ವಿಧಾನ ಸೌಧದ ಉದ್ಯಾನದ ಪ್ರತಿಮೆಗಳು: ಆ ಮೂವರ ಮೂರ್ತಿಗಳೆಲ್ಲಿ?


Team Udayavani, Oct 11, 2017, 11:14 AM IST

11-16.jpg

ಗಂಗಾಧರ ರಾವ್‌ ದೇಶಪಾಂಡೆ, ತಗಡೂರು ರಾಮಚಂದ್ರ ರಾವ್‌ ಹಾಗೂ ಕೆ.ಟಿ. ಭಾಷ್ಯಂ ದೇಶದ ಸ್ವಾತಂತ್ರ್ಯಕ್ಕಾಗಿ ಬಹುತೇಕ ಎಲ್ಲವನ್ನೂ ಧಾರೆಯೆರೆದ ಇವರನ್ನು ಮರೆತು ಬಿಟ್ಟಿರುವುದು ಕೃತಘ್ನತೆಯೇ ಸರಿ. 

ಕರ್ನಾಟಕ ಸರಕಾರ ಹಾಗೂ ವಿಧಾನ ಮಂಡಲದ ಕಾರ್ಯಾಲಯ ನಮ್ಮ ರಾಜಧಾನಿಯ ಭವ್ಯೋಜ್ವಲ ಕಟ್ಟಡವಾದ ವಿಧಾನಸೌಧದ ವಜ್ರ ಮಹೋತ್ಸವದ ಆಚರಣೆಗೆ ಸರ್ವಸನ್ನದ್ಧವಾಗಿವೆ. ಆದರೆ ಈ ಆಚರಣೆಯನ್ನು ಕಳೆದ ವರ್ಷವೇ ನೆರವೇರಿಸಬೇಕಿತ್ತು. ವಿಧಾನಸಭೆಯ ಪ್ರವೇಶೋತ್ಸವ ನಡೆದುದು 1956ರ ವಿಜಯ ದಶಮಿಯಂದು. ಸಾಮಾನ್ಯವಾಗಿ ಈ ದಿನಗಳಲ್ಲಿ ಇಂಥ ಕಾರ್ಯಕ್ರಮಗಳನ್ನು ಒಂದು ವರ್ಷ ಮುನ್ನವೇ ಆಚರಿಸಲಾಗು ತ್ತಿದೆ. ಕಾರಣ, ಅಧಿಕಾರದಲ್ಲಿರುವವರಿಗೆ, ಮುಂದಿನ ವರ್ಷ ಆಚರಿಸಬೇಕಾದ ಸಮಯದಲ್ಲಿ ತಾವು ಅಧಿಕಾರದಲ್ಲಿರುವೆವೋ ಇಲ್ಲವೋ ಎಂಬ ಅಂಜಿಕೆಯಿರುತ್ತದೆ!

ಅಚ್ಚರಿಯೆಂದರೆ ನಮ್ಮ 40ನೆಯ ಸ್ವಾತಂತ್ರ್ಯೋತ್ಸವ ಸಮಾ ರಂಭವನ್ನು ಕೇಂದ್ರದಲ್ಲಿ ಕಾಂಗ್ರೆಸ್‌ನ ಕಾರುಬಾರು ನಡೆಯುತ್ತಿ ದ್ದಾಗಲೇ (1987) ಆಚರಿಸಲಾಗಿತ್ತು. ಆಗ ಪ್ರಧಾನಿಯಾಗಿದ್ದ ವರು ರಾಜೀವ್‌ ಗಾಂಧಿಯವರು. ಈ ನಡುವೆ, ವಿಧಾನಸೌಧದ ಬಡಪಾಯಿ ಹಾಗೂ ಅನಪೇಕ್ಷಿತ ಸೋದರಿಯಾದ ವಿಕಾಸ ಸೌಧದ ಉದ್ಘಾಟನೆ ನೆರವೇರಿದ್ದುದು ಒಂದಕ್ಕಿಂತ ಹೆಚ್ಚು ಬಾರಿ!

ವಿಧಾನ ಸೌಧದ ವಿನ್ಯಾಸ ಹಾಗೂ ನಿರ್ಮಾಣದ ಯೋಜನೆ ಯನ್ನು ರೂಪಿಸಿದವರಾದ ಮುಖ್ಯಮಂತ್ರಿ ಕೆಂಗಲ್‌ ಹನು ಮಂತಯ್ಯ ಅವರೀಗ ಇದ್ದಿದ್ದರೆ, ಈ ಕಟ್ಟಡ ಸಂಕೀರ್ಣದ ಉದ್ಯಾನದಲ್ಲಿ ಸ್ಥಾಪಿಸಲಾಗಿರುವ ಪ್ರತಿಮೆಗಳ ಬಗ್ಗೆ ಏನೆನ್ನುತ್ತಿದ್ದರೋ! ಬಹುಶಃ ಅವರು ತಮ್ಮದೇ ಪ್ರತಿಮೆಯನ್ನು ಸ್ಥಾಪಿಸುವುದಕ್ಕೆ ಒಪ್ಪಿಗೆ ನೀಡುತ್ತಿರಲಿಲ್ಲವೇನೋ. ಈಗ ಈ ಪ್ರಶ್ನೆ ಉದ್ಭವಿಸಿರುವುದಕ್ಕೆ ಕಾರಣವಿದೆ. ಅದೆಂದರೆ ಆದಿಕವಿ ವಾಲ್ಮೀಕಿಯ ಪ್ರತಿಮೆಯ ಅನಾವರಣ. ರಾಮಾಯಣ ಮಹಾಕಾವ್ಯದ ಸೃಷ್ಟಿಕರ್ತನ ಪ್ರತಿಮೆಯನ್ನು ಸ್ಥಾಪಿಸುವುದಕ್ಕೆ ಬಹುಶಃ ಯಾರದೂ ವಿರೋಧವಿರಲಾರದು ಎಂಬುದೇನೋ ನಿಜ. ಆದರೆ ಈ ಪ್ರತಿಮೆಯನ್ನು ಸ್ಥಾಪಿಸಲಾಗಿರುವುದು ವಿಧಾನಸೌಧದ ಉದ್ಯಾನ ಒಳಗಡೆ ಅಲ್ಲ. ಸುಮಾರಾಗಿ ಹೊರಗಡೆಯೇ ಎನ್ನಬಹುದಾದ ಒಂದು ಜಾಗದಲ್ಲಿ. ಅದನ್ನು ಹೀಗೆ ಗಡೀಪಾರು ಮಾಡಲಾಗಿರುವುದು ಯಾವ ಅಧಿಕಾರದ ಹಿಂದಿನ ಯಾವ ಶಕ್ತಿ? ಬಹುಶಃ ಅಧಿಕಾರದಲ್ಲಿರುವ ಮಂದಿ ವಿಧಾನಸೌಧದ ಉದ್ಯಾನ ಈಗಾಗಲೇ ಸಾಕಷ್ಟು ಸಂಖ್ಯೆಯ ಪ್ರತಿಮೆಗಳಿಂದ ಇಡಿಕಿರಿದಿದೆ ಎಂದು ಭಾವಿಸಿದ್ದಾರೇನೋ. ಆದರೆ ಸ್ಥಾಪಿಸಲಾಗಿರುವ ಪ್ರತಿಮೆಗಳ ಪೈಕಿ, ಶತಶತಮಾನಗಳ ಹಿಂದೆ ಆಗಿಹೋದ ಮಹಾಕಾವ್ಯ ಸೃಷ್ಟಿಸಿದಂಥ ಮೇರು ವ್ಯಕ್ತಿತ್ವದ ಮಹನೀಯನೊಬ್ಬನ ಪ್ರತಿಮೆ, ಕೇವಲ ಇದೊಂದೇ. ಇತರ ಎಲ್ಲ ಪ್ರತಿಮೆಗಳೂ ಇತ್ತೀಚಿನ ವರ್ಷಗಳಲ್ಲಿ ಆಗಿಹೋದವರದೇ.

ಹನುಮಂತಯ್ಯನವರು ವಿಧಾನಸೌಧದ ದಪ್ಪನೆಯ ಗೋಡೆಗಳಲ್ಲಿ ಸೀಮಿತ ಸಂಖ್ಯೆಯ ರಾಷ್ಟ್ರೀಯ ನಾಯಕರ ಪ್ರತಿಮೆಗಳ ಸ್ಥಾಪನೆಗಾಗಿ ಸೂಕ್ತ ಭದ್ರಸ್ಥಾನಗಳನ್ನು ನಿರ್ಮಿಸುವ ವ್ಯವಸ್ಥೆ ಮಾಡಿದ್ದರು. ಮಹಾತ್ಮಾಗಾಂಧಿ, ಸರ್ದಾರ್‌ ವಲ್ಲಭ ಭಾç ಪಟೇಲ್‌ ಹಾಗೂ ಇಂಥ ಇತರ ಒಂದಿಬ್ಬರು ಮಹಾನ್‌ ವ್ಯಕ್ತಿಗಳ ಪ್ರತಿಮೆಗಳನ್ನು ಸ್ಥಾಪಿಸಬೇಕೆಂದು ಅವರು ಬಯಸಿದ್ದರು. ತಾವು ಮುಖ್ಯಮಂತ್ರಿಯಾಗಿದ್ದಾಗ ಜವಾಹರ ಲಾಲ್‌ ನೆಹರೂ ಪ್ರಧಾನಿಯಾಗಿದ್ದುದರಿಂದ ಅವರ ಪ್ರತಿಮೆಯನ್ನು ಸ್ಥಾಪಿಸುವ ಯೋಚನೆ ಬಹುಶಃ ಹನುಮಂತಯ್ಯನವರಲ್ಲಿರಲಿಲ್ಲ. ವಿಧಾನ ಸೌಧಕ್ಕೆ ಕಾಲಿರಿಸುವ ಅವಕಾಶ ಯಾರಿಗಾದರೂ ಲಭಿಸಿದಲ್ಲಿ ಅವರು ಇಂದು ಕೂಡ ಈ ಪ್ರತಿಮೆಗಳನ್ನು ಅಲ್ಲಿ ನೋಡಬಹುದು. ಇವುಗಳಲ್ಲೊಂದು ಬಾಂಕ್ವೆಟ್‌ ಹಾಲ್‌ನ ಹಿಂಬದಿಯಲ್ಲಿದೆ.

ಅದೃಷ್ಟವಶಾತ್‌ ನಮ್ಮ ಕರ್ನಾಟಕದಲ್ಲಿ ಜೀವಂತ ವ್ಯಕ್ತಿಗಳ ಪ್ರತಿಮೆಗಳನ್ನು ಸ್ಥಾಪಿಸುವ ಪದ್ಧತಿ ಇಲ್ಲ. ಹೀಗೆ ಜೀವಂತ ವ್ಯಕ್ತಿಗಳ ಪ್ರತಿಮೆಗಳನ್ನೂ ಸ್ಥಾಪಿಸುವ ಕ್ರಮವಿರುವುದು ನಮ್ಮ ನೆರೆ ರಾಜ್ಯಗಳಾದ ತಮಿಳ್ನಾಡು, ತೆಲಂಗಾಣ ಹಾಗೂ ಆಂಧ್ರ ಪ್ರದೇಶಗಳಲ್ಲಿ. ಅಲ್ಲಿನ ಮಾಜಿ ಮುಖ್ಯಮಂತ್ರಿ ಎಂ. ಕರುಣಾನಿಧಿ, ತಮ್ಮ ಪ್ರತಿಮೆಯನ್ನು ಚೆನ್ನೈಯ ಮರೀನಾ ದಲ್ಲಿ ಸ್ಥಾಪಿಸಿಕೊಂಡಿದ್ದರು. ರಾಜ್ಯದ ಜನರು ತಮ್ಮನ್ನು ಪೂಜಿಸಿ ಯಾರೆಂಬ ನಿರೀಕ್ಷೆ ಬಹುಶಃ ಅವರಲ್ಲಿದ್ದಿರಬೇಕು. ಒಂದು ಕಾಲದಲ್ಲಿ ದೇವ ದೇವತೆಗಳನ್ನು ವಿರೋಧಿಸುವ ನಿಲುವನ್ನು ಹೊಂದಿದ್ದ ಪಕ್ಷವೊಂದಕ್ಕೆ ಸೇರಿದವರು ಕರುಣಾನಿಧಿ. ಅವಿಭಜಿತ ಆಂಧ್ರ ಪ್ರದೇಶದಲ್ಲಿ ಭಾರತದ ಮಾಜಿ ರಾಷ್ಟ್ರಪತಿ ನೀಲಂ ಸಂಜೀವ ರೆಡ್ಡಿಯವರ ಪ್ರತಿಮೆಯನ್ನು, ಪ್ರಪ್ರಥಮ ತೆಲಂಗಾಣ ಆಂದೋಲನದ ಸಂದರ್ಭದಲ್ಲಿ (1960ರ ದಶಕದಲ್ಲಿ) ಕೆಡವಿ ಹಾಕಲಾಗಿತ್ತು. ಆಗ ರೆಡ್ಡಿ ಇನ್ನೂ ಬದುಕಿದ್ದರು. ಬಹುಶಃ ತಾನು ಯಾವ ಮಟ್ಟಿಗೆ ಜನಪ್ರೀತಿ ಕಳೆದುಕೊಂಡೆ ಎಂಬುದು ಅವರಿಗೆ ಅರ್ಥವಾಗಿರಬೇಕು.

ಕರ್ನಾಟಕ ಒಂದು ವಿಷಯದಲ್ಲಿ ತಮಿಳ್ನಾಡಿನೊಂದಿಗೆ ಸ್ಪರ್ಧೆಗಿಳಿದಿರುವಂತಿದೆ. ನಾವೀಗ ವಿಧಾನಸೌಧದ ಉದ್ಯಾನ ವನ್ನು ವಿಗ್ರಹಗಳ ಪ್ರದರ್ಶನಾಗಾರವಾಗಿ ಪರಿವರ್ತಿಸುತ್ತಿದ್ದೇ ವಾದರೆ, ತಮಿಳುನಾಡಿನಲ್ಲಿ ಮರೀನಾ ಬೀಚ್‌ ಎಂಬುದು ಈಗಾಗಲೇ ರಾಜಕಾರಣಿಗಳಿಗೆ ಮೀಸಲಾಗಿರುವ ಸಮಾಧಿ ಸ್ಥಳವಾಗಿ ಮಾರ್ಪಟ್ಟಿದೆ. ಅಲ್ಲದೆ ಬೆಂಗಳೂರಿನಲ್ಲಿ ತಿರುವಳ್ಳು ವರ್‌ ಪ್ರತಿಮೆಯ ಅನಾವರಣಕ್ಕೆ ಸಂಬಂಧಿಸಿದಂತೆ ನಾವು ತಮಿಳುನಾಡಿನೊಂದಿಗೆ ಇನ್ನೊಂದು ಜಗಳವನ್ನೂ ಪೂರೈಸಿಯಾಗಿದೆ.

ನಾವು ಮರೆತಿರುವ ಮೂವರು 
ವಿಧಾನಸೌಧದ ಉದ್ಯಾನದಲ್ಲಿ ಇನ್ನಿತರ ರಾಜಕೀಯ ನಾಯಕರ ಪ್ರತಿಮೆಗಳನ್ನು ಸ್ಥಾಪಿಸಬೇಕೆಂಬ ಬಗೆಗಿನ ಸಲಹೆಗಳು ಕೇಳಿಬರುತ್ತಿರುವ ಹಿನ್ನೆಲೆಯಲ್ಲಿ ಹೇಳಲೇಬೇಕಾದ ಮಾತೊಂದಿದೆ. ಅದೆಂದರೆ, ಕರ್ನಾಟಕದ ಮೂವರು ಸರ್ವಶ್ರೇಷ್ಠ ಸ್ವಾತಂತ್ರ್ಯ ಹೋರಾಟಗಾರರ ಹೆಸರನ್ನು ನಾವು ಮರೆತೇ ಬಿಟ್ಟಿದ್ದೇವೆ. ಅವರೇ, ಗಂಗಾಧರ ರಾವ್‌ ದೇಶಪಾಂಡೆ, ತಗಡೂರು ರಾಮಚಂದ್ರ ರಾವ್‌ ಹಾಗೂ ಕೆ.ಟಿ. ಭಾಷ್ಯಂ ದೇಶದ ಸ್ವಾತಂತ್ರ್ಯಕ್ಕಾಗಿ ಬಹುತೇಕ ಎಲ್ಲವನ್ನೂ ಧಾರೆಯೆರೆದ ಇವರನ್ನು ಮರೆತು ಬಿಟ್ಟಿರುವುದು ಕೃತಘ್ನತೆಯೇ ಸರಿ. ಬೆಳಗಾವಿಯವರಾದ ದೇಶಪಾಂಡೆ (1871-1960) ಉತ್ತರ ಕರ್ನಾಟಕದ ಮಹೋನ್ನತ ಸ್ವಾತಂತ್ರ್ಯ ಹೋರಾಟಗಾರ. ತಿಲಕರ ನಿಕಟವರ್ತಿಯಾಗಿದ್ದ ಅವರು “ಕರ್ನಾಟಕದ ಸಿಂಹ’ ಎಂದೇ ಕರೆಸಿಕೊಂಡವರು. ಕರ್ನಾಟಕದಲ್ಲಿ ನಡೆದಿದ್ದ ಏಕೈಕ ಕಾಂಗ್ರೆಸ್‌ ಅಧಿವೇಶನವನ್ನು (1924ರಲ್ಲಿ) ಬೆಳಗಾವಿಯಲ್ಲಿ, ಅದೂ ಗಾಂಧಿಯವರ ಅಧ್ಯಕ್ಷತೆಯಲ್ಲಿ ಜರಗಿಸಲು ಕಾರಣರಾಗಿದ್ದವರೇ ದೇಶಪಾಂಡೆಯವರು. 1947ರ ಪೂರ್ವದಲ್ಲಿ, ಕಾಂಗ್ರೆಸ್‌ ಪಕ್ಷದ ಅಖೀಲ ಭಾರತ ಮಟ್ಟದ ಪ್ರಧಾನ ಕಾರ್ಯದರ್ಶಿಗಳ ಪೈಕಿ ಕರ್ನಾಟಕದವರಿದ್ದುದು ಕೇವಲ ಇಬ್ಬರು – ದೇಶಪಾಂಡೆ ಹಾಗೂ ಕಮಲಾದೇವಿ ಚಟ್ಟೋಪಾಧ್ಯಾಯ. ದೇಶಪಾಂಡೆ ಈ ಹುದ್ದೆಯನ್ನು ನಿರ್ವಹಿಸಿದ್ದುದು 1923ರಲ್ಲಿ. ಬೆಳಗಾವಿ, ಕರ್ನಾಟಕದ ಅವಿಭಾಜ್ಯ ಅಂಗ ಎಂಬ ಕೂಗು ಕೇಳಿಬರುತ್ತಿರುವುದು ನಿಜವಾದರೂ, ದೇಶಪಾಂಡೆಯವರ ಹೆಸರನ್ನು ಹೊತ್ತ ಒಂದೇ ಒಂದು ರಸ್ತೆ ರಾಜಧಾನಿಯಾದ ಬೆಂಗಳೂರಿನಲ್ಲಿ ಇಲ್ಲ. ಕುತೂಹಲಕಾರಿ ಸಂಗತಿಯೆಂದರೆ ಗಂಗಾಧರ ರಾವ್‌ ಅವರ ಪ್ರತಿಮೆಯನ್ನು ಪುಣೆಯಲ್ಲಿ ತಿಲಕರ ಸ್ಮಾರಕ ಕಟ್ಟಡದಲ್ಲಿ ಸ್ಥಾಪಿಸಲಾಗಿರುವುದು.  

ತಗಡೂರು ರಾಮಚಂದ್ರ ರಾವ್‌ (1898-1988) ಅವರು “ಮೈಸೂರು ಗಾಂಧಿ’ಯೆಂದೇ ಹೆಚ್ಚು  ಪರಿಚಿತರು. ಸಾಮಾಜಿಕ/ರಾಜಕೀಯ ಆಂದೋಲನದಂಥ ಚಟುವಟಿಕೆಗಳೊಂದಿಗೆಯೇ ಅವರು ಗಾಂಧೀಪ್ರಣೀತ ರಚನಾತ್ಮಕ ಚಟುವಟಿಕೆಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದವರು. ಮೈಸೂರು ಸಂಸ್ಥಾನದಲ್ಲಿ  ರಾಜಕೀಯ ಕೈದಿಯಾಗಿ ಜೈಲುವಾಸ ಅನುಭವಿಸಿದವರಲ್ಲಿ ಅವರೇ ಮೊದಲಿಗರು. ಅವರನ್ನು “ಮೈಸೂರು ರಾಜ್ಯದ ರಾಜಕೀಯ ದಂಗೆಯ ಪಿತಾಮಹ’ ಎಂದು ಬಣ್ಣಿಸುವುದಾದಲ್ಲಿ ಇದೇ ಅವರ ವ್ಯಕ್ತಿತ್ವಕ್ಕೆ  ನಾವು ಸಲ್ಲಿಸಬಹುದಾದ ನ್ಯಾಯವಾದ ಗೌರವ. ಯಾರೂ ಅವರ ಹೆಸರನ್ನು ಕನಿಷ್ಠ ಪಕ್ಷ ಮೈಸೂರು ರಾಜ್ಯ ವಿಧಾನ ಪರಿಷತ್ತಿನ ಸದಸ್ಯ ಸ್ಥಾನಕ್ಕೆ ಪರಿಗಣಿಸುವ ಗೋಜಿಗೂ ಹೋಗಲಿಲ್ಲ. ಹರಿಜನ ಕಲ್ಯಾಣ, ಖಾದಿ ಉದ್ಯಮಕ್ಕೆ  ಉತ್ತೇಜನ (ಖಾದಿ ಚಳವಳಿ) ಹಾಗೂ ದೇವಾಲಯ ಪ್ರವೇಶ ಮುಂತಾದ ಅವರ ನಿಸ್ವಾರ್ಥ ಸೇವಾ ಚಟುವಟಿಕೆಗಳನ್ನು ಪರಿಗಣಿಸಿದರೆ ಅವರಿಗೆ ಲಭಿಸಿದ ಜಮ್ನಾಲಾಲ್‌ ಬಜಾಜ್‌ ಪ್ರಶಸ್ತಿಯೆಂಬುದು ಅವರ ಅಗಾಧ ಸೇವೆಗೆ ಸಂದ ತೀರಾ ಕಿಂಚಿತ್‌ ಪ್ರಮಾಣದ ಗೌರವವೆಂದೇ ಹೇಳಬೇಕಾಗುತ್ತದೆ. ಇಂದು ಮೈಸೂರು ನಗರದದ ವಿದ್ಯಾರಣ್ಯಪುರ ಬಡಾವಣೆಯ ಒಂದು ಚಿಕ್ಕ ಉದ್ಯಾನವನಕ್ಕೆ ತಗಡೂರು ಅವರ ಹೆಸರನ್ನು  ಇರಿಸಲಾಗಿದೆ.

ಕೆ.ಟಿ. ಭಾಷ್ಯಂ (1895-1956) ಅವರು ಧನ-ದೌಲತ್ತು ತಂದು ಕೊಡಬಲ್ಲುದಾಗಿದ್ದ ಕಾನೂನು ವೃತ್ತಿಯ ಸುವರ್ಣಾವಕಾಶವನ್ನು ತ್ಯಜಿಸಿ ಸ್ವಾತಂತ್ರ್ಯ ಹೋರಾಟಕ್ಕೆ ಧುಮುಕಿದವರು. ಮೈಸೂರು ಪ್ರದೇಶ ಕಾಂಗ್ರೆಸ್‌ ಸಮಿತಿ ಅಸ್ತಿತ್ವಕ್ಕೆ ಬರುವುದಕ್ಕೆ 17 ವರ್ಷ ಮುಂಚಿತವಾಗಿಯೇ, ಎಂದರೆ 1921ರಲ್ಲೇ ಕಾಂಗ್ರೆಸ್‌ ಪಕ್ಷಕ್ಕೆ ಸೇರ್ಪಡೆಗೊಂಡವರು. ಹೆಚ್ಚಿನ ಮುಖ್ಯಮಂತ್ರಿಗಳು ಹಾಗೂ ಇತರ ಸಚಿವರುಗಳು ವೃತ್ಯನುಭವದಲ್ಲಿ ಅವರಿಗಿಂತ ಕಿರಿಯರಾಗಿದ್ದವರು. ಅಸಾಧಾರಣ ಸಾಮರ್ಥ್ಯ ಹಾಗೂ ಅರ್ಹತೆಗಳಿದ್ದ ಹೊರತಾಗಿಯೂ ಅವರು ಕೇವಲ ಒಬ್ಬ ಮಂತ್ರಿಯಾಗಿ ಹಾಗೂ ವಿಧಾನ ಪರಿಷತ್‌ ಸದಸ್ಯರಾಗಿ ಉಳಿದುಕೊಂಡರು. ವಿಧಾನಸೌಧದ ಉದ್ಯಾನದಲ್ಲಿ ಭಾಷ್ಯಂ ಅವರ ಪ್ರತಿಮೆಯನ್ನು ಸ್ಥಾಪಿಸುವಂತೆ ಕೆ.ಜಿ.ಎಫ್.ನ ದಿವಂಗತ ಎಂ.ಸಿ. ಪೆರುಮಾಳ್‌ ವಿಧಾನಪರಿಷತ್ತಿನಲ್ಲಿ ತೀವ್ರವಾಗಿ ಒತ್ತಡ ಹೇರುತ್ತಲೇ ಬಂದುದು ನೆನಪಾಗುತ್ತದೆ.

ಸ್ವಾತಂತ್ರ್ಯ ಚಳುವಳಿಗಾಗಿ ತನ್ನ ಸಂಪತ್ತೆಲ್ಲವನ್ನೂ ಧಾರೆಯೆರೆದ ಹೋರಾಟಗಾರ ಕಾರ್ನಾಡ್‌ ಸದಾಶಿವರಾಯರ ಹೆಸರನ್ನು ಕನಿಷ್ಠ ಪಕ್ಷ ಒಂದು ಬಡಾವಣೆಗಾದರೂ ಇರಿಸಲಾಗಿದೆ. ಇದೊಂದು ಸಮಾಧಾನ ತರುವ ಸಂಗತಿ. ರಾಷ್ಟ್ರೀಯ ಅಥವಾ ರಾಜ್ಯಗಳ ಮಟ್ಟದಲ್ಲಿ ಅರ್ಹ ವ್ಯಕ್ತಿಗಳಿಗೆ ಗೌರವ ಸಲ್ಲಿಸುವ ಕೆಲಸಕ್ಕೆ ಅಡ್ಡಿಯಾಗಿ ಪರಿಣಮಿಸಿರುವುದು ಯಾವುದು? ನಮ್ಮ ರಾಜಕಾರಣಿಗಳಲ್ಲಿ, ಅದರಲ್ಲೂ ಮುಖ್ಯವಾಗಿ ಕಾಂಗ್ರೆಸ್‌ ಪಕ್ಷದ ನಾಯಕ ನಾಯಕಿಯರಲ್ಲಿ ರಾಜಕೀಯ ಇತಿಹಾಸ ಕುರಿತ ಸಾಮಾನ್ಯ ಅರಿವು ಇಲ್ಲದಿರುವುದು! ಮರಣೋತ್ತರವಾಗಿ ಪ್ರತಿಮೆಗಳನ್ನು ಸ್ಥಾಪಿಸುವ ಅಥವಾ ರಸ್ತೆಯೊಂದಕ್ಕೆ ಹೆಸರಿಡುವ ಮೂಲಕ ಗೌರವ ಸಲ್ಲಿಸುವ ವಿಚಾರದಲ್ಲಿ ಕೇವಲ ಕಾಂಗ್ರೆಸ್‌ ನಾಯಕರ ಅಥವಾ ಸ್ವಾತಂತ್ರ್ಯ ಹೋರಾಟಗಾರರ ಹೆಸರನ್ನಷ್ಟೇ ಪರಿಗಣಿಸಬೇಕೆಂದೇನಿಲ್ಲ. ರಾಷ್ಟ್ರೀಯ ಮಟ್ಟದಲ್ಲಿ ಕೆಲಸ ಮಾಡಿರುವ ಸರ್‌.ಎಂ.ವಿಶ್ವೇಶ್ವರಯ್ಯನವರಲ್ಲದೆ, ನಮ್ಮಲ್ಲಿ ದಿವಾನ್‌ ಸರ್‌ ಮಿರ್ಜಾ ಇಸ್ಮಾಯಿಲ್‌, 1930ರ ದಶಕದಲ್ಲಿ ಅಂದಿನ ಬಾಂಬೆಯಲ್ಲಿ ಸಚಿವರಾಗಿದ್ದ ಸರ್‌ ಸಿದ್ದಪ್ಪ ಕಂಬಳಿ, ಕಾಂಗ್ರೆಸ್‌ ಪಕ್ಷಕ್ಕೆ ಸೇರ್ಪಡೆಗೊಂಡಿದ್ದ ಏಕೈಕ ಮೈಸೂರು ದಿವಾನ, ಸರ್‌.ವಿ. ಪಿ. ಮಾಧವ ರಾವ್‌, ಭಾರತದ ಸಂವಿಧಾನ ಶಿಲ್ಪಿಗಳಲ್ಲೊಬ್ಬರಾಗಿದ್ದ ಸರ್‌ ಬೆನಗಲ್‌ ನರಸಿಂಹ ರಾವ್‌ (ಇವರು ಸಂವಿಧಾನ ಸಭೆಯ ಸಲಹೆಗಾರರೂ ಆಗಿದ್ದರು) ಹಾಗೂ ದಕ್ಷಿಣಕನ್ನಡ ಮೂಲದ ಸುಪ್ರಸಿದ್ಧ ಸಮಾಜ ಸುಧಾರಕ, ಕುದು¾ಲ್‌ ರಂಗರಾವ್‌ ಮುಂತಾದ ಅನೇಕ ನಾಯಕರಿದ್ದಾರೆ.

ಈ ನಡುವೆ, ದೇಶದಲ್ಲಿ ಪ್ರತಿಮೆಗಳನ್ನು ನಿರ್ಮಿಸುವ ಕೆಲಸದ ಗುಣಮಟ್ಟ ಏನೇನೂ ಚೆನ್ನಾಗಿಲ್ಲ ಎಂಬ ಅಂಶವನ್ನು ನಿರ್ಲಕ್ಷಿಸುವಂತಿಲ್ಲ. ಕೆಂಗಲ್‌ ಹನುಮಂತಯ್ಯನವರ ಪ್ರತಿಮೆ, ಅವರನ್ನು ಹೋಲುತ್ತಿರಲಿಲ್ಲ ಎಂಬ ಕಾರಣಕ್ಕಾಗಿ ಅದನ್ನು ಕಿತ್ತು ತೆಗೆದು ಇನ್ನೊಂದೇ ಪ್ರತಿಮೆಯನ್ನು ಸ್ಥಾಪಿಸಬೇಕಾಯಿತು. ಜವಾಹರಲಾಲ್‌ ನೆಹರೂ ಅವರ ಪ್ರತಿಮೆಯಂತೂ ಕನಿಕರ ಮೂಡಿಸುವಂತಿದೆ. ವಿಧಾನ ಸೌಧ ಹಾಗೂ ವಿಕಾಸ ಸೌಧಗಳ ನಡುವಿನ ಜಾಗದಲ್ಲಿ ಸ್ಥಾಪಿಸಲಾಗಿರುವ ಮಹಾತ್ಮಾಗಾಂಧಿಯವರ ಕುಳಿತ ಭಂಗಿಯಲ್ಲಿರುವ ಬೃಹತ್‌ ಪ್ರತಿಮೆಯ ಕೆತ್ತನೆ ಕಾರ್ಯ ಇನ್ನಷ್ಟು ಉತ್ತಮವಾಗಿದ್ದಿದ್ದರೆ ಚೆನ್ನಿತ್ತು. ವಿಧಾನ ಸೌಧದೊಳಕ್ಕೆ ಜನಸಾಮಾನ್ಯರಿಗೆ ಮುಕ್ತ ಪ್ರವೇಶ ಇಲ್ಲ; ಅಂದಮೇಲೆ ಅಲ್ಲಿ ಈ ಪ್ರತಿಮೆಗಳ ಸ್ಥಾಪನೆ ಯಾಕಾಗಿ ಎಂಬ ಪ್ರಶ್ನೆ ಮೂಡುವುದು ತೀರಾ ಸಹಜ. ಸಾರ್ವಜನಿಕರಿಗೆ ಪ್ರವೇಶ ಚೀಟಿ (ಪಾಸ್‌) ದೊರಕಿಸಿಕೊಳ್ಳುವ ಅವಕಾಶ ಲಭಿಸಿತೆನ್ನೋಣ, ಆಗಲೂ ಅವರು ಈ ಪ್ರತಿಮೆಗಳ ಸಮೀಪಕ್ಕೆ ಹೋಗಿ ವೀಕ್ಷಿಸುವ ಹಾಗಿಲ್ಲ!

ಟಾಪ್ ನ್ಯೂಸ್

K. S. Eshwarappa: ಗುಂಪುಗಾರಿಕೆ ಮಾಡುತ್ತಿರುವವರು ಬಿಜೆಪಿ ಕಟ್ಟಿ ಬೆಳೆಸಿಲ್ಲ

K. S. Eshwarappa: ಗುಂಪುಗಾರಿಕೆ ಮಾಡುತ್ತಿರುವವರು ಬಿಜೆಪಿ ಕಟ್ಟಿ ಬೆಳೆಸಿಲ್ಲ

Mangaluru: ಹೊಸ ವರ್ಷಾಚರಣೆ ಹಿನ್ನೆಲೆ: ಮಾರ್ಗಸೂಚಿ ಪ್ರಕಟ

Mangaluru: ಹೊಸ ವರ್ಷಾಚರಣೆ ಹಿನ್ನೆಲೆ: ಮಾರ್ಗಸೂಚಿ ಪ್ರಕಟ

Belagavi: ಸಿ.ಟಿ. ರವಿ ವಿರುದ್ಧ ಭುಗಿಲೆದ್ದ ಹೆಬ್ಬಾಳಕರ ಬೆಂಬಲಿಗರಿಂದ ಆಕ್ರೋಶ

Belagavi: ಸಿ.ಟಿ. ರವಿ ವಿರುದ್ಧ ಭುಗಿಲೆದ್ದ ಹೆಬ್ಬಾಳಕರ ಬೆಂಬಲಿಗರಿಂದ ಆಕ್ರೋಶ

Belagavi: ಸಿ.ಟಿ. ರವಿಯನ್ನು ಹೆಗಲ ಮೇಲೆ‌ ಹೊತ್ತುಕೊಂಡು ಜೀಪ್ ಗೆ ಹಾಕಿದ ಪೊಲೀಸರು

Belagavi: ಸಿ.ಟಿ. ರವಿಯನ್ನು ಹೆಗಲ ಮೇಲೆ‌ ಹೊತ್ತುಕೊಂಡು ಜೀಪ್ ಗೆ ಹಾಕಿದ ಪೊಲೀಸರು

1-ullala

Mangaluru; ನೇತ್ರಾವತಿ ಸೇತುವೆ ದುರಸ್ತಿ ಆರಂಭ: ಸಂಚಾರ ಸಲಹೆ ನೀಡಿದ ಪೊಲೀಸರು

1-aaammm

Jammu and Kashmir; ಉಗ್ರವಾದ ಪರಿಸರ ವ್ಯವಸ್ಥೆ ಬಹುತೇಕ ಕೊನೆಗೊಂಡಿದೆ: ಶಾ

1-lok-sabha

BJP vs Congress; ಸಂಸತ್ತಿನಲ್ಲಿ ಕೋಲಾಹಲ: ಪೊಲೀಸರಿಗೆ ದೂರು,ಕಾಂಗ್ರೆಸ್ ಪ್ರತಿದೂರು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಅತೃಪ್ತಿ ಹಣಿಯಲು ಚಾಣಕ್ಯ ಸಂದೇಶದ ತಂತ್ರ 

ಅತೃಪ್ತಿ ಹಣಿಯಲು ಚಾಣಕ್ಯ ಸಂದೇಶದ ತಂತ್ರ 

ಮೇಲ್ಮನೆಗೆ ಗೊಗೋಯ್‌, ವಿಪಕ್ಷ ಸಭಾತ್ಯಾಗ

ಮೇಲ್ಮನೆಗೆ ಗೊಗೋಯ್‌, ವಿಪಕ್ಷ ಸಭಾತ್ಯಾಗ

ಸಂವಿಧಾನ: ಅಂಬೇಡ್ಕರ್‌ ಜತೆಗೆ ನಪಿಸಿಕೊಳ್ಳಬೇಕಾದವರು

ಸಂವಿಧಾನ: ಅಂಬೇಡ್ಕರ್‌ ಜತೆಗೆ ನೆನಪಿಸಿಕೊಳ್ಳಬೇಕಾದವರು

kala-43

ಬ್ರಿಟನ್‌ ವಿತ್ತದ ಕೀಲಿ ಕೈ ಭಾರತೀಯ ಮೂಲದವರ ಕೈಯಲ್ಲಿ

jai-43

ನೂತನ ಸಚಿವ ಪರಿವಾರ -ಬಿಜೆಪಿಗೆ ಹೊರೆಯೇ, ವರವೇ?

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

K. S. Eshwarappa: ಗುಂಪುಗಾರಿಕೆ ಮಾಡುತ್ತಿರುವವರು ಬಿಜೆಪಿ ಕಟ್ಟಿ ಬೆಳೆಸಿಲ್ಲ

K. S. Eshwarappa: ಗುಂಪುಗಾರಿಕೆ ಮಾಡುತ್ತಿರುವವರು ಬಿಜೆಪಿ ಕಟ್ಟಿ ಬೆಳೆಸಿಲ್ಲ

Untitled-1

Kasaragod Crime News: ರಸ್ತೆಯಲ್ಲಿ ಬಿಯರ್‌ ಬಾಟ್ಲಿ ಒಡೆದ ಮೂವರ ಬಂಧನ

byndoor

Belthangady: ಬಸ್‌ ಬೈಕ್‌ ಢಿಕ್ಕಿ, ಸವಾರ ಗಂಭೀರ

5

Malpe: ಮೆಹಂದಿಯಲ್ಲಿ ತಡರಾತ್ರಿವರೆಗೆ ಡಿಜೆ ಬಳಕೆ; ಪ್ರಕರಣ ದಾಖಲು

Mangaluru: ಹೊಸ ವರ್ಷಾಚರಣೆ ಹಿನ್ನೆಲೆ: ಮಾರ್ಗಸೂಚಿ ಪ್ರಕಟ

Mangaluru: ಹೊಸ ವರ್ಷಾಚರಣೆ ಹಿನ್ನೆಲೆ: ಮಾರ್ಗಸೂಚಿ ಪ್ರಕಟ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.