ಕೌಶಲಾಭಿವೃದ್ಧಿಗೊಂದು ನೀಲ ನಕ್ಷೆ
Team Udayavani, Oct 13, 2017, 7:30 AM IST
ಹಿಂದೆ ಕಾಲೇಜಿಗೆ ಹೋಗುವ ವೇಳೆಗಾಗಲೇ ತಮ್ಮ ಕುಟುಂಬಕ್ಕೆ ಪರಂಪರಾಗತವಾಗಿ ಸಿದ್ಧಿಸಿದ್ದ ಕೌಶಲಗಳಲ್ಲಿ ಹುಡುಗರು ಸಿದ್ಧಹಸ್ತರಾಗಿ ಬಿಡುತ್ತಿದ್ದರು. ಬಿ.ಎ. ಅಥವಾ ಬಿ.ಕಾಂ. ಕಲಿತು ಒಂದು ವೇಳೆ ಆ ಕ್ಷೇತ್ರಗಳಲ್ಲಿ ಕೆಲಸ ಸರಿದೂಗದಿದ್ದರೆ, ಮತ್ತೆ ಕುಟುಂಬದ ಉದ್ಯೋಗಗಳಲ್ಲಿ ಮುಳುಗಿ ಹೋಗುತ್ತಿದ್ದರು.
ಕೌಶಲಾಭಿವೃದ್ಧಿಯನ್ನು ಕೇಂದ್ರ ಹಾಗೂ ರಾಜ್ಯ ಸರಕಾರಗಳು ತುಂಬ ಗಂಭೀರತೆಯಿಂದ ಸ್ವೀಕರಿಸಿರುವುದು ಬಹಳ ಸಂತೋಷದ ವಿಷಯ. ರಾಷ್ಟ್ರೀಯ ಸ್ಕಿಲ್ ಡೆವಲಪ್‌ಮೆಂಟ್ ಮಿಷನ್ ಸಾಕಷ್ಟು ವೇಗವಾಗಿ ಮತ್ತು ಉತ್ತಮವಾಗಿ ಕೆಲಸ ಮಾಡುತ್ತಿದೆ. ಕೇಂದ್ರ ಹಾಗೂ ರಾಜ್ಯ ಸರಕಾರಗಳು ಕೌಶಲಾಭಿವೃದ್ಧಿಗಾಗಿ ಪ್ರತ್ಯೇಕ ಖಾತೆಗಳನ್ನೇ ಆರಂಭಿಸಿವೆ. ಹೊಸದಾಗಿ ಕೇಂದ್ರ ಸರಕಾರದಲ್ಲಿ ಕೌಶಲಾಭಿವೃದ್ಧಿ ರಾಜ್ಯ ಸಚಿವರಾಗಿರುವ ಅನಂತ ಕುಮಾರ ಹೆಗಡೆ ಅವರು ಕುಶಲ ಉದ್ಯೋಗಿಗಳಿಗೆ ಸಾಮಾಜಿಕ ಘನತೆ ತಂದು ಕೊಡುವ ಸಲುವಾಗಿ ಅವರಿಗೆ ಗೌರವ ಪದವಿಗಳನ್ನು ಪ್ರದಾನ ಮಾಡುವ ಯೋಜನೆ ಕೂಡ ಜಾರಿಯಾಗಲಿದೆ ಎಂದಿದ್ದಾರೆ.
ದೇಶದ ಅಭಿವೃದ್ಧಿಯಲ್ಲಿ ಪ್ರಮುಖವಾಗಿರುವುದು ನಮ್ಮ ಬೃಹತ್ ಮಾನವ ಸಂಪನ್ಮೂಲ ಎಂದು ಸರಕಾರಗಳು ಅರ್ಥೈಸಿ ಕೊಂಡಿರುವುದು ಶುಭ ಸೂಚನೆ. ಪ್ರಸ್ತುತ ಸಂದರ್ಭದಲ್ಲಿ ರುವ “”ಉದ್ಯೋಗಗಳಿದ್ದಲ್ಲಿ ಕೆಲಸಗಾರರಿಲ್ಲ, ಕೆಲಸಗಾರರಿದ್ದಲ್ಲಿ ಉದ್ಯೋಗವಿಲ್ಲ” ಎನ್ನುವ ವಿಚಿತ್ರ ಸಮಸ್ಯೆಗೆ ಈ ರೀತಿಯ ಹೆಜ್ಜೆಗಳು ಪರಿಹಾರ ನೀಡಬಹುದು. ಹಲವು ದೇಶಗಳಲ್ಲಿ ಸ್ಥಿತಿ ಹೇಗಿದೆ ಎಂದರೆ ಮಾನವಸಂಪನ್ಮೂಲ ಲಭ್ಯವಿದ್ದರೂ ಕೂಡ ಕುಶಲ ಕೈಗಳ ತೀವ್ರ ಕೊರತೆ ಇದೆ. ಇನ್ನೊಂದೆಡೆ ಉದ್ಯೋಗಗಳ ತೀವ್ರ ಕೊರತೆ ಇದೆ. ಸಮೀಕ್ಷೆಯೊಂದರ ಪ್ರಕಾರ ಇಂತಹ ರಾಷ್ಟ್ರಗಳ ಪೈಕಿ ಭಾರತ ಏಳನೇ ಸ್ಥಾನದಲ್ಲಿದೆ. ನಮ್ಮ ದೇಶದ ಬೃಹತ್ ಪ್ರಮಾಣದ ಉಚ್ಚ ಶಿಕ್ಷಣದ ಇನ್‌ಫ್ರಾಸ್ಟ್ರಕ್ಚರ್‌ನಿಂದಲೂ ಸಮಸ್ಯೆಯನ್ನು ನಿವಾರಿಸಲು ಸಾಧ್ಯವಾಗಿಲ್ಲ. ಸಮಸ್ಯೆ ಎಂದರೆ ವಿಶ್ವವಿದ್ಯಾಲಯಗಳು ದಾರ್ಶನಿಕವಾಗಿರಬೇಕೋ ಅಥವಾ ಕೌಶಲಾಭಿವೃದ್ಧಿಯ ಗುರಿಹೊಂದಿರಬೇಕೋ ಎನ್ನುವ ಚರ್ಚೆ ಇನ್ನೂ ಬಗೆ ಹರಿದಿಲ್ಲ. ದೇಶಾದ್ಯಂತ ಹರಡಿಕೊಂಡಿರುವ ಐ.ಟಿ.ಐಗಳು, ರೂಡ್ ಸೆಟಿಗಳು ಈ ದಿಶೆಯಲ್ಲಿ ಸಾಕಷ್ಟು ಕೆಲಸ ಮಾಡುತ್ತಿವೆ. ಆದರೂ ಕೂಡ ಮಾಡಬೇಕಾದ ಕೆಲಸ ಬೆಟ್ಟದಷ್ಟಿದೆ. ಅಲ್ಲದೇ ಈ ಕುರಿತು ಸಮಗ್ರವಾದ ಹೊಸ ವಿಜನ್ ಒಂದನ್ನು ನಿರೂಪಿಸುವ ಅಗತ್ಯ ಇದೆ. ಮೊದಲು ನಾವು ಇತಿಹಾಸದತ್ತ ಗಮನ ಹರಿಸಬೇಕು. ಪರಂಪರಾಗತವಾಗಿ ವೈವಿಧ್ಯಮಯವಾದ ವಾತಾವರಣ, ಭಾಷೆ, ಸಂಸ್ಕೃತಿಗಳು ಇರುವ, ಪ್ರತಿ ಐವತ್ತು ಕಿಲೋಮೀಟರಿಗೂ ಜೀವನ ವಿಧಾನ ಬದಲಾಗುವ ನಮ್ಮ ದೇಶದಲ್ಲಿ ಬ್ರಿಟಿಷ್ ವಸಾಹತು ಉತ್ತುಂಗಕ್ಕೆ ಏರುವುದಕ್ಕಿಂತಲೂ ಮೊದಲು ಅಸಂಖ್ಯ ಕೌಶಲಗಳು ಇದ್ದವು. ಎಷ್ಟು ಸತ್ಯವೋ ತಿಳಿಯದು- ಆದರೆ, ಮುಘಲ್ ಕಾಲದಲ್ಲಿ ಬೆಂಕಿ ಪೆಟ್ಟಿಗೆಯಲ್ಲಿ ಹಾಕಬಹುದಾದಂತಹ ಸೀರೆಗಳನ್ನು ತಯಾರಿಸಲಾಗುತ್ತಿತ್ತು ಎನ್ನುವ ಕಥೆಗಳಿವೆ. ಅಲ್ಲದೆ ದೇಶದುದ್ದಕ್ಕೂ ಇರುವ ಸಾವಿರಾರು ಪಟ್ಟಣಗಳು, ಸ್ಥಳಗಳು ವಿವಿಧ ಕೌಶಲಗಳಿಗಾಗಿ ಪ್ರಸಿದ್ಧವಾಗಿದ್ದವು. ಇನ್ನು ಇಲ್ಲೇ ಸುತ್ತಮುತ್ತಲೂ ನೋಡಿದರೆ ಇಳಕಲ್ ಸೀರೆ, ಗುಳೇದಗುಡ್ಡದ ಕಣ, ಕುಮಟಾದ ಹ್ಯಾಂಡಿಕ್ರಾಫ್ಟ್$Õ, ಧಾರವಾ ಡದ ಪೇಢಾ, ಬೆಳಗಾವಿಯ ಕುಂದಾ, ಅಮೀನಗಡದ ಕರದಂಟು, ಮೈಸೂರು ಸಿಲ್ಕ್, ಚನ್ನಪಟ್ಟಣದ ಗೊಂಬೆಗಳು ಹೀಗೆ ನೂರಾರು ಉದಾಹರಣೆಗಳಿವೆ. ಇನ್ನು ಕಾಂಜಿವರಮ್ ಸೀರೆ, ಕಾಶಿಯ ಜಮಟೆ, ಕಾಶ್ಮೀರದ ಕೇಸರಿ, ಗೋವಾದ ಫೆನ್ನಿ ಎಲ್ಲರಿಗೂ ಗೊತ್ತಿದೆ. ಇವೆಲ್ಲದರ ಹಿಂದೆ ಅಪಾರ ಕೌಶಲಗಳಿವೆ. ಒಂದೊಂದು ಪ್ರದೇಶಕ್ಕೆ ಅನ್ನ ನೀಡುವಷ್ಟು ಉದ್ಯೋಗಗಳನ್ನು ಇವು ಸೃಷ್ಟಿಸಿದ್ದವು, ಸೃಷ್ಟಿಸಿವೆ ಎನ್ನುವುದನ್ನು ಗಮನಿಸಬೇಕು. ಆದರೆ ಮಾಸ್‌ಪ್ರೊಡಕ್ಷನ್ ಆದ ಪಾಶ್ಚಾತ್ಯ ವಸ್ತುಗಳು ನಮ್ಮ ದೇಶಕ್ಕೆ ಆಗಮಿ ಸುತ್ತಿದ್ದಂತೆ ಇಲ್ಲಿಯ ಕೌಶಲಗಳು ಲಾಭದಾಯಕವಲ್ಲವಾಗಿ, ಮಾರ್ಕೆಟ್ ಕಳೆದುಕೊಳ್ಳಲಾರಂಭಿಸಿದವು. ಹಾಗೆಯೇ ಬ್ರಿಟಿಷ್ ಮಾದರಿಯ ಶಿಕ್ಷಣ ಮತ್ತು ಏಕತಾನೀಯ ಸರಕಾರಿ ನೌಕರಿಗಳ ಕುರಿತಾದ ಬಯಕೆ ನಮ್ಮ ದೇಶದಲ್ಲಿ ಕೌಶಲಗಳನ್ನು ಹಾಳುಗೆಡ ವಿದ್ದು ಸತ್ಯ.
ಇದರ ಜತೆಯೇ ಬಂದ “ಸರಕಾರವೇ ಎಲ್ಲವನ್ನೂ ಮಾಡಿಕೊಡಬೇಕು’ ಎನ್ನುವ ಭಾವನೆ ಕೂಡ ಕೌಶಲಾಭಿವೃದ್ಧಿಗೆ ಅಡ್ಡಗಾಲಾಗಿ ಪರಿಣಮಿಸಿತು. ಜತೆಯೇ ಕೃಷಿ ಹಾಗೂ ಕೃಷಿ ಸಂಬಂಧಿ ಉದ್ಯೋಗಗಳು ಲಾಭದಾಯಕವಲ್ಲವಾಗಿ ಜನರನ್ನು ಅವರ ಜೀವನ ವಿಧಾನಗಳಿಂದ ಹೊರತಂದಿದ್ದು ದೇಶ ಕೌಶಲಗಳಿಂದ ದೂರವಾಗಿರುವುದಕ್ಕೆ ಕಾರಣಗಳು ಅನ್ನಿಸುತ್ತದೆ.
ಈಗ ಸರಕಾರಗಳು, ಎನ್‌ಜಿಒಗಳು, ಜನತೆ ಎಲ್ಲರೂ ಸೇರಿ ಮಾಡಬೇಕಾಗಿರುವ ಮೊತ್ತ ಮೊದಲ ಕೆಲಸವೆಂದರೆ ಪರಂಪರಾ ಗತವಾಗಿ ನಮ್ಮ ದೇಶದ ಲಕ್ಷಾಂತರ ಹಳ್ಳಿಗಳಲ್ಲಿ ಲಭ್ಯವಿರುವ ಕೌಶಲಗಳ ರೆಜಿಸ್ಟರ್ ತಯಾರಿಸುವುದು. ಉದಾಹರಣೆಗೆ ಅಡಿಕೆ ತೋಟದ ಹಿನ್ನೆಲೆಯಿಂದ ಬಂದ ನಮಗೆ ಹೈಸ್ಕೂಲಿಗೆ ಹೋಗುವ ವೇಳೆಗಾಗಲೇ ವೀಳ್ಯದೆಲೆ ಕೊಯ್ದು ಮಾರಲು ಬರುತ್ತಿತ್ತು. ಅಡಿಕೆ ಬೆಳೆಯ ಸಸಿ ನೆಡುವುದರಿಂದ ಹಿಡಿದು, ಕೊನೆ ತೆಗೆಯುವುದು, ಅಡಿಕೆ ಒಣಗಿಸುವುದು, ಅಷ್ಟೇ ಅಲ್ಲ ಮಾರಿ ದುಡ್ಡು ತರುವುದು ಗೊತ್ತಿತ್ತು. ಎಮ್ಮೆ ಆಕಳು ಸಾಕುವುದು ಹೇಗೆ? ಹಾಲು ಕರೆಯುವುದು ಹೇಗೆ? ಬೆಣ್ಣೆತುಪ್ಪ ಮಾಡುವುದು ಹೇಗೆ? ಇತ್ಯಾದಿ ಗೊತ್ತಿತ್ತು. ಜೇನು ಹಿಡಿಯಲು ಬರುತ್ತಿತ್ತು. ಯಕ್ಷಗಾನ ಕುಣಿಯಲು, ಭಾಗವತಿಕೆ ಮಾಡಲು, ಮೃದಂಗ ಬಾರಿಸಲು, ಮೃದಂಗ ಕಟ್ಟಲು ಬರುತ್ತಿತ್ತು. ಹಾಗೆಯೇ ನಮ್ಮ ಕ್ಲಾಸಿನಲ್ಲಿ ಇದ್ದ ಬೇರೆ ಬೇರೆ ಹುಡುಗರಿಗೆ ಕಬ್ಬು ಕಡಿಯಲು, ಬತ್ತದ ನಾಟಿ ಮಾಡಲು, ಬತ್ತಕೊಯ್ಲು ಮಾಡಲು ಬರುತ್ತಿತ್ತು. ಕಟ್ಟಿಗೆ ಕೆಲಸ, ಬಾಗಿಲು, ಕಿಡಕಿ ತಯಾರಿಸುವುದು, ಕೆಲವರು ಮೀನು ಹಿಡಿಯುವುದರಲ್ಲಿ, ಹಕ್ಕಿಗಳನ್ನು ಹಿಡಿಯಲು ಉಳ್ಳ ಕಟ್ಟುವುದ ರಲ್ಲಿ ಎಕ್ಸ್‌ಪರ್ಟ್ ಇದ್ದರು. ಇನ್ನು ಕೆಲವರು ಸಾಯಂಕಾಲ ಮನೆಯ ಅಂಗಡಿಗಳಲ್ಲಿ ಸಾಮಾನು ಮಾರಾಟಕ್ಕೆ ಕೂಡುತ್ತಿದ್ದರು. ಹಲವರಿಗೆ ತಮ್ಮ ಕುಟುಂಬದಿಂದ ಬಂದಿದ್ದ ಗಿಡ ಮೂಲಿಕೆ ಔಷಧಿಗಳನ್ನು ನೀಡಲು, ಅಪರೂಪದ ವನಸ್ಪತಿಗಳನ್ನು ಗುರುತು ಹಿಡಿಯಲು ಬರುತ್ತಿತ್ತು. ಹೀಗೆ ಹೆಚ್ಚು ಕಡಿಮೆ ಕಾಲೇಜಿಗೆ ಹೋಗುವ ವೇಳೆಗಾಗಲೇ ತಮ್ಮ ಕುಟುಂಬಕ್ಕೆ ಪರಂಪರಾಗತವಾಗಿ ಸಿದ್ಧಿಸಿದ್ದ ಕೌಶಲಗಳಲ್ಲಿ ಅವರು ಸಿದ್ಧಹಸ್ತರಾಗಿ ಬಿಡುತ್ತಿದ್ದರು. ಬಿ.ಎ ಅಥವಾ ಬಿ.ಕಾಂ ಕಲಿತು ಒಂದು ವೇಳೆ ಆ ಕ್ಷೇತ್ರಗಳಲ್ಲಿ ಕೆಲಸ ಸಿಗದಿದ್ದರೆ, ಮತ್ತೆ ಕುಟುಂಬದ ಉದ್ಯೋಗಗಳಲ್ಲಿ ಮುಳುಗಿ ಹೋಗುತ್ತಿದ್ದರು. ಅವರಿಗೆ ಜೀವನ ಮಾಡಲು ಬೇರೆಯವರನ್ನು ಅವಲಂಬಿಸುವ ಅಗತ್ಯತೆ ಇರಲಿಲ್ಲ. ಬಹುಶಃ ನಮ್ಮ ದೇಶದಲ್ಲಿ ಗ್ರಾಮೀಣ ಬದುಕಿಗೆ ಸಂಬಂಧಪಟ್ಟಂತೆ ಈ ರೀತಿಯಾದ ಅಸಂಖ್ಯ ಕೌಶಲಗಳಿವೆ. ಕಳೆದು ಹೋದ ಈ ಕೌಶಲಗಳನ್ನು ಪುನಃ ಹುಡುಕಿಕೊಂಡು ಅವನ್ನು ಜೀವಂತ ಗೊಳಿಸಿದರೆ ನಮ್ಮ ಹಳ್ಳಿಗಳು ಮರುಜೀವ ಪಡೆಯುತ್ತವೆ.
ಇಂದಿನ ಯುವಕ ಯುವತಿಯರು ಕೌಶಲಗಳನ್ನು ಕಳೆದು ಕೊಳ್ಳುತ್ತಿರುವುದಕ್ಕೆ ಮುಖ್ಯ ಕಾರಣ ಶಿಕ್ಷಣ ವ್ಯವಸ್ಥೆ. ಅಂತಹ ಶಿಕ್ಷಣ ವ್ಯವಸ್ಥೆಗೆ ಕಾರಣ ಬಿಳಿ ಕಾಲರ್ ಉದ್ಯೋಗಗಳಿಗೆ ಸಮಾಜ ನೀಡುತ್ತಿರುವ ವಿಪರೀತ ಗೌರವ ಮತ್ತು ಸ್ವಂತ ಉದ್ಯೋಗಗಳ ಕುರಿತು ಇರುವ ಅಸಡ್ಡೆ. ಇತ್ತೀಚಿನ ದಿನಗಳಲ್ಲಂತೂ ಇದು ವಿಪರೀತಕ್ಕೆ ಹೋಗಿದೆ. ಕೆಲವು ವರ್ಷಗಳ ಹಿಂದೆ ಪರಿಸ್ಥಿತಿ ಹೀಗಿರಲಿಲ್ಲ. ಆಗಿನ ಶಾಲೆಗಳು ಈಗಿನ ರೀತಿಯಲ್ಲಿ ಕೇವಲ ಮಾರ್ಕ್ಸ್ ಪಡೆಯುವುದರ ಮೇಲೆ ಒತ್ತು ಹಾಕುತ್ತಿರಲಿಲ್ಲ. ಆದರೆ ಇಂದಿನ ಶಾಲೆಗಳ ರೀತಿಯೇ ಬೇರೆ. ಶಾಲೆಗಳೆಲ್ಲ ಹೆಚ್ಚು ಕಡಿಮೆ ಶೂ ಮತ್ತು ಟೈ ಶಾಲೆಗಳು. ಬೆಳಗಿನಿಂದ ಸಂಜೆಯತನಕ ಶಾಲೆ ಟ್ಯೂಷನ್‌ಗಳ ಹಾವಳಿಯಲ್ಲಿ ಮಕ್ಕಳಿಗೆ ಓದುವುದನ್ನು ಬಿಟ್ಟರೆ ಹೊರಜಗತ್ತನ್ನು ಗಮನಿಸಲೂ ಸಮಯವಿರುವುದಿಲ.É ಶಾಲೆ ಗಳಿಗೆ ಮತ್ತು ನಿಜ ಜೀವನಕ್ಕೆ ಸಂಬಂಧವೇ ಇಲ್ಲ. ಕಾಪೆìಂಟರ್ ಎಂದು ಸ್ಪೆಲ್ಲಿಂಗ್ ಹೇಳುವ ಹುಡುಗನಿಗೆ ಕಾಪೆìಂಟರ್‌ನನ್ನು ಗುರುತಿಸಲು ಸಾಧ್ಯವಾಗುವುದಿಲ್ಲ. ಮನೆಯಲ್ಲಿ ಪರಿಸ್ಥಿತಿ ಹೇಗಿದೆ ಎಂದರೆ ತಂದೆ ತಾಯಿಗಳು ಮಕ್ಕಳಿಗೆ ಮಣ್ಣು ಮುಟ್ಟಲೂ ಬಿಡುವುದಿಲ್ಲ. ಅಲ್ಲದೇ ಕುಟುಂಬದ ವ್ಯವಹಾರಕ್ಕೆ ಸಂಬಂಧಿಸಿದ ಯಾವ ಕೆಲಸವನ್ನೂ ಹೇಳುವುದಿಲ್ಲ. ಮಕ್ಕಳ ಕೆಲಸ ಪುಸ್ತಕದ ಮುಂದೆ ಕುಳಿತುಕೊಳ್ಳುವುದು ಮತ್ತು ಟಿವಿ ನೋಡುವುದು. ಹೀಗಾಗಿರುವುದರಿಂದ ಬೆಳೆಯುವ ಮಕ್ಕಳು ತಮ್ಮ ಸುತ್ತಲಿನ ವಾತಾವರಣದಿಂದ ವಿಮುಖರಾಗುತ್ತಿದ್ದಾರೆ. ಕೌಶಲಗಳಿಂದ ದೂರವಾಗಿದ್ದಾರೆ, ದೂರವಾಗುತ್ತಿದ್ದಾರೆ. ಶಾಲೆಯ ವಿಷಯದಲ್ಲಿ ಹೇಳುವುದಾದರೆ ಮಕ್ಕಳಿಗೆ ಕನಿಷ್ಠ ವಾರಕ್ಕೆ ಒಂದು ಬಾರಿಯಾದರೂ ಸುತ್ತ ಮುತ್ತಲಿನ ಕೌಶಲಗಳನ್ನು ಕುರಿತಾದ ಅರಿವು ಮೂಡಿಸಿ ಆಸಕ್ತಿ ಬೆಳೆಯುವಂತೆ ಕಾಳಜಿ ವಹಿಸಬೇಕು.
ಅಂತೆಯೇ ನಮ್ಮ ವಿಶ್ವವಿದ್ಯಾಲಯಗಳು, ಕಾಲೇಜುಗಳು ಕರಿಕ್ಯುಲಮ್ ಅನ್ನು ವ್ಯಾಪಕವಾಗಿ ಪುನರ್ ವಿಮರ್ಶಿಸಬೇಕಿದೆ. ಪ್ರತಿಯೊಂದು ವಿಷಯಗಳನ್ನೂ ಥಿಯರಿಗಳಿಂದ ಹೊರತಂದು ಆ ವಿಷಯಗಳಲ್ಲಿ ಅಡಗಿರುವ ಕೌಶಲಗಳನ್ನು ಕಲಿಸುವಂತಾಗ ಬೇಕು. ಉದಾಹರಣೆಗೆ, ಭಾಷಾ ಬೋಧನೆ. ವ್ಯಾವಹಾರಿಕ ಕ್ಷೇತ್ರ ಗಳಾದ ಕಾನೂನು, ಕಾರ್ಪೊರೇಟ್ ಕ್ಷೇತ್ರಗಳು ಇತ್ಯಾದಿಗಳಿಗೆ ಅಗತ್ಯವಿರುವ ಸಂವಹನ ಕೌಶಲವನ್ನು ಬೋಧಿಸಬೇಕು. ಅಲ್ಲದೇ ವಿದ್ಯಾರ್ಥಿಗಳಿಗೆ ಈಗಿರುವ ವಿಷಯಗಳಲ್ಲಿ ಒಂದನ್ನು ಕಡಿಮೆ ಮಾಡಿ ಅವರಿಗೆ ಪ್ರಾದೇಶಿಕವಾಗಿ ಅಗತ್ಯವಿರುವ ಯಾವುದೇ ಒಂದು ಕೌಶಲದಲ್ಲಿ ಪಳಗಿಸಬೇಕು.
ಕೌಶಲಾಭಿವೃದ್ಧಿಯಲ್ಲಿ ನಮಗೆ ಪ್ರಮುಖವಾಗಿ ಈಗ ಅಗತ್ಯವಿರುವುದು ಹೊಸ ಆಲೋಚನೆಗಳು ಮತ್ತು ಹೊಸ ಕ್ರಿಯಾ ವಿಧಾನಗಳು. ಕೌಶಲಾಭಿವೃದ್ಧಿಗೆ ದೇಶದ ಪ್ರಮುಖ ಸಮಸ್ಯೆಗಳಾದ ಗ್ರಾಮೀಣ ಪುನರುಜ್ಜೀವನ, ಯುವಕ ಯುವತಿ ಯರಿಗೆ ಲಾಭದಾಯಕ ಉದ್ಯೋಗ ಸೃಷ್ಟಿ ಮತ್ತು ನಗರಗಳ ಭಾರ ಕಡಿಮೆ ಮಾಡುವ ಸಾಮರ್ಥ್ಯವಿದೆ.
– ಡಾ| ರಾಮಚಂದ್ರ ಜಿ. ಹೆಗಡೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Syria ಕ್ಷಿಪಣಿ ಘಟಕ ಉಡಾಯಿಸಿದ ಇಸ್ರೇಲ್!120 ಕಮಾಂಡೋಗಳ 3 ಗಂಟೆ ಕಾರ್ಯಾಚರಣೆ
US Satellite: ಅಮೆರಿಕದ ಸಂವಹನ ಉಪಗ್ರಹ ಭಾರತದ ರಾಕೆಟ್‌ನಿಂದ ಲಾಂಚ್
PM Modi Gifts: 2023ರಲ್ಲಿ ಬೈಡನ್ ಪತ್ನಿ ಜಿಲ್ ಅವರಿಗೆ ಮೋದಿ 17 ಲಕ್ಷದ ಉಡುಗೊರೆ
Congress;ಸಂಪುಟ,ಕೆಪಿಸಿಸಿ ಯಥಾಸ್ಥಿತಿ? ಬಜೆಟ್ ಅಧಿವೇಶನ, ಪಂ.ಚುನಾವಣೆ ಬಳಿಕ ಚುರುಕು?
KPTCL: ಕೆಪಿಸಿಗೆ 30 ಸಾವಿರ ಕೋಟಿ ರೂ. ಬಾಕಿ ಸಂಕಷ್ಟ !
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.