ಅಯೋಧ್ಯೆ ವಿವಾದದ ಆಚೆ ಬದಿ- ಈಚೆ ಬದಿ
ಸಂಧಾನ ಪ್ರಕ್ರಿಯೆ ವೈಫಲ್ಯಕ್ಕೆ ಕಾರಣರಾಗಿದ್ದು ರೋಮಿಲಾ ಥಾಪರ್, ಇರ್ಫಾನ್ ಹಬೀಬ್, ಶರ್ಮಾ, ಪಣಿಕ್ಕರ್‌ರಂಥ ಇತಿಹಾಸಕಾರರು
Team Udayavani, Nov 15, 2019, 6:00 AM IST
ಅಯೋಧ್ಯೆಯನ್ನು ವಾಸ್ತವವಾಗಿ ಕಾಡಿದ್ದು ರಾಮಜನ್ಮಭೂಮಿ ಸಮಸ್ಯೆಯಲ್ಲ; ಬಾಬರಿ ಮಸೀದಿ ಸಮಸ್ಯೆ. ತಮ್ಮ ಪಾಲಿಗೆ ಪವಿತ್ರ ಭೂಮಿಯಾಗಿರುವ ಅಯೋಧ್ಯೆ ಯಲ್ಲಿ ರಾಮ ಮಂದಿರವೊಂದನ್ನು ನಿರ್ಮಿಸಬೇಕೆಂಬುದು ಹಿಂದೂಗಳ ಶತಮಾನಗಳ ಬಯಕೆಯಾಗಿತ್ತು. ಅದು ಸಹಜವೂ ಆಗಿತ್ತು.
ಅಯೋಧ್ಯಾ ವಿವಾದ ಕುರಿತ ಸರ್ವೋಚ್ಚ ನ್ಯಾಯಾಲಯದ ತೀರ್ಪನ್ನು ವಿವಿಧ ರೀತಿಗಳಲ್ಲಿ ವಿಶ್ಲೇಷಿಸಲಾಗುತ್ತಿದೆ. ಈ ಪ್ರಕರಣ ದಲ್ಲಿ ಹಿಂದೂ ಹಾಗೂ ಮುಸ್ಲಿಮರಿಬ್ಬರೂ ಗೆದ್ದಿದ್ದಾರೆನ್ನುವುದು ಅನೇಕರ ಅಭಿಪ್ರಾಯ. ಆದರೆ ಕೆಲವರಿದ್ದಾರೆ, ಅವರು “”ಮುಸ್ಲಿಮರಿಗೆ ಸೋಲಾಗಿದೆ; ಮುಸ್ಲಿಮರು ಬಾಬರಿ ಮಸೀದಿಯ ನ್ನೀಗ ಕಳೆದುಕೊಂಡಿದ್ದಾರೆ; ಅವರ ಮಸೀದಿಯನ್ನು ಕರಸೇವಕರು ನೆಲಸಮ ಮಾಡಿದ್ದಾರೆ; ರಾಮ ಜನ್ಮಭೂಮಿ ಸಂಕೀರ್ಣದಿಂದ ದೂರದಲ್ಲಿರುವ ಪ್ರದೇಶವೊಂದರಲ್ಲಿ ಮಸೀದಿ ನಿರ್ಮಿಸಿ ಕೊಳ್ಳುವಂತೆ ಸೂಚಿಸಲಾಗಿದೆ” ಎನ್ನುತ್ತಿದ್ದಾರೆ.
ಆದರೆ ಒಂದಂತೂ ಸ್ಪಷ್ಟ, ಸರ್ವೋಚ್ಚ ನ್ಯಾಯಾಲಯ ತನ್ನ ತೀರ್ಪನ್ನು ಪ್ರಕಟಿಸುವುದರೊಂದಿಗೆ ಅಯೋಧ್ಯೆಯಲ್ಲಿ ವಿವಾದ ಗ್ರಸ್ತವಾಗಿದ್ದ ಭೂ ನಿವೇಶನ ವಾಸ್ತವವಾಗಿ “ರಾಮಜನ್ಮಭೂಮಿ’ಯೇ ಎಂಬುದು ಜಗಜ್ಜಾಹೀರಾಗಿದೆ. ಕಳೆದ ಹಲವು ವರ್ಷಗಳಿಂದ ಕೆಲವು ಪತ್ರಿಕೆಗಳು ಈ ನಿವೇಶನವನ್ನು “ಅಯೋಧ್ಯೆಯಲ್ಲಿನ ವಿವಾದಿತ ನಿವೇಶನ’ ಅಥವಾ “ಬಾಬ್ರಿ ಮಸೀದಿ – ರಾಮ ಜನ್ಮಭೂಮಿ ಸಂಕೀರ್ಣ’ ಎಂದೆಲ್ಲ ಬಗೆಬಗೆಯಾಗಿ ಉಲ್ಲೇಖೀ ಸುತ್ತಿದ್ದವು. ನಮ್ಮ ಪತ್ರಿಕಾರಂಗದಲ್ಲಿನ ಕೆಲ “ಜಾತ್ಯತೀತ’ ಪತ್ರಕರ್ತ/ವರದಿಗಾರರ ವರ್ಗ, 1992ರ ಡಿಸೆಂಬರ್ 6ರಂದು ವಿವಾದಿತ ಕಟ್ಟಡ ನೆಲಸಮಗೊಂಡ ಬಳಿಕವು ಆ ಸ್ಥಳವನ್ನು ಬಾಬ್ರಿ ಮಸೀದಿ ನಿವೇಶನವೆಂದೇ ಒತ್ತಿ ಹೇಳುತ್ತಿತ್ತು; ಅಥವಾ ಹಾಗೆ ಎಲ್ಲರೂ ಭಾವಿಸುವಂತೆ ಪ್ರೇರಿಸುತ್ತಿತ್ತು.
ಇದೀಗ ಪ್ರಕಟವಾಗಿರುವ 1045 ಪುಟಗಳ ತೀರ್ಪು ಹಾಗೂ 116 ಪುಟಗಳ ಅನುಬಂಧದ ಭಾಗವನ್ನು ಬರೆದಿರುವವರು ಯಾರು ಎಂಬುದನ್ನು ಶ್ರೇಷ್ಠ ನ್ಯಾಯಮೂರ್ತಿ ರಂಜನ್ ಗೊಗೋಯ್ ಅವರಾಗಲಿ, ಅವರ ಸಹೋದ್ಯೋಗಿಗಳಾದ ನಾಲ್ವರು ನ್ಯಾಯಾಧೀಶರಾಗಲೀ ಬಹಿರಂಗಪಡಿಸಿಲ್ಲ. ಕೇವಲ ಸರ್ವೋಚ್ಚ ನ್ಯಾಯಾಲಯದ ನ್ಯಾಯವಾದಿಗಳು ಹಾಗೂ ವಿವಿಧ ರಾಜ್ಯಗಳ ನ್ಯಾಯಾಂಗ ಸೇವೆಯಲ್ಲಿರುವವರು, ಅರ್ಥಾತ್ ಕಾನೂನು ಸಂಬಂಧಿ ವರದಿಗಳ ಬಗ್ಗೆ ಒಳ್ಳೆಯ ಪರಿಚಯವಿ ರುವವರಷ್ಟೇ ಈ ಸುದೀರ್ಘ ತೀರ್ಪನ್ನು ಬರೆದವರು ಯಾರೆಂದು ಬಲ್ಲರೇನೋ. ಬಹುಶಃ ವಿ.ಆರ್. ಕೃಷ್ಣ ಅಯ್ಯರ್‌ರಂಥವರೋ, ಓ. ಚಿನ್ನಪ್ಪ ರೆಡ್ಡಿಯಂಥವರೋ ಅಥವಾ ಕಲ್ಕತ್ತಾ ಹೈಕೋರ್ಟಿನಲ್ಲಿದ್ದ ಪಿ.ಬಿ. ಮುಖರ್ಜಿಯಂಥವರೋ ಈ ನ್ಯಾಯಪೀಠದಲ್ಲಿ ಇದ್ದಿದ್ದರೆ ಈ ಗುಟ್ಟು ರಟ್ಟಾಗುತ್ತಿತ್ತೇನೋ! ಆದರೆ ಇಂಥ ಭಾಷಾ ವಿಶಾರದರಿಗೆ ನ್ಯಾಯಪೀಠದ ಸದಸ್ಯರಾಗುವ ಅವಕಾಶ ದೊರೆತಿಲ್ಲ! ಮೇಲೆ ಹೇಳಿದ ನ್ಯಾಯಾಂಗ ತಜ್ಞರು ಅವರ ಉತ್ಕೃಷ್ಟ ಮಟ್ಟದ ಆಪ್ಯಾಯ ಮಾನ ಇಂಗ್ಲಿಷ್ ಬರವಣಿಗೆಯ ಶೈಲಿಗೆ ಹೆಸರಾದವರು. ಈಗ ಈ ಐತಿಹಾಸಿಕ ತೀರ್ಪನ್ನಿತ್ತಿರುವ ಈ ನ್ಯಾಯಪೀಠದಲ್ಲಿದ್ದ ನ್ಯಾ| ಎಸ್. ಅಬ್ದುಲ್ ನಜೀರ್ ಅವರು ಓರ್ವ ಮುಸ್ಲಿಂ ಎಂಬ ಕಾರಣದಿಂದ ಅವರು ತೀರ್ಪನ್ನು ಒಪ್ಪದೆ ಪೀಠದಿಂದ ಹೊರನಡೆಯಬಹುದು ಎಂದು ಕೆಲವರು ನಿರೀಕ್ಷಿಸಿದರು; ಆದರೆ ಅವರ ಲೆಕ್ಕಾಚಾರ ತಪ್ಪಾಗಿದೆ. ಏನಿದ್ದರೂ ಈ ಪಂಚ ನ್ಯಾಯಾಧೀಶರ ಪೀಠ ಒಟ್ಟಾರೆ ಕಗ್ಗಂಟಾಗಿ ಬಿಟ್ಟಿದ್ದ ಧಾರ್ಮಿಕ ಹಾಗೂ ಕಾನೂನು ವಿವಾದವೊಂದಕ್ಕೆ ಕೊನೆಗೂ ಪರಿಹಾರ ಕಾಣಿಸಿದೆ.
ರಾಮ ಜನ್ಮಭೂಮಿ ವಿವಾದದ ಗರಿಷ್ಠ ಲಾಭ ಯಾರಿಗೆ? ಅದು ಬಿಜೆಪಿಯ ಪಾಲಾಗಿದೆ ಎಂಬುದನ್ನು ಅಲ್ಲಗಳೆಯಲು ಸಾಧ್ಯವಿಲ್ಲ. ನ್ಯಾ| ಗೊಗೋಯ್ ಮತ್ತಿತರ ನಾಲ್ವರು ನ್ಯಾಯಮೂರ್ತಿಗಳು ಈ ಪ್ರಕರಣದ ವಾದ-ಪ್ರತಿವಾದಗಳನ್ನು ಸತತ 40 ದಿನಗಳ ಕಾಲ ಆಲಿಸಿದರು; ಗೊಗೋಯ್ ಅವರ ನಿವೃತ್ತಿಗೆ ಇನ್ನು ಎಂಟೇ ದಿನಗಳು ಉಳಿದಿವೆಯೆನ್ನುವಾಗ ನ್ಯಾಯಪೀಠ ತನ್ನ ತೀರ್ಪನ್ನು ಪ್ರಕಟಿಸಿತು. ಭಾರತದ ಶ್ರೇಷ್ಠ ನ್ಯಾಯಮೂರ್ತಿಗಳ ಪೀಠದಲ್ಲಿ ಕುಳಿತವರ ನಿವೃತ್ತಿಯ ದಿನ ಸನ್ನಿಹಿತವಾಗುತ್ತಿದೆ ಎಂಬ ಕಾರಣದಿಂದಲೇ ಸಾರ್ವಜನಿಕ ಹಿತಾಸಕ್ತಿಯ ಪ್ರಕರಣಗಳು ಇತ್ಯರ್ಥಗೊಳ್ಳುವ ಭಾಗ್ಯವನ್ನು ಪಡೆದುಕೊಳ್ಳುತ್ತವೆಯೇ? ಇಂಥ ದೊಂದು ಸಾಧ್ಯತೆಯೂ ಮೇಲ್ನೋಟಕ್ಕೇ ತೋರಿಬರುವಂತಾಗಿದೆ. 1973ರಲ್ಲಿ ಹೀಗೆ ಆಗಿತ್ತು. ಶ್ರೀ ಕೇಶವಾನಂದ ಭಾರತಿ ಪ್ರಕರಣ ಅಥವಾ ಸಂವಿಧಾನದ ಮೂಲ ಸಂರಚನೆಗೆ ಸಂಬಂಧಿಸಿದ ಕೇಸಿಗೆ ಸಂಬಂಧಿಸಿದ ತೀರ್ಪು, ಆಗಿನ ಶ್ರೇಷ್ಠ ನ್ಯಾಯಮೂರ್ತಿ ಎಸ್.ಎಂ. ಸಿಕ್ರಿಯವರ ನಿವೃತ್ತಿಗೆ ಕೆಲವೇ ದಿನಗಳಿರುವಾಗ ಪ್ರಕಟವಾಗಿತ್ತು.
ಇದೇ ಅಯೋಧ್ಯಾ ಪ್ರಕರಣದಲ್ಲಿ ತೀರ್ಪು ಘೋಷಿಸಬೇಕಾದ ವಿಷಯದಲ್ಲಿ ಅಲಹಾಬಾದ್ ಉಚ್ಚ ನ್ಯಾಯಾಲಯ 1953ರಷ್ಟು ಹಿಂದೆಯೇ ಏನು ಹೇಳಿತ್ತೆಂಬುದನ್ನು ನೆನಪಿಸಿಕೊಳ್ಳಿ – “ಇಂಥ ಖಟ್ಲೆ ಯೊಂದನ್ನು ಆದಷ್ಟು ಬೇಗನೆ ವಿಚಾರಿಸಿ ಒಂದು ತೀರ್ಮಾನಕ್ಕೆ ಬರಬೇಕಿದೆ. (ವಿವಾದ ಶುರುವಾಗಿ) 4 ವರ್ಷಗಳ ಬಳಿಕವೂ ಇದರ ಇತ್ಯರ್ಥ ಆಗಿಲ್ಲ’ ಎಂದು ಉಚ್ಚ ನ್ಯಾಯಾಲಯ ಬೇಸರ ವ್ಯಕ್ತಪಡಿಸಿತ್ತು. ಈ ಪ್ರಕರಣದ ವಿಚಾರಣೆ ಫೈಜಾಬಾದಿನಲ್ಲಿನ ವಿಚಾರಣಾ ನ್ಯಾಯಾಲಯದಲ್ಲಿ ನಡೆಯಬೇಕಿತ್ತು ಎಂದೂ ನ್ಯಾಯಾಲಯ ಅಭಿಪ್ರಾಯಪಟ್ಟಿತ್ತು. ಪ್ರಕರಣಕ್ಕೆ ಸಂಬಂಧಿಸಿದ ಎಲ್ಲ ದಾಖಲೆಗಳನ್ನೂ ಅಲ್ಲಿಂದ ಉಚ್ಚ ನ್ಯಾಯಾ ಲಯಕ್ಕೆ ತರಿಸಿಕೊಳ್ಳಬೇಕಾಗಿ ಬಂದುದರಿಂದಲೇ ವಿಚಾರಣಾ ಪ್ರಕ್ರಿಯೆ ವಿಳಂಬವಾಯಿತು ಎಂದೂ ನ್ಯಾಯಾಲಯ ಹೇಳಿತ್ತು.
26 ವರ್ಷಗಳ ಹಿಂದೆಯೇ ಬಗೆಹರಿಸಬಹುದಿತ್ತೆ?
ಅಯೋಧ್ಯಾ ವಿವಾದವನ್ನು ಸರ್ವೋಚ್ಚ ನ್ಯಾಯಾಲಯ 26 ವರ್ಷಗಳ ಹಿಂದೆಯೇ ಬಗೆಹರಿಸಬಹುದಿತ್ತು ಎನ್ನುವವರಿದ್ದಾರೆ. 1993ರ ಜನವರಿಯಲ್ಲಿ ಆಗಿನ ರಾಷ್ಟ್ರಪತಿ ಡಾ| ಶಂಕರ ದಯಾಳ ಶರ್ಮಾ ಅವರು ಸಂವಿಧಾನದ 143 (1)ನೆಯ ವಿಧಿಯಡಿಯಲ್ಲಿ ತಮ್ಮ ಅಧಿಕಾರ ಬಳಸಿ ಈ ವಿಷಯವನ್ನು ಸರ್ವೋಚ್ಚ ನ್ಯಾಯಾಲದ ಪರಾಮರ್ಶೆಗಾಗಿ ಒಪ್ಪಿಸಿದ್ದರು. ವಿವಾದಿತ ಜಾಗದಲ್ಲಿ (ರಾಮಜನ್ಮ ಭೂಮಿ – ಬಾಬರಿ ಮಸೀದಿ ಇದ್ದ ಜಾಗದಲ್ಲಿ) ಅದರ ಒಳಾಂಗಣ -ಹೊರಾಂಗಣಗಳನ್ನೊಳಗೊಂಡಂತೆ ಅಂಥದೊಂದು ಕಟ್ಟಡ ಅಸ್ತಿತ್ವಕ್ಕೆ ಬರುವ ಮುಂಚೆ ಅಲ್ಲಿ ಹಿಂದೂ ದೇವಾಲಯ ಅಥವಾ ಯಾವುದೇ ಹಿಂದೂ ಧರ್ಮೀಯ ಕಟ್ಟಡ ಇದ್ದಿತ್ತೆ ಎಂಬ ನಿರ್ದಿಷ್ಟ ಪ್ರಶ್ನೆಯೊಂದು ಉದ್ಭವಿಸಿದ್ದು ಈ ಪ್ರಶ್ನೆಗೆ ನ್ಯಾಯಾಲಯದ ಅಭಿ ಪ್ರಾಯ ನಿರೀಕ್ಷಿಸಿ ರಾಷ್ಟ್ರಪತಿಗಳು ಸಲ್ಲಿಸಿದ್ದ ಯಾಚಿಕೆ ಇದಾಗಿತ್ತು. ಆದರೆ ಆಗಿನ ಶ್ರೇಷ್ಠ ನ್ಯಾಯಮೂರ್ತಿ ಎಂ.ಎನ್. ವೆಂಕಟಾಚಲಯ್ಯ ಹಾಗೂ ಇನ್ನಿಬ್ಬರು ನ್ಯಾಯಾಧೀಶರುಗಳಾದ ಜೆ.ಎಸ್. ವರ್ಮಾ ಹಾಗೂ ಜಿ.ಎನ್. ರೇ ಅವರು ರಾಷ್ಟ್ರಪತಿಗಳ ಈ ಯಾಚಿಕೆಗೆ ಉತ್ತರಿಸಲು ನಿರಾಕರಿಸಿದ್ದರು. “ರಾಷ್ಟ್ರಪತಿಗಳ ಈ ವಿಶೇಷ ಪರಾಮರ್ಶನ ಯಾಚಿಕೆ ಅಗತ್ಯವಿಲ್ಲದ್ದು; ಇದಕ್ಕೆ ಉತ್ತರಿಸುವ ಅಗತ್ಯವಿಲ್ಲವಾದ್ದರಿಂದ ಅತ್ಯಂತ ಗೌರವಯುತವಾಗಿ ಈ ಯಾಚಿಕೆ ಯನ್ನು ಹಿಂದಿರುಗಿಸುತ್ತಿದ್ದೇವೆ’ ಎಂದು ಈ ನ್ಯಾಯಾಧೀಶತ್ರಯರು ಹೇಳಿದ್ದರು. ಇದೇ ಯಾಚಿಕೆ ಕುರಿತಂತೆ ತೀರ್ಪು ಬರೆದಿದ್ದ
ಅಲ್ಪ ಸಂಖ್ಯಾತ ಸಮುದಾಯದ ಇಬ್ಬರು ನ್ಯಾಯಾಧೀಶರು (ನ್ಯಾ| ಎಸ್.ಪಿ. ಭರೂಚ ಹಾಗೂ ನ್ಯಾ| ಎ.ಎಂ. ಅಹ್ಮದಿ) ಈ ತೀರ್ಪಿನ ಒಂದೆಡೆಯಲ್ಲಿ “ಅಯೋಧ್ಯಾ ವಿವಾದ ಒಂದು ಬಿರುಗಾಳಿ; ಅದು ಹೀಗೆ ಬಂದು ಹಾಗೆ ಹೋಗುವಂಥದು.’ ಈ ವಿಷಯದಲ್ಲಿ ತೊಡಗಿಕೊಂಡು ನ್ಯಾಯಾಲಯದ ಸರ್ವೋಚ್ಚ ನ್ಯಾಯಾಲಯದ ಘನತೆ-ಗೌರವಕ್ಕೆ ಸಂಬಂಧಿಸಿದಂತೆ ಯಾವುದೇ ರಾಜಿಗೂ ನಾವು ಸಿದ್ಧರಿಲ್ಲ ಎಂದು ಅಭಿಪ್ರಾಯಪಟ್ಟು ಪರಾಮರ್ಶನ ಅರ್ಜಿಯನ್ನು ರಾಷ್ಟ್ರಪತಿಗಳಿಗೇ ಹಿಂದಿರುಗಿಸಿದ್ದರು. ಆದರೆ ಇದೇ ವೇಳೆ ಈ ನ್ಯಾಯಾಧೀಶದ್ವಯರು- 1993ರ ಅಯೋಧ್ಯಾ ನಿವೇಶನದ ಕೆಲಭಾಗದ ಸ್ವಾಧೀನ ಕಾಯ್ದೆ’ಯನ್ನು “ಅಸಾಂವಿಧಾನಿಕ’ ಎಂದು ಬಣ್ಣಿಸಿ ಅದನ್ನು ಅಸಿಂಧುಗೊಳಿಸಿದ್ದರು.
ಬಾಬ್ರಿ ಮಸೀದಿ ನೆಲಸಮ ಪ್ರಕರಣದ ತನಿಖೆಗಾಗಿ 1994ರಲ್ಲಿ ಅಸ್ತಿತ್ವಕ್ಕೆ ತರಲಾದ ನ್ಯಾ| ಲಿಬರ್‌ಹಾನ್ ಆಯೋಗ ಸುಮಾರು ಹದಿನಾರುವರೆ ವರ್ಷಗಳ ಅವಧಿಯನ್ನು ತನಿಖೆಗಾಗಿ ವ್ಯಯಿಸಿ 2010ರಲ್ಲಿ ತನ್ನ ವರದಿಯನ್ನು ಒಪ್ಪಿಸಿತ್ತು.
ಅಯೋಧ್ಯಾ ಪ್ರಕರಣದಲ್ಲಿನ ಒಂದು ವ್ಯಂಗ್ಯ ನೋಡಿ – ಈ ವಿವಾದಕ್ಕೆ ಪರಿಹಾರ ಸಿಕ್ಕಿದ್ದು ವಿವಾದಿತ ಕಟ್ಟಡದ ನೆಲಸಮ ಘಟನೆ ಯಿಂದಾಗಿ! ಸಮಸ್ಯೆಯ ಪರಿಹಾರ ಇದ್ದುದು ಕೆಡವಲಾದ ಕಟ್ಟಡದಲ್ಲಿ! ಅಯೋಧ್ಯಾ ಸಮಸ್ಯೆ ಕುರಿತ ತೀರ್ಪು ಹೊರಡಿಸುವಲ್ಲಿ ಭಾಗಶಃ ನಿರ್ಣಾಯಕ ಅಂಶವಾಗಿ ಪಾತ್ರ ವಹಿಸಬೇಕಿದ್ದುದು, ಕೆಡವಲಾಗಿದ್ದ ಕಟ್ಟಡದ ಅವಶೇಷಗಳ ಬಗ್ಗೆ ಪುರಾತಣ್ತೀ ತಜ್ಞರು ನಡೆಸಿದ ಶೋಧ ಕಾರ್ಯದ ವಿವರಗಳು. ಅರ್ಥಾತ್ ಸತ್ಯಾಂಶ ವಿದ್ದುದನ್ನು ಹೊರಗೆಡಹಿ ತೀರ್ಪಿನ ಅಂಶಗಳನ್ನು ಭಾಗಶಃ ನಿರ್ಧರಿಸಬೇಕಿದ್ದುದು ಪುರಾತಣ್ತೀ ಇಲಾಖೆಯ ಸಂಶೋಧಿತ ವಿವರಗಳ ಆಧಾರದಲ್ಲಿ. ಇಲ್ಲೊಂದು ಚರ್ಚೆಗೆ ಅರ್ಹವಾದ ಅಂಶವಿದೆ. ಬಾಬರಿ ಮಸೀದಿಯನ್ನು ಯಾರೂ ಕೆಡವದೆ ಹೋಗಿದ್ದಲ್ಲಿ, ಅಂದರೆ ಕಟ್ಟಡ ಮೊದಲು ಹೇಗಿತ್ತೋ ಹಾಗೇ ಇದ್ದಿದ್ದರೆ, 2010ರ ಅಲಹಾಬಾದ್ ಉಚ್ಚ ನ್ಯಾಯಾಲಯದ ತೀರ್ಪಿನ ವಿರುದ್ಧ ಸಲ್ಲಿಸಲಾಗಿದ್ದ ಮೇಲ್ಮನವಿಗಳಿಗೆ ಸಂಬಂಧಿಸಿದಂತೆ ಸರ್ವೋಚ್ಚ ನ್ಯಾಯಾಲಯ ಇದೇ ರೀತಿಯ ತೀರ್ಪು ಹೊರಡಿಸಲು ಸಾಧ್ಯವಿತ್ತೇ? ಈ ತೀರ್ಪಿನ ಅನುಬಂಧದಲ್ಲಿರುವ ನ್ಯಾಯಪೀಠದ ಅಭಿಪ್ರಾಯವನ್ನು ಗಮನಿಸಿ – “ಹಿಂದೂಗಳ ಧಾರ್ಮಿಕ ವಿಶ್ವಾಸ ಹಾಗೂ ನಂಬಿಕೆ, ಮಸೀದಿಯ ನಿರ್ಮಾಣಕ್ಕೆ ಮುನ್ನವೂ ಆಮೇಲೂ ಒಂದೇ ತೆರನಾಗಿದ್ದವು. ಬಾಬರಿ ಮಸೀದಿ ಕಟ್ಟಲಾಗಿದ್ದ ಜಾಗವೇ ಶ್ರೀರಾಮನ ಜನ್ಮಸ್ಥಾನ ಎಂಬ ನಂಬಿಕೆ ಅದು’. ಮಸೀದಿ ಕಟ್ಟಡದ ಬುಡದಲ್ಲಿದ್ದ, ಹಿಂದಿನಿಂದಲೂ ಅಲ್ಲೇ ಇದ್ದ ವಿಶಾಲ ಆಸ್ತಿವಾರದ ಅವಶೇಷಗಳು, ಅದು ಮುಸ್ಲಿಮೇತರ ಕಟ್ಟಡದ ಭಾಗವೆನ್ನುವುದನ್ನು ಸೂಚಿಸುತ್ತವೆ ಎಂಬ ಪುರಾತತ್ವ ಸರ್ವೇಕ್ಷಣ ಇಲಾಖೆಯ ಅಭಿಪ್ರಾಯವನ್ನು ನ್ಯಾಯಾಲಯ ವಿಶೇಷವಾಗಿ ಗಮನಕ್ಕೆ ತೆಗೆದು ಕೊಂಡಿದೆ. ತಾತ್ಪರ್ಯ ಬಾಬರಿ ಮಸೀದಿ ಕಟ್ಟಡಕ್ಕೆ ಹಾನಿಯಾಗದೆ ಅದು ಮುಂಚಿನಂತೆಯೇ ಇದ್ದಿದ್ದರೆ ನ್ಯಾಯಾಲಯ ಇಂಥ ತೀರ್ಮಾನ ತೆಗೆದುಕೊಳ್ಳಲು ಸಾಧ್ಯವಾಗುತ್ತಿರಲಿಲ್ಲ!
ಮಸೀದಿ ನಿರ್ಮಾಣಗೊಂಡಿದ್ದುದು ಖಾಲಿ ಜಾಗದಲ್ಲಲ್ಲ; ಬದಲಿಗೆ, ಕಟ್ಟಡದ ಬುಡದಲ್ಲಿದ್ದ ಅದೇ ಗಾತ್ರದ ನಿರ್ಮಿತ ರಚನೆಯ ಮೇಲೆ ಎಂಬುದು 2003ರಲ್ಲಿ ಪುರಾತತ್ವ ಸರ್ವೇಕ್ಷಣ ಇಲಾಖೆ ಸಲ್ಲಿಸಿದ್ದ ವರದಿಯಲ್ಲಿನ ಗಣನೀಯ ಅಂಶವಾಗಿತ್ತು. ನ್ಯಾಯಾಲಯ ಈ ವರದಿಯನ್ನು ವಿಶ್ವಾಸಾರ್ಹವೆಂದು ಪೂರ್ಣ ಪ್ರಮಾಣದಲ್ಲಿ ಪರಿಗಣಿಸಿತ್ತು. ಪುರಾತತ್ವ ಇಲಾಖೆ ಈ ಸರ್ವೇಕ್ಷಣ ಕಾರ್ಯವನ್ನು ಕೈಗೆತ್ತಿಕೊಂಡದ್ದು ಅಲಹಾಬಾದ್ ಉಚ್ಚ ನ್ಯಾಯಾಲಯದ ಆದೇಶದ ಮೇರೆಗೆ.
ರಾಮಜನ್ಮಭೂಮಿ ಸಮಸ್ಯೆ ಅಲ್ಲ ಬಾಬರಿ ಮಸೀದಿ ಸಮಸ್ಯೆ!
ಹೀಗೂ ಹೇಳಬಹುದೇನೋ . ಅಯೋಧ್ಯೆಯನ್ನು ವಾಸ್ತವವಾಗಿ ಕಾಡಿದ್ದು ರಾಮಜನ್ಮಭೂಮಿ ಸಮಸ್ಯೆಯಲ್ಲ; ಬಾಬರಿ ಮಸೀದಿ ಸಮಸ್ಯೆ. ತಮ್ಮ ಪಾಲಿಗೆ ಪವಿತ್ರ ಭೂಮಿಯಾಗಿರುವ ಅಯೋಧ್ಯೆ ಯಲ್ಲಿ ರಾಮ ಮಂದಿರವೊಂದನ್ನು ನಿರ್ಮಿಸಬೇಕೆಂಬುದು ಹಿಂದೂಗಳ ಶತಮಾನಗಳ ಬಯಕೆಯಾಗಿತ್ತು. ಅದು ಸಹಜವೂ ಆಗಿತ್ತು. ಹಾಗೆ ನೋಡಿದರೆ ಮಸೀದಿ ಕೆಡವಿದ ಘಟನೆಗೆ ಹಾದಿ ಮಾಡಿಕೊಟ್ಟದ್ದು ಉತ್ತರ ಪ್ರದೇಶದ ಮುಸ್ಲಿಮರ ಒಂದು ವರ್ಗದ ಹಠಮಾರಿತನವೇ. ಇನ್ನೊಂದು ಘಟನೆಯೂ ಇಲ್ಲಿ ನೆನಪಾಗಬೇಕು. 1948ರಲ್ಲಿ ಸೋಮನಾಥ ಮಂದಿರದ ನಿರ್ಮಾಣ ಕಾರ್ಯಕ್ಕಾಗಿ ಆ ನಿವೇಶನದಲ್ಲಿದ್ದ “ಔರಂಗಜೇಬಿ ಮಸೀದಿ’ಯನ್ನು ಕೆಡವಲಾಗಿತ್ತು. ಸಾರ್ವಜನಿಕರ ಗಮನಕ್ಕೆ ತಂದೇ ನಡೆಸಲಾದ ನೆಲಸಮ ಘಟನೆ ಇದು. ಇಂಥ ಘಟನೆಗಳ ಯಶಸ್ಸಿನ ಕೀರ್ತಿ ಅಂದಿನ ಉಪ ಪ್ರಧಾನಿ ಸರ್ದಾರ್ ವಲ್ಲಭಭಾಯಿ ಪಟೇಲರಿಗೆ ನ್ಯಾಯವಾಗಿಯೇ ಸಂದಿದೆ. ಆದರೆ ಕರಸೇವಕರು ನಡೆಸಿದ ಬಾಬರಿ ಮಸೀದಿ ಧ್ವಂಸ ಕಾರ್ಯ ಘಟಿಸಿದ್ದು ರಹಸ್ಯ ಕಾರ್ಯಾಚರಣೆಯ ಫಲವಾಗಿ; ವಿಶ್ವ ಹಿಂದೂ ಪರಿಷತ್ ಹಾಗೂ ಕೆಲ ಬಿಜೆಪಿ ನಾಯಕರ ಒತ್ತಾಸೆಯ ಫಲವಾಗಿ. ಈ ವಿವಾದದ ಸಂಧಾನ ಪ್ರಕ್ರಿಯೆ ವಿಫಲವಾಯಿತು; ಈ ವೈಫ ಲ್ಯ ಕ್ಕೆ ಕೊಡುಗೆ ಕೊಟ್ಟವರು ರೋಮಿಲಾ ಥಾಪರ್, ಇರ್ಫಾನ್ ಹಬೀಬ್, ಆರ್.ಎಸ್. ಶರ್ಮಾ ಹಾಗೂ ಕೆ.ಎನ್. ಪಣಿಕ್ಕರ್ ಮುಂತಾದ ಇತಿಹಾಸಕಾರರು; ಮಾತ್ರವಲ್ಲ, ಬಾಬರಿ ಮಸೀದಿ ರಕ್ಷಣಾ ಸಮಿತಿ ಹಾಗೂ ಸುನ್ನಿ ವಕ್ಫ್ ಮಂಡಳಿಗೆ ಸಂಬಂಧಿ ಸಿದ ಮುಂದಾಳುಗಳು. ಬಾಬರಿ ಮಸೀದಿ ಒಂದು ಶಿಯಾ ಮಸೀದಿ ಯಾಗಿದ್ದರೂ, ಶಿಯಾ ಮುಸ್ಲಿಮರ ಪ್ರಾರ್ಥನಾ ಮಂದಿರಗಳನ್ನು ಸುನ್ನಿಗಳು ಮಾನ್ಯ ಮಾಡುವುದಿಲ್ಲವಾದರೂ ಸುನ್ನಿ ವಕ್ಫ್ ಮಂಡಳಿ ಈ ವಿವಾದದ ಖಟ್ಲೆಯಲ್ಲಿ ಓರ್ವ ಕಕ್ಷಿಗಾರನಾಗಿ ಸೇರಿಕೊಂಡಿತು. ಈ ನಡುವೆ, ನಿಜವಾದ ಪ್ರಶ್ನೆಯೆಂದರೆ ಮಸೀದಿಯೊಂದನ್ನು ಬಲವಂತವಾಗಿ ಕೆಡವಲಾಯಿತೆಂಬುದಲ್ಲ; ಬದಲಿಗೆ ಮುಖ್ಯವಾಗಿ ರಾಮ ಆ ನಿವೇಶನದಲ್ಲಿ ವಾಸಿಸಿದ್ದನೇ ಎಂಬುದೇ ಆಗಿದೆ ಎಂದು ರೋಮಿಲಾ ಥಾಪರ್ ಹೇಳಿರುವುದಾಗಿ ವರದಿಯಾಗಿತ್ತು.
ಸರ್ವೋಚ್ಚ ನ್ಯಾಯಾಲಯದ ಆದೇಶದ ಪ್ರಕಾರ ಭಾರತೀಯ ಪುರಾತಣ್ತೀ ಸರ್ವೇಕ್ಷಣ ಸಂಸ್ಥೆ ರಾಮಜನ್ಮಭೂಮಿ ನಿವೇಶನದಲ್ಲಿ 2003ರಲ್ಲಿ ಉತ್ಖನನ ನಡೆಸಿತು. ಆದರೆ ಇದಕ್ಕಿಂತಲೂ ಎಷ್ಟೋ ಮುಂಚೆಯೇ ಅದು ತನ್ನದೇ ನೆಲೆಯಲ್ಲಿ 1975ರಿಂದಲೇ ಉತVನನ ಕಾರ್ಯದಲ್ಲಿ ನಿರತವಾಗಿತ್ತು. ಸಂಸ್ಥೆಯ ಆಗಿನ ಮಹಾನಿರ್ದೇಶಕ ಪ್ರೊ| ಬಿ.ಬಿ. ಲಾಲ್, ವೈ.ಡಿ. ಶರ್ಮಾ ಹಾಗೂ ಎಸ್.ಪಿ. ಗುಪ್ತಾರಂಥ ಪ್ರಾಕ್ತನ ಶಾಸ್ತ್ರಜ್ಞರು ಈ ಉತVನನಗಳನ್ನು ನಡೆಸಿದ್ದರು. ಪ್ರೊ| ಲಾಲ್ ಅವರು ನಿವೇಶನದ ಪ್ರಾಚೀನತೆಯನ್ನು ನಿಷ್ಕರ್ಷಿಸುವ ಸಲುವಾಗಿ ಜನ್ಮಭೂಮಿ ಸಂಕೀರ್ಣದ 14 ಸ್ಥಳಗಳಲ್ಲಿ ಕಂದಕ (ಅಗಳು)ಗಳನ್ನು ತೋಡಿಸಿದ್ದರು. ಅಯೋಧ್ಯಾ ಪಟ್ಟಣ ಕನಿಷ್ಠ ಪಕ್ಷ 3000 ವರ್ಷಗಳಷ್ಟು ಪ್ರಾಚೀನವಾದುದು ಎಂಬುದು ಅವರ ಅಭಿಪ್ರಾಯ ವಾಗಿತ್ತು. ಅಲ್ಲದೆ, ರಾಮಜನ್ಮಭೂಮಿಯಲ್ಲಿ ಸ್ತಂಭಗಳ ಮೇಲೆ ನಿರ್ಮಾಣವಾಗಿದ್ದ ಬೃಹತ್ ವಾಸ್ತು ರಚನೆಯಿತ್ತು; ಈ ಸ್ತಂಭಗಳು ಸುಮಾರು 13ನೆಯ ಶತಮಾನಕ್ಕಿಂತಲೂ ಹಿಂದಿನ ಕಾಲದಲ್ಲಿ ನಿರ್ಮಿಸಿರಬಹುದಾಗಿದ್ದ ಹಿಂದೂ ದೇವಾಲಯಕ್ಕೆ ಸೇರಿದ್ದಾಗಿ ರಬಹುದು ಎಂದೂ ಅವರು ಅಭಿಪ್ರಾಯಪಟ್ಟಿದ್ದರು.
ಈಗ ಹೊರಬಿದ್ದಿರುವ ಸರ್ವೋಚ್ಚ ನ್ಯಾಯಾಲಯದ ತೀಪೇ ಅಂತಿಮವೆಂದು ಸ್ವೀಕೃತವಾಗಿದೆ. ನ್ಯಾಯಾಲಯ ತನ್ನ ಘನತೆ ಗೌರವದ ವಿಷಯದಲ್ಲಿ ಯಾರೊಂದಿಗೂ ಯಾವುದೇ ರೀತಿಯಲ್ಲೂ ರಾಜಿ ಮಾಡಿಕೊಂಡಿಲ್ಲ. ಭೂತಪೂರ್ವ ಶ್ರೇಷ್ಠ ನ್ಯಾಯಮೂರ್ತಿಗಳಾಗಿದ್ದ ನ್ಯಾ| ಅಹ್ಮದಿ ಹಾಗೂ ನ್ಯಾ| ಭರೂಚ ಅವರು ಇಂಥದೊಂದು ಭೀತಿಯನ್ನು ವ್ಯಕ್ತಪಡಿಸಿದ್ದುಂಟು. ಆದರೆ ಹಾಗೆ ಆಗಿಲ್ಲ.
-ಅರಕೆರೆ ಜಯರಾಮ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
ಟಿಪ್ಸ್ ಕೊಡದಿದ್ದಕ್ಕೆ ಗರ್ಭಿಣಿ ಮಹಿಳೆಯನ್ನೇ 14 ಬಾರಿ ಇರಿದ ಪಿಜ್ಜಾ ಡೆಲಿವರಿ ಮಹಿಳೆ
Bajpe: ತರಕಾರಿ ಬೀಜ ಬಿತ್ತನೆಗೆ ಹಿಂದೇಟು
Manmohan Singh: ಮನಮೋಹನ್ ಸಿಂಗ್ ಇಷ್ಟದ ಮೆನು ಯಾವುದು? ಸಸ್ಯಹಾರಿಯಾಗಿದ್ರೂ…ಆದರೆ ಒಮ್ಮೆ
Puttur ನಗರಕ್ಕೂ ಬೇಕು ಟ್ರಾಫಿಕ್ ಸಿಗ್ನಲ್
INDvAUS; ಮೆಲ್ಬೋರ್ನ್ ನಲ್ಲಿ ಆಸೀಸ್ ಬಿಗಿ ಹಿಡಿತ; ಭಾರೀ ಹಿನ್ನಡೆಯಲ್ಲಿ ಟೀಂ ಇಂಡಿಯಾ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.