಯ ವಿರುದ್ಧ ಅವರದೇ ಪಕ್ಷ ಅಸಮ್ಮತಿ ಸೂಚಕ ನಿಲುವನ್ನು ಪ್ರಕಟಿಸಿರುವ ಹೊರತಾಗಿಯೂ ಈ ದಾಳಿಯಲ್ಲಿ ರಾಜಕೀಯ ಹುನ್ನಾರವಿದೆಯೆಂದು ತಮಗೆ ಅನಿಸುತ್ತಿಲ್ಲ ಎಂದಿದ್ದಾರೆ. ಐಟಿ ಅಧಿಕಾರಿಗಳು ಅವರ ಕರ್ತವ್ಯ ನಿರ್ವಹಿಸಿದ್ದಾರಷ್ಟೆ ಎಂದೂ ಅವರು ಹೇಳಿದ್ದಾರೆ.
1984ರಲ್ಲಿ ಏನಾಯಿತು, ನೆನಪಿಸಿಕೊಳ್ಳಿ. ಆ ವರ್ಷದ ಮಾರ್ಚ್‌ನಲ್ಲಿ ಕನ್ನಡದ ವರನಟ ರಾಜ್‌ಕುಮಾರ್ ಮತ್ತಿತರ ಚಲನಚಿತ್ರ ಕಲಾವಿದರು ಗೋಕಾಕ ವರದಿ ಚಳವಳಿಯಲ್ಲಿ ಪಾಲ್ಗೊಂಡಿದ್ದ ಸಂದರ್ಭದಲ್ಲಿ ರಾಜ್ಯಕ್ಕೆ ರಾಜ್ಯವೇ ಆವೇಶಗೊಂಡಿತ್ತು. ಅದೇ ರೀತಿ 2000ದ ಜುಲೈಯಲ್ಲಿ ಕಾಡುಗಳ್ಳ ವೀರಪ್ಪನ್ ರಾಜ್‌ಕುಮಾರ್‌ರನ್ನು ಅಪಹರಿಸಿದ್ದ ಸಂದರ್ಭದಲ್ಲೂ, ಮುಂದೆ 2006ರ ಏಪ್ರಿಲ್ 12ರಂದು ರಾಜ್‌ಕುಮಾರ್ ಕೊನೆಯುಸಿರೆಳೆದಾಗ ಕೂಡ ರಾಜ್ಯದ ಜನರು ಆವೇಶಭರಿತರಾಗಿ ಪ್ರತಿಕ್ರಿಯಿಸಿದ್ದರು.
ಇದೀಗ ನಡೆದಿರುವ ಆದಾಯ ತೆರಿಗೆ ಅಧಿಕಾರಿಗಳ ದಾಳಿಯನ್ನು ಪ್ರಶ್ನಿಸಿರುವವರು ಚಿತ್ರನಟರ ಕಟ್ಟಾ ಅಭಿಮಾನಿಗಳಷ್ಟೆ. ಆದರೂ ಮೇಲೆ ತಿಳಿಸಿದ ಸಂದರ್ಭಗಳಲ್ಲಿ ಆದಂತೆ ಈ ಬಾರಿ ಜನರು ರಸ್ತೆಗಿಳಿದು ರೋಷಾವೇಶದ ಪ್ರತಿಭಟನೆ ನಡೆಸಲಿಲ್ಲ. ತಲೆಯ ಮೇಲೆ ಬಾಂಬು ಬಿದ್ದವರಂತೆ ಆಘಾತಗೊಂಡವರೆಂದರೆ, ಅತಿ ಪ್ರಶಂಸೆಯೊಂದಿಗೆ ಕೆಲ ಸಿನಿ ಕಲಾವಿದರುಗಳನ್ನು ದೇವತೆಗಳಂತೆ ಬಿಂಬಿಸಿರುವ ಕನ್ನಡ ಟಿ.ವಿ. ಪತ್ರಕರ್ತರುಗಳ ಪೈಕಿ ಕೆಲವರು ಮಾತ್ರ. ಇಂಥ ಪತ್ರಕರ್ತರು ಅಥವಾ ಟಿ.ವಿ. ವಾಹಿನಿಗಳ ಮಾಲೀಕರು ಇಂಥ ನಟ ನಟಿಯರ ಜನ್ಮ ದಿನ, ವಿವಾಹ ಸಮಾರಂಭಗಳನ್ನು ಮಾತ್ರವಲ್ಲ, ಈ ನಟನಟಿಯರ ಮನೆ ಜಗಳಗಳನ್ನು ದೊಡ್ಡ ರೀತಿಯಲ್ಲಿ ಪ್ರಸಾರಿಸುತ್ತಿದ್ದವರು. ನಮ್ಮ ವೀಕ್ಷಕರಿಗೆ ಇವೆಲ್ಲ ಇಷ್ಟ ಎಂಬ ರೀತಿಯಲ್ಲಿ ಅವರೆಲ್ಲ ಇಂಥ ಪ್ರಚಾರಾವೇಶವನ್ನು ತೋರುತ್ತ, ತೋರಿಸುತ್ತ ಬಂದಿದ್ದಾರೆ. ಇಂಥ ಪ್ರಸಾರ ಸರ್ಕಸ್ಸುಗಳು ಅವರ ಟಿಆರ್‌ಪಿ ಪ್ರಮಾಣವನ್ನು ಏರುಮುಖಗೊಳಿಸಿರುವುದೇ ನಿಜವಾದರೆ ಟಿಆರ್‌ಪಿ ವ್ಯವಸ್ಥೆಯಲ್ಲೇ ಏನೋ ದೋಷವಿದೆ ಎನ್ನಬೇಕಾಗುತ್ತದೆ. ಸಂಕ್ಷಿಪ್ತವಾಗಿ ಹೇಳಬೇಕೆಂದರೆ ಇಂಥ ಪತ್ರಕರ್ತರ ಪಾಡು ಮಾಡಿದ್ದುಣ್ಣೋ ಮಹಾರಾಯ ಎಂಬಂತಾಗಿದೆ. ಕಳೆದ ಕೆಲ ವರ್ಷಗಳಲ್ಲಿ ದೇಶದ ಪತ್ರಿಕೋದ್ಯಮ/ಪತ್ರಿಕೋದ್ಯೋಗದ ಗುಣಮಟ್ಟ ಕುಸಿಯುತ್ತ ಬಂದಿದೆ. ಗ್ಲಾಮರ್, ಥಳಕುಬಳಕು ಹಾಗೂ ಅತಿ ಪ್ರಶಂಸೆಗೆ ಮಣೆ ನೀಡಲಾಗಿದೆ. ಸಿನಿಮಾಗಳ ಮೇಲೆ ವಿಮಶಾìತ್ಮಕ ಲೇಖನಗಳಾಗಲಿ, ಅವುಗಳ ಮೇಲಿನ ವಿಮರ್ಶಕ ಸಂವಾದ ಚರ್ಚೆಗಳಾಗಲಿ ಆಗುವುದೇ ಅಪರೂಪ ಎಂಬಂತಾಗಿದೆ. “ಬಿ’ ಗ್ರೇಡ್ ಚಿತ್ರಕಲಾವಿದರನ್ನು ತಾರೆಯರೆಂದು ಬಿಂಬಿಸಲಾಗುತ್ತಿದೆ.
ಇತ್ತೀಚಿನ ವರ್ಷಗಳಲ್ಲಿ ಪ್ರತಿವರ್ಷವೆಂಬಂತೆ ನಡೆಯುತ್ತಿರುವ ಬೆಂಗಳೂರು ಚಲನಚಿತ್ರೋತ್ಸವದಿಂದ ಇಂಥ ಕೆಲ ಪತ್ರಕರ್ತರು ಹಾಗೂ ಕನ್ನಡ ಚಿತ್ರೋದ್ಯಮ ಏನನ್ನೂ ಕಲಿತುಕೊಂಡಿಲ್ಲ. ಆದಾಯ ತೆರಿಗೆ ಅಧಿಕಾರಿಗಳ ದಾಳಿ “ಕನ್ನಡ ಸಿನೆಮಾ ರಂಗದ ಮೊದಲ ಕುಟುಂಬ’ದ ಪ್ರತಿಷ್ಠೆಗೆ ದೊಡ್ಡ ಪೆಟ್ಟನ್ನೇ ನೀಡಿದೆ. ಡಾ| ರಾಜ್ ಕುಮಾರ್ ಅವರ ಬಗ್ಗೆ ಕನ್ನಡಿಗರಲ್ಲಿ ಇನ್ನೂ ಅದೇ ಗೌರವ ಉಳಿದುಕೊಂಡಿದೆ- ಒಬ್ಬ ನಟನಾಗಿ ಮಾತ್ರವಲ್ಲ, ಒಬ್ಬ ಆದರ್ಶ ಮಾನವ ಎಂಬ ನೆಲೆಯಲ್ಲಿ. ಅವರು ಮರೆಯಾದ 12 ವರ್ಷಗಳ ಬಳಿಕವೂ ಅವರ ಮೇಲಿನ ಜನತೆಯ ಆದರಾಭಿಮಾನ ಮಾಸಿಲ್ಲ. ರಾಜಕೀಯ ರಂಗದ ಕೊಳೆ-ಕೆಸರಿನ ವಾತಾವರಣವನ್ನು ಪ್ರವೇಶಿಸಲು ನಿರಾಕರಿಸುವ ಮೂಲಕ ಅವರು ತಮ್ಮ ಸ್ವತ್ಛ – ಶುಭ್ರ ವರ್ಚಸ್ಸನ್ನು ಕಾಯ್ದುಕೊಂಡರು. ಅವರು ಗೋಕಾಕ್
ಚಳವಳಿ ಮತ್ತಿತರ ಆಂದೋಲನಗಳನ್ನು ಬೆಂಬಲಿಸಿದ್ದರೆಂದರೆ, ಇದಕ್ಕೆ ಕಾರಣ ಇತರರ ತಪ್ಪು ಮಾರ್ಗದರ್ಶನವೇ ಆಗಿತ್ತು. ಅವರ ಪುತ್ರರು ಇಂದು ಜನಪ್ರಿಯ ಚಿತ್ರನಟರಾಗಿದ್ದಾರೆಂದರೆ ಇದಕ್ಕೆ ಕಾರಣ ಬಹುತೇಕ ರಾಜ್‌ಕುಮಾರ್ ಅವರೇ. ರಾಜ್‌ಕುಮಾರ್ ಅಪಹರಣ ಪ್ರಕರಣ, ಅವರುಗಳಿಗೆ ಅಗಾಧ ಪ್ರಮಾಣದಲ್ಲಿ ಸಹಾನುಭೂತಿ ದೊರಕಿಸಿಕೊಟ್ಟಿತು. ಆಕಾಶವಾಣಿಯ ಮೂಲಕ ರಾಜ್ ಅವರ ಪುತ್ರರಲ್ಲೊಬ್ಬರಾದ ರಾಘವೇಂದ್ರ ರಾಜ್‌ಕುಮಾರ್ ಅವರು ವೀರಪ್ಪನ್‌ಗೆ ಮಾಡಿಕೊಂಡ ಭಾವ ತುಂದಿಲ ಮನವಿಯನ್ನು ಜನರು ಇನ್ನೂ ನೆನಪು ಮಾಡಿಕೊಳ್ಳುತ್ತಿದ್ದಾರೆ.
ರಾಜ್ ಅವರ ಪುತ್ರರಿಬ್ಬರ ನಿವಾಸಗಳ ಮೇಲೆ ನಡೆದಿರುವ ಐಟಿ ದಾಳಿಯ ವಿವರ ಇನ್ನೂ ಬಯಲಾಗಬೇಕಷ್ಟೆ. ಹೀಗಿದ್ದರೂ ಅವರು ತಮ್ಮ ಸಂಪಾದನೆ ಹಾಗೂ ಸಂಪತ್ತು ಕುರಿತಂತೆ ಸಂದೇಹವೇಳಲು ಅವಕಾಶ ಮಾಡಿಕೊಡಬಾರದಿತ್ತು. ಕನ್ನಡ ಸಿನಿಮಾ ಮಂದಿಯ ಮೇಲಿನ ಈ ಐಟಿ ದಾಳಿಗೆ ಮಹತ್ವ ಬಂದಿದೆಯಾದರೆ, ಇದಕ್ಕೆ ಕಾರಣ, ಇದು “ಪ್ರಥಮ ಕುಟುಂಬ’ವನ್ನು ಒಳಗೊಂಡಿರುವುದೇ ಆಗಿದೆ.
ನಮ್ಮ ಕರ್ನಾಟಕದಲ್ಲಿ ಮಾತ್ರವಲ್ಲ, ಇಡೀ ದೇಶದಲ್ಲಿ ಚಿತ್ರೋದ್ಯಮ ನಿಂತಿರುವುದು ಕಾಳಧನದ ಬುನಾದಿಯ ಮೇಲೆ ಎಂಬುದೇ ಎಲ್ಲರಲ್ಲೂ ಇರುವ ಸಾಮಾನ್ಯ ತಿಳಿವಳಿಕೆ. ಅಷ್ಟೇ ಅಲ್ಲ, ಕೆಲ ಅಥರ್ವಣ ವ್ಯಕ್ತಿಗಳು ತಮ್ಮ ಕಳ್ಳ ಹಣವನ್ನು ಬಿಳಿ ಮಾಡುವ ಉದ್ದೇಶದಿಂದಲೇ ಕನ್ನಡ ಚಿತ್ರಗಳನ್ನು ನಿರ್ಮಿಸುತ್ತಿದ್ದಾರೆನ್ನುವ ಮಾತೂ ಕೇಳಿಬರುತ್ತಿದೆ. ಕೆಲ ಸಮಾಜ ವಿರೋಧಿ ಶಕ್ತಿಗಳು ವಾಮಮಾರ್ಗದಿಂದ ಕಲೆ ಹಾಕಿದ ಸಂಪತ್ತಿನಿಂದಲೇ ಇಂಥ ಕೆಲವು ಚಿತ್ರಗಳ ನಿರ್ಮಾಣವಾಗುತ್ತಿವೆಂಬಂಥ ಮಾತುಗಳೂ ಇವೆ. ಇಂಥ ಚಿತ್ರ ನಿರ್ಮಾಣಗಳಿಗೆ ನೋಟು ಅಮಾನ್ಯಿàಕರಣ ಯಾವ ದುಷ್ಪರಿಣಾಮವನ್ನೂ ಉಂಟು ಮಾಡಿಲ್ಲ! ಕುತೂಹಲಕ್ಕಾಗಿ ಸಂಗತಿಯೊಂದಿದೆ – ಹಿಂದಿ ಚಿತ್ರ ನಿರ್ದೇಶಕ ಈಗ “ರೈಡ್’ ಎಂಬ ಸಿನಿಮಾವನ್ನು ನಿರ್ಮಿಸುತ್ತಿದ್ದಾರೆ. ಚಿತ್ರ ತಾರೆಯರ ಹಾಗೂ ಚಿತ್ರ ನಿರ್ಮಾಪಕರ ಮೇಲೆ ನಡೆಯುವ ಆದಾಯಕರ ಅಧಿಕಾರಿಗಳ ದಾಳಿಗಳೇ ಇದರ ಕಥಾವಸ್ತು. ಹಿಂದಿ ಚಿತ್ರರಂಗದಲ್ಲಿ ಇಂಥ ದಾಳಿಗಳು ಸಾಮಾನ್ಯ ಎಂಬಂತಾಗಿದೆ. ಹಾಗಿದ್ದರೆ ಅವರ ಬಗ್ಗೆ ಜನರಲ್ಲೇಕೆ ರೇಜಿಗೆ ಹುಟ್ಟಿಲ್ಲ? ಯಾಕೆಂದರೆ ಅವರು ತಮ್ಮನ್ನು ಯಾವುದೇ ರಾಜ್ಯದೊಂದಿಗೆ ಗುರುತಿಸಿಕೊಂಡಿಲ್ಲ.
ಕನ್ನಡ ಸಿನಿ ತಾರೆಯರು ಹಾಗಲ್ಲ. ಅವರು ಕನ್ನಡಿಗ ಸಮುದಾಯದ ಅಕ್ಷರಶಃ ಅವಿಭಾಜ್ಯ ಅಂಗವೇ ಆಗಿದ್ದಾರೆ. ಹಿಂದಿ ಚಿತ್ರೋದ್ಯಮ ಬಾಲಿವುಡ್ (ಮುಂಬಯಿ)ನಲ್ಲಿ ಕೇಂದ್ರೀಕೃತ ವಾಗಿರುವುದು ನಿಜವೇ ಹೌದಾದರೂ ಹೆಚ್ಚಿನ ತಾರೆಯರು ಬಹುತೇಕ ಹಿಂದಿ ಭಾಷಿಕ ರಾಜ್ಯಗಳಿಗೆ ಸೇರಿದವರು. ಇವರ ನಡುವೆ ಮಹಾರಾಷ್ಟ್ರದವರೋ, ದಕ್ಷಿಣ ಭಾರತದ ರಾಜ್ಯಗಳವರೋ ಇಲ್ಲ ಎಂದಲ್ಲ. ಇನ್ನೊಂದು ಕುತೂಹಲಕಾರಿ ಅಂಶವೆಂದರೆ ಹಿಂದೀ ಚಿತ್ರಗಳು ಲಕ್ನೋ, ಜೈಪುರ, ಚಂಡೀಗಢ, ದಿಲ್ಲಿ ಅಥವಾ ಭೋಪಾಲ್‌ಗಳಂಥ ಜಾಗಗಳಲ್ಲಿ ನಿರ್ಮಿತವಾಗುತ್ತಿಲ್ಲ. ಈ ಹಿಂದೆಲ್ಲ ಕಲ್ಕತ್ತಾ ಹಾಗೂ ಇಂದಿನ ಪಾಕಿಸ್ಥಾನದಲ್ಲಿರುವ ಲಾಹೋರ್‌ಗಳು ಚಿತ್ರ ನಿರ್ಮಾಣದ ಮುಖ್ಯ ಕೇಂದ್ರಗಳಾಗಿದ್ದವು.
ಇತ್ತೀಚೆಗೆ ನಡೆದ ದಾಳಿಗಳು ಹಾಗೂ ಕಲೆ ಹಾಕಲಾದ ಸಂಪತ್ತಿನ ಪ್ರಮಾಣ ಏನನ್ನು ಸೂಚಿಸುತ್ತದೆ? ಕನಿಷ್ಠ ಕೆಲ ಕನ್ನಡ ಚಿತ್ರ ತಾರೆಯರಾದರೂ ಸಂಪತ್ತಿನಲ್ಲಿ ಓಲಾಡುತ್ತಿದ್ದಾರೆ ಎಂಬ ಸತ್ಯವನ್ನು! ಇವರಲ್ಲೊಬ್ಬರು ತಮ್ಮ ವಿಚ್ಛೇದಿತ ಪತ್ನಿಗೆ 18 ಕೋ. ರೂ.ಗಳಷ್ಟು ದೊಡ್ಡ ಮೊತ್ತವನ್ನು ಪಾವತಿಸಿದ್ದಾರೆಂಬ ವರದಿಯನ್ನು ನೋಡಿದಾ ಕ್ಷಣವೇ ಐಟಿ ಅಧಿಕಾರಿಗಳು ಎಚ್ಚೆತ್ತುಕೊಳ್ಳಬೇಕಿತ್ತು. ಈ ವ್ಯಕ್ತಿ ತನ್ನಲ್ಲಿರುವ ಸಂಪತ್ತನ್ನು ಪ್ರದರ್ಶಿಸಲೆಂದೇ ಆ ರೀತಿ ಸಾರ್ವಜನಿಕವಾಗಿ ಆ ಪಾವತಿಯನ್ನು ಮಾಡಿದರೆ? ಇಂದಿನ ಕನ್ನಡ ಚಲನಚಿತ್ರ ಕಲಾವಿದರು ಈ ಹಿಂದಿನವರಂತಲ್ಲ. ಅಂದಿನವರಲ್ಲಿ ಹೆಚ್ಚಿನವರು ತಾವೇನನ್ನು ಸಂಪಾದಿಸಿದ್ದಾರೋ ಅದೆಲ್ಲವನ್ನೂ ಕಳೆದುಕೊಂಡಿದ್ದರು. ಒಂದು ಕಾಲದ ಸಿನಿ ನಾಯಕಿ ಪಂಢರೀ ಬಾಯಿ ಬಿಡಿಎದ ಒಂದು ತುಂಡು ನಿವೇಶನ ಕೊಡಿಸಿರೆಂದು ಬೇಡುವುದಕ್ಕಾಗಿ ಮಾಜಿ ಮುಖ್ಯಮಂತ್ರಿಗಳ ಜನತಾದರ್ಶನ ಕಾರ್ಯಕ್ರಮದಲ್ಲಿ ಕಾಣಿಸಿಕೊಳ್ಳಬೇಕಾಯಿತು. ಆಕೆಗೆ ಆ ಭಾಗ್ಯವನ್ನು ದೊರಕಿಸಲಾಯಿತೇ, ಇಲ್ಲವೇ, ಯಾರಿಗೂ ಗೊತ್ತಿಲ್ಲ. ನಿವೇಶನ ಹಂಚಿಕೆ ಅಥವಾ ಜಾಗೀರು ನಿವೇಶನಗಳ ಬಟವಾಡೆಯಲ್ಲಿ ತಮಗಿರುವ ವಿವೇಚನಾಧಿಕಾರವನ್ನು ನಮ್ಮ ಮುಖ್ಯಮಂತ್ರಿಗಳು ಸಾಮಾನ್ಯವಾಗಿ ದುರುಪಯೋಗ ಪಡಿಸಿಕೊಂಡಿರುವುದನ್ನು ಕಂಡಿದ್ದೇವೆ. ಗುಬ್ಬಿ ವೀರಣ್ಣ, ಆರ್. ನಾಗೇಂದ್ರ ರಾವ್ ಅಥವಾ ಎಂ.ವಿ. ರಾಜಮ್ಮ ಮೊದಲಾದ ಹಳೆಗಾಲದ ಮಹಾ ಚಿತ್ರತಾರೆಯರೆಲ್ಲರೂ ಬಡತನದ ಬೇಗೆಯುಂಡವರೇ, ಇವರಲ್ಲಿ ಯಾರಿಗೂ ಒಂದು ಸಾರ್ಥಕ ಸ್ಮಾರಕ ನಿರ್ಮಿಸುವ ಕೆಲಸ ನಮ್ಮ ಯಾವ ಸರಕಾರದಿಂದಲೂ ಆಗಿಲ್ಲ.
ಬಹುಮುಖೀ ಅಭಿನಯ ವಿಶಾರದರಾಗಿದ್ದ ಬಾಲಕೃಷ್ಣ ಅವರಿಗೆ ಸೇರಿದ್ದ ನಿವೇಶನದಲ್ಲಿ ನಟ ವಿಷ್ಣು ವರ್ಧನರಿಗಾಗಿ ಒಂದು ಸ್ಮಾರಕ ನಿರ್ಮಿಸಲು ಕೆಲ ವ್ಯಕ್ತಿಗಳು ಮುಂದಾಗಿದ್ದಾರೆಂಬ ವರದಿಯನ್ನು ಓದಿದರೆ ಎಂಥವರಿಗೂ ದುಃಖವಾಗುತ್ತದೆ. ಇಂದಿನ ಸಿನಿ ಕಲಾವಿದರಿಗೆ ಆಡಂಬರದ ಪ್ರದರ್ಶನವೆಂದರೆ ಇಷ್ಟ; ತಮ್ಮನ್ನು ತೀವ್ರವಾಗಿ ಪ್ರೀತಿಸುವ ಅಭಿಮಾನಿಗಳನ್ನು ದೂರವಿರಿಸಬೇಕು ಎಂಬುದೇ ಅವರ ಬಯಕೆ. ಅವರ ಜನ್ಮದಿನೋತ್ಸವಗಳಿಗೆ ಕೇವಲ ಕೆಲವೇ ಆಯ್ದ ಅಭಿಮಾನಿಗಳಿಗಷ್ಟೇ ಸ್ವಾಗತ. ಮೊನ್ನೆ ದಾಳಿ ನಡೆಸಲಾಗಿರುವ ಚಿತ್ರಕಲಾವಿದರೊಬ್ಬರು ಪಂಚತಾರಾ ಹೊಟೇಲು ಒಂದರಲ್ಲಿ ಒಂದು ಖಾಯಂ “ಕಾಟೇಜ್’ ಕೂಡ ಹೊಂದಿರುವವರು.
ದಾಳಿಗೆ ಪಕ್ಕಾಗಿರುವ ಚಿತ್ರಕಲಾವಿದರು ಮತ್ತಿತರರನ್ನು ಟಿ.ವಿ. “ವೀಕ್ಷಕ ವಿವರಣಕಾರರು’ ವಹಿಸಿಕೊಂಡು ಮಾತಾಡಿದ್ದು ತುಂಬ ಮೋಜಿನ ಸಂಗತಿಯಾಗಿತ್ತು. ಇವರಲ್ಲಿ ಒಬ್ಬರಂತೂ ಈ ಸಿನಿಮೇರು ವ್ಯಕ್ತಿಗಳು ಸಮಾಜ ಕಲ್ಯಾಣ ಸೇವೆಯಲ್ಲಿರುವವರೆಂದೂ, ಇವರ ಮೇಲೆ ದಾಳಿ ನಡೆಸುವ ಅಗತ್ಯವಿರಲಿಲ್ಲವೆಂದೂ ಅಪ್ಪಣೆ ಕೊಡಿಸಿದ್ದಾರೆ. ಟಿ.ವಿ. ವಿವರಣಕಾರ ಉಲ್ಲೇಖೀಸಿದ ಆ ಕಲಾವಿದ ಹಾಗೆ ಸಮಾಜ ಸೇವೆಗೆ ಮುಂದಾದುದು ತನ್ನ ತೆರಿಗೆ ಭಾರವನ್ನು ತಗ್ಗಿಸುವುದಕ್ಕಾಗಿಯೇ ಇರಬಹುದು ವಿನಾ ಸಮಾಜದ ನತದೃಷ್ಟರ ಮೇಲಿನ ಪ್ರೀತಿಯಿಂದಂತೂ ಖಂಡಿತಾ ಇರಲಾರದು.
ಕನ್ನಡ ಚಿತ್ರರಂಗ ಇನ್ನೂ ಚೇತರಿಸಿಕೊಳ್ಳುತ್ತಿದೆಯಷ್ಟೆ; ಇಂಥ ಹೊತ್ತಿನಲ್ಲಿ ಇಂಥ ದಾಳಿ ನಡೆಸಕೂಡದಿತ್ತು ಎಂದು ಇವರ ಕೆಲ
ಟಿ. ವಿ. ವಿವರಣಕಾರರು ದುಃಖ ವ್ಯಕ್ತಪಡಿಸಿದ್ದಾರೆ. ಕೆ.ಜಿ.ಎಫ್. ಚಿತ್ರ ಗಲ್ಲಾ ಪೆಟ್ಟಿಗೆಯ ದಾಖಲೆಯನ್ನು ಮುರಿದು ಅಭೂತಪೂರ್ವ ಸಾಧನೆಯನ್ನು ದಾಖಲಿಸುತ್ತಿರುವುದರಿಂದಲೇ ಈ ದಾಳಿ ನಡೆದಿದೆ ಎಂಬ ಮಾತೂ ಕೇಳಿಬಂದಿದೆ. ಇಂಥ ಹೇಳಿಕೆ ನೀಡಿದವರು ಗಮನಿಸಲಿ- ದಾಳಿಗೆ ಗುರಿಯಾದದ್ದು ಈ ಚಿತ್ರದಲ್ಲಿ ಕೆಲಸ ಮಾಡಿದವರಷ್ಟೇ ಅಲ್ಲ.
ಇನ್ನು ಕೆಲವರು ತಮ್ಮ ತರ್ಕವನ್ನು ಇನ್ನಷ್ಟು ವಿಶಾಲವಾಗಿ ಚಾಚಿ ಪ್ರಧಾನಿ ನರೇಂದ್ರ ಮೋದಿಯವರು ಇದಕ್ಕೆಲ್ಲ ಕಾರಣ ಎಂದು ಗೂಬೆ ಕೂರಿಸಿದ್ದಾರೆ. ವಾಸ್ತವವಾಗಿ ಪ್ರಧಾನಿ ಮೋದಿ ಇಂಥ ಕೆಲಸವನ್ನು ಇನ್ನಷ್ಟು ವ್ಯಾಪಕವಾಗಿ ಮಾಡಬೇಕು. ಆ ಪಕ್ಷ – ಈ ಪಕ್ಷದವರೆನ್ನದೆ ರಾಜ್ಯದ ಅಥವಾ ಹೊರರಾಜ್ಯಗಳ ರಾಜಕಾರಣಿಗಳ ನಿವಾಸಗಳು, ಆಸ್ತಿಪಾಸ್ತಿಗಳು ಹಾಗೂ ನಿವೇಶನಗಳ ಮೇಲೆ ಕೂಡ ದಾಳಿ ನಡೆಯಬೇಕು. ಐಟಿ ಅಧಿಕಾರಿಗಳು ಮೋದಿ ಅಥವಾ ಕೇಂದ್ರ ಸಚಿವರುಗಳ ಪೈಕಿ ಯಾರೊಬ್ಬರ ಸೂಚನೆ ಮೇರೆಗೆ ಈ ದಾಳಿಯನ್ನು ನಡೆಸಿರದಿದ್ದಲ್ಲಿ, ಸ್ವಯಂ ಪ್ರೇರಣೆಯಿಂದಲೇ ಇಂಥ ಕಾರ್ಯಾಚರಣೆಯನ್ನು ನಡೆಸಿದ್ದಾರೆಂದಾದಲ್ಲಿ ನಿಜಕ್ಕೂ ಅವರು ಅಭಿನಂದನಾರ್ಹರು. ವೇತನ ಪಡೆಯುತ್ತಿರುವ ವರ್ಗ ತೆರಿಗೆ ತಪ್ಪಿಸಿಕೊಳ್ಳುವುದು ಸಾಧ್ಯವಿಲ್ಲವೆನ್ನುವುದಾದರೆ, ಸರಕಾರ ಇತರ ತೆರಿಗೆ ವಂಚಕ ವರ್ಗಗಳಿಗೆ ವಿನಾಯಿತಿ ನೀಡಬೇಕೆನ್ನುವುದರಲ್ಲಿ ಅರ್ಥವಿಲ್ಲ. ಸಿನಿ ಕಲಾವಿದರೂ ನಮ್ಮ ನಿಮ್ಮಂತೆ ಮನುಷ್ಯರೇ; ಅವರು ದೊಡ್ಡವರಾಗಿ ಕಂಡುಬರುವುದು ಅವರ ಮೇಕಪ್‌ನಿಂದ ಮಾತ್ರ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Man Fined: ಹೀಗೂ ಉಂಟೇ…! ಹೆಲ್ಮೆಟ್ ಧರಿಸಿಲ್ಲ ಎಂದು ಪಾದಚಾರಿಗೆ ದಂಡ ವಿಧಿಸಿದ ಪೊಲೀಸ್
ಮುಧೋಳ: ಮದುವೆಯಾದ ಒಂದೇ ತಿಂಗಳಲ್ಲಿ ಪತ್ನಿ ಪರಾರಿ… ಮದುವೆ ಮಾಡಿಸಿದ ಬ್ರೋಕರ್ ಗಳೂ ನಾಪತ್ತೆ
Alcohol: ಬಿಯರ್ ದರ ಏರಿಕೆ ಚರ್ಚೆ ಹಂತದಲ್ಲಿದೆ: ಅಬಕಾರಿ ಸಚಿವ ತಿಮ್ಮಾಪುರ ಸ್ಪಷ್ಟನೆ
Mudhol: ಭೀಕರ ಅಪಘಾತ… ಕಾರು ಚಾಲಕ ಸ್ಥಳದಲ್ಲೇ ಮೃತ್ಯು
Bantwal: ಕಾಂಟ್ರಾಕ್ಟ್ ಕ್ಯಾರೇಜ್ ಬಸ್ ಪ್ರಯಾಣ ದರ ಏರಿಕೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.