ಸಿದ್ಧ ಪರಿಕಲ್ಪನೆಗಳ ಮುರಿದ ಭಾರತೀಯ
ಮತದಾರನನ್ನು ಚೌಕಟ್ಟಿನಲ್ಲಿಟ್ಟು ನೋಡುವ ಪ್ರಯತ್ನಗಳೆಲ್ಲ ಅರ್ಥಹೀನ
Team Udayavani, Jun 7, 2019, 6:00 AM IST
2019ರ ಲೋಕಸಭಾ ಚುನಾವಣೆ ದೇಶದ ರಾಜಕೀಯ ಇತಿಹಾಸದಲ್ಲಿಯೇ ಖಂಡಿತ ಒಂದು ಹೊಸದಾರಿ ತೆರೆದಿದೆ. ಒಂದು ಪಕ್ಷ ಅಭೂತಪೂರ್ವ ಬಹುಮತದೊಂದಿಗೆ ಲೋಕಸಭೆ ಪ್ರವೇಶಿಸಿತು. ವಿರೋಧಿ ಪಕ್ಷಗಳು ಭಾರಿ ಸೋಲು ಅನುಭವಿಸಿದವು. ಹಲವು ಕಡೆ ಭಾರೀ ಲೀಡ್‌ಗಳು ಬಂದವು. ಹೀನಾಯ ಸೋಲುಗಳು ಬಂದವು. ಕ್ರಿಕೆಟ್ ಪಂದ್ಯಗಳಲ್ಲಿ ಆಗುವಂತೆಸಂಖ್ಯಾ ಶಾಸ್ತ್ರಜ್ಞರು ಥ್ರಿಲ್ ಅನುಭವಿಸಿದ ಚುನಾವಣೆ ಇದು.
ಆದರೆ ಈ ಚುನಾವಣೆ ಕೇವಲ ಈ ದೃಷ್ಟಿಗಳಿಂದ ಮಾತ್ರ ಹೊಸ ದಿಗಂತ ತೆರೆದಿಲ್ಲ. ಸುಮಾರು ಎಪ್ಪತ್ತು ವರ್ಷಗಳಿಗೂ ಅಧಿಕ ಕಾಲ ಗಟ್ಟಿಯಾಗಿ ನಿಂತು ಬಿಟ್ಟಿದ್ದ ಥಿಯರಿಗಳನ್ನು, ನಂಬುಗೆಗಳನ್ನು ಈ ಚುನಾವಣೆ ಏಕಕಾಲಕ್ಕೆ ಕಿತ್ತೆಸೆಯಿತು. ಹಲವು ಸಿದ್ಧ ನಂಬಿಕೆಗಳು ಚಲ್ಲಾಪಿಲ್ಲಿಯಾಗಿ ಹೋದವು. ವಾದಗಳು ಮುರಿದು ಬಿದ್ದವು. ಶೆಲ್ಲಿ ಎನ್ನುವ ಬ್ರಿಟಿಷ್ ಕವಿಯ ಕಲ್ಪನೆಯ ವೆಸ್ಟ್‌ವಿಂಡ್ ಹಾಗೆ ಈ ಚುನಾವಣೆ ಹಳೆಯದೆಲ್ಲವುಗಳನ್ನು ಕಿತ್ತು ಬಿಸಾಡಿ ಅವುಗಳ ಸ್ಥಳದಲ್ಲಿ ಹೊಸದನ್ನು ಸೃಷ್ಟಿಸಿ ಹೋಯಿತು. ಈ ಅರ್ಥದಲ್ಲಿ ಈ ಚುನಾವಣೆ ನಾಶಕರ್ತ ಮತ್ತು ಸೃಷ್ಟಿಕರ್ತ ಎರಡೂ ಆಗಿ ಹೋಗಿ ದೇಶದ ಇತಿಹಾಸದಲ್ಲಿ ಹೊಸ ಮನ್ವಂತರದ ಸೃಷ್ಟಿಗೆ ಕಾರಣಕರ್ತನಾಗಿ ಹೋಯಿತು, ಈ ಚುನಾವಣೆಯ ಪ್ರಚಂಡ ಬಿರುಗಾಳಿಗೆ ಸಿಲುಕಿ ಹಾರಿ ಹೋದ ಹಲವು ಸಿದ್ಧ ರಾಜಕೀಯ ನಂಬಿಕೆಗಳನ್ನು ಮತ್ತು ಥಿಯರಿಗಳನ್ನು ಇಲ್ಲಿ ಗಮನಿಸಿಕೊಳ್ಳಬೇಕು.
ಪರಿಕಲ್ಪನೆ ಒಂದು: ಆ್ಯಂಟಿ ಇನಕಮ್‌ಬೆನ್ಸಿ(ಆಡಳಿತ ವಿರೋಧಿ ಅಲೆ) ಎನ್ನುವ ರಾಜಕೀಯ ಅಂಶ ಹೆಚ್ಚು ಕಡಿಮೆ ಆಳುವ ಪಕ್ಷಗಳನ್ನು ಸೋಲಿನಂಚಿನಲ್ಲಿ ನಿಲ್ಲಿಸುತ್ತದೆ. ಈ ವಾದದ ತಿರುಳೆಂದರೆ ಅಧಿಕಾರಾರೂಢ ಪಕ್ಷದ ಕುರಿತು ಜನರಿಗೆ ಐದು ವರ್ಷದ ಅವಧಿಯಲ್ಲಿ ಒಂದು ಭ್ರಮನಿರಸನ ಹುಟ್ಟಿಬಿಡುತ್ತದೆ. ಆ ಪಕ್ಷ ವಾಸ್ತವದಲ್ಲಿ ಎಷ್ಟೇ ಚೆನ್ನಾಗಿ ಕೆಲಸ ಮಾಡಿದ್ದರೂ ಕೂಡ ಸಹಜವಾಗಿಯೇ ಅಧಿಕಾರ ಮಾಡಿಸಿಬಿಡಬಹುದಾದ ತಪ್ಪಿನಿಂದಾಗಿ ಜನರಲ್ಲಿ ಪ್ರಸ್ತುತ ಆಡಳಿತದಲ್ಲಿರುವ ಪಕ್ಷದ ವಿರುದ್ಧ ಮತಚಲಾಯಿಸೋಣ ಎನ್ನುವ ಭಾವನೆ ಹುಟ್ಟಿಕೊಂಡೇಬಿಡುತ್ತದೆ. ಇದನ್ನು ತಪ್ಪಿಸಿಕೊಳ್ಳುವುದು ಕಷ್ಟ. ಹಾಗಾಗಿ ಸುಮಾರಾಗಿ ಆಡಳಿತದಲ್ಲಿರುವ ಪಕ್ಷಗಳು ಐದು ವರ್ಷಗಳ ತುದಿಯಲ್ಲಿ ಸೋಲಲು ಸಿದ್ಧವಾಗಿರಬೇಕು. ಆದರೆ ಈ ಚುನಾವಣೆ ಹೇಳಿ ಹೋಗಿದ್ದೆಂದರೆ ಹಾಗೇನೂ ಹೇಳಲಾಗುವುದಿಲ್ಲ. ಅಧಿಕಾರದಲ್ಲಿರುವ ಪಕ್ಷಗಳು ತಮ್ಮ ಸಾಧನೆಯನ್ನು ಹೇಗೆ ಕಮ್ಯೂನಿಕೇಟ್ ಮಾಡಿಕೊಳ್ಳುತ್ತವೆ ಎನ್ನುವುದರ ಮೇಲೆಯೇ ಫಲಿತಾಂಶ ಅವಲಂಬಿಸಿರುತ್ತದೆ. ಆ್ಯಂಟಿ ಇನಕಮ್‌ಬೆನ್ಸಿ ಎನ್ನುವ ಅಂಶ ಪರಿಣಾಮ ಬೀರುವುದು ಶತಸಿದ್ಧವೇನೂ ಅಲ್ಲ.
ಪರಿಕಲ್ಪನೆ ಎರಡು: ದೇಶದ ಮತದಾರರು ಮತ ಹಾಕುವುದು ಕೇವಲ ಬಣಗಳ ಆಧಾರದ ಮೇಲೆ. ಈ ಥಿಯರಿಯ ಅಭಿಪ್ರಾಯವೆಂದರೆ ದೇಶದಲ್ಲಿ ಎದ್ದು ಕಾಣುವ ಖಂಡ-ತುಂಡ ಮೂರು ಮತದಾರ ಬಣಗಳಿವೆ: ಹಿಂದೂ ಮೇಲ್ವರ್ಗ ಮತ್ತು ನಗರೀಕೃತ ಜನತೆ, ಹಿಂದೂ ಹಿಂದುಳಿದ ವರ್ಗಗಳು ಮತ್ತು ಮೈನಾರಿಟಿಗಳು. ವಾದದ ಹುರುಳೆಂದರೆ ಈ ಮೂರು ಬಣಗಳಿಗೆ ಸೇರಿದ ಮತದಾರರು ಮತ ನೀಡುವುದು ಕೇವಲ ತಮ್ಮ ಬಣಗಳಿಗೆ ಮಾತ್ರ ಅಥವಾ ತಮ್ಮ ಬಣದ ಜತೆ ಹತ್ತಿರದ ಹೊಂದಾಣಿಕೆ ಮಾಡಿಕೊಂಡಿರುವ ಬಣಕ್ಕೆ. ವಾದದ ಅಭಿಪ್ರಾಯದಂತೆ ಮೇಲ್ಕಾಣಿಸಿದಂತೆ ಇರುವ ಮೂರು ಬಣಗಳಲ್ಲಿ ಯಾವಾಗ ಕನಿಷ್ಟ ಎರಡು ಬಣಗಳು ಹೊಂದಾಣಿಕೆ ಮಾಡಿಕೊಳ್ಳುತ್ತವೆಯೋ ಆ ರಾಜಕೀಯ ಸ್ವರೂಪ ಅಧಿಕಾರಕ್ಕೆ ಬರುತ್ತದೆ. ಗಮನಿಸಬೇಕು. ಇದೇ ರೀತಿಯ ಗ್ರಹಿಕೆಯನ್ನಿಟ್ಟುಕೊಂಡೇ ಉತ್ತರ ಪ್ರದೇಶದಲ್ಲಿ ಸ.ಪ. ಮತ್ತು ಬ.ಸ.ಪ ಹೊಂದಾಣಿಕೆ ಮಾಡಿಕೊಂಡಿದ್ದವು. ಹಿಂದೆ ಕೆಲವೊಮ್ಮೆ ಮಾಯಾವತಿ ಮೇಲ್ವರ್ಗದೊಂದಿಗೆ ರಾಜಕೀಯ ಹೊಂದಾಣಿಕೆ ಮಾಡಿಕೊಂಡ ಕಾರಣವೂ ಇದೇ.
ಕರ್ನಾಟಕದಲ್ಲಿನ ಅಹಿಂದ ರಾಜಕೀಯವೂ ಆಧರಿಸಿ ನಿಂತಿದ್ದು ಈ ರೀತಿಯ ರಾಜಕೀಯ ಪರಿಕಲ್ಪನೆಯ ಚಪ್ಪರದ ಮೇಲೆ. ಆದರೆ ಈ ಚುನಾವಣೆ ಅದೆಲ್ಲವನ್ನೂ ಸುಳ್ಳಾಗಿಸಿದೆ. ಈ ಚುನಾವಣೆಯಲ್ಲಿ ಒಂದು ಪಕ್ಷಕ್ಕೆ ಹಾಗೂ ಒಂದು ಪಕ್ಷಗಳ ಸಮೂಹಕ್ಕೆ ಸಿಕ್ಕಿದ ಭಾರೀ ಬಹುಮತ ಹೇಳುವುದೇನೆಂದರೆ ಈ ಬಾರಿ ಎಲ್ಲ ಬಣಗಳ ಮತದಾರರು ಕೂಡ ಬಣಗಳ ಗೋಡೆಗಳ ಹೊರಗಡೆ ಬಂದು ತಮ್ಮ ಪೂರ್ವ ಗ್ರಹಗಳನ್ನು ಹಿಂದೆ ಬಿಟ್ಟು ಒಂದು ಪಕ್ಷಕ್ಕೆ ಮತ ನೀಡಿದ್ದಾರೆ. ಫಲಿತಾಂಶ ಹೇಳುವುದೇನೆಂದರೆ ದೇಶದ ಮತದಾರನಿಗೆ ಬಣಗಳ ಪೂರ್ವಾಗ್ರಹಗಳನ್ನು ಬಿಟ್ಟು ಎದ್ದು ನಿಲ್ಲುವ ಸಾಮರ್ಥ್ಯ ಇದೆ.
ಪರಿಕಲ್ಪನೆ ಮೂರು: ಈ ವಾದ ಹೇಳುವುದೆಂದರೆ ಚುನಾವಣೆಗಳಲ್ಲಿ ಹಣ ಬಲವೇ ಎಲ್ಲವೂ ಆಗಿರುತ್ತದೆ. ಕೋಟಿಗಟ್ಟಲೆ ಇಲ್ಲದಿದ್ದರೆ, ಖರ್ಚು ಮಾಡದಿದ್ದರೆ ಚುನಾವಣೆ ಗಳನ್ನು ಗೆಲ್ಲಲಾಗುವುದಿಲ್ಲ. ಮುಂದುವರಿದು ವಾದ ಹೇಳುವುದೆಂದರೆ ದೇಶದ ಜನ ಸಂಪೂರ್ಣವಾಗಿ ಭ್ರಷ್ಟರಾಗಿ ಹೋಗಿದ್ದಾರೆ. ಪೇಟಿ ಬೀಸಾಕಿದರೆ ಜನರನ್ನು ಖರೀದಿಸಬಹುದು. ನೂರೋ, ನೂರೈವತ್ತೋ ಕೋಟಿ ಖರ್ಚು ಮಾಡಿದರೆ ಯಾವ ಕ್ಷೇತ್ರದಿಂದ ಬೇಕಾದರೂ ಆರಿಸಿ ಬರಲು ಸಾಧ್ಯವಿದೆ ಎಂಬುದು. ರಾಜಕಾರಣಿಗಳು ಹಾಗೆ ಭಾವಿಸಿ ಹಣ ನೀಡಿದರೆ ಜನತೆ ಅದನ್ನು ಪಡೆದಿಟ್ಟುಕೊಳ್ಳಬಹುದು ಕೂಡ. ಆದರೆ ಖಂಡಿತಕ್ಕೂ ಮತದಾನ ಮಾಡುವುದು ಅವರಿಗೆ ಬೇಕಾದ ಅಭ್ಯರ್ಥಿಗೆ ಮಾತ್ರ. ಗಮನಿಸ ಬೇಕಾದದ್ದೆಂದರೆ ಈ ಸಲದ ಚುನಾವಣೆಗಳಲ್ಲಿ ಪ್ರಚಾರವೇ ಅಪ್ರಸ್ತುತವಾಗಿ ಹೋಗಿತ್ತು. ಹಣ ಕೂಡ ಅಪ್ರಸ್ತುತವಾಗಿ ಹೋಗಿತ್ತು. ಭಾರೀ ಖರ್ಚು ಮಾಡಿದ್ದಾರೆ ಎಂಬ ಗುಮಾನಿ ಹೊಂದಿದ್ದ ಅಭ್ಯರ್ಥಿಗಳು ಸೋತರು. ಕಿಸೆಗೆ ಕೈ ಕೂಡ ಹಾಕದಿ ದ್ದವರು ಗೆದ್ದರು. ಹಲವು ಕ್ಷೇತ್ರಗಳಲ್ಲಿ ಹಣ ಹರಿದಂತೆ ಅನಿಸುವುದೇ ಇಲ್ಲ. ಆದರೂ ಮತದಾನದ ಪ್ರಮಾಣದಲ್ಲಿ ಇಳಿಕೆ ಏನೂ ಆಗಿಲ್ಲ.
ಪರಿಕಲ್ಪನೆ ನಾಲ್ಕು: ಭಾರತದ ರಾಜಕೀಯದಲ್ಲಿ ವಂಶಾವಳಿಗೆ ಪ್ರಮುಖ ಸ್ಥಾನವಿದೆ. ದೇಶದ ಜನತೆಗೆ ಕೆಲವು ಕುಟುಂಬಗಳ ಕುರಿತು, ಅವುಗಳ ಮುಖ್ಯಸ್ಥರ ಕುರಿತು ವಿಶೇಷವಾದ ಗೌರವಾದರಗಳು ಇವೆ. ಅಂತಹ ಕುಟುಂಬದ ಕುಡಿ ಅದು ಎಂತಹುದೇ ಇರಲಿ, ರಾಜಕೀಯ ಮನ್ನಣೆ ಗಳಿಸಿಕೊಳುತ್ತದೆ. ಆದರೆ ಈ ಸಲದ ಚುನಾವಣೆ ಈ ವಾದವನ್ನು ಸಂಪೂರ್ಣವಾಗಿ ತಿರಸ್ಕರಿಸಿದೆ. ಅಮೇಠಿಯಲ್ಲಿ ರಾಹುಲ್ ಸೋಲು, ಮಂಡ್ಯದಲ್ಲಿ ನಿಖೀಲ್ ಸೋಲು ಮೇಲೆ ಹೇಳಿದ ಥಿಯರಿಯ ವಿರುದ್ಧವಾದ ಮಾತುಗಳನ್ನೇ ಹೇಳಿವೆ. ಹಾಗೆಯೇ ಪೂರ್ವ ಉತ್ತರ ಪ್ರದೇಶದಲ್ಲಿ ಪ್ರಿಯಾಂಕಾ ವೈಯಕ್ತಿಕ ಪ್ರಭಾವಳಿಯ ಪರಿಣಾಮ ದೊಡ್ಡ ಪ್ರಮಾಣದಲ್ಲಿ ಆಗಿರುವಂತೆ ಅನಿಸುವುದಿಲ್ಲ. ಜನತೆ ರಾಜಕೀಯವಾಗಿ ಪ್ರಸಿದ್ಧವಾದ ಕುಟುಂಬದಿಂದ ಬಂದ ವ್ಯಕ್ತಿಗಳನ್ನೂ ಬೇರೆ ಸಾಮಾನ್ಯ ವ್ಯಕ್ತಿಗಳ ತಕ್ಕಡಿಯಲ್ಲಿಯೇ ಇಟ್ಟು ತೂಗಿದಂತೆ ಅನಿಸುತ್ತಿರುವುದು ಗಮನಿಸಬೇಕಾದ ಅಂಶ.
ಪರಿಕಲ್ಪನೆ ಐದು: ದೇಶದ ಮತದಾರ ಸ್ವಾರ್ಥಿಯಾಗಿದ್ದಾನೆ. ಈ ವಾದದ ಪ್ರಕಾರದೇಶದ ಮತದಾರ ಕೇವಲ ತನ್ನ ಸ್ವಾರ್ಥವನ್ನು ನೋಡಿಕೊಳ್ಳುತ್ತಿದ್ದಾನೆ. ಆತನಿಗೆ ದೇಶದ ಕುರಿತಾಗಿ, ಸಮಗ್ರತೆಯ ಕುರಿತಾಗಿ ಇತ್ಯಾದಿ ಜ್ಞಾನವೂ ಇಲ್ಲ, ಆಸಕ್ತಿಯೂ ಇಲ್ಲ. ಆತನ ಮತ ಹೊರಬರುವುದ ುಜಾತಿ, ಧರ್ಮ, ಹಣ ಇತ್ಯಾದಿ ವಿಷಯಗಳ ಆಧಾರದ ಮೇಲೆ. ರಾಷ್ಟ್ರಪ್ರೇಮ ಇತ್ಯಾದಿ ಮೌಲ್ಯಗಳು
ಕೇವಲ ಗಾಂಧಿ ಯುಗಕ್ಕೆ ಸೇರಿದವುಗಳು ಎ ನ್ನುವುದು. ಆದರೆ ಚುನಾವಣೆಯ ಫಲಿತಾಂಶ ದೇಶದ ಜನತೆಯ ಕುರಿತು ಬೇರೊಂದೇ ರೀತಿಯ ಚಿತ್ರಣವನ್ನು ಕಣ್ಣ ಮುಂದೆ ಇಟ್ಟಿದೆ. ಅದೇನೆಂದರೆ ಜನತೆಯ ಮನಸ್ಸುಗಳು ನಿಜವಾಗಿಯೂ ಬದಲಾಗಿಯೇ ಇಲ್ಲ. ಅವು ಹಿಂದೆ ಹೇಗೆ ಇದ್ದವೂ ಇಂದಿಗೂ ಹಾಗೆಯೇ ಇವೆ. ಅದೇ ಮುಗ್ಧತೆ, ಅದೇ ದೇಶಭಕ್ತಿ ಜನರ ಮನಸ್ಸನ್ನು ಇನೂ °ತುಂಬಿಕೊಂಡಿದೆ. ಆದರೆ ಒಂದು ವಿಷಯ. ಜನ ಎಲ್ಲ ನಾಯಕರ ಮಾತುಗಳನ್ನೂ ನಂಬಲು ಸಿದ್ಧವಿಲ್ಲ. ಅದು ನಾಯಕರ ಮಾತುಗಳನ್ನು ನಂಬುವುದು ತುಂಬ ಅಳೆದು ತೂಗಿ. ಮೊದಲು ನಾಯಕತ್ವ ನಿರ್ವಿವಾದಿತವಾಗಿ ಪ್ರಾಮಾಣಿಕವಾದದ್ದು ಹಾಗೂ ದೇಶ ಭಕ್ತಿಯಿಂದ ತುಂಬಿಕೊಂಡಿದ್ದು ಎಂದು ಜನತೆಗೆ ಸಾಬೀತಾಗಬೇಕು. ಎಲ್ಲ ದೃಷ್ಟಿಯಿಂದಲೂ ಈತ ಜನತೆಗಾಗಿಯೇ ಇರುವ, ನಿಜವಾಗಿಯೂ ದೇಶ ಭಕ್ತನಾಗಿರುವ ನಾಯಕ ಎನ್ನುವುದು ಜನರ ಮನಸ್ಸುಗಳಲ್ಲಿ ಬರಬೇಕು. ಒಮ್ಮೆ ಜನತೆಗೆ ಹಾಗೆ ಅನಿಸಿದಲ್ಲಿ ದೇಶದ ಸಾಮಾನ್ಯ ನಾಗರಿಕ ಇಂದಿಗೂ ಕೂಡ ತನ್ನ ಸರ್ವಸ್ವವನ್ನೂ ದೇಶಕ್ಕಾಗಿ ತ್ಯಾಗ ಮಾಡಲು ಸಿದ್ಧ.
ಪರಿಕಲ್ಪನೆ ಆರು: ದೇಶದ ದೊಡ್ಡದೊಡ್ಡ ನಾಯಕರು ರಾಜಕೀಯವಾಗಿ ಅಮರರು. ಈ ವಾದದ ಪ್ರಕಾರ ಬೆಳೆದು ನಿಂತ, ದೊಡ್ಡದೊಡ್ಡ ನಾಯಕರುಗಳನ್ನು ಚುನಾವಣೆಗಳಲ್ಲಿ ಸೋಲಿಸಲು ಸಾಧ್ಯವೇ ಇಲ್ಲ. ಏಕೆಂದರೆ ಅವರಿಗೆ ಹೇಗೆ ಗೆಲ್ಲಬೇಕು? ಯಾವ ತಂತ್ರಗಳನ್ನು ಬಳಸಿ ಗೆಲ್ಲಬೇಕು? ಎದುರಾಳಿಗಳನ್ನು ಹೇಗೆ ಸೋಲಿಸಬೇಕು ಇತ್ಯಾದಿ ತಿಳಿದಿರುತ್ತದೆ. ಅವರಿಗೆ ಜನತೆಯ ತೀರ್ಮಾನಗಳು ಹೊರಬರುವ ಮೊದಲೇ ಅವುಗಳ ಕತ್ತು ಹಿಸುಕಲು ತಿಳಿದಿರುತ್ತದೆ ಎನ್ನುವುದು. ಆದರೆ ಈ ಸಲದ ಚುನಾವಣೆ ಹೇಳಿ ಹೋಗಿದ್ದೆಂದರೆ ಜನತೆಯ ತೀರ್ಮಾನದ ಎದುರು, ಶಕ್ತಿಯ ಎದುರು ಯಾರೂ ದೊಡ್ಡವರಲ್ಲ. ತನ್ನ ಮಾತಿಗೆ ಸಾಕಷ್ಟು ಉದಾಹರಣೆಗಳನ್ನು ಈ ಬಾರಿಯ ಚುನಾವಣೆ ನೀಡಿಬಿಟ್ಟಿದೆ. ದೇಶದುದ್ದಕ್ಕೂ ಹಲವಾರು ಘಟಾನುಘಟಿ ನಾಯಕರು ಸೋತು ಸುಣ್ಣವಾಗಿ ಹೋಗಿದ್ದಾರೆ.
ಒಟ್ಟಾರೆಯಾಗಿ ಈ ಚುನಾವಣೆ ಹೇಳಿ ಹೋಗಿದ್ದೆಂದರೆ ಮತದಾರನನ್ನು ಹೀಗೇ ಎಂದು ಬೇರೆಯವರು ಬ್ರಾಂಡ್ ಮಾಡುವ ಹಾಗಿಲ್ಲ. ಭಾರತ ಒಂದು ಜೀವಂತಿಕೆಯ ಪ್ರಜಾಪ್ರಭುತ್ವ. ದೇಶದ ಪ್ರಜಾಪ್ರಭುತ್ವಕ್ಕೆ ವಯಸ್ಸಾಗುತ್ತ ಹೋದಂತೆ ಅದು ಇನ್ನೂ ಹೆಚ್ಚು ಹೆಚ್ಚು ಪ್ರೌಢವಾಗುತ್ತ, ಜೀವಂತಿಕೆ ಪಡೆದುಕೊಳ್ಳುತ್ತ, ಉದ್ದೇಶ ಪಡೆದುಕೊಳ್ಳುತ್ತ ಸಾಗುತ್ತಿದೆ. ಉಳಿದಂತೆ ಮತದಾರನನ್ನು ಒಂದು ಚೌಕಟ್ಟಿನಲ್ಲಿಟ್ಟುಕೊಂಡು ಅರ್ಥಮಾಡಿಕೊಳ್ಳುವ ಎಲ್ಲ ಪ್ರಯತ್ನಗಳೂ ಅರ್ಥಹೀನವಾದವುಗಳು.
ಡಾ. ಆರ್.ಜಿ. ಹೆಗಡೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Belekeri Mining Case: ಕಾಂಗ್ರೆಸ್ ಶಾಸಕ ಸತೀಶ್ ಸೈಲ್ ಜೈಲು ಶಿಕ್ಷೆಗೆ ಹೈಕೋರ್ಟ್ ತಡೆ
Bus Service launch: ಮಂಗಳೂರು, ಕುಂದಾಪುರಕ್ಕೆ “ಅಂಬಾರಿ ಉತ್ಸವ’
CID Inquiry: ಪರಿಷತ್‌ನಲ್ಲಿ ನಡೆದ ಘಟನೆ ಎಂದು ಉಲ್ಲೇಖಿಸಿದ್ದು ತಪ್ಪು: ಬಸವರಾಜ ಹೊರಟ್ಟಿ
Rohit Sharma: ತನುಷ್ ಲಯವೇ ಭಾರತ ಟೆಸ್ಟ್‌ಗೆ ಆಯ್ಕೆಗೆ ಕಾರಣ
Central Office: 49 ಹೊಸ ತಾಲೂಕಿಗೆ “ಪ್ರಜಾ ಸೌಧ’ ಸಂಕೀರ್ಣ ಯಾವಾಗ?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.