ಕನಿಷ್ಠ ವಿದ್ಯಾರ್ಹತೆ ಬಯಸುವ ಮಂತ್ರಿ ಪದವಿ
Team Udayavani, Jun 13, 2018, 6:00 AM IST
ನಮ್ಮ ನೂತನ ಉನ್ನತ ಶಿಕ್ಷಣ ಸಚಿವರು ಎಂಟನೇ ತರಗತಿ ಪಾಸಾದವರು ಎಂಬ ಶೀರ್ಷಿಕೆ ಪತ್ರಿಕೆಗಳ ಮುಖಪುಟದಲ್ಲಿ ರಾರಾಜಿಸಿದೆ. ಹಿಂದೆಲ್ಲ ಹೀಗೆ ಎಂಟನೆಯ ತರಗತಿಯಲ್ಲಿ ಉತ್ತೀರ್ಣರಾದವರನ್ನು “ಲೋವರ್ ಸೆಕೆಂಡರಿ ಪದವೀಧರ’ ಎಂದು ಕರೆಯಲಾಗುತ್ತಿತ್ತು. 110 ವರ್ಷಗಳ ಹಿಂದೆಯೇ ಭಾರತೀಯ ವಿಜ್ಞಾನ ಸಂಸ್ಥೆ (ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಸೈನ್ಸ್)ಯನ್ನು ಸ್ಥಾಪಿಸುವ ಮೂಲಕ, ರಾಜಪ್ರಭುತ್ವದ ಕಾಲದಲ್ಲೇ (1915) ಪ್ರಪ್ರಥಮ ವಿ.ವಿ.ಯನ್ನು ಸ್ಥಾಪಿಸುವ ಮೂಲಕ ಹಾಗೂ ಈಚಿನ ದಶಕಗಳಲ್ಲಿ ಐಟಿ ಬಿಟಿಯಂಥ ಕ್ಷೇತ್ರಗಳಲ್ಲಿ ದೊಡ್ಡ ಸಾಧನೆಯನ್ನು ದಾಖಲಿಸುವ ಮೂಲಕ “ಆಧುನಿಕ ರಾಜ್ಯ’ವೆಂಬ ಹೆಗ್ಗಳಿಕೆಯನ್ನು ಮೆರೆದಿರುವ ಕರ್ನಾಟಕದ ಆಡಳಿತ ವ್ಯವಸ್ಥೆಗೆ ವಕ್ಕರಿಸಿರುವ ಗ್ರಹಚಾರವಾದರೂ ಏನು ಎಂದು ಅನೇಕರು ಅಚ್ಚರಿ ಪಡುವಂತಾಗಿದೆ.
ಕನಿಷ್ಠ ಪಕ್ಷ ನಮ್ಮ ನೂತನ ಉನ್ನತ ಶಿಕ್ಷಣ ಸಚಿವ ಜಿ.ಟಿ. ದೇವೇಗೌಡರಿಗೆ ದಕ್ಕಿರುವ ಖಾತೆಗೆ ಸಂಬಂಧಿಸಿದಂತೆ ತಮಗಿರುವ ಇತಿಮಿತಿ ಏನೆಂಬುದು ಗೊತ್ತಿದೆ; ಅವರು ಒಂದು ಹೇಳಿಕೆ ನೀಡುವ ಮೂಲಕ ತಮಗಿರುವ ಮಿತಿಯನ್ನು ವಿನಯ ಪೂರ್ವಕವಾಗಿ ಒಪ್ಪಿಕೊಂಡಿದ್ದಾರೆ. ಅಥವಾ ಅವರ ಈ ನಡೆ ಕಾಂಗ್ರೆಸ್ ಹಾಗೂ ಜೆಡಿಎಸ್‌ನ ಇತರ ಸಚಿವರಲ್ಲಿರುವಂತೆ ತಮಗೆ ದಕ್ಕಿದ ಸಚಿವ ಖಾತೆಯ ಬಗೆಗಿನ “ಆತೃಪ್ತಿ’ಯ ಪ್ರಕಟನೆಯೂ ಆಗಿದ್ದೀತು. ಇತರ ಖಾತೆಗಳಿಗೆ ಹೋಲಿಸಿದರೆ ಉನ್ನತ ಶಿಕ್ಷಣ ಖಾತೆ “ಕಡಿಮೆ ಆಕರ್ಷಕ’ ಎಂಬುದು ದೇವೇಗೌಡರ ಭಾವನೆಯಾಗಿ ದ್ದಿರಲೂಬಹುದು! ಉನ್ನತ ಶಿಕ್ಷಣ ಖಾತೆ ನಮ್ಮ ಹುಡುಗ ಹುಡುಗಿಯರಿಗೆ ಉತ್ತಮ ಗುಣಮಟ್ಟದ ಶಿಕ್ಷಣವನ್ನು ಒದಗಿಸುವ ಹೊಣೆಗಾರಿಕೆಯನ್ನು ಒಳಗೊಂಡಿರುವುದರಿಂದ ನಿಜಕ್ಕೂ ಇದೊಂದು ಘನತೆವೆತ್ತ ಖಾತೆಯೇ ಹೌದು. ಈ ಖಾತೆಯನ್ನು ನಿರ್ವಹಿಸುವ ಸಚಿವರು 300ಕ್ಕೂ ಹೆಚ್ಚು ವಿ.ವಿ.ಗಳೊಂದಿಗೆ
ವಿ.ವಿ. ಅನುದಾನ ಆಯೋಗ (ಯುಜಿಸಿ)ದೊಂದಿಗೆ, ಭಾರತ ಸರಕಾರದ ಮಾನವ ಸಂಪನ್ಮೂಲಾಭಿವೃದ್ಧಿ ಸಚಿವಾಲಯ
ದೊಂದಿಗೆ ವ್ಯವಹರಿಸ ಬೇಕಾಗುತ್ತದೆ. ಕುಲಪತಿಯಂಥ ಹುದ್ದೆಗಳಿಗೆ ಹಾಗೂ ವಿ ವಿ ಸಿಂಡಿಕೇಟ್‌ನಂಥ ಘಟಕಗಳಿಗೆ ಸೂಕ್ತ ವ್ಯಕ್ತಿಗಳನ್ನು ಆಯ್ಕೆ ಮಾಡುವಂಥ ಕೆಲಸಗಳನ್ನು ನಿಭಾಯಿಸ ಬೇಕಾಗುತ್ತದೆ. ಈಚಿನ ದಶಕಗಳಲ್ಲಿ ಈ ಖಾತೆಯನ್ನು ಡಾ| ಜಿ. ಪರಮೇಶ್ವರ ಹಾಗೂ ಡಿ.ಎಚ್. ಶಂಕರಮೂರ್ತಿಯವರು ಸಮರ್ಥವಾಗಿ ನಿಭಾಯಿ ಸಿದ್ದಾರೆ. ಉನ್ನತ ಶಿಕ್ಷಣ ಖಾತೆಯ ಮಾಜಿ ಸಚಿವ ಬಸವರಾಜ ರಾಯರೆಡ್ಡಿ (ಈ ಚುನಾವಣೆಯಲ್ಲವರು ಸೋಲುಂಡಿದ್ದಾರೆ)ನಮ್ಮ ವಿವಿಗಳು ಹೇಗೆ ತೊಂದರೆ ತಾಪತ್ರಯ ಎದುರಿಸುತ್ತಿವೆ ಎಂಬುದನ್ನು ಒಪ್ಪಿಕೊಂಡು ಪ್ರಾಮಾಣಿಕತೆ ಮೆರೆದಿದ್ದಾರೆ. ನಮ್ಮ ವೈಸ್‌ಚಾನ್ಸಲರ್‌ಗಳು ಭ್ರಷ್ಟರು ಎಂಬ ಮಾತನ್ನವರು ಒಂದಲ್ಲ, ಅನೇಕ ಸಲ ಹೇಳಿದ್ದಾರೆ!
ಹೆಚ್ಚು ವಿದ್ಯೆಯಿಲ್ಲದ ವ್ಯಕ್ತಿಯೊಬ್ಬನಿಗೆ ಪ್ರಮುಖ ಖಾತೆ ಯೊಂದನ್ನು ನೀಡಲಾಗಿರುವುದು ಅಥವಾ ಸಾಂವಿಧಾನಿಕ ಸಂಸ್ಥೆಯೊಂದರ ಮುಖ್ಯಸ್ಥನನ್ನಾಗಿ ಮಾಡಲಾಗಿರುವುದು ಇದೇ ವೊದಲಲ್ಲ. 1960ರ ದಶಕದಲ್ಲಿ ಹಳೆಗಾಲದ ಕಾಂಗ್ರೆಸಿಗ, ದಿವಂಗತ ಆರ್. ಚೆನ್ನಿಗರಾಮಯ್ಯರನ್ನು ಆಗಿನ ಮೈಸೂರು ಲೋಕಸೇವಾ ಆಯೋಗದ ಅಧ್ಯಕ್ಷರನ್ನಾಗಿ ಸರಕಾರ ನೇಮಕ ಮಾಡಿದ್ದ ಸಂದರ್ಭದಲ್ಲಿ ರಾಶಿ ರಾಶಿ ಟೀಕೆಗಳು ಬಂದಿದ್ದವು. ಅವರು ಓದಿದ್ದು ಎಸ್.ಎಸ್.ಎಲ್.ಸಿ. ಅಥವಾ ಅದಕ್ಕಿಂತಲೂ ಕಡಿಮೆ. ಮೈಸೂರು ರಾಜ್ಯದ ಕೆ.ಸಿ. ರೆಡ್ಡಿ ಸರಕಾರದಲ್ಲಿನ ಪ್ರಪ್ರಥಮ ಪರಿಶಿಷ್ಟಜಾತಿಯ ಸಚಿವರೆಂಬ ದಾಖಲೆ ಅವರದಾಗಿತ್ತು. ಆದರೆ ವಿನಮ್ರ ನಡೆಗೆ ಖ್ಯಾತರಾಗಿದ್ದ ಚೆನ್ನಿಗರಾಮಯ್ಯ ಪ್ರಾಮಾಣಿಕತೆ ಹಾಗೂವಿನಯದಿಂದಲೇ ತಮ್ಮ ಕರ್ತವ್ಯ ನಿಭಾಯಿಸಿದ್ದರು. ಕರ್ನಾಟಕ ಲೋಕಸೇವಾ ಆಯೋಗ (ಕೆ.ಪಿ.ಎಸ್.ಸಿ.)ಭ್ರಷ್ಟಾಚಾರ ಮೂಲಪಾಠವನ್ನು ಹೇಳಿಕೊಡುವ ಸಂಸ್ಥೆ ಎಂಬ ಹೆಸರನ್ನು ಪಡೆದುಕೊಂಡಿರುವುದು ಈಚೆಗಿನ ದಶಕಗಳಲ್ಲಷ್ಟೆ. ಅದರ ಇಬ್ಬರು ಮಾಜಿ ಅಧ್ಯಕ್ಷರುಗಳನ್ನು ಭ್ರಷ್ಟಾಚಾರದ ಆರೋಪದಡಿಯಲ್ಲಿ ಬಂಧಿಸಲಾಗಿತ್ತು. ಅದೃಷ್ಟವಶಾತ್ ನಮ್ಮ ಹೊಸ ಮುಖ್ಯಮಂತ್ರಿ ಕುಮಾರಸ್ವಾಮಿ ಭ್ರಷ್ಟಾಚಾರದ ಕಳಂಕ ಹೊತ್ತ ವ್ಯಕ್ತಿಗಳಲ್ಲೊಬ್ಬರನ್ನು ತಮ್ಮ ಸಲಹೆಗಾರನನ್ನಾಗಿ ನೇಮಿಸಿಕೊಂಡಿಲ್ಲ.
ನಿರೀಕ್ಷಿತ ಶಿಕ್ಷಣಾರ್ಹತೆಯಿಲ್ಲದ ವ್ಯಕ್ತಿಯನ್ನು ಉನ್ನತ ಹುದ್ದೆ ಯೊಂದಕ್ಕೆ ನೇಮಿಸಿದ ಇನ್ನೊಂದು ಉದಾಹರಣೆಯೆಂದರೆ ಧರ್ಮಸಿಂಗ್ ನೇತೃತ್ವದ ಕಾಂಗ್ರೆಸ್ – ಜೆಡಿಎಸ್ ಸರಕಾರ ಇಂದಿನ ಹೊಸ ಸಚಿವರಲ್ಲೊಬ್ಬರಾದ ಬಂಡೆಪ್ಪ ಕಾಶೆಂಪುರ್ ಅವರನ್ನು ರಾಜ್ಯದ ಸ್ಥಾಯಿ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷರನ್ನಾಗಿ ಮಾಡಿದ್ದು. ಇದಕ್ಕೆ ಬೇಕಿದ್ದ ವಿದ್ಯಾರ್ಹತೆ ಹೈಕೋರ್ಟ್ ನ್ಯಾಯಾಧೀಶರ ನೇಮಕಕ್ಕೆ ಅಗತ್ಯವಿರುವ ವಿದ್ಯಾರ್ಹತೆಗೆ ಸಮನಾದುದು. ಆದರೆ ಕಾಶೆಂಪೂರ್ ಕೇವಲ ಎಸ್‌ಎಸ್‌ಎಲ್‌ಸಿ ಪಾಸಾದವರು; ಹಾಗಾಗಿ ಸರಕಾರ ಅವರ ನೇಮಕಾತಿಯನ್ನು ರದ್ದು ಮಾಡಬೇಕಾಯಿತು. ಮೈತ್ರಿ ಸರಕಾರದ ಎರಡೂ ಭಾಗೀದಾರ ಪಕ್ಷಗಳ ದೃಷ್ಟಿ ಜಾತಿ ಲೆಕ್ಕಾಚಾರದಲ್ಲಿ ಮಾತ್ರ ಇರುವುದರಿಂದ ಕಾಶೆಂಪೂರ್ ಅವರು ಇಂದು ಸಹಕಾರ ಖಾತೆಯ ನಿರ್ವಹಣೆಗೆ ಅರ್ಹರೆಂದು ಪರಿಗಣಿತರಾಗಿದ್ದಾರೆ.
ಲಕ್ಷಗಟ್ಟಲೆ ಹುಡುಗ-ಹುಡುಗಿಯರು ಕಾಲೇಜು ವಿದ್ಯಾಭ್ಯಾಸ ಪಡೆದುಕೊಳ್ಳುತ್ತಿರುವ ಇಂದಿನ ಸಂದರ್ಭದಲ್ಲಿ ಕಡಿಮೆ ವಿದ್ಯಾರ್ಹತೆಯ ವ್ಯಕ್ತಿಗಳನ್ನು ಮಂತ್ರಿಗಳನ್ನಾಗಿ ಮಾಡಲಾಗುತ್ತಿರುವ ವಿದ್ಯಮಾನ ನಮ್ಮ ರಾಜಕೀಯ ವಲಯದ ದಡ್ಡತನಕ್ಕೆ ಸಂಬಂಧಿಸಿದ ಸಂಗತಿಯೆಂಬುದನ್ನು ಅಗತ್ಯವಾಗಿ ಗಮನಿಸ ಬೇಕಾಗಿದೆ. ವಿದ್ಯಾರ್ಹತೆಯುಳ್ಳವರು ರಾಜಕೀಯ ಪ್ರವೇಶ ಮಾಡುತ್ತಿಲ್ಲ. ನಮ್ಮ ಎಲ್ಲ ರಾಜಕೀಯ ಪಕ್ಷಗಳನ್ನು ಕಾಡುತ್ತಿರುವ ಸಮಸ್ಯೆ ಇದು. ನಮ್ಮ ಹೆಚ್ಚಿನ ರಾಜ್ಯಗಳಲ್ಲಿ ವಿಶೇಷವಾಗಿ ನೆರೆಯ ತಮಿಳುನಾಡಿನಲ್ಲೂ ಇದೇ ಸಮಸ್ಯೆ. ಅಲ್ಲಿ 1967ರಲ್ಲಿ ದ್ರಾವಿಡ ಪಕ್ಷಗಳು ಅಧಿಕಾರಕ್ಕೆ ಬಂದ ಬಳಿಕದ ವರ್ಷಗಳಲ್ಲಿ ರಾಜಕೀಯದ ಗುಣಮಟ್ಟ ಕುಸಿದೇ ಹೋಗಿದೆ. ಮೂಲಭೂತ ಸಮಸ್ಯೆಯೆಂದರೆ ನಮ್ಮ ಮಂತ್ರಿಗಳು, ಸಂಸತ್ಸದಸ್ಯರು ಅಥವಾ ಶಾಸಕರು ಹೊಂದಿರಬೇಕಾದ ಕನಿಷ್ಠ ವಿದ್ಯಾರ್ಹತೆಯನ್ನು ನಮ್ಮ ಸಂವಿಧಾನದಲ್ಲಿ ಸ್ಪಷ್ಟವಾಗಿ ಉಲ್ಲೇಖೀಸಲಾಗಿಲ್ಲ. ಆದರೆ ನಮ್ಮ ನೆರೆರಾಷ್ಟ್ರ ಪಾಕಿಸ್ಥಾನದಲ್ಲಿ ಸಂಸತ್ಸದಸ್ಯರಿಗೆ ಇರಬೇಕಾದ ಕನಿಷ್ಠ ವಿದ್ಯಾರ್ಹತೆ(ಪದವಿ)ಯನ್ನು ನಿಗದಿಪಡಿಸಲಾಗಿದೆ. ಪದವಿ ಗಿಂತಲೂ ಸಾಮಾನ್ಯ ಜ್ಞಾನ (ಲೋಕಜ್ಞಾನ), ಜನರ ಮೇಲಿನ ಕಾಳಜಿ, ಪ್ರಾಮಾಣಿಕತೆಗಳೇ ಮುಖ್ಯ ಎಂದು ವಾದಿಸುವವರೂ ಇದ್ದಾರೆಂಬುದು ಗೊತ್ತಿದೆ. ಆದರೆ ವ್ಯಂಗ್ಯ ನೋಡಿ, ನಮ್ಮ ಎರಡು ರಾಜ್ಯಗಳಾದ ಹರ್ಯಾಣ ಹಾಗೂ ಪಂಜಾಬ್‌ನಲ್ಲಿ ಸ್ಥಳೀಯಾಡಳಿತ ಸಂಸ್ಥೆಗಳ ಅಭ್ಯರ್ಥಿಗಳಿಗೆ ಕನಿಷ್ಠ ವಿದ್ಯಾರ್ಹತೆಯನ್ನು ನಿಗದಿಪಡಿಸಲಾಗಿದೆ! ರಾಜಸ್ಥಾನದಲ್ಲಿ ಪರಿಶಿಷ್ಟ ಜಾತಿಯವರ ನ್ನುಳಿದು ಇತರ ಅಭ್ಯರ್ಥಿಗಳು ಪಂಚಾಯತ್ ಹಾಗೂ ನಗರಾಡಳಿತ ಸಂಸ್ಥೆಗಳ ಚುನಾವಣೆಗೆ ಸ್ಪರ್ಧಿಸಬೇಕಿದ್ದರೆ ಅವರು 10ನೇ ತರಗತಿಯಲ್ಲಿ ಉತ್ತೀರ್ಣರಾಗತಕ್ಕದ್ದು ಎಂಬ ನಿಯಮವನ್ನು ಜಾರಿಗೊಳಿಸಲಾಗಿದೆ. ಸರ್ವೋತ್ಛ ನ್ಯಾಯಾಲಯವೂ ಈ ನಿಯಮವನ್ನು ಎತ್ತಿ ಹಿಡಿದಿದೆ. ಈ ವಿಷಯಕ್ಕೆ ಸಂಬಂಧಿಸಿದ ಪ್ರಕರಣವೊಂದರಲ್ಲಿ ನ್ಯಾ| ಜೆ. ಚಲಮೇಶ್ವರ್ ಹಾಗೂ ಅಭಯ್ ಮನೋಹರ್ ಸಪ್ರ “ಶಿಕ್ಷಣವು ಸಾಮರ್ಥಕ್ಕೆ ಇರಬೇಕಾದ ಒಂದು ಪೂರ್ವ ಷರತ್ತು’ ಎಂದು ಅಭಿಪ್ರಾಯಪಟ್ಟಿದ್ದಾರೆ. ಸಂವಿಧಾನ ಶಾಸನ ಸಭೆಯ ಸಭಾಪತಿಯಾಗಿದ್ದ ಡಾ| ರಾಜೇಂದ್ರ ಪ್ರಸಾದ್ ಇಂಥದೇ ನಿಲುವನ್ನು ಪ್ರಕಟಿಸಿದ್ದರು. ಆದರೆ ಡಾ| ಬಿ.ಆರ್. ಅಂಬೇಡ್ಕರ್ ಇದಕ್ಕೆ ವ್ಯತಿರಿಕ್ತವಾದ ನಿಲುವನ್ನು ವ್ಯಕ್ತಪಡಿಸಿದ್ದರು; ಒಬ್ಬ ಅವಿದ್ಯಾವಂತ ವ್ಯಕ್ತಿಯನ್ನು ಬುದ್ಧಿವಂತನಲ್ಲವೆಂದು ಪರಿಗಣಿ ಸು ವುದು ತಪ್ಪಾಗುತ್ತದೆ ಎಂದಿದ್ದರು.
ಈ ನಡುವೆ, ಜಿ.ಟಿ. ದೇವೇಗೌಡರನ್ನು ಮಂತ್ರಿಯಾಗಿ ನೇಮಿಸುವ ಅಗತ್ಯವೇನಿದೆ ಎಂದು ವಾದಿಸುವ ಸಾಧ್ಯತೆಯೂ ಇದೆ. ಅವರಿಗೆ ಮಂತ್ರಿ ಪದವಿ ನೀಡಿದ್ದು ಚಾಮುಂಡೇ ಶ್ವರಿಯಲ್ಲಿ ಸಿದ್ದರಾಮಯ್ಯರನ್ನು ಸೋಲಿಸಿದ್ದಕ್ಕಾಗಿಯೇ? ಈ ಹಿಂದೆಯೂ ಅವರು ಸಚಿವ ಪದವಿ ಅನುಭವಿಸಿದ್ದಾರೆ. ಪಕ್ಷದಲ್ಲಿ ಕಳಪೆ ಅರ್ಹತೆಯವರು ಸಾಕಷ್ಟು ಜನರಿ ದ್ದಾರೆಂಬುದೇನೋ ನಿಜವೇ; ಆದರೂ ಜೆಡಿಎಸ್‌ನ ಇತರ ಯಾರನ್ನಾದರೂ ಮಂತ್ರಿಗಿರಿಗೆ ಆಯ್ದುಕೊಳ್ಳಬಹುದಾಗಿತ್ತು. ದೇವೇಗೌಡರನ್ನು ಸ್ವಲ್ಪ ಪಕ್ಕಕ್ಕಿರಿಸಿ ನೋಡುವುದಾದರೆ ಕಾಂಗ್ರೆಸ್ ಹಾಗೂ ಜೆಡಿ(ಎಸ್)ಗಳಲ್ಲಿ ಈಗ ಮೊಳಗುತ್ತಿರುವ ಅಪಸ್ವರಗಳು “ಆಕರ್ಷಕ’ ಖಾತೆಗಳನ್ನು ಬಾಚಿಕೊಳ್ಳುವುದು ಹೇಗೆ ಎಂಬುದಕ್ಕೆ ಸಂಬಂಧಿಸಿವೆ. ಇದಕ್ಕಷ್ಟೆ ಪ್ರಾಮುಖ್ಯ; ರಾಜ್ಯದ ಜನತೆಯ ಕಲ್ಯಾಣಕ್ಕೆ ಕೊಡಬೇಕಾದ ಸ್ಥಾನ ಅಮೇಲಿನದು ಎಂಬಂತಾಗಿದೆ. ಕೋಮುವಾದಿ ಬಿಜೆಪಿಯಿಂದ ರಾಜ್ಯವನ್ನು ರಕ್ಷಿಸಬೇಕೆಂಬ ಹಾಗೂ ಬಿಜೆಪಿ ತನ್ನ ಹಿಂದಿನ ಆಳ್ವಿಕೆಯಲ್ಲಿ ಮೆರೆದ ದುರಾಡಳಿತದಿಂದ ಜನರನ್ನು ಕಾಪಾಡಬೇಕೆಂಬ ವಾದದೊಂದಿಗೆ ಬಿಜೆಪಿಯನ್ನು ಅಧಿಕಾರದಿಂದ ವಂಚಿಸಿ ಎರಡೂ ಪಕ್ಷಗಳು ಮೈತ್ರಿ ಸಾಧಿಸಿ ಅಧಿಕಾರಕ್ಕೆ ಬಂದವು. ಜನತಾದಳ (ಜಾತ್ಯತೀತ) ತಾನು ಜಾತ್ಯತೀತ ಪಕ್ಷವೆಂದು ಹೇಳಿಕೊಳ್ಳುತ್ತಿದ್ದರೂ ಅದೀಗ ಜಾತ್ಯತೀತ ಎಂಬು ದಕ್ಕಿಂತಲೂ ಹೆಚ್ಚಿನಮಟ್ಟಿಗೆ ಒಂದು ಜಾತಿ ಆಧಾರಿತ ಪಕ್ಷವಾಗಿ ಮಾರ್ಪಟ್ಟಿದೆ. ಸಾಮಾನ್ಯವಾಗಿ ಒಬ್ಬ ಮುಖ್ಯಮಂತ್ರಿ ಒಂದು ನಿರ್ದಿಷ್ಟ ಜಾತಿ (ಒಕ್ಕಲಿಗ ಸಮುದಾಯ)ಗೆ ಸೇರಿದ್ದಲ್ಲಿ, ಆತನ ಸಂಪುಟದಲ್ಲಿ ಸ್ವಜಾತಿಯವರಿಗೆ ಹೆಚ್ಚಿನ ಪ್ರಾತಿನಿಧ್ಯ ನೀಡುವ ಅಗತ್ಯವಿಲ್ಲ. ಮುಖ್ಯಮಂತ್ರಿ ತಮ್ಮ ಸರಕಾರದಲ್ಲಿ ಒಕ್ಕಲಿಗರ ಸಂಖ್ಯೆಗೆ ಕಡಿವಾಣ ಹಾಕಬಹುದಿತ್ತು.
ಈ 2 ಪಕ್ಷಗಳು ಹಣಕಾಸು ಖಾತೆಗಾಗಿ ನಡೆಸಿದ ಮೇಲಾಟಕ್ಕೀಗ ತೆರೆಬಿದ್ದಿದೆ; ಈ ಪೈಪೋಟಿಯಲ್ಲಿ ಜೆಡಿಎಸ್ ಮೇಲುಗೈ ಸಾಧಿಸಿದೆ. ಹಣಕಾಸು ಖಾತೆಯೇ ಇತರ ಎಲ್ಲವುಗಳಿಗಿಂತ ಪ್ರಮುಖ. ಏಕೆಂದರೆ ಸರಕಾರದ ಇತರ ಖಾತೆಗಳಿಗೆ “ಇನಾಮು’ ಬಟವಾಡೆ ಯಾಗುವುದು ಅದರ ಮೂಲಕವೇ. ವಿತ್ತ ಖಾತೆಗೆ ಸಂಬಂಧಿಸಿದ ಸಚಿವ, ಸರಕಾರಕ್ಕೆ ದೊರೆಯುವ ಆದಾಯದ ಪಾಲಿಗೆ ಅಕ್ಷರಶಃ ಯಜಮಾನನಾಗಿರುತ್ತಾನೆ; ವಿವಿಧ ವಿಭಾಗಗಳಿಗೆ ಸಲ್ಲಬೇಕಾದ ಮೊತ್ತಗಳನ್ನು ಪಾಲು ಮಾಡಿ ಹಂಚುತ್ತಾನೆ; ವಾರ್ಷಿಕ ಬಜೆಟ್‌ನಲ್ಲಿ ಸರಕಾರದ ಹೊಸ ಯೋಜನೆಗಳನ್ನು ಘೋಷಿಸುತ್ತಾನೆ. ವಾಣಿಜ್ಯ ತೆರಿಗೆಗಳಲ್ಲಿ ಏಕರೂಪತೆ ಸಾಧಿಸುವ ಆಶಯದ ಜಿಎಸ್‌ಟಿ ನಿಯಮ ಜಾರಿಗೆ ಬಂದಿದೆ ಯೇನೋ ಹೌದು; ಆದರೂ ಹಣಕಾಸು ಖಾತೆ, ಉಳಿದವುಗಳಿಗೆ ಹೋಲಿಸಿದರೆ ದೊಡ್ಡಣ್ಣನೇ. ದೇಶಕ್ಕೆ ಸ್ವಾತಂತ್ರ್ಯ ದೊರೆಯುವುದಕ್ಕೆ ಮುಂಚಿನ ವರ್ಷದಲ್ಲಿ ಹಂಗಾಮಿ ಸರಕಾರ ಇತ್ತು; ಆಗ ಈ ಖಾತೆಯನ್ನು ನಿರ್ವಹಿಸಿದ್ದ ಮುಸ್ಲಿಂ ಲೀಗ್ ನಾಯಕ ಲಿಯಾಕತ್ ಅಲಿ ಅವರು ಕಾಂಗ್ರೆಸ್ ಪಕ್ಷಕ್ಕೆ ಹಣದ ನೆರವು ಒದಗಿಸುತ್ತಿದ್ದ ವಾಣಿಜ್ಯೋದ್ಯಮಿಗಳನ್ನು ಹಾಗೂ ಕೈಗಾರಿಕೋದ್ಯಮಿಗಳನ್ನು ಶಿಕ್ಷಿಸುವ ಉದ್ದೇಶದಿಂದೆಂಬಂತೆ ತೆರಿಗೆ ದರ ಜಾರಿಗೊಳಿಸುವ ಮೂಲಕ ಹಣಕಾಸು ಖಾತೆಯನ್ನು ದುರುಪಯೋಗಪಡಿಸಿದ್ದು ಈಗ ಇತಿಹಾಸ. ಇದೇ ರೀತಿ ಜನತಾಪಕ್ಷ ಕೇಂದ್ರದಲ್ಲಿ ಅಧಿಕಾರ ದಲ್ಲಿದ್ದಾಗ ಅಂದಿನ ಉಪಪ್ರಧಾನಿ ಚೌಧುರಿ ಚರಣ್‌ಸಿಂಗ್ ಅವರು ಸರಕಾರವನ್ನು ಒಳಗಿಂದೊಳಗೇ ಭಗ್ನಗೊಳಿಸುವ ರೀತಿಯಲ್ಲಿ “ಬಜೆಟ್ ಪ್ರಹಾರ’ ನಡೆಸಿದ್ದರು.
ಪಾಟೀಲ್ ಸವಾಲು
ಇದೀಗ ಮಾಜಿ ಸಚಿವ ಎಂ.ಬಿ. ಪಾಟೀಲ್ ಅವರಿಗೆ, ಸಚಿವ ಪದವಿಯನ್ನಾಗಲಿ, ಉಪ ಮುಖ್ಯಮಂತ್ರಿ ಹುದ್ದೆಯನ್ನಾಗಲಿ ಪಡೆದುಕೊಳ್ಳುವುದಕ್ಕೆ ಯಾವುದೇ “ಮೂಲಭೂತ’ ಹಕ್ಕಿಲ್ಲವೆಂದು; ಹಾಗೆಯೇ ಅವರು ಉಳಿದವರಿಗಿಂತ ಹೆಚ್ಚಿನ ಅರ್ಹತೆ ಯೋಗ್ಯತೆ ಹೊಂದಿಲ್ಲವೆಂದು ಯಾರಾದರೂ ಸ್ಪಷ್ಟವಾಗಿ ತಿಳಿ ಹೇಳಬೇಕಾದ ಸಮಯ ಒದಗಿಬಂದಿದೆ. ಈ ನಡುವೆ ಕಾಂಗ್ರೆಸ್ ಪಕ್ಷ ಅತ್ಯುತ್ತಮ ಯೋಗ್ಯತೆಯುಳ್ಳ , ಸಮಚಿತ್ತದ ರಾಜಕಾರಣಿ ಗಳಲ್ಲೊಬ್ಬರಾದ ಎಚ್.ಕೆ. ಪಾಟೀಲ್ ಅವರ ಮಂತ್ರಿಗಿರಿಯ ಹಕ್ಕು ಸಾಧನೆಯನ್ನು ಕಡೆಗಣಿಸಿದೆಯೆಂದೇ ಹೇಳಬೇಕು. ಅವರಿಗೆ ಕನಿಷ್ಠ ಪಕ್ಷ ಓರ್ವ ಉಪಮುಖ್ಯಮಂತ್ರಿಯಾಗುವ ಯೋಗ್ಯತೆಯಂತೂ ಇದ್ದೇ ಇದೆ. ಮುಖ್ಯಮಂತ್ರಿಗಳು ಹಳೇ ಮೈಸೂರು ಸೀಮೆಯವರು; ಹೀಗಿರುತ್ತ ಉಪಮುಖ್ಯಮಂತ್ರಿ ಉತ್ತರ ಕರ್ನಾಟಕದವರಾಗಿರಲಿ ಎಂಬ ವಾದ ಹೆಚ್ಚು ತರ್ಕ ಬದ್ಧವಾಗಿದೆ. ಆ ಹುದ್ದೆಗೆ ಇತರರಿಗಿಂತಲೂ ಹೆಚ್ಚು ಅರ್ಹರಾಗಿದ್ದವರು ಎಚ್.ಕೆ. ಪಾಟೀಲರೇ.