ಟಿವಿ ಚಾನೆಲ್ ಸಿಇಒ ಬಂಧನ ಮತ್ತು ಬಾಂಬ್ ನಾಗ ಪ್ರಕರಣ
Team Udayavani, Apr 19, 2017, 10:40 AM IST
ಉದ್ಯಮಿಗಳಿಂದ ಹಣ ಸುಲಿಗೆ ನಡೆಸಿದಆರೋಪದಲ್ಲಿ ಟಿವಿ ಚಾನೆಲ್ ಒಂದರ ಸಿಇಒ ಪೊಲೀಸ್ ಅತಿಥಿಯಾಗಿರುವುದು ನಾಚಿಕೆಗೇಡು. ಮಾಧ್ಯಮ ರಂಗದಲ್ಲಿ ಎಲ್ಲವೂ ಸ್ವತ್ಛ, ಪರಿಶುದ್ಧವಾಗಿಲ್ಲ ಎಂಬುದನ್ನು ಇದು ಬಯಲು ಮಾಡುವ ಜತೆಗೆ ಮಾಧ್ಯಮ ರಂಗದ ಮೇಲೆ ನಿಯಂತ್ರಣ ಬೇಕು ಎಂಬ ವಾದಕ್ಕೆ ಪುಷ್ಟಿ ನೀಡಿದೆ. ಈ ಮಧ್ಯೆ ನಗರದ ಹೃದಯಭಾಗದಲ್ಲಿ ಬಾಂಬ್ ನಾಗ ನಡೆಸುತ್ತಿದ್ದ ಸಮಾಜಸೇವೆಯ ಮುಖವಾಡ ಕಳಚಿಬಿದ್ದಿದೆ.
ರಾಜ್ಯದ ಸಮಸ್ತ ಮಾಧ್ಯಮ ರಂಗಕ್ಕಲ್ಲವಾದರೂ ಕನಿಷ್ಟ ಟಿವಿ ಮಾಧ್ಯಮ ರಂಗಕ್ಕೆ ಕಳೆದ ಶನಿವಾರ ಒಂದು ಲಜ್ಜೆಗೇಡಿ ದಿನವಾಗಿತ್ತು. ಕನ್ನಡ ಟಿವಿ ಚಾನೆಲ್ ಒಂದರ ಸಿಇಒ ಬೆಂಗಳೂರು ಪೊಲೀಸರ ಅತಿಥಿಯಾಗುವುದರೊಂದಿಗೆ ರಾಜ್ಯದಲ್ಲಿ ಈ ಹಿಂದೆಯ ನಡೆಯದಂಥ ಒಂದು ನಾಚಿಕೆಗೇಡಿನ ವಿದ್ಯಮಾನ ದಾಖಲಾಗಿದೆ.
ಆ ವ್ಯಕ್ತಿ ಸುಲಿಗೆಯಲ್ಲಿ ಒಳಗೊಂಡಿದ್ದಾರೆ ಅನ್ನುವ ಆರೋಪ ಮತ್ತು ಅದರ ಮೊತ್ತ ಗಮನಾರ್ಹವಾದದ್ದು. ಪ್ರಕರಣದಲ್ಲಿ ಒಳಗೊಂಡಿರುವುದು ಪತ್ರಕತೇತರ ವ್ಯಕ್ತಿ ಎಂಬುದಾಗಿ ಮಾಧ್ಯಮ ಮಂದಿ ಕೈತೊಳೆದುಕೊಳ್ಳಬಹುದು. “ಪಾವತಿ ಸುದ್ದಿ’ಯ ಆರೋಪಗಳು ಕೇಳಿಬಂದಾಗ ಪತ್ರಕರ್ತರು ಸಾಮಾನ್ಯವಾಗಿ ತಳೆಯುವ ನಿಲುವು ಇದು. ಪಾವತಿ ಸುದ್ದಿಗಳ ಹಿಂದೆ ಇರುವುದು ಮಾಧ್ಯಮ ಸಂಸ್ಥೆಗಳ ಆಡಳಿತಗಳೇ ಹೊರತು ಪತ್ರಕರ್ತರಲ್ಲ ಎಂಬುದಾಗಿ ಅವರು ಯಾವತ್ತೂ ಸಮರ್ಥಿಸಿಕೊಳ್ಳುತ್ತಾರೆ.
ಸಿರಿವಂತರನ್ನು ಬೆದರಿಸಿ ಬ್ಲ್ಯಾಕ್‌ವೆುಲ್ ಮಾಡಲು ಆಪಾದಿತ ಸಿಇಒ ತನ್ನ ಟಿವಿ ಚಾನೆಲನ್ನು ಬಳಸಿಕೊಳ್ಳುತ್ತಿದ್ದರು ಅನ್ನುವುದು ಕೇಳಿಬಂದಿರುವ ಆರೋಪ. ತಾನು ಗುರಿ ಇರಿಸಿರುವ ವ್ಯಕ್ತಿಯ ಬಗ್ಗೆ ಋಣಾತ್ಮಕ ಸುದ್ದಿ ಮತ್ತು ವರದಿಗಳನ್ನು ಪ್ರಸಾರಿಸುವಂತೆ ತನ್ನ ಸಂಸ್ಥೆಯ ಪರ್ತಕರ್ತರನ್ನು ಆತ ಬಲವಂತಪಡಿಸುತ್ತಿದ್ದರಂತೆ.
ಮಾಧ್ಯಮಗಳ ಮೇಲೆ ಕಡಿವಾಣ ಇರಿಸಿಕೊಳ್ಳಲು ಸಮಿತಿ ರಚಿಸಬೇಕು ಎಂಬುದಾಗಿ ವಿಧಾನಸಭೆಯ ಸ್ಪೀಕರ್ ಕೋಳಿವಾಡ್ ಅವರು ನಿರ್ಣಯ ತೆಗೆದುಕೊಂಡದ್ದನ್ನು ಗಮನದಲ್ಲಿ ಇರಿಸಿಕೊಂಡು ಈ ಪ್ರಕರಣವನ್ನು ನೋಡಬೇಕು. ಕೋಳಿವಾಡ್ ಅವರ ನಿರ್ಣಯ ಪತ್ರಿಕಾ ಸ್ವಾತಂತ್ರ್ಯಕ್ಕೆ ಧಕ್ಕೆ ತರುತ್ತದೆ ಎಂಬುದಾಗಿ ರಾಜ್ಯದ ಮಾಧ್ಯಮ ರಂಗದಿಂದ ಪ್ರಬಲ ವಿರೋಧ ವ್ಯಕ್ತವಾಗಿತ್ತು. ನಮ್ಮ ಟಿವಿ ಮಾಧ್ಯಮ ರಂಗದಲ್ಲಿ ಎಲ್ಲವೂ ಸ್ವತ್ಛ, ಪರಿಶುದ್ಧವಾಗಿಲ್ಲ ಅನ್ನುವುದು ಈಗಂತೂ ಜಗಜ್ಜಾಹೀರಾಗಿದೆ. ರಾಜಕಾರಣಿಗಳು ಮಾಧ್ಯಮ ಜಗತ್ತಿನಲ್ಲಿ ಭ್ರಷ್ಟಾಚಾರ ಹೆಚ್ಚುತ್ತಿದೆ ಎಂದು ಲೋಕಾಭಿರಾಮವಾಗಿ ಹೇಳಿಕೊಳ್ಳುತ್ತಾರಾದರೂ ಯಾವುದೇ ರಾಜಕಾರಣಿ ಮಾಧ್ಯಮಗಳ ವೈರತ್ವ ಕಟ್ಟಿಕೊಳ್ಳುವಂತಹ ಅವಿವೇಕ ಪ್ರದರ್ಶಿಸಲು ಬಯಸಲಾರ. ಆದರೆ, ನಿರ್ದಿಷ್ಟ ರಾಜಕಾರಣಿಗಳ ಬಗ್ಗೆ ಮಾಧ್ಯಮಗಳಲ್ಲಿ, ವಿಶೇಷವಾಗಿ ಟಿವಿ ಚಾನೆಲ್‌ಗಳಲ್ಲಿ ತೇಜೋವಧೆ ಮತ್ತು ಮಾನಹಾನಿಕರ ವರದಿಗಳು ಪ್ರಸಾರವಾಗಿವೆ ಎಂಬುದಕ್ಕೆ ಪ್ರತಿಕ್ರಿಯೆಯಾಗಿಯೇ ಮಾಧ್ಯಮಗಳ ಮೇಲೆ ನಿಯಂತ್ರಣ ಹೇರಲು ನಿರ್ಧರಿಸಲಾಗಿದೆ ಎಂಬುದನ್ನು ಗಮನಿಸಬೇಕು. ಪತ್ರಕರ್ತರು ಭ್ರಷ್ಟಾಚಾರ ಎಸಗಿದ್ದಾರೆ ಎಂದು ಶಾಸಕರ್ಯಾರೂ ದೂರು ನೀಡಿಲ್ಲ; ಆರೋಪವಿರುವುದು ಬೇಜವಾಬ್ದಾರಿಯ ವರದಿಗಳು ಅಥವಾ ಹೇಳಿಕೆಗಳ ವಿರುದ್ಧ.
ಪೀತ ಪತ್ರಿಕೆಗಳಿಗಿಂತಲೂ ಕೀಳು
ಇತ್ತೀಚೆಗಿನ ವರ್ಷಗಳ ವರೆಗೆ ಪೀತ ಪತ್ರಿಕೋದ್ಯಮ ಅಥವಾ “ಚರಂಡಿ ಮಟ್ಟ’ದ ಪತ್ರಿಕೋದ್ಯಮ ಆಗೀಗ ಸುದ್ದಿಯಲ್ಲಿರುತ್ತಿತ್ತು. “ಚರಂಡಿ ಮಟ್ಟ’ದ ಪತ್ರಿಕೋದ್ಯಮ ಎಂಬ ಹೋಲಿಕೆಯನ್ನು ಚಲಾವಣೆಗೆ ತಂದದ್ದು ಮಾಜಿ ರಕ್ಷಣಾ ಸಚಿವ ವಿ. ಕೆ. ಕೃಷ್ಣ ಮೆನನ್. ದುರದೃಷ್ಟವಶಾತ್ ಪೀತ ಪತ್ರಿಕೋದ್ಯಮ ಎಂಬ ಪದವನ್ನು ಸಣ್ಣಪುಟ್ಟ ಪತ್ರಿಕೆಗಳಿಗೆ ಅಥವಾ ಸಾಂದರ್ಭಿಕ ಪತ್ರಿಕೆಗಳಿಗೆ ಮೀಸಲಿಡಲಾಗಿದೆ. ಅತ್ಯುತ್ತಮವಾಗಿ ಕಾರ್ಯನಿರ್ವಹಿಸುತ್ತಿರುವ ಅನೇಕ ಸಣ್ಣ ಪತ್ರಿಕೆಗಳು ನಮ್ಮ ರಾಜ್ಯದಲ್ಲೂ ದೇಶದಲ್ಲೂ ಇವೆ. ಒಂದೆರಡು ಮುದ್ರಣಗಳಲ್ಲಿ ವ್ಯಕ್ತಿಗಳು ಅಥವಾ ಸಂಸ್ಥೆಗಳ ಮಾನಹಾನಿ ನಡೆಸಿ ಆ ಬಳಿಕ ಮಾಯವಾಗುವುದು ಸಾಮಾನ್ಯವಾಗಿ ಸಾಂದರ್ಭಿಕ ಸುದ್ದಿಪತ್ರಿಕೆಗಳ ಕೆಲಸ. ವ್ಯಕ್ತಿಗಳು ಅಥವಾ ಸಂಸ್ಥೆಗಳ ಶತ್ರು ಪಕ್ಷಗಳಿಂದ ಲಂಚ ಸ್ವೀಕರಿಸಿ ಮಾನಹಾನಿಕರ ವರದಿ ಅಥವಾ ಸುದ್ದಿ ಪ್ರಕಟಿಸಿದ ಆಪಾದನೆಗಳು ಕೆಲವು ಪ್ರಕಾಶನಗಳ ಮೇಲೆ ಇವೆ. ಹಿಂದೆ ಭೂಗತ ದೊರೆಗಳು ಪತ್ರಿಕೆ ಅಥವಾ ನಿಯತಕಾಲಿಕ ಆರಂಭಿಸಿದ ಉದಾಹರಣೆಗಳಿದ್ದು, ಕೆಲವು ಈಗಲೂ ಪ್ರಕಟಗೊಳ್ಳುತ್ತಿವೆ. ಒಬ್ಬ ರೌಡಿ ಆರಂಭಿಸಿದ ನಿಯತಕಾಲಿಕವನ್ನು ಮಾಜಿ ಮುಖ್ಯಮಂತ್ರಿಯೊಬ್ಬರು ಉದ್ಘಾಟಿಸಿದ್ದನ್ನು ನಾನೇ ವರದಿ ಮಾಡಿದ್ದೆ, ಆ ರೌಡಿ ಬಳಿಕ ಬೆಂಗಳೂರಿನಲ್ಲಿ ಕೊಲ್ಲಲ್ಪಟ್ಟ. ಆ ನಿಯತಕಾಲಿಕದ ಸ್ಥಾಪಕನ ಪೂರ್ವೇತಿಹಾಸದ ಬಗ್ಗೆ ಆ ಮಾಜಿ ಮುಖ್ಯಮಂತ್ರಿಗಳಿಗೆ ಗೊತ್ತಿದ್ದಿರಲಕ್ಕಿಲ್ಲ. ಪ್ರಾಯಃ ಪೊಲೀಸ್ ಬೇಹು ವ್ಯವಸ್ಥೆ ಆ ಬಗ್ಗೆ ಅವರಿಗೆ ಮಾಹಿತಿ ನೀಡಿರಲಿಲ್ಲವೇನೋ.
ದೇಶದ ಇಂಗ್ಲಿಷ್ ಸುದ್ದಿಪತ್ರಿಕೆಗಳನ್ನು ಇಡಿಯಾಗಿ ಗಮನಿಸುವುದಾದರೆ, ಅಧಿಕಾರದಲ್ಲಿ ಮತ್ತು ಸಾರ್ವಜನಿಕ ಬದುಕಿಧಿನಲ್ಲಿಧಿರುವ ಸೋಗಲಾಡಿಗಳು ಮತ್ತು ಗೋಮುಖವ್ಯಾಘ್ರರ ಬಣ್ಣಧಿವನ್ನು ಬಯಲಿಗೆಳೆಯಲು ಸಿದ್ಧರಿರುವ ಧೀರೋದಾತ್ತ ಪತ್ರಕರ್ತರ ಕೊರತೆ ಎದ್ದು ಕಾಣುವಂತಿದೆ. ಬ್ಲಿಟ್l ಮತ್ತದರ ಆರ್. ಕೆ. ಕರಂಜಿಯಾ ಹಾಗೂ ಮುಂದೆ ಮದರ್ ಇಂಡಿಯಾ ಆದ ಫಿಲ್ಮ್ ಇಂಡಿಯಾವನ್ನು ಸಂಪಾದಿಸುತ್ತಿದ್ದ ಬಾಬುರಾವ್ ಪಟೇಲ್ ಅವರಂಥವರು ಈಗ ಎಲ್ಲಿದ್ದಾರೆ? ಅವರ ಸ್ಥಾನವನ್ನು ಕುಟುಕು ಪತ್ರಿಕೋದ್ಯಮ ಪ್ರವೀಣ ನಿಯತಕಾಲಿಕಗಳು ಮತ್ತು ಟಿವಿ ಚಾನಲ್‌ಗಳು ಆಕ್ರಮಿಸಿವೆ.
ಆದರೆ, ಈಗ ಬಂಧನಕ್ಕೆ ಒಳಗಾಗಿರುವ ತಥಾಕಥಿತ ಸಿಇಒ ಪೀತ ಪತ್ರಿಕೋದ್ಯಮವನ್ನು ಹಾಗೂ ಸುದ್ದಿಪತ್ರಿಕೆ ಪ್ರಕಾಶನಕ್ಕೆ ಇಳಿದಿರುವ ರೌಡಿಗಳನ್ನು ಜೇಬುಗಳವಿನ ಮಟ್ಟಕ್ಕೆ ಇಳಿಸಿಬಿಟ್ಟಿದ್ದಾರೆ. ರಾಜ್ಯದಲ್ಲಿರುವ ಬಹುತೇಕ ಟಿವಿ ಚಾನೆಲ್‌ಗಳು ಮತ್ತು ಅವುಗಳ ವಿಶ್ವಾಸಾರ್ಹತೆಯ ತಿರುಳಿಗೇ ಅವರು ಕೊಡಲಿಯೇಟು ನೀಡಿದ್ದಾರೆ. ಏನೂ ಗೊತ್ತಿಲ್ಲದ, ಉದ್ಧಟ ವರ್ತನೆಯ ಟಿವಿ ಆ್ಯಂಕರ್‌ಗಳು ಟಿವಿ ಪರದೆಯಲ್ಲಿ ಕಾಣಿಸಿಕೊಂಡು ದೊಡ್ಡ ಗಂಟಲಿನಲ್ಲಿ ಅರಚುತ್ತ ಇನ್ನೊಬ್ಬರ ಮೇಲೆ ಗೂಬೆ ಕೂರಿಸುವುದನ್ನು ನಾವಿಂದು ಕಾಣುತ್ತಿದ್ದೇವೆ. ಆದರೆ ಆಂಧ್ರಪ್ರದೇಶದಿಂದ ಆಮದಾಗಿರುವ ಮೇಲೆ ಹೇಳಿದ ಸಿಇಒ ತನ್ನ ದರ್ಜೆಗೆ ತಾನೇ ಸಾಟಿ ಎಂಬಂಥವರು. ಮಾಜಿ ಲೋಕಾಯುಕ್ತ ಜಸ್ಟಿಸ್ ಸಂತೋಷ್ ಹೆಗ್ಡೆ ಅವರು ರಾಜ್ಯದಲ್ಲಿ ಅಕ್ರಮ ಗಣಿಗಾರಿಕೆಯ ಬಗ್ಗೆ ನೀಡಿದ ತನ್ನ ವರದಿಯಲ್ಲಿ ಗಣಿ ಕುಳಗಳಿಂದ ಲಂಚ ಸ್ವೀಕರಿಸಿದ ಕೆಲವು ಪತ್ರಕರ್ತರ ಹೆಸರುಗಳನ್ನು ಉಲ್ಲೇಖೀಸಿದ್ದರು. ಜಸ್ಟಿಸ್ ಹೆಗ್ಡೆ ಅವರು ಹೆಸರಿಸಿದ್ದ ತಪ್ಪುಗಾರ ಪತ್ರಕರ್ತರು ಮತ್ತು ಇನ್ನಿತರರ ವಿರುದ್ಧ ಯಾವ ಕ್ರಮವನ್ನೂ ತೆಗೆದುಕೊಳ್ಳಲಾಗಿಲ್ಲ. ರಾಜ್ಯದಲ್ಲಿ ಬಿಜೆಪಿ ಅಧಿಕಾರದಲ್ಲಿದ್ದಾಗ, ವಿದ್ಯುತ್ ರಂಗದಲ್ಲಿ ಭಾರೀ ಗುತ್ತಿಗೆಯ ಬಿಡ್ಡಿಂಗ್ ಒಂದನ್ನು ತನ್ನದಾಗಿಸಿಕೊಳ್ಳಲು ಕಂಪೆನಿಯೊಂದಕ್ಕೆ ಕೆಲವು ಪತ್ರಕರ್ತರು ಸಹಾಯ ಮಾಡಿದ್ದ ಆರೋಪ ಕೇಳಿಬಂದಿತ್ತು ಹಾಗೂ ಸಚಿವರೊಬ್ಬರು ಆ ಪತ್ರಕರ್ತರನ್ನು ರಕ್ಷಿಸಿದರು ಎಂಬ ಊಹಾಪೋಹ ಹಬ್ಬಿತ್ತು.
ಇತರ ಕೆಲವು ವೃತ್ತಿಪರರಂತೆ ಅಲ್ಲದೆ, ಒಂದು ಸಮೂಹವಾಗಿ ಪತ್ರಕರ್ತರು ತಮ್ಮ ನಡುವೆ ಇರುವ “ಕಪ್ಪು ಕುರಿ’ಗಳ ಬಗ್ಗೆ ಚರ್ಚೆ – ಟೀಕೆ ನಡೆಸುತ್ತಾರೆ. ಪತ್ರಿಕೋದ್ಯಮ ವೃತ್ತಿಯಲ್ಲಿ ನೈತಿಕ ಗುಣಮಟ್ಟ ಕುಸಿಯುತ್ತಿರುವ ಬಗೆಗಿನ ಅನೇಕ ವಿಚಾರಸಂಕಿರಣಗಳಲ್ಲಿ ನಾನು ಭಾಗವಹಿಸಿದ್ದೇನೆ. ಕೆಲವು ಪತ್ರಕರ್ತರಿಗೆ ಲಂಚ ನೀಡಿದ್ದಾರೆ ಎನ್ನಲಾದ ಮೂವರು ಸಚಿವರನ್ನು ಪತ್ರಕರ್ತರೇ ಪ್ರಶ್ನಿಸಿದ ಅಪರೂಪದ ಪ್ರಕರಣವೂ ರಾಜ್ಯದಲ್ಲಿ ನಡೆದಿತ್ತು. ಮುಖ್ಯಮಂತ್ರಿಗಳ ವಿವೇಚನಾಧಿಕಾರದ ಅನ್ವಯ ತಮ್ಮ ಕೆಲವು ಸಹೋದ್ಯೋಗಿಗಳಿಗೆ ಬಿಡಿಎ ಸೈಟು ಹಂಚಿದ್ದನ್ನು ಟೀಕಿಸಿದ ಪತ್ರಕರ್ತರೂ ಇದ್ದಾರೆ. ಇನ್ನಿತರ ವೃತ್ತಿಪರರು ಕೂಡ ತಮ್ಮ ಸಹೋದ್ಯೋಗಿಗಳು ಪ್ರದರ್ಶಿಸುವ ವೃತ್ತಿ ಅನೈತಿಕತೆಯ ಬಗ್ಗೆ ಹೀಗೆ ಬಹಿರಂಗವಾಗಿ ಟೀಕಿಸುತ್ತಾರೆಯೇ ಎಂಬ ಬಗ್ಗೆ ನನಗೆ ಕುತೂಹಲವಿದೆ.
ಬಾಂಬ್ ನಾಗ ಮತ್ತು ಅವನ ಪರಾರಿ ಪ್ರಕರಣ
ಬೆಂಗಳೂರು ನಗರ ಬಾಂಬ್ ನಾಗನಂತಹ ವ್ಯಕ್ತಿಗಳಿಗೆ ಆಶ್ರಯ ನೀಡಿ ಸಲಹಿದ್ದು ಹೇಗೆ ಎಂದು ಅಚ್ಚರಿಗೊಳ್ಳುವಂತಾಗಿದೆ. ಗಾಂಧಿ ಟೋಪಿ ಧರಿಸಿ ಈ ನಾಗ ತನ್ನ ಭಾರೀ ದಂಧೆಯನ್ನು ನಡೆಸುತ್ತಿದ್ದ ನಗರದ ಹೃದಯಭಾಗ ಶ್ರೀರಾಮಪುರದಲ್ಲಿಯೇ ಹಳೆಯ ಪೊಲೀಸ್ ಠಾಣೆಯೊಂದಿದೆ. ಈ ಪ್ರದೇಶದಲ್ಲಿದ್ದ ರೌಡಿಸಂ ಅನ್ನು ಪರಿಗಣಿಸಿ ಅತ್ಯುತ್ತಮ ಪೊಲೀಸ್ ಇನ್ಸ್‌ಪೆಕ್ಟರುಗಳನ್ನು ಹಿಂದೆ ಇಲ್ಲಿ ಕರ್ತವ್ಯಕ್ಕೆ ನೇಮಿಸಲಾಗುತ್ತಿತ್ತು. “ಲೋಕೋಪಕಾರ ಮತ್ತು ಸಮಾಜಸೇವೆ’ಯ ಹೆಸರಿನಲ್ಲಿ ನಾಗ ನಡೆಸುತ್ತಿದ್ದ ಕ್ರಿಮಿನಲ್ ಚಟುವಟಿಕೆಗಳ ಬಗ್ಗೆ ಜಾಣಗುರುಡು ಪ್ರದರ್ಶಿಸಿದ ಸ್ಥಳೀಯ ಪೊಲೀಸರ ವಿರುದ್ಧ ನಗರದ ಉನ್ನತ ಅಧಿಕಾರಿಗಳು ಈಗಾಗಲೇ ಕಠಿನ ಕ್ರಮ ತೆಗೆದುಕೊಂಡಿರಬಹುದು. ಇಲಾಖೆಯಲ್ಲಿಯೇ ಇದ್ದ ದುಷ್ಟ ಮಂದಿ ನಾಗನಿಗೆ ದಾಳಿಯ ಬಗ್ಗೆ ಪೂರ್ವಸೂಚನೆ ನೀಡಿ ಆತ ಪರಾರಿಯಾಗಲು ಸಹಾಯ ಮಾಡಿರುವ ಬಲವಾದ ಶಂಕೆಗಳಿವೆ. ಕ್ರಿಮಿನಲ್‌ಗಳು ಮತ್ತು ರೌಡಿ ಶಕ್ತಿಗಳ ಬಗ್ಗೆ ಬೆಂಗಳೂರು ಪೊಲೀಸರು ಮೃದು ಧೋರಣೆ ತಳೆದಿರುವುದರ ಸ್ಪಷ್ಟ ನಿದರ್ಶನ ಇದು. ಇಲಾಖೆಯ ಐಪಿಎಸ್ ಅಧಿಕಾರಿ ವರ್ಗ ತಮ್ಮ ಕಿರಿಯ ಅಧಿಕಾರಿಗಳು ಹಿಡಿದು ತರುವ ಸಣ್ಣಪುಟ್ಟ ಕಳ್ಳರು ಮತ್ತು ಸಂಗ್ರಹಿಸಿ ತರುವ ದಂಡದ ಆಧಾರದಲ್ಲಿ ಅವರ ಕಾರ್ಯದಕ್ಷತೆಯನ್ನು ನಿರ್ಣಯಿಸುವ ಪ್ರವೃತ್ತಿಯನ್ನು ನಿಲ್ಲಿಸಬೇಕು. ಉನ್ನತ ರಾಜಕಾರಣಿಗಳು, ಅದರಲ್ಲೂ ಜನತಾ ದಳದ ಮಾಜಿ ಸಚಿವರೊಬ್ಬರ ಜತೆಗೆ ಬಾಂಬ್ ನಾಗನ ನಿಕಟ ಸಂಪರ್ಕ ಎಲ್ಲರಿಗೂ ತಿಳಿದಿರುವಂಥದ್ದೇ. ಶಾಲಾ ಮಕ್ಕಳಿಗೆ ಉಚಿತ ನೋಟ್‌ಬುಕ್ ಹಂಚುವ ಬಾಂಬ್ ನಾಗನ ಚಿತ್ರವಿರುವ ಕಾರ್ಯಕ್ರಮದ ಪೋಸ್ಟರುಗಳನ್ನು ಮಧ್ಯ ಬೆಂಗಳೂರಿನ ಪ್ರತೀ ಬೀದಿ ಗೋಡೆಗಳಲ್ಲಿ ಕಾಣಬಹುದು. ಈ ಖೊಟ್ಟಿ ಬಡವರ ಬಂಧು ಬೆಂಗಳೂರಿನಲ್ಲಿ ನಗರದ ಪೊಲೀಸ್ ಕಮಿಶನರ್ ಅವರಿಗಿಂತಲೂ ಹೆಚ್ಚು ಸುಪರಿಚಿತನಿದ್ದಾನೆ!
ಅರಕೆರೆ ಜಯರಾಮ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.