ಅಭಿಮತ: ಡೀಪ್ ಫೇಕ್ ವೀಡಿಯೋ: ಕಾದಿದೆಯೇ ಅಪಾಯ?
Team Udayavani, Sep 17, 2020, 6:29 AM IST
ಸಾಂದರ್ಭಿಕ ಚಿತ್ರವನ್ನು ಬಳಸಲಾಗಿದೆ – Representative Image Used
ಡೀಪ್ ಫೇಕ್ ತಂತ್ರಜ್ಞಾನವನ್ನು ಅನಿವಾರ್ಯಕ್ಕೆ ಬಳಸಿಕೊಳ್ಳುವುದು ಬೇರೆ, ಆದರೆ ಜನರ ಹಾದಿ ತಪ್ಪಿಸುವುದಕ್ಕೆ, ತೇಜೋವಧೆಗೆ, ದುರ್ವ್ಯವಹಾರಗಳಿಗೆ ಬಳಸಿಕೊಳ್ಳುವುದು ಬೇರೆ. ಡೀಪ್ ಫೇಕ್ ಮೂಲಕ ಕೆಲ ಸಮಯದಿಂದ ಹಾಲಿವುಡ್ ಹಾಗೂ ಬಾಲಿವುಡ್ ನಟಿಯರ ಪೋರ್ನ್ ವೀಡಿಯೋ (ನೀಲಿ ಚಿತ್ರ)ಗಳನ್ನು ಸೃಷ್ಟಿಸಲಾಗುತ್ತಿದೆ. ಇದು ಅಪಾಯಕಾರಿ.
ಡೀಪ್ ಫೇಕ್. ಸರಳವಾಗಿ ಹೇಳಬೇಕೆಂದರೆ, ಅಸಲಿ ವೀಡಿಯೋಗಳ ತಲೆಯ ಮೇಲೆ ಹೊಡೆಯುವ ಹಾಗೆ ಕಾಣುವ ‘ನಕಲಿ ವೀಡಿಯೋಗಳ’ ಹಾವಳಿ ಈಗ ಅಧಿಕವಾಗಿಬಿಟ್ಟಿದೆ. ಒಬ್ಬ ವ್ಯಕ್ತಿಯ ಮುಖವನ್ನು, ಆತನ ಹಾವಭಾವವನ್ನು ಅವರಂತೆಯೇ ಕಾಣುವವರ ಮುಖಕ್ಕೆ ಅಳವಡಿಸಿಯೋ ಅಥವಾ ವೀಡಿಯೋವೊಂದರಲ್ಲಿ ಮಾತನಾಡುತ್ತಿರುವ ವ್ಯಕ್ತಿಯ ತುಟಿಗಳ ಚಲನೆಯನ್ನೇ ಬದಲಿಸಿ ಅದಕ್ಕೆ ನಕಲಿ ಆಡಿಯೋ ಸೇರಿಸಿಯೋ ಹರಿಬಿಡಲಾಗುವ ವೀಡಿಯೋಗಳಿವು.
ಈ ವೀಡಿಯೋಗಳು ಭವಿಷ್ಯದಲ್ಲಿ ಏನೆಲ್ಲ ಅನಾಹುತ ಸೃಷ್ಟಿಸಲಿವೆಯೋ ಎಂಬ ಆತಂಕ ಜಗತ್ತಿಗೆ ಈಗ ಎದುರಾಗಿದೆ. ಅಮೆರಿಕ ಚುನಾವಣೆಯ ಹಿನ್ನೆಲೆಯಲ್ಲಿ ಟ್ರಂಪ್‌ರ ಇಂಥ ಡೀಪ್‌ಫೇಕ್‌ಗಳು ಈಗ ಹರಿದಾಡುತ್ತಿವೆಯಾದರೂ, ಇವುಗಳು ತಮಾಷೆಗೆ ಸೀಮಿತವಾಗಿವೆ. ಒಂದು ವೇಳೆ ದುರುದ್ದೇಶಪೂರಿತವಾಗಿ ಇಂಥ ನಕಲಿ ವಿಡಿಯೋಗಳು ಹೆಚ್ಚು ಸೃಷ್ಟಿಯಾಗಲಾರಂಭಿಸಿದರೆ? ಈ ಪ್ರಶ್ನೆಗೆ ಉತ್ತರ ಹುಡುಕುವ ಮುನ್ನ ಒಂದು ಕಥೆಯನ್ನು ನೋಡೋಣ…
ಅದು 1969. ಅಮೆರಿಕದ ಗಗನಯಾತ್ರಿಗಳು ಮೊದಲ ಬಾರಿಗೆ ಚಂದ್ರನ ಮೇಲೆ ಇಳಿದಿದ್ದರು. ಈ ಮಿಷನ್‌ಗೆ ಎಷ್ಟು ಅಪಾಯಗಳಿದ್ದವು ಎಂದರೆ, ಅದು ವಿಫಲ ಕೂಡ ಆಗಬಹುದು ಎನ್ನುವ ಅನುಮಾನ ಅಮೆರಿಕಕ್ಕೆ ಇತ್ತು. ಈ ಕಾರಣಕ್ಕಾಗಿಯೇ ಅಂದಿನ ಅಧ್ಯಕ್ಷ ರಿಚರ್ಡ್ ನಿಕ್ಸನ್‌ಗೆ ಭಾಷಣ ಬರೆದುಕೊಡುತ್ತಿದ್ದ ಬರಹಗಾರರು ಎರಡು ರೀತಿಯ ಭಾಷಣಗಳನ್ನು ತಯಾರು ಮಾಡಿದ್ದರು.
ಒಂದು ಮಿಷನ್ ಯಶಸ್ವಿಯಾದರೆ ಮಾತಾಡಲು, ಎರಡನೆಯದು ಮಿಷನ್ ವಿಫಲವಾದರೆ, ಅಂದರೆ ಗಗನಯಾತ್ರಿಗಳು ಅವಘಡದಲ್ಲಿ ನಿಧನರಾದರೆ ಏನು ಮಾತಾಡಬೇಕು, ಅವರ ಆತ್ಮಕ್ಕೆ ಹೇಗೆ ಶಾಂತಿ ಕೋರಬೇಕು ಅನ್ನುವ ಭಾಷಣ. ಸಾಮಾನ್ಯವಾಗಿ ಆಗೆಲ್ಲ ಇಂಥ ಭಾಷಣಗಳನ್ನು ಮೊದಲೇ ರೆಕಾರ್ಡ್ ಮಾಡಿ ಇಟ್ಟುಕೊಳ್ಳಲಾಗುತ್ತಿತ್ತು. ಆದರೆ, ನಿಕ್ಸನ್‌ರ ಟೇಬಲ್‌ನ ಡ್ರಾ ಒಂದರಲ್ಲಿ ಎರಡನೇ ಭಾಷಣವೂ ರೆಡಿ ಇತ್ತು ಅನ್ನುವುದು ವರ್ಷಗಳವರೆಗೆ ಜನಸಾಮಾನ್ಯರಿಗೆ ಗೊತ್ತೇ ಇರಲಿಲ್ಲ!
ಕೆಲ ತಿಂಗಳ ಹಿಂದೆ, ಅಂತರ್ಜಾಲದಲ್ಲಿ ಒಂದು ವೀಡಿಯೋ ಹರಿದಾಡಲು ಆರಂಭಿಸಿತು. ಆವತ್ತು ರಿಚರ್ಡ್ ನಿಕ್ಸನ್ ಗಗನಯಾತ್ರಿಗಳ ಆತ್ಮಕ್ಕೆ ಶಾಂತಿ ಕೋರಿ ಮಾಡಿದ್ದ ಎರಡನೇ ಭಾಷಣದ ವೀಡಿಯೋ ಅದು! ನೋಡನೋಡುತ್ತಿದ್ದಂತೆಯೇ ವೀಡಿಯೋ ವೈರಲ್ ಆಯಿತು. ಆದರೆ, ವಿಶೇಷ ಏನು ಗೊತ್ತೇ? ಅಂದು ನಿಕ್ಸನ್ ಆ ಭಾಷಣವನ್ನು ಬರೆಸಿಟ್ಟುಕೊಂಡಿದ್ದರೇ ಹೊರತು ಅದನ್ನು ವೀಡಿಯೋ ರೆಕಾರ್ಡ್ ಮಾಡಿಯೇ ಇರಲಿಲ್ಲ!
ಅಂತರ್ಜಾಲದಲ್ಲಿ ಹರಿದಾಡುತ್ತಿರುವುದು ಡೀಪ್ ಫೇಕ್ ವಿಡಿಯೋ. ಈ ವೀಡಿಯೋವನ್ನು ಸಿದ್ಧಪಡಿಸಿದ್ದು ಮಸಾಚುಸೆಟ್ಸ್ ಇನ್ಸ್‌ಟಿಟ್ಯೂಟ್ ಆಫ್ ಟೆಕ್ನಾಲಜಿಯ (ಎಂಐಟಿ) ಒಂದು ತಂಡ. ಮುಂದಿನ ದಿನಗಳಲ್ಲಿ ಫೇಕ್ ವೀಡಿಯೋಗಳು ಎಷ್ಟು ಅಪಾಯ ಕಾರಿಯಾಗಬಲ್ಲವು, ಹೇಗೆ ಜನರ ದಾರಿತಪ್ಪಿಸಬಲ್ಲವು ಎಂದು ಎಚ್ಚರಿಸುವುದಕ್ಕಾಗಿ ಇದನ್ನು ಆ ತಂಡ ಸೃಷ್ಟಿ ಮಾಡಿದೆ. ಈ ವೀಡಿಯೋ ಸೃಷ್ಟಿಸಲು ಅವರು ಬಳಸಿ ಕೊಂಡಿದ್ದು ಕೃತಕ ಬುದ್ಧಿಮತ್ತೆ, ಎಡಿಟಿಂಗ್ ತಂತ್ರಜ್ಞರು ಹಾಗೂ ವಾಯ್ಸ್ ಓವರ್ ಆರ್ಟಿಸ್ಟ್ ಗಳನ್ನು.
ತಂತ್ರಜ್ಞಾನದ ಮತ್ತಷ್ಟು ಆವಿಷ್ಕಾರದಿಂದಾಗಿ ನಿಜವಾದ ವೀಡಿಯೋ ಯಾವುದು, ನಕಲಿ ವೀಡಿಯೋ ಯಾವುದು ಎನ್ನುವುದೂ ತಿಳಿಯದಂಥ ಅಪಾಯ ಎದುರಾಗಲಿದೆ ಅನ್ನುವ ಆತಂಕ ಸೃಷ್ಟಿಯಾಗಿದೆ. ವರ್ಷದ ಹಿಂದೆ ಬರಾಕ್ ಒಬಾಮಾರ ಇಂಥದ್ದೇ ಒಂದು ಡೀಪ್ ಫೇಕ್ ವೀಡಿಯೋವನ್ನು ಬಝ್ಫೀಡ್ ಜಾಲತಾಣ ಸೃಷ್ಟಿಸಿತ್ತು. ಒಬಾಮಾರ ತುಟಿಗಳ ಚಲನೆಯನ್ನು ಬದಲಿಸಿ, ಅದಕ್ಕೆ ಧ್ವನಿ ಕೊಟ್ಟದ್ದು ಅಮೆರಿಕನ್ ನಟ, ಆಸ್ಕರ್ ವಿಜೇತ ಜೋರ್ಡನ್ ಪೀಲೆ.
ಊಹಿಸಿ ನೋಡಿ, ಈ ತಂತ್ರಜ್ಞಾನವಿನ್ನೂ ಆರಂಭಿಕ ಹಂತದಲ್ಲಿ ಇದೆ. ಮುಂದಿನ ದಿನಗಳಲ್ಲಿ ಡೀಪ್ ಫೇಕ್ ವೀಡಿಯೋಗಳು ಎಷ್ಟು ಕರಾರುವಾಕ್ಕಾಗಿ ಬರಬಹುದು ಅಂತ? ಈಗಾಗಲೇ ಜಗತ್ತಿನಾದ್ಯಂತ ರಾಜಕೀಯ ಪಕ್ಷಗಳು, ಎದುರಾಳಿ ಪಕ್ಷದ ನಾಯಕರ ಚಾರಿತ್ರ್ಯವಧೆ ಮಾಡುವುದಕ್ಕಾಗಿ ಒಂದಿಷ್ಟೂ ಅಂಜಿಕೆ ಇಲ್ಲದೇ ಫೇಕ್ ಸುದ್ದಿಗಳನ್ನು, ಫೇಕ್ ವೀಡಿಯೋಗಳನ್ನು ಹರಿಬಿಡುತ್ತಿದ್ದಾರೆ.
ಮುಂದೆ ಡೀಪ್ ಫೇಕ್ ತಂತ್ರಜ್ಞಾನ ಬಳಸಿ ತಮಗೆ ಇಷ್ಟ ಆಗದವರಿಂದ ಏನು ಬೇಕಾದರೂ ಹೇಳಿಸ ಬಹುದಲ್ಲವೇ! ಸತ್ಯ ಯಾವುದು, ಸುಳ್ಳಾಗುವುದು ಎನ್ನುವುದರ ಬಗ್ಗೆ ತಲೆಕೆಡಿಸಿಕೊಳ್ಳದೇ ವೀಡಿಯೋವೊಂದನ್ನು ವೈರಲ್ ಮಾಡುವ ಯುಗವಿದು! ಕೆಲ ವರ್ಷಗಳಲ್ಲಿ ಭಾರತದಲ್ಲೂ ಲೋಕಸಭಾ ಚುನಾವಣೆ ಎದುರಾಗಲಿದೆ. ಈ ಸಮಯದಲ್ಲಿ ಇಂಥ ವೀಡಿಯೋಗಳ ಹಾವಳಿ ಅಧಿಕವಾಗಬಹುದು ಎಂದು ಪರಿಣತರು ಎಚ್ಚರಿಸುತ್ತಿದ್ದಾರೆ.
ಸಿನಿಮಾ ರಂಗದಲ್ಲೂ ಇತ್ತು…
ಹಾಗಂತ, ಈ ರೀತಿಯ ನಕಲು ವೀಡಿಯೋಗಳು ಹೊಸದೇನೂ ಅಲ್ಲ. ಹೆಚ್ಚಾಗಿ ಸಿನೆಮಾ ಇಂಡಸ್ಟ್ರಿಗಳಲ್ಲಿ ಇದು ಬಳಕೆ ಆಗುತ್ತಲೇ ಬಂದಿದೆ. ಉದಾಹರಣೆಗೆ, ಮಹೇಂದ್ರ ಸಿಂಗ್ ಧೋನಿ ಜೀವನವನ್ನಾಧರಿಸಿದ ಸಿನೆಮಾದಲ್ಲಿ, ಸುಶಾಂತ್ ಸಿಂಗ್ ರಜ್‌ಪೂತ್ ಮುಖವನ್ನು ವಿಶ್ವಕಪ್ ಫೈನಲ್ ಮ್ಯಾಚ್‌ನ ದೃಶ್ಯಾವಳಿಯಲ್ಲಿ ಧೋನಿಯ ದೇಹಕ್ಕೆ ಕೂಡಿಸಲಾಗಿತ್ತು.
ಕೇವಲ ಇಂಥ ಕಾರಣಕ್ಕಾಗಿ ಅಷ್ಟೇ ಅಲ್ಲ, ಅನ್ಯ ಕಾರಣಗಳಿಗೂ ಈ ರೀತಿ ನಕಲು ವೀಡಿಯೋಗಳನ್ನು ಬಳಸಿಕೊಳ್ಳಲಾಗುತ್ತದೆ. ಒಂದು ಸಿನೆಮಾದ ಶೂಟಿಂಗ್ ಮುಗಿಯುವ ಹಂತಕ್ಕೆ ಬಂದಿದೆ ಅಂದುಕೊಳ್ಳಿ. ಅಷ್ಟರಲ್ಲಿ ಅದರಲ್ಲಿನ ನಟ-ನಟಿ ಅನಾರೋಗ್ಯಕ್ಕೀಡಾಗಿಯೋ, ಇನ್ಯಾವುದೇ ಕಾರಣದಿಂದಲೋ ಚಿತ್ರೀಕರಣಕ್ಕೆ ಬರಲಾಗದಿದ್ದರೆ ಅಥವಾ ಅವರು ಸತ್ತೇ ಹೋದರೆ ಏನು ಮಾಡುವುದು? ಆಗ ಇಡೀ ಸಿನೆಮಾವನ್ನು ಮರುಚಿತ್ರೀಕರಣ ಮಾಡುವುದಕ್ಕೆ ಕಷ್ಟವಾಗುತ್ತದೆ. ಅಂಥ ಸಂದರ್ಭದಲ್ಲಿ ಸಿಜಿಐ ಮೂಲಕ ಫೇಕ್ ವೀಡಿಯೋ ಸೃಷ್ಟಿಸಲಾಗುತ್ತದೆ.
ಗ್ಲಾಡಿಯೇಟರ್‌ನಲ್ಲಿ ಕಾಡಿತ್ತು ಸಮಸ್ಯೆ
2000ನೇ ಇಸವಿಯಲ್ಲಿ ಬಂದ ಗ್ಲಾಡಿಯೇಟರ್ ಸಿನೆಮಾದಲ್ಲಿ ಇದೇ ರೀತಿಯ ಸಮಸ್ಯೆ ಎದುರಾಗಿತ್ತು. ಪ್ರಖ್ಯಾತ ನಟ ಒಲಿವರ್ ರೀಡ್, ಇನ್ನೇನು ಕೆಲವೇ ದಿನಗಳ ಶೂಟಿಂಗ್ ಉಳಿದಿದೆ ಅನ್ನುವಷ್ಟರಲ್ಲೇ ಬಾರ್ ಒಂದರಲ್ಲಿ ಹೃದಯಾಘಾತವಾಗಿ ಸತ್ತು ಹೋದರು.
ಕೊನೆಗೆ ಸಿನೆಮಾ ತಂಡ, ಅವರ ರೀತಿಯೇ ಕಾಣುವ ವ್ಯಕ್ತಿಯನ್ನು ಬಳಸಿಕೊಂಡು, ಒಲಿವರ್ ರೀಡ್‌ರ ಹಳೆಯ ವೀಡಿಯೋಗಳಿಂದ ಅವರ ಮುಖದ ಹಾವಭಾವಗಳನ್ನು ನಕಲು ಮಾಡಿ, ಮಿಮಿಕ್ರಿ ಕಲಾವಿದರ ಧ್ವನಿ ಬಳಸಿ ಎರಡು ನಿಮಿಷದ ಸೀನ್ ಶೂಟ್ ಮಾಡಿತ್ತು. ಸಿನೆಮಾ ಬಿಡುಗಡೆಯಾಗಿ, ನಿರ್ದೇಶಕರು ಹೇಳುವವರೆಗೂ ಪ್ರೇಕ್ಷಕರಿಗೆ ಅದು ನಕಲಿ ವಿಡಿಯೋ ಅನ್ನುವುದು ಗೊತ್ತೇ ಆಗಿರಲಿಲ್ಲ.
ನೀಲಿ ಸಿನೆಮಾಗಳಲ್ಲಿ ನಟಿಯರ ಫೇಕ್ಸ್
ಈ ರೀತಿಯ ತಂತ್ರಜ್ಞಾನವನ್ನು ಅನಿವಾರ್ಯವಾಗಿ ಬಳಸಿಕೊಳ್ಳುವುದು ಬೇರೆ, ಆದರೆ ಜನರ ಹಾದಿ ತಪ್ಪಿಸುವುದಕ್ಕೆ, ತೇಜೋವಧೆಗೆ, ದುರ್ವ್ಯವಹಾರಗಳಿಗೆ ಬಳಸಿಕೊಳ್ಳುವುದು ಬೇರೆ. ಡೀಪ್ ಫೇಕ್ ಮೂಲಕ ಕೆಲ ಸಮಯದಿಂದ ಹಾಲಿವುಡ್ ಹಾಗೂ ಬಾಲಿವುಡ್ ನಟಿಯರ ಪೋರ್ನ್ ವೀಡಿಯೋ (ನೀಲಿ ಚಿತ್ರ) ಗಳನ್ನು ಸೃಷ್ಟಿಸಲಾಗುತ್ತಿದೆ.
ಹಾಲಿವುಡ್ ಬಾಲಿವುಡ್‌ನ ನೂರಾರು ನಟಿಯರು ಡೀಪ್ ಫೇಕ್‌ನಿಂದ ಸಂತ್ರಸ್ತರಾಗುತ್ತಿದ್ದಾರೆ. ಒಂದು ಸಮೀಕ್ಷೆಯ ಪ್ರಕಾರ ತಿಂಗಳಿಗೆ ಏನಿಲ್ಲವೆಂದರೂ ನಟಿಯರ ಇಂಥ 1000 ನಕಲಿ ವಿಡಿಯೋಗಳು ಪ್ರಮುಖ ಮೂರು ಪೋರ್ನೋಗ್ರಫಿ ಜಾಲತಾಣಗಳಲ್ಲಿ ಅಪ್ಲೋಡ್ ಆಗುತ್ತಿವೆಯಂತೆ.
ಮುಂದೆ ಇದೇ ತಂತ್ರಜ್ಞಾನ ಸಾಮಾಜಿಕ ಮಾಧ್ಯಮಗಳಲ್ಲಿ ಹೆಣ್ಣುಮಕ್ಕಳ ತೇಜೋವಧೆಗೆ, ರಾಜಕಾರಣದಲ್ಲಿ ಎದುರಾಳಿಗಳನ್ನು ಹಣಿಯುವುದಕ್ಕೆ, ಹಳೆಯ ವಿಡಿಯೋಗಳನ್ನೇ ಬದಲಿಸಿ ಇತಿಹಾಸವನ್ನೇ ತಿರುಚುವುದಕ್ಕೆ ಬಳಕೆಯಾಗಬಹುದಾದ ಅಪಾಯ ಅಧಿಕವಿದೆ. ಹೀಗಾಗಿ, ಇಂಥ ನಕಲಿ ವಿಡಿಯೋಗಳನ್ನು ಗುರುತಿಸುವುದು ಹೇಗೆ,ಅವುಗಳನ್ನು ತಡೆಯುವುದು ಹೇಗೆ ಎನ್ನುವ ದೊಡ್ಡ ಸವಾಲು ಜಗತ್ತಿಗೆ ಎದುರಾಗಿದೆ. ಫೇಸ್‌ಬುಕ್ ಹಾಗೂ ಗೂಗಲ್‌ನಂಥ ಕಂಪೆನಿಗಳು ಈ ನಿಟ್ಟಿನಲ್ಲಿ ಶತಪ್ರಯತ್ನ ಪಡುತ್ತಾ ಇವೆ.
ಪ್ರತ್ಯಕ್ಷ ಕಂಡರೂ ಪ್ರಮಾಣಿಸಿ ನೋಡು ಎನ್ನುವ ಮಾತು ಡೀಪ್ ಫೇಕ್ ವಿಚಾರದಲ್ಲಿ ಸತ್ಯವಾಗುತ್ತಲಿದೆ. ಆದರೆ ಮಾಹಿತಿಯ ಈ ಅಪಾರ ಹರಿವಿನ ಲೋಕದಲ್ಲಿ ಸತ್ಯ ಯಾವುದು ಸುಳ್ಯಾವುದು, ಅದನ್ನು ಪ್ರಮಾಣಿಸಿ ನೋಡುವುದು ಹೇಗೆ ಎನ್ನುವ ಪ್ರಶ್ನೆಗೆ ಅಷ್ಟು ಸುಲಭವಾಗಿ ಉತ್ತರ ಸಿಗುವುದಿಲ್ಲ.
– ಆಚಾರ್ಯ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Fake Gold: ಎಚ್ಚರ ವಹಿಸಲು ಡಿಸಿಸಿ ಬ್ಯಾಂಕ್‌ಗಳಿಗೆ ಸೂಚನೆ: ಸಚಿವ ಕೆ.ಎನ್. ರಾಜಣ್ಣ
Karnataka Govt.,: ಮಂಗಳೂರಲ್ಲಿ ಹೈಕೋರ್ಟ್ ಪೀಠ ಸ್ಥಾಪನೆಗೆ ಮನವಿ
“ಟೋಲ್‌ಗಳಲ್ಲಿ ಸೌಲಭ್ಯವಿಲ್ಲ’: ಮಂಜುನಾಥ ಭಂಡಾರಿ
MUDA Scam: ಕೇಸ್ ವಾಪಸ್‌ಗೆ ಹಣದ ಆಮಿಷ? ಸ್ನೇಹಮಯಿ ಕೃಷ್ಣ ಲೋಕಾಯುಕ್ತಕ್ಕೆ ದೂರು
Priyank Kharge: ಎಲ್ಲವನ್ನೂ ನ್ಯಾಯಾಂಗವೇ ಮಾಡೋದಾದ್ರೆ ಶಾಸಕಾಂಗ ಏಕೆ?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.