ಹೇಳಿ, ದೀನಾ ಜಿನ್ನಾ ಎಂಬಾಕೆಯ ಬಗ್ಗೆ ನಿಮಗೆಷ್ಟು ಗೊತ್ತು?
Team Udayavani, Nov 8, 2017, 8:43 AM IST
ನಮ್ಮ ಪತ್ರಕರ್ತರಲ್ಲಿಂದು ಸಾವಿನ ಸುದ್ದಿ ಬರೆಯುವ ಕಲೆ ಕಾಂತಿಗುಂದುತ್ತ ಸಾಗಿದೆ. ಇಂಥ ಬರಹಗಳಿಗೆ ಅಗತ್ಯವಾದ ವಿಪುಲ ಮಾಹಿತಿ ಪತ್ರಕರ್ತರಲ್ಲಿ ಇರಬೇಕಾಗುತ್ತದೆ. ಪಾಕಿಸ್ತಾನದಲ್ಲಿ ಕೂಡ, ಅಲ್ಲಿನ ಉರ್ದು ದಿನಪತ್ರಿಕೆಗಳು ದೀನಾ ಸಾವಿನ ಸುದ್ದಿಯನ್ನು ಕೇವಲ “ಪ್ರಾಸಂಗಿಕ’ವೆಂಬಂಥ ರೀತಿಯಲ್ಲಿ ಪ್ರಕಟಿಸಿದವೆನ್ನಲಾಗುತ್ತಿದೆ. ಆದರೂ ಪಾಕಿಸ್ತಾನ ಅತ್ಯಧಿಕ ಪ್ರಸಾರದ ಇಂಗ್ಲಿಷ್ ದೈನಿಕ “ದ ಡಾನ್’, ಆಕೆಯ ಸಾವನ್ನು “ಒಂದು ಯುಗದ ಅಂತ್ಯ’ ಎಂದು ಬಣ್ಣಿಸಿತ್ತು.
ದೀನಾ ಜಿನ್ನಾ ಎಂಬ ಮಹಿಳೆಯ ಬಗ್ಗೆ ಕೇಳಿದ್ದೀರಾ? ಅಥವಾ ದೀನಾ ವಾಡಿಯಾ ಬಗ್ಗೆ? ಮೊನ್ನೆ ನವೆಂಬರ್ 2ರಂದು ನ್ಯೂಯಾರ್ಕಿನಲ್ಲಿ ನಿಧನ ಹೊಂದಿದ ಈ ಮಹಿಳೆಯ ಬಗ್ಗೆ ಭಾರತೀಯರಾದ ನಮ್ಮ ಪೈಕಿ ಹೆಚ್ಚಿನವರಿಗೆ ತಿಳಿದಿರಲಾರದು. ಅಷ್ಟೇಕೆ, ನಮ್ಮ ನೆರೆ ರಾಷ್ಟ್ರವಾದ ಪಾಕಿಸ್ತಾನದ ಸೃಷ್ಟಿಗೆ ಕಾರಣರಾಗಿದ್ದ ಮಹಮ್ಮದ್ ಅಲಿ ಜಿನ್ನಾ ಅವರ ಪುತ್ರಿಯಾದ ಈ ದೀನಾ ಜಿನ್ನಾ, ಪಾಕಿಸ್ಥಾನೀಯರಿಗೂ ಬಹುತೇಕ ಅಪರಿಚಿತರೇ!
ಇದು ತನ್ನ 98ರ ಹಣ್ಣು ಹರೆಯದಲ್ಲಿ ಇಹಯಾತ್ರೆ ಮುಗಿಸಿದ ನಮ್ಮದೇ ಮುಂಬಯಿಯ ಹೆಣ್ಣುಮಗಳ ದುರಂತ ಕಥೆ. ಈಕೆ ಮುಂಬಯಿಯಲ್ಲಿ ತನ್ನ ಬದುಕಿನ ಬಹುತೇಕ ವರ್ಷಗಳನ್ನು ಕಳೆದದ್ದೇನೋ ಹೌದು. ಆದರೆ ಭಾರತದ ನಕ್ಷೆಯನ್ನೇ ಬದಲಿಸಿದ ವ್ಯಕ್ತಿಯಾದ ಜಿನ್ನಾ ಅವರು ಭಾರತೀಯರ ಪಾಲಿಗೊಬ್ಬ ಅಕ್ಷಮ್ಯ ವ್ಯಕ್ತಿಯಾಗಿದ್ದರೆಂಬ ಕಾರಣಕ್ಕಾಗಿ ಈಕೆ ಈ ಮಹಾನಗರವನ್ನು ತ್ಯಜಿಸಬೇಕಾಯಿತು. ಇನ್ನು, ಪಾಕಿಸ್ತಾನದಲ್ಲಿ ಕೂಡ, ಅಲ್ಲಿನ ವಿದ್ಯಾವಂತ ಹಾಗೂ ಅಧಿಕಾರಸ್ಥ ಮಂದಿಯನ್ನು ಹೊರತು ಪಡಿಸಿದರೆ, ಈಕೆ ಅಪರಿಚಿತರಾಗಿಯೇ ಉಳಿದರೆಂಬುದು ನಿಜ.
ನಮ್ಮ ದೇಶದ ಹೆಚ್ಚಿನ ಪತ್ರಿಕೆಗಳು ದೀನಾ ವಾಡಿಯಾ ಉಫ್ì ದೀನಾ ಜಿನ್ನಾ ಅವರ ಮರಣ ವಾರ್ತೆಯನ್ನು ಶಾಸ್ತ್ರಕ್ಕೆಂಬಂತೆ ಎಲ್ಲೋ ಕಿಂಚಿತ್ ಪ್ರಮಾಣದಲ್ಲಿ ಪ್ರಕಟಿಸಿ ಕೈತೊಳೆದುಕೊಂಡವು. ನಮ್ಮ ಪತ್ರಕರ್ತರಲ್ಲಿಂದು ಸಾವಿನ ಸುದ್ದಿ ಬರೆಯುವ ಕಲೆ ಕಾಂತಿಗುಂದುತ್ತ ಸಾಗಿದೆ. ಕಾರಣ, ಇಂಥ ಬರಹಗಳಿಗೆ ಅಗತ್ಯವಾದ ವಿಪುಲ ಮಾಹಿತಿ ಪತ್ರಕರ್ತರಲ್ಲಿ ಇರಬೇಕಾಗುತ್ತದೆ. ಪಾಕಿಸ್ತಾನದಲ್ಲಿ ಕೂಡ, ಅಲ್ಲಿನ ಉರ್ದು ದಿನಪತ್ರಿಕೆಗಳು ದೀನಾ ಸಾವಿನ ಸುದ್ದಿಯನ್ನು ಕೇವಲ “ಪ್ರಾಸಂಗಿಕ’ವೆಂಬಂಥ ರೀತಿಯಲ್ಲಿ ಪ್ರಕಟಿಸಿದವೆಂಬ ಮಾತೂ ಕೇಳಿ ಬಂದಿದೆ. ಆದರೂ ಪಾಕಿಸ್ತಾನ ಅತ್ಯಧಿಕ ಪ್ರಸಾರದ ಇಂಗ್ಲಿಷ್ ದೈನಿಕ “ದ ಡಾನ್’, ಆಕೆಯ ಸಾವನ್ನು “ಒಂದು ಯುಗದ ಅಂತ್ಯ’ ಎಂದು ಬಣ್ಣಿಸಿತ್ತು. ಅಲ್ಲಿನ ಇನ್ನೊಂದು ಪತ್ರಿಕೆ, “ಇತಿಹಾಸದ ಇನ್ನೊಂದು ಕಿಟಕಿ ಮುಚ್ಚಿಕೊಂಡಿತು’ ಎಂದು ಬರೆಯಿತು. “ಡಾನ್’ ಪತ್ರಿಕೆಯ ಪ್ರಪ್ರಥಮ ಸಂಪಾದಕರಾಗಿದ್ದವರು ಖ್ಯಾತ ಪತ್ರಕರ್ತ ಪೋತನ್ ಜೋಸೆಫ್, ಅವರು ಬೆಂಗಳೂರನ್ನೇ ತಮ್ಮ ತವರು ಮನೆಯಾಗಿಸಿಕೊಂಡಿದ್ದರು.
ಪಾಕಿಸ್ತಾನದ ಅಧ್ಯಕ್ಷ ಮಮೂ°ನ್ ಹುಸೇನ್ ಹಾಗೂ ಹಂಗಾಮಿ ಪ್ರಧಾನಿ ಶಹೀದ್ ಖಾಕಾನ್ ಅಬ್ಟಾಸಿ ಇವರಿಬ್ಬರೂ ದೀನಾ ವಾಡಿಯಾ ಅವರಿಗೆ ಶ್ರದ್ಧಾಪೂರ್ವಕ ನುಡಿನಮನಗಳನ್ನು ಅರ್ಪಿಸಿದ್ದಾರೆ; ಆಕೆ ಅತ್ಯಂತ ಗೌರವಾರ್ಹ ಹಾಗೂ ಆರಾಧನಾರ್ಹ ಮಹಿಳೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಪಾಕ್‌ಗೆ ಭೇಟಿ ಎರಡೇ ಬಾರಿ
ಆದರೆ ಈ ಮಹಿಳೆ ಭಾರತವನ್ನೇ ತನ್ನ ಮನೆ ಎಂದು ಸ್ವೀಕರಿಸಿದ್ದರು. ಪಾಕಿಸ್ತಾನದಲ್ಲಿ ತಾನು ಹೇಗೆ ಬೇಕೆಂದರೆ ಹಾಗೆ ಮೆರೆದಾಡಬಹುದಿತ್ತು. ಆದರೆ ಈಕೆ ಪಾಕಿಸ್ತಾನದಿಂದ ದೂರವೇ ಉಳಿದರು. ಇದಕ್ಕಾಗಿ ಈಕೆಯನ್ನು ನಾವು ಅಭಿನಂದಿಸದಿರಲು ಸಾಧ್ಯವಿಲ್ಲ. ದೀನಾ ಅವರು ತಮ್ಮ ಜೀವಿತದಲ್ಲಿ ಪಾಕ್‌ಗೆ ಭೇಟಿ ನೀಡಿದ್ದು ಎರಡೇ ಬಾರಿ. 1947ರ ಆಗಸ್ಟ್ 14ರಂದು ಪಾಕಿಸ್ತಾನವೆಂಬ ಹೊಸ ರಾಷ್ಟ್ರ ಉದಯವಾದಾಗ, ಆಗಿನ ತಾತ್ಕಾಲಿಕ ರಾಜಧಾನಿಯಾಗಿದ್ದ ಕರಾಚಿಗೆ ತೆರಳಿದ್ದ ತಮ್ಮ ತಂದೆಯೊಂದಿಗೆ ಈಕೆ ತೆರಳಬಹುದಿತ್ತು; ಆದರೆ ತೆರಳಲಿಲ್ಲ. ಈ ಮೂಲಕ ಆಕೆ ಯಾವುದೇ ರಾಷ್ಟ್ರದ ಅತ್ಯಂತ ರೋಮಾಂಚಕ ದಿನದ ಕ್ಷಣಗಳನ್ನು ಕಳೆದುಕೊಂಡರು. ತಮ್ಮ ತಂದೆ ಆ ರಾಷ್ಟ್ರದ ಪ್ರಥಮ ಗವರ್ನರ್ ಜನರಲ್ ಆಗಿ ಅಧಿಕಾರ ಸ್ವೀಕರಿಸುವುದನ್ನು ಕಾಣುವ ಅವಕಾಶವನ್ನು ಕಳೆದುಕೊಂಡರು. ಆಕೆ ಪಾಕಿಸ್ತಾನಕ್ಕೆ ಮೊದಲ ಭೇಟಿ ನೀಡಿದ್ದು 1948ರ ಸೆಪ್ಟೆಂಬರ್ 11ರಂದು; ತಮ್ಮ ತಂದೆ ನಿಧನರಾದಾಗ ಅವರ ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳಲಿಕ್ಕಾಗಿ. ಎರಡನೆಯ ಬಾರಿ ಭೇಟಿ ನೀಡಿದ್ದು, ಅನೇಕ ವರ್ಷ ಗಳ ಬಳಿಕ, 1994ರಲ್ಲಿ, ಭಾರತ-ಪಾಕಿಸ್ತಾನ ನಡುವಣ ಕ್ರಿಕೆಟ್ ಪಂದ್ಯದ ವೀಕ್ಷಣೆಗಾಗಿ. ಈ ಸಂದರ್ಭದಲ್ಲಿ ಆಕೆ ತಮ್ಮ ತಂದೆ ಹಾಗೂ ಸೋದರತ್ತೆಯ (ಫಾತಿಮಾಜಿನ್ನಾ) ಸ್ಮಾರಕಗ ಳನ್ನು ವೀಕ್ಷಿಸಿ ಬಂದರು. ಪಾಕ್ ಜತೆಗೆ ಮೈತ್ರಿ ಹಾಗೂ ಶಾಂತಿ ಏರ್ಪಡಲೇಬೇಕೆಂದು ಬಯಸುವ ಮೊಂಬತ್ತಿ ಪ್ರದರ್ಶನಕಾರ ರೊಂದಿಗೆ ಪಾಲ್ಗೊಳ್ಳುವ ಗೋಜಿಗೆ ಆಕೆ ಹೋಗಲೇ ಇಲ್ಲ.
ಇದಕ್ಕೆ ಇರಬಹುದಾದ ಕಾರಣಗಳಲ್ಲೊಂದು – ವ್ಯವಹಾರಕ್ಕೆ ಸಂಬಂಧಿಸಿದ್ದು. ದೀನಾ ವಾಡಿಯಾ ಹುಟ್ಟಿದ್ದು ಶ್ರೀಮಂತ ಕುಟುಂಬದಲ್ಲಿ. ಬದುಕಿ ಬಾಳಿದ್ದು ಕೂಡ ಸಿರಿವಂತಿಕೆಯಲ್ಲೇ. ಆಕೆಯ ಪತಿ ನೆವಿಲ್ ವಾಡಿಯಾ ಅವರು ಬಾಂಬೆ ಡೈಯಿಂಗ್ ಕಂಪೆನಿಯನ್ನೊಳಗೊಂಡಂತೆ ಬೃಹತ್ ವಾಡಿಯಾ ಗುಂಪಿನ ಕಂಪೆನಿಗಳ ಮಾಲಕರು. ವಾಡಿಯಾ ಜವುಳಿ ಉದ್ದಿಮೆ ಭಾರತ ಸರಕಾರದ ತೆÌàಷಪೂರ್ಣ ವರ್ತನೆ, 1982ರಲ್ಲಿ “ಸೂಸೈಡ್ ಬಾಂಬರ್’ ದತ್ತಾ ಸಾಮಂತ್ ನೇತೃತ್ವದಲ್ಲಿ ನಡೆದ ಮಾರಕಪ್ರಾಯ ಗಿರಣಿ ಮುಷ್ಕರ ಹಾಗೂ ಜವುಳಿ ಗಿರಣಿಗಳನ್ನು “ಮಾಲ್’ಗಳಾಗಿ ಪರಿವರ್ತಿಸಿದ ರಿಯಲ್ ಎಸ್ಟೇಟ್ ಅವತಾರ ಮುಂತಾದ ಸವಾಲುಗಳನ್ನು ಗೆದ್ದು ಬಂದಿರುವ ಕೈಗಾರಿಕಾ ಸಾಹಸವಾಗಿದೆ. ನೆವಿಲ್ ವಾಡಿಯಾರೊಂದಿಗಿನ ದೀನಾ ಅವರ ವಿವಾಹ ಮುರಿದುಬಿತ್ತಾದರೂ ವಾಡಿಯಾ ಕುಟುಂಬದ ಉದ್ದಿಮೆ ವ್ಯವಹಾರದ ನಿಯಂತ್ರಣ ಆಕೆಯ ಪುತ್ರ ನುಸ್ಲಿ ವಾಡಿಯಾರ ಕೈಯಲ್ಲೇ ಇದೆ.
ದೀನಾ ವಾಡಿಯಾ ಅವರು ಜಿನ್ನಾ ಹಾಗೂ (ದ್ವಿತೀಯ ಪತ್ನಿ, ಪಾರ್ಸಿ ಮಹಿಳೆ) ರತನ್‌ಬಾಯ್ ಇವರ ಏಕೈಕ ಪುತ್ರಿ. ರತನ್‌ಬಾಯ್ ಇಸ್ಲಾಮಿಗೆ ಮತಾಂತರಗೊಂಡು ಮರಿಯಂ ಜಿನ್ನಾ ಆದರು. ದೀನಾ ಜನಿಸಿದ್ದು, 1919ರ ಆಗಸ್ಟ್ 14ರಂದು. ಪಾಕಿಸ್ತಾನಕ್ಕೆ ಸ್ವಾತಂತ್ರ್ಯ ಲಭಿಸಿದ್ದು, ಆಕೆ ಹುಟ್ಟಿ 28 ವರ್ಷಗಳ ಬಳಿಕ. 1938ರಲ್ಲಿ ಆಕೆ ನೆವಿಲ್ ವಾಡಿಯಾರನ್ನು (ಈತ ಕ್ರಿಶ್ಚಿಯಾನಿಟಿಗೆ ಮತಾಂತರಗೊಂಡ ಪಾರ್ಸಿ)ವಿವಾಹವಾದರು. ತಂದೆಯ ಇಚ್ಛೆಗೆ ವಿರುದ್ಧವಾಗಿ ನಡೆದ ಮದುವೆ ಇದು. ಮಗಳು ಓರ್ವ ಮುಸ್ಲಿಂ ಯುವಕನನ್ನು ಮದುವೆಯಾದರೆ ಚೆನ್ನ ಎಂಬುದು ಜಿನ್ನಾ ಅವರ ಬಯಕೆಯಾಗಿತ್ತು. ತನ್ನ ಸಮುದಾಯಕ್ಕಿಂತ ಹೊರಗಿನ ಒಬ್ಬನನ್ನು ತಾನು ಮದುವೆಯಾಗುತ್ತಿರುವುದು ಯಾಕೆ ಎಂದಾಕೆ ತಂದೆಗೆ ನೀಡಿದ ಕಾರಣವನ್ನು ಜಿನ್ನಾ ಅವರ ಕಿರಿಯ ಲಾಯರ್‌ಗಳಲ್ಲೊಬ್ಬರಾದ ಮೊಹಮ್ಮದ್ ಕರೀಂ ಚೌಗ್ಲಾ ಅವರು ತಮ್ಮ ಆತ್ಮಚರಿತ್ರೆಯಲ್ಲಿ ದಾಖಲಿಸಿದ್ದಾರೆ. ಭಾರತದಲ್ಲಿ ಕೋಟ್ಯಂತರ ಮುಸ್ಲಿಂ ಯುವಕರಿದ್ದಾರೆ. ಅವರಲ್ಲೊಬ್ಬನನ್ನು ಮದುವೆಯಾಗಬಹುದಲ್ಲ ಎಂದು ಜಿನ್ನಾ ಆಗ್ರಹಿಸಿದ್ದರು. ಮಗಳು ತಿರುಗಿಬಿದ್ದು ಕೇಳಿದ್ದಳು- “”ಅಪ್ಪ, ಭಾರತದಲ್ಲಿ ಕೋಟ್ಯಂತರ ಮುಸ್ಲಿಂ ಹುಡುಗಿಯರಿದ್ದಾರೆ; ನೀವೇಕೆ ಒಬ್ಬಳನ್ನು ಮದುವೆಯಾಗಲಿಲ್ಲ?” ಜಿನ್ನಾ, “”ಆಕೆ (ರತನ್ ಬಾಯ್) ಮುಸ್ಲಿಂ ಆಗಿ ಮತಾಂತರಗೊಂಡಿದ್ದಾಳೆ” ಎಂದು ಉತ್ತರಿಸಿದ್ದರು. ದೀನಾ ವಾಡಿಯಾರ ವಿವಾಹದ ಬಳಿಕ ಜಿನ್ನಾ ಅವರು ತಮ್ಮ ಒಂದು ಕಾಲದ ಮುದ್ದಿನ ಮಗಳೊಂದಿಗೆ ಕೇವಲ ಔಪಚಾರಿಕವಾಗಿಯಷ್ಟೆ ನಡೆದುಕೊಂಡರು; ಆಕೆಯನ್ನು “ಮಿಸೆಸ್ ವಾಡಿಯಾ’ ಎಂದೇ ಕರೆಯತೊಡಗಿದರು. ಆಕೆಯ ವಾರಸುದಾರಿಕೆಯನ್ನು ತಪ್ಪಿಸದಿ ದ್ದರೂ ಜಿನ್ನಾ ಮುಂಬಯಿಯಲ್ಲಿನ ತಮ್ಮೆಲ್ಲ ಆಸ್ತಿಯನ್ನೂ ತಮ್ಮ ತಂಗಿ ಫಾತಿಮಾ ಜಿನ್ನಾರ ಹೆಸರಿಗೆ ಮಾಡಿದ್ದರು; ದೀನಾಗೆ ದೊಡ್ಡ ಮೊತ್ತದ ಹಣವನ್ನಷ್ಟೇ ಕೊಟ್ಟು ಕೈ ತೊಳೆದುಕೊಂಡರು. ತನ್ನ ತಾಯಿಯ ಬಂಧುಗಳ ಪೈಕಿ ಪೇತಿತ್ ಕುಟುಂಬದೊಂದಿಗೆ ಆಕೆಯ ನಂಟು ಚೆನ್ನಾಗಿತ್ತು (ಶಿಫ್ಟಿಂಗ್ ಮತ್ತು ಜವುಳಿ ಮಿಲ್ ವ್ಯಾಪಾರಿ ಸರ್ ದಿನ್‌ಶಾ ಪೇತಿತ್ ಅವರ ಮೊಮ್ಮಗಳು).
ಹಾಗೆ ನೋಡಿದರೆ ಮಹಮ್ಮದ್ ಅಲಿ ಜಿನ್ನಾ ಅವರ ಪೂರ್ವಿಕರು ಮೂಲತಃ ಹಿಂದುಗಳು. 19ನೆಯ ಶತಮಾನದಲ್ಲಿ ಜಿನ್ನಾ ಅವರ ಮುತ್ತಾತ ಪ್ರೇಮ್‌ಜಿ ಭಾಯ್ ಮೇಘ…ಜಿ ಠಕ್ಕಸ್ ಅವರು ಇಸ್ಲಾಮನ್ನು ಅಪ್ಪಿಕೊಂಡರು. ಶಿಯಾ ಪಂಥದ ಖೋಜಾ ಮುಸ್ಲಿಂ ಎಂಬುದಾಗಿ ಗುರುತಿಸಿಕೊಂಡರು. ಜಿನ್ನಾ ಅವರ ತಂದೆ ಜಿನ್ನಾ ಭಾಯ್ ಪೂಂಜಾ ಅವರು ಒಬ್ಬ ಶ್ರೀಮಂತ ವಾಣಿಜ್ಯೋದ್ಯಮಿ. ಅವಿಭಜಿತ ಭಾರತದಲ್ಲಿ ಅಲ್ಪಸಂಖ್ಯಾತ ಮುಸ್ಲಿಮ್ ಸಮುದಾಯದವರೆಂಬ ನೆಲೆಯಲ್ಲಿ ಅವರು ನಿವೇಶನ ಪಡೆದುಕೊಳ್ಳುವಲ್ಲಿ ಯಶಸ್ವಿಯಾದರೇನೋ ಹೌದು. ಆದರೆ ಬಹುಸಂಖ್ಯಾಕ ಸುನ್ನಿಗಳ ನಾಡಾದ ಪಾಕಿಸ್ತಾನದಲ್ಲಿ ಜಿನ್ನಾ ಅವರು ಯಾವ ಪಂಗಡಕ್ಕೆ ಸೇರಿದ್ದರೋ ಆ ಶಿಯಾ ಪಂಗಡದ ಮುಸ್ಲಿಮರು ಇನ್ನೂ ಅಲ್ಪಸಂಖ್ಯಾಕರೇ.
ದೀನಾ ವಾಡಿಯಾ ಅವರು ಪಾಕಿಸ್ತಾನದಲ್ಲಿದ್ದ ಜಿನ್ನಾ ಅವರ ಆಸ್ತಿಪಾಸ್ತಿಯ ಮೇಲೆ ಹಕ್ಕು ಸಾಧಿಸುವಂತಿರಲಿಲ್ಲ; ಯಾಕೆಂದರೆ ಇಸ್ಲಾಮೀ ನಿಯಮಗಳನ್ನು ಮುರಿದವರಿಗೆ ಪಾಕಿಸ್ತಾನಿ ಕಾನೂನಿನಲ್ಲಿ ವಾರಸುದಾರಿಕೆಯ ಹಕ್ಕಿಲ್ಲ. ಆದರೂ ಆಕೆ ಮುಂಬಯಿಯ ಮಲಬಾರ್‌ಹಿಲ್‌ನ ಮೌಂಟ್ ಪ್ಲೆಸೆಂಟ್ ರೋಡ್ ಪರಿಸರದಲ್ಲಿನ ಜಿನ್ನಾ ಬಂಗಲೆಯ ಒಡೆತನದ ಹಕ್ಕನ್ನು ಪ್ರತಿಪಾದಿಸಲು ಬಯಸಿದರು; 2004ರಲ್ಲಿ ಬಾಂಬ್ ಹೈಕೋರ್ಟಿಗೆ ಅರ್ಜಿ ಸಲ್ಲಿಸಿದ್ದರು. ಆ ಮನೆ “ನಿರ್ವಾಸಿತ ಆಸ್ತಿ’ ಎಂದು ಘೋಷಿಸಿದ್ದ ಭಾರತ ಸರಕಾರದ ಕ್ರಮವನ್ನು ಪ್ರಶ್ನಿಸಿದರು. ಇತ್ತ ಪಾಕಿಸ್ತಾನ ಸರಕಾರ ಜಿನ್ನಾ ನಿವಾಸವನ್ನು ತನಗೆ ಒಪ್ಪಿಸುವಂತೆ ಭಾರತ ಸರಕಾರವನ್ನು ವಿನಂತಿಸುತ್ತಿದೆ. ಆಗ್ರಾ ಶೃಂಗಸಭೆಗೆಂದು ಭಾರತಕ್ಕೆ ಆಗಮಿಸಿದ್ದ ಆಗಿನ ಪಾಕ್ ಅಧ್ಯಕ್ಷ ಪರ್ವೇಜ್ ಮುಶರ್ರಫ್ ಅವರು, ಈ ಮನೆಯ ಮೇಲೆ ಪಾಕಿಸ್ತಾನಕ್ಕೆ ಭಾವನಾತ್ಮಕ ಸಂಬಂಧವಿರುವುದರಿಂದ ಇದನ್ನು ಪಾಕಿಸ್ತಾನಕ್ಕೆ ಬಿಟ್ಟುಕೊಡುವಂತೆ ಆಗಿನ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿಯವರನ್ನು ವಿನಂತಿಸಿದ್ದರು. ಈ ನಡುವೆ ಬಾಂಬೆ ಹೈಕೋರ್ಟಿನಲ್ಲಿ ದೀನಾ ಜಿನ್ನಾ ಹೂಡಿದ ದಾವೆಯ ಕತೆ ಏನಾಯಿತೆಂದು ತಿಳಿಯದು. ಈ ಪ್ರತಿಷ್ಠಿತ ನಿವಾಸವನ್ನು ಪಾಕಿಸ್ತಾನಕ್ಕಲ್ಲದಿದ್ದರೂ ವಾಡಿಯಾ ಕುಟುಂಬಕ್ಕೆ ವರ್ಗಾಯಿಸಬೇಕೆಂಬ ಸಲಹೆಯೂ ಕೇಳಿಬಂದಿದೆ. 1980ರ ದಶಕದ ತನಕವೂ ಮುಂಬಯಿಯ ಜಿನ್ನಾ ಬಂಗಲೆಯಲ್ಲಿ
ಬ್ರಿಟಿಶ್ ದೂತಾವಾಸದ ಕಚೇರಿ ಕಾರ್ಯನಿರ್ವಹಿಸುತ್ತಿತ್ತು. ಬಂಗಲೆಯನ್ನು ತನಗೆ ಬಿಟ್ಟುಕೊಡಬೇಕೆಂಬ ಪಾಕಿಸ್ತಾನದ ಬೇಡಿಕೆಯನ್ನು ಶಿವಸೇನಾ ನಾಯಕ ಬಾಳ್ ಠಾಕ್ರೆ ವಿರೋಧಿಸಿದ್ದರು. “”ಇಂದು ಅದು ಜಿನ್ನಾರ ಮನೆಯನ್ನು ಕೇಳುತ್ತಿದೆ; ನಾಳೆ ತಾಜ್‌ಮಹಲ್ ಮತ್ತು ಕುತುಬ್ ಮಿನಾರ್‌ನ ಮೇಲೂ ಹಕ್ಕು ಸಾಧಿಸಬಹುದು” ಎಂದವರು ಗುಡುಗಿದ್ದರು. ದೀನಾ ವಾಡಿಯಾ ಪಾಕಿಸ್ತಾನದಿಂದ ದೂರವಿದ್ದುದಕ್ಕೆ ಇದ್ದ ಕಾರಣಗಳಲ್ಲಿ ಒಂದು ಹೀಗಿರಬಹುದು: ಅಲ್ಲಿನ ರಾಜಕಾರಣಿಗಳು ಲಿಯಾಕತ್ ಅಲಿ ಖಾನ್‌ರವರ ಕಾಲದಿಂದಲೂ ದೀನಾ ಅವರ ಸೋದರತ್ತೆ ಫಾತಿಮಾ ಜಿನ್ನಾ ಬಗ್ಗೆ ದ್ವೇಷಭಾವನೆಯನ್ನು ತೋರುತ್ತ ಬಂದಿದ್ದರು. ಫಾತಿಮಾ ತನ್ನ ಆತ್ಮಚರಿತ್ರೆ ಪ್ರಕಟಿಸಲು ಮುಂದಾದಾಗ ಪಾಕ್ ಸರಕಾರ ಅದಕ್ಕೆ ಅವಕಾಶ ನೀಡಲಿಲ್ಲ. ಕೊನೆಗೂ ಅದು 1987ರಲ್ಲಿ ಪ್ರಕಟವಾದಾಗ, ಫಾತಿಮಾ ನಿಧನರಾಗಿ 20 ವರ್ಷಗಳೇ ಉರುಳಿದ್ದವು. ಆಕೆಯದು ಸಹಜ ಸಾವಲ್ಲ; ಅದೊಂದು ಕೊಲೆ ಎಂಬ ವದಂತಿಯೂ ಇದೆ. ಓರ್ವ ದಂತ ವೈದ್ಯೆಯಾಗಿದ್ದ ಫಾತಿಮಾ ಜಿನ್ನಾ 1965ರ ಅಧ್ಯಕ್ಷೀಯ ಚುನಾವಣೆಯಲ್ಲಿ ಜ| ಅಯೂಬ್ ಖಾನ್ ಅವರ ವಿರುದ್ಧ ಸ್ಪರ್ಧಿಸಿ ಸೋತಿದ್ದರು. ಆಕೆ ವಿರೋಧ ಪಕ್ಷಗಳ ಮೈತ್ರಿಕೂಟದ ಅಭ್ಯರ್ಥಿಯಾಗಿದ್ದರು. ದೀನಾವಾಡಿಯಾ ಅವರ ರೂಪಲಕ್ಷಣ ತಂದೆಯನ್ನೇ ಹೋಲುತ್ತಿತ್ತು. ಆಕೆ ಒಬ್ಬ ಕುಲೀನ ಸ್ತ್ರೀ. ಸುಸಂಸ್ಕೃತ ನಡವಳಿಕೆಯ ಮೇಲ್ವರ್ಗದ ಮಹಿಳೆ – ಇದು ಆಕೆಯ ವ್ಯಕ್ತಿತ್ವದ ಬಗ್ಗೆ ಬಲ್ಲವರು ಮಾಡಿರುವ ವರ್ಣನೆ.
ಅರಕೆರೆ ಜಯರಾಮ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Udupi: ಗೀತಾರ್ಥ ಚಿಂತನೆ-130: “ನಂದಲ್ಲ, ನಂದಲ್ಲ’ ಎಂಬ ನಿರಂತರ ಅನುಸಂಧಾನ ಮುಖ್ಯ
Buntakal Technical College: ಅಂತಾರಾಷ್ಟ್ರೀಯ ಸಮ್ಮೇಳನ ;ವಿದ್ಯಾರ್ಥಿ ವಿಚಾರ ಸಂಕಿರಣ
Mandya:ಟಿಪ್ಪು ಆಳ್ವಿಕೆ- ಪ್ರವಾಸಿಗರ ಕಣ್ಮನ ಸೆಳೆಯುವ ಜಾಮೀಯಾ ಮಸೀದಿ, ಬೇಸಿಗೆ ಅರಮನೆ
BGT 2024: ಉಳಿದೆರಡು ಪಂದ್ಯಗಳಿಗೆ ಆಸೀಸ್ ತಂಡ ಪ್ರಕಟ: ಮೂರು ಬದಲಾವಣೆ ಮಾಡಿದ ಆಸ್ಟ್ರೇಲಿಯಾ
Parcel: ಮನೆಗೆ ಬಂದ ಪಾರ್ಸೆಲ್ ನಲ್ಲಿ ಇದ್ದದ್ದು ವ್ಯಕ್ತಿಯ ಮೃತದೇಹ… ಮಹಿಳೆಗೆ ಶಾಕ್ !
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.