ಸುಪ್ರೀಂಕೋರ್ಟಿಗೆ ಈಗ ಬಿಕ್ಕಟ್ಟಿನ ಸಮಯ
Team Udayavani, Nov 15, 2017, 11:59 AM IST
ಕಳೆದ ಕೆಲವು ದಿನಗಳಿಂದೀಚೆಗೆ ಸುಪ್ರೀಂ ಕೋರ್ಟಿನಲ್ಲಾಗುತ್ತಿರುವ ಬೆಳವಣಿಗೆಗಳನ್ನು ಆಸಕ್ತಿಯಿಂದ ಗಮನಿಸುತ್ತಿರುವವರಿಗೆ ಹಿರಿಯ ವಕೀಲ ಪ್ರಶಾಂತ್ ಭೂಷಣ್ ನ್ಯಾಯಾಂಗದ ಉನ್ನತ ಸ್ತರದಲ್ಲಿರುವ ಭ್ರಷ್ಟಾಚಾರವನ್ನು ಬಹಿರಂಗಗೊಳಿಸುವ ಪ್ರಯತ್ನ ದಲ್ಲಿ ಲಕ್ಷ್ಮಣ ರೇಖೆಯನ್ನು ದಾಟಿ ಹೋಗುತ್ತಿದ್ದಾರೆ ಎಂಬ ಭಾವನೆಯುಂಟಾದರೆ ಆಶ್ಚರ್ಯಪಡಬೇಕಾಗಿಲ್ಲ.
ತನ್ನ ಕೈಕೆಳಗಿನ ನ್ಯಾಯಾಧೀಶರಿಗೆ ಕೇಸುಗಳನ್ನು ಹಂಚುವಾಗ ಸುಪ್ರೀಂಕೋರ್ಟಿನ ಮುಖ್ಯ ನ್ಯಾಯಮೂರ್ತಿ ಎಂಬ ನೆಲೆಯಲ್ಲಿ ನ್ಯಾ|ದೀಪಕ್ ಮಿಶ್ರಾ ತಮಗಿರುವ ಪರಮಾಧಿಕಾರವನ್ನು ಬಳಸಿ ಕೊಂಡಿರುವುದರಲ್ಲಿ ಆಶ್ಚರ್ಯವಾಗುವಂಥದ್ದೇನೂ ಇಲ್ಲ. ಈ ಮೂಲಕ ಅವರು ಹಿರಿತನದಲ್ಲಿ ತನಗಿಂತ ಒಂದು ಸ್ಥಾನ ಕೆಳಗಿ ರುವ ನ್ಯಾ| ಜೆ. ಚಲಮೇಶ್ವರ ನ.9ರಂದು ಒಡಿಶಾ ಹೈಕೋರ್ಟಿನ ಮಾಜಿ ನ್ಯಾಯಮೂರ್ತಿ ಖುದ್ದುಸಿ ಸೇರಿದಂತೆ ಕೆಲ ಮಂದಿಯ ವಿರುದ್ಧ ದಾಖಲಾಗಿರುವ ಭ್ರಷ್ಟಾಚಾರ ಪ್ರಕರಣಗಳ ಸಿಬಿಐ ತನಿಖೆಗೆ ಆದೇಶಿಸಿ ನೀಡಿದ ತೀರ್ಪನ್ನು ರದ್ದುಗೊಳಿಸಿ ದ್ದಾರೆ. ಆದರೆ ಈ ಸಂದರ್ಭದಲ್ಲಿ ಪ್ರಶಾಂತ್ ಭೂಷಣ್ ನ್ಯಾಯಾಲಯದಲ್ಲೇ ಮುಖ್ಯ ನ್ಯಾಯಮೂರ್ತಿಗಳ ವಿರುದ್ಧ ಮಾಡಿರುವ ಆರೋಪ ಮಾತ್ರ ಆಘಾತಕಾರಿಯಾಗಿದೆ. ದ ಕಮಿಟಿ ಆಫ್ ಜುಡಿಶಿಯಲ್ ಅಕೌಂಟಬಿಲಿಟಿ ಎಂಬ ವಕೀಲರ ಸಮಿತಿಯೊಂದರ ಮೂಲಕ ಈ ಪ್ರಕರಣದ ಓರ್ವ ಕಕ್ಷಿದಾರರಾಗಿರುವ ಭೂಷಣ್ ಬಹಿರಂಗ ನ್ಯಾಯಾಲಯದಲ್ಲೇ ನ್ಯಾ| ದೀಪಕ್ ಮಿಶ್ರಾ ಅವರನ್ನುದ್ದೇಶಿಸಿ “ಎಫ್ಐಆರ್ ನೇರವಾಗಿ ಸುಪ್ರೀಂಕೋರ್ಟಿನ ಮುಖ್ಯ ನ್ಯಾಯಾಧೀಶರತ್ತ ಬೆಟ್ಟು ಮಾಡುತ್ತದೆ’ ಎಂದು ಹೇಳಿದ್ದಾರೆ.
ಸುಪ್ರೀಂ ಕೋರ್ಟಿನ ಉನ್ನತ ಸ್ತರದಲ್ಲಿ ಬಿಕ್ಕಟ್ಟಿಗೆ ಕಾರಣವಾಗಿರುವ ಈ ಪ್ರಕರಣ ಎರಡು ಆಯಾಮಗಳನ್ನು ಹೊಂದಿದೆ. ಉತ್ತರ ಪ್ರದೇಶದ ಮೇರ ನಲ್ಲಿರುವ ವೆಂಕಟೇಶ್ವರ ಮೆಡಿಕಲ್ ಕಾಲೇಜಿಗೆ ವಿದ್ಯಾರ್ಥಿಗಳ ಸೇರ್ಪಡೆಯನ್ನು ಭಾರತೀಯ ವೈದ್ಯಕೀಯ ಮಂಡಳಿ ತಡೆಹಿಡಿದಿರುವುದು ಮೂಲ ಪ್ರಕರಣ. ವೈದ್ಯಕೀಯ ಮಂಡಳಿಯ ಆದೇಶವನ್ನು ತೆರವುಗೊಳಿಸುವಸಲುವಾಗಿ ಕಾಲೇಜಿನ ಆಡಳಿತವನ್ನು ನೋಡಿಕೊಳ್ಳುತ್ತಿರುವ
ಟ್ರಸ್ಟ್‌ನ ಮೆನೇಜರ್ ಒಡಿಶಾ ಹೈಕೋರ್ಟ್ ನ್ಯಾಯಾಧೀಶರನ್ನು ಸಂಪರ್ಕಿಸಿ ತೀರ್ಪಿನ ಮೇಲೆ ಪ್ರಭಾವ ಬೀರಲು ಪ್ರಯತ್ನಿಸಿ ದ್ದಾರೆ ಎನ್ನುವುದು ಸಿಬಿಐ ದಾಖಲಿಸಿಕೊಂಡಿರುವ ಪ್ರಕರಣ.
ನ್ಯಾ| ದೀಪಕ್ ಮಿಶ್ರಾ ನೇತೃತ್ವದ ಸುಪ್ರೀಂ ಕೋರ್ಟಿನ ವಿಭಾಗ ಪೀಠ 2016, ಆಗಸ್ಟ್ -ಸೆಪ್ಟೆಂಬರ್‌ನಲ್ಲಿ ಮೆಡಿಕಲ್ ಕಾಲೇಜಿಗೆ ಸಂಬಂಧಪಟ್ಟ ಪ್ರಕರಣದ ವಿಚಾರಣೆ ನಡೆಸಿದೆ. ನ.9ರಂದು ನ್ಯಾ| ಚಲಮೇಶ್ವರ ಮತ್ತು ನ್ಯಾ| ದೀಪಕ್ ಗುಪ್ತ ಅವರ ವಿಭಾಗ ಪೀಠ ಮೆಡಿಕಲ್ ಕಾಲೇಜು ಮೇಲಿರುವ ಆರೋಪಗಳ ಕುರಿತು ಸ್ವತಂತ್ರ ತನಿಖೆ ನಡೆಸಲು ವಿಶೇಷ ತನಿಖಾ ತಂಡ ರಚಿಸಬೇಕೆಂದು ಆಗ್ರಹಿಸಿ ಸಲ್ಲಿಸಲಾಗಿರುವ ಮನವಿಯನ್ನು ವಿಚಾರಣೆಗೆ ಎತ್ತಿಕೊಂಡಿದೆ. ಸುಪ್ರೀಂ ಕೋರ್ಟಿನ ಹಿರಿಯ ಐವರು ನ್ಯಾಯ ಮೂರ್ತಿಗಳನ್ನೊಳಗೊಂಡಿರುವ ಸಂವಿಧಾನ ಪೀಠ ಈ ಪ್ರಕರಣದ ವಿಚಾರಣೆ ನಡೆಸಬೇಕೆಂದು ಹೇಳಿದ ಈ ವಿಭಾಗ ಪೀಠವು ಐವರು ನ್ಯಾ| ಹೆಸರುಗಳನ್ನೂ ಹೇಳಿದೆ. ಈ ಹಂತದಲ್ಲಿ ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ಮತ್ತು ಕಮಿಟಿ ಆಫ್ ಜುಡಿಶಿಯಲ್ ಅಕೌಂಟಬಿಲಿಟಿ ಪರವಾಗಿ ಪ್ರಶಾಂತ್ ಭೂಷಣ್ ವಿಭಾಗ ಪೀಠದ ತೀರ್ಪಿನಲ್ಲಿ ಹಸ್ತಕ್ಷೇಪ ಮಾಡಿದ್ದಾರೆ. ನ್ಯಾಯಾಂಗದ ನಿಯಮದ ಪ್ರಕಾರ ಸವಿಧಾನ ಪೀಠ ರಚಿಸುವ ಅಧಿಕಾರ ಇರುವುದು ಮುಖ್ಯ ನ್ಯಾಯಮೂರ್ತಿಗೆ. ಹೀಗಾಗಿ ನ್ಯಾ| ದೀಪಕ್ ಮಿಶ್ರ ವಿಭಾಗ ಪೀಠದ ಆದೇಶವನ್ನುಅನೂರ್ಜಿತಗೊಳಿಸಿ ತಾನೇ ಮುಖ್ಯಸ್ಥ ನಾಗಿರುವ ಪಂಚ ಸದಸ್ಯ ಸಂವಿಧಾನ ಪೀಠವನ್ನು ರಚಿಸಿದ್ದಾರೆ.
ಸುಪ್ರೀಂ ಕೋರ್ಟಿನ ಮುಖ್ಯ ನ್ಯಾಯಮೂರ್ತಿಗಳ ವಿರುದ್ಧ ಬಹಿರಂಗವಾಗಿ ಈ ರೀತಿಯ ನೇರ ಆರೋಪ ಮಾಡಿರುವುದು ದೇಶದ ನ್ಯಾಯಾಂಗ ಇತಿಹಾಸದಲ್ಲಿ ಇದೇ ಮೊದಲು. ಹಾಗೆಂದು ಸುಪ್ರೀಂ ಕೋರ್ಟಿನ ನ್ಯಾಯಮೂರ್ತಿಗಳ ಭ್ರಷ್ಟಾಚಾರದ ಕುರಿತು ಗುಸುಗುಸು ಕೇಳಿ ಬರುತ್ತಿರುವುದು ಇದೇ ಮೊದಲೇ ನಲ್ಲ. ಹೈಕೋರ್ಟಿನ ನಿವೃತ್ತ ಮುಖ್ಯ ನ್ಯಾಯಮೂರ್ತಿ ಮತ್ತು ಕೆಲವು ನ್ಯಾಯಾಧೀಶರನ್ನು ಭ್ರಷ್ಟಾಚಾರ ಪ್ರಕರಣಗಳಿಗೆ ಸಂಬಂಧಿಸಿ ಬಂಧಿಸಿರುವ ಉದಾಹರಣೆಗಳಿದ್ದರೂ ಸುಪ್ರೀಂ ಕೋರ್ಟಿನ ಮಾಜಿ ನ್ಯಾಯಮೂರ್ತಿಗಳಾರೂ ಸೆರೆಯಾಗಿಲ್ಲ.
ಮದ್ರಾಸ್ ಹೈಕೋರ್ಟಿನ ಮುಖ್ಯ ನ್ಯಾಯಮೂರ್ತಿಯಾಗಿದ್ದ ಕೆ. ವೀರಸ್ವಾಮಿ 1976ರಲ್ಲಿ ನಿವೃತ್ತಿಯಾದ ದಿನವೇ ಅಕ್ರಮ ಸಂಪತ್ತು ಹೊಂದಿದ ಆರೋಪದಲ್ಲಿ ಸೆರೆಯಾಗಿದ್ದರು. ಅನಂತರ ಈ ಕ್ರಮದ ವಿರುದ್ಧ ಅವರು ಸುಪ್ರೀಂ ಕೋರ್ಟಿಗೆ ದೂರು ನೀಡಿದ್ದರು. ಇದರ ಫಲಶ್ರುತಿಯಾಗಿ 15 ವರ್ಷಗಳ ಬಳಿಕ ಸುಪ್ರೀಂಕೋರ್ಟಿನ ಮುಖ್ಯ ನ್ಯಾಯಮೂರ್ತಿಗಳ ಅನುಮೋದನೆಯಿಲ್ಲದೆ ಹೈಕೋರ್ಟ್ ಅಥವಾ ಸುಪ್ರೀಂ ಕೋರ್ಟಿನ ನ್ಯಾಯಮೂರ್ತಿಗಳ ವಿರುದ್ಧ ಎಫ್ಐಆರ್ ದಾಖಲಿಸಬಾರದು ಎಂಬ ತೀರ್ಪು ಬಂತು. ವಿಶೇಷವೆಂದರೆ ವೀರಸ್ವಾಮಿ ಸುಪ್ರೀಂ ಕೋರ್ಟಿನ ನಿವೃತ್ತ ನ್ಯಾಯಮೂರ್ತಿ ವಿ. ರಾಮಸ್ವಾಮಿ ಅವರ ಮಾವನಾಗಿದ್ದರು. ಈ ರಾಮಸ್ವಾಮಿ 1993ರಲ್ಲಿ ಲೋಕಸಭೆಯಲ್ಲಿ ಆಡಳಿತಾರೂಢ ಕಾಂಗ್ರೆಸ್ ಮತದಾನಕ್ಕೆ ಗೈರು ಹಾಜರಾದ ಕಾರಣ ವಾಗ್ಧಂಡನೆ ಯಿಂದ ಪಾರಾದ ಅದೃಷ್ಟವಂತರಾಗಿದ್ದರು. ಸದನದಲ್ಲಿ ಮೂರನೇ
ಎರಡು ಬಹುಮತವಿದ್ದರೆ ಮಾತ್ರ ನ್ಯಾಯಮೂರ್ತಿಗಳಿಗೆ ವಾಗ್ಧಂಡನೆ ಹಾಕಬಹುದು ಎಂಬ ನಿಯಮ ಅವರನ್ನು ಪಾರು ಮಾಡಿತು. ಆಗ ಸೇವೆಯಲ್ಲಿದ್ದ ರಾಮಸ್ವಾಮಿ ಮೇಲೆ ಹಣಕಾಸು ಅವ್ಯವಹಾರಗಳನ್ನು ಎಸಗಿದ ಆರೋಪವಿತ್ತು. ಕೆಲ ಸಮಯದ ಹಿಂದೆ ವೀರಸ್ವಾಮಿಯ ವಿರುದ್ಧ ಭ್ರಷ್ಟಾಚಾರ ನಿಗ್ರಹ ಕಾಯಿದೆಯಡಿ ದಾಖಲಾಗಿದ್ದ ಪ್ರಕರಣಗಳನ್ನು ಚೆನ್ನೈಯ ನ್ಯಾಯಾಲಯ ವಜಾಗೊಳಿಸಿದೆ. ಇದೇ ವೀರಸ್ವಾಮಿಯನ್ನು ಅವರ ಆತ್ಮಕತೆಯ ಬಿಡುಗಡೆ ಕಾರ್ಯಕ್ರಮದಲ್ಲಿ ಸುಪ್ರೀಂ ಕೋರ್ಟಿನ ನ್ಯಾಯಮೂರ್ತಿ ವಿ. ಆರ್. ಕೃಷ್ಣ ಅವರು ಇಂದ್ರಚಂದ್ರ ಎಂದೆಲ್ಲ ಹೊಗಳಿದ್ದಾರೆ! ಒಡಿಶಾ ಮೂಲದವರಾಗಿರುವ ನ್ಯಾ| ದೀಪಕ್ ಮಿಶ್ರಾ ಒಡಿಶಾ ಹೈಕೋರ್ಟಿನ ನ್ಯಾಯಮೂರ್ತಿಯಾಗಿದ್ದರು.
ಅನಂತರ ಅವರು ಮಧ್ಯಪ್ರದೇಶ ಹೈಕೋರ್ಟಿಗೆ ವರ್ಗವಾದರು. ಸುಪ್ರೀಂ ಕೋರ್ಟಿನ ವಿಶ್ರಾಂತ ಮುಖ್ಯ ನ್ಯಾಯಮೂರ್ತಿ ನ್ಯಾ| ರಂಗನಾಥ್ ಮಿಶ್ರಾಗೆ ನ್ಯಾ| ದೀಪಕ್ ಮಿಶ್ರಾ ಸೋದರ ಸಂಬಂಧಿಯಾಗಬೇಕು. ತನ್ನ ಮೇಲೆ ಆರೋಪ ಮಾಡಿದ ಪ್ರಶಾಂತ್ ಭೂಷಣ್‌ಗೆ, ನ್ಯಾ|ಮಿಶ್ರಾ ನ್ಯಾಯಾಲಯದಲ್ಲೇ “ಮಿಸ್ಟರ್ ಭೂಷಣ್, ನಿಮ್ಮ ವಿರುದ್ಧ ನ್ಯಾಯಾಂಗ ನಿಂದನೆ ಕೇಸು ದಾಖಲಿಸಲು ಅವಕಾಶವಿದೆ. ಆದರೆ ನೀವು ಅದಕ್ಕೂ ಅರ್ಹರಲ್ಲ’ ಎಂಬುದಾಗಿ ತಿರುಗೇಟು ನೀಡಿದ್ದಾರೆ.
ಪ್ರಶಾಂತ್ ಭೂಷಣ್ ಕೇಂದ್ರದ ಮಾಜಿ ಕಾನೂನು ಸಚಿವ ಶಾಂತಿಭೂಷಣ್ ಅವರ ಪುತ್ರ. ದುಬಾರಿ ಸಂಭಾವನೆ ಪಡೆಯುವ ದಿಲ್ಲಿಯ ಕೆಲ ಪ್ರಸಿದ್ಧ ವಕೀಲರ ಪೈಕಿ ಪ್ರಶಾಂತ್ ಭೂಷಣ್ ಕೂಡ ಒಬ್ಬರು. ಒಂದು ದಿನಕ್ಕೆ ಅವರು ಸುಮಾರು 25 ಲ. ರೂ.ಸಂಭಾವನೆ ಪಡೆದುಕೊಳ್ಳುತ್ತಾರೆ. ಆದರೆ “ನಾನು ಬರೀ ಶೇ. 25 ಕೇಸುಗಳಿಗೆ ಮಾತ್ರ ಸಂಭಾವನೆ ತೆಗೆದುಕೊಳ್ಳುತ್ತೇನೆ. ಉಳಿದ ಕೇಸುಗಳನ್ನು ಉಚಿತವಾಗಿ ವಾದಿಸುತ್ತೇನೆ’ ಎಂದು ಪ್ರಶಾಂತ್ ಭೂಷಣ್ ಹೇಳಿಕೊಳ್ಳುತ್ತಾರೆ.
ಈ ರೀತಿ ದುಬಾರಿ ಸಂಭಾವನೆ ಪಡೆದುಕೊಳ್ಳುವ ಸುಪ್ರೀಂಕೋರ್ಟಿನ ವಕೀಲರ ಕೂಟವೊಂದು ತನ್ನ ದೊಡ್ಡ ಕಂಠ ಮತ್ತು ಆಕ್ರಮಣಕಾರಿ ಶೈಲಿಯ ಮೂಲಕ ನ್ಯಾಯಮೂರ್ತಿಗಳನ್ನು ದಬಾಯಿಸುವುದು ಅಥವಾ ಬಲವಂತಪಡಿಸುವುದು ನ್ಯಾಯಾಂಗದ ಎಲ್ಲ ಹಂತಗಳಲ್ಲೂ ಕಂಡು ಬರುತ್ತದೆ. ಅವರ ವರ್ತನೆ ರಾಜಕೀಯದಲ್ಲಿ ತೋಳ್ಬಲ ಬಳಸುವ ರಾಜಕಾರಣಿಗಳಂತೆ ಇರುತ್ತದೆ. ದುಬಾರಿ ಸಂಭಾವನೆ ಪಡೆಯುವ ವಕೀಲ ಪ್ರತಿಭಾವಂತ ಆಗಿರಬೇಕೆಂದೇನೂ ಇಲ್ಲ. ಕರ್ನಾಟಕದ ತಾಲೂಕು ಮತ್ತು ಜಿಲ್ಲಾ ನ್ಯಾಲಯಗಳಲ್ಲೇ ಎಷ್ಟೋ ಪ್ರತಿಭಾವಂತ ವಕೀಲರಿದ್ದಾರೆ.
ದಿಲ್ಲಿಯಲ್ಲಿ ಕಚೇರಿ ಮಾಡಿಕೊಂಡಿಲ್ಲ ಎಂಬ ಕಾರಣಕ್ಕೆ ಅವರು ಬೆಳಕಿಗೆ ಬಂದಿಲ್ಲ ಅಷ್ಟೆ. ದಿಲ್ಲಿಯಲ್ಲಿರುವ ಸುಪ್ರೀಂ ಕೋರ್ಟು ಕರ್ನಾಟಕಕ್ಕೆ ಬಹಳ ದೂರದಲ್ಲಿದೆ. ಮೇಲಿನ ನ್ಯಾಯಾಲಯಗಳಲ್ಲಿ ವಾದಿಸುವುದಕ್ಕಿಂತ ಕೆಳಹಂತದ ನ್ಯಾಯಾಲಯಗಳಲ್ಲಿ ವಾದಿಸುವುದು ಹೆಚ್ಚು ಕಷ್ಟದ ಕೆಲಸ ಎನ್ನುವುದು ವಕೀಲರ ಅನುಭವದ ಮಾತು. ವಿಚಾರಣಾ ನ್ಯಾಯಾಲಯಗಳ ವಕೀಲರು ಸಾಮಾನ್ಯ ಜನರ ಪರಿವಾಗಿ ವಾದಿಸಬೇಕಾಗುತ್ತದೆ. ಅವರು ಮಾಡುವುದು ತಳಮಟ್ಟದ ವಕಾಲತ್ತು.
ಪ್ರಶಾಂತ್ ಭೂಷಣ್ ನಡೆಯಿಂದ ಜನಸಾಮಾನ್ಯರ ದೃಷ್ಟಿಯಲ್ಲಿ ಸುಪ್ರೀಂ ಕೋರ್ಟಿನ ಘನತೆಗೆ ಹಾನಿಯಾಗಿದೆ. ದೇಶದ ಎಲ್ಲ ಕ್ಷೇತ್ರಗಳಲ್ಲೂ ಭ್ರಷ್ಟಾಚಾರ ಹಾಸುಹೊಕ್ಕಾಗಿದೆ ಎಂಬ ಸಾರ್ವತ್ರಿಕ ಅಭಿಪ್ರಾಯಕ್ಕೆ ನ್ಯಾಯಾಂಗವೂ ಸೇರ್ಪಡೆಯಾದಂತಾಗಿದೆ. ಭ್ರಷ್ಟ ರಾಜಕಾರಣಿ ಅಥವಾ ಸರಕಾರಿ ಅಧಿಕಾರಿ ಮತ್ತು ನ್ಯಾಯಾಧೀಶರನ್ನು ಜನರು ಒಂದೇ ತಕ್ಕಡಿಯಲ್ಲಿ ತೂಗುವಂತಾಗಿದೆ. “ನನಗೆ ಇಂತಿಂಥ ನ್ಯಾಯಮೂರ್ತಿಗಳು ಗೊತ್ತು’ ಎಂದು ಹೇಳಿಕೊಳ್ಳುವ ದಲ್ಲಾಳಿಗಳು ಅಥವಾ ಫಿಕ್ಸರ್‌ಗಳು ನ್ಯಾಯಾಂಗ ವ್ಯವಸ್ಥೆಯಲ್ಲಿ ತೂರಿಕೊಂಡಿರು ವುದು ಕಳವಳಕಾರಿ ವಿಷಯ. “ಕೋರ್ಟಿನಲ್ಲಿ ಮ್ಯಾಚ್ ಫಿಕ್ಸಿಂಗ್’ ಎಂಬ ಮಾತನ್ನು ನಾವೀಗ ಆಗಾಗ ಕೇಳುತ್ತಿರುತ್ತೇವೆ. ಮೆಡಿಕಲ್ ಕಾಲೇಜು ಪ್ರಕರಣದಲ್ಲಿ ತಥಾಕಥಿತ ಫಿಕ್ಸರ್ ಇರುವುದು ದೇಶದ ನ್ಯಾಯಾಂಗದಲ್ಲಿ ತಲ್ಲಣವುಂಟು ಮಾಡಿರುವ ಬೆಳವಣಿಗೆ. ಪ್ರಶಾಂತ್ ಭೂಷಣ್ ಹೇಳಿರುವ ಪ್ರಕಾರ ಮುಖ್ಯ ನ್ಯಾಯಮೂರ್ತಿಗಳ ವಿರುದ್ಧವೇ ಸಿಬಿಐ ಎಫ್ಐಆರ್ ದಾಖಲಿಸಿದ್ದರೆ ಅದು ಇನ್ನೂ ಹೆಚ್ಚು ಚಿಂತೆಯುಂಟು ಮಾಡುವ ವಿಚಾರ. ವೀರಸ್ವಾಮಿ ಪ್ರಕರಣದ ತೀರ್ಪನ್ನು ಸಿಬಿಐ ಮರೆತುಬಿಟ್ಟಿದೆಯೇ?
ಪ್ರಶಾಂತ್ ಭೂಷಣ್ ಉನ್ನತ ನ್ಯಾಯಾಂಗದ ಮೇಲೆ ದೋಷಾರೋಪ ಮಾಡುತ್ತಿರುವುದು ಇದು ಮೊದಲೇನಲ್ಲ. 2009ರಲ್ಲಿ ಅವರು ಸುಪ್ರೀಂ ಕೋರ್ಟಿನ 16 ಮಾಜಿ ಮುಖ್ಯ ನ್ಯಾಯಮೂರ್ತಿಗಳು ಭ್ರಷ್ಟರಾಗಿದ್ದರು ಎಂಬ ಬೆಚ್ಚಿ ಬೀಳಿಸುವ ಹೇಳಿಕೆ ನೀಡಿದ್ದರು. ಈ ಸಂದರ್ಭದಲ್ಲಿ ನ್ಯಾ| ಕೃಷ್ಣ ಅಯ್ಯರ್ ಒಂದೋ ಪ್ರಶಾಂತ್ ಭೂಷಣ್‌ರನ್ನು ಸುಳ್ಳು ಆರೋಪ ಮಾಡಿದ್ದಕ್ಕೆ ಶಿಕ್ಷಿಸಿ ಇಲ್ಲವೇ ಅವರು ಮಾಡಿದ ಆರೋಪಗಳನ್ನು ತನಿಖೆಗೊಳಪಡಿಸಲು ಸ್ವತಂತ್ರ ಸಮಿತಿಯನ್ನು ರಚಿಸಿ ಎಂದು ಸಲಹೆ ನೀಡಿದ್ದರು. ಆದರೆ ಸುಪ್ರೀಂ ಕೋರ್ಟ್ ಮತ್ತು ಹೈಕೋರ್ಟಿನ ನ್ಯಾಯಮೂರ್ತಿಗಳು ತಮ್ಮ ಸಂಪತ್ತನ್ನು ಮಾಹಿತಿ ಹಕ್ಕು ಕಾಯಿದೆಯಡಿ ಬಹಿರಂಗಗೊಳಿಸುವ ಪದ್ಧತಿ ಪ್ರಾರಂಭವಾಗಿರುವುದಕ್ಕೆ ಕಾರಣಕರ್ತರಾಗಿರುವ ಪ್ರಶಾಂತ್ ಭೂಷಣ್ ಮತ್ತು ಅವರ ಕಮಿಟಿ ಫಾರ್ ಜುಡಿಶಿಯಲ್ ಅಕೌಂಟಬಿಲಿಟಿ ಸಂಸ್ಥೆಯನ್ನು ಅಭಿನಂದಿಸಲೇಬೇಕು.
ಹಿರಿತನದಲ್ಲಿ ಎರಡನೇ ಸ್ಥಾನದಲ್ಲಿರುವ ನ್ಯಾ| ಚಲಮೇಶ್ವರ ಅವರು ಸುಪ್ರೀಂ ಕೋರ್ಟ್ ಮತ್ತು ಹೈಕೋರ್ಟಿಗೆ ನ್ಯಾಯ ಮೂರ್ತಿಗಳನ್ನು ನೇಮಿಸುವ ಸುಪ್ರಿಂಕೋರ್ಟ್ ಕೊಲಿಜಿಯಂನ ಸಭೆಗಳಲ್ಲಿ ಭಾಗವಹಿಸುವುದಿಲ್ಲ. ಕೊಲಿಜಿಯಂ ವ್ಯವಸ್ಥೆ ಯಿಂದ ನ್ಯಾಯಮೂರ್ತಿಗಳ ನೇಮಕಾತಿ ಪಾರದರ್ಶಕವಾಗಿದೆ ಎಂದು ತಿಳಿದು ಬಂದ ಬಳಿಕ ಅವರು ತನ್ನ ನಿಲುವು ಬದಲಾಯಿಸಿರುವ ಸಾಧ್ಯತೆಯಿದೆ. ರಾಷ್ಟ್ರೀಯ ನ್ಯಾಯಾಂಗ ನೇಮಕಾತಿ ಆಯೋಗಕ್ಕೆ ಸಂಬಂಧಿಸಿ ಭಿನ್ನ ತೀರ್ಪು ನೀಡಿ ಮತ್ತು 99ನೇ ತಿದ್ದುಪಡಿಯನ್ನು ರದ್ದುಪಡಿಸಿ ನ್ಯಾ| ಚಲಮೇಶ್ವರ ಹೆಚ್ಚು ಪ್ರಸಿದ್ಧಿಗೆ ಬಂದಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.